ಕವಿಮನೆ: ಶಂಕರಾನಂದ ಹೆಚ್. ಕೆ., ಶೋಭಾ ಶಂಕರಾನಂದ

ಮರೆಯಲು ಸಾಧ್ಯವೇ? ಆ ಕ್ಷಣ…… ..

’ಓ ನನ್ನ ಚೇತನ ಆಗು ನೀ ಅನಿಕೇತನ’  ’ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ’  ’ಸತ್ತಂತೆ ಬದುಕುವುದಕ್ಕಿಂತ ಸತ್ತು ಬದುಕುವುದು ಲೇಸು’ ಹೀಗೆ ಹತ್ತು ಹಲವು ಸಾಲುಗಳಿಗೆ ಜೀವ ತುಂಬಿರುವ ಕಲ್ಲುಗಳು ಹಾಗೂ ಫಲಕಗಳನ್ನು ನೋಡುವ ಭಾಗ್ಯ ಒಂದು ದಿನ ನನ್ನದಾಗುವುದು ಎಂದು ನಾನು ಊಹಿಸಿರಲಿಲ್ಲ. ನಮ್ಮ ನಾಡಿನ ಮಹಾನ್ ಕವಿ ಡಾ!! ಕುವೆಂಪು ರವರ ಜನ್ಮ ಸ್ಥಳ, ಕುಪ್ಪಳ್ಳಿಗೆ ಹೋಗಬೆಕೆನ್ನುವ ತುಡಿತ ನನ್ನನ್ನು ಬಹುದಿನಗಳಿಂದ ಕಾಡುತ್ತಿದ್ದುದು ನಿಜ. ಆ ದಿನ ಬಂದೇ ಬಿಟ್ಟಿತು. 

ಅಂದು ದಾರಿಯುದ್ದಕ್ಕೂ ಕುಪ್ಪಳ್ಳಿ ಎಷ್ಟು ದೂರ ಇದೆ ಎಂದು ತೋರಿಸುವ  ಮೈಲಿಗಲ್ಲುಗಳನ್ನು ಒಂದೊಂದಾಗಿ ಹಿಂದೆ ಹಾಕುತ್ತಾ ಹೊರಟೆವು. ಮೈಲಿಗಲ್ಲಿನ ಸಂಖ್ಯೆ ಇಳಿಮುಖವಾದಂತೆಲ್ಲಾ ಎನೋ ಒಂಥರಾ ರೋಮಾಂಚನ. ನಿಜಕ್ಕೂ ಅದು ಮರೆಯಲಾಗದ ಅನುಭವ. ಮುಂದೆ ಸಾಗುತ್ತಿದ್ದಂತೆ ಒಂದು ಕಡೆ ’ಕವಿಶೈಲ’ದ ದಾರಿ ಸೂಚಿಸುವ ಫಲಕ ಇನ್ನೊಂದೆಡೆ ’ಕವಿಮನೆ’ಗೆ ದಾರಿ ಎನ್ನುವ ಫಲಕ. ಈ ಫಲಕಗಳನ್ನು ನೋಡಿದಾಕ್ಷಣವಂತೂ ಹೃದಯದ ಬಡಿತ ಇನ್ನಷ್ಟು ತೀವ್ರವಾಯಿತು. 

ಆ ಮಹಾಕವಿಯ ಮನೆಯ ಮುಂದೆ ಕಾರಿನಿಂದಿಳಿದು ಅವರು ನಡೆದಾಡಿದ ಭೂಮಿಯ ಸ್ಪರ್ಶ ಮಾಡಿದ ಮರುಕ್ಷಣ ಮೈಯ್ಯಲ್ಲಿ ಮಿಂಚಿನ ಸಂಚಾರ. ನನಗರಿವಿಲ್ಲದೆಯೇ ಆ ಪವಿತ್ರವಾದ ನೆಲಕ್ಕೆ ಕೈ ಮುಟ್ಟಿ ನಮಸ್ಕರಿಸಿ ಮುಂದೆ ನಡೆದೆ. ಮುನ್ನಡೆದಂತೆ ನಮಗೆದುರಾದದ್ದು ಕಲ್ಲಿನಲ್ಲಿ ಕೆತ್ತಿದ ’ಕವಿಶೈಲ’ದ ಎರಡು ಸಾಲುಗಳು ಹಾಗು ’ನನ್ನ ಮನೆ’ ಶೀರ್ಷಿಕೆಯ ಕವನ. ಓದುತ್ತಿದ್ದಂತೆ ಮತ್ತೊಮ್ಮೆ ಮೈ ಪುಳಕಗೊಂಡಿತ್ತು. ನಂತರ ಕವಿಮನೆಯ ಬಾಗಿಲಿಗೆ ಬಂದಾಕ್ಷಣ ಅವರೇ ಬರೆದ ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಎನ್ನುವ ಸಾಲು ನೆನಪಾಗಿ ನಮಸ್ಕರಿಸಿ ಒಳಗೆ ಕಾಲಿಟ್ಟ ತಕ್ಷಣ ಎನೋ ತಲ್ಲಣ, ನನಗರಿವಿಲ್ಲದಂತೆ ಕಣ್ಣಂಚಲ್ಲಿ ಎರಡು ಹನಿ. 

