ಪರಶುವಿನ ದೇವರು: ಶಾಂತಿ ಕೆ. ಅಪ್ಪಣ್ಣ

ಪರಶುವಿಗೆ ದೇವರು ಬಂದಾಗ ಡೊಳ್ಳನ ಕೇರಿಯ ಜನ ಅದಿನ್ನೂ ತಂತಮ್ಮ ಕೆಲಸಗಳಿಂದ ಮರಳಿ ದಣಿವಾರಿಸಿಕೊಳ್ಳುತ್ತ,  ಅಲ್ಲಲ್ಲೆ ಜಗುಲಿ ಕಟ್ಟೆಯ ಮೇಲೆ ಕುಳಿತು ಗಂಡಸರು ಬೀಡಿಯ ಝುರುಕಿ ಎಳೆದು ಕೊಳ್ಳುತ್ತಿದ್ದರೆ, ಹೆಂಗಸರು ಒಂದು ಬಾಯಿ ಕಾಫಿ ಕುಡಿಯುವ ಆತುರಕ್ಕೆ ಒಳಗೆ ಒಲೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರು. ಮೊದಲಿನಂತೆ ಚೂರುಪಾರು ಸೌದೆ ತಂದು ಪ್ರಯಾಸದಿಂದ ಒಲೆ ಹಚ್ಚುವ ಕೆಲಸವೇನೂ ಈಗಿರಲಿಲ್ಲ, ಊರು ನಾಡು ಕಾಣುತ್ತಿದ್ದ ಬದಲಾವಣೆಯ ಗಾಳಿ ಯಾವುದೇ ತಕರಾರು ಮಾಡದೆ ಕೇರಿಯೊಳಗೂ ನುಸುಳಿ ಅಲ್ಲೂ ಅಲ್ಪಸ್ವಲ್ಪ ಬದಲಿಕೆ ತರತೊಡಗಿತ್ತು. ಹುಡುಗರ ಕೈಯಲ್ಲಿ ಮೊಬೈಲು,  ಬೈಕು, ಮನೆಗೆ ಗ್ಯಾಸು, ತಾರಸಿ ಹೀಗೆ ಚಿಕ್ಕ ಪುಟ್ಟ ಮಟ್ಟಸ ಬದಲಾವಣೆಗಳು. ಕೇರಿಯ ಹುಡುಗ ಹುಡುಗಿಯರು ಕೂಡಾ  ಮೊದಲಿನಂತೆ ಅಪ್ಪ ಅಮ್ಮನ ಹಿಂದೆ ಗೌಡರ ತೋಟಕ್ಕೆ ಹೊಲಗದ್ದೆಗೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ತಾವೂ ಬೆಂಗಳೂರು ಮೈಸೂರೆಂದು ಹೋಗಿ ಫ್ಯಾಕ್ಟರಿ ಸೇರಿಕೊಳ್ಳತೊಡಗಿದ್ದರು. ಅವರಲ್ಲೇ ಒಂದಿಬ್ಬರು ಮಕ್ಕಳು ಟೀಚರ್ ಟ್ರೈನಿಂಗ್, ನರ್ಸ್ ಟ್ರೈನಿಂಗ್  ಮಾಡುತ್ತ ಸೈ ಅನಿಸಿಕೊಳ್ಳುತ್ತಿದ್ದರು. ಡೊಳ್ಳನ ಕೇರಿಯಲ್ಲಿ ಮೊದಲೆಲ್ಲ ಸಸ್ತಾಗಿ ದೊರಕುತ್ತಿದ್ದ ವಾಲಗದ ಟೀಮು ಈಗ ತಾವೂ ಒಂದೆರಡು ಸೆಟ್ ಯೂನಿಫಾರ್ಮ್ ಹೊಲಿಸಿಕೊಂಡು ಜೈ ವಿಘ್ನೇಶ್ವರ ಬ್ಯಾಂಡ್,  ಲಕ್ಷ್ಮಣ ಮ್ಯೂಸಿಕ್ ಬ್ಯಾಂಡ್ ಹೀಗೆ ಬ್ರ್ಯಾಂಡ್ ನೇಮುಗಳಲ್ಲಿ ಗುರುತಿಸಿಕೊಳ್ಳತೊಡಗಿದ್ದರು. ಡೊಳ್ಳನಕೇರಿಯಲ್ಲಿ ಎರಡು ಟೀಮುಗಳಿದ್ದವು. . ಒಂದು ಭೋಜನದ್ದಾದರೆ ಇನ್ನೊಂದು ಅಣ್ಣಕ್ಕಿಯದು. ಭೋಜನಿಗೆ ಈ ನಡುವೆ ಟಿ ಬಿ ಬಂದು ಅಮರಿಕೊಂಡು ಅವನಿಂದ ಮೊದಲಿನಂತೆ ಮೋರಿ ಊದುವುದಾಗುತ್ತಿರಲಿಲ್ಲ. ಅವನ ಟೀಮು ಸ್ವಲ್ಪ ಡಲ್ಲು ಹೊಡೆಯುತ್ತಿತ್ತು. ಅವನು ತನ್ನ ಮಗ ಕಿಶೋರನಿಗೆ ಮೋರಿ ಊದುವುದರಲ್ಲಿ ಆಸಕ್ತಿ ತರಲು ಯತ್ನಿಸಿ ಸೋತಿದ್ದ. ಹಿರಿಯ ತಲೆಗಳು ಉರುಳಿಕೊಂಡರೆ ನಮ್ಮ ಪರಂಪರೆಯ ಈ ಕಲೆ ನಾಶವಾಗಬಹುದು ಅಂತ ಬೋಜಯ್ಯ ಆಗಾಗ ಅಂದುಕೊಳ್ಳುತ್ತಿದ್ದ.  ಕಿಶೋರ ಅಪ್ಪನ ಮಾತಿಗೆ ನಗುತ್ತಿದ್ದ. 

