ಎಕ್ಸಟ್ರಾರ್ಡಿ-ನರಿ: ಅಮರ್ ದೀಪ್ ಪಿ.ಎಸ್.

ಅಲ್ಲೊಂದು ಮದುವೆ ನಡೀತಿರುತ್ತೆ. ಮಗಳ ಮದುವೆ ಮಾಡುವಾತ ಕೈಗುಣ ಚೆನ್ನಾಗಿದ್ದ ಅಡುಗೆ ಮಾಡುವವನನ್ನು  ಖುದ್ದಾಗಿ ಕರೆದು ಅಡುಗೆ ಮಾಡಲು ಹೇಳಿರುತ್ತಾನೆ.   ಪಾಪ, ಕುಕ್ಕು, ತನ್ನ ಪಾಡಿಗೆ ತಾನು ಮದುವೆಯ ಹಿಂದಿನ ದಿನವೇ ಬಂದು ಯಜಮಾನನನ್ನು ಕಂಡು ಅಂಗಿ ಕಳಚಿಟ್ಟು ಕೈಚಳಕದ ರುಚಿ ಜೋಡಿಸಲು ಕೆಲಸಕ್ಕೆ ಒಗ್ಗಿರುತ್ತಾನೆ.  ಮದುವೆ ಹಿಂದಿನ ದಿನ ಮತ್ತು ಮದುವೆ ದಿನ ಬಂದ ನೆಂಟರು, ಬಂಧುಗಳು, ಆಪ್ತರು, ಗೊತ್ತಿದ್ದವರು, ಗೊತ್ತಿಲ್ಲದವರೆಲ್ಲರೂ ಬಂದು ಸವಿದ ನಂತರ “ಅಡುಗೆ ಚೆನ್ನಾಗಿದೆ” ಅನ್ನುತ್ತಾರೆ. ಮದುವೆ ಮಾಡಿದ ಯಜಮಾನನಿಗೆ ಬಂದವರೆಲ್ಲರೂ ಖುಷಿಪಟ್ಟರಲ್ಲಾ? ಎನ್ನುವ ಹಿಗ್ಗು. ಕುಕ್ ಗೆ ತನ್ನ ಕೂಲಿ ಎಷ್ಟು ಹೇಳಬೇಕೆಂಬುದೇ ತಿಳಿಯದೇ “ನಿಮಗೆ ತಿಳಿದಷ್ಟು ಕೊಡಿ” ಅಂದುಬಿಡುತ್ತಾನೆ.  ಯಾಕೆಂದರೆ, ಅದುವರೆಗೂ ಅವನ ಕೈ ಅಡುಗೆ ರುಚಿ ಬೆಲೆ ಅವನಿಗೇ ಗೊತ್ತಿದ್ದಿಲ್ಲ.  ಆದರೆ, ಚೆಂದದ ಮದುವೆ ಮನೆಗೊಂದು ದೃಷ್ಟಿಗೊಂಬೆ ಇದ್ದಂತೆ, ಪ್ರತಿ ಕಾರ್ಯಕ್ರಮದಲ್ಲೂ ಒಂದೊಂದು “ಎಕ್ಸಟ್ರಾರ್ಡಿ-ನರಿ” ಮುಖವೊಂದು ಒಬ್ಬರಿಗಲ್ಲ ಒಬ್ಬರಿಗೆ ಕಂಡೇ ಇರುತ್ತದೆ.  

