ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜಿಪುಣಾಗ್ರೇಸರ
ಅಬರ್‌ಡೀನ್‌ವಾಸೀ ಜಿಪುಣನೊಬ್ಬ ಗಾಲ್ಫ್‌ ಕಲಿಯಲೋಸುಗ ಗಾಲ್ಫ್‌ಕ್ಲಬ್‌ನ ಸದಸ್ಯನಾದ. ಅವನು ಆಟವಾಡಲು ಉಪಯೋಗಿಸುವ ಚೆಂಡು ಬೇರೆ ಯಾರಿಗಾದರೂ ಸಿಕ್ಕಿದರೆ ಅವರು ಅದನ್ನು ಕ್ಲಬ್‌ನ ಕಛೇರಿಗೆ ತಲುಪಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಅದರ ಮೇಲೆ ಅವನ ಹೆಸರಿನ ಆದ್ಯಕ್ಷರಗಳನ್ನು.ಬರೆಯುವಂತೆ ತರಬೇತುದಾರ ಸೂಚಿಸಿದ. ಚೆಂಡು ಕಛೇರಿಗೆ ತಲುಪಿದರೆ ಅದನ್ನು ಕಛೇರಿಯ ಸಿಬ್ಬಂದಿಯಿಂದ ಆತ ಮರಳಿ ಪಡೆಯಬಹುದಾಗಿತ್ತು. ಈ ಸಲಹೆಯಲ್ಲಿ ಆಟ ಕಲಿಯಬಂದವನಿಗೆ ವಿಶೇಷ ಆಸಕ್ತಿ ಮೂಡಿತು. ಅವನು ತರಬೇತುದಾರನಿಗೆ ಹೇಳಿದ, “ಒಳ್ಳೆಯ ಸಲಹೆ. ನೀವೇ ಅದರ ಮೇಲೆ ನನ್ನ ಹೆಸರು ಆಂಗಸ್‌ ಮ್ಯಾಕ್‌ ಟ್ಯಾವಿಷ್‌ನ ಆದ್ಯಕ್ಷರಗಳಾದ ಎ ಎಮ್‌ ಟಿ ಅನ್ನು ಚೆಂಡಿನ ಮೇಲೆ  ಗೀರಿ ಗುರುತಿಸಿ.” ತರಬೇತುದಾರ ಅಂತೆಯೇ ಮಾಡಿದ. “ಓಹ್‌, ನಾನೊಬ್ಬ ವೈದ್ಯನಾದ್ದರಿಂದ ಅದರಲ್ಲಿ ಸ್ಥಳವಿದ್ದರೆ ಎಮ್‌ ಡಿ ಅಕ್ಷರಗಳನ್ನೂ ಬರೆಯಿರಿ.” ತರಬೇತುದಾರ ಅಂತೆಯೇ ಮಾಡಿದ. ಮ್ಯಾಕ್‌ ಟ್ಯಾವಿಷ್ ತನ್ನ ತಲೆಕೆರೆದುಕೊಂಡು ಹೇಳಿದ, “ಹಾಗೆಯೇ ಗಂಟೆ ೧೧.೩೦ ಇಂದ ೪ ರ ವರೆಗೆ ಎಂಬುದನ್ನೂ ಸೇರಿಸಿ ಬಿಡಿ!”