ಅವತ್ತು ಹಾಗೇ ಅಣ್ಣಕ್ಕಿ ರಾತ್ರಿ ಹೋಗಲಿಕ್ಕಿದ್ದ ಮದರಂಗಿ ಮದುವೆಗೆ ತನ್ನ ಡೋಲು ಕಟ್ಟಿಕೊಂಡು ವಾಲಗ ಸೆಟ್ಟಿನೊಡನೆ ರೆಡಿಯಾಗುತ್ತಿದ್ದ. ಸಡಿಲಾಗಿದ್ದ ಡೋಳಿನ ಹಗ್ಗ ಬಿಗಿಮಾಡಿ ಎರಡು ಬಾರಿ ಸುಯ್ಯೆನ್ನಿಸಿ ಎರಡು ಮೆಟ್ಟು ಹಾಕಿದರೆ. . ರಾಚು, ತನ್ನಮೋರಿಗೆ ಗಾಳಿಯೂದಿ ಜೀವ ತುಂಬಿದ್ದ. ಅದಕ್ಕೆ ಸಿವಪ್ಪ ತನ್ನ ಕಂಜರಾವನ್ನರೆಡು ಸುತ್ತು ತಿರುಗಿಸಿ ಮೆರುಗು ಕೊಟ್ಟಿದ್ದ. ಅವರೆಲ್ಲ ಹೀಗೆ ತಮ್ಮ ವಾದ್ಯ ಸೆಟ್ಟಿನ್ನು ಶ್ರುತಿಮಾಡಿಕೊಳ್ಳುತ್ತಿದ್ದರೆ,  ಅಣ್ಣಕ್ಕಿಯ ಮೇಲೆ ಅಸಾಧರಣ ಅಸೂಯೆ ಉಕ್ಕಿ, ಅದ್ಯಾರಿಗೋ ಎಂಬಂತೆ ಅಂಗಳಕ್ಕೆ ಕ್ಯಾಕರಿಸಿ ಉಗಿದಿದ್ದ ಭೋಜ. 

"ಅದ್ಯಾಕ್ ಅಂಗ್ ಉಗ್ದೀಯೆ? ಮಾದಿಗ್ರೋನು ನಿನ್ ಮೊಕ್ಕ್ ಉಗಿಯ" ಅಲ್ಲೇ ಅಂಗಳದಲ್ಲಿ ಕುಳಿತು, ತಲೆಯ ಸೀರು ಬಿಡಿಸುತ್ತಿದ್ದ ಅಣ್ಣಕ್ಕಿಯ ತಾಯಿ ಸಣ್ಣತಾಯಿ ಬೋಜಯ್ಯನತ್ತ ಕಿಡಿಕಾರಿದಳು. 
" ಓ ಅದ್ಸರಿ, ನಾವು ಉಗೀಬಾರ್ದು, ಉಣ್ಲೂ ಬಾರ್ದು? ಹೋಗಿ ಸಾಯಕ್ಕೇನಾರೂ ದಾರಿ ಉಂಟಾ ನೋಡೋಗು, ಸುಮ್ನೆ ಸಾಯೋ ವಯಸ್ಸಲ್ಲಿ ನನ್ ಕೈಲಿ ಏಟ್ ತಿಂದ್ ಸಾಯ್ಬೇಡ" ಬೋಜಯ್ಯ ಹೊಡೆಯುವವನಂತೆ ಎದ್ದ. ಆ ಕ್ಷಣ ಅವನೊಳಗೆ ಹುಟ್ಟಿದ ಸಿಟ್ಟಿನ ರಭಸವನ್ನು ಸಂಭಾಳಿಸಲಾಗದೆ ಅವನ ಸಣಕಲು ದೇಹ ಜೋಲಿ ಹೊಡೆಯಿತು. 

" ನನ್ ತೋಳಷ್ಟು ದಪ್ಪ ಇಲ್ಲ, ಅಂದ್ರೂ ಇಂಗಾಡ್ತೀಯಲ್ಲ! ನೀನೇನಾರ ಚಂದಾಗಿದ್ಬುಟ್ಟಿದ್ದಿದ್ರೆ ಇನ್ನೇಟಾಡೀಯೋ" ಅಣ್ಣಕ್ಕಿಯ ತಮ್ಮ ಅಪ್ಪುಣ್ಣಿ ನಗೆಯಾಡಿದ. 

