ವಿದ್ಯೆ ಮತ್ತು ಸಹೃದಯಿಗರು: ರಾಘವೇಂದ್ರ ತೆಕ್ಕಾರ್


“ಇದು ಸುಮಾರು 2002 ನೆ ಇಸವಿಯ ಘಟನೆಗಳು……”
ಬಹುರಾಷ್ಟ್ರೀಯ ಕಂಪೆನಿಯೊಂದು ತನ್ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂದರ್ಶನವೊಂದನ್ನು ನಗರದ ಪ್ರತಿಷ್ಟಿತ ಹೋಟೇಲ್ ಒಂದರಲ್ಲಿ ಕರೆದಿತ್ತು. ಸೂಟು ಬೂಟಲ್ಲಿ ಖಡಕ್ ಇಸ್ತರೀ ಬಟ್ಟೆಗಳ ಮೇಳೈಕೆಗಳ ಜೊತೆ ಕೈಯಲ್ಲಿ ಒಂದೀಟುದ್ದದ ಫೈಲ್ ಹಿಡಿದು ಇದ್ದ ಬದ್ದ ಕಾಗದ ಪತ್ರವನ್ನು ತುಂಬಿ ಸರತಿಯಲ್ಲಿ ಸಂದರ್ಶನವನ್ನು ಎದುರುಗೊಳ್ಳಲು ತಲೆ ಮೇಲೆ ಆಕಾಶ ಉದುರಿಸಿಕೊಂಡಂತೆ ನಿಂತವರ ಮಧ್ಯದಲ್ಲಿ…….. ಕಾಲಿಗೆ ಪ್ಯಾರಗಾನ್ ಹವಾಯಿ ಚಪ್ಪಲ್ ಸಿಗಿಸಿಕೊಂಡು ದೊಗಲೆ ಪ್ಯಾಂಟ್ ಜೋಬಲ್ಲಿ ಒಂದು ಪೆನ್ ಕೈಯಲ್ಲಿ ಸುರುಳಿ ಸುತ್ತಿಟ್ಟುಕೊಂಡ ಸಿ ವಿ ಜೊತೆ ಆತ ಕೂಡ ಇತರರ ಕಣ್ಣಿಗೆ ರಾಚುವ ಮಿಕದಂತೆ ನಿಂತಿದ್ದ. ಇತರರೀಗೆ ಆತ ನಗು ತರಿಸುವ ವಸ್ತು.

