ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಂಗಗಳೂ ಟೊಪ್ಪಿಗಳೂ
ಒಂದಾನೊಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಊರಿಂದೂರಿಗೆ ತಿರುಗುತ್ತಾ  ಟೊಪ್ಪಿಗಳನ್ನು ಮಾರುತ್ತಿದ್ದ ಔರಂಗಝೇಬ್‌ ಎಂಬ ಯುವಕನಿದ್ದ.
ಬೇಸಿಗೆಯ ಒಂದು ಅಪರಾಹ್ನ ವಿಶಾಲವಾದ ಬಯಲಿನಲ್ಲಿ ಪಯಣಿಸಿ ಸುಸ್ತಾಗಿದ್ದ ಔರಂಗಝೇಬನು ಯಾವುದಾದರೂ ತಂಪಾದ ಸ್ಥಳದಲ್ಲಿ ವಿರಮಿಸಿ ಒಂದು ಕಿರುನಿದ್ದೆ ಮಾಡುವ ಆಲೋಚನೆ ಮಾಡಿದ. ಸಮೀಪದಲ್ಲಿಯೇ ಇದ್ದ ಮಾವಿನ ಮರವೊಂದರ ಬುಡದಲ್ಲಿ ತನ್ನ ಚೀಲವನ್ನಿಟ್ಟು ಮಲಗಿ ನಿದ್ದೆ ಮಾಡಿದ. ಕೆಲವೇ ಕ್ಷಣಗಳಲ್ಲಿ ಗಾಢ ನಿದ್ದೆಗೆ ಜಾರಿದ. ಸ್ವಲ್ಪ ಸಮಯದ ನಂತರ ಎಚ್ಚರಗೊಂಡು ನೋಡುವಾಗ ಚೀಲದಲ್ಲಿ ಇದ್ದ ಟೊಪ್ಪಿಗಳೆಲ್ಲವೂ ಮಾಯವಾಗಿದ್ದವು. “ಛೇ, ನನ್ನ ಟೊಪ್ಪಿಗಳನ್ನೇ ಕಳ್ಳರು ಏಕೆ ಕದಿಯಬೇಕಿತ್ತು?” ಅಂದುಕೊಂಡು ಕೊರಗಿದ.

ಆಕಸ್ಮಿಕವಾಗಿ ತಲೆ ಎತ್ತಿ ನೋಡಿದಾಗ ಮಾವಿನ ಮರದ ತುಂಬ ಬಣ್ಣಬಣ್ಣದ ಟೊಪ್ಪಿಗಳನ್ನು ಧರಿಸಿದ್ದ ಮುದ್ದಾದ ಮಂಗಗಳು ಕಾಣಿಸಿದವು. ಅವನ್ನು ನೋಡಿದ ಆತ ನಡೆದದ್ದು ಏನು ಎಂಬುದನ್ನು ಊಹಿಸಿದ. ಮಂಗಗಳನ್ನು ಹೆದರಿಸಿ ಟೊಪ್ಪಿಗಳನ್ನು ಮರಳಿ ಪಡೆಯಲೋಸುಗ ಅವನು ಜೋರಾಗಿ ಬೊಬ್ಬೆ ಹಾಕಿದ, ಅವೂ ಅಂತೆಯೇ ಬೊಬ್ಬೆ ಹಾಕಿದವು. ಅವುಗಳತ್ತ ನೋಡುತ್ತಾ ಮುಖ ಸೊಟ್ಟದಾಗಿ ಮಾಡಿದ ಅವೂ ಅಂತೆಯೇ ಮಾಡಿದವು. ಅವನು ಅವುಗಳತ್ತ ಕಲ್ಲುಗಳನ್ನು ಎಸೆದ, ಅವು ಅವನತ್ತ ಮಾವಿನಕಾಯಿಗಳನ್ನು ಎಸೆದವು.

