ವಿಜ್ಞಾನ-ಪರಿಸರ

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ:ಭಾಗ-5: ಅಖಿಲೇಶ್ ಚಿಪ್ಪಳಿ

[ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ ಅವರು ಬರೆದ ಕಿರುಪುಸ್ತಕದ ಭಾವಾನುವಾದದ ಮುಂದುವರೆದ ಭಾಗ].

ಯಾರೆಲ್ಲ ಸಂತ್ರಸ್ಥರು?

ಭಾರತದೆಲ್ಲೆಡೆ ಹಾಲಿ ಹವಾಮಾನ ಸಂತ್ರಸ್ಥರಾಗಿರುವವರು ಬಡಜನರೇ ಆಗಿದ್ದಾರೆ. ಸಣ್ಣ ಹಿಡುವಳಿದಾರರು ಅದರಲ್ಲೂ ಮಳೆಯಾಶ್ರಿತ ಬೆಳೆ ಬೆಳೆಯುವ ರೈತರು, ಹಿಂದುಳಿದವರು, ಆದಿವಾಸಿಗಳು, ಕಿಲೋಮೀಟರ್ ದೂರದಿಂದ ನೀರು ಸಂಗ್ರಹಿಸಿ ತರುವ ಬಡ ಮಹಿಳೆಯವರು ಇವರು ಹೊಲದಲ್ಲೂ ದುಡಿಯಬೇಕಾದ ಪರಿಸ್ಥಿತಿಯಿದೆ. ಪಟ್ಟಣದಲ್ಲಿರುವ ಬಡವರು, ಇವರಿಗೆ ನೀರು ಮರಿಚೀಕೆಯಾಗಿದೆ ಅಲ್ಲದೆ ಆಹಾರದ ತೀವ್ರ ಏರಿಕೆಯಿಂದ ಬದುಕು ಕಷ್ಟಕರವಾಗಿದೆ. ಜೊತೆಗೆ ಕೃಷಿ ಕೂಲಿಗಳು, ಮೀನುಗಾರರು ಹಾಗೂ ಇನ್ನಿತರೆ ತೀರ ಪ್ರದೇಶದ ಜನರು, ಇದರಲ್ಲಿ ಮಹಿಳೆಯರೂ ಮತ್ತು ಮಕ್ಕಳು ಸೇರುತ್ತಾರೆ. ಆದಿವಾಸಿಗಳಂತಹ ಕಿರು ಅರಣ್ಯ ಉತ್ಪನ್ನಗಳನ್ನೇ ನಂಬಿಕೊಂಡವರು. ಹೀಗೆ ಆಹಾರ ಭದ್ರತೆ, ನೀರಿನ ಲಭ್ಯತೆ, ನಿತ್ಯಜೀವನ, ಆರೋಗ್ಯ ಮುಂತಾದ ಕ್ಷೇತ್ರಗಳ ಮೇಲೆ ಹವಾಮಾನ ವೈಪರೀತ್ಯ ತನ್ನ ಗಂಭೀರ ಪರಿಣಾಮವನ್ನು ಬೀರುತ್ತಿದೆ.

ಜಾಗತಿಕವಾಗಿ ಏನು?