ಹೀಗೆ ಸರತಿಯಲ್ಲಿ ನಿಂತವ ಸುಖಾ ಸುಮ್ಮನೆ ನಗು ತರಿಸುವವನಾದರು ಆತನ ಪರಿಸ್ಥಿತಿ ಆತನನ್ನು ಆ ತೆರನಾಗಿ ನಿಲ್ಲಿಸಿ ಇತರರನ್ನು ನಗಿಸಿತ್ತು. ಹೇಳಬೇಕೆಂದರೆ ಆತ ಸುಮಾರು 52 ಕಿಮಿ ದೂರದಿಂದ ಅಲ್ಲಿಗೆ ಉದ್ಯೋಗ ಆಕಾಂಕ್ಷಿಯಾಗಿ ಬಂದಿದ್ದ.ಇರುವ ನೂರು ರುಪಾಯಿಯಲ್ಲಿ 48 ರುಪಾಯಿಯ ಹವಾಯಿ ಚಪ್ಪಲ್ ಖರೀದಿಸಿದ್ದ.ಉಳಿದ ಹಣವನ್ನು ಬಸ್ ಖರ್ಚುಗಾಗಿ ಹೊಂದಿಸಲು 12 ಕೀಮಿ ನಡೆದೆ ಸಾಗಿದ್ದ.ಅದು ಬರಿದೆ ಕಾಲಲ್ಲಿ. ತದ ನಂತರವಷ್ಟೆ ಕಾಲಿಗೊಂದು ಬೆಲೆಬಾಳುವ ( ಅವನ ದೃಷ್ಟಿಯಲ್ಲಿ) ಚಪ್ಪಲ್ ಖರೀದಿಸಿ ಬಸ್ಸೇರಿ ಮೇಲೆ ವಿವರಿಸಿದ ಸರತಿಯಲ್ಲಿ ಬಂದು ನಿಂತಿದ್ದ.ಬೆಳಿಗ್ಗೆ ಒಂದಿಷ್ಟು ತಂಗಳನ್ನ ಹೊಟ್ಟೆ ಸೇರಿತ್ತು. ಸರತಿ ಬೇಗ ಮುಗಿದರೆ ಮತ್ತರಡು ಘಂಟೆಯಲ್ಲಿ ಊಟ ಸಿಗಲು ಬಹುದೇನೊ? ಕಾರಣ ಊಟಕ್ಕೆ ಆತನಲ್ಲಿ ಕಾಸಿಲ್ಲ! ಮತ್ತೆ ಮನೆ ತಲುಪಿದರಷ್ಟೆ ಹಿಟ್ಟು, ಇರೊ ಕಾಸು ಮುಗಿದಲ್ಲಿ ಬಿಟ್ಟಿ ಕರೆದೊಯ್ಯಲು ಬಸ್ ನಿರ್ವಾಹಕ ಆತನ ಮಾವನೆ? ಇಲ್ಲ ಊಟ ಮಾಡುವಂತಿಲ್ಲ. ನೆತ್ತಿ ಸುಡುವ ಬಿಸಿಲಲ್ಲಿ ಎದುರಿಗಿದ್ದವನನ್ನು ಟೈಮ್ ಏನು? ಎಂದು ವಿಚಾರಿಸಲು ಆತನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ಆ ವ್ಯಕ್ತಿ ವೇಳೆ ತಿಳಿಸಬಹುದಾದ ಪ್ರಾಣಿಯೆಂದು ಮನದಟ್ಟು ಮಾಡಿಕೊಂಡು ಹೇಳಿದ್ದು .. ಮಧ್ಯಾಹ್ನ 12.30.ಬಹುಶಃ ಆ ವ್ಯಕ್ತಿಯ ನೆತ್ತಿ ಸುಡುತ್ತಿರಬೇಕು ಬಿಸಿಲಿಂದ ಮಾತ್ರವಲ್ಲ ಆತನ ಸನಿಹದಿಂದಲೂ ಕೂಡ. ಸರತಿ ಬಲು ನಿಧಾನಕ್ಕೆ ಸಾಗುತಿತ್ತು.

ಸಂದರ್ಶಕರು ಊಟಕ್ಕೆ ಹೋಗಿದ್ದಾರಂತೆ ಎಂದು ಕೋಣೆಯಿಂದ ಹೊರ ಬಂದ ವ್ಯಕ್ತಿಯೊಬ್ಬ ನುಡಿಯಲು ಸರತಿ ಸಾಲು ಒಂದಷ್ಟು ಊಟದ ನೆಪದಲ್ಲಿ ಕರಗಿತ್ತು. ಆತನೀಗ ಕರಗಿದ ಸರತಿಯ ಲಾಭ ಪಡೆದು ಮುಂದುವರಿಯುತ್ತಾನೆ ಕೋಣೆಯ ಬಾಗಿಲಿನ ತನಕ, ಅಷ್ಟರ ಮಟ್ಟಿಗೆ ಊಟ ಕೆಡಿಸಿಕೊಂಡಿದ್ದು ಸಾರ್ಥಕ.ಸುಡು ಬಿಸಿಲನ್ನು ತಪ್ಪಿಸಿಕೊಂಡ ಧನ್ಯತೆ. ಒಂದರ್ಧ ಗಂಟೆಯಾಗಿರಬೇಕು ಕೋಣೆಯ ಬಾಗಿಲು ತೆರೆದಿತ್ತು ದ್ವಾರದಲ್ಲೆ ಎದುರುಗೊಂಡವನೊಬ್ಬ… ಏನಪ್ಪ ಇಂಟರ್ವೂಗೆ ಬಂದ್ಯಾ, ಏನು ವೇಷ ನಿಂದು, ಹಿಂಗೆ ಬರ್ತಾರೇನು? ಎಂದೇನೊ ಗದರಿಸಿ ಒಳ ನಡೆ ಎಂದಿದ್ದ ಆತ ಕಮಕ್ ಕಿಮಕ್ ಎನ್ನದೆ ಕೋಣೆಗೆ ಪ್ರವೇಶಿಸಿದ್ದ.ಮುಂದೇನೊ ಎಂಬ ಚಿಂತೆ ಆತನಲ್ಲಿ ಇದ್ದಂತಿರಲಿಲ್ಲ.