ಕವಿಮನೆಯ ತುಂಬಾ ಓಡಾಡುವಾಗ ಅದೇನೋ ಭಾವಪರವಶತೆಯ ಅನುಭವ. ನನ್ನ ಜೀವನದಲ್ಲಿ ಇಂತಹ ಅನುಭವವಾಗಿದ್ದು ಇದೇ ಮೊದಲು. ಆ ಕ್ಷಣವನ್ನು ಅನುಭವಿಸಿದಾಗಲೇ ತಿಳಿಯತ್ತದೆಯೇ ಹೊರತು ವರ್ಣಿಸಲಸಾಧ್ಯ. ಕವಿಮನೆಯಿಂದ ಅವರೇ ನಾಮಕರಣ ಮಾಡಿದ, ದಕ್ಷಿಣ ದಿಕ್ಕಿಗಿರುವ ’ಕವಿಶೈಲ’ಕ್ಕೆ ಹೋದಾಗಲಂತೂ ಇನ್ನೂ ಅದ್ಭುತ ಅನುಭವ. ಮತ್ತೊಮ್ಮೆ ಅವರದೇ ಸಾಲುಗಳಾದ ಕಲೆಯ ಕಣ್ಣಿಲ್ಲದವರಿಗೆ ಕವಿಶೈಲ ಒಂದು ಕಲ್ಲುಕಾಡು. ಕಲಾವಂತನಿಗೆ ಅದು ಸಗ್ಗವೀಡು ಎನ್ನುವುದು ಅಕ್ಷರ ಸಹ ನಿಜವೆನಿಸಿತು. ಅಲ್ಲಿಂದ ಕಾಣುವ ರಮಣೀಯ ದೃಶ್ಯ ಮತ್ತಷ್ಟು ರೋಮಾಂಚನ ಉಂಟುಮಾಡಿತ್ತು.

ಒಟ್ಟಾರೆ ಅಂದಿನ ನನ್ನ ಅನುಭವಕ್ಕೆ ಪದಗಳೇ ಸಾಲದು. ಎನೋ ಒಂಥರ ಸಾರ್ಥಕತೆ, ಪರಿಪೂರ್ಣತೆ, ಮಾನಸಿಕ ಸಂತೃಪ್ತಿ. ನನ್ನ ಜೀವನದಲ್ಲಿ ಅತಿ ಪ್ರಮುಖವಾದ ಹಾಗು ಮರೆಯಲಾಗದ ದಿನ (ಕ್ಷಣ..) ಇದುವೆ ಎನ್ನುವ ಭಾವ ಈಗಲೂ ನನ್ನೆದೆಯಲ್ಲಿದೆ. ಒಂದಂತೂ ನಿಜ: ಮಾನವನಾಗಿ ಹುಟ್ಟಿದ ಮೇಲೆ ಒಂದು ಸಾರಿ ’ಕವಿಮನೆ’ ’ಕವಿಶೈಲ’ ನೋಡಲೇಬೇಕು.

-ಹೆಚ್. ಕೆ. ಶಂಕರಾನಂದ

******

ಕವಿಮನೆ-ಮನದಂಗಳದಿ


  ’ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ 
 ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’ 
   

