ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೂವರು ಯಾತ್ರಿಕರ ಕತೆ
ಸುದೀರ್ಘವೂ ದಣಿಸಬಲ್ಲದ್ದೂ ಆದ ಯಾತ್ರೆಯ ಅವಧಿಯಲ್ಲಿ ಮೂವರು ಅಪರಿಚಿತರು ಸಂಗಾತಿಗಳಾಗಿ ತಮ್ಮೆಲ್ಲ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಸುಖದುಃಖಗಳನ್ನು ಹಂಚಿಕೊಂಡು ಪಯಣಿಸುತ್ತಿದ್ದರು. ಅನೇಕ ದಿನಗಳು ಪಯಣಿಸಿದ ನಂತರ ಒಂದು ದಿನ ತಮ್ಮ ಹತ್ತಿರ ಒಂದು ತುಣುಕು ಬ್ರೆಡ್‌ ಮತ್ತು ಒಂದು ಗುಟುಕು ನೀರು ಮಾತ್ರ ಉಳಿದಿರುವ ಸಂಗತಿ ಅವರ ಗಮನಕ್ಕೆ ಬಂದಿತು. ಈ ಆಹಾರ ಮೂವರ ಪೈಕಿ ಯಾರಿಗೆ ಸೇರಬೇಕೆಂಬುದರ ಕುರಿತು ಅವರು ಜಗಳವಾಡಲು ಆರಂಭಿಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಉಳಿದಿದ್ದ ಬ್ರೆಡ್‌ ಹಾಗು ನೀರನ್ನು ತಮ್ಮೊಳಗೆ ಪಾಲು ಮಾಡಲು ಪ್ರಯತ್ನಿಸಿದರು, ಸಾಧ್ಯವಾಗಲಿಲ್ಲ.
ಕತ್ತಲಾಗುತ್ತಿದ್ದದ್ದರಿಂದ ಎಲ್ಲರೂ ನಿದ್ದೆ ಮಾಡುವುದು ಒಳಿತೆಂಬುದಾಗಿ ಒಬ್ಬ ಸಲಹೆ ನೀಡಿದ. ಮಾರನೆಯ ದಿನ ಎದ್ದಾಗ ತಮಗೆ ಬಿದ್ದ ಕನಸುಗಳನ್ನು ಜ್ಞಾಪಿಸಿಕೊಂಡು ಮೂವರೂ ಹೇಳಬೇಕೆಂದೂ ಆ ಪೈಕಿ ಹೆಚ್ಚು ಗಮನ ಸೆಳೆಯುವ ಕನಸು ಬಿದ್ದಾತನಿಗೆ ಉಳಿಕೆ ಆಹಾರ ಸೇರತಕ್ಕದ್ದೆಂದೂ ತೀರ್ಮಾನಿಸಿದರು.

ಮಾರನೇ ದಿನ ಬೆಳಗ್ಗೆ ಸೂರ್ಯೋದಯವಾದ ತಕ್ಷಣ ಎದ್ದು ಮೂವರೂ ತಮ್ಮತಮ್ಮ ಕನಸುಗಳನ್ನು ತುಲನೆ ಮಾಡುವ ಕಾರ್ಯ ಆರಂಭಿಸಿದರು. ಮೊದಲನೆಯವ ಹೇಳಿದ, “ನನ್ನ ಕನಸು ಇಂತಿತ್ತು: ವರ್ಣಿಸಲು ಸಾಧ್ಯವಿಲ್ಲದಷ್ಟು ಅದ್ಭುತವಾದ ಪ್ರಶಾಂತ ತಾಣಗಳಿಗೆ ಒಯ್ಯಲ್ಪಟ್ಟೆ. ಅಲ್ಲಿ ನನಗೊಬ್ಬ ವಿವೇಕೀ ಮಹಾಪುರುಷನ ದರ್ಶನವಾಯಿತು. ‘ನೀನು ಆಹಾರ ಪಡೆಯಲು ಅರ್ಹನಾಗಿರುವೆ. ಏಕೆಂದರೆ ನಿನ್ನ ಹಿಂದಿನ ಹಾಗು ಮುಂದಿನ ಜೀವನ ಪ್ರಶಂಸಾರ್ಹವಾದವು’ ಎಂಬುದಾಗಿ ಆತ ಹೇಳಿದ.”

“ಎಂಥ ವಿಚಿತ್ರ,” ಉದ್ಗರಿಸಿದ ಎರಡನೆಯವ. “ಏಕೆಂದರೆ ನನ್ನ ಕನಸಿನಲ್ಲಿ ನನ್ನ ಹಿಂದಿನ ಹಾಗು ಮುಂದಿನ ಜೀವನವನ್ನು ನಾನೇ ನೋಡಿದೆ. ನನ್ನ ಮುಂದಿನ ಜೀವನದಲ್ಲಿ ನನಗೂ ಒಬ್ಬ ವಿವೇಕೀ ಮಹಾಪುರುಷ ಭೇಟಿಯಾಗಿ ಹೇಳಿದ, ‘ಆಹಾರ ಪಡೆಯಲು ನಿನ್ನ ಮಿತ್ರರಿಗಿಂತ ನೀನೇ ಅರ್ಹ. ಏಕೆಂದರೆ ನೀನು ಅವರಿಗಿಂತ ಹೆಚ್ಚು ಕಲಿತವ ಹಾಗು ಸಹನೆಯುಳ್ಳವ. ಮುಂದೆ ನೀನು ಮನುಕುಲಕ್ಕೆ ಮಾರ್ಗದರ್ಶನ ಮಾಡುವವನು. ಆದ್ದರಿಂದ ನಿನ್ನನ್ನು ಚೆನ್ನಾಗಿ ಪೋಷಿಸಬೇಕು’.”