ಸಮಾರಂಭಕ್ಕೆ ಬಂದ ಗಂಜಿ ಬಟ್ಟೆ ಹಾಕಿ ಬರುವ ಮಂದಿಯನ್ನು ಕರೆತಂದು ಕೂರಿಸಿ ಸ್ಟೇಜ್ ಹತ್ತಿಸಿ, ಕೈ ಕುಲುಕಿಸಿ, ಫೋಟೋ ತೆಗೆಸಿ, ಶಾಸ್ತ್ರಕ್ಕೆ ತಟ್ಟೆ ಹಿಡಿದು ಎರಡು ತುತ್ತು ತಿಂದು “ಇನ್ನು ಆ ಸಮಾರಂಭ ಇದೆ, ಇನ್ನೂ ಇಷ್ಟೂ ಮದುವೆಗೆ ಹೋಗಬೇಕು, ಡೆಲಿಗೇಟ್ಸ್ ಮೀಟ್ ಮಾಡೋದಿದೆ” ಅಂತೆಲ್ಲಾ ದಾಟುವವರ ಮುಂದೆ ತಟ್ಟೆ ಹಿಡಿದು ಅವರವರಿಗೆ ಎಷ್ಟೆಷ್ಟು ಬೇಕೋ  ಅಷ್ಟನ್ನು ಹಾಕಿಸಿ ಕೊಟ್ಟು ಗಂಜಿ ಬಟ್ಟೆಯವರು ತಿನ್ನುವ ಮಧ್ಯೆ  ಏಲಕ್ಕಿ ಸಿಪ್ಪೆ ಸಿಕ್ಕರೂ ಸಾಕು.   ತಿನ್ನುವವರು ಅದನ್ನು ತಟ್ಟೆಯ ಒಂದು ಮೂಲೆಯಲ್ಲಿಟ್ಟು ತಿಂದು “ಠ್ಠಾ” ಅಂಥ ನಾಲಗೆ ಚಪ್ಪರಿಸಿ ಎದ್ದಿರುತ್ತಾರೆ.  ಆದರೆ, ಇದೊಂದು ಐಟಮ್ಮಿರುತ್ತದಲ್ಲಾ, “ಎಕ್ಸಟ್ರಾರ್ಡಿ-ನರಿ”? ಅಂಥವರನ್ನೆಲ್ಲಾ ಕಾರು ಹತ್ತಿಸಿದ್ದೇ ಬಂತು.   ತಿರುಗಿ ಮದುವೆ ಹಿಂದು ಮುಂದು ದಿನಗಳಲ್ಲಿ ಮಂದಿ ಎದುರಿಗೆ ದಿಗ್ಗದಿಗ್ಗ ಅಡ್ಡಾಡಿ, ಅವರ ಜೊತೆ ಹಲ್ಕಿರಿದು, ಫೋಟೋ ತೆಗೆಸಿಕೊಂಡು ನುಲಿದು “ಅಬ್ಬಾ,  ಅದೇನ್ ಪಾದ್ರಸದಂತೆ ಓಡಾಡಿ, ತಿರುಗಿ ಕೆಲ್ಸ ಮಾಡ್ತಾರೆ ಕಣ್ರೀ” ಅಂತೆಲ್ಲಾ ಕಂಡ(ಕಾಣದ)ವರಿಂದ “ಹೊ(ಉ)ಗಳಿಸಿ”ಕೊಂಡೇನೋ ಆಗಿರುತ್ತೆ.  ಆದರೆ,  ಒಂದೊಪ್ಪತ್ತೂ ಮದುವೆ ಮನೆ ಅಡುಗೆ ರುಚಿ ನೋಡಿರಲ್ಲ.  ಹಾಗಂತ, ಎಲ್ರೂ ಹಂಗಿರಲ್ಲ. ಆ ಮಾತು ಬ್ಯಾರೆ.  