ಮೂರು ಜನರ ಸಂದರ್ಶಕರ ತಂಡವೊಂದು ಬೆಂಗಳೂರಿನಿಂದ ಆ ನಗರಕ್ಕೆ ಬಂದಿತ್ತು. ಮೂವರ ತಂಡದಲ್ಲಿದ್ದಿದ್ದು ಒಬ್ಬರೆ ಕನ್ನಡಿಗ, ಇನ್ನೊಬ್ಬರು ಮಳೆಯಾಳಿ ಭಾಷಿಕನಾದರೆ ಮಗದೊಬ್ಬರು ಹಿಂದಿ ಭಾಷಿಕರು. ಈ ಮೂವರೀಗೂ ಇಂಗ್ಲೀಷ್ ಭಾಷೆ ಸುಲಲಿತವಾಗಿ ಬರುತಿತ್ತು ಹಾಗೂ ಹಾಲಿ ಸಂದರ್ಶನವೂ ಕೂಡ ಅಲ್ಲಿವರೆಗೆ ನಡೆದಿದ್ದು ಅದೆ ಭಾಷೆಯಲ್ಲಿ.ಇಂತಿಪ್ಪ ಪರಿಸರದ ಕೋಣೆಯೊಳಗೆ ಕೆದರಿದ ಕೂದಲನ್ನು ಸವರುತ್ತ ವಿಚಿತ್ರ ವೇಷಿಗನಾದ ಆತ ಒಳ ಬರಬಹುದೆ ಎಂದು ಕೇಳಿ ಅಪ್ಪಣೆಗಾಗಿ ಕಾಯುತಿದ್ದ.ಸಂದರ್ಶಕರಲ್ಲೊಬ್ಬ ಬಂದು ಕುಕ್ಕರಿಸು ಎಂದು ಏನೊ ಸನ್ನೆ ಮಾಡಲು ಆತ ಅವರುಗಳ ಮುಂದೆ ಇಟ್ಟಿದ್ದ ಆಸನದಲ್ಲಿ ಆಸೀನನಾಗಿದ್ದ. ಸಂದರ್ಶಕ ಹೆಸರು ಇತ್ಯಾದಿಗಳನ್ನು ಪರಿಚಯಿಸಿಕೊಂಡು (ಪರಿಚಯಿಸಿಕೊಂಡಂತೆ) ಮುಂದುವರಿದು ಪ್ರಶ್ನೆಗಳನ್ನು ಕೇಳಲು ಶುರುವಿಟ್ಟುಕೊಂಡ…. ಆತನೀಗೆ ಪಚೀತಿ ಶುರುವಾಗಿದ್ದು ಇಲ್ಲಿಯೆ. ಉತ್ತರ ಗೊತ್ತಿದ್ದರು ಉತ್ತರಿಸಲಾಗದ ಭಾಷೆ ಸಮಸ್ಯೆ. ಆತನೇನೊ ಕನ್ನಡದಲ್ಲಿ ಉತ್ತರಿಸುತಿದ್ದ ಆದರೆ ಅವರಿಗೆ ಇಂಗ್ಲೀಷ್ ಭಾಷೆಯಲ್ಲೆ ಉತ್ತರ ಬೇಕಾಗಿತ್ತು (ಕನ್ನಡಿಗ ಸಂದರ್ಶಕನನ್ನು ಸೇರಿ.), ಅದದ್ದಾಗಲಿ ಎಂದು ಕನ್ನಡದಲ್ಲೆ ಶುರುವಿಟ್ಟುಕೊಂಡ ಆತ ಸಾದ್ಯಂತವಾಗಿ ಥಿಯರಿ ಪ್ರಾಕ್ಟಿಕಲ್ ಪ್ರಾಬ್ಲೆಂಮ್ಸ್ ಒಳಗೂಡಿ ವಿಷಯದ ಹಿಂದೆ ಮುಂದೆ ಎಡ ಬಲ ಎಲ್ಲವನ್ನು ವಿವರಿಸಲು ಕನ್ನಡಿಗ ಅದನ್ನೆ ಟ್ರಾನ್ಸ್ಲೇಟ್ ಮಾಡಿ ಇತರರೀಗೆ ಅರುಹಲು ಆತನಲ್ಲಿ ಆತನ ವೇಷಕ್ಕೂ ಮಿಗಿಲಾದ ಬಂಡವಾಳವಿದೆ ಎಂದು ಸಂದರ್ಶಕರೀಗೆ ಮನದಟ್ಟಾಗಿತ್ತು.ಬಟ್…….ಭಾಷೆ ಮುಂದಿನ ಕೆಲಸದ ಬಹು ದೊಡ್ಡ ತೊಡಕು ಎಂದು ಭಾವಿಸಿದ ಆ ಮಂದಿ ಹಾಗೆಯೆ ಇವನಲ್ಲಿ ಹೇಳಲು ಅವಕಾಶವೊಂದು ದೊರೆತರೆ ಭಾಷೆಯೇನು ಅದಕ್ಕಿಂತ ಮಿಗಿಲಾದದ್ದನ್ನು ಸಾಧಿಸಬಲ್ಲೆ ಎಂಬ ಧೃಢ ವಿಶ್ವಾಸದ ಮಾತನ್ನಾಡಿದ್ದ.ಭರವಸೆ ಮೂಡಿಸಲೆಂಬಂತೆ ಕೆಲಸ ಸಿಕ್ಕಿದಲ್ಲಿ ತಾನು ನಿರ್ವಹಿಸುವ, ಕೆಲಸದಲ್ಲಿ ಒದಗಿ ಬರಬಹುದಾದ ಸಮಸ್ಯೆಗಳ ಪಟ್ಟಿ ಹಾಗು ಅದರ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ 2 ಪುಟದ ಸಂಕ್ಷಿಪ್ತ ಪಟ್ಟಿಯನ್ನು ಕುಳಿತಲ್ಲೆ  ಬರೆದು ಕೈಗಿರಿಸಿದ್ದ. ಸಂದರ್ಶಕರ ಹುಬ್ಬೇರಿತ್ತು. ಆತನ ವಿವರಗಳನ್ನು ಪಡೆದ ಸಂದರ್ಶಕ ತಂಡ ಮುಂದೆ ತಿಳಿಸಲಾಗುವದು ಎನ್ನಲು ಆತ ಎದ್ದು ಹೊರ ಬಂದಿದ್ದ. ಹೊರಬರುತ್ತಾ ಕಿವಿಗೆ ಬಿದ್ದ ಸಂದರ್ಶಕರ ಮಾತು ಏನೆಂದರೆ “ ತುಂಬಾ ಕುತೂಹಲಭರಿತ, ತಿಳಿದ, ಪರಿಪೂರ್ಣ, ಅಶಿಸ್ತು, ವ್ಯಕ್ತಿ” ಎಂಬರ್ಥ ಬರುವ ಇಂಗ್ಲೀಷ್ ವಾಕ್ಯಗಳು.