ಮೂರನೆಯವ ಹೇಳಿದ, “ನನ್ನ ಕನಸಿನಲ್ಲಿ ನಾನೇನನ್ನೂ ನೋಡಲಿಲ್ಲ, ಏನನ್ನೂ ಕೇಳಲಿಲ್ಲ, ಏನನ್ನೂ ಹೇಳಲಿಲ್ಲ. ಅದಮ್ಯ ಶಕ್ತಿಯೊಂದು ಬಲವಂತವಾಗಿ ನಾನು ಎದ್ದು ಬ್ರೆಡ್ ಹಾಗು ನೀರು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ಅವನ್ನು ಅಲ್ಲಯೇ ಆಗಲೇ ಸೇವಿಸುವಂತೆ ಮಾಡಿತು. ನಾನು ಮಾಡಿದ್ದೇ ಅಷ್ಟು.”

ಉಳಿದ ಇಬ್ಬರಿಗೆ ಇದನ್ನು ಕೇಳಿ ಬಲು ಕೋಪ ಬಂದಿತು. ನಿಗೂಢ ಶಕ್ತಿ ಆಹಾರ ಸೇವಿಸುವಂತೆ ಬಲಾತ್ಕರಿಸಿದಾಗ ತಮ್ಮನ್ನು ಏಕೆ ಎಬ್ಬಿಸಲಿಲ್ಲ ಎಂಬುದನ್ನು ಅವರು ತಿಳಿಯಬಯಸಿದರು.
ಅವನು ಉತ್ತರಿಸಿದ, “ನೀವು ಇಲ್ಲಿಂದ ಬಹು ದೂರದಲ್ಲಿ ಇದ್ದಿರಿ! ನಿಮ್ಮಲ್ಲಿ ಒಬ್ಬರು ಬಹು ದೂರದ ತಾಣಕ್ಕೆ ಒಯ್ಯಲ್ಪಟ್ಟಿದ್ದಿರಿ, ಇನ್ನೊಬ್ಬರು ಬೇರೊಂದು ಕಾಲದಲ್ಲಿ ಇದ್ದಿರಿ. ಅಂದ ಮೇಲೆ ನಾನು ಕರೆದರೆ ನಿಮಗೆ ಕೇಳುವುದಾದರೂ ಹೇಗೆ?”

*****

೨. ಮಿಠಾಯಿ ಹರಿವಾಣದ ಕತೆ
ಮೌಲಾನ ರೂಮಿಯ ನಿಷ್ಠಾವಂತ ಅನುಯಾಯಿಯಾಗಿದ್ದ ವ್ಯಾಪಾರಿಯೊಬ್ಬ ಮೆಕ್ಕಾಗೆ ಯಾತ್ರೆ ಹೋದ. ಅವನು ಯಾತ್ರೆಯ ಅಂತಿಮ ಘಟ್ಟ ತಲುಪಿದಾಗ ದೇವರಿಗೆ ಧನ್ಯವಾದ ಅರ್ಪಿಸುವುದರ ಪ್ರತೀಕವಾಗಿ ಬಡವರಿಗೆ ಹಾಗು ಬಂಧುಗಳಿಗೆ ಹಂಚಲೋಸುಗ ಅವನ ಪತ್ನಿ ಕೆಲವು ಮಿಠಾಯಿಗಳನ್ನು ತಯಾರಿಸಿದಳು. ಸ್ವಲ್ಪ ಮಿಠಾಯಿಗಳನ್ನು ರೂಮಿಗೆ ಕಳುಹಿಸಿದಳು. ಆ ಮಿಠಾಯಿಗಳನ್ನು ತನ್ನೊಂದಿಗೆ ಹಂಚಿಕೊಂಡು ತಿನ್ನಲೋಸುಗ ಅವನು ತನ್ನ ಶಿಷ್ಯರನ್ನು ಆಹ್ವಾನಿಸಿದನು. ಅವನ ಶಿಷ್ಯರೆಲ್ಲರೂ ಹೊಟ್ಟೆತುಂಬುವಷ್ಟು ಮಿಠಾಯಿಗಳನ್ನು ತಿಂದರೂ ಅದು ಮುಗಿಯಲಿಲ್ಲ.

ಆಗ ರೂಮಿ ಆ ಮಿಠಾಯಿ ತಟ್ಟೆಯನ್ನು ಆಶ್ರಮದ ತಾರಸಿಯ ಮೇಲಕ್ಕೆ ಒಯ್ದು ಅಲ್ಲಿ ಯಾರೂ ಇಲ್ಲದೇ ಇದ್ದಾಗ್ಯೂ ಗಟ್ಟಿಯಾಗಿ ಹೇಳಿದ, “ನಿನ್ನ ಪಾಲನ್ನು ತೆಗೆದುಕೊ.”
ರೂಮಿ  ಪುನಃ ಶಿಷ್ಯರಿದ್ದಲ್ಲಿಗೆ ಬರಿಗೈಯಲ್ಲಿ ಬಂದು ಹೇಳಿದ, “ ಮೆಕ್ಕಾದಲ್ಲಿ ಇರುವ ವ್ಯಾಪಾರಿಗೆ ಅವನ ಪಾಲನ್ನು ಕಳುಹಿಸಿದ್ದೇನೆ.” ಆವನ ಈ ಹೇಳಿಕೆ ಶಿಷ್ಯರನ್ನು ತಬ್ಬಿಬ್ಬಾಗಿಸಿತು. 
ವ್ಯಾಪಾರಿ ಮನೆಗೆ ಹಿಮ್ಮರಳಿದ ನಂತರ ರೂಮಿಯನ್ನು ಭೇಟಿ ಮಾಡಿ ಗೌರವತೋರಿದ. ಆ ದಿನ ವ್ಯಾಪಾರಿಯ ಪತ್ನಿ ಹಿಮ್ಮರಳಿದ ಪತಿಯ ಗಂಟುಮೂಟೆ ಬಿಚ್ಚಿದಾಗ ಅದರಲ್ಲಿದ್ದ ಮಿಠಾಯಿ ತಟ್ಟೆಯನ್ನು ನೋಡಿ ಆಶ್ಚರ್ಯ ಪಟ್ಟಳು. ಆ ತಟ್ಟೆ ಅವನಿಗೆ ಹೇಗೆ ಸಿಕ್ಕಿತು ಎಂಬುದನ್ನು ವಿಚಾರಿಸಿದಳು.

