“ಮನವ ಗೆದ್ದವನೇ ಮಹಾ ಶೂರ!”: ಹೊರಾ.ಪರಮೇಶ್ ಹೊಡೇನೂರು

           

ಗಾಳಿಗಿಂತಲೂ ವೇಗವಾಗಿ ಚಲಿಸುವುದು ನಮ್ಮ "ಮನಸ್ಸು" ಎಂಬುದು ಸರ್ವವಿಧಿತ. ಏಕೆಂದರೆ, ನಮ್ಮ ಮನಸ್ಸಿನಲ್ಲಿ ಒಂದು ವಸ್ತು, ನೋಡಿದ ಸ್ಥಳ, ಕಾಡುವ ಹುಡುಗಿ, ಬೇಡುವ ದೇವರು ಮೊದಲಾದವುಗಳನ್ನು ಕಲ್ಪಿಸಿಕೊಂಡು ಮನಸ್ಸನ್ನು ಹರಿಯಬಿಟ್ಟರೆ ಅಥವಾ ಅಂದುಕೊಂಡರೆ ಸಾಕು, ನಮ್ಮ ಸ್ಮೃತಿಯೊಳಗೆ ಅವುಗಳ ಚಿತ್ರಣ ಹಾದು ಹೋಗಿ ಕಣ್ಣೆದುರೇ ಬಂದಂತೆ ಭಾಸವಾಗುವುದು ಸೃಷ್ಟಿಯ ಅದ್ಭುತ ಕೊಡುಗೆಯಾಗಿದೆ. ಇದೇ ಮನಸ್ಥಿತಿಯ ಈ ಸಾಮರ್ಥ್ಯವನ್ನು ಬಳಸಿಕೊಂಡೇ ಇಂದು ನಾವೆಲ್ಲರೂ ಅಪಾರವಾದ ಜ್ಞಾನವನ್ನು, ಅದರೊಳಗೆ ಜೀವನ ಸೊಬಗನ್ನೂ ಅನುಭವಿಸುತ್ತಿದ್ದೇವೆ. ಒಳಿತಿಗಾಗಿ ಉಪಯೋಗಿಸಿಕೊಂಡರೆ 'ಮನ'ವೆಂಬುದು ಮನುಕುಲಕ್ಕೇ ವರವಾಗಿರುವಂತೆಯೇ, ದುರ್ಬಳಕೆ ಮಾಡಿಕೊಂಡಾಗ ಆಗಬಾರದ ಅನಪೇಕ್ಷಣೀಯ ಅವಾಂತರಗಳಿಗೆ ದಾರಿ ಮಾಡಿಕೊಡುವುದಲ್ಲದೇ, ವ್ಯಕ್ತಿತ್ವಕ್ಕೆ ಮಸಿಯನ್ನು ಬಳಿಯುತ್ತದೆ.         

ಬಾಲ್ಯದಿಂದ ಮುಪ್ಪಿನವರೆಗೂ ಕ್ರಮಿಸುವ ವಿವಿಧ ಹಂತಗಳಲ್ಲಿ ನಾವು ಪಡೆಯುವ ಅನುಭವಗಳಿಗೆ ಅನುಗುಣವಾಗಿ, ಹಾರ್ಮೋನುಗಳಿಂದ ಉಂಟಾಗುವ ಪ್ರಲೋಭನೆಗಳು ನೀಡುವ ನಿರ್ದೇಶನದಂತೆ ವರ್ತಿಸುವ ನಮ್ಮ ಮನಸ್ಸನ್ನು ಬಲ್ಲವರು "ಮರದಿಂದ ಮರಕ್ಕೆ ಜಿಗಿಯುವ ಮರ್ಕಟ"ಕ್ಕೆ ಹೋಲಿಸುತ್ತಾರೆ. ನಮ ವ್ಯಕ್ತಿತ್ವಕ್ಕೆ ಮೆರಗು ತರಬಲ್ಲ ಮನಸ್ಸು, ಮಸಿಯನ್ನೂ ಬಳಿಯಬಲ್ಲದಾದ್ದರಿಂದ ನಮ್ಮ ನಿಯಂತ್ರಣದ ಚೌಕಟ್ಟಿನಲ್ಲಿಯೇ ಸಂಭಾಳಿಸಬೇಕಾದುದು ಅತ್ಯಗತ್ಯವಾಗಿದೆ. 

"ಕಣ್ಣು ಹೋದಕಡೆ ಮನಸ್ಸು ಹೋಗಬಾರದು ; ಮನಸ್ಸು ಹೋದಕಡೆ ಮನುಷ್ಯ ಹೋಗಬಾರದು" ಎಂಬ ಅನುಭವವಾಣಿಯು ಮಾನವ ಸಹಜವಾದ ವರ್ತನೆಗಳ ಇತಿ ಮಿತಿಯನ್ನು ತಿಳಿಸುತ್ತದೆ. ಅಂತಹ ಮನಸ್ಸಿನ ನಿಯಂತ್ರಣದಿಂದ ಮಾತ್ರ ನಮ್ಮ ಬದುಕು ಸಹ್ಯವಾಗುತ್ತದೆ ಮತ್ತು ಸಾಧನೆಯ ಹಾದಿಗೆ ಸಹಕಾರಿಯಾಗುತ್ತದೆ.

 ಹುಚ್ಚು ಕೋಡಿ ಮನಸ್ಸು :             

ಸಾಮಾನ್ಯವಾಗಿ 'ಟೀನೇಜ್' ಎಂದು ಕರೆಯಲ್ಪಡುವ ಪ್ರೌಢ ವಯಸ್ಸಿನಲ್ಲಿ ಸಹಜವಾಗಿ ಯುವಕ/ತಿಯರನ್ನು ಹರೆಯದ ಭಾವನಗಳಿಗೆ ತೆರೆದ ಬಾಗಿಲಿನಂತೆ ಆಹ್ವಾನಿಸಿ, ಹುರಿದುಂಬಿಸುವ 'ಮನಸ್ಸು' ಕಾಮಾಸಕ್ತ ವಿಷಯಗಳ ಕಡೆಗೆ ತುಡಿಯುವಂತೆ ಮಾಡುವುದು ಈ ವಯಸ್ಸಿನ "ಅಗ್ನಿ ಪರೀಕ್ಷೆ"ಯೇ ಆಗಿದೆ.            

ವಿವೇಕವೆಂಬ ಲಗಾಮಿನಿಂದ ಹುಚ್ಚು ಕುದುರೆಯಂತೆ ಓಡಾಡುವ ಮನಸ್ಸನ್ನು ನಿಯಂತ್ರಿಸಿದರೆ ಮಾತ್ರ ಮುಂದಿನ ಭವಿಷ್ಯಕ್ಕೆ ಬುನಾದಿಯಾಗುವ ಶಿಕ್ಷಣವನ್ನು ಯಶಸ್ಸಿಯಾಗಿ ಪೂರೈಸಿ ಜೀವನಕ್ಕೊಂದು ನೆಲೆ ಮತ್ತು ಬೆಲೆಯನ್ನು ಕಂಡುಕೊಳ್ಳಬಹುದಾಗಿದೆ. ಆಯತಪ್ಪಿ, ಹರೆಯದ ಕುದುರೆಯ ಬೆನ್ನೇರಿ ಮನಸ್ಸಿಗೆ ಮುದ ನೀಡಿ ಮದವೇರಿಸುವ ಕಾಮಾದಿ ಚಟುವಟಿಕೆಗಳ ಕಡೆಗೇ ಹೆಚ್ಚು ಗಮನ ನೀಡಿದ್ದೇ ಆದರೆ, ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ್ದು ಅತ್ಯಂತ ಅವಶ್ಯವಾಗಿದೆ.