" ಏಯ್, ನಿನ್ನಾ. . " ಭೋಜಯ್ಯ ಅವನತ್ತ ನುಗ್ಗಿ ಹೋಗುವುದಕ್ಕೂ. . ಅಂಗಳದಲ್ಲಿ "ಏಯ್ ಯಾರ್ರಲಾ ಅದು " ಎಂಬ ಕರ್ಕಶ ದನಿಯೊಂದು ಮೊಳೆತು ನಿಲ್ಲುವುದಕ್ಕೂ  ಸರಿಹೋಗಿತ್ತು. ಅದೊಂದು ಅನಿರೀಕ್ಷಿತವಾಗಿತ್ತು. ಅದಿನ್ನೂ ಮೋಟು ಗೌಡನ ಹೊಲದಲ್ಲಿ ಕೆಲಸ ಮುಗಿಸಿ ಅವ್ವ ಮಂಕಾಳಿಯೊಂದಿಗೆ ಓಣಿಯ  ಉಬ್ಬ ದಾಟಿ ಅಂಗಳಕ್ಕೆ ಕಾಲಿಟ್ಟಿದ್ದನೋ ಇಲ್ಲವೋ ಪರಶುವಿಗೆ ಹಠಾತ್ತನೆ ದೇವರು ಬಂದು ಬಿಟ್ಟಿತ್ತು. ಅವನು ಅವನಾಗಿರಲಿಲ್ಲ. ಕಟಕಟನೆ ಹಲ್ಲು ಕಡಿಯುತ್ತ, ಮೈಯಿಡೀ ಥರಥರ ನಡುಗಿಸುತ್ತ ಆವೇಶದಲ್ಲಿ ಧಿಂತಕಿಟ ಹಾಕುತ್ತಿದ್ದವನನ್ನು ಏನು ಮಾಡಬೇಕೆಂದು ತಿಳಿಯದೆ ಕೇರಿಯ ಜನ ಕಂಗಾಲಾಗಿದ್ದರು. ಅದಿನ್ನೂ ದಿನದ ಕಾಳುಕಡ್ಡಿ ಮೇವುಂಡು ರೆಕ್ಕೆಯೊಳಗೆ ಮರಿಗಳನ್ನು ಅವುಚಿಕೊಂಡು ಕೂರಲು ಹವಣಿಸುತ್ತಿದ್ದ ಕೋಳಿಯ ಹಿಂಡು ಈ ಸದ್ದಿಗೆ ಬೆದರಿ ಚೆಲ್ಲಾಪಿಲ್ಲಿಯಾಗಿ ಮನೆ,  ಮಾಡು ಎಂದು ಹಾರಾಡಿ ಗಲಾಟೆ ಮಾಡತೊಡಗಿದವು. ಮಗನ ಈ ಧಿಡೀರ್ ಅವತಾರದಿಂದ ಕಂಗಾಲಾದ ಮಂಕಾಳಿ ಇದ್ದುದ್ದರಲ್ಲೇ ಮೊದಲು ಚೇತರಿಸಿಕೊಂಡು,  "ನೀವ್ಯಾರು ದೇವ್ರೂ, ಎಲ್ಲಿಂದ ಬಂದ್ರಿ?ಯಾಕ್ ಬಂದ್ರಿ? ಏನ್ ಬೇಕ್ ದೇವ್ರೂ" ಎಂದು ಮಗನ ಕಾಲು ಮುಗಿಯಲು ನಿಂತಳು. ದೇವರ ಅವತಾರದಲ್ಲಿದ್ದ ಪರಶು ಮಂಕಾಳಿಯ ಮುಂಗೂದಲನ್ನು ಬಲವಾಗಿ ಹಿಡಿದೆಳೆದು ಅವಳನ್ನಾಚೆ ತಳ್ಳಿ, ಏ ದೂರ ಇರು, ಮುಟ್ಟಬೇಡ" ಅಂದುಬಿಟ್ಟಿತು. ಇದ್ಯಾವುದೋ ಮುಟ್ಟಿಸಿಕೊಳ್ಳದ ದೇವರೇನಾದರೂ ಬಂದು ಬಿಟ್ಟಿತಾ ಮಂಕಾಳಿ ತನ್ನೊಳಗೇ ಎಂಬಂತೆ ಗೊಣಗಿದಳು. ಮತ್ತೆ ಅವಳು ಏನನ್ನಾದರೂ ಅನ್ನುವ ಮೊದಲೇ ಅಣ್ಣಕ್ಕಿ ಸೀಟು ಬಿಟ್ಟೆದ್ದು, " ಮಾಸಾಮಿ, ತೆಪ್ಪೋ ನೆಪ್ಪೋ ಹೊಟ್ಟೆಗೆ ಹಾಕ್ಕಂಡು ನೀವ್ಯಾರು, ಯಾಕ್ ಬಂದಿವ್ರಿ ಅಂತೇಳೀ ಸಾಮಿ, ತೆಪ್ಪಾಯ್ತು ಸಾಮಿ " ಅಂತ ಕೈ ಮುಗಿದ. . " ಏಯ್, ಯಾಕ್ರುಲಾ, ಈ ಸರ್ತಿ ನಂಗೆ ಪೂಜೆ ತೆಪ್ಸುದ್ರಿ? " ಪರಶುವಿನ ಬಾಯಿಂದ ಹೊರ ಬಂದ ಮಾತು ಗಡುಸಾಗಿತ್ತು, ಅವನ ಮೆದುಗಲ ದನಿ ಇಂದು ಕಟ್ಟೆಯೊಡೆದು ಸಣ್ಣಕ್ಕಿಯ ತಮಟೆಯ ಸದ್ದಿನಂತೆ ನಾಕು ಮೂಲೆ ತಲುಪುವಷ್ಟಿತ್ತು. 

