ತಾಜ್ ಕಥೆ-ಆಗ್ರಾದ ವ್ಯಥೆ: ಅಖಿಲೇಶ್ ಚಿಪ್ಪಳಿ


1990ರ ಜೂನ್ ತಿಂಗಳ ಒಂದು ದಿನ ಮುಂಜಾವು. ಏರ್‍ಪೋರ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಿತನ ಹೀರೋಹೊಂಡ ಹತ್ತಿ ದೆಹಲಿಯಿಂದ ಆಗ್ರಾ ಹೊರೆಟೆವು. ಈಗ ನೋಡಿದರೆ ಅದೊಂದು ಹುಚ್ಚು ಸಾಹಸವಾಗಿತ್ತು. ಆಗ್ರಾಕ್ಕೆ ಹೋಗುತ್ತಿರುವ ಉದ್ಧೇಶ ಜಗತ್ಪಸಿದ್ಧ ತಾಜ್ ಮಹಲ್ ನೋಡುವುದಾಗಿತ್ತು. ಸುಮಾರು 400 ಕಿ.ಮಿ. ದೂರ ಪಯಣ. ಕೆಳಗಿನ ಕಪ್ಪು ಟಾರೋಡು ಸೂರ್ಯನ ಎಲ್ಲಾ ಶಾಖ ಹೀರಿಕೊಂಡು ನಿಗಿ ನಿಗಿ ಸುಡುತ್ತಿತ್ತು. ಜೊತೆಗೆ ಬಿಸಿಗಾಳಿ. ಬಹುಷ: ಆಗಿನ ವಯಸ್ಸು ಇಂತದೊಂದು ವಿಲಕ್ಷಣ ಸಾಹಸಕ್ಕೆ ಪ್ರೇರಪಿಸಿತೋ ಏನೋ?. ಆಗ್ರಾ ಎಷ್ಟೊತ್ತಿಗೆ ತಲುಪಿಯೇವು? ಎಷ್ಟೊತ್ತಿಗೆ ತಾಜ್ ದರ್ಶನ ಮಾಡಿಯೇವು ಎಂಬ ಹಪಹಪಿಯಿತ್ತು. 

ಆಗ್ರಾದ ಯಮುನೆಯ ತಟದಲ್ಲಿರುವ, ಉತ್ಕಟ ಪ್ರೇಮ ಮತ್ತು ಸೌಂಧರ್ಯದ ಪ್ರತೀಕವಾದ ತಾಜ್ ಮಹಲ್ ಯಾರಿಗೆ ಗೊತ್ತಿಲ್ಲ. ಭಾರತದ ಅತ್ಯುನ್ನತ ಶಿಲ್ಪಕಲೆಯ ಈ ಮಾದರಿ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು. ಹಾಗೆಯೇ ವಿಶ್ವಪಾರಂಪಾರಿಕ ತಾಣವೆಂದು ಗುರುತಿಸಲ್ಪಟ್ಟಿದೆ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬೇಟಿ ನೀಡುವ ತಾಜ್ ಮಹಲ್ ಶಿಥಿಲಗೊಳ್ಳುತ್ತಿದೆಯೇ? ಕಲುಷಿತ ವಾತಾವರಣವೇ ತಾಜ್ ಮಹಲ್‍ನ ಸೌಂಧರ್ಯವನ್ನು ಮುಕ್ಕುತ್ತಿದೆಯೇ? ಉತ್ತರ ನಿಶ್ಚಿತವಾಗಿ ಹೌದು. ಶಿಥಿಲಗೊಳ್ಳುತ್ತಿರುವ ತಾಜ್ ಮಹಲ್ ಕಥೆ ಕೇಳಿ.