ಈಗಂತೂ ಎಲ್ಲರ ಕೈಯಲ್ಲೂ ಬಗೆಬಗೆಯ ಆಯ್ಕೆಗಳ ಲಭ್ಯತೆಯಿರುವ ಮೊಬೈಲ್ ಸೆಟ್ ಲ್ಯಾಪ್ ಟಾಪ್, ಐಪೋನ್ ಕಂಪ್ಯೂಟರ್ ಗಳು ಇರುವುದರಿಂದ ಅದರಲ್ಲಿ ಫೇಸ್ಬುಕ್, ಟ್ವಿಟರ್, ಹೈಕ್, ವಾಟ್ಸಪ್ ಗಳಲ್ಲದೇ ಪ್ರಪಂಚ ದರ್ಶನ ಮಾಡಿಸುವ 'ಗೂಗಲ್'ಗಳು ಬಳಕೆದಾರರ ಅಭಿರುಚಿಗೆ ತಕ್ಕಂತಹ ಬಗೆಬಗೆಯ ಭಕ್ಷ್ಯ ಭೋಜನಗಳನ್ನು ಒದಗಿಸುತ್ತಿವೆ. ಅಂತಹವುಗಳಲ್ಲಿ ಹರೆಯದ ಯುವ ಮನಸ್ಸುಗಳು ಬಾಯಿ ಚಪ್ಪರಿಸಿಕೊಂಡು ನಗ್ನ ಚಿತ್ರಗಳು, ಅಶ್ಲೀಲ ದೃಶ್ಯಗಳು, ಕಾಮ ಪ್ರಚೋದಕ ಸಂಗತಿಗಳನ್ನೇ ವೀಕ್ಷಿಸುತ್ತಾ ಮನಸ್ಸನ್ನು ಮಲಿನಗೊಳಿಸಿಕೊಳ್ಳುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇವುಗಳಿಂದ ವಿಕೃತ ಭಾವನೆಗಳನ್ನು ಉದ್ಧೀಪನಗೊಳಿಸಿಕೊಳ್ಳುವ ದುರ್ಬಲ ಮನಸ್ಥಿತಿಯಿರುವ ಪುಂಡ ಪೋಕರಿಗಳು, ಸಂಸ್ಕಾರ ಹೀನರು ಅತ್ಯಾಚಾರ, ಅನಾಚಾರಗಳಂತಹ ಕುಕೃತ್ಯಗಳಲ್ಲಿ ತೊಡಗಿಕೊಂಡು, ಸಮಾಜ ಕಂಟಕ ಕ್ರಿಮಿಗಳಾಗಿ ಹೊರಹೊಮ್ಮಿ ತಮ್ಮ(ಇತರರ ಬದುಕನ್ನೂ) ಬದುಕನ್ನೇ ಭಗ್ನಗೊಳಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಬದಲಾಗಿ ಇರುವ ವಿವೇಕ – ವಿವೇಚನೆಯಿಂದ ಒಳಿತಿಗಾಗಿ ಮಾತ್ರ ಬಳಸಿಕೊಂಡು ತಮ್ಮ ಉನ್ನತಿಗಾಗಿ ಉಪಯೋಗಿಸುವುದರಿಂದ ಆ ಆವಿಷ್ಕಾರಗಳಿಗೂ ಮಹತ್ವ ಮತ್ತು ಬಳಕೆದಾರರ ಭವಿಷ್ಯಕ್ಕೂ ಪೂರಕವಾಗುತ್ತದೆ.           

ಹಳ್ಳಿಯ ಭಾಗಗಳಲ್ಲಿ ಪ್ರಚಲಿತವಿರುವ ಒಂದು ಮಾತು ತುಂಬಾ ಅರ್ಥಪೂರ್ಣವಾಗಿದೆ. "ಒಮ್ಮೆ ಆಕಸ್ಮಿಕವಾಗಿ ಅಥವಾ ಅವಕಾಶದಿಂದಾಗಿ ಹಾದಿ ತಪ್ಪಿದ ಗರತಿ ಮತ್ತೆಂದೂ ಮುತ್ತೈದೆಯಾಗಲಾರಳು". ಹಾಗೆಯೇ ಗಂಡು ಮಕ್ಕಳಿಗೂ ಅನ್ವಯಿಸಿ "ಗೋಡೆ ಹಾರುವ ಚಟ", "ರುಚಿಕಂಡ ಬೆಕ್ಕು" ಮುಂತಾದ ನುಡಿಗಟ್ಟುಗಳು ಹಾದಿ ತಪ್ಪಿದವರು ಮತ್ತೆ ಸರಿ ಹೋಗಲಾರರು ಎಂಬುದನ್ನು ದೃಢೀಕರಿಸುತ್ತವೆ. ಆದ್ದರಿಂದ "ಆಗಬಾರದ್ದು ಆಗುವ ಮುನ್ನ ಮಾಡಬಾರದ್ದನ್ನು ಮಾಡಬಾರದು" ಎಂಬ ವಿವೇಚನೆಯನ್ನು ಅಳವಡಿಸಿಕೊಳ್ಳಬೇಕು.            

