ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೧೦): ಅಖಿಲೇಶ್ ಚಿಪ್ಪಳಿ


(ಕೊನೆಯ ಕಂತು)

ಈ ಲೇಖನ ಮಾಲೆಯಲ್ಲಿ ಎರಡೂ ವರದಿಯ ಹಲವು ವಿಚಾರಗಳನ್ನು ವಿವರವಾಗಿ ನೋಡಲಾಗಿದೆ. ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನರಿಗೆ ವರದಿಯ ಪ್ರಾಮಾಣಿಕ ನೋಟ ಬೇಕಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು, ಹೂಡಿಕೆದಾರರು ಹಾಗೂ ರಾಜಕಾರಣಿಗಳು ಸೇರಿಕೊಂಡು ವರದಿಯನ್ನು ತಿರುಚಿ ಜನರನ್ನು ತಪ್ಪ ದಾರಿಗೆ ಎಳೆಯುತ್ತಿದ್ದಾರೆ. ದೂರದೃಷ್ಟಿಯಿಂದ ಯೋಚಿಸುವುದಾದರೆ, ಮಾಧವ ಗಾಡ್ಗಿಳ್ ವರದಿಯು ಹೆಚ್ಚು ಜನಸ್ನೇಹಿ ಹಾಗೂ ಪರಿಸರಸ್ನೇಹಿಯಾಗಿದೆ. ಮಾಧವ ಗಾಡ್ಗಿಳ್ ವರದಿಗೆ ವ್ಯಾಪಕ ವಿರೋಧ ಎದುರಾಗಿದ್ದರಿಂದ, ಈ ವರದಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಜನಸ್ನೇಹಿ ಹಾಗೂ ಪರಿಸರಸ್ನೇಹಿಗೊಳಿಸುವ ಅಂಶಗಳನ್ನು ಪಟ್ಟಿ ಮಾಡಿ ಸಾಮಾಜಿಕ-ಆರ್ಥಿಕವಾಗಿ ಹಿನ್ನೆಡೆಯಾಗದಂತೆ ಒಂದು ಅಂತಿಮವಾದ ನಿರ್ಣಯವನ್ನು ಮಂಡಿಸಬೇಕು ಎಂಬ ಆದೇಶವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಡಾ:ಕಸ್ತೂರಿ ರಂಗನ್ ನೇತೃತ್ವದ ಸಮಿತಿಗೆ ಸೂಚಿಸಿತ್ತು. ಯೋಜನಾ ಆಯೋಗದ ಅಧ್ಯಕ್ಷರು ಆದ ಕಸ್ತೂರಿ ರಂಗನ್ ತಮ್ಮ ಮೂಗಿನ ನೇರಕ್ಕೆ ಎಂಬಂತೆ ವರ್ತಿಸಿ, ಗಾಡ್ಗಿಳ್ ವರದಿಯ ಎಲ್ಲಾ ಅಂಶಗಳನ್ನು ಕಡಿತಗೊಳಿಸಿ ತಮ್ಮ ಅಭಿಪ್ರಾಯವನ್ನು ಹೇರಿದರು. ಉದಾ: ಪಶ್ಚಿಮಘಟ್ಟಗಳ ೭೫% ಪ್ರದೇಶವನ್ನು ಜೀವಜಾಲ ಸೂಕ್ಷ್ಮಪ್ರದೇಶವೆಂದು ಘೋಷಿಸಬೇಕೆಂದು ಗಾಡ್ಗಿಳ್ ವರದಿ ಹೇಳಿದರೆ, ಕಸ್ತೂರಿ ರಂಗನ್ ವರದಿಯಲ್ಲಿ ಎಲ್ಲಾ ಸಂರಕ್ಷಿತ ಪ್ರದೇಶಗಳನ್ನೂ ಸೇರಿಸಿ ೩೭% ಪ್ರದೇಶಕ್ಕೆ ಕಡಿತಗೊಳಿಸಿತು.