ತಾಜ್ ಮಹಲ್ ನಿರ್ಮಿಸಿದ ನಾಲ್ಕೇ ವರ್ಷದಲ್ಲಿ ಗುಮ್ಮಟದಲ್ಲಿ ಸೋರಿಕೆ ಕಂಡು ಬಂತು ಎಂದು ಔರಂಗಜೇಬ್ ತನ್ನ ತಂದೆ ಹಾಗೂ ತಾಜ್ ಮಹಲ್‍ನ ಕತೃವಾದ ಷಹಜಾಹನ್‍ಗೆ ಬರೆದ ಪತ್ರದ ದಾಖಲೆ ಹೇಳುತ್ತದೆ. ನಂತರದಲ್ಲಿ ಅದನ್ನು ಸರಿಪಡಿಸಲಾಯಿತು. ಹೀಗೆ 1810ರಲ್ಲಿ, 1860, 1864 ಈ ಎಲ್ಲಾ ವರ್ಷಗಳಲ್ಲೂ ಪ್ರಾಕೃತಿಕ ಕಾರಣದಿಂದ ತೊಂದರೆಗೊಳಗಾದ ತಾಜ್ ಮಹಲನ್ನು ಕಾಲ-ಕಾಲಕ್ಕೆ ಸರಿಪಡಿಸಲಾಯಿತು. 1983ರಲ್ಲಿ ಯುನೆಸ್ಕೋ ತಾಜ್ ಮಹಲ್‍ನ್ನು ವಿಶ್ವಪಾರಂಪಾರಿಕ ಪಟ್ಟಿಯಲ್ಲಿ ಸೇರಿಸಿದ ಹೊತ್ತಿನಲ್ಲೇ ಆಗಿನ ಕೇಂದ್ರ ಸರ್ಕಾರ ತಾಜ್ ಸುತ್ತಲಿನ ಆಗ್ರಾ, ಮಥುರಾ, ಫಿರೋಜಾಬಾದ್, ಹತ್‍ರಸ್ ಮತ್ತು ಭರತ್‍ಪುರ್ ಜಿಲ್ಲೆಗಳ ಒಟ್ಟೂ 10,400 ಚದರ ಕಿಲೋಮೀಟರ್ ಪ್ರದೇಶವನ್ನು ಸಂರಕ್ಷಿತ ವಲಯವೆಂದು ಹೆಸರಿಸಿತು ಮತ್ತು ಈ ಭಾಗಗಳಲ್ಲಿರುವ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಈ ಸಂರಕ್ಷಿತ ವಲಯದಿಂದ ಹೊರಗಿಡಲು ತೀರ್ಮಾನಿಸಿತು.

ಮಾನವ ನಿರ್ಮಿತ ಮಾಲಿನ್ಯದ ಶುರುವಾಗಿದ್ದು 1973ರಲ್ಲಿ, ಮಥುರಾದಲ್ಲಿ ಪ್ರಾರಂಭಿಸಿದ ಮಥುರಾ ತೈಲ ಸಂಸ್ಕರಣಾ ಕೇಂದ್ರದಿಂದ ಉಂಟಾಗುವ ಮಾಲಿನ್ಯ ತಾಜ್‍ನ ಹೊಳಪನ್ನು ಕಡಿಮೆ ಮಾಡುವಲ್ಲಿ ನಾಂದಿ ಹಾಡಿತು. 1984ರಲ್ಲಿ ವಕೀಲರಾದ ಎಂ.ಸಿ.ಮೆಹ್ತಾ ಎಂಬುವವರು ತಾಜ್ ಸಂರಕ್ಷಣೆಯ ವಿಚಾರದಲ್ಲಿ ಮಥುರಾ ತೈಲ ಸಂಸ್ಕರಣಾ ಘಟಕವನ್ನು ಸ್ಥಳಾಂತರ ಮಾಡುವಂತೆ ಆದೇಶ ನೀಡಬೇಕೆಂದು ಸರ್ವೊಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದರು. ತಾಜ್ ರಕ್ಷಣೆ ಅಲ್ಲಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕರ್ತವ್ಯ ಹಾಗೂ ಈ ಬಗ್ಗೆ ಇದುವರೆಗೂ ಸರ್ವೋಚ್ಛ ನ್ಯಾಯಾಲಯ ಹಲವು ನಿರ್ದೇಶನಗಳನ್ನು ಈ ಕುರಿತು ನೀಡಿದೆ. ಉದಾಹರಣೆಯಾಗಿ 10,400 ಚ.ಕಿ.ಮೀ. ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಹಲವು ಗುಡಿ ಕೈಗಾರಿಕೆಗಳ ಶ್ರಮಿಕರಿಗೆ ಉರಿಸಲು ನೈಸರ್ಗಿಕ ಅನಿಲ ಸಿಲಿಂಡರ್‍ಗಳನ್ನು ಕಡಿಮೆ ಬೆಲೆಗೆ ನೀಡುವುದು ಎಂಬ ನಿರ್ದೇಶನ. ಈ ಪ್ರದೇಶದಲ್ಲಿ ಹಸಿರು ನಿರ್ಮಿಸುವುದು ಹಾಗೂ ಯಮುನಾ ನದಿಯ ಸ್ವಚ್ಛತೆಯ ಕುರಿತೂ ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದೆ.

