ಬಾ ಮಳೆಯೆ ಬಾ….: ಸಂಗಮೇಶ ಡಿಗ್ಗಿ ಸಂಗಾಮಿತ್ರ


ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿ ಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ.

ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ.

ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ.

ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ.

ಕೊಟ್ಟಿಗೆಯಲ್ಲಿ ಧೂಳು ಬಡಿದುಕೊಂಡ ನೇಗಿಲು, ಬಾರುಕೋಲು, ಕೆಲಸವಿಲ್ಲದೆ ಮಲಗಿದ್ದ ರಾಮ-ಲಕ್ಷಣ ಹೆಸರಿನ ಎತ್ತುಗಳು ತಯಾರಾಗಿ ನಿಲ್ಲುತ್ತವೆ ಭೂಮಿಯ ಉದರಕ್ಕೆ ಕಾಳು ಹರಡಲು. ಕಾಳು ಬಸಿರೊಡೆದು ಸಸಿಯಾಗಲು ಜಡಿದು ಬರುವ ಮಳೆ ನೆರವಾಗಲು ಹವಣಿಸುತ್ತದೆ.

ಮಳೆ ಅಂದ್ರೆ ಎಲ್ಲರಿಗೂ ಇಷ್ಟ. 

ನನಗೂ…. 
ಹೃದಯಕ್ಕೆ ಬರಗಾಲ ಬಿದ್ದ ಸಮಯದಲ್ಲಿ ಸುರಿದ ಸೊನೆಮಳೆಯೊಂದಿಗೆ ಮುನಿಸಿಕೊಳ್ಳುತ್ತಲೆ, ಅಪ್ಪಿಕೊಳ್ಳುತ್ತಾ, ಮುದ್ದಾಡುತ್ತಾ, ತನುಮನವನ್ನು ಅರ್ಪಿಸಿಕೊಳ್ಳಲು ತುದಿಗಾಲ ಮೇಲೆ ನಿಂತ ಸಮಯ. ನೋಡನೋಡುತ್ತಲೆ ಸುರಿದ ಮಳೆಗೆ ಮೈಯೊಡ್ಡಿ ಆಲಿಕಲ್ಲುಗಳನ್ನು ಬೊಗಸೆಗಟ್ಟಲೆ ಹೆಕ್ಕಿ ನನ್ನವಳಿಗೆ ಕೊಡುತ್ತಿದ್ದ ದಿನಗಳಿಗೆ ಕಾತರಿಸುತಿದ್ದ ಸಮಯದಲ್ಲಿ ಬಿರುಸಾಗಿ ಸುರಿದ ಮಳೆಯಲ್ಲಿ ಪುಟ್ಟಪೊರನಂತೆ ಅಲೆದಾಡಿ ಶೀತ, ಜ್ವರ ಬಂದು ಅಪ್ಪನ ಕೈಲಿ ಹೊಡೆಸಿಕೊಂಡ ಆ ದಿನಗಳು ನಿಜಕ್ಕೂ ಚಂದ.

ಹಿತ್ತಲ ಮನೆಯ ಬಾಗಿಲಿಂದ ತಪ್ಪಿಸಿಕೊಂಡು ‘ಬಾರೋ ಬಾರೋ ಮಳೆರಾಯ’ ಹಾಡನ್ನು ಗುನುಗುತ್ತಾ ನೆನೆದು ಒಬ್ಬರಿಗೊಬ್ಬರು ‘ಸಕ್ಕಸ್‍ಸುರಗಿ’ ಆಟವಾಡುವಾಗ ಶಾಲೆಯಲ್ಲಿ ಕೊಟ್ಟ ಹೋವರ್ಕ, ಮನೆ ಯಾವುದು ನೆನಪಾಗುತ್ತಿರಲಿಲ್ಲ. ಎಲ್ಲಿಂದಲೋ ಬಂದ ಅವ್ವ ಬೆನ್ನಿಗೆ ಗುದ್ದಿದ ಮೇಲೆಯೇ ಮಳೆಯಾಟ ಬಂದ್…! ಅವತ್ತು ಮನೆಯಲ್ಲಿ ಬರೀ ಬೈಗುಳಗಳ ಮಳೆ..!