ಅವನು ಹೇಳಿದ, “ಮೆಕ್ಕಾದ ಹೊರವಲಯದಲ್ಲಿ ಇದ್ದ ಶಿಬಿರದಲ್ಲಿ ನಾನು ಇದ್ದಾಗ ಒಂದು ದಿನ ಈ ಮಿಠಾಯಿ ತಟ್ಟೆಯನ್ನು ಯಾರೋ ನನ್ನ ಗುಡಾರದ ಪರದೆಯ ಅಡಿಯಿಂದ ಒಳತಳ್ಳಿದರು. ತಟ್ಟೆಯನ್ನು ತಳ್ಳಿದ್ದು ಯಾರೆಂಬುದನ್ನು ತಿಳಿಯಲೋಸುಗ ನನ್ನ ಸೇವಕರು ಹೊರಗೋಡಿ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲವಂತೆ.” 

ರೂಮಿಯ ಈ ಪವಾಡ ಸದೃಶ ಕಾರ್ಯಕ್ಕೆ ಬೆರಗಾದ ದಂಪತಿಗಳು ರೂಮಿಯನ್ನು ಭೇಟಿ ಮಾಡಿ ತಮ್ಮ ಗುರುನಿಷ್ಠೆಯನ್ನು ಇನ್ನೊಮ್ಮೆ ಪ್ರಕಟಿಸಿದರು. ತನ್ನ ಮೇಲೆ ಅವರು ಇಟ್ಟಿದ್ದ ನಿಷ್ಠೆಯಿಂದ ಸುಪ್ರೀತನಾದ ದೇವರು ತಾನು ಈ ಕೃತ್ಯವೆಸಗುವಂತೆ ಮಾಡಿದ ಎಂಬುದಾಗಿ ಘೋಷಿಸಿದ ರೂಮಿ.

*****

೩. ಜ್ಞಾನಿಯೊಬ್ಬನ ಕತೆ
ಖ್ಯಾತ ಜ್ಞಾನಿ ಸಾದತ್‌ ಎಂಬಾತ ಮಾನವ ವಸತಿ ಸ್ಥಳಗಳಿಂದ ದೂರದಲ್ಲಿ ವಾಸಿಸುವ ಉದ್ದೇಶದಿಂದ ಹಿಮಾಲಯ ಪರ್ವತ ಶ್ರೇಣಿಯ ಪರ್ವತವೊಂದರಲ್ಲಿ ಬಲು ಎತ್ತರ ತಾಣವೊಂದರಲ್ಲಿ ವಾಸಿಸುತ್ತಿದ್ದ. ಬಲು ಸರಳ ಜೀವಿಯಾದ ಆತ  ಬಹು ಪಾಲು ಸಮಯವನ್ನು ಧ್ಯಾನ ಮಾಡುವುದರಲ್ಲಿ ಕಳೆಯುತ್ತಿದ್ದ. ಇಂತಿದ್ದರೂ ಅವನನ್ನು ಭೇಟಿ ಮಾಡಿ ತಮ್ಮ ಜೀವನಕ್ಕೆ ಅನ್ವಯಿಸಬಹುದಾದ ಸಲಹೆ ಪಡೆಯಲೋಸುಗ ಬಲು ದೂರದ ಊರುಗಳವರೂ ಅನೇಕ ದಿನಗಳ ಕಾಲ ಪಯಣಿಸಿ ಜನ ಬರುತ್ತಿದ್ದರು.

ಒಮ್ಮೆ ತಮ್ಮ ಸಮಸ್ಯೆಗಳನ್ನು ಸಾದತ್‌ ಅವರಿಗೆ ತಿಳಿಸಿ ಯುಕ್ತ ಸಲಹೆ ಪಡೆಯಲೋಸುಗ ಬಂದ ಗುಂಪೊಂದು ಯಾರು ಮೊದಲು ಮಾತನಾಡಬೇಕೆಂಬ ವಿಷಯದ ಕುರಿತು ತಮ್ಮೊಳಗೆ ಜಗಳವಾಡತೊಡಗಿದರು. ಶಾಂತಚಿತ್ತನಾದ ಜ್ಞಾನಿ ಸಾದತ್‌ ತುಸು ಕಾಲ ಈ ಗದ್ದಲವನ್ನು ನೋಡಿ ಕೊನೆಗೊಮ್ಮೆ ಅಬ್ಬರಿಸಿದ, “ಸದ್ದಿಲ್ಲದಿರಿ.” 