ಎನ್ನುವ ರಸಋಷಿಯ ಈ ಕವನದ ಸಾಲುಗಳು ಅಕ್ಷರಷಃ ನಿಜ ಎನಿಸಿತ್ತು ಆ ದಿನ. ಮೂಡಬಿದಿರೆಯಲ್ಲಿ ಓದುತ್ತಿರುವ ಮಗಳನ್ನು ಮಾತನಾಡಿಸಿಕೊಂಡು ಬರುವಾಗ, ದಾರಿಯಲ್ಲಿ ತೀರ್ಥಹಳ್ಳಿಯ ವೃತ್ತದಿಂದ ಬಲಕ್ಕೆ ತಿರುಗಿದರೆ ಕುಪ್ಪಳ್ಳಿ ಬರುತ್ತz. ಪ್ರತೀಬಾರಿಯು ಸಮಯದ ಅಭಾವದಿಂದ ತಪ್ಪಿ ಹೋಗುತ್ತಿದ್ದ ನಮ್ಮ ಹೆಬ್ಬಯಕೆ ಈ ಬಾರಿ ನೆರವೇರಿತು. ಅಂದು ನನ್ನ ಯಜಮಾನರು, ಮಗ ಹಾಗು ಸ್ನೇಹಿತೆ ರೇಖಾ ಅವರೊಂದಿಗೆ ಮರೆಯಲಾಗದ ಒಂದು ಚಿಕ್ಕ ಪ್ರವಾಸವಾಗಿತ್ತು.

 ’ಕವಿಮನೆ’ಯ ಅಂಗಳಕ್ಕೆ ಕಾಲಿಟ್ಟ ಘಳಿಗೆಯೊಂದು ಅದ್ಭುತವಾದ ಮತ್ತು ಅವಿಸ್ಮರಣೀಯ ಅನುಭೂತಿ. ವಿಶ್ವಮಾನತೆಯ ಮಂತ್ರವ ಬೋಧಿಸಿದ ಹೆಮ್ಮೆಯ ರಾಷ್ಟ್ರಕವಿಯ ಹೆಜ್ಜೆಯ ಅನುಭಾವ ನಮ್ಮೊಳಗೆ. ಅಂಥಹಾ ಮಹಾಕವಿ ನಡೆದಾಡಿದ ದಾರಿಯಲ್ಲಿ ನಮ್ಮ ಹೆಜ್ಜೆ ಇಡಲು ಎಂಥದೋ ಅಳುಕು. ಆದರೂ ಕವಿಮನೆಯ ಇಂಚು ಇಂಚನ್ನು ಮನದಣಿಯೆ ನೋಡಿ ಕಣ್ತುಂಬಿಸಿಕೊಳ್ಳುವ ತೀವ್ರ ಹಂಬಲದೊಂದಿಗೆ ಮೊದಲ ಹೆಜ್ಜೆ ಇಡುವ ಮುನ್ನ ಪುಣ್ಯಭೂಮಿಯನ್ನು ಕಣ್ಣಿಗೊತ್ತಿಕೊಂಡು ನಡೆದೆವು. 

ಕವಿಮನೆಯ ಹೆಬ್ಬಾಗಿಲ ಹೊಸ್ತಿಲು ದಾಟಿದಾಕ್ಷಣ ಅನಿರ್ವಚನೀಯ ಅನಂದ. ಪುಟ್ಟ ಕೋಟೆಯಂತಿರುವ ಹೆಮ್ಮನೆ ಅಂದರೆ ವಿಶಾಲವಾದ ದೊಡ್ಡ ಚೌಕಿಮನೆ. ಮಾತಿಗೆ ನಿಲುಕದ ಮೌನ ಮನೆಯ ದಿವ್ಯತೆಗೆ ಸಾಕ್ಷಿಯಾಗಿತ್ತು. ಮನೆಯ ತಂಬೆಲ್ಲಾ ಕವಿಯ ಕವನಗಳ ಗಾಯನ ಇಂಪಾಗಿ ಅನುರಣಿಸುತ್ತಿತ್ತು. ಎದುರಿಗೆ ಸುಂದರವಾದ ಕವಿಯ ಮದುವೆಯ ಮಂಟಪ ಕಾಣಿಸಿತು ಅದರ ಪಕ್ಕದಲ್ಲಿ ಗೋಡೆಯ ಮೇಲೆ ಅಮಂತ್ರಣ ಪತ್ರಿಕೆ ತೂಗು ಹಾಕಲಾಗಿದೆ. ಜೊತೆಗೆ ಅವರು ಧರಿಸುತಿದ್ದ ಕೋಟು, ಟೋಪಿಯನ್ನೂ ಕಾಣಬಹುದು. ನಂತರ ಸ್ವಲ್ಪ ಒಳಗೆ ನಡೆದರೆ ದೊಡ್ಡದಾದ ಅಡಿಗೆ ಮನೆ. ದಾಟಿ ಒಳಗೆ ಹೋದರೆ ಬಾಣಂತಿ ಕೊಠಡಿ. ಇನ್ನೊಂದು ಕೋಣೆಯಲ್ಲಿ ತಮ್ಮ ಪ್ರೀತಿಯ ಬಾಳಸಂಗಾತಿ ಹೇಮಾವತಿ, ಮಕ್ಕಳಾದ ಪೂರ್ಣಚಂದ್ರತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಹಾಗು ಇವರೆಲ್ಲರ ಕುಟುಂಬ ಮತ್ತು ಮೊಮ್ಮಕ್ಕಳೊಂದಿಗೆ ಕವಿ ಫೋಟೋದಲ್ಲಿ ಸೆರೆಯಾಗಿರುವ ದೃಶ್ಯಗಳು ಕಣ್ಮನ ಸೆಳೆದವು. ಕವಿಯ ಹಾಡುಗಳಿಗೆ ಜೀವ ತಂಬಿ ಹಾಡಿರುವ ಇಂಪಾದ ಹಾಡುಗಳನ್ನು ಕೇಳುತ್ತಾ ಮಂತ್ರಮುಗ್ಧರಾಗಿ ಮೊದಲ ಮಹಡಿ ಏರಿದೆವು.