“ಈ ಮಂಗಗಳಿಂದ ನನ್ನ ಟೊಪ್ಪಿಗಳನ್ನು ಮರಳಿ ಪಡೆಯುವುದು ಹೇಗೆ?” ಎಂಬುದರ ಕುರಿತು ಔರಂಗಝೇಬನು ಸ್ವಲ್ಪ ಕಾಲ ಆಲೋಚಿಸಿದ. ಎಣು ತೋಚದೆ ಹತಾಶನಾಗಿ ತಾನು ಧರಿಸಿದ್ದ ಟೊಪ್ಪಿಯನ್ನು ತೆಗೆದು ನೆಲಕ್ಕೆಸೆದ. ಮಂಗಗಳೂ ತಮ್ಮ ಟೊಪ್ಪಿಗಳನ್ನು ತೆಗೆದು ನೆಲಕ್ಕೆಸೆದದ್ದನ್ನು ಕಂಡು ಆಶ್ಚರ್ಯಚಕಿತನಾದ. ಬೇಗಬೇಗನೆ ಟೊಪ್ಪಿಗಳನ್ನು ಆಯ್ದು ಚೀಲದಲ್ಲಿ ತುಂಬಿಕೊಂಡು ಮುಂದಿನ ಊರಿಗೆ ಪಯಣಿಸಿದ.
೫೦ ವರ್ಷಗಳು ಕಳೆದ ನಂತರ ಔರಂಗಝೇಬನ ಕುಟುಂಬದ ವ್ಯಾಪಾರ ವಹಿವಾಟನ್ನು ಬಲು ಶ್ರಮವಹಿಸಿ ಸುಸ್ಥಿತಿಯಲ್ಲಿ ನಡೆಸುತ್ತಿದ್ದ ಅವನ ಮೊಮ್ಮಗ ಹಬೀಬ್ ಅದೇ ಸ್ಥಳದ ಮೂಲಕ ಎಲ್ಲಗೋ ಹೋಗುತ್ತಿದ್ದ. ಸುದೀರ್ಘ ಕಾಲ ನಡೆದು ದಣಿದಿದ್ದ ಆತ ಅನೇಕ ಕೊಂಬೆಗಳು ಇದ್ದ ಮಾವಿನ ಮರವನ್ನು ನೋಡಿದ. ತುಸು ವಿಸ್ರಂತಿ ತೆಗೆದುಕೊಳ್ಳಲು ಆ ಮರದ ನೆರಳಿನಲ್ಲಿ ಕುಳಿತ ಆತ ಗಾಢ ನಿದ್ದೆಗೆ ಜಾರಿದ. ಕೆಲವು ಗಂಟೆಗಳ ನಂತರ ನಿದ್ದೆಯಿಂದ ಎದ್ದು ನೋಡಿದಾಗ ಚೀಲದಲ್ಲಿ ಇದ್ದ ಟೊಪ್ಪಿಗಳು ಮಾಯವಾಗಿದ್ದವು. ಅವುಗಳಿಗಾಗಿ ಹುಡುಕಲಾರಂಭಿಸಿದಾಗ ಮರದ ಮೇಲೆ ಅವನ ಟೊಪ್ಪಿಗಳನ್ನು ಹಾಕಿಕೊಂಡಿದ್ದ ಮಂಗಗಳ ಗುಂಪನ್ನು ನೋಡಿ ಆಶ್ಚರ್ಯಚಕಿತನಾದ. ಏನು ಮಾಡುವುದೆಂದು ತಿಳಿಯದೆ ಹತಾಶನಾದ ಆತನಿಗೆ ಅವನ ಅಜ್ಜ ಹೇಳುತ್ತಿದ್ದ ಕತೆಯೊಂದು ನೆನಪಿಗೆ ಬಂದಿತು. ಆಗ ಅವನು ತನಗೆ ತಾನೇ ಹೇಳಿದ, “ಆಹಾ, ಈ ಮಂಗಗಳನ್ನು ಮರುಳುಮಾಡುವುದು ಹೇಗೆಂಬುದು ನನಗೆ ಗೊತ್ತಿದೆ. ಅವು ನನ್ನನ್ನು ಅನುಕರಿಸುವಂತೆ ಮಾಡಿ ನನ್ನ ಟೊಪ್ಪಿಗಳನ್ನು ಮರಳಿ ಪಡೆಯುತ್ತೇನೆ!”

ಅವನು ಮಂಗಗಳತ್ತ ನೋಡುತ್ತಾ ಕೈಬೀಸಿದ, ಅವೂ ಅವನತ್ತ ನೋಡುತ್ತಾ ಕೈಬೀಸಿದವು. ಅವನು ತನ್ನ ಮೂಗನ್ನು ಒರೆಸಿಕೊಂಡ, ಅವೂ ಅಂತೆಯೇ ಮಾಡಿದವು. ಅವನು ಕುಣಿದ,ಅವೂ ಕುಣಿದವು. ತನ್ನ ಕಿವಿಗಳನ್ನು ಹಿಡಿದು ಎಳೆದ, ಅವೂ ತಮ್ಮ ಕಿವಿಗಳನ್ನು ಹಿಡಿದೆಳೆದವು. ಅವನು ಕೈಗಳನ್ನು ಮೇಲೆತ್ತಿದ ಅವೂ ತಮ್ ಕೈಗಳನ್ನು ಮೇಲೆತ್ತಿದವು.
ತದನಂತರ ಅವನು ತನ್ನ ಟೊಪ್ಪಿಯನ್ನು ನೆಲದ ಮೇಲಕ್ಕೆಸೆದು ಅವೂ ಅಂತೆಯೇ ಎಸೆಯುವುದನ್ನು ನಿರೀಕ್ಷಿಸತ್ತಾ ನೋಡುತ್ತಿದ್ದ. ಆದರೆ, ಅವು ಹಾಗೆ ಮಾಡಲಿಲ್ಲ. ಬದಲಾಗಿ ಒಂದು ಮಂಗ ಮರದಿಂದ ಕೆಳಕ್ಕೆ ಹಾರಿ ಹಬೀಬನ ಸಮೀಪಕ್ಕೆ ಬಂದು ಅವನ ಭುಜಕ್ಕೆ ತತಟ್ಟಿ ಹೇಳಿತು, “ನಿನಗೊಬ್ಬನಿಗೆ ಮಾತ್ರ ಅಜ್ಜ ಇರುವುದು ಎಂಬುದಾಗಿ ತಿಳಿದಿರುವೆಯೇನು?”