ಭಯವಿಸ್ಮಿತರಾದ ಜನ ತಕ್ಷಣವೇ ಸುಮ್ಮನಾದರು. ತದನಂತರ ಸಾದತ್‌ ಹೇಳಿದ, “ಈಗ ಎಲ್ಲರೂ ವೃತ್ತಾಕಾರದಲ್ಲಿ ನೆಲದಲ್ಲಿ ಕುಳಿತು ನಾನು ಹಿಮ್ಮರಳುವುದನ್ನು ಎದುರುನೋಡಿ.”
ಕೂಡಲೆ ಸಾದತ್‌ ತನ್ನ ಕುಟೀರದೊಳಕ್ಕೆ ಹೋಗಿ ತುಸು ಸಮಯವಾದ ನಂತರ ಕಾಗದದ ಹಾಳೆಗಳು, ಲೇಖನಿಗಳು, ಒಂದು ಬೆತ್ತದ ಬುಟ್ಟಿ ಹಿಡಿದುಕೊಂಡು ಹಿಮ್ಮರಳಿದ. ಕಾಗದ ಹಾಗು ಲೇಖನಿಗಳನ್ನು ಜನರಿಗೆ ವಿತರಿಸಿದ. ಬುಟ್ಟಿಯನ್ನು ವೃತ್ತದ ಮಧ್ಯದಲ್ಲಿ ಇಟ್ಟ. ಪ್ರತಿಯೊಬ್ಬರೂ ತಮ್ಮನ್ನು ಕಾಡುತ್ತಿರುವ ಅತೀ ಮುಖ್ಯ ಸಮಸ್ಯೆಯನ್ನು ದರಲ್ಲಿ ಬರೆದು ಬುಟ್ಟಿಯೊಳಕ್ಕೆ ಹಾಕುವಂತೆ ಹೇಳಿದ. ಎಲ್ಲರೂ ಸೂಚನೆಯಂತೆ ಮಾಡಿ ಆದ ನಂತರ ಕಾಗದಗಳು ಇರುವ ಸ್ಥಳಗಳು ಬದಲಾಗುವಂತೆ ಬುಟ್ಟಿಯನ್ನು ಜೋರಾಗಿ ಕುಲುಕಿ ಹೇಳಿದ, “ಈಗ ಈ ಬುಟ್ಟಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸಿ. ಅಂತು ಮಾಡುವಾಗ ಬುಟ್ಟಿ ತಮ್ಮ ಕೈಗೆ ಬಂದೊಡನೆ ಅತ್ಯಂತ ಮೇಲಿರುವ ಕಾಗದವನ್ನು ತೆಗೆದುಕೊಳ್ಳಿ. ಆ ಕಾಗದದಲ್ಲಿ ಬರೆದಿರುವ ಸಮಸ್ಯೆಯನ್ನು ಓದಿ. ನೀವು ಬರೆದಿದ್ದ ಸಮಸ್ಯೆಗೆ ಬದಲಾಗಿ ಅದೇ ನಿಮ್ಮ ಮುಖ್ಯ ಸಮಸ್ಯೆ ಎಂಬುದಾಗಿ ನೀವು ಭಾವಿಸಿದಲ್ಲಿ ಆ ಕಾಗದವನ್ನು ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ, ಅಂತಿಲ್ಲದೇ ಇದ್ದರೆ ನೀವು ಬರೆದಿದ್ದ ಸಮಸ್ಯೆಯನ್ನೇ ಮರಳಿ ಪಡೆಯಿರಿ.”

ಒಬ್ಬೊಬ್ಬರಾಗಿ ಬುಟ್ಟಿಯಿಂದ ಕಾಗದಗಳನ್ನು ತೆಗೆದುಕೊಂಡು ಬರೆದಿದ್ದ ಸಮಸ್ಯೆಗಳನ್ನು ಓದಿದರು. ಪ್ರತಿಯೊಬ್ಬರಿಗೂ  ಇತರರ ಸಮಸ್ಯೆ ತಮ್ಮ ಸಮಸ್ಯೆಗಿಂತ ದಿಗಿಲುಗೊಳಿಸುವಷ್ಟು ದೊಡ್ಡದು ಅನ್ನಿಸಿತು. ಅಂತಿಮವಾಗಿ ಪ್ರತಿಯೊಬ್ಬರೂ ತಮ್ಮ ಸಮಸ್ಯೆ ಬರೆದಿದ್ದ ಕಾಗದವನ್ನೇ ತೆಗೆದುಕೊಂಡು ಸಮಾಧಾನ ಪಟ್ಟುಕೊಂಡರು. ಸಮಸ್ಯೆಗಳ ಕುರಿತಾಗಿ ಹೊಸ ಅರಿವು ಮೂಡಿಸಿದ್ದಕ್ಕಾಗಿ ಎಲ್ಲರೂ ಸಾದತ್‌ನಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. 

*****

೪. ಈರುಳ್ಳಿ ಕಳ್ಳನ ಕತೆ
ಬಹು ದೂರದ ನಾಡೊಂದರಲ್ಲಿ ರೇಝಾ ಎಂಬವನೊಬ್ಬನಿದ್ದ. ಈರುಳ್ಳಿ ಕದ್ದು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿ ಒಳ್ಳೆಯ ಲಾಭ ಗಳಿಸಲು ಆತ ಒಂದು ರಾತ್ರಿ ನಿರ್ಧರಿಸಿದ. ಆ ರಾತ್ರಿ ಬೇಸಿಗೆಯ ರಾತ್ರಿಯಾಗಿದ್ದದ್ದರಿಂದ ಚಳಿ ಇರಲಿಲ್ಲ, ಸ್ಪಷ್ಟವಾಗಿ ನೋಡಲು ಸಾಧ್ಯವಾಗುವಷ್ಟು ಬೆಳದಿಂಗಳೂ ಇತ್ತು. ದೊಡ್ಡ ಬುಟ್ಟಿಯೊಂದನ್ನು ತೆಗೆದುಕೊಂಡು ಕುದುರೆಯೊಂದನ್ನೇರಿ ಪಕ್ಕದ ಹಳ್ಳಿಯಲ್ಲಿ ಈರುಳ್ಳಿ ಬೆಳೆಯುತ್ತಿದ್ದ ಮಹಮ್ಮದ್‌ ಎಂಬಾತನ ಹೊಲಕ್ಕೆ ಹೋದ. 