ಬರೋಬ್ಬರಿ ಒಂದು ಘಂಟೆಯ ಸಂದರ್ಶನವಾಗಿತ್ತು ಆತನದು. ಕುತೂಹಲಕ್ಕೆಂದು ಪ್ರಶ್ನೆಗೆ ಮೊದಲ್ಗೊಂಡ ಸಂದರ್ಶಕರು ಆತನ ಸಂದರ್ಶನದಲ್ಲಿ ವೇಳೆ ಸರಿದದ್ದೆ ತಿಳಿಯದೆ ಕೊನೆಗೆ ಏನೊಂದು ತಿಳಿಸದೆ ಹುಬ್ಬೇರಿಸಿಕೊಂಡು ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದರು.ಇನ್ನೂ ಕೋಣೆ ಪ್ರವೇಶಕ್ಕೆ ಕಾಯುತಿದ್ದವರ ದೃಷ್ಟಿ ಹೊರಬಂದ ಆತನ ಮೇಲೆ … ಅವರ ದೃಷ್ಟಿ.ಒಳ ಹೋಗಬೇಕಾದರೆ ಇದ್ದದಕ್ಕೂ ಈಗಿರುವದಕ್ಕೂ ವ್ಯತ್ಯಾಸವಿತ್ತು, ಅವರ ಕಣ್ಣುಗಳಲ್ಲಿ ಕುತೂಹಲವಿತ್ತು. ಆತನೊಳಗಿನ ಹಸಿವು ಅವನ್ನೆಲ್ಲ ಗ್ರಹಿಸಿದರೂ ಗ್ರಹಿಸದಂತೆ ಮಾಡಿತ್ತು. ಹೋಟೆಲ್ ಕಂಪೌಂಡ್ ದಾಟಿ ಬಂದ ಆತ ತೆರದ ನಲ್ಲಿಯಲ್ಲಿ ಬೊಗಸೆ ತುಂಬಾ ನೀರ ಹಿಡಿದು ಕುಡಿದು ಅಲ್ಲೆ ಬಸ್ ಹತ್ತಿ ಆತನ ಊರ ಸಮೀಪದ ಪಟ್ಟಣ ಸೇರಿ ಮತ್ತೊಂದು ಬಸ್ ಹಿಡಿದು ಮನೆ ತಲುಪಿದ್ದ. ಹರಿದ ಜೇಬಲ್ಲಿ ಉಳಿದ 2 ರೂಪಾಯಿಯನ್ನು ಗಮನಿಸದೆ ತುರುಕಿದ್ದು ಎಲ್ಲೊ ಉದುರಿತ್ತು.