*****

೨. ವ್ಯಾಪಾರಿಯ ಅಸಂಬದ್ಧ ಪ್ರಲಾಪ
೧೫೦ ಒಂಟೆಗಳನ್ನೂ ೪೦ ಮಂದಿ ಸೇವಕರನ್ನೂ ಇಟ್ಟುಕೊಂಡಿದ್ದ ವ್ಯಾಪಾರಿಯೊಬ್ಬನನ್ನು ಕವಿ ಸಾದಿ ಕಿಶ್ ದ್ವೀಪದಲ್ಲಿ ಸಂಧಿಸಿದ. ಅಲ್ಲಿದ್ದಾಗ ಒಂದು ರಾತ್ರಿ ವ್ಯಾಪಾರಿ ಅವನನ್ನು ತನ್ನ ಕೊಠಡಿಗೆ ಕರೆದೊಯ್ದು ಇಡೀ ರಾತ್ರಿ ಸ್ವಪ್ರತಿಷ್ಠೆ ಪ್ರದರ್ಶಿಸಲೋಸುಗವೋ ಎಂಬಂತೆ ಮಾತನಾಡಿದ.

ವ್ಯಾಪಾರಿ ಹೇಳಿದ, “ತುರ್ಕಿಸ್ಥಾನದಲ್ಲಿ ನನಗೆ ಅನುರೂಪನಾದ ವ್ಯಾಪಾರಸಂಬಂಧಿಯೊಬ್ಬನಿದ್ದಾನೆ, ಹಿಂದೂಸ್ಥಾನದಲ್ಲಿ ನನ್ನದೊಂದು ದಳ್ಳಾಳಿ ಸಂಸ್ಥೆ ಇದೆ; ಅಂದ ಹಾಗೆ, ಈ ಕಾಗದಪತ್ರ ನೋಡು, ಇದೊಂದು ಬಲು ಬೆಲೆ ಬಾಳುವ ಜಮೀನಿನ ಹಕ್ಕುಪತ್ರ, ಆ ಜಮೀನನ್ನು ಸಂರಕ್ಷಿಸಲು ನಾನು ಖ್ಯಾತನಾಮನೊಬ್ಬನನ್ನು ಕಾವಲುಗಾರನಾಗಿ ನೇಮಿಸಿದ್ದೇನೆ.” ಆತ ತನ್ನ ಮಾತನ್ನು ಮುಂದುವರಿಸಿದ, “ನಾನು ಹಿತಕರ ಹವಾಮಾನ ಉಳ್ಳ ಅಲೆಕ್ಸಾಂಡ್ರಿಯಾಕ್ಕೆ ಹೋಗಬೇಕು ಅಂದುಕೊಂಡಿದ್ದೇನೆ. ಊಹುಂ, ವಾಸ್ತವವಾಗಿ ಪಶ್ಚಿಮ ಸಮುದ್ರ ವಿಪರೀತ ಭೋರ್ಗರೆಯುತ್ತಿದೆ! ಓ ಸಾದಿ! ನಾನು ಇನ್ನೂ ಒಂದು ಪ್ರಯಾಣ ಮಾಡಬೇಕಾಗಿದೆ. ಅದಾದ ನಂತರ ವ್ಯಾಪಾರ ಮಾಡುವ ವೃತ್ತಿಯಿಂದ ನಿವೃತ್ತನಾಗುತ್ತೇನೆ.”

ಸಾದಿ ಕೇಳಿದ, “ ಅದು ಯಾವ ಪ್ರಯಾಣ?”
ವ್ಯಾಪಾರಿ ಉತ್ತರಿಸಿದ, “ನಾನು ಪರ್ಸಿಯಾದ ಗಂಧಕವನ್ನು ಚಿನಾಕ್ಕೆ ಒಯ್ಯುತ್ತೇನೆ, ಎಕೆಂದರೆ ಅಲ್ಲಿ ಅದಕ್ಕೆ ಅತ್ಯುತ್ತಮ ಬೆಲೆ ಇದೆ ಎಂಬುದಾಗಿ ಕೇಳಿದ್ದೇನೆ. ತದನಂತರ ಚೀನಾದ ಪಿಂಗಾಣಿ ಸಾಮಾನುಗಳನ್ನು ಗ್ರೀಸಿ‌ಗೆ, ಗ್ರೀಸಿನ ಕಿಂಕಾಪುಗಳನ್ನು ಹಿಂದೂಸ್ಥಾನಕ್ಕೆ, ಹಿಂದುಸ್ಥಾನದ ಉಕ್ಕನ್ನು ಅಲೆಪ್ಪೋಗೆ, ಅಲೆಪ್ಪೋದ ಕನ್ನಡಿಗಳನ್ನು ಯೆಮೆನ್ನಿಗೆ, ಯೆಮೆನ್ನಿನ ಪಟ್ಟೆಪಟ್ಟೆ ಬಟ್ಟೆಯನ್ನು ಪರ್ಸಿಯಾಕ್ಕೆ ಒಯ್ಯುತ್ತೇನೆ. ಇಷ್ಟಾದ ನಂತರ ನಾನು ಈ ತೆರನಾದ ವಿನಿಮಯ ವ್ಯಾಪಾರ ನಿಲ್ಲಿಸಿ ಮನೆಯಲ್ಲಿರುವ ನನ್ನ ಅಂಗಡಿಯಲ್ಲಿ ಕುಳಿತುಕೊಳ್ಳುತ್ತೇನೆ.”