ನಮ್ಮ ದೇಶವು ಪುರಾಣೇತಿಹಾಸದ ಕಾಲದಿಂದಲೂ ಪರಿಶುದ್ಧ ದಾಂಪತ್ಯದ ಚೌಕಟ್ಟಿನಲ್ಲಿಯೇ ಜೀವನ ನಡೆಸುವ "ಸಂಸ್ಕಾರ"ವುಳ್ಳ ಪದ್ಧತಿಯನ್ನು ಅನುಸರಿಸಿಕೊಂಡೇ ಬರುತ್ತಿದೆ. ಆರೋಗ್ಯಕರ ಜೀವನ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬರುವ ಸದುದ್ಧೇಶದಿಂದ ಮುಂದುವರೆದುಕೊಂಡು ಬಂದಿರುವ ಈ ಪದ್ಧತಿಯು, ಇತ್ತೀಚೆಗೆ ಬೇರೆ ಬೇರೆ ಕಾರಣ, ಪ್ರಭಾವಗಳಿಂದಾಗಿ ಸಡಿಲವಾಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಈ ರೀತಿಯ ಸ್ಥಿತ್ಯಂತರಕ್ಕೆ ಮನುಷ್ಯನ "ದುರ್ಬಲ ಮನಸ್ಥಿತಿ"ಯೂ ಕಾರಣವೆಂಬುದರಲ್ಲಿ ಎರಡು ಮಾತಿಲ್ಲ. ನಾಲ್ಕು ಗೋಡೆಯ ಒಳಗೆ ನಡೆಯುವ ಕೌಂಟುಬಿಕ ರಹಸ್ಯಗಳು ಇಂದು ಬೀದಿಗೆ ಬರತೊಡಗಿವೆ. ಗಂಡ-ಹೆಂಡತಿಯರಲ್ಲಿ ಸಂಶಯದ ಬೀಜ ಮೊಳೆತು ಹೆಮ್ಮರವಾಗಿ, ಅದೇ ಮನೆಯ ಮೇಲೆ ಮುರಿದು ಬೀಳುತ್ತಿದೆ. ಅಪ್ರಾಪ್ತ ಬಾಲಕಿಯರ ಮೇಲೆ ಹಾಡ ಹಗಲೇ ಅತ್ಯಾಚಾರ ಕೃತ್ಯಗಳು ಘಟಿಸುತ್ತಿವೆ. ಗುರುಕುಲಗಳಲ್ಲಿ ಕೆಲವರು ನಡೆಸುವ ಲೈಂಗಿಕ ದೌರ್ಜನ್ಯಗಳಿಂದ ಇಡೀ ಗುರುಕುಲದ ಮೇಲೆ ಸಂಶಯ ಉಂಟಾಗಿ ಅಗೌರವ ಮೂಡುವಂತಾಗಿದೆ. ಪ್ರಬುದ್ಧರೆನಿಸಿದ ಜನನಾಯಕರೇ ಅಶ್ಲೀಲ ದೃಶ್ಯ, ಚಿತ್ರಗಳ ವೀಕ್ಷಣೆಯಂತಹ ಅನಾಗರೀಕ ನಡವಳಿಕೆ (ಅದರಲ್ಲೂ ಜನಸಾಮಾನ್ಯರ ಸಮಸ್ಯೆಗಳ ಚರ್ಚೆಯ ಸಂದರ್ಭದ ಪವಿತ್ರ ಸಮಯದಲ್ಲಿಯೇ!) ಪ್ರದರ್ಶನವಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಭ್ರಷ್ಟಾಚಾರಗಳು ಎಗ್ಗಿಲ್ಲದೆ ಸಾಗುತ್ತಿವೆ. ಸಾಮಾಜಿಕ ಅನಿಷ್ಟಗಳು ಇನ್ನೂ ಜೀವಂತವಾಗಿವೆ. ಬೇರೆ ಬೇರೆ ರೀತಿಯ ಅಸಮಾನತೆ, ಅಸ್ಪೃಶ್ಯತೆ, ಅನೈತಿಕ ಮನೋಭಾವಗಳು ವಿಜೃಂಭಿಸುತ್ತಲೇ ಇವೆ. ಇಂತಹ ಆಘಾತಕಾರಿ ಬೆಳವಣಿಗೆಗಳಿಗೆಲ್ಲ ಪ್ರಮುಖವಾಗಿ ಕಾರಣವಾಗಿರುವುದು ಮನುಷ್ಯನ ಅಂಕೆಯಿಲ್ಲದ 'ಮನಸ್ಸು'. ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿರುವ ಈ 'ಮನಸ್ಸ'ನ್ನು ಗೆಲ್ಲಲು, ನಿಯಂತ್ರಿಸಲು ಇರುವ ಏಕೈಕ ಮಾರ್ಗವೆಂದರೆ; ಧ್ಯಾನ, ಸಚ್ಚಿಂತನೆ, ಯೋಗ, ಸತ್ಸಂಗದಂತಹ ಸದಭಿರುಚಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು. ಇದರಿಂದ ಮಾನಸಿಕ ದೃಢತೆ, ಮನೋನಿಯಂತ್ರಣ ಮಾಡಿಕೊಳ್ಳುವುದು ಸಾಧ್ಯವೆಂದು ಮಹಾಸಾಧಕರು ಅಭಿಪ್ರಾಯಪಡುತ್ತಾರೆ. ಧಾವಂತದ ಬದುಕಿನ ತುಡಿತದಲ್ಲಿರುವ ನಾವು ಈ ಹವ್ಯಾಸಗಳನ್ನು ಬೆಳೆಸಿಕೊಂಡರೆ, ಅತ್ತಿತ್ತ ಹೊಯ್ದಾಡುವ ನಮ್ಮ ಮನವೆಂಬ ಮಂಗನನ್ನು ವಿವೇಕದಿಂದ ನಿಯಂತ್ರಿಸಿದರೆ, ಸಂದರ ಬದುಕಿನ ಅವಕಾಶದ ಸದುಪಯೋಗಕ್ಕೆ ಮುಂದಾದರೆ ಮಾತ್ರ ಎಲ್ಲರೂ ಶಾಂತಿ, ನೆಮ್ಮದಿಯಿಂದ ಬಾಳಿ ಬದುಕಬಹುದಾಗಿದೆ. ಇಲ್ಲದಿದ್ದರೆ, ಮನವನ್ನೇ ಗೆಲ್ಲಲಾಗದ ನಾವು ವೈಜ್ಞಾನಿಕವಾಗಿ ಮುಂದುವರೆದು ಜಗವನ್ನೇ ಗೆದ್ದವೆಂಬ ಭ್ರಮೆಯಲ್ಲಿ ಬೀಗುವುದರಲ್ಲಿ ಅರ್ಥವಿಲ್ಲ.        