ದುರಂತ ಅಂದ್ರೆ, ಯಜಮಾನರು ಮದುವೆ ಅಡುಗೆಗೆ ಕುಕ್ ಗೆ ಹೇಳಿದಾಗಲೇ “ಎಕ್ಸಟ್ರಾರ್ಡಿ-ನರಿ”ಗೆ ಗೊತ್ತಿರುತ್ತೆ.   ಆದರೆ, ಮದುವೆ ಮುಗಿದು  ಎಷ್ಟೋ ದಿನ ಆದ ಮೇಲೆ ದಾರಿಯಲ್ಲಿ ಸಿಕ್ಕಾಗ “ಒಯ್ ಕುಕ್ಕು ಮೊನ್ನೆ ‘ಯಜಮಾನ್ರ’ ಮನೆ ಮದ್ವೇಲಿ ನಿನ್ನ ಅಡುಗೆ ವಾಸ್ನೇನೇ ಇದ್ದಿಲ್ಲ” ಅನ್ನುತ್ತಾನೆ.  ಕುಕ್ ನ ಕರ್ಮ.   ಎಲ್ರೂ ಚಪ್ಪರಿಸಿ ತಿಂದು ಸೊರಕ್ಕಂತ ಬೆರಳು ನೆಕ್ಕಿ ಡೇಗಿ ಒಂದೇ ಒಂದ್ ಮಾತು ಹೇಳದೇ ಹೋಗಿದ್ದರೂ  ಬೇಜಾರಾಗಿದ್ದಿಲ್ಲ.  ಆದ್ರೆ, ಈ “ಎಕ್ಸಟ್ರಾರ್ಡಿ-ನರಿ” ಒಂದು ತುತ್ತೂ ತಿನ್ನದೇ ಅಂದ್ನಲ್ಲಾ?  ಎಲ್ಲಿಂದ ನಗಬೇಕೋ ಗೊತ್ತಾಗಲಿಲ್ಲ. ಒಂದು ವೇಳೆ ಅಡುಗೆ ರುಚಿಯಲ್ಲಿ ಉಪ್ಪಿಲ್ಲ, ಹುಳಿಯಿಲ್ಲ, ರುಚಿಯಿಲ್ಲ ಅಂತೆಲ್ಲಾ ಕಂಪ್ಲೇಂಟ್ಸ್ ಬಂದಿದ್ದೇ ನಿಜವಾಗಿದ್ದಲ್ಲಿ, ಮೊದಲು ಇಂಥ “ಎಕ್ಸಟ್ರಾರ್ಡಿ-ನರಿ” ಗಳೇ ಬಂದು ಅಡುಗೆಯವನನ್ನು ರುಬ್ಬುತ್ತಿದ್ದರು. 