ಇದೀಗ ಗ್ರಾಮಪಂಚಾಯ್ತಿ ಮಟ್ಟದಲ್ಲೂ ಕೂಡ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತವಾಗುತ್ತಿದೆ. ವಿಪರ್‍ಯಾಸ ನೋಡಿ, ಗಾಡ್ಗಿಳ್ ವರದಿಯಲ್ಲಿ ಒಟ್ಟಾರೆಯಾಗಿ ಎಲ್ಲಾ ಅಂಶಗಳನ್ನು ಪರಿಗಣಿಸಿ, ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಪಾರಿಸಾರಿಕ ಸೇವೆಯ ಮಹತ್ವವನ್ನು ಮನಗಂಡು, ಹವಾಮಾನ ವೈಪರೀತ್ಯದ ದೂರಗಾಮಿ ಪರಿಣಾಮಗಳನ್ನು ಗಮನಿಸಿ, ಸ್ಥಳೀಯರ ಮತ್ತು ಆದಿವಾಸಿಗಳ ಹಿತರಕ್ಷಣೆಯನ್ನೂ, ಸಾಮಾಜಿಕ-ಆರ್ಥಿಕ ಹಾಗೂ ಸುಸ್ಥಿರ ಅಭಿವೃದ್ದಿಗೆ ಒತ್ತುಕೊಟ್ಟು, ಪಶ್ಚಿಮಘಟ್ಟಗಳ ಜಾಗತಿಕ ಮಹತ್ವವನ್ನು ಉಳಿಸುವ ನಿಟ್ಟಿನಲ್ಲಿ ಸಮಗ್ರ ವರದಿಯನ್ನು ತಯಾರು ಮಾಡಿತ್ತು. ವಾಸ್ತವಿಕವಾಗಿ, ಮಾಧವ ಗಾಡ್ಗಿಳ್ ವರದಿಯನ್ನೇ ಜಾರಿ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕಿತ್ತು. ಅಭಿವೃದ್ಧಿ ಪ್ರತಿಪಾದಕರ, ಮೈನಿಂಗ್ ಮಾಫಿಯಾದ ಧಣಿಗಳ, ಕ್ವಾರಿ ಮಾಲೀಕರ, ಹೂಡಿಕೆದಾರರ ಹೀಗೆ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದ ಆಗಿನ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚಿಸಿ ಮಾನವಿಕ ನೆಲೆಯಲ್ಲಿ ಮಾಧವ ಗಾಡ್ಗಿಳ್ ವರದಿಯನ್ನು ಮರುಪರಿಶೀಲಿಸಲು ನಿಯಮಿಸಿತು. 

ಈಗಾಗಲೇ ಹೇಳಿದಂತೆ ಕಸ್ತೂರಿ ರಂಗನ್ ಯೋಜನಾ ಆಯೋಗದ ಅಧ್ಯಕ್ಷರು ಆಗಿರುವುದರಿಂದ, ಇವರ ನೇತೃತ್ವದ ಸಮಿತಿಯು ತುಂಬಾ ಹುಷಾರಿಯಾಗಿ ಮಾಧವ ಗಾಡ್ಗಿಳ್ ವರದಿಯನ್ನು ಸಂಪೂರ್ಣ ತಿರುಚುವಲ್ಲಿ ಯಶಸ್ವಿಯಾಯಿತು. ಮುಖ್ಯವಾಗಿ ಗಾಡ್ಗಿಳ್ ವರದಿಯು ಮಾಡಿದ ಶಿಪಾರಸ್ಸಿನಲ್ಲಿ, ಅರ್ಧ ಭಾಗದ ಸೂಕ್ಷ್ಮ ಪ್ರದೇಶವನ್ನೇ ಕಡಿತಗೊಳಿಸಿ, ೭೫% ನಿಂದ ೩೭% ಇಳಿಸಿತು. ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ನಿಶ್ಚಿತವಾಗಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವಂತಹ ಒಳ ಹುನ್ನಾರವನ್ನು ಇಟ್ಟುಕೊಂಡೇ ತನ್ನ ವರದಿಯನ್ನು ತಯಾರಿಸಿತು. ಇದಕ್ಕೆ ಸಂಬಂಧಿಸಿದಂತೆ ಕೆಲವು ಅಂಶಗಳನ್ನು ಗಮನಿಸಿಸೋಣ.

