ಪ್ರೀತಿಯ ಅತ್ತೆಯಾಗುವವಳಿಗೊಂದು ಪತ್ರ: ಪದ್ಮಾ ಭಟ್

                           
ಪ್ರೀತಿಯ ಅಮ್ಮ..
ಅಮ್ಮನೆಂದು ಯಾಕೆ ಕರೆಯುತ್ತಿದ್ದಾಳೆ ಎಂದು ಯೋಚಿಸುತ್ತಿದ್ದೀಯಾ? ನೀನು ನನ್ನನ್ನು ಮಗಳೆಂದೇ ಕರೆದ ತಕ್ಷಣವೇ ನಿನ್ನನ್ನು ಅಮ್ಮನೆಂದು ಸ್ವೀಕರಿಸಿಬಿಟ್ಟೆ..ಅದಿರಲಿ.. ಆವತ್ತು ನೀ ಬರೆದ ಪತ್ರ ಓದುತ್ತಿದ್ದಂತೆಯೇ  ಕಣ್ಣಂಚಿನಲ್ಲಿ ಸಣ್ಣಗೆ ನೀರು ಒಸರಿತ್ತು..  ಜಗತ್ತಿನ ಎಲ್ಲರಿಗೂ ನಿನ್ನಂತಹ ಅತ್ತೆಯೇ ಸಿಕ್ಕಿದ್ದರೆ ಎಂದು ಅನಿಸಿದ್ದೂ ಹೌದು.. ನಿನ್ನಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಅನಿಸಿತ್ತು. ನಿನ್ನ ಪತ್ರವು ಕೇವಲ ಪದಗಳಿಂದ ತುಂಬಿರಲಿಲ್ಲ.. ಅಲ್ಲಿ ನಮ್ಮ ಕುಟುಂಬವನ್ನೇ ಪ್ರೀತಿಯ ದಡದಲ್ಲಿ ಇರಿಸುವ ಆತ್ಮೀಯತೆ ಇತ್ತು..ಬದುಕು ತೋರಿಸಿದ ಎಲ್ಲವನ್ನೂ ಸಮಚಿತ್ತದಿಂದ ಸರಿದೂಗಿಸಬೇಕೆಂಬ ಹಾರೈಕೆಯೂ ಇತ್ತು.. ನಿನ್ನ ಸೊಸೆಯಾಗಿ ನೋಡಿಕೊಳ್ಳುವುದಿಲ್ಲ.. ನೀ ನನಗೆ ಅಮ್ಮನಾದ ಮೇಲೆ ನಿನ್ನ ಮಗಳ ಸ್ಥಾನವನ್ನು ನಾ ತುಂಬದಿದ್ದರೆ ಹೇಗೆ.. 

ಯಾರ್‍ಯಾರೋ ಏನೇನೋ ಹೇಳುತ್ತಾರೆ ನಿಜ.. ಅದರಲ್ಲಿ ಒಳ್ಳೆಯದನ್ನು ಮಾತ್ರ ನಾ ತೆಗೆದುಕೊಳ್ಳುತ್ತೇನೆ.. ಈ ಜಗತ್ತಿನಲ್ಲಿ ಒಳ್ಳೆಯದ್ದನ್ನು ತಪ್ಪಿಸಲು ತುಂಬಾ ಜನರಿರುತ್ತಾರೆಂದು ನನಗೂ ಗೊತ್ತು..ಮದುವೆಗಿಂತ ಮೊದಲೇ ನೀ ನನ್ನ ಬಗೆಗೆ ವಹಿಸಿರುವ ಕಾಳಜಿಯನ್ನು ಮೆಚ್ಚಿಕೊಳ್ಳಬೇಕಾದದ್ದೇ.. ”ಕಾನೂನು ನಮ್ಮ ಪರವಿದೆ ಎಂದು, ಅದನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡರೆ ಬದುಕು ಹಾಳಾಗುತ್ತದೆ” ಎಂಬ ನಿನ್ನ ಪತ್ರದಲ್ಲಿನ ಸಾಲನ್ನು ನೋಡಿ, ಅಕ್ಷರಶಃ ಸತ್ಯವೆಂದು ಅನಿಸಿದೆ.. ನಿಜ ಅಮ್ಮಾ.. ನಮಗೆ ಬೇಕಾಗಿರುವುದು ಬದುಕು…ಸಣ್ಣ ಪುಟ್ಟ ಮನಸ್ತಾಪಗಳೇನಿದ್ದರೂ ಮಾತಿನಲ್ಲೇ ಬಗೆಹರಿಸಿಕೊಳ್ಳಬಹುದಲ್ಲವೇ..ನಮ್ಮ ಹಕ್ಕು ಗಿಕ್ಕು ಅಂತೆಲ್ಲಾ ಹೋದರೆ, ಇತ್ತ ಜೀವನ ಅಲುಗಾಡಲು ಶುರುವಾಗಿಬಿಡುತ್ತದೆ.. ಹೊಂದಾಣಿಕೆ ಇಲ್ಲಿ ತುಂಬಾನೇ ಅಗತ್ಯ..