ಈರುಳ್ಳಿ ಬೆಳೆಯುತ್ತಿದ್ದ ಹೊಲವನ್ನು ತಲುಪಿದ ನಂತರ ಯಾರೂ ತನ್ನನ್ನು ನೋಡುತ್ತಿಲ್ಲವೆಂಬುದನ್ನು ಖಾತರಿ ಪಡಿಸಿಕೊಂಡು ಈರುಳ್ಳಿಗಳನ್ನು ಸಂಗ್ರಹಿಸಲಾರಂಭಿಸಿದ. ಸುಮಾರು ೧೦೦ ಈರುಳ್ಳಿಗಳನ್ನು ಕಟಾವು ಮಾಡಿದಾಗ ಅವನು ಕೊಂಡೊಯ್ದಿದ್ದ ಬುಟ್ಟಿ ತುಂಬಿತು. ಆಗ ಆತ ಕುದುರೆಯನ್ನೇರಿ ಮನೆಗೆ ಹಿಂದಿರುಗಲು ನಿರ್ಧರಿಸಿದ. ಕುದುರೆಯ ಮೇಲೆ ಭಾರವಾದ ಬುಟ್ಟಿಯನ್ನು ಇಟ್ಟಾಗ ಅದು ದೊಡ್ಡ ಧ್ವನಿಯಲ್ಲಿ ಕೆನೆಯಿತು. 
ಹೊಲದಲ್ಲಿಯೇ ಇದ್ದ ಮನೆಯೊಳಗೆ ಮಲಗಿದ್ದ ರೈತನ ಹೆಂಡತಿಗೆ ಎಚ್ಚರವಾಗಿ ಈ ಹೇಷಾರವ ಎಲ್ಲಿಂದ ಕೇಳಿಬರುತ್ತಿದೆ ಎಂಬುದನ್ನು ತಿಳಿಯಲೋಸುಗ ಕಿಟಕಿಯಿಂದ ನೋಡಿದಳು. ಕುದುರೆಯನ್ನೂ ರೇಝಾನನ್ನೂ ಹೊಲದಲ್ಲಿ ಕಂಡ ಕೂಡಲೆ ಆಕೆ ತನ್ನ ಗಂಡನನ್ನೂ ಮಕ್ಕಳನ್ನೂ ಎಬ್ಬಿಸಿದಳು. ರೇಝಾ ಓಡಿ ಹೋಗುವ ಮುನ್ನವೇ . ಅವರೆಲ್ಲರೂ ಓಡಿ ಬಂದು ಅವನನ್ನು ಕುದುರೆ ಮತ್ತು ಈರುಳ್ಳಿ ಸಹಿತ ಹಿಡಿದರು. 
ಬೆಳಗ್ಗೆ ಆತನನ್ನು ಅವರು ಹಳ್ಳಿಯ ಮುಖ್ಯಸ್ಥನ ಎದುರು ಹಾಜರು ಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯಸ್ಥ ರೇಝಾ ತಪ್ಪಿತಸ್ಥ ಎಂಬುದಾಗಿ ಘೋಷಿಸಿದ. ಈ ಮುಂದೆ ನಮೂದಿಸಿದ ಮೂರು ತೆರನಾದ ಶಿಕ್ಷೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ರೇಝಾನಿಗೆ ಸೂಚಿಸಿದ: ೧೦೦ ಚಿನ್ನದ ನಾಣ್ಯಗಳನ್ನು ಪಾವತಿಸುವುದು, ಕದ್ದ ೧೦೦ ಈರುಳ್ಳಿಗಳನ್ನು ತಿನ್ನುವುದು, ೧೦೦ ಚಡಿಯೇಟು ಸ್ವೀಕರಿಸುವುದು. 

೧೦೦ ಈರುಳ್ಳಿಗಳನ್ನು ತಿನ್ನುವ ಶಿಕ್ಷೆಯನ್ನು ರೇಝಾ ಒಪ್ಪಿಕೊಂಡ. ಈರುಳ್ಳಿ ತಿನ್ನಲಾರಂಭಿಸಿದ ತುಸು ಸಮಯದ ನಂತರ ಆತನ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿಯಲಾರಂಭಿಸಿತು, ಅತೀ ಸಂಕಟದ ಸ್ಥಿತಿ ತಲುಪಿದ. ೨೫ ಈರುಳ್ಳಿಗಳನ್ನು ಕಷ್ಟಪಟ್ಟು ತಿಂದು ಮುಗಿಸಿದಾಗ ಇನ್ನೂ ೭೫ ಈರುಳ್ಳಿಗಳನ್ನು ತಿನ್ನುವುದು ಅಸಾಧ್ಯ ಅನ್ನಿಸಿತು. ಅದಕ್ಕೆ ಬದಲಾಗಿ ೧೦೦ ಚಡಿಯೇಟುಗಳ ಶಿಕ್ಷೆ ಸ್ವೀಕರಿಸಲು ನಿರ್ಧರಿಸಿದ.  ಮುಖ್ಯಸ್ಥನೂ ಈ ಬದಲಾವಣೆಗೆ ಸಮ್ಮತಿಸಿದ. ೧೦ ಚಡಿಯೇಟುಗಳನ್ನು ಆಗುತ್ತಿದ್ದ ಹಿಂಸೆ ತಡೆದುಕೊಳ್ಳಲಾಗದೆ ಚಡಿಯೇಟಿನ ಶಿಕ್ಷೆ ನಿಲ್ಲಿಸುವಂತೆ ಅಂಗಲಾಚಿದ. ಅಂತಿಮವಾಗಿ ೧೦೦ ಚಿನ್ನದ ನಾಣ್ಯಗಳನ್ನು ಪಾವತಿಸಲು ಒಪ್ಪಿಕೊಂಡು ಮುಕ್ತನಾದ!