ಇದೇ ರೀತಿ ಮಾತನಾಡಲೂ ಶಕ್ತಿ ಇಲ್ಲದಾಗುವ ವರೆಗೆ ವ್ಯಾಪಾರಿ ಅಸಂಬದ್ಧವಾಗಿ ಪ್ರಲಾಪಿಸುತ್ತಲೇ ಇದ್ದ. ಕೊನೆಗೊಮ್ಮೆ ಹೇಳಿದ, “ಓ ಸಾದಿ, ನೀನೇನು ನೋಡಿರುವೆ ಹಾಗು ಕೇಳಿರುವೆ ಎಂಬುದರ ಕುರಿತಾಗಿ ಈಗ ಏನಾದರೂ ಹೇಳು.”
ಸಾದಿ ಉತ್ತರಿಸಿದ, “ನಾನು ಮಾತನಾಡಲು ಯಾವುದೇ ಒಂದು ವಿಷಯವನ್ನೂ ನೀನು ಬಿಟ್ಟೇ ಇಲ್ಲವಲ್ಲಾ!”
“ಮರುಭೂಮಿಯಲ್ಲಿ ತನ್ನ ಒಂಟೆಯಿಂದ ಕೆಳ ಬಿದ್ದಾಗ
ವ್ಯಾಪಾರಿಯೊಬ್ಬ ಕೂಗಿ ಹೇಳಿದ್ದೇನು ಎಂಬುದನ್ನು ನೀನು ಕೇಳಿಲ್ಲವೇ?
‘ಸಂತುಷ್ಟಿಯಿಂದಲೋ, ಸ್ಮಶಾನದ ತೇವಭರಿತ ನೆಲದಿಂದಲೋ
ಲೌಕಿಕನ ದುರಾಸೆಯ ಕಣ್ಣಿಗೆ ತೃಪ್ತಿಯಾಗಿದೆ’.”

*****

೩. ನಡುಗುವ ಧ್ವನಿಯ ಕತೆ
ಸುಲ್ತಾನ ಸಂಜರ್‌ ಸಲ್ಜೂಕಿ ಕಟ್ಟಿಸಿದ್ದ ಸಂಜರಿಯಾಹ್‌ನ ಮಸೀದಿಯಲ್ಲಿ ಆಜಾನ್‌ ಪಠಿಸಿ ಜನರನ್ನು ಮಸೀದಿಗೆ ಕರೆಯುತ್ತಿದ್ದ ಒಬ್ಬ ಮುಅಜ್ಜಿನ್‌. ಅವನ ನಡುಗುವ ಧ್ವನಿಯನ್ನು ಕೇಳಿದವರಿಗೆ ಅದನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಏಕೆಂದರೆ ನಾವು ಸಾಮಾನ್ಯವಾಗಿ ಸಂತೋಷಪಡುವ ಶಬ್ದಘೋಷದಲ್ಲಿ ಅದು ಇರುತ್ತಿರಲಿಲ್ಲ.

ಆ ಮಸೀದಿಯ ಮಹಾಪೋಷಕನೂ ಸ್ನೇಹಪ್ರವೃತ್ತಿಯುಳ್ಳವನೂ ಆಗಿದ್ದ ರಾಜಕುಮಾರನೊಬ್ಬ ಮಸೀದಿಗೆ ಬರುತ್ತಿದ್ದವರ ಪರವಾಗಿ ಈ ಸಂಗತಿಗೆ ಸಂಬಂಧಿಸಿದಂತೆ ಯುಕ್ತಕ್ರಮ ತೆಗೆದುಕೊಳ್ಳಲು ಒಪ್ಪಿಕೊಂಡನು.
ಮುಅಜ್ಜಿನ್‌ನ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಬಲು ಮಿದುವಾಗಿ ರಾಜಕುಮಾರ ಹೇಳಿದ, “ಮಾನ್ಯರೇ, ವಂಶಪಾರಂಪರ್ಯವಾಗಿ ಮುಅಜ್ಜಿನ್‌ ಕಾರ್ಯ ನಿರ್ವಹಿಸುತ್ತಿರುವವರು ಅನೇಕ ಮಂದಿ ಈ ಮಸೀದಿಯಲ್ಲಿ ಇದ್ದಾರೆ. ಅವರಿಗೆ ತಲಾ ೫ ದಿನಾರ್ ಸಂಭಾವನೆ ಸಿಕ್ಕುತ್ತಿದೆ. ಇನ್ನೊಂದು ಸ್ಥಳಕ್ಕೆ ನೀವು ಹೋಗುವಿರಾದರೆ ನಾನು ನಿಮಗೆ ೧೦ ದಿನಾರ್‌ ಕೊಡುತ್ತೇನೆ.” ಮುಅಜ್ಜಿನ್‌ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡು ಆ ನಗರದಿಂದ ಹೋದನು.