ಬರೋಬ್ಬರಿ 5 ದಿನ 300ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳನ್ನು ಸಂದರ್ಶಿಸಿದ ಸಂದರ್ಶಕರಿಗೆ ಖಾಲಿ ಇರುವ ಹುದ್ದೆಗಳಿಗೆ ಕೇವಲ 12 ಮಂದಿಯನ್ನು ಆಯ್ದುಕೊಳ್ಳಬೇಕಾದ ಅಂತಿಮ ಘಟ್ಟ.ಯಾಕೊ ಆತನ ಸಿ ವಿ ಯನ್ನು ಬದಿಗೆ ಸರಿಸಲು ಅವರೀಗೆ ಆಗುತ್ತಿಲ್ಲ. ಆಯ್ಕೆ ಮಾಡಲಿರುವ ತೊದರೆಗಳೆಂದರೆ ಬಾಷೆಯಿಂದಲೂ ಮುಖ್ಯವಾಗಿ ಆತನ ಇನ್ಡಿಸಿಪ್ಲೀನ್!!!! ಯಸ್ … ಕೋಟು, ಟೈ, ಬೂಟುಗಳೊಂದಿಗೆ ಆತ ಇಂಟರ್ವೂ ಕೊಡಬೇಕಿತ್ತು ಬದಲಾಗಿ ಆತ ಬಂದಿರೋದು ಬರೀಯ ದಾರಿಹೋಕನಂತೆ. ಅದರೆ ನಿಜವೆಂದರೆ ತನಗಿದ್ದ ಅನುಕೂಲತೆಯಲ್ಲಿ ಆತ ಬಹಳ ನೀಟಾಗಿಯೆ ಇಂಟರ್ವೂ ಎದುರುಗೊಂಡಿದ್ದ. ಕಿತ್ತು ತಿನ್ನೊ ಬಡತನದ ನಡುವೆ ಈ ಮಟ್ಟಿಗೆ ಆತ ರೆಡಿಯಾಗಿದ್ದು ಆತನೀಗೆ ಹೆಮ್ಮೆಯ ವಿಷಯನೆ. ಆದರೆ ಕಾರ್ಪೊರೇಟ್ ಜಗತ್ತು ಈ ವೇಷವನ್ನು ಅತ್ಯಂತ ಹೀನಾಯವಾಗಿ ನೋಡುವ ಪರಿಸ್ಥಿತಿ ಮೊದಲು ಇತ್ತು ಈಗಲೂ ಇದೆ. ಅದೇನೆ ಇರಲಿ ಎಲ್ಲಿ ಹೋದರು ಒಳ್ಳೆಯತನಕ್ಕೆ ಹಾಗು ವಿದ್ಯೆಗೆ ಬೆಲೆ ಇರುತ್ತದೆ ಎಂಬುದು ಆತನ ಈ ಸಂದರ್ಶನ ಸಾಕ್ಷಿಯಾಗುತ್ತದೆ. ಸಂದರ್ಶಕರ ಒಳ್ಳೆಯ ಮನಸ್ಸು ಆತನನ್ನು ಆಯ್ಕೆ ಮಾಡುವ ತೀರ್ಮಾನಕ್ಕೆ ಬರುತ್ತದೆ.ಆದರೆ ಕೆಲವೊಂದು ನಿಬಂದನೆಗಳ ಜೊತೆ.