*****

೫. ವಾಚಾಳಿ ಸೌದೆ ಕಡಿಯುವವನ ಕತೆ
ಒಂದು ಊರಿನಲ್ಲಿ ಊರ ಹೊರಗಿದ್ದ ದೊಡ್ಡ ಕಾಡಿನಲ್ಲಿ ಸೌದೆ ಕಡಿದು ತಂದು ಮಾರಿ ಜೀವಿಸುತ್ತಿದ್ದವನೊಬ್ಬನಿದ್ದ. ಸುಮಾರು ಇಪ್ಪತ್ತು ವರ್ಷ ಕಾಲ ಇಂತು ಜೀವಿಸಿದ ನಂತರ ಅವನಿಗೇಕೋ ತನ್ನ ವೃತ್ತಿಯ ಕುರಿತು ಜಿಗುಪ್ಸೆ ಮೂಡಿತು. ಒಂದು ದಿನ ಎಂದಿನಂತೆ ಕಾಡಿಗೆ ಹೋದ ಆತ ಎಲ್ಲ ಮರಗಳಿಗೂ ಕೇಳಲಿ ಎಂಬ ಉದ್ದೇಶದಿಂದ ಸಾಧ್ಯವಿರುವಷ್ಟು ಗಟ್ಟಿಯಾಗಿ ಬೊಬ್ಬೆಹೊಡೆದ, “ಇನ್ನು ಈ ಕೆಲಸ ಮಾಡಲು ನನಗೆ ಇಷ್ಟವಿಲ್ಲ! ಇಂದು ಕೊನೆಯ ಸಲ ಒಂದು ಹೊರೆ ಸೌದೆ ಕಡಿಯುತ್ತೇನೆ. ನಂತರ ನಮಗೆ ಈ ದುಸ್ಥಿತಿ ಬರಲು ಕಾರಣನಾದ ನಮ್ಮ ಆದಿಪುರುಷ ಆದಮ್‌ನ ಮೂಳೆಗಳನ್ನು ಹುಡುಕುತ್ತೇನೆ. ಅವು ದೊರೆತೊಡನೆ ಸುಟ್ಟು ಹಾಕುತ್ತೇನೆ.”

ಆ ಕ್ಷಣದಲ್ಲಿ ದೇವರು ಒಂದು ಹೆಣ್ಣಿನ ರೂಪದಲ್ಲಿ ಒಬ್ಬ ದೇವದೂತನನ್ನು ಅವನ ಹತ್ತಿರಕ್ಕೆ ಕಳುಹಿಸಿದರು. ನೀನೇನು ಮಾಡುತ್ತಿರುವಿ ಎಂಬುದಾಗಿ ಆಕೆ ಕೇಳಿದಾಗ ಸೌದೆ ಕಡಿಯುವವ ಹೇಳಿದ, “ಆದಮ್‌ನ ಮೂಳೆಗಳನ್ನು ನಾನು ಹುಡುಕುತ್ತಿದ್ದೇನೆ. ಅವನಿಂದಾಗಿ ನಮಗಿಂತಹ ದುಸ್ಥಿತಿ ಬಂದಿರುವುದರಿಂದ ಅವನ ಮೂಳೆಗಳನ್ನು ಸುಟ್ಟು ಹಾಕಬೇಕೆಂದುಕೊಂಡಿದ್ದೇನೆ.”
ಆಕೆ ಕೇಳಿದಳು, “ಈ ಬಳಲಿಸುವ ಕಠಿನ ಕಾಯಕದಿಂದ ನಿನ್ನನ್ನು ಯಾರಾದರೂ ಮುಕ್ತಗೊಳಿಸಿದರೆ ಏನು ಮಾಡುವೆ?”
ಬಲು ಆನಂದದಿಂದ ಸೌದೆ ಕಡಿಯುವವ ಉತ್ತರಿಸಿದ, “ಅವರಿಗೆ ನಾನು ಸಾವಿರ ಸಲ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.”

“ಹಾಗಾದರೆ ನಾನು ಈಗಲೇ ನಿನ್ನನ್ನು ಉದ್ಯಾನವೊಂದಕ್ಕೆ ರವಾನೆ ಮಾಡುತ್ತೇನೆ. ಅಲ್ಲಿ ನೀನು ಯಾವ ಕೆಲಸವನ್ನೂ ಮಾಡಬೇಕಾಗಿಲ್ಲ. ಆದರೆ ನೀನು ನನಗೊಂದು ವಚನ ಕೊಡಬೇಕು – ಅಲ್ಲಿ ನೀನು ಏನೇ ನೋಡಿದರೂ ಒಂದೇ ಒಂದು ಪದವನ್ನೂ ಉಚ್ಚರಿಸಕೂಡದು.”
ಸೌದೆ ಕಡಿಯುವವ ಈ ಷರತ್ತಿಗೆ ಒಪ್ಪಿಗೆ ಸೂಚಿಸಿದ ಕೂಡಲೆ ಆಕೆ ಜೋರಾಗಿ ಚಪ್ಪಾಳೆ ತಟ್ಟಿದಳು. ತಕ್ಷಣ ಎತ್ತರವಾದ ಮರಗಳೂ ಸ್ಫಟಿಕಶುಭ್ರ ನೀರು ಹರಿಯುತ್ತಿದ್ದ ತೊರೆಗಳೂ ಸ್ವಾದಿಷ್ಟ ಹಣ್ಣುಗಳೂ ಇದ್ದ ಸುಂದರ ಉದ್ಯಾನದಲ್ಲಿ ಸೌದೆಕಡಿಯುವವ ಇದ್ದ.