ಅಲ್ಲಿ ಅವರಿಗೆ ಲಭಿಸಿದ ಅಗಣಿತ ಪ್ರಶಸ್ತಿಗಳನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಪ್ರಶಸ್ತಿಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಗಳಾಗಿವೆ. ಜೊತೆಗೆ ಉಪಯೋಗಿಸಿದ ಸ್ವೆಟರ್, ಕೋಲು, ಕರವಸ್ತ್ರ ,ಕನ್ನಡಕ, ಅವರ ಹಿರಿತನಕ್ಕೆ ಸಾಕ್ಷಿಯಾದ ಬಂಗಾರದ ವರ್ಣದ ಗುಂಗುರು ಕೂದಲು ಇತ್ಯಾದಿ ಎಲ್ಲವನ್ನು ಜೋಪಾನ ಮಾಡಿದ್ದಾರೆ. ಪ್ರಶಸ್ತಿಗಳನ್ನು ಅತ್ಯಂತ ಹೆಮ್ಮೆಯಿಂದ ಓದಿ ಇನ್ನೊಂದು ಮಹಡಿ ಹತ್ತಿದೆವು.

ಅಲ್ಲಿ ನಮಗಾಗಿ ಒಂದು ಸಾರಸ್ವತ ಲೋಕವೇ ಕಾದಿತ್ತು. ಚೇತನದ ಕವಿಯ ಪ್ರತಿಯೊದು ಕೃತಿಗಳ ಪರಿಚಯವಾಯಿತು. ಅದರಲ್ಲೂ ಸುಮಾರು ಹತ್ತು ವರ್ಷದ ಪರಿಶ್ರಮದ ರಚನೆಯ ’ಶ್ರೀ ರಾಮಾಯಣ ದರ್ಶನಂ’ ಮೇರುಕೃತಿಯ ಮೊದಲ ಪುಟದ ಮುತ್ತಿನಂಥಾ ಅಕ್ಷರಗಳು ದಾರ್ಶನಿಕ ಕವಿಯನ್ನು ಇಂದಿಗೂ ಜೀವಂತಗೊಳಿಸಿವೆ. ಕವನ ಸಂಕಲನಗಳು, ಕಾದಂಬರಿಗಳು, ಕಾವ್ಯಮೀಮಾಂಸೆ, ಸಾಹಿತ್ಯವಿಮರ್ಶೆ, ಭಾಷಣ, ಪತ್ರಗಳು, ಜೀವನಚರಿತ್ರೆ, ಆತ್ಮಚರಿತ್ರೆ,  ಭಾಷಾಂತರ ಕೃತಿಗಳು, ಮಹಾಕಾವ್ಯ, ಖಂಡಕಾವ್ಯ, ನಾಟಕಗಳು ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಬರೆಯದ ಸಾಹಿತ್ಯ ಪ್ರಕಾರವಿಲ್ಲ ಎನಿಸಿತು. ಅಲ್ಲಿಂದ ಕೆಳಗಿಳಿದು ಬಂದು ಅಲ್ಲಿ ಇಟ್ಟಿದ್ದ ಅನಿಸಿಕೆ ಪುಸ್ತಕದಲ್ಲಿ ನಮ್ಮ ಮನಸಿನ ಮಾತುಗಳನ್ನು ಬರೆದು ಹೊರ ಬಂದೆವು