ತಾಜ್ ಮಹಲ್ ಶಿಲೆಯ ಬಣ್ಣಗೆಡಿಸುವ ಮಾಲಿನ್ಯಗಳಾವವು? ಇದರ ಕುರಿತು ಅನೇಕ ವಿಜ್ಞಾನಿಗಳು, ತಜ್ಞರು, ವಿವಿಧ ಇಲಾಖೆಯ ಮುಖ್ಯಸ್ಥರು, ಸಂಶೋಧಕರು, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಘ-ಸಂಸ್ಥೆಗಳು, ಪ್ರತಿಷ್ಟಿತ ಐಐಟಿಯ ವಿಜ್ಞಾನಿಗಳು ಎಲ್ಲರೂ ಸೇರಿ, ತಾಜ್ ಶಿಲೆಯಲ್ಲಿನ ಹಾನಿಕಾರಕ ಅಂಶಗಳನ್ನು ಪತ್ತೆ ಮಾಡಿದವು. ಉತ್ತರಪ್ರದೇಶದ ನೇರಿ ಸಂಸ್ಥೆ ಬಣ್ಣಗೆಡಲು ಆಮ್ಲ ಮಳೆ ಕಾರಣ ಎಂದಿತು. ಅಲ್ಲಿರುವ ಒಟ್ಟೂ 292 ಕಾರ್ಖಾನೆಗಳಿಂದ ಹೊರಹೊಮ್ಮುವ ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಡೈಆಕ್ಸೈಡ್‍ಗಳೇ ಕಾರಣವೆಂದಿತು. ನೇರಿಯ ವರದಿಯನ್ನು ಆಧಾರವಾಗಿಟ್ಟುಕೊಂಡು ಸರ್ವೋಚ್ಛ ನ್ಯಾಯಾಲಯ ಎಲ್ಲಾ 292 ಕಾರ್ಖಾನೆಗಳನ್ನು ಸ್ಥಳಾಂತರಿಸಲು 1996ರಲ್ಲಿ ಆದೇಶ ನೀಡಿತು. ಹಾಗೆಯೇ 2001ರಲ್ಲಿ ಎಲ್ಲಾ ಕಾರ್ಖಾನೆಗಳನ್ನು ಸ್ಥಳಾಂತರಿಸಲಾಯಿತು. 

ಸೂಕ್ತವಾಗಿ ಮರುವಸತಿ ಕಲ್ಪಿಸದ ಕಾರಣಕ್ಕಾಗಿ 292 ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮತ್ತು ಅವರ ಮೇಲೆ ಅವಲಂಬಿತರಾದ ಕುಟುಂಬದವರು ಇಂದಿಗೂ ಅತಂತ್ರ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ. ದೇಶದ ಹೆಮ್ಮೆಯ ತಾಜ್ ಬಣ್ಣಗೆಡಲು ಕಾರಣ ಮೇಲೆ ಹೇಳಿದ ರಾಸಾಯನಿಕಗಳು ಅಲ್ಲ ಎಂಬುದು ನಂತರದಲ್ಲಿ ಮನವರಿಕೆಯಾಯಿತು. ಸಂಶೋಧಕರು ಹಾಗೂ ವಿಜಾÐನಿಗಳು ಇದಕ್ಕೆ ಬೇರೆ ಏನೋ ಕಾರಣವಿರಬೇಕು ಎಂದು ತರ್ಕಿಸಿದರು. ಈ ಮಧ್ಯೆ ತಾಜ್ ಮಹಲ್ ಬೇಟಿಗೆ ಬರುವವರ ಸಂಖ್ಯೆ ಅತಿಯಾಯಿತು. ವಾರಾಂತ್ಯದಲ್ಲಿ ಇದರ ಸಂಖ್ಯೆ 50 ಸಾವಿರ ತಲುಪಿತು. ವ್ಯಕ್ತಿಯ ದೇಹದಿಂದ ಹೊರಬರುವ ಬೆವರು ತಾಜ್ ಕಟ್ಟಡದಲ್ಲಿ ತೇವಾಂಶವನ್ನು ಹೆಚ್ಚು ಮಾಡುತ್ತಿದೆ ಎನ್ನಲಾಯಿತು. ಪ್ರವಾಸಿಗರ ಅನುಕೂಲಕ್ಕಾಗಿ ಅಭಿವೃದ್ಧಿ ಅನಿವಾರ್ಯವಾಗಿ, ರಸ್ತೆ ಅಗಲೀಕರಣ ಇತ್ಯಾದಿಗಳಿಗಾಗಿ ನಗರದ ಹಸಿರನ್ನು ಬೋಳಿಸಲಾಯಿತು. ಬೇಸಿಗೆಯಲ್ಲಿ ಆಗ್ರಾದ ಉಷ್ಣತೆ 49 ಡಿಗ್ರಿ ಸೆಲಿಸಿಯಸ್ ಮುಟ್ಟುತ್ತದೆ. ಪಕ್ಕದಲ್ಲೇ ರಾಜಸ್ಥಾನದ ಮರಳುಗಾಡಿದೆ. ಬೀಸುವ ಬಿಸಿಗಾಳಿ ಮರಳಿನ ಕಣಗಳನ್ನು ಹೊತ್ತು ತರುತ್ತದೆ. ಆ ಮರಳಿನ ಕಣಗಳು ಅಮೃತಶಿಲೆ ಅಪ್ಪಳಿಸುವುದರಿಂದ ಬಣ್ಣಗೆಡುತ್ತದೆ ಎಂದು ಕೆಲವರು ತರ್ಕಿಸಿದರು. ವಾಹನ ದಟ್ಟಣೆಯಿಂದ ತಾಜ್ ಮಹಲ್‍ನ ಸೌಂಧರ್ಯಕ್ಕೆ ಧಕ್ಕೆಯಾಗುತ್ತದೆ ಎಂದು 222 ಕೋಟಿ ರೂಪಾಯಿ ಖರ್ಚು ಮಾಡಿ ಬೈಪಾಸ್ ರಸ್ತೆ ನಿರ್ಮಿಸಲಾಯಿತು. ತಾಜ್ ಅಂದಗೆಡುತ್ತಲೇ ಇತ್ತು.
ಕುಂಬಳಕಾಯಿ ಕದ್ದವರ್ಯಾರು ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬ ಗಾದೆ ನಮ್ಮಲ್ಲಿ ಪ್ರಚಲಿತವಿದೆ. ಇದೇ ಕುಂಬಳಕಾಯಿ ಆಗ್ರಾದ ಶ್ರಮಿಕರನ್ನು ಬೀದಿಗೆ ತಂದು ನಿಲ್ಲಿಸಿತು. ತಾಜ್‍ನಷ್ಟೇ ಪ್ರಸಿದ್ಧವಾದ ಮತ್ತೊಂದೆಂದರೆ, ಅದು ಆಗ್ರಾ ಪೇಟಾ. ಈ ಪೇಟ ತಯಾರಿಸಲು ಕುಂಬಳಕಾಯಿ ಬೇಕು. ಹೀಗೆ ಆಗ್ರಾದಲ್ಲಿ ಪೇಟ ತಯಾರಿಸಿ ಜೀವನ ನಡೆಸುತ್ತಿರುವ ಒಂದು ಸಾವಿರ ಕುಟುಂಬಗಳಿವೆ. ಸರ್ಕಾರದ ಕಣ್ಣು ಇವರ ಮೇಲೆ ಬಿತ್ತು. ದಿನಕ್ಕೆ 5 ರಿಂದ 10 ಕೆ.