ಡೊಳ್ಳನ ಕೇರಿಯೆಂದರೆ ಅಂತೇನೂ ದೊಡ್ಡದಲ್ಲ. ಆ ಊರಿನಲ್ಲಿ ಅಸಲು ಕೇರಿಯೇ ಇರಲಿಲ್ಲ. ಅಲ್ಲಿ ಇದ್ದದ್ದೇ ಒಂದು ೧೦ ಮನೆಗಳು. ಅವೆಲ್ಲವೂ ಹೆಚ್ಚು ಕಡಿಮೆ ಒಂದೇ ಅಂಗಳಕ್ಕೆ ತೆರೆದುಕೊಂಡ ಹಾಗೆ ಇದ್ದು, ಕೇರಿಯ ರೂಪ ಪಡೆದುಕೊಂಡಿತ್ತು. ಯಾರ ಮನೆಯಲ್ಲಿ ಏನೇ ನಡೆದರೂ ಅದು ಇಡಿ ಕೇರಿಗೇ ತಿಳಿಯುವಂತಿತ್ತು. ಇದ್ದದ್ದರಲ್ಲಿ, ಮಂಕಾಳಿಯ ಮನೆಯೂ, ಕರಿಯನ ಮನೆಯೂ ಕೇರಿಯ ಕೊನೆಗೆ ಎದ್ದು ನಿಂತಿದ್ದ ಸಣ್ಣ ಗುಡ್ಡದ ಮೇಲೆ ಇತ್ತು. ಮಂಕಾಳಿಯ ಮನೆಯಿನ್ನೂ ಹುಲ್ಲು ಹೊದೆಸಿಕೊಂಡು ಗುಡಿಸಿಲಿನಂತೆ ಕಾಣುತ್ತಿದ್ದರೆ ಉಳಿದೆಲ್ಲರ ಮನೆಯೂ ಮಾಡು ಕಂಡು, ಅದರಲ್ಲೂ ಒಂದಿಬ್ಬರ ಮನೆ ಸಿಮೆಂಟು ಹಾಕಿಸಿಕೊಂಡು ರೆಡ್ ಆಕ್ಸೈಡು ಬಳಿಸಿಕೊಂಡು ಕೆಂಪಗೆ ಹೊಳೆಯುತ್ತಿತ್ತು. ಕೇರಿಯವರು ಊರ ಗೌಡರ ಕಾಫೀ ತೋಟಕ್ಕೆ, ಭತ್ತದ ಗದ್ದೆಗೆ, ಏಲಕ್ಕೀ ತೋಟಕ್ಕೆಂದು ಕೆಲಸಕ್ಕೆ ಹೋಗುವುದರ ಜೊತೆಗೆ, ತಮ್ಮ ಕೈಲಾದಂತೆ ಆಡು ಹಸು ಸಾಕಿಕೊಂಡು ಬದುಕು ಸರಿದೂಗಿಸಿಕೊಳ್ಳುತ್ತಿದ್ದರು. ಕೇರಿಯ ಹುಡುಗರಲ್ಲಿ ಎಲ್ಲಕ್ಕಿಂತ ಮೊದಲು ಊರು ಬಿಟ್ಟು ಬೆಂಗಳೂರು ಸೇರಿದವನು ಮಂಕಾಳಿಯ ಮಗ ಪರಶುವೇ. ಒಂದೇ ಒಂದು ಕ್ಲಾಸು ಕೂಡ ಶಾಲೆ ಕಾಣದ ಹುಡುಗ ಅಮ್ಮನ ಹಿಂದೆ ಬೆರಳು ಕಡಿಯುತ್ತ ಗೌಡರ ಮನೆಯಂಗಳದಲ್ಲಿ ನಡೆಯುತ್ತಿದ್ದರೆ ನೋಡುವವರ ಕರುಳು ನಿಡುಸುಯ್ಯುತ್ತಿತ್ತು. ಇವತ್ತಿನ ತನಕಲೂ ಪರಶುವಿಗೆ ತನ್ನ ಅಪ್ಪನ ಪರಿಚಯವಿರಲಿಲ್ಲ, ಹದಿನೈದಕ್ಕೆಲ್ಲ ಮದುವೆ ಎಂಬ  ಬಂಧ ಧರಿಸಿಕೊಂಡು ಪಕ್ಕದ ಮಂಗಲಪಾಡಿಯ ಕೇರಿ ಹೊಕ್ಕ ಮಂಕಾಳಿ  ಗಂಡನ ಜೊತೆ ಬಾಳುವೆ ಮಾಡಿದ್ದು ಒಂದೇ ಒಂದು ತಿಂಗಳು. ಒಂದು ದಿನ ಮೈಸೂರಿನತ್ತ ವಾಲಗಕ್ಕೆಂದು ಹೋದವನು ತನ್ನ ಡೋಲಿನ ಸಮೇತ ನಾಪತ್ತೆಯಾಗಿದ್ದ. ಗಂಡ ಹೋದನೆಂದು ಅವಳೇನೂ ಅತ್ತುಕರೆದು ಮಾಡಲಿಲ್ಲ, ಅಲ್ಲಿಂದ ಹಾಗೇ ಹೊರಟು  ಡೊಳ್ಳನಕೇರಿಗೇ ವಾಪಸಾಗಿದ್ದಳು. ಅದಿನ್ನೂ ಹರೆಯ ಮೈಗೂಡಿದ ತುಂಬು ಪರ್ವದ ಹೊತಿನಲ್ಲಿ ಗಂಡನಿಲ್ಲದೇ ಮನೆಗೆ ವಾಪಾಸಾದ ಹೆಣ್ಣಿನಲ್ಲಿ ಬಹಳಷ್ಟು ಬಯಸಿ ಅವಳ ಸುತ್ತ ಠಳಾಯಿಸುವವರ ದಂಡು ಹೆಚ್ಚಾಗಿತ್ತು, ಹೆಂಡತಿ ಸತ್ತು ಮಕ್ಕಳೂ ಬೆಳೆದು ದೂರವಾಗಿ ಒಬ್ಬಂಟಿಯಾಗಿದ್ದ ರಾಚಯ್ಯನಿಗೆ ಮಂಕಾಳಿಯನ್ನು ಕೂಡಾವಳಿ ಮಾಡಿಕೊಳ್ಳುವುದರಲ್ಲಿ ಅತ್ಯಂತ ಆಸೆಯಿತ್ತು, ಆದರೆ ಮಂಕಾಳಿ ಮೌನವಾಗಿ ಉಳಿದಿದ್ದಳು ಹೀಗಿರುವಾಗಲೇ ಒಮ್ಮೆ, ನಡೆಹಾದಿಯಲಿ ಹಠಾತ್ತನೆ ಮೊಳೆತ ಅಣಬೆಯ ಹಾಗೆ  ಮಂಕಾಳಿ ಗರ್ಭ ಧರಿಸಿದ್ದಳು. ಅವಳ ಮಗುವಿಗೆ ಅಪ್ಪನ ಹೆಸರಿನ ಹಂಗಿರಲಿಲ್ಲವಾದರೂ ಅದು ಸೋಮೇಗೌಡನ ಮಗುವೆಂಬುದು ಊರಿಗೂರೇ ಆಡಿ ಮೆದ್ದ ಸತ್ಯವಾಗಿತ್ತು. ಅವಳು ಯಾವುದಕ್ಕೂ ತಲೆಗೊಡದೆ ಸುಮ್ಮನುಳಿದಿದ್ದಳು. ಅವನಿಗೆ ಐದು ವರ್ಷವಾದಾಗ ಶಾಲೆಗೆ ಸೇರಿಸಲು ಹೋದರೆ ಅಲ್ಲಿ ಮಗುವಿನ ಅಪ್ಪನ ಹೆಸರು ಹೇಳುವಲ್ಲಿ ಮಂಕಾಳಿ ಸಹಜವಾಗೇ ತಡವರಿಸಿದ್ದಳು. ಹೆಡ್ಮಾಸ್ಟರ ಕುಹಕದ ನಗೆಯೊಂದು ಅವಳೆದೆಯನ್ನು ಹಿಂಡಿ ಅಲ್ಲಿಗೆ ಪರಶುವಿನ ಶಾಲೆ ಇತಿಹಾಸ ಸೇರಿತು. 