ಇದು ಕೇವಲ ಒಂದು ಮದುವೆ, ಒಬ್ಬ ಅಡುಗೆಯವ, ಒಬ್ಬ ಯಜಮಾನನ ಅಥವಾ ಒಬ್ಬೇ ಒಬ್ಬ “ಎಕ್ಸಟ್ರಾರ್ಡಿ-ನರಿ” ಗೆ ಸಂಭಂಧಪಟ್ಟಂತೆ ಸಂಧರ್ಭ, ಸನ್ನಿವೇಶ ಮಾತ್ರವಲ್ಲ. ಬೇರೆ ಬೇರೆ ವಿಷಯ, ಜಾಗ, ಕಾರ್ಯಕ್ರಮ ಯಾವುದೇ ಆಗಿರಬಹುದು.  ಆದರೆ, ಒಂದು “ಎಕ್ಸಟ್ರಾರ್ಡಿ-ನರಿ” ಯಂಥ ಕ್ಯಾರೆಕ್ಟರ್ ಮಾತ್ರ ಕರೆಕ್ಟಾಗಿ ಅಡುಗೆ ಮಾಡುವವನ ಕಣ್ಣಿಗೆ ಬಿದ್ದಂತೆ ಕೆಲವರ ಕಣ್ಣಿಗೆ ಬಿದ್ದೇ ಬೀಳುತ್ತೆ. ಯಾವ ಥರಾ ಅಂತೇಳಿದರೆ, ಉದಾಹರಣೆಗೆ; ಶಾಲಾ ಮಕ್ಕಳಿಗೆ ‘ಕುಡಿತದ ದುಶ್ಚಟದಿಂದಾಗುವ ಪರಿಣಾಮಗಳು’ಎನ್ನುವ ವಿಷಯದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಭಾಷಣ ಮಾಡಿ ವೇದಿಕೆ ಇಳಿದ ನಂತರ ಆಯೋಜಕರನ್ನು ಸೈಡಿಗೆ ಕರೆದು ‘ಊಟದ್ ಅಷ್ಟೇನಾ, ಮತ್ತೇನಾದ್ರು “ವ್ಯವಸ್ಥೆ” ಇದ್ಯಾ?’ ಅಂತ ಸಣ್ಣಗೆ ಕೇಳೋರು.  ಒಂದೇ ಒಂದು ಲೀವ್ ಲೆಟರನ್ನು ಇಂಗ್ಲೀಷಿನಲ್ಲಿ ಬರೆದುಕೊಡೂ ಅಂದ್ರೂ ಬರೆಯೋಕೆ ಬರದೋನು ‘ಪ್ರೆಸಿಡೆಂಟ್ ಆಫ್ ಇಂಡಿಯಾಗೆ ಕಂಪ್ಲೇಂಟ್ ಕೊಡೋಕೂ ಹೇಸೋನಲ್ಲ’ ಅಂತ ಆವಾಜ್ ಹಾಕೋರು.  ಕಂಡವರ ಮದುವೆಯಲ್ಲಿ ಇನ್ಯಾರದೋ ಶೇರವಾನಿ ಹಾಕ್ಕೊಂಡು ಛತ್ರದ ತುಂಬಾ ತಿರುಗಾಡಿ ಬಡಿವಾರ ತೋರಿಸೋರು. ಇನ್ನೊಬ್ರು ತಮ್ಮ ಬ್ಲಾಗಿನಲ್ಲಿ ತಮ್ಮ ಸ್ವಂತ ಖುಷಿಗೆ ಬರೆದು ಖುಷಿಪಟ್ಟುಕೊಂಡ ಕವನ, ಬರಹ, ಲೇಖನಗಳನ್ನು ತಮ್ಮ ಹೆಸರು ನಮೂದಿಸಿ ಪ್ರಕಟಗೊಳಿಸಿ ಮೀಸೆ, ಬೆನ್ನಿನ ಕೆಳಭಾಗವನ್ನು ತಾವೇ ಚಪ್ಪರಿಸಿಕೊಳ್ಳುವವರು, ತಮ್ಮ ಸ್ವಂತ ಕಣ್ಣಿಂದ ನೋಡಿದರೂ ರುಜುವಾತಿಗೆ ಏನನ್ನಾದರು ದಾಖಲಿಸಿ ತೋರಿಸದೇ ಇತರರು ಕಂಡು ತೋರಿಸಿದ್ದನ್ನು ಹಂಗಲ್ಲ ಹಿಂಗೇ ಅಂತ ಹೀಗಳೆಯುವವರು, ಸ್ಟೇಜಿನ ಮೇಲೆ ಮಕ್ಕಳ ಓದಿಗೆ ಪ್ರೋತ್ಸಾಹದ ಮಾತನಾಡುವ ಪುಂಗವರು ಮನೆಯಲ್ಲೇ ಅಕ್ಷರ ವಿರೋಧಿಯಾಗಿರುವವರು.  ಹೀಗೇ… ಅದೇ ಥರಾ ಇದೂ ಒಂದು ಐಟಮ್ಮು.