ಒಂದು ವಾರದ ನಂತರ, ಆ ಮುಅಜ್ಜಿನ್‌ ಹಿಂದಿರುಗಿ ಬಂದು ಹೇಳಿದ, “ಓ ರಾಜಕುಮಾರನೇ, ಈ ಸ್ಥಳದಿಂದ ಹೋಗಲು ಕೇವಲ ೧೦ ದಿನಾರ್‌ಗಳನ್ನು ಕೊಟ್ಟು ನೀವು
ನನಗೆ ಮೋಸ ಮಾಡಿರುವಿರಿ. ನನ್ನನ್ನು ನೀವು ಯಾವ ಸ್ಥಳಕ್ಕೆ ಕಳುಹಿಸಿದಿರೋ ಆ ಸ್ಥಳದವರು ನಾನು ಬೇರೆಡೆಗೆ ಹೋಗುವುದಾದರೆ ೨೦ ದಿನಾರ್‌ ಕೊಡಲು ಸಿದ್ಧರಾಗಿದ್ದಾರೆ. ಆದರೂ ನಾನು ಅದಕ್ಕೆ ಸಮ್ಮತಿಸುವುದಿಲ್ಲ.”

ರಾಜಕುಮಾರ ನಕ್ಕು ಹೇಳಿದ, “ಹೌದು, ಅವರ ಹಾಲಿ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಬೇಡಿ. ಏಕೆಂದರೆ ಸಧ್ಯಲ್ಲಿಯೇ ಅವರು ನಿಮಗೆ ೫೦ ದಿನಾರ್‌ಗಳನ್ನು ಕೊಡಲು ಒಪ್ಪಿಕೊಳ್ಳುತ್ತಾರೆ!”
‘ಯಾವ ಪಿಕಾಸಿಯೂ ತೆಗೆಯಲಾಗದ ಹಾಗೆ ಕಲ್ಲಿಗಂಟಿದೆ ಆವೆ ಮಣ್ಣು,
ಅಂತೆಯೇ ಇದೆ ಆಂತರ್ಯದಲ್ಲಿ ನರಳುವಂತೆ ಮಾಡುವ ನಿನ್ನ ಕರ್ಕಶ ಧ್ವನಿ’

*****

೪. ಕುರುಬನ ಕತೆ
ವಾಸಿಮ್‌ ಎಂಬಾತನಿಗೆ ರಸ್ತೆಯಲ್ಲಿದ್ದ ಕುರುಬನೊಬ್ಬ ಪ್ರಾರ್ಥಿಸುತ್ತಿದ್ದ್ದು ಕೇಳಿಸಿತು, “ಓ ದೇವರೇ, ನೀನು ಎಲ್ಲಿರುವೆ? ನಿನ್ನ ಪಾದರಕ್ಷೆಗಳನ್ನು ದುರಸ್ತಿ ಮಾಡಲೂ ನಿನ್ನ ತಲೆಗೂದಲನ್ನು ಬಾಚಲೂ ನಾನು ಸಹಾಯ ಮಾಡಲು ಇಚ್ಛಿಸುತ್ತೇನೆ. ನಿನ್ನ ಬಟ್ಟೆಗಳನ್ನು ಒಗೆಯಲೂ ನಿನಗಾಗಿ ಅಡುಗೆ ಮಾಡಲೂ ನಾನು ಇಚ್ಛಿಸುತ್ತೇನೆ. ನಿನ್ನನ್ನು ಜ್ಞಾಪಿಸಿ——-”
ಗೊಂದಲಕ್ಕೀಡಾದ ವಾಸಿಮ್‌ ಕುರುಬನನ್ನು ಕೇಳಿದ, “ನೀನು ಯಾರೊಂದಿಗೆ ಮಾತನಾಡುತ್ತಿರುವೆ?”
ಕುರುಬ ಉತ್ತರಿಸಿದ, “ನಮ್ಮನ್ನೂ ಭೂಮಿಯನ್ನೂ ಆಕಾಶವನ್ನೂ ಮಾಡಿದವನೊಂದಿಗೆ.”
ತುಸು ಮನಃಕ್ಷೋಭೆಗೀಡಾದ ವಾಸಿಮ್‌ ಹೇಳಿದ, “ದೇವರೊಂದಗೆ ಪಾದರಕ್ಷೆಗಳ, ಕಾಲುಚೀಲಗಳ ಕುರಿತಾಗಿ ಮಾತನಾಡಬೇಡ! ಯಾವುದು ಬೆಳೆಯುತ್ತದೋ ಅದಕ್ಕೆ ಆಹಾರ ಬೇಕು, ಯಾರಿಗೆ ಕಾಲುಗಳು ಇವೆಯೋ ಅವರಿಗೆ ಪಾದರಕ್ಷೆಗಳು ಬೇಕು. ದೇವರಿಗಲ್ಲ! ಮಾತನಾಡುವಾಗ ಸರಿಯಾದ ಪದಗಳನ್ನು ಉಪಯೋಗಿಸು. ನೀನು ಹೇಳುತ್ತಿರುವುದು ನಮಗೆ, ಮನುಷ್ಯರಿಗೆ, ಸರಿಯಾಗಿದೆ. ದೇವರಿಗಲ್ಲ.”
ದುಃಖಿತನಾದ ಕುರುಬ ಕ್ಷಮೆ ಕೋರಿ ಮರುಭೂಮಿಯಲ್ಲಿ ಎಲ್ಲಿಗೋ ಹೋದ.

ಆಗ ಇದ್ದಕ್ಕಿದ್ದಂತೆ ವಾಸಿಮ್‌ನಲ್ಲಿ ಅಚ್ಚರಿಯ ಅರಿವೊಂದು ಮೂಡಿತು. ದೇವರ ಧ್ವನಿ ಅವನಿಗೆ ತಿಳಿಸಿತು, “ನನ್ನವನೊಬ್ಬನಿಂದ ನೀನು ನನ್ನನ್ನು ಬೇರ್ಪಡಿಸಿರುವೆ. ನೀನು ಇಲ್ಲಿರುವುದು ಒಗ್ಗೂಡಿಸಲೋ ಬೇರ್ಪಡಿಸಲೋ? ನಾನು ಪ್ರತಿಯೊಬ್ಬರಿಗೂ ಅವರದೇ ಆದ ಅದ್ವಿತೀಯ ನೋಡುವ, ತಿಳಿಯುವ, ಹೇಳುವ ವಿಧಾನಗಳನ್ನು ಕೊಟ್ಟಿದ್ದೇನೆ. ತತ್ಪರಿಣಾಮವಾಗಿ ನಿನಗೆ ಯಾವುದು ತಪ್ಪು ಅನ್ನಿಸುತ್ತದೆಯೋ ಅದು ಇನ್ನಬ್ಬನಿಗೆ ಸರಿ ಅನ್ನಿಸುತ್ತದೆ. ನಿನಗೆ ವಿಷವಾದದ್ದು ಇನ್ನೊಬನಿಗೆ ಜೇನಾಗುತ್ತದೆ. ಆರಾಧನೆಯಲ್ಲಿ ಶುದ್ಧ-ಅಶುದ್ಧ, ಶ್ರದ್ಧೆ-ಅಶ್ರದ್ಧೆ ಇವೆಲ್ಲವೂ ನನಗೆ ಅರ್ಥವಿಹೀನ. ಅದೆಲ್ಲದರಿಂದಲೂ ಭಿನ್ನವಾದವ ನಾನು. 

ಆರಾಧನೆಯ ವಿಧಾನಗಳನ್ನು ಉತ್ತಮ, ಮಧ್ಯಮ, ಅಧಮ ಎಂದೆಲ್ಲ ಶ್ರೇಣೀಕರಿಸಕೂಡದು. ಆರಾಧನೆಯ ವಿಧಾನಗಳಲ್ಲಿ ಕೆಲವನ್ನು ವೈಭವೀಕರಿಸಿರುವುದು ಆರಾಧಕರೇ ವಿನಾ ನಾನಲ್ಲ, ಅವರು ಹೇಳುವ ಪದಗಳನ್ನು ನಾನು ಕೇಳಿಸಿಕೊಳ್ಳುವುದೇ ಇಲ್ಲ. ಅವರ ಆಂತರ್ಯದಲ್ಲಿ ಇರುವ ನಮ್ರತೆಯನ್ನು ಗಮನಿಸುತ್ತೇನೆ. ನಿಷ್ಕಪಟತೆ ಮುಖ್ಯವೇ ವಿನಾ ಭಾಷೆಯಲ್ಲ. ಪದಾವಳಿಯನ್ನು ಮರೆತುಬಿಡು. ನನಗೆ ಬೇಕಾದದ್ದು ಉತ್ಕಟತೆ. ಉತ್ಕಟತೆಯೊಂದಿಗೆ ಸಖ್ಯ ಬೆಳೆಸು. ನಿನ್ನ ಆಲೋಚನಾ ವಿಧಾನಗಳನ್ನೂ ಮಾತುಗಳಲ್ಲಿ ವ್ಯಕ್ತಪಡಿಸುವ ಶೈಲಿಗಳನ್ನೂ ಸುಟ್ಟು ನಾಶಮಾಡು.

ಅಯ್ಯಾ ವಾಸಿಮ್‌, ನಡೆನುಡಿಯ ವಿಧಾನಗಳಿಗೆ ಗಮನ ನೀಡುವವರದು ಒಂದು ವರ್ಗ, ನನ್ನ ಮೇಲಿನ ಭಕ್ತಿಯ ಉತ್ಕಟತೆಯಿಂದ ಸುಡುತ್ತಿರುವವರದು ಇನ್ನೊಂದು ವರ್ಗ. ಎರಡನೆಯ ವರ್ಗಕ್ಕೆ ಸೇರಿದವರನ್ನು ಗಟ್ಟಿಯಾಗಿ ಗದರಿಸಬೇಡ. ಅವರು ಮಾತನಾಡುವ ‘ತಪ್ಪು’ ವಿಧಾನ ಇತರರ ನೂರಾರು ‘ಸರಿ’ ವಿಧಾನಗಳಿಗಿಂತ ಉತ್ತಮವಾಗಿರುತ್ತದೆ. ಭಕ್ತಿ ಪಂಥಕ್ಕೆ ಯಾವದೇ ನಿಯಮಾವಳಿಯ ಅಥವ ಸಿದ್ಧಾಂತದ ಕಟ್ಟುಪಾಡುಗಳು ಅನ್ವಯಿಸುವುದಿಲ್ಲ, ಅವರಿಗೆ ಮುಖ್ಯವಾದದ್ದು ದೇವರು ಮಾತ್ರ.”