 ಕೊತಕೊತನೆ ಕುದಿಯುತ್ತಿದ್ದ ಕಾಫಿಯ ಪಾತ್ರೆ ಕೆಳಗಿಳಿಸಿ, ಅದರ ಬಾಯಿಗೆ ಚಿಬ್ಬಲು ಮುಚ್ಚಿ ಹೊರಗೆ ಅಂಗಳದಲ್ಲಿ ಕೂತು ಕಕ್ಕ ಮಾಡುತ್ತಿದ್ದ ಕೊನೆಯ ಮಗಳನ್ನ ಎಬ್ಬಿಸಲು ಬಂದ ಸುಜಾತ,  ಅತ್ತ ಪರಶುವಿನ ಅಬ್ಬರ ಏರುತ್ತಿದ್ದರೆ ಇತ್ತ ಯಾವ ಪರಿವೆಯೂ ಇಲ್ಲದೆ ಮಗುವಿನ ಅಂಡು ತೊಳೆಯುತ್ತ ಅಲ್ಲೇ ಕೊಟ್ಟಿಗೆಯ ಬುಡಕ್ಕೆ ಅಡಗಲು ಹವಣಿಸುತ್ತಿದ್ದ ಕೋಳಿ ಹಿಂಡನ್ನು ನೋಡಿ ನಿಟ್ಟುಸಿರಾಗಿದ್ದಳು. ಒಂದು ಕಾಲಕ್ಕೆ ತನ್ನ ಬದುಕೂ ಹೀಗೇ ಇತ್ತು ಅಂತ ಆಗಾಗ ಅವಳಿಗೆ ಅನಿಸುತ್ತಿತ್ತು. ಅವಳಿಗೆ ಕೋಳಿಗಳ ಬದುಕು ಇಷ್ಟ, ಮಕ್ಕಳನ್ನು ಕಣ್ಣಂಚಿನಲ್ಲೇ ಇಟ್ಟುಕೊಂಡು ಮೇಯುವ ಹೇಂಟೆ, ಅಲ್ಲೇನಾದರೂ ಹಾವೋ ಕಾಗೆಯೋ ಕೀರಿಯೋ ಬಂದರೆ ಸದ್ದು ಮಾಡಿ ಸುದ್ದಿ ತಿಳಿಸಿ ಕಾಯುವ ಹುಂಜ, ತನಗೆ ದಕ್ಕಿದ ಕಾಳನ್ನೋ ಮೇವನ್ನೋ ಬಾಯಿಗಿಟ್ಟುಕೊಂಡು ಹೇಂಟೆಯನ್ನು ಕೊಕ್ಕರಿಸಿ ಕರೆದು ಅದನ್ನು ಪುಸಲಾಯಿಸಿ ತನ್ನ ಕೆಲಸ ಮುಗಿಸುವ ಹುನ್ನಾರ ಮಾಡುವ ಅದರ ಜಾಣತನ. . . ಇದೆಲ್ಲವನ್ನೂ ಅವಳು ಅಂಗಳಕ್ಕೆ ಬಂದಾಗೆಲ್ಲ ಕಾಣುತ್ತಾಳೆ, ಎಲ್ಲರೆದುರಿಗೂ ಜರುಗುವ ಇದು ಯಾರಿಗೇನು ಅನಿಸುತ್ತದೋ ಅವಳಿಗಂತೂ ಖುಷಿ ಕೊಡುತ್ತದೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ತಾವು ಕಟ್ಟಿಕೊಂಡ ಗೂಡು ಹೀಗೇ ಇತ್ತು ಅಂತ ಅವಳ ಭಾವನೆ. ಇದ್ದಕ್ಕಿದ್ದಂತೇ ಅಲ್ಲಿ ಪರಶುವಿಗೆ ದೇವರು ಬಂದು ಅವನು ಪೋಲೀಸರಿಂದ ಒದೆ ತಿನ್ನದೇ ಹೋಗಿದ್ದರೆ ಇವತ್ತು ತಾನಿಲ್ಲಿ ಬಂದು ಬದುಕಬೇಕಿರಲಿಲ್ಲ ಅನ್ನುವ ಸತ್ಯ ಅವಳಿಗೆ ಚೆನ್ನಾಗಿಯೇ ಗೊತಿತ್ತು. ಅವರಾದರೂ ಹೇಗೆ ಹೊಡೆದಿದ್ದರು! ಪರಶುವಿನ ಮೀನಖಂಡಗಳಲ್ಲಿ ಬಾಸುಂಡೆ ಬಾತು ರಕ್ತವೇ ಹರಿದಿತ್ತು. ಅವನಿಗೆ ಮೊತ್ತ ಮೊದಲ ಬಾರಿಗೆ ದೇವರು ಬಂದಾಗ ತಾನು ಮನೆಯಲ್ಲಿದ್ದಳು. ಪೋಲೀಸರೇ ಫೋನು ಮಾಡಿ, ಅರ್ಜೆಂಟು ಬರುವಂತೆ ಕರೆದಾಗ ತಾನು ಉಟ್ಟ ಸೀರೆಯಲ್ಲೇ ಸ್ಟೇಷನ್ನಿಗೆ ಹೋಗಿದ್ದಳು. ಹಿಂದು ಮುಂದು ಯಾವತ್ತೂ ಹೋಗಿರದ ಜಾಗ, ಸಹಜವಾಗೇ ಹೊಟ್ಟೆಯೊಳಗೆ ಭಯವಿತ್ತು. ಮನೆಯಿಂದ ಸ್ವಲ್ಪೇ ದೂರದಲ್ಲಿ ನಡೆದು ಹೋದರೆ ಸಿಗುತ್ತದೆ ಸ್ಟೇಷನ್ನು, ಅಲ್ಲಿ ಹೋದರೆ ಅಲ್ಲಿ ದೇವು ಸಾವ್ಕಾರನೂ ಇದ್ದ, ಪರಶುವಿನ ಜೊತೆ ದೇವುಸಾವ್ಕಾರನನ್ನು ನೋಡಿದ್ದೇ ಅವಳಿಗೆ ಧೈರ್ಯ ಬಂದಿತ್ತು. 

"ಏನಾಯ್ತು ಅಣ್ಣೋರೇ ? "ಎಂದು ಧಾವಂತದಿಂದ ಕೇಳಿದ್ದಳು. 
" ಅವ್ರನ್ನೇನ್ ಕೇಳ್ತೀಯ? ಇಲ್ಲ್ ಕೇಳಮ್ಮ, ನಿನ್ ಗಂಡ ಗಲ್ಲಾದಿಂದ ದುಡ್ಡೆತ್ತಿದ್ದಾನೆ, ಮುಂಚೆನೂ ಎತ್ತಿರ್ಬೇಕು, ಈಗ ಸಿಕ್ಕಂಡಿದ್ದಾನೆ ಅಷ್ಟೇ, ಅದ್ಕೇ ಸಾರ್ ಕಂಪ್ಲೇಂಟ್ ಕೊಟ್ಟಿದ್ದಾರೆ, ನಿನ್ ಕುಮ್ಮಕ್ಕಿಲ್ದೇ ಇದೆಲ್ಲ ನಡ್ದಿರ್ಲಿಕ್ಕಿಲ್ಲ, ಅಂದ್ರು ಅದ್ಕೇ ಕರ್ಸಿದ್ದೀವಿ, . . . ಪೋಲೀಸರು ಹೇಳುತ್ತಾ ಹೋದರು. 