ತುಸು ಸಮಯದ ನಂತರ ಅಲ್ಲಿ ಒಬ್ಬ ಸೌದೆಗಾಗಿ ಮರ ಕಡಿಯುತ್ತಿದ್ದದ್ದನ್ನು ಸೌದೆಕಡಿಯುವವ ನೋಡಿದ. ಆತ ಒಣಗಿದ ಕೊಂಬೆಗಳನ್ನು ಕಡಿಯುವುದಕ್ಕೆ ಬದಲಾಗಿ ಹಸಿ ಕೊಂಬೆಗಳನ್ನು ಕಡಿಯುತ್ತಿದ್ದ. ತಾನು ಕೊಟ್ಟ ವಚನವನ್ನು ಜ್ಞಾಪಿಸಿಕೊಂಡ ಸೌದೆಕಡಿಯುವವ ಮಾತನಾಡದೆ ಸ್ವಲ್ಪ ಕಾಲ ಸುಮ್ಮನಿದ್ದ. ಕೊನೆಗೆ ತನ್ನನ್ನು ತಾನು ಅಂಕೆಯಲ್ಲಿಟ್ಟುಕೊಳ್ಳಲಾರದೆ ಹೇಳಿದ, “ ಅಯ್ಯಾ, ಕಡಿಯಬೇಕಾದದ್ದು ಒಣಕೊಂಬೆಗಳನ್ನು ಮಾತ್ರ ಹಸಿ ಕೊಂಬೆಗಳನ್ನು ಅಲ್ಲ ಎಂಬುದು ನಿನಗೆ ತಿಳಿದಿಲ್ಲವೇ?”

ಅವನು ಸೌದೆ ಕಡಿಯುವುದನ್ನು ನಿಲ್ಲಿಸಿ ಕೇಳಿದ, “ನೀನು ಇಲ್ಲಿ ಬಹಳ ದಿನಗಳಿಂದ ಇರುವೆಯಾ?”
ಮರು ಕ್ಷಣದಲ್ಲಿಯೇ ಸೌದೆಕಡಿಯುವವ ಕೊಡಲಿ ಸಮೇತ ಅವನ ಹಳ್ಳಿಯಲ್ಲಿ ಇದ್ದ. ಬಲು ದುಃಖದಿಂದ ಆತ ಕೈಗಳಿಂದ ಎದೆಗೆ ಹೊಡೆದುಕೊಳ್ಳುತ್ತಾ ಗೋಳಾಡಲಾರಂಭಿಸಿದ. ಹೆಣ್ಣಿನ ರೂಪದ ದೇವದೂತ ಪುನಃ ಪ್ರತ್ಯಕ್ಷವಾಗಿ ನಡೆದದ್ದೇನು ಎಂಬುದನ್ನು ವಿಚಾರಿಸಿದಳು. ನಡೆದದ್ದು ಏನು ಎಂಬುದನ್ನು ಸೌದೆಕಡಿಯುವವ ವಿವರಿಸಿದಾಗ ಅವಳು ಕೇಳಿದಳು, “ಮಾತನಾಡಕೂಡದೆಂದು ನಾನು ನಿನಗೆ ಹೇಳಿರಲಿಲ್ಲವೇ?”
“ಪುನಃ ಅಲ್ಲಿಗೆ ನನ್ನನ್ನು ಒಯ್ದರೆ ಒಂದೇ ಒಂದು ಮಾತನ್ನೂ ಆಡುವುದಿಲ್ಲ ಎಂಬುದಾಗಿ ಭರವಸೆ ನೀಡುತ್ತೇನೆ,” ಎಂಬುದಾಗಿ ಆತ ಹೇಳಿದ.
ದೇವದೂತ ಪುನಃ ಚಪ್ಪಾಳೆ ತಟ್ಟಿದ ತಕ್ಷಣವೇ ಆತ ಪುನಃ ದೇವಲೋಕದ ಉದ್ಯಾನದಲ್ಲಿ ಇದ್ದ.

ಸ್ವಲ್ಪ ಸಮಯದ ನಂತರ ಉದ್ಯಾನದಲ್ಲಿ ಜಿಂಕೆಯೊಂದು ಅತ್ತಿಂದಿತ್ತ ಓಡಾಡುತ್ತಿರುವುದನ್ನೂ ಅದನ್ನು ಹಿಡಿಯಲೋಸುಗ ಮುದುಕನೊಬ್ಬ ಕುಂಟಿಕೊಂಡು ಅದರ ಹಿಂದೆ ಹೋಗುತ್ತಿರುವುದನ್ನೂ ನೋಡಿದ. ಹಿಂದುಮುಂದು ಆಲೋಚಿಸದೇ ಸೌದೆಕಡಿಯುವವ ಗಟ್ಟಿಯಾಗಿ ಕೂಗಿ ಹೇಳಿದ, “ಅಜ್ಜ, ಜಿಂಕೆ ಅತ್ತಿಂದಿತ್ತ ನೆಗೆದಾಡುತ್ತಿದೆ. ಅದರ ಹಿಂದೆ ಕುಂಟುತ್ತಾ ಹೋಗಿ ಹಿಡಿಯುವ ಪ್ರಯತ್ನ ಯಾವಾಗ ನಿಲ್ಲಿಸುತ್ತೀರಿ?” ಮುದುಕ ನಿಂತು ಕೇಳಿದ, “ನೀನು ಇಲ್ಲಿ ಬಹಳ ದಿನಗಳಿಂದ ಇರುವೆಯಾ?”

ಮರು ಕ್ಷಣದಲ್ಲಿಯೇ ಸೌದೆಕಡಿಯುವವ ಕೊಡಲಿ ಸಮೇತ ಅವನ ಹಳ್ಳಿಯಲ್ಲಿ ಇದ್ದ. ಪುನಃ ಬಲು ದುಃಖದಿಂದ ಆತ ಕೈಗಳಿಂದ ಎದೆಗೆ ಹೊಡೆದುಕೊಳ್ಳುತ್ತಾ ಗೋಳಾಡಲಾರಂಭಿಸಿದ. ಹೆಣ್ಣಿನ ರೂಪದ ದೇವದೂತ ಪುನಃ ಪ್ರತ್ಯಕ್ಷವಾದ.

