ಲೇಖನ

ಗಾಲ್ಫ್ ಕ್ಲಬ್ ಗುಂಡುಗೋಷ್ಠಿಯೂ… ಅಲ್ಲಿನ ರೂಲ್ಸೂ…: ಎಚ್.ಕೆ.ಶರತ್


ಗೆಳೆಯನನ್ನು ಭೇಟಿ ಮಾಡಲು ಇತ್ತೀಚೆಗೆ ಮೈಸೂರಿಗೆ ಹೋಗಿದ್ದೆ. ಹೆಂಡತಿ ತವರು ಮನೆಗೆ ಹೋಗಿದ್ದ ಕಾರಣ ‘ಗುಂಡು ಪಾರ್ಟಿ’ಯಲ್ಲಿ ಪಾಲ್ಗೊಳ್ಳುವ ಅವಕಾಶ ಅವನಿಗೆ ಒಲಿದಿತ್ತು. ಅಪರೂಪಕ್ಕೆ ಸಿಗುವ ಇಂಥ ಚಾನ್ಸ್ ಮಿಸ್ ಮಾಡಿಕೊಳ್ಳಬಾರದೆಂದು ಮೈಸೂರಿನಲ್ಲಿದ್ದ ತನ್ನ ಗೆಳೆಯರಿಗೆಲ್ಲ ಕರೆ ಮಾಡಿ ಪಾರ್ಟಿ ಮಾಡುವ ಪ್ಲ್ಯಾನು ಇರುವುದಾಗಿ ತಿಳಿಸಿದ. ಗಾಲ್ಫ್ ಕ್ಲಬ್ ಮೆಂಬರ್ ಆಗಿರುವವನೊಬ್ಬ, ಕ್ಲಬ್‍ಗೆ ಹೋಗೋಣ ಹಾಗಾದ್ರೆ ಅಂತಂದ. ನಾವು ರೆಡಿಯಾದ್ವಿ. ನಮ್ಮನ್ನು ಕರೆದೊಯ್ಯಲು ಬಂದವನು, ನಮ್ಮ ಅವತಾರ ಕಂಡು ಅವಾಕ್ಕಾದ. ಈ ಡ್ರೆಸ್‍ನಲ್ಲಿ ಬಂದ್ರೆ ನಿಮ್ಮನ್ನು ಕ್ಲಬ್ ಒಳಗೆ ಯಾವುದೇ ಕಾರಣಕ್ಕೂ ಸೇರಿಸಲ್ಲ. ಕಾಲರ್ ಇಲ್ಲದಿರೋ ಟಿ-ಶರ್ಟ್, ಸ್ಯಾಂಡಲ್ಸ್ ಹಾಕೊಂಡು ಬಂದ್ರೆ ನನ್ನ ಇಮೇಜ್‍ಗೂ ಡ್ಯಾಮೇಜ್ ಆಗುತ್ತೆ, ನಿಮ್ಗೂ ಕ್ಲಬ್ ಒಳಗೆ ಎಂಟ್ರಿ ಸಿಗಲ್ಲ ಅಂತ ಎಚ್ಚರಿಸಿದ.

ಕೂಡಲೇ ತೊಟ್ಟಿದ್ದ ದಿರಿಸು ಕಳಚಿಟ್ಟು ಅವನು ಸೂಚಿಸಿದ್ದನ್ನು ಧರಿಸಿ ಕ್ಲಬ್‍ಗೆ ಹೊರಟೆವು. ಮೊದಲ ಬಾರಿ ಗಾಲ್ಫ್ ಕ್ಲಬ್‍ಗೆ ಹೋಗುತ್ತಿದ್ದರಿಂದ ನನ್ನಲ್ಲಿ ಸಾಕಷ್ಟು ಕುತೂಹಲವಿತ್ತು. ಕುಡಿದು ನಮ್ಮೊಳಗೆ ಬಚ್ಚಿಟ್ಟುಕೊಂಡಿರುವ ತಿಕ್ಕಲುತನಗಳನ್ನೆಲ್ಲ ಪ್ರದರ್ಶಿಸಲು ಹೋಗಲು ಸಹ ಇಷ್ಟೆಲ್ಲ ರೂಲ್ಸುಗಳಿವೆಯೇ ಎಂದು ಅಚ್ಚರಿಯಾಯ್ತು. ಗಾಲ್ಫ್ ಕ್ಲಬ್‍ನ ಸದಸ್ಯನಾಗಿದ್ದ ಗೆಳೆಯನ ಮರ್ಯಾದೆಗೆ ಚ್ಯುತಿ ತರಬಾರದೆಂಬ ಸದುದ್ದೇಶದಿಂದ ಕ್ಲಬ್‍ನವರ ದೃಷ್ಟಿಯಲ್ಲಿ ಸಭ್ಯವೆನಿಸಿದ ದಿರಿಸನ್ನೇ ತೊಟ್ಟು ಅಲ್ಲಿ ಆಸೀನರಾಗಿದ್ದೆವು. ಸುತ್ತಲೂ ಗಮನಿಸಿದೆ. ಸಭ್ಯರು ಅಥವಾ ಹಾಗೆ ನಟಿಸುವವರೇ ಅಲ್ಲಿದ್ದರು. ಕುಟುಂಬ ಸಮೇತರಾಗಿ ಕುಡಿಯಲು ಬಂದವರೂ ಇದ್ದರು.

ಶುರುವಿನಲ್ಲಿ ಡೀಸೆಂಟಾಗಿ ಕುಡಿಯಲಾರಂಭಿಸಿದ ನಾವು, ಎರಡು ಪೆಗ್ಗು ‘ಬ್ಲ್ಯಾಕ್ ಅಂಡ್ ವೈಟ್’ ಒಳ ಸೇರಿದ ನಂತರ ನಮ್ಮ ಕಪ್ಪು-ಬಿಳುಪು ಅವತಾರಗಳನ್ನು ಸಹಜವಾಗಿಯೇ ಪ್ರದರ್ಶಿಸಲಾರಂಭಿಸಿದೆವು. ಪೆಗ್ಗುಗಳ ಮೇಲೆ ಪೆಗ್ಗು ಒಳಗಿಳಿದಂತೆಲ್ಲ ನಮ್ಮ ಮಾತುಕತೆ, ವಾಗ್ವಾದಗಳ ತೀವ್ರತೆಯೂ ಏರುತ್ತಿತ್ತು. ಈ ಮೊದಲು ಕುಡಿದಾಗ ಹೇಗೆಲ್ಲಾ ವರ್ತಿಸಿದ್ದೆವೋ ಇಲ್ಲೂ ಹಾಗೆ ನಡೆದುಕೊಂಡೆವು. ಹಳೆ ಚಾಳಿಯಂತೆ ಸರ್ವಿಸ್ ಕೊನೆಯಾಗುವವರೆಗೂ ಆರ್ಡರ್ ಮಾಡಿ, ನಿಮ್ಮನ್ನು ಇಲ್ಲಿಂದ ಎದ್ದೇಳಿಸಿ ಕಳುಹಿಸದೆ ಬೇರೆ ವಿಧಿ ಇಲ್ಲವೆಂದು ಸಿಬ್ಬಂದಿ ಹೇಳುವವರೆಗೂ ನಮ್ಮ ಪಾನಗೋಷ್ಠಿಗೆ ಫುಲ್‍ಸ್ಟಾಪ್ ಬೀಳಲಿಲ್ಲ.
-ಎಚ್.ಕೆ.ಶರತ್