ಅವರು ಮುಂದೆ ಮಾತಾಡಿದ್ದೊಂದೂ ಆ ಹೊತ್ತಿಗೆ ಸುಜಾತಳಿಗೆ ನಿಲುಕಿರಲೇ ಇಲ್ಲ. . ಮಾತುಗಳು ಕೇವಲ ಸದ್ದುಗಳಾಗಿ ಗೋಡೆಗಪ್ಪಳಿಸುತ್ತಿದ್ದವು ಅಷ್ಟೇ. ಪರಶುವಿಗೆ ಮೊತ್ತ ಮೊದಲ ಬಾರಿಗೆ ದೇವರು ಬಂದಿದ್ದೇ ಅಂದು ! ಮೈಯೆಲ್ಲ ಥರಥರ ನಡುಗಿಸುತ್ತ ಹೂಂಕಾರ ಹಾಕಿ ಗಿರ್ರನೆ ಸುತ್ತಾನುಸುತ್ತ ತಿರುಗಿ, ತನ್ನ ಮೊಣಕಾಲ ಮೀನಖಂಡಕ್ಕೆ ಗುರಿಯಿಟ್ಟು ಬಾರಿಸುತ್ತಿದ್ದ ಪೋಲೀಸನ ಲಾಠಿಯನ್ನು ಕಿತ್ತುಕೊಂಡದ್ದೇ ಅಲ್ಲಿದ್ದ ಟೇಬಲಿನ ಮೇಲೆ ಲಠ್ಠನೆ ಬಡಿದು, ಪೋಲೀಸನ ಟೋಪಿ ಕಿತ್ತು ಮುಂದಲೆ ಹಿಡಿದು ಜಗ್ಗಾಡ ತೊಡಗಿದ್ದ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಅರೆಕ್ಷಣ ಕಂಗಾಲಾದ ಪೋಲೀಸರು ಮರುಕ್ಷಣ ಸಾವರಿಸಿಕೊಂಡು ಅವನ ಕಪಾಳಕ್ಕೆ ಬಾರಿಸಿ ಅವನನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಮಾಡತೊಡಗಿದರು ಆದರೆ ಪರಶುವಿನಲ್ಲಿ ಆಸಾಧಾರಣ ಶಕ್ತಿಯೊಂದು ಆ  ಹೊತ್ತಿನಲ್ಲಿ ತುಂಬಿಕೊಂಡಿತ್ತು. " ಏ, ದೇವಯ್ಯ, ನಿನ್ನಹೆಂಡತಿ ದಿನಾ ಪರಶು ಜೊತೆ ಮಲಗೋದು ನಂಗೆ ಗೊತ್ತು ಕಣೋ. . ತೆಪ್ಪನ್ನ ತೆಪ್ಪಿಂದ ಮುಚ್ಬೇಡ್ವೋ, ನಿಂಗೆ ದೇವರ ದೃಷ್ಟಿ ಇದೆ, ಕೇಮೆ ನೋಡ್ಕಂಡು ಹೆಂಡತೀನ ಕರಕೊಂಡೋಗಿ ಬದಿಕ್ಕೋ ಹೋಗು " ಅಂದು ಬಿಟ್ಟಿತ್ತು ದೇವರು. ಅದುರಿಬಿದ್ದಿದ್ದಳು ಸುಜಾತ, ಅದು ನಿಜಕ್ಕೂ ಪರಶುವಿನ ದನಿಯೇ ಆಗಿರಲಿಲ್ಲ, ಅದಕ್ಕೂ ಮಿಗಿಲಾಗಿ ತಾಯಿ ಸಮಾನವೆಂದು ತಿಳಿದ ದೇವು ಸಾವ್ಕಾರನ ಹೆಂಡತಿ ಪರಶುವಿನ ಜೊತೆ. . . !! ಅವಳು ಪಕ್ಕನೆ ದೇವು ಸಾವ್ಕಾರನ ಮುಖನೋಡಿದಳು, ಅದು ಬಣ್ಣ ಕಳೆದುಕೊಂಡು ಬಿಳಿಚಿಕೊಂಡಿತ್ತು, ಅದನ್ನು ಪೋಲೀಸರೂ ನೋಡಿದರು. 

"ಸಾರ್ ಅವ್ನು ಮೆಂಟಲ್ ಸಾರ್, ಏನೇನೋ ಹೇಳ್ತಾ ಇದ್ದಾನೆ " ದೇವು ಸಾವ್ಕಾರ, ಬಣ್ಣಗೆಟ್ಟ ಮುಖವನ್ನು ಕರ್ಚೀಪಿನಿಂದ ಒರೆಸಿಕೊಂಡ. 
"ಹೌದೇನಮ್ಮಾ?" ಪೋಲೀಸರ ಕಣ್ಣೀಗ ಸುಜಾತಳತ್ತ ತಿರುಗಿತ್ತು. ಬೇರೆ ದಾರಿ ಕಾಣದೆ ತಾನೂ ಹೌದೆಂಬಂತೆ ತಲೆಯಾಡಿಸಿದ್ದಳು ಸುಜಾತ. 