ಜಿ. ಆಗ್ರಾ ಪೇಟ ತಯಾರಿಸುವ ಶ್ರಮಿಕರು ಬಳಸುವುದು, ಕಟ್ಟಿಗೆ ಮತ್ತು ಕಲ್ಲಿದ್ದಲು. ಇವೆರಡೂ ಕೂಡಾ ಇಂಗಾಲಾಮ್ಲವನ್ನು ಹೊರಹಾಕುತ್ತವೆ. ಅಂದಾಜು 5 ಟನ್ ಕಟ್ಟಿಗೆ ಮತ್ತು ನಾಲ್ಕೂಮುಕ್ಕಾಲು ಟನ್ ಕಲ್ಲಿದ್ದಲನ್ನು ದಿನಂಪ್ರತಿ ಬಳಸಲಾಗುತ್ತದೆ. ಇದರಿಂದ ಹೊರಬರುವ ಇಂಗಾಲವೇ ತಾಜ್‍ನ ಬಣ್ಣಗೆಡಲು ಕಾರಣವೆಂದು ತೀರ್ಮಾನಿಸಿದರು. ಇದೇ ಹೊತ್ತಿನಲ್ಲಿ ಸರ್ವೋಚ್ಛ ನ್ಯಾಯಾಲಯವೂ ಸ್ಥಳೀಯ ಸರ್ಕಾರಕ್ಕೆ ಪೇಟ ತಯಾರಿಸುವ ಶ್ರಮಿಕರಿಗೆ ವಿದ್ಯುಚ್ಛಕ್ತಿ ಅಥವಾ ಗ್ಯಾಸ್ ಸಿಲಿಂಡರ್ ಪೂರೈಸಿ ಎಂಬ ಆದೇಶ ನೀಡಿತು. ಸರ್ವೋಚ್ಛ ನ್ಯಾಯಾಲಯದ ಆದೇಶ ಜಾರಿಯಾಗಲೇ ಇಲ್ಲ. ತಿಂಗಳಿಗೆ 9 ಸಾವಿರ ದುಡಿದು ಕುಟುಂಬ ಸಾಕುತ್ತಿದ್ದ ಯಜಮಾನ, ಈಗ ಯಾರದ್ದೋ ಜಮೀನಿನಲ್ಲಿ ದಿನಗೂಲಿಗೆ ಹೋಗುತ್ತಿದ್ದಾನೆ, ಅದೂ ಬರೀ 2000 ಸಂಬಳಕ್ಕೆ. ಹೀಗೆ ಬೀದಿಗೆ ಬಿದ್ದ ಪೇಟ ತಯಾರಕರು, “ತಾಜ್ ಹಠಾವೋ, ಆಗ್ರಾ ಬಚಾವೋ” ಘೋಷಣೆ ಕೂಗಿದ್ದು ಇತಿಹಾಸದಲ್ಲಿ ದಾಖಲಾಯಿತು.

ಇಷ್ಟೆಲ್ಲಾ ಸುಧಾರಣೆಯಾದ ಮೇಲೆ ತಾಜ್ ಮಹಲ್ ಸೌಂಧರ್ಯ ಮರುಕಳಿಸಿತೇ ಎಂದು ಕೇಳಿದರೆ, ಇಲ್ಲಾ ಎಂದೇ ಹೇಳಬಹುದು. ಆಗ್ರಾ ಪಟ್ಟಣದಲ್ಲಿ 2002ರಲ್ಲಿ ಇದ್ದ ವಾಹನಗಳ ಸಂಖ್ಯೆ 3,26000 ಬರೀ ಹತ್ತೇ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿ 2013ರಲ್ಲಿ 9,15000ಕ್ಕೆ ಮುಟ್ಟಿತು. ತನ್ಮಧ್ಯೆ ಅಸಮರ್ಪಕ ವಿದ್ಯುತ್ ಪೂರೈಕೆಯ ಕಾರಣಕ್ಕಾಗಿ ಡೀಸೆಲ್ ಜನರೇಟರ್‍ಗಳ ಸಂಖ್ಯೆ 48,000ಕ್ಕೆ ಏರಿದ್ದು, ಇವುಗಳ ಬಳಕೆಯೂ ಮಿತಿಮೀರಿದ್ದರಿಂದ ಹೊಸ ಸಮಸ್ಯೆ ತಲೆದೋರಿದೆ. ಜೊತೆಗೆ ಸ್ಥಳೀಯರು ಆಹಾರ ಬೇಯಿಸಲಿಕ್ಕಾಗಿ ಸುಡುವ ಕಟ್ಟಿಗೆಯಿಂದಲೂ ಮಾಲಿನ್ಯ ಮಿತಿಮೀರುತ್ತಿದೆ. ಹಾಗೂ ಇಂಗಾಲಾಮ್ಲವೇ ತಾಜ್ ಸೌಂಧರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಇತ್ತೀಚಿಗೆ ಕಂಡುಕೊಂಡ ವಿಷಯವಾಗಿದೆ.