ಮೂಲೆ ಸೇರಿ ಏಕಾಂಗಿಯಾಗಿ ಬಸವಳಿದು ಬಿದ್ದ ಕೊಡೆಯೊಂದು ಹೂವಿನಂತೆ ಅರಳಿ ನಿಲ್ಲಲು ಮಳೆ ಬೇಕೆಬೇಕು. ಅಲ್ಲಲ್ಲಿ ತೂತುಬಿದ್ದು ಹಾಳಾಗಿದ್ದರೆ ಕೆಂಪು ಬಟ್ಟೆಯ ತುಣುಕಿನಿಂದ ಹೊಲಿಗೆ ಹಾಕಿದಾಗ ಮಧುವಣಗಿತ್ತಿಯಂತೆ ಸಿಂಗಾರಗೊಳುತ್ತದೆ. ಅಜ್ಜನ ಸಂಗಾತಿಯಾಗಿರುವ ಛತ್ರಿಯಂತೂ ದುರಸ್ತಿಯಿಂದ ಕೂಡಿ ಕೋಲಿನ ಕೆಲಸಕ್ಕೆ ರಾಜಿನಾಮೆ ನೀಡಲು ರೆಡಿಯಾಗುತ್ತದೆ. ತಲೆಗೊಂದರಂತೆ ಕೊಡೆ ಕೊಳ್ಳಲು ಚಿಕ್ಕಪ್ಪ ಶನಿವಾರದ ಸಂತೆಗೆ ಹಾಜರಾಗುತ್ತಾನೆ ಸುರಿಯುವ ಮೊಂಡು ಮಳೆಯಲ್ಲಿ ಕೊಡೆ ಹಿಡಿದುಕೊಂಡು.
ಮಳೆಯ ಸಂಗಡ ಹರಿದು ಬಂದ ನೀರು ಹಳ್ಳದಲ್ಲಿ ಕೂಡಿ, ನದಿಯಾಗಿ, ಸಾಗರದಲ್ಲಿ ಲೀನವಾಗಿ ಆವಿಯಾಗಿ ಮತ್ತೆ ಭೂಮಿಗೆ ಬರಲು ತುದಿಗಾಲಿನಲ್ಲಿ ನಿಂತಿರುತ್ತದೆ.

ಮಳೆ ಯಾರಿಗೆ ಯಾಕೆ ಇಷ್ಟ :
ಚಿಕ್ಕಮಕ್ಕಳಿಗೆ : 

 ಸುರಿಯುವ ಸೋನೆ ಮಳೆಯಲ್ಲಿ ನೆನೆಯುವ ಆಸೆ. ನೀಲಿ, ಕೆಂಪು, ಹಸಿರು ನಾನಾ ತರಹದ ಬಣ್ಣ ಬಣ್ಣದ ಹಾಳೆಗಳಿಂದ ಕಾಗದದ ದೋಣಿಗಳನ್ನು ತೇಲಿಬಿಡುವ ಆಸೆ. ಮನೆಯ ಮಾಳಿಗೆಯ ಕಿಂಡಿಯಲ್ಲಿ ಸುರಿಯುವ ರಭಸದ ನೀರಿಗೆ ಬರೀ ಬತ್ತಲೆಯಾಗಿ ಮೈಯೊಡ್ಡುವ ಆಸೆ. ಮೊಣಕಾಲವರೆಗೂ ನಿಂತ ನೀರಿನ ಜೊತೆ ಚಲ್ಲಾಟವಾಡುವ ಆಸೆ. ಮರಳಿನ ಮೇಲೆ ಗುಬ್ಬಿಗೂಡು ಕಟ್ಟಿ ಚಂದದ ಪುಟ್ಟ ಆಣೆಕಟ್ಟು ಕಟ್ಟಿ ಎಲ್ಲಿಂದಲೂ ಹಿಡಿದು ತಂದೆ ಮಳೆಹುಳುವಿನ ಮರಿ, ಕಪ್ಪೆಮರಿ ತಂದು ಕಣ್ಣರಳಿಸಿ ನೋಡುವ ಆಸೆ. ಇದ್ಯಾವುದಕ್ಕೂ ಬಿಡದೆ ಕಾಡಿಸುವ ಅಪ್ಪನ ಮೇಲೆ ಆಗಾಗ ಉಚಿತವಾಗಿ ಸಿಟ್ಟಾಗುವ ಆಸೆ ಸಂದರ್ಭ ಒದಗುತ್ತದೆ.