-ಹೊರಾ.ಪರಮೇಶ್ ಹೊಡೇನೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
prashasti.p
8 years ago

ಚೆಂದದ ಲೇಖನ ಸರ್ ಜೀ. ಆದ್ರೆ ಈ ಅಂತರ್ಜಾಲವೆನ್ನೋದು ಏನು ತೋರಿಸುತ್ತೆ ಅನ್ನೋದಕ್ಕಿಂತ ಅದರಲ್ಲಿ ನಮ್ಮ ಮನಸ್ಸು ಏನನ್ನು ನೋಡಬಯಸುತ್ತೆ ಅನ್ನೋದು ಮುಖ್ಯವಾಗುತ್ತೆ ಅನಿಸುತ್ತೆ. ಮೌಲ್ಯದ ಅಧಃಪತನವಾಗಬೇಕಂತಿರೋ ವಯಸ್ಕನಿಗೆ ಇದರಿಂದ ಆ ಕೆಲಸ ಸುಲಭವಾಗುತ್ತಷ್ಟೇ ಹೊರತು ಇದರಿಂದಲೇ ಅವನ ಮೌಲ್ಯಗಳು ಹಾಳಾಗುತ್ತೆ ಅಂತಲ್ಲ ಅನಿಸುತ್ತೆ. ಮನಸ್ಸೆಂಬ ಮರ್ಕಟದ ಬಗ್ಗೆ ಯೋಚನೆಗ ಹಚ್ಚಿದ್ದಕ್ಕೆ ಧನ್ಯವಾದಗಳು 🙂  ನೀವಂದಂಗೆ ಅದನ್ನ ಗೆದ್ದವನೇ ಮಹಾಶೂರ:-)

1
0
Would love your thoughts, please comment.x
()
x