ಪಾಪ, ಈ ಥರದ “ಎಕ್ಸಟ್ರಾರ್ಡಿ-ನರಿ” ಗಳಿಂದ ಯಾವುದೇ ಹಾನಿಯೇನೂ ಆಗುವುದಿಲ್ಲ.  ಆದ್ರೆ, ಅವರ ಪ್ರಸೆನ್ಸ್ ಎಲ್ಲೆಲ್ಲಿ ಇತ್ತು ಅನ್ನೋದನ್ನು ಮಾತ್ರ ತೋರಿಸೋ ಸಲುವಾಗಿ "……. ನರಿ"   ಗಳು ಈ ರೀತಿ ನಡೆದುಕೊಳ್ಳುತ್ತಾರೆ.  ಆದರೆ, ನಿಜವಾಗಿಯೂ ಒಬ್ಬರಿಗೆ ಕಿರಿಕ್ ಮಾಡಬೇಕೆನ್ನುವವರು, ಹಠ ಸಾಧಿಸುವವರು, ಹಗೆ, ಸೇಡು ತೀರಿಸಿಕೊಳ್ಳುವವರು, ತಣ್ಣನೆ ಕ್ರೌರ್ಯವುಳ್ಳವರು ಸೊಸೈಟಿಯಲ್ಲಿ ಒಂದೇ ಒಂದು ಲೂಸ್ ಟಾಕ್ ಮಾಡದೇ “ತಮ್ಮತನ” ಎಲ್ಲೂ ಬಿಟ್ಟುಕೊಡದೇ ವರ್ಷಗಳ ಕಾಲ ನಮ್ಮಗಳ ಮಧ್ಯೆಯೇ ಬದುಕಿರುತ್ತಾರೆ. ಬದುಕುತ್ತಿರುತ್ತಾರೆನ್ನುವುದೇ ಆಶ್ಚರ್ಯ. 

ನಮ್ಮ ಹೈಸ್ಕೂಲ್ ನಲ್ಲಿ  ಒಬ್ರು ಮೇಷ್ಟ್ರಿದ್ದರು.  ಪಾಠ ಮಾಡುವ ಮಧ್ಯೆ ಕೈ ಎತ್ತಿ ತೋರಿ ಎರಡು ಬೆರಳು ಮಧ್ಯೆ (ಉದಾಹರಣೆಗೆ) ಇಲ್ಲದ್ದನ್ನು ಹೇಳಿ  “ಇದನ್ನ .. . . . . . . . . ಅಂತ ತಿಳ್ಕಂಬಣಾ” ಅಂತ ಹೇಳ್ತಾ ಇದ್ದರು. ಇಲ್ಲೂ ಒಂದು ಸಂಗತಿ ಇದೆ.  ಅದನ್ನೂ ನಾವು ಇಲ್ಲಾ ಅಂದ್ಕಂಡ್ರೂ  “ಇದೇ ಅಂತಾನೇ ತಿಳ್ಕಂಬಣಾ”.  ಒಪ್ಗೇನಾ?  

ಒಬ್ಬ ಅರವತ್ತು ವಯಸ್ಸು ದಾಟಿದ ಮನುಷ್ಯ.  ಮನೆ ಕಡೆ ಆಸ್ತಿ, ಹೊಲ,ತೋಟ, ಸೈಟು, ನಾಲ್ಕು ನಾಲ್ಕು ಮನೆಗಳು, ಹೆಂಡತಿ, ಸಾಲು ಹೆಣ್ಣು ಮಕ್ಕಳು, ಅಳಿಯಂದಿರು ಒಬ್ನೇ ಒಬ್ಬ ಗಂಡು ಮಗ, ಎಲ್ಲಾ, ಎಲ್ಲಾ ಇದೆ.  ಸಧ್ಯಕ್ಕೆ ಹೆಂಡತಿ ಮತ್ತು ಮಗ ಮಾತ್ರ ಹಳ್ಳಿಯಲ್ಲಿರುತ್ತಾರೆ.  ವಯಸ್ಸಾದರೂ ಈ ಮನುಷ್ಯ  ಸಿಟಿಯ ಸೊಸೈಟಿಯಲ್ಲಿ ಒಂದು ರೆಕಗ್ನಿಷನ್ ಕಂಡುಕೊಂಡಿದ್ದಾನೆ.  ಆಗಾಗ ಹಳ್ಳಿ ಕಡೆ ಹೋಗಿ ಬಂದು ಮಾಡುತ್ತಾನೆ.  ಜಿಂಕೆಯ ಓಟ, ಆತನ ಓದು, ವಿದ್ಯೆ, ನೆನಪಿನ ಶಕ್ತಿ ಆಗಾಧ. ಒಂದು ವಿಷಯದ ಕುರಿತಾಗಿ, ಒಬ್ಬರ ಕಾನೂನು ಬಾಹಿರದ ಕೆಲಸ ವಿರೋಧಿಸುವ ಕೆಲಸವಾಗಿ ಕೋರ್ಟಿನ ಮೆಟ್ಟಿಲೇರಿದನೆಂದರೆ ಸಾಕು.   ಸಾಕಷ್ಟು ಮಟೀರಿಯಲ್ಲು ಸಮೇತ ಹಾಜರಾಗಿರುತ್ತಾನೆ.   ಕೇಸು ಗೆದ್ದಂತೆಯೇ ಸರಿ. ಹಾಗಂತ ಅವರು ವಕೀಲರೇನಲ್ಲ.