ಕೇಂದ್ರ ಸರ್ಕಾರದ ಆದೇಶದಂತೆ, ಮಾಧವ ಗಾಡ್ಗಿಳ್ ವರದಿಯನ್ನು ಮಾನದಂಡವಾಗಿಟ್ಟುಕೊಂಡು, ಪಶ್ಚಿಮಘಟ್ಟಗಳ ಉಳಿವಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ತಯಾರು ಮಾಡುವುದಷ್ಟೇ ಕಸ್ತೂರಿ ರಂಗನ್ ಸಮಿತಿಯ ಕೆಲಸವಾಗಿತ್ತು. ಆದರೆ, ಕಸ್ತೂರಿ ರಂಗನ್ ತಂಡವು ಗಾಡ್ಗಿಳ್ ವರದಿಯನ್ನು ಅತ್ಯಲ್ಪವಾಗಿ ಪರಿಗಣಿಸಿ ತನ್ನದೇ ಸ್ವಂತ ಅಭಿಪ್ರಾಯ ಹಾಗೂ ಕ್ರಿಯಾಯೋಜನೆಯನ್ನು ತಯಾರಿಸಿತು. ಮಾಧವ ಗಾಡ್ಗಿಳ್ ಸಮತಿಯು ಇಡೀ ಪಶ್ಚಿಮಘಟ್ಟಗಳ ಪ್ರದೇಶವನ್ನೇ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲು ಶಿಪಾರಸ್ಸು ಮಾಡಿತ್ತು. ಈ ಶಿಪಾರಸ್ಸು ಮಾಡುವ ಮೊದಲು ಇಎಸ್‌ಝಡ್೧, ಇಎಸ್‌ಝಡ್೨, ಇಎಸ್‌ಝಡ್೩ ಎಂದು ವಿಂಗಡಿಸಲು ಸಲಹೆ ನೀಡಿತ್ತು. ಇದಕ್ಕೂ ಪೂರ್ವದಲ್ಲಿ ಪಶ್ಚಿಮಘಟ್ಟಗಳ ಜೀವಿವೈವಿಧ್ಯ, ಸಾಂಸ್ಕ್ರತಿಕ, ಐತಿಹಾಸಿಕ ಮತ್ತು ಪಾರಿಸಾರಿಕ ಅಂದರೆ ಮಳೆ ಬೀಳುವ ಪ್ರಮಾಣ, ಮಳೆಗಾಲದ ಅವಧಿ, ಗುಡ್ಡಕುಸಿತದ ಅಪಾಯಗಳು ಹೀಗೆ ಹಲವು ಹತ್ತು ಅಂಶಗಳನ್ನು ಪರಿಗಣಿಸಿ ವರದಿಯನ್ನು ತಯಾರಿಸಿತ್ತು. ಆದರೆ, ರಾಷ್ಟ್ರೀಯ ಅರಣ್ಯ ನಿಯಮಾವಳಿಯಂತೆ ಗುಡ್ಡಗಾಡು ಪ್ರದೇಶದಲ್ಲಿ ೬೬% ಅರಣ್ಯಪ್ರದೇಶವಿರಲೇ ಬೇಕು ಎಂಬ ಸಂಗತಿಯನ್ನು ಉಲ್ಲಂಘಿಸಿ, ಬರೀ ೩೭% ಪ್ರದೇಶವನ್ನು ಮಾತ್ರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕು ಎಂಬ ಶಿಪಾರಸ್ಸು ಮಾಡಿತು. 