1970ರಿಂದಲೂ ಆಫ್ರಿಕಾದ ವಿವಿಧ ಭಾಗಗಳಲ್ಲಿ ಬರಗಾಲ. ಪಾಕಿಸ್ತಾನದಲ್ಲಿ ನೆರೆ. 2010ರ ರಷ್ಯಾ ಬಿಸಿಗಾಳಿ. ಅಮೆರಿಕಾ, ಟೆಕ್ಸಾಸ್, ಉತ್ತರ ಮೆಕ್ಸಿಕೋದಲ್ಲಿ 2011ರ ಬರಗಾಲ. 2012ರ ಆರ್ಕ್‍ಟಿಕ್ ನೀರ್ಗಲ್ಲುಗಳ ಕರಗುವಿಕೆ ಪ್ರಮಾಣ ಹೆಚ್ಚಾಗಿದ್ದು, 20 ಸಾವಿರ ಅಡಿಗಳವರೆಗೆ ಸಮುದ್ರದ ಬಿಸಿಯಲ್ಲಿನ ಏರಿಕೆ. ಸಮುದ್ರ ಮಟ್ಟದಲ್ಲಿ 3.3 ಮಿ.ಮಿ.ಏರಿಕೆ, ಎಲ್ಲೆಲ್ಲೂ ಏರಿದ ಕಾಡ್ಗಿಚ್ಚು. ಹಿಮಾಲಯದ 800 ಅತಿದೊಡ್ಡ ಹಿಮಹಾಸುಗಳ ಕರಗುವಿಕೆ 95% ಏರಿದ್ದು. ಆಹಾರದ ಇಳುವರಿಯಲ್ಲಿ ಗಮನಾರ್ಹ ಇಳಿಕೆ ಇತ್ಯಾದಿಗಳು. 

ಇತರೆ ಜೀವಿಗಳ ಮೇಲಿನ ಪರಿಣಾಮ!

ಭಾರತದ ಸಮುದ್ರದಲ್ಲಿ ಏರಿಕೆಯಾದ ಬಿಸಿ ಪ್ರಮಾಣದ ಕಾರಣದಿಂದಾಗಿ ಕೆಲವು ಮೀನು ಸಂತತಿಗಳು ತಂಪು ಪ್ರದೇಶಗಳತ್ತ ವಲಸೆ ಹೋಗುತ್ತಿವೆ. ಈ ಮೊದಲು ಮಹಾರಾಷ್ಟ್ರದ ರತ್ನಗಿರಿ ತೀರ ಪ್ರದೇಶದಲ್ಲಿ ಕಂಡು ಬರುತ್ತಿದ್ದ ಮೀನುಗಳು ಈಗ ಗುಜರಾತಿನ ತೀರ ಪ್ರದೇಶಗಳತ್ತ ವಲಸೆ ಹೋಗಿವೆ. ಬಂಗಾಳಕೊಲ್ಲಿಯಿಂದ ಆಂಧ್ರಪ್ರದೇಶದವರೆಗೂ ಮಾತ್ರ ಕಂಡುಬರುತ್ತಿದ್ದ ಕೆಲವು ಪ್ರಭೇದಗಳು ಒರಿಸ್ಸಾ ಪ್ರದೇಶದಲ್ಲಿ ಕಂಡುಬರುತ್ತಿವೆ. ಈ ಪ್ರಕ್ರಿಯೆ ಸಿಹಿನೀರಿನ ನದಿಗಳಲ್ಲೂ ಕಂಡು ಬಂದಿದೆ. ಚಳಿಯಾಧಾರಿತವಾದ ಓಕ್, ಸೇಬು ಹಾಗೂ ಕೆಲವು ತರಕಾರಿ ಬೆಳೆಗಳು ಎತ್ತರದ ಪ್ರದೇಶಗಳಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ. ವಾತಾವರಣದಲ್ಲಿನ ಬಿಸಿಯೇರಿಕೆಯಿಂದಾಗಿ ಹಲವು ಹೊಸ ಕೀಟಗಳು ಕಳೆ ಸಸ್ಯಗಳು ಸೃಷ್ಟಿಯಾಗಿವೆ. ಋತ್ಯೇತರ ಹೂ-ಕಾಯಿ ಕಚ್ಚುವ ಪರಿಪಾಠ ಪ್ರಾರಂಭವಾಗಿದೆ. ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಅಗತ್ಯವಾದ ಜಾನುವಾರು ಸಂತತಿ ನೀರು ಮೇವಿಲ್ಲದೆ ಸಾಯುತ್ತಿವೆ. ಇದಿಷ್ಟು ಭಾರತದ ಸ್ಥಿತಿ.