ಅಂಥಹ ಮನುಷ್ಯ ವೇದಿಕೆ ಮೇಲೆ ನಿಂತು ನಿರರ್ಗಳವಾಗಿ ಮಹಿಳೆಯರ ಬಗ್ಗೆ, ಸಂಭಂಧಗಳ ಕಾಳಜಿ, ಮಕ್ಕಳಿಗೆ ವಿದ್ಯೆ ಕೊಡಿಸುವ ಬಗ್ಗೆ ಮಾತನಾಡುತ್ತಿದ್ದರೆ, ಎಂಥವರೂ ಹೌದೌದೆನ್ನಬೇಕು.   ಅಂಥವರಿಬಗೊಬ್ಬ ಕರ್ಮಕ್ಕೆ ಆಪ್ತನೊಬ್ಬನಿದ್ದ.  ವಯಸ್ಸಿನಲ್ಲಿ ಆ ಹಿರಿಯನ ಅರ್ಧದಷ್ಟಿದ್ದರೂ ಅವರ ಸ್ನೇಹ ಚೆನ್ನಾಗೇ ಇತ್ತು. ಆ ಕಿರಿಯನಿಗೆ ಹಿರಿಯನ ಜೀವನ ಶೈಲಿ, ಪ್ರೆಸೆಂಟೇಷನ್ನು, ನಾಲೆಜ್, ಕಾನ್ಫಿಡೆನ್ಸ್ ಲೆವೆಲ್ಲು ಎಲ್ಲವೂ ಅಚ್ಚುಮೆಚ್ಚಾಗಿತ್ತು.  ಒಂದರೆಡು ವರ್ಷ ಹೀಗೇ ಅವರು ಒಡನಾಟದಿಂದಿದ್ದರು.    ಹೊರ ಜಗತ್ತಿಗೆ ಆ ಹಿರಿಯ ಒಂದೇ ಒಂದು ತಪ್ಪು ಕಾಣದಂತೆ ಬದುಕಿದ್ದನ್ನು ಕಿರಿಯ ಬಹುವಾಗಿ ಇಷ್ಟಪಟ್ಟು ಅಲ್ಲಲ್ಲಿ ಹೇಳಿಕೊಳ್ಳುತ್ತಿದ್ದ.