“ದಯವಿಟ್ಟು ನನಗೆ ಕರುಣೆ ತೋರಿಸಿ. ಇನ್ನೊಂದು ಅವಕಾಶ ನನಗೆ ಕೊಡಿ. ಈ ಬಾರಿಯೂ ಮಾತನಾಡಿದರೆ ನೀವು ನನ್ನನ್ನು ಶಿಕ್ಷಿಸಬಹುದು,” ಎಂಬುದಾಗಿ ಗೋಗರೆದ ಸೌದೆಕಡಿಯುವವ. ಅದಕ್ಕೆ ದೇವದೂತ ಸಮ್ಮತಿಸಿ ಪುನಃ ಚಪ್ಪಾಳೆ ತಟ್ಟಿ ದೇವಲೋಕದ ಉದ್ಯಾನಕ್ಕೆ ಕಳುಹಿಸಿದ.

ತನ್ನ ಹಿಂದಿನ ತಪ್ಪುಗಳ ಅರಿವು ಇದ್ದ್ದರಿಂದ ಸೌದೆಕಡಿಯುವವ ಮೂರುದಿಗಳನ್ನು ಮೌನವಾಗಿದ್ದುಕೊಂಡೇ ಕಳೆದ. ಗಾಣದ ಅರೆಯುವ ಕಲ್ಲೊಂದನ್ನು ಗಾಣದ ಇನ್ನೊಂದು ಪಾರ್ಶ್ವಕ್ಕೆ ಒಯ್ಯಲು ನಾಲ್ಕು ಮಂದಿ ಹೆಣಗಾಡುತ್ತಿರುವುದನ್ನು ಆನಂತರ ನೋಡಿದ. ಅಷ್ಟೂ ಮಂದಿ ಒಟ್ಟಾಗಿ ಅರೆಯುವ ಕಲ್ಲಿನ ಒಂದು ಪಾರ್ಶ್ವದಲ್ಲಿ ನಿಂತು ಅದನ್ನು ಎತ್ತುತ್ತಿದ್ದರು. ತತ್ಪರಿಣಾಮವಾಗಿ ಅದು ಇನ್ನೊಂದು ಪಾರ್ಶ್ವಕ್ಕೆ ಅಡಿಮೇಲಾಗಿ ಬೀಳುತ್ತಿತ್ತು. ತದನಂತರ ಅವರೆಲ್ಲರೂ ಅರೆಯುವ ಕಲ್ಲಿನ ಇನ್ನೊಂದು ಪಾರ್ಶ್ವಕ್ಕೆ ಹೋಗಿ  ಹಿಂದೆ ಮಾಡಿದಂತೆಯೇ ಪುನಃ ಮಾಡುತ್ತಿದ್ದರು. ಸೌದೆಕಡಿಯುವವ ಮನಸ್ಸಿನಲ್ಲಿಯೇ ಆಲೋಚಿಸಿದ, “ಇವರಿಗೆ ಹೇಳಲೋ? ಬೇಡವೋ? ಇವರು ಅವಿವೇಕಿಗಳು. ಇವರಿಗೆ ನಾನು ಹೇಳಲೇಬೇಕು.” ತದನಂತರ ಗಟ್ಟಿಯಾಗಿ ಕೂಗಿ ಹೇಳಿದ, “ಅಯ್ಯಾ, ನೀವು ಆ ಅರೆಯುವ ಕಲ್ಲನ್ನು ಬೇರೆಡೆಗೆ ಒಯ್ಯಬೇಕಾದರೆ ಅದರ ಸುತ್ತಲೂ ಸಮದೂರಗಳಲ್ಲಿ ಒಬ್ಬೊಬ್ಬರು ನಿಂತು ಏಕಕಾಲದಲ್ಲಿ ಎತ್ತಬೇಕು.”

ಅವರಲ್ಲೊಬ್ಬ ಸೌದೆಕಡಿಯುವವನ ಕಡೆಗೆ ತಿರುಗಿ ಕೇಳಿದ, “ನೀನು ಇಲ್ಲಿ ಬಹಳ ದಿನಗಳಿಂದ ಇರುವೆಯಾ?” ಮರು ಕ್ಷಣದಲ್ಲಿಯೇ ಸೌದೆಕಡಿಯುವವ ಕೊಡಲಿ ಸಮೇತ ಅವನ ಹಳ್ಳಿಯಲ್ಲಿ ಇದ್ದ.
ಆನಂತರ ಬಹಳ ಸಮಯ ಸೌದೆಕಡಿಯುವವ ಗೋಳಾಡುತ್ತಲೇ ಇದ್ದ. ಕೊನೆಗೊಮ್ಮೆ ದೇವದೂತ ಪ್ರತ್ಯಕ್ಷನಾದಾಗ ತನ್ನನ್ನು ಕ್ಷಮಿಸಿ ಪುನಃ ದೇವಲೋಕದ ಉದ್ಯಾನಕ್ಕೆ ಕಳುಹಿಸುವಂತೆ ಅಂಗಲಾಚಿದ. 
“ನಿನ್ನ ಪೂರ್ವಜ ಆದಮ್‌ ತಪ್ಪು ಮಾಡಿದ್ದು ಒಂದು ಸಲ ಮಾತ್ರ. ನೀನಾದರೋ, ಒಂದೇ ತಪ್ಪನ್ನು ಪದೇಪದೇ ಮಾಡಿರುವೆ. ಅಂದಮೇಲೆ ನೀನು ನಿನ್ನ ಕೊನೆಯ ದಿನದ ವರೆಗೆ ಇಲ್ಲಿಯೇ ಸೌದೆಗಳೊಟ್ಟಿಗೆ ಇರುವುದೇ ಸರಿ.” 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x