ಸುಮಾರು 800 ಸಂಶೋಧನ ಪ್ರಬಂಧಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಬಿಸಿಯೇರಿಕೆಯಿಂದ ಆಗಿರುವ ಹಾಗೂ ಆಗುತ್ತಿರುವ ಪರಿಣಾಮಗಳನ್ನು ಈ ಬಗೆಯಲ್ಲಿ ಗುರುತಿಸಲಾಗಿದೆ.

ಹಲವು ಪ್ರಭೇದಗಳು ಉತ್ತರ ದಿಕ್ಕಿನತ್ತ ವಲಸೆ ಹೋಗುತ್ತಿವೆ. ಹೆಚ್ಚು ಉಷ್ಣಪ್ರದೇಶವಾಗ ಸಮಭಾಜಕ ರೇಖೆಯಿಂದ ಧ್ರುವಪ್ರದೇಶಗಳತ್ತ ಕೆಲವ ಪ್ರಭೇದಗಳು ವಲಸೆ ಹೋಗುತ್ತಿವೆ. ಅವಧಿಗೆ ಮುನ್ನವೇ ಪಕ್ಷಿಗಳ ವಲಸೆ ಹೋಗುವ ಹಾಗೂ ಮೊಟ್ಟೆಯಿಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸಾಗರದ ಅತಿಮುಖ್ಯವಾದ ಆಹಾರವಾದ ಕ್ರಿಲ್ ಸಂತತಿ ಕಡಿಮೆಯಾಗುತ್ತಿದೆ. ಮೂಲತ: ಕ್ರಿಲ್ ಪ್ರಬೇಧವು ಮೀನು, ನೀರಕ್ಕಿ ಹಾಗೂ ಜಲಸಸ್ತನಿಗಳ ಬಹುಮುಖ್ಯವಾದ ಆಹಾರವಾಗಿದೆ. ಬೇಟೆ ಹಾಗೂ ಬಲಿ ಪ್ರಾಣಿಗಳ ಜೀವನದ ಅವಧಿಯು ವ್ಯತ್ಯಾಸಗೊಳ್ಳುತ್ತಿದೆ. ಪರಾಗಸ್ಪರ್ಶ ಕೀಟಗಳ ಹಾಗೂ ಹೂ ಬಿಡುವ ಸಮಯದಲ್ಲಿ ಗಣನೀಯ ವ್ಯತ್ಯಾಸ ಕಂಡುಬರುತ್ತಿದೆ. ಪ್ರಾಣಿಗಳ ಸಮೂಹ ನಾಶದ ಯುಗ ಪ್ರಾರಂಭವಾಗಿದೆ. ವಿಜ್ಞಾನಿಗಳ ಪ್ರಕಾರ 40%-70% ಪ್ರಬೇಧಗಳು ಬಿಸಿಗಾಳಿ, ಬರಗಾಲ, ಸಾಗರದಲ್ಲಿನ ಕ್ಷಾರಿಕ ಬದಲಾವಣೆಯಿಂದ ಬಲಿಯಾಗುತ್ತಿವೆ. 

ಸಂಶಯದ ದೃಷ್ಟಿಕೋನ

ಹವಾಮಾನ ವೈಪರೀತ್ಯದಿಂದ ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿದ್ದರೂ, ಕೆಲವರು ಇದನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದ್ದಾರೆ. ಕೆಲವರ ಪ್ರಕಾರ ಭೂಬಿಸಿಯಾಗುತ್ತಿಲ್ಲ, ಇನ್ನು ಕೆಲವರು ಬಿಸಿಯಾಗುತ್ತಿರುವುದು ಹೌದು, ಆದರೆ ಗಂಭೀರ ಪರಿಣಾಮಗಳೇನಿಲ್ಲ, ಮತ್ತು ಕೆಲವರು ಇದಕ್ಕೆ ಮಾನವ ಕಾರಣನಲ್ಲ, ಈ ಹಿಂದೆಯೂ ನಡೆದಿತ್ತು ಫಲಾನ-ಫಲಾನ…. 