 ಕವಿ-ಮನೆಯಿಂದ ನಾವು ಬಂದದ್ದು ಕವಿ-ಮನದಂತಿರುವ ಕವಿಶೈಲಕ್ಕೆ. ಇದು ಋಷಿಕವಿಯ ಕಾವ್ಯರಚನೆಗೆ ಸ್ಪೂರ್ತಿ ತುಂಬಿದ ಸ್ಥಳ. ಪ್ರಕೃತಿ ಮಾತೆಯ ಮಡಿಲಲ್ಲಿ ಒಂದು ಬಂಡೆಯ ಮೇಲೆ ಕುಳಿತು ಗುಣಗಾತ್ರಗಳೆರಡರಲ್ಲೂ ಮೇರುಸದೃಶ್ಯ ಅಮರಸಾಹಿತ್ಯ ಕೃತಿಗಳಿಗೆ ಅಕ್ಷರರೂಪ ಕೊಟ್ಟ ಪವಿತ್ರ ಸ್ಥಳವಿದು. ಸ್ವತಃ ಕವಿ ಪುಟ್ಟಪ್ಪ ಆ ಸ್ಥಳಕ್ಕೆ ನಾಮಕರಣ ಮಾಡಿದ್ದಾರೆ. ಕವಿಶೈಲದ ಜೊತೆ ಅವರಿಗೆ ಅನನ್ಯವಾದ ಭಾವನಾತ್ಮಕ ಸಂಬಂಧ ಬೆಸೆದಿತ್ತು.
        
. . . .  ಓ ಕವಿಶೈಲ, ನಿನ್ನ
    ಸಂಪದವೆನಿತು ಬಣ್ಣಿಸಲಳವು ಕವನದಲಿ ?
    ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ 
    ಮಳೆಯಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
    ದೃಶ್ಯ ವೈವಿಧ್ಯಮಂ ರಚಿಸಿ ನೀಂ ಭುವನದಲಿ
    ಸ್ವರ್ಗವಾಗಿಹೆ ನನಗೆ ! 

    
ಈ ಕವನದ ಸಾಲುಗಳಿಂದ ಮಹರ್ಷಿಕವಿಯ ಮತ್ತು ಕವಿಶೈಲದ ಬಗೆಗಿನ ಅವಿನಾಭಾವ ಸಂಬಂಧ ತಿಳಿದು ಬರುವುದು. ಅಲ್ಲಿಂದ ಸೂರ್ಯಾಸ್ತವನ್ನು ನೋಡುವುದೇ ಒಂದು ರಸನಿಮಿಷ ಎಂದು ಬಣ್ಣಿಸಿದ್ದಾರೆ. ೧೦ನೇ ಶತಮಾನದಲ್ಲಿ ಆದಿಕವಿ ಪಂಪ ಬನವಾಸಿಯನ್ನು ಸ್ಮರಿಸಿದರೆ, ೨೧ ನೇ ಶತಮಾನದ ರಸಋಷಿ ಮಲೆನಾಡನ್ನು ಸ್ಮರಿಸುತ್ತಾರೆ. ಇಲ್ಲಿ ಆ ಮಹಾಚೇತನವು ಅನಂತನಲ್ಲಿ ಲೀನವಾದ ಸ್ಮಾರಕವಿದೆ. ತಮ್ಮ ಜೀವನದುದ್ದಕ್ಕೂ ಮಲೆನಾಡಿನ ಬೆಟ-ಗುಡ್ಡ-ನದಿ-ವನಗಳಲ್ಲಿ  ಉಂಡುಟ್ಟು ಪ್ರಕೃತಿಯನ್ನೇ ಉಸಿರಾಗಿಸಿಕೊಂಡು ಬೆಳೆದು ಬದುಕಿದ ಪ್ರಕೃತಿ ಕವಿ ಇಂದಿಗೂ ಆಕೆಯ ಮಡಿಲಲ್ಲಿ. ತಮ್ಮ ಪ್ರೀತಿಯ ಕವಿಶೈಲದೊಳಗೊಂದಾಗಿ ಕಾವ್ಯರಚನೆಯಲ್ಲಿ ತೊಡಗಿದ್ದಾರೆ ಎನಿಸಿದ್ದಂತು ಸತ್ಯ. ಕವಿಶೈಲವನ್ನು ಎಷ್ಟು ಬಣ್ಣಿಸಿದರೂ ಸಾಲದು ಅವರೇ ಹೇಳುವಂತೆ ಮಾತು ನನ್ನ ಕಲೆ ಮೌನ ನನ್ನ ನೆಲೆ. ಹಾಗಾಗಿ ನಾವು ಕೂಡಾ ಮೌನಕ್ಕೆ ಶರಣಾದೆವು .