"ರೀ ಮೆಂಟಲಾದ್ರೆ, ಆಸ್ಪತ್ರೆಗೆ ಸೇಸ್ಸ್ರೀ, ನಮ್ ತಲೆಗ್ಯಾಕ್ ತರ್ತೀರಾ?" ಪೋಲೀಸರೀಗ ದೇವಯ್ಯನ  ಮೇಲೆ ಸಿಟ್ಟಾಗಿದ್ದರು. ಅದಾದಮೇಲೆ ಅವನನ್ನ ಅಲ್ಲಿಂದ ಗದುಮಿಕೊಂಡು ಆಟೋದಲ್ಲಿ ಮನೆ ತಲುಪುವವರೆಗೂ ಪರಶುವಿನ ಮೈಯಲ್ಲಿ ದೇವರು ಆಡುತ್ತಲೇ ಇತ್ತು, ಮನೆಗೆ ಬಂದೊಡನೇ ಆಡೀ ಆಡೀ ಸುಸ್ತಾಗಿದ್ದ ದೇವರು ಏನೂ ನಡೆದೇ ಇಲ್ಲವೇನೋ ಎಂಬಂತೆ ನಿರಾಳವಾಗಿ ಹಾಲಿನಲ್ಲಿ ಅಡ್ಡಾಯಿತು. ಅಷ್ಟೂ ದಿನಗಳಲ್ಲಿ ಮೊತ್ತಮೊದಲ ಬಾರಿಗೆ ಸುಜಾತಳಿಗೆ ಗಂಡ ಅಪರಿಚಿತನೆನಿಸಿದ, ಆ ಹೂಂಕಾರ ಠೇಕಾಂರಗಳು ಅವಳ ಮನಸಿನೊಳಗೆ ಆಳವಾಗಿ ಇಳಿಯತೊಡಗಿದವು. ಪರಶು ಸ್ಟೇಷನ್ನಿನಲ್ಲಿ ಆಡಿದ ಮಾತು  ಅತ್ಯಂತ ನೋವು ಯಾತನೆ ಕೊಡುತ್ತ, ಒಳಗಿಳಿದಿಳಿದು ಭದ್ರವಾಗತೊಡಗಿತು. ಅವಳು ಬಹಳ ವರ್ಷಗಳಿಂದ ಬೆಂಗಳೂರಲ್ಲೇ ಇದ್ದಾಳೆ, ಪಿಯುಸಿ ತನಕ ಓದಿಕೊಂಡಿದ್ದಾಳೆ, ಸಮಯ ಸಿಕ್ಕಿದಾಗ ಕಥೆ ಕಾದಂಬರಿ ಅಂತ ಓದುತ್ತಾಳೆ. ದೇವರ ಇರುವಿಕೆಯ ಬಗೆ ಅವಳಿಗೆ ತನ್ನದೇ ಆದೊಂದು ಅಭಿಪ್ರಾಯವಿದೆ, ಆದರೆ ಮೈ ಮೇಲೆ ದೇವರು ಬರುವುದನ್ನ ಅಷ್ಟು ಸಲೀಸಾಗಿ ಅವಳ ಮನಸು ಒಪ್ಪಿಕೊಳ್ಳಲು  ಹಿಂದೇಟು ಹಾಕುತ್ತಿತ್ತು. ಒಂದು ವೇಳೆ ನಿಜಕ್ಕೂ ಹುಚ್ಚೇ? ಅವಳು ಅಳುಕಿನಿಂದಲೇ ದೇವರ ಹೆಸರಿಗೊಂದು ಮುಡಿಪು ಕಟ್ಟಿಟ್ಟಳು. ಅಂದು ಮೊದಲುಗೊಂಡದ್ದು. . . . ನಂತರದಲ್ಲಿ ಪರಶುವಿಗೆ ಎಲ್ಲೆಂದರಲ್ಲಿ ದೇವರು ಬರತೊಡಗಿತು. ಬಸ್ಸು,  ಬೀದಿ, ಮಾರ್ಕೆಟ್ಟು, ಕಡೆಗೆ ದೇವಯ್ಯನ ಅಂಗಡಿ, ಮನೆ ತನಕಲೂ  ದೇವರು ಲಗ್ಗೆಯಿಡತೊಡಗಿತು. ದೇವು ಸಾವ್ಕಾರ ಅವನನ್ನು ಕೆಲಸದಿಂದ ಬಿಡಿಸಿದ್ದ. ಅವನಲ್ಲಿ ಬೇರೆ ಕೆಲಸವೂ ಇರಲಿಲ್ಲ, ಇದ್ದ ಮನೆಯೂ ದೇವುಸಾವ್ಕಾರನದ್ದೇ, ಹೇಗೋ ಎಲ್ಲೋ ಕೆಲಸ ಹುಡುಕಿಕೊಂಡು ಬದುಕುವಾ ಅಂದರೆ ದೇವರ ಕಾಟ ಬೇರೆ, ಮೊದಮೊದಲು ಬೀದಿಯಲ್ಲಿ ನಿಲ್ಲುತ್ತಿದ್ದ ದೇವರು ಈಗ ಮನೆಯಲ್ಲೇ ಬರತೊಡಗಿತು, ಹೋಗಲಿ ಏನಾದರೂ ಒಳ್ಳೆಯದು ಹೇಳ್ತಾದಾ ಅಂದರೆ ಇಲ್ಲ! ಎಲ್ಲ ಅವರಿವರ ಮನೆ ಕಥೆ. ದೇವರು ನಿಂತವನನ್ನು ಕಂಡು ಕೈ ಮುಗಿಯಲು ಬಂದವರಿಗೆ ಮಂಗಾಳಾರತಿಯಾಗುತ್ತಿತ್ತು, "ಏಯ್ ಕಪ್ಪು ಸೀರೆಯೋಳೇ, ಚಾಡಿ ಚರ್ಕಾ ಬುಟ್ಟು ಒಳ್ಳೇದಾಗಿ ಬಾಳುವೆ ಮಾಡು, " " ಏಯ್ ಜಾಜೀ,  ಒಳ್ಳೆ ಗರತೀ ಬಾಳ್ವೆ ಮಾಡ್ತಾಯೀ, ದೇವರಿಗೆ ಎಲ್ಲ ಗೊತ್ತೈತೆ. " ಪದ್ಮವ್ವಾ,  ಹಾಲಿಗೆ ಆಪಾಟಿ ನೀರ್ ಬುಡ್ಬೇಡಮ್ಮೀ, ದುಡ್ಡು ನೀರಂಗೆ ಸೋರೋದು ನಿಲ್ತದೆ " ಹೀಗೆ ಒಂದು ಎರಡೂ ಅಂತಲೇ ಇಲ್ಲ, ಕಡೆಗೊಮ್ಮೆ ಲಿಂಗಾಯತರ ಮೀನಾಕ್ಷಮ್ಮನನ್ನ ನೋಡಿ, ಮಡಿ ಮಡಿ ಅಂತ ಮಾರ್ದೂರ ಹೋಯ್ತೀಯಾ. . ದೇವ್ರು ಕೇಳಕ್ಕೆ ಹೊಲ್ ದೇವ್ರೇ ಬೇಕಾಯಾ? " ಅಂದು ಬಿಟ್ಟಿತು. ಅವಳಿಗೆ ಏನೂ ಗ್ರಹಿಕೆಯಾಗಲಿಲ್ಲವಾದರೂ ಯಾರೋ ಇಬ್ಬರಿಗೆ ಏನೋ ಹೊಳೆಯಿತು. ಸುಜಾತ ಗಾಬರಿಯಾಗಿದ್ದಳು. ಇಷ್ಟೂ ದಿನ ಯಾರೊಂದಿಗೂ ಏನೂ ಹೇಳಿರಲಿಲ್ಲ, ಜಾತಿಯ ವಿಚಾರ ಬಂದಾಗಲೆಲ್ಲ ನಾವು ಗೌಡರು ಅಂತಲೇ ಹೇಳುತ್ತ ಬಂದಿದ್ದಳು, ಅವಳಾದರೂ ಇಲ್ಲಿ ನೋಡುತ್ತಲೇ ಬಂದಿದ್ದಾಳೆ, ಏನಿಲ್ಲವೆಂದರೂ, ನಲ್ಲಿಯಲ್ಲಿ ಕಾವೇರಿ ನೀರು ಹಿಡಿಯುವಾಗ ಸುತ್ತಲಿನ ಕೆಲವರು ತಮ್ಮಲ್ಲೇ ಗುಸಪಿಸ ಅನ್ನುತ್ತ ನಲ್ಲಿಗೆ ಮೇಲಿಂದ ನಾಲ್ಕು ಚಂಬು ನೀರು ಹಾಕಿ ನಂತರ ನೀರು ಹಿಡಿಯುವುದನ್ನ ಕಂಡಿದ್ದಾಳೆ. ಅವಕಾಶವಾದಾಗ ಕೆಲ ಪಕ್ಕದ ಮನೆ ಗೆಳತಿಯರು ಎದುರು ಮನೆ ನೀಲಮ್ಮಳ ಜಾತಿಯೆತ್ತಿ ಮಾತಾಡುವಾಗ ತಾನು ಹೊಟ್ಟೆಯೊಳಗೆ ಬೇಕಷ್ಟು ಸಂಕಟ ಅನುಭವಿಸುತ್ತಾಳೆ, ತಾನು ನೋಡಿದಂತೆ ನೀಲಿ ಚತುರೆ, ಕೆಲಸ ಕಾರ್ಯವೂ ಸರಿ, ಅಚ್ಚುಕಟ್ಟೂ ಸರಿ ಆದರೆ ಅವಳ ಮನೆ ಅರಸಿನಕುಂಕುಮಕ್ಕೆ ಹೋದಾಗಲೂ ಹಾಗೆಯೇ, ಹೋಗುವುದಕ್ಕೇ ನೂರು ನೆಪ ತೆಗೆದು ಹಾಗೊಮ್ಮೆ ಹೋದರೂ ಅಲ್ಲಿ ನೀರೂ ಕುಡಿಯದೆ ಎದ್ದು ಬರುತ್ತಿದ್ದ ಕೆಲವು ನೆರೆಮನೆಯರನ್ನು ತಾನು ನೋಡಿದ್ದಾಳೆ, ಆಗೆಲ್ಲ ಇದೊಂದು ಜಾತಿಯಲ್ಲಿ ಮಾತ್ರ ನಾನು ಹುಟ್ಟಲೇ ಬಾರದಿತ್ತು ಅನಿಸಿದೆ. ಊರಲ್ಲಿ ಕೇರಿಯೇ ಹೊರತಾಗಿ ನಿಲ್ಲುತ್ತಿತ್ತು, ಈ ಎಲ್ಲ ಸಂಕಟ ಬೇಡವೆಂದೇ ಪಿಯುಸಿ ಓದು ಮುಗಿದಂತೇ ಬೆಂಗಳೂರಿನ ಗಾರ್ಮೆಂಟ್ ಫ್ಯಾಕ್ಟರಿ ಸೇರಿಕೊಂಡಿದ್ದಳು, ಅಪ್ಪಿ ತಪ್ಪಿಯೂ ಜಾತಿಯ ವಿಚಾರ ಎತ್ತಿರಲೇ ಇಲ್ಲ. ಅಂಥದ್ದರಲ್ಲಿ ಈಗ ಪರಶುವಿನ ಹೊಲೆದೇವರು ಎಲ್ಲವನ್ನೂ ಬಯಲು ಮಾಡಿ ಬಿಮ್ಮನೆ ನಿಂತಿತ್ತು. ಯಾರಿಗೆಷ್ಟು ತಿಳಿಯಿತೋ, ಹೊಲೆದೇವರ ಬಗೆ ಯಾರಿಗೆಷ್ಟು ಗೊತ್ತೋ ಅಂತೂ ನೆರೆಮನೆಯ ಗೆಳತಿಯರು ತನ್ನತ್ತ ಕುಹಕದಿಂದ ನೋಡುತ್ತಿದ್ದಾರೆ ಅಂತ ಸುಜಾತಳಿಗೆ ಅನಿಸತೊಡಗಿತ್ತು.  ತಮ್ಮ ನಡುವೆ ಇಷ್ಟೂ ದಿನ ಇರದ ಮುಟ್ಟಲಾರದ ಪರದೆಯೊಂದು ಆಕಾಶದಿಂದ ಉರುಳಿ ಬಿದ್ದಿದೆ ಅನಿಸಿ ಅವಳು ಕಂಗಾಲಾಗಿದ್ದಳು, ಸಧ್ಯಕ್ಕೊಂದು ಬಿಡುಗಡೆಗಾಗಿ ಮನಸು ಆಗ್ರಹಿಸಿತ್ತು, ಅದೇ ನೆಪವಾಗಿ ಪರಶುವನ್ನೂ ಮಕ್ಕಳನ್ನೂ ಬಗಲಿಗೆ ಹಾಕಿಕೊಂಡು ಡೊಳ್ಳನಕೇರಿಗೆ ಮಟಮಟ ಮಧ್ಯಾಹ್ನಕ್ಕೆ ಬಂದಿಳಿದಿದ್ದಳು. ಅದಕ್ಕಿಂತ ಮುಂಚೆ ಅವಳೆಂದೂ ಅಲ್ಲಿಗೆ ಬಂದವಳಲ್ಲ, ಮದುವೆ ಕೂಡ ರಿಜಿಸ್ಟ್ರಾಫೀಸಲ್ಲಿ ದೇವು ಸಾವ್ಕಾರನೇ ಮುಂದೆ ನಿಂತು ಮಾಡಿಸಿದ್ದ. ಯಾವತ್ತಿಗೂ ಜಾತಿಯವನನ್ನ ಮದುವೆಯಾಗಲೇ ಬಾರದು ಅಂದುಕೊಂಡಿದ್ದವಳಿಗೆ ಒದಗಿಬಂದವನು ಪರಶುವೇ. ಅವನು ನೋಡಲು ಚೆಲುವ, ಅನಾಮತ್ತು ಆರಡಿಯಿದ್ದ, ಕಳೆಕಳೆಯಾದ ಮಖನೋಡಿದರೆ ಹುಡುಗ ಐದನೇ ಕ್ಲಾಸು ಕೂಡ ಹತ್ತಿಲ್ಲವೆಂದರೆ ನಂಬಲಾಗುತ್ತಿರಲಿಲ್ಲ. 

(ಮುಂದುವರೆಯುವುದು…)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ತಿರುಪತಿ ಭಂಗಿ
ತಿರುಪತಿ ಭಂಗಿ
9 years ago

ಕಥೆ ಮನಸಿಗೆ ಹಿಡಿಸಿತು

sangeetha raviraj
sangeetha raviraj
9 years ago

Dollanakeri baraha sooper

3
0
Would love your thoughts, please comment.x
()
x