*****

೨. ಅಮ್ಮಂದಿರ ಸಂಭಾಷಣೆ 
ಇಬ್ಬರು ಅಮ್ಮಂದಿರು ತಮ್ಮ ಮಕ್ಕಳ ಕುರಿತು ಮಾತನಾಡುತ್ತಿದ್ದರು.
ಒಬ್ಬಳು ಕೇಳಿದಳು, “ಗುರುವಾಗಿ ನಿನ್ನ ಮಗ ಹೇಗೆ ಮುಂದುವರಿಯುತ್ತಿದ್ದಾನೆ?”
ಇನ್ನೊಬ್ಬಳು ಉತ್ತರಿಸಿದಳು, “ಬಲು ಚೆನ್ನಾಗಿ ಮುಂದುವರಿಯುತ್ತಿದ್ದಾನೆ. ಕೆಲವು ಹಳೆಯ ವಿದ್ಯಾರ್ಥಿಗಳನ್ನು ಕಳುಹಿಸಿದರೂ ತೊಂದರೆಯಾಗದಷ್ಟು ಮಂದಿ ವಿದ್ಯಾರ್ಥಿಗಳು ಈಗ ಇದ್ದಾರೆ.”
ಮೊದಲನೆಯವಳು ಹೇಳಿದಳು, “ಬಹಳ ಒಳ್ಳೆಯದು. ನನ್ನ ಮಗ ಎಷ್ಟು ಮುಂದುವರಿದಿದ್ದಾನೆಂದರೆ ತನ್ನ ಹತ್ತಿರ ಕಲಿಯಲು ಬಯಸಿ ಬರುವವರೆಲ್ಲರನ್ನೂ ಶಿಷ್ಯರನ್ನಾಗಿ ಸ್ವೀಕರಿಸಲು ಅವನಿಗೆ ಸಾಧ್ಯವಾಗುತ್ತಿಲ್ಲ”  

*****

೩. ಗುರುಗಳು ಹೇಳಬೇಕಾದದ್ದು
ಒಬ್ಬ ಗುರುಗಳು ಇನ್ನೊಬ್ಬ ಗುರುಗಳಿಗೆ ಹೇಳಿದರು, “ಸರಿಯೇ ತಪ್ಪೇ ಎಂಬುದನ್ನು ಪರೀಕ್ಷಿಸಿ ನೋಡಲಾಗದ್ದನ್ನೇ ಯಾವಾಗಲೂ ಹೇಳಬೇಕು.” “ಏಕೆ?” ಕೇಳಿದರು ಎರಡನೆಯ ಗುರುಗಳು. ಮೊದಲನೆಯವರು ವಿವರಿಸಿದರು, “ಏಕೆಂದರೆ, ’ಕುಜಗ್ರಹದಲ್ಲಿ ನಮ್ಮ ಜ್ಞಾನೇಂದ್ರಿಯಗಳಿಂದ ಗುರುತಿಸಲಾಗದ ಮಿಲಿಯಗಟ್ಟಲೆ ಜೀವಿಗಳು ಇದ್ದಾರೆ. ನಾನು ಅವರನ್ನು ಸಂಧಿಸಿದ್ದೇನೆ’ ಎಂಬುದಾಗಿ ನೀವು ಹೇಳಿದರೆ ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಅದಕ್ಕೆ ಬದಲಾಗಿ ’ಇದೊಂದು ಸುಂದರ ದಿನ’ ಎಂಬುದಾಗಿ ಹೇಳಿದರೆ  ಯಾರೋ ಒಬ್ಬ ಮೂರ್ಖ ’ನಿನ್ನೆಯಷ್ಟು ಸುಂದರವಾಗಿಲ್ಲ’ ಎಂಬುದಾಗಿ ಹೇಳಿಯೇ ಹೇಳುತ್ತಾನೆ. ’ಹಸಿ ಬಣ್ಣ’ ಎಂಬದಾಗಿ ಬರೆದ ಫಲಕ ಹಾಕಿದರೆ ಜನ ನಿಮ್ಮನ್ನು ನಂಬುತ್ತಾರೆ ಅಂದುಕೊಂಡಿರಾ? ಅಲ್ಲಿ ಆಗಿರುವ ಬೆರಳು ಗುರುತುಗಳನ್ನು ಗಮನಿಸಿದರೆ ತಿಳಿಯುತ್ತದೆ ಎಷ್ಟು ಕಮ್ಮಿ ಜನ ನಿಮ್ಮನ್ನು ನಂಬಿದರು ಎಂಬುದು.”