ಉದಾಹರಣೆಯಾಗಿ, ಕೇರಳ ರಾಜ್ಯದಲ್ಲಿ ಹಾಲಿ ಇರುವ ೩೦೦೦ ಅಕ್ರಮ ಕ್ವಾರಿಗಳು ಇಎಸ್‌ಝಡ್೧ ರ ಹೊರಗೆ ಬರುತ್ತವೆಯಾದ್ದರಿಂದ, ಅಕ್ರಮ ಗಣಿಗಾರಿಕೆಯು ನಿರಾಂತಕವಾಗಿ ಮುಂದುವರೆಯಲಿದೆ. ಮಾಧವ ಗಾಡ್ಗಿಳ್ ವರದಿಯನ್ನು ವಿರೋಧಿಸಿದ ೮೧% ಸಾರ್ವಜನಿಕರಲ್ಲಿ, ೫೩% ಜನರು ಗಣಿಗಾರಿಕೆಯನ್ನು ಬೆಂಬಲಿಸುವ ಬಂಡವಾಳಶಾಹಿಗಳು ಎಂಬುದನ್ನು ಗಮನಿಸಬೇಕಾಗುತ್ತದೆ. ಇನ್ನು ಕೈಗಾರಿಕೆ, ಕಟ್ಟಡ, ಕೃಷಿ ವಿಚಾರಗಳಲ್ಲೂ ಯಾವುದೇ ನಿರ್ದಿಷ್ಟವಾದ ಅಭಿಪ್ರಾಯವನ್ನು ನೀಡದೇ ಅನುಮಾನಸ್ಪದವಾಗಿ ಕೆಲವು ಅಂಶಗಳನ್ನು ನೀಡಿದೆ. ಪಶ್ಚಿಮಘಟ್ಟಗಳ ಸೂಕ್ಷ್ಮ ಪ್ರದೇಶಗಳಲ್ಲಿ ೨೧೫೨೯೬ ಚದರಡಿಗಿಂತ ದೊಡ್ಡದಾದ ರೆಸಾರ್ಟ್, ಅಪಾರ್ಟ್‌ಮೆಂಟ್ ಇತ್ಯಾದಿಗಳ ನಿರ್ಮಾಣವನ್ನು ನಿಷೇಧಿಸಬೇಕು ಎಂಬ ಶಿಪಾರಸ್ಸನ್ನು ಮಾಡಿದ್ದು, ಇದು ಪರೋಕ್ಷವಾಗಿ ಬಂಡವಾಳಶಾಹಿಗಳಿಗೆ ವರದಾನವಾಗಲಿದೆ. ಕೃಷಿಗೆ ಸಂಬಂಧಿಸಿದಂತೆ, ಇಎಸ್‌ಝಡ್೧ ಪ್ರದೇಶದಲ್ಲಿ ೫ ವರ್ಷಗಳ ಒಳಗಾಗಿ ಸಾವಯವ ಕೃಷಿಯನ್ನು ಅಳವಡಿಸಕೊಳ್ಳಬೇಕು ಎಂಬುದನ್ನು ಹೇಳಲಾಗಿದೆ. ಹಾಗೆಯೇ ಇಎಸ್‌ಝಡ್೨ ವ್ಯಾಪ್ತಿಗೆ ೮ ವರ್ಷ ಹಾಗೂ ಇಎಸ್‌ಝಡ್೩ ವ್ಯಾಪ್ತಿಗೆ ೧೦ ವರ್ಷಗಳ ಗಡುವು ನೀಡಿದೆ. ಹಾಗೂ ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಪರಿವರ್ತನೆ ಹೊಂದುವ ಸಮಯದಲ್ಲಿ ಸರ್ಕಾರವೂ ರೈತರಿಗೆ ಸಂಪೂರ್ಣ ಆರ್ಥಿಕ ಸಹಕಾರ ನೀಡಬೇಕು ಎಂಬುದನ್ನು ಹೇಳಿದೆ. ಈ ವಿಚಾರದಲ್ಲಿ ರಂಗನ್ ವರದಿ ಯಾವುದೇ ನಿರ್ದಿಷ್ಟ ಅವಧಿಯನ್ನು ನೀಡದೇ ನುಣುಚಿಕೊಂಡಿದೆ. 