ಅಮ್ಮ.. ನಾನೂ ತುಂಬಾ ಮುದ್ದಿನಿಂದ ಬೆಳೆದವಳು.. ನಿಮ್ಮ ಮಗನನ್ನು ಹೇಗೆ ಬೆಳೆಸಿದ್ದೀರೋ, ಹಾಗೆಯೇ ನನ್ನಪ್ಪ ಅಮ್ಮನೂ ನನಗೆ ಕೇಳಿದ್ದಕ್ಕಿಂತಲೂ ಹೆಚ್ಚಿನದೇ ಕೊಟ್ಟು ಬೆಳೆಸಿದ್ದಾರೆ..ಅವರೆಲ್ಲರ ಪ್ರೀತಿಯನ್ನು ನಾ ನಿಮ್ಮಲ್ಲಿ ಬಯಸುತ್ತೇನೆ.. ನಿನ್ನ ಮಗನಿಗೆಷ್ಟು ಪ್ರೀತಿಯನ್ನು ಕೊಡುತ್ತೀರೋ ಅಷ್ಟೇ ಪ್ರೀತಿ ನಂಗೂ ಕೊಡಬೇಕೆಂಬ ಪ್ರೀತಿಯಲ್ಲಿ ಹಠಮಾರಿ ನಾನು..ಅಷ್ಟಲ್ಲದೇ ನನಗೆ ಮದುವೆಯ ನಂತರವೂ ಓದಬೇಕೆಂಬ ಆಸೆಯಿದೆ..ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೇಬೇಕು..ಎಲ್ಲಕ್ಕಿಂತಲೂ ಹೆಚ್ಚಾಗಿ, ನಿಮ್ಮ ಮಗನ ಹೆಂಡತಿ ನಾನು ಎನ್ನುವುದಕ್ಕಿಂತ, ನಿಮ್ಮದೇ ಮಗಳೆಂಬಂತೆ ಪ್ರೀತಿಸದರೆ, ನಿಮ್ಮೆಲ್ಲರ ಪ್ರೀತಿಯ ಮುಂದೆ ಕರಗಿ ಹೋಗುವ ಸ್ವಭಾವದವಳು ನಾನು.

ನಿನ್ನಷ್ಟು ಪ್ರಬುದ್ಧತೆ ನನ್ನಲ್ಲಿರಲಿಕ್ಕಿಲ್ಲ.. ನಾನಿನ್ನೂ ಚಿಕ್ಕವಳು. ನನ್ನಮ್ಮನ ಬಳಿ ಎಷ್ಟೋ ಬಾರಿ ಮುಂಗೋಪದಿಂದ ಮಾತನಾಡಿ ಅಭ್ಯಾಸ.. ಆದರೂ ಮೊದಲಿಗಿಂತ ಈಗ ಕಡಿಮೆ ಮಾಡಿದ್ದೇನೆ.. ನಿನ್ನ ಬಳಿಯೂ ಅಮ್ಮನದ್ದೇ ಸಲುಗೆಯಿಂದ ಹಾಗೆ ಮಾತನಾಡುತ್ತೇನೋ, ಗೊತ್ತಿಲ್ಲ..ಆದರೆ ತಕ್ಷಣವೇ ಬಂದು ಸ್ಸಾರಿ ಕೇಳಿ ಬಿಡೋ ಮನಸ್ಸು.. ಆದರೆ ಅಲ್ಲಿ ಪ್ರೀತಿ ಮಾತ್ರ ಇರುತ್ತೆ ನನ್ನನ್ನು ಮುಂಗೋಪದಿಂದ ತಿದ್ದಿಬಿಡುವ ಹೊಣೆ ನಿನ್ನದು.. ನಿನ್ನ ಮಗನಿಗೂ ಇದರ ಬಗ್ಗೆ ಮೊದಲೇ ತಿಳಿಸಿಬಿಟ್ಟಿದ್ದೇನೆ.. ಹತ್ತಿರ ಬಂದು ಸಣ್ಣಗೆ ಚೂಟಿದ್ದಾನೆ ಅವನು..