*****

೪. ಕಾಳಿಯ ದಯೆ 
ಭಾರತದಲ್ಲಿ ಹೇಳುವ ದಂತಕತೆ ಇದು. ಒಬ್ಬ ಗುರುವಿನ ಅನುಯಾಯಿ ಒಂದು ಸಂಜೆ ಕಾಡು-ಬಾತು ಬೇಟೆಗೆ ಹೊರಡುವ ಮುನ್ನ ಗುರುವಿನ ಆಶೀರ್ವಾದ ಪಡೆಯಲು ಹೋದ. ಆ ಗುರುವಾದರೋ ನಾಶದ ದೇವತೆ ಕಾಳಿಯನ್ನು ಸದಾ ಸ್ಮರಿಸುವ ತಾಂತ್ರಿಕ ವರ್ಗಕ್ಕೆ ಸೇರಿದವನಾಗಿದ್ದ. ಅನುಯಾಯಿಗೆ ಅವನ ಆಶೀರ್ವಾದವೇನೋ ಸಿಕ್ಕಿತಾದರೂ ಬೇಟೆಯಾಡಲು ಒಂದೇ ಒಂದು ಕಾಡು-ಬಾತು ಸಿಕ್ಕಲಿಲ್ಲ. ಮಾರನೆಯ ದಿನ ಅನುಯಾಯಿ ಗುರುವಿನ ಬಳಿಗೆ ಹೋದ. ಗುರುಗಳು ವಿಚಾರಿಸಿದರು, “ಬೇಟೆ ಹೇಗೆ ನಡೆಯಿತು. ಬಹು ಸಂಖ್ಯೆಯಲ್ಲಿ ಕಾಡು-ಬಾತುಗಳನ್ನು ನೀನು ಬೇಟೆಯಾಡಿರಬೇಕಲ್ಲವೇ?” ಅನುಯಾಯಿ ಉತ್ತರಿಸಿದ, “ಇಲ್ಲ. ಆದರೆ ಅಂತಾಗಲು ಕಾರಣ ನನ್ನ ಗುರಿಯ ದೋಷವಲ್ಲ, ತಾಯಿ ಕಾಳಿ ಪಕ್ಷಿಗಳಿಗೆ ಕರುಣೆ ತೋರಿಸಲು ನಿರ್ಧರಿಸಿದ್ದು.”

*****

೫. ಒಣಜಂಭ 
ವಿಜ್ಞಾನಿಯೊಬ್ಬ ತರ್ಕಶಾಸ್ತ್ರಜ್ಞನಿಗೆ ಹೇಳಿದ, “ಮೇಧಾವಿಗಳು ಅತಿಯಾಗಿ ಸರಳೀಕರಿಸುವ ಹಾಗು ಹೆಚ್ಚು ಮಾತನಾಡದ ಪ್ರವೃತ್ತಿಯವರಾಗಿದ್ದರೂ ಒಟ್ಟಾರೆಯಾಗಿ ಒಣಜಂಭ ಉಳ್ಳವರು ಎಂಬುದಾಗಿ ನಾನು ಸಂಖ್ಯಾಶಾಸ್ತ್ರೀಯವಾಗಿ ನಿರ್ಧರಿಸಿದ್ದೇನೆ.”
ತರ್ಕಶಾಸ್ತ್ರಜ್ಞ ಪ್ರತಿಕ್ರಿಯಿಸಿದ, “ಶುದ್ಧಾಂಗ ಸುಳ್ಳು. ಮೇಧಾವಿಗಳು – ಒಣಜಂಭ ಉಳ್ಳವರು ಹಾಗು ಶಬ್ದ ಬಾಹುಳ್ಯವಿಲ್ಲದವರೇ? ನನ್ನ ವಿಷಯವಾಗಿ ನೀನೇನು ಹೇಳುವೆ?”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x