ಹಾಗೆಯೇ ಮುಂದುವರೆದು, ರಾಜ್ಯ ಸರ್ಕಾರಗಳು ಕೇಂದ್ರದಿಂದ ಸಾಲವನ್ನು ಪಡೆದು, ಪಶ್ಚಿಮಘಟ್ಟಗಳ ಜನರಿಗೆ ನೆರವು ನೀಡಬೇಕು, ಬೇಕಾದರೆ ಸಾಲವನ್ನು ಮರುಪಾವತಿ ಮಾಡುವ ಅವಶ್ಯಕತೆಯೂ ಇರುವುದಿಲ್ಲ ಎಂಬಂತ ಅಕಾರ್ಯಸಾಧು ಕಲ್ಪನೆಯನ್ನು ನೀಡಿದೆ. ಪಶ್ಚಿಮಘಟ್ಟಗಳ ಉಳಿವಿಗೆ ೬ ರಾಜ್ಯಗಳ ಮುಖ್ಯಮಂತ್ರಿಗಳ ಸಮಿತಿಯನ್ನು ರಚಿಸಲು ರಂಗನ್ ವರದಿ ಹೇಳಿದೆ. ಯಾವ ಮುಖ್ಯಮಂತ್ರಿಗೆ ಇದಕ್ಕೆ ಸಮಯವಿದೆ ಎಂದು ತಿಳಿಸಿಲ್ಲ. ಹೀಗೆ ಕಸ್ತೂರಿ ರಂಗನ್ ವರದಿಯು ಪಶ್ಚಿಮಘಟ್ಟಗಳ ಉಳಿವಿಗೆ ಬದಲಾಗಿ ಅಳಿವಿನಂಚಿಗೆ ತಳ್ಳುವ ಒಳಹುನ್ನಾರವನ್ನು ಅಳವಡಿಸಲು ಶಿಪಾರಸ್ಸು ಮಾಡಿದೆ. 

ಇದರೊಟ್ಟಿಗೆ, ಕರ್ನಾಟಕದಲ್ಲೂ ಕೂಡ, ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವ ಮಾತುಗಳು ಹೇರಳವಾಗಿ ಕೇಳಿ ಬರುತ್ತಿದೆ. ಇಲ್ಲಿನ ಜನ-ಜೀವನ ಅಂತ್ಯವಾಗಿಯೇ ಬಿಡುತ್ತದೆ ಎಂಬಂತೆ ಬಿಂಬಿಸಲಾಗುತ್ತಿದೆ. ರಾಜಕಾರಣಿಗಳಂತೂ ಬಡವರ, ಸಾಮಾನ್ಯರ ಟೇಕೆದಾರನೇ ತಾನು ಎಂಬಂತೆ ವರ್ತಿಸುತ್ತಿದೆ. ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ರಾಜಕಾರಣಿಗಳ ಸಮಿತಿಯೊಂದನ್ನು ರಚಿಸಿ, ಗಾಡ್ಗಿಳ್ ವರದಿಯನ್ನು ಸಮಾಧಿ ಮಾಡಿದಂತೆ ಮಾಡಲು ಹುನ್ನಾರ ನಡೆಸಿದೆ. ಪಶ್ಚಿಮಘಟ್ಟಗಳನ್ನು ದೇವರೇ ಕಾಪಾಡಬೇಕು.

(ಮುಗಿಯಿತು. . .)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x