ಈ ತರಹದ ವಾದಗಳನ್ನು ಚರ್ಚಿಸಲು ಇದು ಸಮಯವಲ್ಲ. 1961-1990ರ ವರೆಗೆ ಭಾರತದಲ್ಲಾದ ಬದಲಾವಣೆಗಳನ್ನು ಗಮನಸಲ್ಲಿರಿಸಿಕೊಂಡು ಅಂಕಿ-ಅಂಶಗಳ ಸಮೇತ ಪರಿಶೀಲಿಸಿದಲ್ಲಿ, ಭಾರತವಷ್ಟೆ ಅಲ್ಲ ಇಡೀ ಪ್ರಪಂಚದ ವಾತಾವರಣ ಬಿಸಿಯಾಗುತ್ತಿರುವುದು ಸುಳ್ಳಲ್ಲ. ಮಾನವನಲ್ಲದಿದ್ದರೆ, ಮತ್ಯಾರು ಇದಕ್ಕೆ ಕಾರಣ? ಸೂರ್ಯನೇ? ಈ ಹಿಂದೆಯೂ ಭೂ ಬಿಸಿಯಾಗಿತ್ತು ಅಂದರೆ ಯಾವಾಗ? ಮನುಷ್ಯಕುಲ ಹುಟ್ಟಿ ಬರೀ 10 ಸಾವಿರ ವರ್ಷಗಳಾದವಷ್ಟೆ. ಭೂಮಿ ಹುಟ್ಟಿ 460 ಕೋಟಿ ವರ್ಷಗಳಾದವು. ಆಗಿನ ಭೂಬಿಸಿಗೂ, ಈಗ ಆಗುತ್ತಿರುವ ಭೂಬಿಸಿಯ ವೇಗಕ್ಕೂ ಹೋಲಿಸಲು ಸಾಧ್ಯವೇ ಇಲ್ಲ. ಈಗಿನದು ಅತಿ ವೇಗದಿಂದ ಆಗತ್ತಿರುವ ಹಾಗೂ ಮಾನವ ಪ್ರಣೀತ ಭೂಬಿಸಿ. ಆಗಿನ ಆಮೆಗತಿಯ ಭೂಬಿಸಿಯ ವಾತಾವರಣಕ್ಕೆ ಅಂದಿನ ಪ್ರಬೇಧಗಳು ಹೊಂದಿಕೊಂಡಿದ್ದವು. ಇನ್ನು ಕೆಲವರ ಪ್ರಕಾರ ಕಳೆದ 15 ವರ್ಷಗಳಲ್ಲಿ ಭೂಬಿಸಿ ಕಡಿಮೆಯಾಗುತ್ತಿದೆ! ಇದಕ್ಕೆ ಕಾರಣ ಸಾಗರಗಳು, ಸಾಗರಗಳು ವಾತಾವರಣದ ಸಿತ್ಯಾಜ್ಯವನ್ನು ಹೀರಿಕೊಳ್ಳುತ್ತಿವೆ ಹಾಗೂ ಈ ಹೀರಿಕೊಳ್ಳುವ ಗುಣ ಒಂದು ಹಂತದಲ್ಲಿ ಸ್ಥಗಿತವಾಗುತ್ತದೆ. ಈ ಪರಿಸ್ಥಿತಿ ಈಗಲೇ ಉಂಟಾಗಬಹುದು ಅಥವಾ ಇನೈದು ವರ್ಷಗಳು ತೆಗೆದುಕೊಳ್ಳಬಹುದಷ್ಟೆ. ಮೂಲ ಭೌತಶಾಸ್ತ್ರ ಭೂಬಿಸಿಯಾಗುತ್ತಿರುವುದನ್ನು ದೃಢೀಕರಿಸಿ ಶತಮಾನವೇ ಸಂದಿದೆ.

ಭೂಬಿಸಿಯೇರಿಕೆಗಾಗಿ ಕಳವಳಗೊಳ್ಳುವ ಕಾರಣಗಳೇನು? (ಮುಂದೆ ನೋಡೋಣ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ:ಭಾಗ-5: ಅಖಿಲೇಶ್ ಚಿಪ್ಪಳಿ

Leave a Reply

Your email address will not be published. Required fields are marked *