ಮುಂದಿನ ದಿನವೊಂದರಲ್ಲಿ ಆತನಿಗೊಂದು ಪೋಷ್ಟ್ ಹಾಗು 1500 ರೂ ಮನಿಯಾರ್ಡರ್ ಒಂದು ಬಂದು ತಲುಪುತ್ತದೆ. ಪೋಷ್ಟ್ ‘ಆಫರ್ ಲೆಟರ್’ ಆಗಿದ್ದು ಅದರಲ್ಲೆ ಇದ್ದ ಇನ್ನೊಂದು ಚೀಟಿಯಲ್ಲಿ ನೀಟಾದ ಬಟ್ಟೆಗಳೊಂದಿಗೆ ಬೂಟಿನ ಜೊತೆ ಬರತಕ್ಕದ್ದು ಹಾಗು ಕೆಲ ಹೊಗಳಿಕೆ ಮಾತಿನ ಒಕ್ಕಣೆ, ಬರಬಹುದಾದ ಬಸ್ ಖರ್ಚು ಹಾಗು ಬಟ್ಟೆ ಖರೀದಿಗೆ ಬೇಕಾದ ಹಣವನ್ನು MO ಮಾಡಲಾಗಿರುತ್ತದೆ,ವಸತಿ ವ್ಯವಸ್ಥೆ ಇದೆ ಎಂಬ ಸೂಚನೆ ಕೆಳಗೊಂದು ಸಹಿ ಹೆಸರಿನ ಜೊತೆ… ಆ ಹೆಸರು ಹೀರೇಶ್ ಶರ್ಮ.(company CEO). ಆತನ ಪಾಲಿನ ದೇವರು. ಅಲ್ಲಿಗೆ ವಿದ್ಯೆ ಕೈ ಹಿಡಿಯುತ್ತದೆ ಪ್ರಾಮಾಣಿಕತೆ ಕೆಲಸಕ್ಕೆ ಬರುತ್ತದೆ ಎಂಬುದು ಆತನ ಪಾಲಿಗೆ ಸತ್ಯವಾದ ದಿನ. ಜೊತೆಗೆ ಆತನ ಬದುಕಿನ ಆರಂಭ.ಮೇಲಿನ ಸಹಾಯದ ಜೊತೆ ಒಂದಷ್ಟು ಗೆಳೆಯರ ಸಹಾಯದೊಂದಿಗೆ(ಅರ್ಥಿಕವಾದದ್ದು)ಹೊಸ ಕೆಲಸಕ್ಕೆ ಎದುರುಗೊಳ್ಳಲು ಬಸ್ಸೇರಿದ್ದ.
“ಘಟ್ಟವೊಂದರ ಘಟನೆಗಳ ಮುಕ್ತಾಯ”