ಕೇಂದ್ರದಲ್ಲಿ ಹೊಸ ಸರ್ಕಾರ ಬಂದು ಸ್ವಚ್ಛ ಭಾರತ ಅಭಿಯಾನ ಶುರುವಾದಾಗಲೂ ತಾಜ್ ಸೌಂಧರ್ಯ ರಕ್ಷಣೆಯ ಕುರಿತು ಚರ್ಚೆ ನಡೆಯಿತು. ತಾಜ್‍ನ ಸೌಂಧರ್ಯ ಕಾಪಾಡಲು ಹೊಸ ಸರ್ಕಾರ ಬದ್ಧ ಎಂದು ಘೋಷಿಸಿತು. ಇದು ಒಂದು ತರಹ ಬೂಟಿನ ಒಳಗಿನ ಕಲ್ಲಿನಂತೆ ಆಗಿದೆ. ಕಲ್ಲನ್ನು ಹೊರಗೆ ತೆಗೆಯದೇ ಸಮಸ್ಯೆ ಬಗೆ ಹರಿಯುವುದಿಲ್ಲ. ತಾಜ್‍ನ ಶಾಶ್ವತ ರಕ್ಷಣೆ ಮಾಡಬೇಕೆಂದರೆ, ಅಲ್ಲಿನ ಜನ ಜೀವನದ ಮಟ್ಟ ಸುಧಾರಿಸಬೇಕು, ಜನರಲ್ಲಿ ಸಮಗ್ರವಾಗಿ ಪರಿಸರ ಕಾಳಜಿ ಮೂಡಬೇಕು, ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಬೇಕು. ಮುಖ್ಯವಾಗಿ ಶ್ರಮಿಕರ ಬಡತನ ದೂರವಾಗಬೇಕು. ನಿರಂತರ ವಿದ್ಯುತ್ ಪೂರೈಕೆ, ಸೌರವಾಹನಗಳ ಬಳಕೆ, ಯಮುನೆಯ ಶುದ್ಧಿಕರಣ ಇತ್ಯಾದಿಗಳಾಗಬೇಕು. ಇಡೀ ನಗರವನ್ನು ಮಾಲಿನ್ಯಮುಕ್ತವಾಗಿಸಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಇದೆಲ್ಲವನ್ನು ಜನರ ವಿಶ್ವಾಸಗಳಿಸುತ್ತಾ ಮಾಡಬೇಕು. ಕೇಂದ್ರ ಹಾಗೂ ರಾಜ್ಯಗಳ ನಡುವೆ ಸೌಹಾರ್ಧಯುತ ಸ್ನೇಹವಿರಬೇಕು. 

ತೀರದ ದಾಹವನ್ನು ನೀಗಿಸಿಕೊಳ್ಳಲು ಮಧ್ಯೆ ಬೈಕ್ ನಿಲ್ಲಿಸಿ, ನಿಂಬು-ಜೀರಾ ಪಾನಿ ಸೇವಿಸುವುದು. ಗಾಡಿಗಳಲ್ಲಿ ಮಾರುವ ತಂಪನೆಯ ನೀರಿಗೆ ನಾಲ್ಕಾಣೆ ತೆತ್ತು ಕುಡಿಯುವುದು, ಮಧ್ಯ ಸಿಕ್ಕ ಡಾಬಾವೊಂದರಲ್ಲಿ ದಾಲ್-ರೊಟ್ಟಿ ತಿಂದು, ಆಗ್ರಾ ತಲುಪುವಷ್ಟರಲ್ಲಿ ಸರಿಸುಮಾರು 4 ಗಂಟೆಯಾಗಿತ್ತು. ತಾಜ್ ಮುಟ್ಟುವಲ್ಲಿ 4.30ಯಾಗಿತ್ತು. ನಮ್ಮ ಕಲ್ಪನೆಯ ತಾಜ್ ಮಹಲ್ಲೇ ಚೆನ್ನಾಗಿತ್ತು. ವಾಸ್ತವದಲ್ಲಿ ಎಲ್ಲೆಲ್ಲೂ ಗಲೀಜು, ಕೆಟ್ಟ ವಾಸನೆ, ಪ್ಲಾಸ್ಟಿಕ್‍ಗಳ ಹಾವಳಿ. ಆಗಲೇ ಅನಿಸಿದ್ದು, ತಾಜ್ ಮಹಲ್ ನೋಡಲು ಬಂದು ತಪ್ಪು ಮಾಡಿದೆವು. ಹೀಗೆ ಆಗಲೇ ಆಗ್ರಾದಲ್ಲಿ ನಿರ್ವಹಣೆಯಿಲ್ಲದ ತಾಜ್‍ನ ಬಣ್ಣ ಮಾಸುತ್ತಿತ್ತು. ಇಂದಿಗೂ ಮುಂದುವರೆದಿದೆ.
ಮೇ 1-15 2015ರ ಡೌನ್ ಟು ಅರ್ಥ್ ಪತ್ರಿಕೆಯಲ್ಲಿ “ಶಾಡೋ ಓವರ್ ತಾಜ್” ಲೇಖನದ ಕೆಲವು ಭಾಗಗಳನ್ನು ಈ ಲೇಖನಕ್ಕೆ ಬಳಸಿಕೊಳ್ಳಲಾಗಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x