ಇನ್ನು ಪ್ರೇಮಿಗಳಿಗೆ :
ನಲ್ಲೆಯ ಕಿರುಬೆರಳನ್ನು ಹಿಡಿದು ಸಾಲುಮರದ ದಾರಿಗುಂಟ ಮೈಚಳಿ ಬಿಟ್ಟು ಒಬ್ಬರಿಗೊಬ್ಬರು ಅಂಟಿಕೊಂಡು ಅಪ್ಪಿಕೊಂಡು ಮುತ್ತಿನ ಮಳೆ ಸುರಿಸುವ ಆಟ ಇಷ್ಟ. ದಾರಿಯಲ್ಲಿ ಸಿಗುವ ಗುಲ್‍ಮೊಹರ್ ಗಿಡದ ಕೆಳಗೆ ಕುಳಿತು ಕಣ್ಣನಲ್ಲಿ ಕಣ್ಣುಸೇರಿಸಿ ಮೌನವಾಗಿ ನೋಡುವಾಗ ದಡಲ್ ಎಂದು ಬಂದಪ್ಪಳಿಸಿದ ಸಿಡಿಲಿನ ಸದ್ದಿಗೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಕಡೆಗೆ ನಾಚಿಕೆಯಿಂದ ನಕ್ಕು ಸುಮ್ಮನಾಗುವ ಆಟ ಇಷ್ಟ. ಹಾದಿಗುಂಟ ನಡೆಯುವಾಗ ಕೆಂಪು ಬಣ್ಣದ ಕೊಡೆಯನ್ನು ತಿರುಗಿಸುತ್ತಾ ಹನಿಗಳ ಜೊತೆ ಚಲ್ಲಾಟವಾಡುವ ಆಟ ಇಷ್ಟ. ಮಳೆಯಿಂದ ನೆನೆದು ಚಳಿಯಾಗಿ ಬಿಸಿಯುಸಿರ ಬಯಕೆ ಕಟ್ಟೆಯೊಡೆಯುವ ಸಮಯದಲ್ಲಿ ಜಗದ ಪರಿವೆಯಿಲ್ಲದೆ ಒಂದಾಗುವ ಆಟದಲ್ಲಿ ದೂರದಲ್ಲೆಲ್ಲೂ ಅಣಕಿ ನೋಡುವ ಕಾಮನಬಿಲ್ಲನ್ನು ಮರೆತು ಬಣ್ಣಬಣ್ಣಗಳ ಭಾವದಲ್ಲಿ ಮಿಂದು ಬೆಚ್ಚಗಾಗುವ ಆಸೆ.

ದೊಡ್ಡವರಿಗೆ :
ಮಳೆಸುರಿಯುವಾಗ ಬಿಸಿಬಿಸಿ ಗರಿಗರಿ ಹಪ್ಪಳ,ಸಂಡಿಗೆ ಮಾಡಿ ಮಕ್ಕಳಿಗೆ ಉಣಬಡಿಸುವದಾಸೆ. ತುಟಿ ಸುಡುವ ಚಹಾ ಕುಡಿಯುವ ಆಸೆ. ಬಿಡದೆ ಧೋ ಎಂದು ಸುರಿಯುವ ಮಳೆಗೆ ಮನೆಯ ಹೆಂಚು ಸರಿಮಾಡಿಕೊಂಡು ಮನೆಯನ್ನು ಬೆಚ್ಚಗಾಗಿ ಇಡುವ ಕೆಲಸ. ಹಿತ್ತಲಿನಲ್ಲಿನ ಕಟ್ಟಿಗೆಗಳು ನೆನೆಯದಂತೆ ಇಡಲು ತೆಂಗಿನ ಗರಿಗಳನ್ನು ಜೋಡಿಸುವ ಎಡೆಬಿಡೆಯಿಲ್ಲದ ಕೆಲಸ. ಅಕ್ಕನಿಗಂತು ತನ್ನ ಜರತಾರಿ ಲಂಗಗಳನ್ನು ಒಣಗಿಸುವದು ಹೇಗೆ ಎಂಬ ಚಿಂತೆ ಕಾಡತೊಡುತ್ತದೆ.

 “ ಓ ಮಳೆಯೇ, ನನಗೊಂದು ಆಸೆ ಈಡೇರಿಸುವೆಯಾ…? ನಾನು ಏಕಾಂತದಲ್ಲಿರುವಾಗ ಸುರಿ. ನನ್ನವಳಿಲ್ಲದೆ ಬೇಜಾರಾಗಿ ಕುಳಿತ ಸಮಯದಲ್ಲಿ. ಮತ್ತೆ ನಿನ್ನೊಂದಿಗೆ ಆಟವಾಡುವ ಆಸೆಯಾಗಿದೆ. ಎಷ್ಟೇಂದರೆ ನಾನು ಮನೆ, ಪೋಲಿ ಗೆಳೆಯರ ಬಳಗ, ಕಾಡಿಸುವ ಅಕ್ಕ, ಜಗಳಗಂಟ ತಮ್ಮ, ಜಾತಿಗೀತಿ, ಕೆಲಸದ ಒತ್ತಡ, ದುಡ್ಡು, ಸ್ವಾರ್ಥ ಎಲ್ಲವನ್ನು ಬಿಟ್ಟು ಅಷ್ಟೇ ಅಲ್ಲ ಹೃದಯವನ್ನು ಚೂಟಿ ಮರೆಯಾಗುವ ಗೆಳತಿಯನ್ನು ಮರೆತು ನಿನ್ನೊಂದಿಗೆ, ಕೇವಲ ನಿನ್ನೊಂದಿಗೆ ಬರೀ ಮೈಯಲ್ಲಿ ಲೋಕದ ಯಾವ ಭವಬಂಧನಗಳ ಹಂಗಿಲ್ಲದೆ ಆಟವಾಡಬೇಕಾಗಿದೆ”

ಬಾ ಮಳೆಯೆ ಬಾ….

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x