ನಿರೂಪಕನ ಮಾತುಗಳು:-
ಕಾರ್ಪೊರೇಟ್ ಕಂಪೆನಿಗಳಲ್ಲಿ ಸಹೃದಯಿಗಳಿಲ್ಲ, ದುಡಿಸಿಕೊಳ್ಳೋದಷ್ಟೆ ಬರುತ್ತದೆ, ಯಾವುದೋ ಪ್ರೊಜೆಕ್ಟ್ ಕೆಲಸ ಮುಗಿದ ನಂತರ ಮರು ಪ್ರೊಜೆಕ್ಟ್ ಗಳು ಇಲ್ಲವಂತಾದಲ್ಲಿ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡುವ ಪರಿಸ್ಥಿತಿಗಳನ್ನು ತಂದೊಡ್ಡುತ್ತಾರೆ, ಜಾಬ್ ಸೆಕ್ಯೂರಿಟಿ ಇಲ್ಲ ಇತ್ಯಾದಿ ಇತ್ಯಾದಿ ಕಂಪ್ಲೆಂಟ್ಗಳು ಜಮಾನದಿಂದ ಇದ್ದಂತ್ತದ್ದೆ ಹಾಗು ಇದು ಅಲ್ಲವೆಂದು ಪೂರ್ತಿ ತಳ್ಳಿ ಹಾಕಲಾಗದು. ಅದು ಒತ್ತಟ್ಟಿಗಿರಲಿ ಕಾರ್ಪೊರೇಟ್ ಕಂಪನಿಯಲ್ಲು ಸಹೃದಯದ ಮಂದಿ ಇದ್ದಾರೆ ಬದುಕು ರೂಪಿಸುವವರು ಇದ್ದಾರೆ ಅನ್ನೊದಕ್ಕೆ ಮೇಲಿನ ಕಥೆಯೆ ಸಾಕ್ಷಿ.