ಇನ್ನು ಅಕ್ಕಪಕ್ಕದ ಮನೆಯವರ ಬೇಡವಾದ ಮಾತನ್ನು ನೀ ಕೇಳುವುದಿಲ್ಲವೆಂದು ಅಂದುಕೊಂಡಿದ್ದೇನೆ..ಅವರೆಲ್ಲಾ ಎಷ್ಟೋ ಬಾರಿ ನಾವು ಹಾಳಾಗಲೆಂದೇ ಹಚ್ಚಿಕೊಡುತ್ತಾರೆ.. ನನ್ನ ಬಗ್ಗೆ ಅವರೇನೇ ಹೇಳಿದರೂ ನೀ ಹಿತ್ತಾಳೆ ಕಿವಿಯಾಗುವುದಿಲ್ಲವೆಂದು ನಿನ್ನ ಮೇಲೆ ನಂಬಿಕೆ ಇದೆ.. ಆದರೂ ಒಮ್ಮೆ ಹೇಳಿಬಿಡುತ್ತೇನೆ.. ಏನೇ ಇದ್ದರೂ ಮುಕ್ತವಾಗಿ ಮಾತನಾಡಿಕೊಳ್ಳೋಣ.. ಅಮ್ಮ ಮಗಳ ಸಂಬಂಧ ಎಂದಿಗೂ ಹಾಳಾಗಬಾರದಲ್ವಾ?( ಹಾಳಾಗುವುದಿಲ್ಲ)..ಇನ್ನು ಮನೆಗೆಲಸದ ವಿಚಾರಕ್ಕೆ ಬಂದಾಗ ಇಷ್ಟು ವರುಷ ನೀನೇ ಮಾಡಿದ್ದೀಯಾ.. ನನ್ನವನನ್ನು ಚೆನ್ನಾಗಿ ಬೆಳೆಸಿದ್ದೀಯಾ.. ಇಷ್ಟೊಂದು ನೀನೇ ಮಾಡಿರುವಾಗ ನನಗೂ ಸ್ವಲ್ಪ ಜವಾಬ್ದಾರಿ ಬರಬೇಕಲ್ಲವೇ? ಅಡುಗೆಯನ್ನು ಚನ್ನಾಗಿ ಅಲ್ಲದಿದ್ದರೂ, ತಿನ್ನುವ ಹಾಗಂತೂ ಮಾಡಲು ಕಲಿತಿದ್ದೇನೆ.. ನಾನು ಓದಿದ್ದೇನೆ ಎನ್ನುವುದಕ್ಕಿಂತ, ನನಗಿಂತಲೂ ಹೆಚ್ಚು ಬದುಕಿನ ಪಾಠವನ್ನು ನೀನೇ ಕಲಿತಿದ್ದೀಯಾ.. ನಿನ್ನೆಲ್ಲಾ ಅನುಭವಗಳಲ್ಲಿ ಸ್ವಲ್ಪವಾದರೂ ಕೇಳಿ ಕಲಿಯುವ ಆಸೆ ನಂದು..

ನಿನ್ನ ಪತ್ರಕ್ಕೆ ಪ್ರತಿಯುತ್ತರ ಎನ್ನುವುದಕ್ಕಿಂತ ಇದು ನನ್ನ ಪ್ರೀತಿಯ ಅಮ್ಮನಿಗೆ ಬರೆದ ಪ್ರೀತಿಯ ಓಲೆ.. ಇನ್ನೂ ನಾ ನಿನ್ನ ಸೊಸೆಯಾಗುವುದಕ್ಕಿಂತ ಮುಂಚೆಯೇ, ನೀ ನನ್ನ ಮಗಳೆಂದು ಸಂಬೋಧಿಸಿದಿಯಲ್ವಾ? ಆವತ್ತೇ ನಿರ್ಧರಿಸಿಬಿಟ್ಟೆ.. ಮನೆಯ ಮಗಳಾಗಿ ಇರಬೇಕೆಂದು.. ಇನ್ನು ಲೆಕ್ಕ ಹಾಕಿದರೆ ತಿಂಗಳು ಇರಬಹುದೇನೋ ಮದುವೆಗೆ..ನಿನ್ನ  ಮಗನ ಕೈ ಹಿಡಿಯುವ ಅದೃಷ್ಟಶಾಲಿ ನಾನು.. ನಿನ್ನ ಮಗನನ್ನು ಕಿತ್ತುಕೊಳ್ಳುತ್ತೇನೆಂದು ಅಂದುಕೊಳ್ಳದಿರು.. ನಿನ್ನ ಮನಸಿನ ತಳಮಳ ನನಗೂ ಅರ್ಥವಾಗುತ್ತದೆ.. ನನ್ನಣ್ಣನ ಮದುವೆಯಾಗುವಾಗ ನನ್ನಮ್ಮನೂ ಹೀಗೆಯೇ ಯೋಚಿಸಿದ್ದಳು..ನಿನ್ನ ಮಗನ ಪ್ರೀತಿ ನಿನ್ನ ಮೇಲೆ ಕಡಿಮೆಯಾಗುತ್ತದೆಯೆಂಬ ಗೊಂದಲ ಬೇಡ.. ಬದಲಾಗಿ ಈ ಮಗಳ ಪ್ರೀತಿಯೂ ನಿನ್ನ ಪಾಲಿಗಿರುತ್ತೆ.. 

ಈ ಪತ್ರ ನಿನಗೆ ತಲುಪಿದ ಕೂಡಲೇ ನೀನು ಓದಿ ಖುಷಿ ಪಡುತ್ತೀಯಾ ಎಂಬುದು ನನಗೆ ಗೊತ್ತು..  ನಿನ್ನ ಮನೆಯಲ್ಲಿ ಎಷ್ಟೋ ವರುಷದಿಂದ ನೀ ಹಚ್ಚುತ್ತಿದ್ದ ದೀಪವನ್ನು ಮುಂದೆಂದೂ ಬೆಳಗುವಂತೆ ಕಾಯಲು ನಾ ಬರುವೆ.. ನಿಮ್ಮ ಸೊಸೆಯಾಗಿ ಅಲ್ಲ.. ಮಗಳಾಗಿ ..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x