ಭಾರವಾದ ಹೆಜ್ಜೆಗಳೊಂದಿಗೆ ಕುವೆಂಪು ಶತಮಾನೋತ್ಸವ ಭವನ ಹಾಗು ಕಲಾನಿಕೇತನದತ್ತ ಪಯಣ. ಅಲ್ಲಿ ಕುಪ್ಪಳ್ಳಿ ಮನೆಯ ಸುಂದರ ಮಾಡೆಲ್ ಮತ್ತು ಕವಿಯ ಕೃತಿಗಳ ಆಧಾರದ ಮೇಲೆ ರಚಿಸಿರುವ ಚಿತ್ರವಿನ್ಯಾಸಗಳಿವೆ. ಮುಂದೆ ಮತ್ತೊಂದು ಕಡೆ ಪೂರ್ಣಚಂದ್ರ ತೇಜಸ್ವಿಯವರ ಛಾಯಾಚಿತ್ರಣದ ಸುಂದರ ಫೋಟೋ ಗ್ಯಾಲರಿ ಇz. ಪ್ರತಿಯೊಂದು ಚಿತ್ರಗಳಿಗೆ ಕವಿಯ ಕವನದ ಸಾಲುಗಳನ್ನು ಜೋಡಿಸಲಾಗಿದೆ. ಚಿತ್ರಗಳನ್ನು ನೋಡುತ್ತಾ ಬರೆದ ಕವನದ ಸಾಲುಗಳನ್ನು ಅಲ್ಲಿಯ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿ ಹೊರಬಂದು ನಿಂತಾಗ ದೊಡ್ಡ ನಿಟ್ಟುಸಿರು ಹೊರಬಿತ್ತು.  ’ಸವಿಯಲು ಇನ್ನೂ ಬಹಳ ಇದೆ ನನ್ನ ಮಲೆನಾಡಿಗೆ ಮತ್ತೆ ಬನ್ನಿ’ ಎಂದು ಕವಿ ಕೈಬೀಸಿ ಕರೆಯತ್ತಿದ್ದಾರೆ ಎನಿಸಿತು.

        ರನ್ನನು ಪಂಪನು ಬಹರಿಲ್ಲಿ ;
        ಶ್ರೀ ಗುರುವಿಹನಿಲ್ಲಿ !
        ಮಿಲ್ಟನ್, ಷೆಲ್ಲಿ ಬಹರಿಲ್ಲಿ ;
        ಕವಿವರಹರಿಹರಿಲ್ಲಿ ;
        ಮುದ್ದಿನ ಹಳ್ಳಿ
        ಈ ಕುಪ್ಪಳ್ಳಿ
        ಬಾ ಕಬ್ಬಿಗ ನಾನಿಹೆನಿಲ್ಲಿ !

ಮತ್ತೊಮ್ಮೆ ಈ ಜ್ಞಾನದೇಗುಲಕೆ ಬರುವುದು ನಿಶ್ಚಿತ ಎಂದು ಮನದಲಿ ಪ್ರತಿಜ್ಞೆಯ ಮಾಡಿ, ಒಮ್ಮೆ ಅನಂತ ನೀಲಿ ಆಕಾಶದತ್ತ ದೃಷ್ಟಿ ಹಾಯಿಸಿದೆ, ಪಕ್ಷಿಗಳು ಗುಂಪುಗುಂಪಾಗಿ ಚಿತ್ತಾರದಲಿ ಹಾರಿತ್ತಿದ್ದವು. ದೇವರು ಋಷಿಕವಿ ಕುವೆಂಪು ಎನ್ನುವ ವಿಶ್ವಮಾನವತೆಯ ರುಜುವನ್ನು ಇಡೀ ಮನುಜಕುಲಕ್ಕೆ ನೀಡಿದ್ದಾನೆ ಎನ್ನಿಸಿ ಮರೆಯಲಾಗದ ನೆನಪಿನ ಬುತ್ತಿಯ ಗಂಟೊಂದನ್ನು ಕಟ್ಟಿಕೊಂಡು ಹೊಸಪೇಟೆಯತ್ತ ಮುಖ ಮಾಡಿದೆವು.    –ಶೋಭಾ ಶಂಕರಾನಂದ

                                                        *****                                                                          

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x