ಕುರುಬನ ಹೆಜ್ಜೆ ಗುರುತುಗಳ ಜಾಡು ಹಿಡಿದು ವಾಸಿಮ್‌ ಅವನನ್ನು ಹುಡುಕುತ್ತಾ ಓಡಿದ. ಕೊನೆಗೊಮ್ಮೆ ಅವನನ್ನು ಸಮೀಪಿಸಿ ಹೇಳಿದ, “ನನ್ನದು ತಪ್ಪಾಯಿತು. ಆರಾಧನೆಗೆ ನಿಯಾಮವಳಿ ಇಲ್ಲ ಎಂಬ ಅರಿವನ್ನು ದೇವರು ನನ್ನಲ್ಲಿ ಮೂಡಿಸಿದ್ದಾನೆ. ಏನನ್ನು ಹೇಗೆ ಹೇಳಬೇಕು ಅನ್ನಿಸುತ್ತದೆಯೋ ಅದನ್ನು ಅಂತೆಯೇ ನೀನು ಹೇಳಬಹುದು. ನಿನ್ನದು ನಿಜವಾದ ಭಕ್ತಿ. ನಿನ್ನ ಮುಖೇನ ಇಡೀ ಪ್ರಪಂಚವೇ ಸಂಪ್ರದಾಯಗಳ ಬಂಧನದಿಂದ ಮುಕ್ತವಾಯಿತು.”

ಕುರುಬ ಉತ್ತರಿಸಿದ, “ನಾನು ಅದನ್ನೂ ಮೀರಿ ಬೆಳೆದಿದ್ದೇನೆ. ನನ್ನಲ್ಲಿ ಮಾನವನ ಮತ್ತು ದೇವರ ಸಹಜಗುಣಗಳು ಮೇಳೈಸಿವೆ. ನಿನ್ನ ಗದರುವಿಕೆಗೆ ಧನ್ಯವಾದಗಳು. ಅದರಿಂದ ಏನು ಲಾಭವಾಯಿತು ಅನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಾನೀಗ ಇನ್ನೊಂದು ಆಯಾಮವನ್ನೇ ಕಾಣುತ್ತಿದ್ದೇನೆ. ಅದೇನೆಂಬುದನ್ನು ವಿವರಿಸಲು ಸಾಧ್ಯವಿಲ್ಲ.”
ನೀವು ಕನ್ನಡಿಯನ್ನು ನೋಡಿದಾಗ ಮೊದಲು ಕಾಣುವುದು ನಿಮ್ಮ ಪ್ರತಿಬಿಂಬವೇ ವಿನಾ ಕನ್ನಡಿಯ ಸ್ಥಿತಿಯಲ್ಲ. ಕೊಳಲನ್ನೂದುವವನು ವಾಯುವನ್ನು ಕೊಳಲಿನೊಳಕ್ಕೆ ಊದುತ್ತಾನೆ. ಸಂಗೀತ ಸೃಷ್ಟಿಸಿದ್ದು ಯಾರು? ಕೊಳಲು ಅಲ್ಲ, ಕೊಳಲು ವಾದಕ!

ನೀವು ಧನ್ಯವಾದಗಳನ್ನು ಅರ್ಪಿಸಿದಾಗಲೆಲ್ಲ ಅದು ಕುರುಬನ ಸರಳತೆಯಂತೆಯೇ ಇರುತ್ತದೆ. ಎಲ್ಲವೂ ನಿಜವಾಗಿ ಹೇಗೆ ಇವೆ ಎಂಬುದನ್ನು ನೀವು ಅಂತಿಮವಾಗಿ ಅವನ್ನು ಆವರಿಸಿರುವ ಮುಸುಕಿನ ಮೂಲಕ ನೋಡಿದಾಗ ನಿಮಗೆ ನೀವೇ ಪುನಃ ಪುನಃ ಇಂತು ಹೇಳಿಕೊಳ್ಳುವುದನ್ನು ಗಮನಿಸುವುದು ಖಚಿತ: “ಇದು ಯಾವುದೂ ನಾವು ಅಂದುಕೊಂಡಂತೆ ಇಲ್ಲ!”

*****

೫. ಒಬ್ಬ ಪೌರಾತ್ಯ ರಾಣಿಯ ಕತೆ
ಒಂದಾನೊಂದು ಕಾಲದಲ್ಲಿ ಪೌರಾತ್ಯ ದೇಶವೊಂದನ್ನು ಲೈಲಾರಾಣಿ ಎಂಬವಳು ಆಳುತ್ತಿದ್ದಳು. ಅವಳು ವಿವೇಕಿಯೂ ಜಾಣೆಯೂ ಆಗಿದ್ದದ್ದರಿಂದ ಅವಳ ರಾಜ್ಯವು ಸಂಪದ್ಭರಿತವಾಗಿದ್ದು ಉಚ್ಛ್ರಾಯಸ್ಥಿತಿಯಲ್ಲಿ ಇತ್ತು.