ಒಂದಿನ ಸ್ಥಿರ ದೂರವಾಣಿಯಿಂದ ಕರೆ ಬರುತ್ತದೆ.  ಈ ಕಡೆ ಕಿರಿಯ ಸ್ನೇಹಿತ.  ಆ ಕಡೆಯಿಂದ “ನಮಸ್ಕಾರ ಸರ್, ನಾನು ………………….  ಅವರ ಹೆಂಡ್ತಿ..  ಅದೇ ನಿಮ್ಮ “…………” ಸ್ನೇಹಿತ ಇದ್ದಾರಲ್ಲ? ಅವ್ರು ಮಿಸ್ಸೆಸ್ಸು..”  ಮಧ್ಯ ವಯಸ್ಕ ಹೆಂಗಸೊಬ್ಬರು ಮಾತನಾಡುತ್ತಿದ್ದರು.   ಕಿರಿಯನಿಗೆ ಆ ಗೃಹಿಣಿಯ ಪರಿಚಯವಿಲ್ಲ. ಮುಖ ನೋಡಿಲ್ಲ, ಎಂದೂ ಮಾತಾಡಿದವನಲ್ಲ.  ಆದರೂ “ಕಿರಿಯ”ನ ಹೆಸರು ವಿವರ ಎಲ್ಲಾ ಆತ್ಮೀಯವಿದ್ದಂತೆಯೇ ಹೇಳುತ್ತಿದ್ದಾರೆ.  “ಬಹುಶ: ‘……….’ ಯಾವಾಗಲೋ ಮಾತಿನಲ್ಲಿ  ನನ್ನ ಹೆಸರು ಪ್ರಸ್ತಾಪಿಸಿರಬೇಕು” ಅಂದ್ಕೊಳ್ತಾನೆ ಕಿರಿಯ.   ಮೊದಮೊದಲು ಕುಟುಂಬ, ಕೆಲಸ, ಮಕ್ಕಳ ಓದು ಹೀಗೇ ಶುರುವಾದ ಮಾತುಗಳು ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಕಿರಿಕಿರಿಗಳು, ನೋವು, ಸಂಕಟ, ಅಸಹಾಯಕತೆ ಎಲ್ಲವನ್ನೂ ಹೇಳಲು ಶುರು ಮಾಡಿದರು.  ಒಂದು ಕ್ಷಣ ಕಿರಿಯನಿಗೆ ಅನುಮಾನವುಂಟಾಯಿತು.  ಇನ್ನೊಮ್ಮೆ ಗೊತ್ತುಮಾಡಿಕೊಂಡ.  ಆತನ ಎಲ್ಲಾ ವಿವರಗಳನ್ನೂ ಆ ಗೃಹಿಣಿ ಪಕ್ಕಾ ಹೇಳುತ್ತಿದ್ದಾರೆ.  ಆದರೆ, ಕಿರಿಯನೆದುರಿಗೆ “ಈ ಕೌಟುಂಬಿಕ ದೌರ್ಜನ್ಯ”ದ ವಿವರಗಳನ್ನು ಯಾಕೆ ಹೇಳುತ್ತಿದ್ದಾರೋ ಗೊತ್ತಾಗಲಿಲ್ಲ.  ಸುಧಾರಿಸಿಕೊಂಡು ಆ ನೊಂದ ಗೃಹಿಣಿಯ ಮಾತುಗಳನ್ನು ಕಿರಿಯ ಕೇಳುತ್ತಲೇ ಇದ್ದ.    ಗೃಹಿಣಿ ಹೇಳುತ್ತಿದ್ದ ಒಂದೊಂದು ಪ್ರಸಂಗಗಳೂ ಎಂಥವರನ್ನೂ ಗಾಬರಿಯಾಗುವಂತೆ ಮಾಡುತ್ತಿದ್ದವು.  ಬಹುಶ: ಒಬ್ಬ ಆಗುಂತಕನ ಎದುರಿಗೆ ಒಬ್ಬ ಗೃಹಿಣಿ ಇಷ್ಟೆಲ್ಲಾ “ತೀರಾ ಪೆಟ್ಟು ತಿಂದ ವೈಯುಕ್ತಿಕ ವಿಚಾರ” ಗಳನ್ನು ಹೇಳಿ ಅತ್ತಿತ್ತು ಕೇಳಿದರೆ ಅಚ್ಚರಿಗಿಂತ ಹೆಚ್ಚಾಗಿ ಅಸಹ್ಯ ಮೂಡುತ್ತದೆ.   ಆ ಗೃಹಿಣಿ ಬಗ್ಗೆ ಅಲ್ಲ.  ಆಕೆಯ  ಗಂಡನ ಬಗ್ಗೆ.  ಆತ ಬೇರಾರೂ ಅಲ್ಲ.  ಕಿರಿಯನ ಅಚ್ಚುಮೆಚ್ಚಿನ “ಹಿರಿಯ”.   