ಮುಕ್ತಾಯ….
ಕೆಲಸ ಗಿಟ್ಟಿಸಿಕೊಂಡ ಆತ ಪರಿಸರಕ್ಕನುಗುಣವಾಗಿ ಈಗ ಬದಲಾಗುವದರ ಜೊತೆಗೆ ಆತನ ಬದುಕು ಕೂಡ ಬದಲಾಗಿದೆ. ಸುಲಲಿತವಾಗಿ ಅತನೀಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷ್ ಕೂಡ ಆತನ ಕೈ ಹಿಡಿದಿದೆ.  ಆತನ ಕೆಲಸಕ್ಕನುಗುಣವಾಗೆ ಭಡ್ತಿ ಪಡೆದು ಉನ್ನತ ಸ್ಥಾನಕ್ಕೇರಿ ಅದರ ಸವಿಯನ್ನು ಸವಿದಿದ್ದಾನೆ. ಬದುಕು ಬದಲಾಗಿದೆ ಜೊತೆಗೆ ಆತನ ಕುಟುಂಬವು ಉನ್ನತಿಗೇರಿದೆ.ಈಗಲೂ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಬರೀಯ ತನ್ನ ತಿಳಿವಿನ ಸಾಮರ್ಥ್ಯದಲ್ಲೆ ಬದುಕು ನಡೆಸುತಿದ್ದಾನೆ.ಎಂದಿಗು ವಿದ್ಯೆಯೊಂದೆ ಕೈ ಹಿಡೀಯೋದು ಎಂಬ ಸತ್ಯವನ್ನು ಮರೆತಿಲ್ಲ.ಸ್ವಾಭಿಮಾನಕ್ಕೆ ದಕ್ಕೆಯಾಗಬಲ್ಲುದು ಎಂಬಂತ ಯಾವುದೊ (ಆ ಘಟನೆ ಇಲ್ಲಿ ಅಪ್ರಸ್ತುತ) ಸನ್ನಿವೇಶ ಎದುರುಗೊಂಡಾಗ ನಿರ್ಭಿತಿಯಿಂದ ಮುಂದಿನ ದಾರಿ ಏನೆಂದು ತಿಳಿಯದಿದ್ದರೂ ಕೂಡ ರಾಜಿನಾಮೆ ಪತ್ರ ಮುಂದಿಟ್ಟು ಹೊರ ಬಂದು 7-8 ವರುಷಗಳೆ ಉರುಳಿದೆ. ಆತನ ಸ್ವಾವಲಂಬಿ ಇಚ್ಚಾಶಕ್ತಿ ಕೊರಗದೆ ಚಂದದ ಬದುಕು ನಡೆಸಲು ಇಂಬಾಗಿದೆ. ಆ ದಿನಗಳಲ್ಲೂ ಈ ದಿನಗಳಲ್ಲು ನೆಮ್ಮದಿಯಂತು ಇದ್ದೇ ಇದೆ. ಆದರೂ ಅದೊಂದು ಕೊರಗು……..ಋಣ ತೀರಿಸಲಾಗದಿದ್ದರು ಹಣ ತೀರಿಸೋಣ ಎಂದು ಆತನ ಕಾರ್ಪೊರೇಟ್ ಬದುಕಿನ ದೇವರು ಹೀರೇಶ್ ಶರ್ಮರನ್ನು ಹುಡುಕುತಿದ್ದಾನೆ.1500 ರೂ ದೊಡ್ಡ ಮೊತ್ತದ ಸಾಲವಿದೆ. ಅವರು ಅದೆಷ್ಟೊ ಪ್ರತಿಷ್ಟಿತ ಕಂಪೆನಿಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಜಗತ್ತಿನಿಂದಲೆ ದೂರಾಗಿದ್ದಾರೆ ಅನ್ನೊ ಸುದ್ದಿ…..!! ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುವ ಮಂದಿಗೆ ಹೀಗ್ಯಾಕಾಯ್ತು ಎಂದು ಊಹಿಸೋದು ಕಷ್ಟವೇನಲ್ಲ. ಬಹುಶಃ ಈ ದಿನಗಳಲ್ಲಿ ಮೇಲಿನ  ಘಟನೆಗಳು ನಾಟಕೀಯವಾಗಿ ಕಾಣಬಹುದು.ಒಂದು ವೇಳೆ ಮೇಲಿನ ಘಟನೆಗಳು ಆತನನ್ನು ಹೊರತು ಪಡಿಸಿ ಉಳಿದವರಿಗೆ ಹೋಲಿಕೆಯಾಗಿ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Utham Danihalli
8 years ago

Good article

krishnaveni. M.
krishnaveni. M.
8 years ago

very good  article.

Arpitha
Arpitha
8 years ago

Baraha saraagavagi oodisikonditu..
Olleya baravanige..

3
0
Would love your thoughts, please comment.x
()
x