ಒಂದು ದಿನ ಅವಳ ಮಂತ್ರಿಯೊಬ್ಬ ದುಃಖಸೂಚಕ ಮುಖದೊಂದಿಗೆ ಬಂದು ಹೇಳಿದ, “ಓ ಲೈಲಾರಾಣಿ ಮಹಾರಾಣಿಯೇ, ನಮ್ಮ ಭೂಭಾಗದಲ್ಲಿ ಇರುವ ಸ್ತ್ರೀಯರ ಪೈಕಿ ನೀನು ಅತ್ಯಂತ ವಿವೇಕಿಯೂ ಶಕ್ತಿಶಾಲಿಯೂ ಆಗಿರುವ ಮಹಾನ್‌ ಸ್ತ್ರೀ ಆಗಿರುವೆ. ಹೀಗಿದ್ದರೂ ರಾಜ್ಯದಲ್ಲಿ ನಾನು ಅಡ್ಡಾಡುತ್ತಿರುವಾಗ ನಿಮ್ಮ ಕುರಿತು ಕೆಲವು ನೆಮ್ಮದಿಗೆಡಿಸುವ ಮಾತುಗಳನ್ನು ಕೇಳಿದೆ. ನಾನು ಹೋದೆಡಯಲ್ಲೆಲ್ಲ ಬಹುಮಂದಿ ತಮ್ಮನ್ನು ಹೊಗಳುತ್ತಿದ್ದರೂ ಕೆಲವು ಮಂದಿ ತಮ್ಮ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದರು. ತಮ್ಮನ್ನು ಲೇವಡಿ ಮಾಡಿ ಮಾತನಾಡುತ್ತಿದ್ದರು. ತಾವು ಇತ್ತೀಚೆಗೆ ತೆಗೆದುಕೊಂಡ ಕೆಲವು ಉತ್ತಮ ತೀರ್ಮಾನಗಳ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ತಮ್ಮ ಹಾಗು ತಮ್ಮ ಆಳ್ವಿಕೆಯ ವಿರುದ್ಧವಾಗಿ ಕೆಲವರು ಇಂತೇಕೆ ಮಾತನಾಡುತ್ತಾರೆ?”

ಮಹಾರಾಣಿ ಲೈಲಾರಾಣಿ ನಸುನಕ್ಕು ಹೇಳಿದಳು, “ನನ್ನ ವಿಧೇಯ ಮಂತ್ರಿಯೇ, ನನ್ನ ರಾಜ್ಯದ ಪ್ರತೀ ಪ್ರಜೆಗೂ ತಿಳಿದಿರುವಂತೆ ಪ್ರಜೆಗಳಿಗಾಗಿ ನಾನೇನೇನು ಮಾಡಿರುವೆ ಎಂಬುದು ನಿನಗೂ ತಿಳಿದಿದೆ. ನನ್ನ ನಿಯಂತ್ರಣದಲ್ಲಿ ಅನೇಕ ಪ್ರದೇಶಗಳಿವೆ. ಅವೆಲ್ಲವೂ ಪ್ರಗತಿಯನ್ನು ಸಾಧಿಸಿವೆ, ಉಚ್ಛ್ರಾಯ ಸ್ಥಿತಿಯಲ್ಲಿ ಇವೆ. ನಾನು ನ್ಯಾಯಯುತವಾಗಿ ಆಳ್ವಿಕೆ ನಡೆಸುತ್ತಿರುವುದರಿಂದ ಈ ಪ್ರದೇಶಗಳ ಜನರು ನನ್ನನ್ನು ಪ್ರೀತಿಸುತ್ತಾರೆ. ನೀನು ಹೇಳುವುದು ಸರಿಯಾಗಿಯೇ ಇದೆ. ನಾನು ಅನೇಕ ಕಾರ್ಯಗಳನ್ನು ಮಾಡಬಲ್ಲೆ. ತಕ್ಷಣವೇ ಈ ನಗರದ ಕೋಟೆಯ ದೈತ್ಯಗಾತ್ರದ ಬಾಗಿಲುಗಳನ್ನು ಮುಚ್ಚಿಸಬಲ್ಲೆ. ಹೀಗಿದ್ದರೂ ನಾನು ಮಾಡಲಾಗದ ಕೆಲಸ ಒಂದಿದೆ. ಪ್ರಜೆಗಳು ತಮ್ಮ ಅಭಿಪ್ರಾಯಗಳನ್ನು, ಅವು ಸುಳ್ಳೇ ಆಗಿದ್ದರೂ, ವ್ಯಕ್ತಪಡಿಸುವುದನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ. ನನ್ನ ಕುರಿತು ಕೆಲವರು ಕೆಟ್ಟ ಅಭಿಪ್ರಾಯಗಳನ್ನೂ ಸುಳ್ಳುಗಳನ್ನೂ ಹೇಳುತ್ತಾರೆಯೇ ಎಂಬುದು ಮುಖ್ಯವಲ್ಲ. ಅವರೇನಾದರೂ ಹೇಳಲಿ, ನಾನು ಒಳ್ಳೆಯದನ್ನೇ ಮಾಡುತ್ತಲೇ ಇರಬೇಕಾದದ್ದು ಮುಖ್ಯ.”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x