ಕಿರಿಯನಿಗೆ ಈ ರೀತಿ ಹಲವು ಬಾರಿ ದೂರವಾಣಿ ಕರೆ ಬಂದವು.  ಅದೊಮ್ಮೆ, ಆ ಗೃಹಿಣಿ ಮತ್ತು ಆಕೆಯ ಮಗ ಇಬ್ಬರೂ “ಹಿರಿಯ” ನ ದೌರ್ಜನ್ಯವನ್ನು ಸಹಿಸದೇ “ಆತ್ಮಹತ್ಯೆಯೋ”?  “ವಿಚ್ಛೇದನವೋ” ? ಇಲ್ಲ ಕೌಟುಂಬಿಕ ದೌರ್ಜನ್ಯದ ಕಾನೂನಿನ ಅಡಿ ದೂರು ಕೊಡುವುದೋ ತಿಳಿಯದೇ ಗೊಂದಲದಲ್ಲಿದ್ದರು. 

ಕಿರಿಯನೇನೂ ಅಸಾಧ್ಯ ಬುದ್ಧಿವಂತನಲ್ಲ. ಇಂಗ್ಲೀಷು ಗೊತ್ತಿಲ್ಲ. ಇಂಜನೀಯರಿಂಗೂ ಗೊತ್ತಿಲ್ಲ.  ಇನ್ನು ಟೆಕ್ನಾಲಜಿ ಬಗೆಗಿನ ಮಾತು, ಕಾಂಪಿಟೇಷನ್ನಿನ ಲೈಫು.. ಊಹೂಂ…..  ಜನ್ಮತ: ಅನುಭವಿಸಿದವನಲ್ಲ…   ಆದರೆ, ಅವನಲ್ಲಿತ್ತಲ್ಲ?   ಆ ಸಾಮಾನ್ಯ ಜ್ಞಾನ?  ಅದು ಆ ಎಲ್ಲಾ ದೂರವಾಣಿ ಸಂಭಾಷಣೆಯ ಮಾತುಗಳಿಗೆ ಪರಿಹಾರವಾಗಿ ಲಭ್ಯವಾಯಿತು……….

(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Sridevi
Sridevi
9 years ago

ಕಿರಿಯನೇನೂ ಅಸಾಧ್ಯ ಬುದ್ಧಿವಂತನಲ್ಲ.
ಇಂಗ್ಲೀಷು ಗೊತ್ತಿಲ್ಲ. ಇಂಜನೀಯರಿಂಗೂ ಗೊತ್ತಿಲ್ಲ. 

ಆದರೆ ಅವರ ಸಹಜ ಸ್ನೇಹ ಗುಣ ಅವರ ಮುಖ ನೋಡದೆಯೂ

ಅವರನ್ನು ನಂಬಬಹುದೆಂಬ ವಿಶ್ವಾಸ ಕಿರಿಯವನೊಡನೆ ಮಾತನಾಡಿದ ಪ್ರತಿಯೊಬ್ಬರಿಗೂ ಬರುತ್ತದೆ

 

Dr. Kotraswamy M
Dr. Kotraswamy M
9 years ago

Extra Ordi-'Nari' 'Transformation' Amar! 

2
0
Would love your thoughts, please comment.x
()
x