ಸಾಧಕರ ಶ್ವಾಸ, ಆತ್ಮವಿಶ್ವಾಸ: ಹೊರಾ.ಪರಮೇಶ್ ಹೊಡೇನೂರು

 
       
ವಿದ್ಯಾರ್ಥಿ ಜೀವನದಲ್ಲಿ ಕಲಿಕಾ ಫಲವನ್ನು ಯಶಸ್ವಿಯಾಗಿ ಪಡೆಯಲು ಅಗತ್ಯವಾಗಿ ಬೇಕಾದ ಅಂಶಗಳಲ್ಲಿ ಪ್ರಮುಖವಾದದ್ದು 'ಆತ್ಮವಿಶ್ವಾಸ'.
ಎಷ್ಟೇ ಬುದ್ಧಿ ಶಕ್ತಿ, ತಾರ್ಕಿಕ ಸಾಮರ್ಥ್ಯ, ಸೃಜನಶೀಲ ಸ್ವಭಾವ ಹೊಂದಿದ್ದರೂ ಆತ್ಮವಿಶ್ವಾಸ ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ.

"ಮೇಕೆದಾಟು"ವಿನ ಬಗ್ಗೆ ಗೊತ್ತಲ್ವ. ಹಿಂದೊಮ್ಮೆ ಅಲ್ಲಿ ಮೇಕೆಗಳನ್ನು ಮೇಯಿಸುತ್ತಿರುವಾಗ, ಒಂದು ಮೇಕೆಯು ಕಾಲುವೆಯ ಆಚೆ ಬದಿಯಲ್ಲಿ ಇದ್ದ ಹಸಿರು ಸೊಪ್ಪನ್ನು ತಿನ್ನುವ ಆಸೆ ಉಂಟಾಗಿ, ಅಗಲವಾದ ಆ ಕಾಲುವೆಯನ್ನು ಅಗಾಧವಾದ ಆತ್ಮವಿಶ್ವಾಸದಿಂದ ಒಂದೇ ನೆಗೆತಕ್ಕೆ ಜಿಗಿದು ದಾಟಿ ತನ್ನ ಆಸೆ ಪೂರೈಸಿಕೊಂಡಿತು. ಆ ಮೇಕೆಯ ಸಾಹಸದಿಂದಾಗಿ ಆ ಪ್ರದೇಶಕ್ಕೆ 'ಮೇಕೆದಾಟು' ಎಂದು ಕರೆಯುವ ರೂಢಿ ಉಂಟಾಯಿತಂತೆ.

ಈ ರೀತಿಯ ಆತ್ಮವಿಶ್ವಾಸ ನಮ್ಮ ವಿದ್ಯಾರ್ಥಿಗಳಲ್ಲಿ ಇರಬೇಕಾದುದು ಅತೀ ಅವಶ್ಯ. ಆರೋಗ್ಯದ ಸುಸ್ಥಿತಿಗೆ ಸದೃಢ ಶರೀರವು ಹೇಗೆ ಮುಖ್ಯ ಕಾರಣವೋ. ಹಾಗೆಯೇ ಮಾನಸಿಕ ಉನ್ನತಿಗೆ ಆತ್ಮ ಬಲವು ಬಹಳ ಮುಖ್ಯವಾಗುತ್ತದೆ.

ಮಕ್ಕಳಲ್ಲಿ ಹಿಂಜರಿಕೆ ಹೇಗೆ?
ಶಾಲೆಗಳಲ್ಲಿ ತರಗತಿ ಪ್ರಕ್ರಿಯೆಗಳು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಬಹುತೇಕ ಮಕ್ಕಳು ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣ ಅವರಲ್ಲಿರುವ ಅಧೈರ್ಯ, ಅನುಮಾನ ಮತ್ತು ಅವಿಶ್ವಾಸ. ನಾನು ಹೇಳುವ ಉತ್ತರ ತಪ್ಪಾಗಬಹುದೇನೋ, ಬಿಡಿಸಿದ ಚಿತ್ರ ಸರಿ ಹೋಗದೆ ಇತರರು ಅಣಕಿಸುವರೇನೋ, ಕೊಟ್ಟ ಜವಾಬ್ದಾರಿ ಮಾಡಲು ಕಷ್ಟವಾದೀತೇನೋ ಎಂಬ ಅಳುಕಿನಿಂದಲೇ ಭಾಗವಹಿಸುವಿಕೆಯಲ್ಲಿ ನಿರಾಸಕ್ತಿ ತೋರಿಸಿ ನಿರ್ಲಿಪ್ತರಾಗಿಬಿಡುತ್ತಾರೆ ಈ ವರ್ತನೆಯೇ 'ಹಿಂಜರಿಕೆ'. ಇದು ಕಲಿಕಾಪೂರ್ವ ಸ್ಥಿತಿಯಲ್ಲಿ ಸಾಮಾನ್ಯವಾಗಿ ಎಲ್ಲ ಬುದ್ಧಿಮತ್ತೆಯವರಲ್ಲಿಯೂ ಇದ್ದೇ ಇರುತ್ತದೆ. ಇದರಿಂದ ಮುಕ್ತರಾಗಿ ಮುನ್ನಡೆಯಬೇಕಾದರೆ ಬೇಕಾದ ಸುಲಭೋಪಾಯವೇ  ತಂತ್ರಗಳೇ ಆತ್ಮವಿಶ್ವಾಸ, ಅಭ್ಯಾಸ ಮತ್ತು ಪ್ರಯತ್ನ.

ಪುಟ್ಟ ಮಗು ತೆವಳುವ ಸ್ಥಿತಿಯಿಂದ ನಡೆಯುವ ಸಾಮರ್ಥ್ಯ ಪಡೆಯುವವರೆಗೂ ಅನೇಕ ಬಾರಿ ಬಿದ್ದಿರುತ್ತದೆ. ನೋವು ಅನುಭವಿಸಿರುತ್ತದೆ. ಹಾಗೆಂದು ಹೇಡಿಯಂತೆ ಹೆದರಿಕೊಂಡು ಮರಳಿ ಯತ್ನ ಮಾಡದೇ ಉಳಿದರೆ ತೆವಳುವಿಕೆಯ ಸ್ಥಿತಿಯಿಂದ ಮೇಲೇಳಲು ಸಾಧ್ಯವಾಗದೆ ಜೀವನ ಪರ್ಯಂತ ಹಾಗೆಯೇ ಇರಬೇಕಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳ ಕಲಿಕೆಯ ಆರಂಭದಲ್ಲಿ ಸಾಕಷ್ಟು ಬಾರಿ ತಪ್ಪುಗಳಾಗುತ್ತವೆ. ಇದರಿಂದ ಬೇಸರ ಸಹಜವಾಗಿ ಉಂಟಾಗುವುದರಿಂದ ಮುಂದುವರೆಯಲು ಮನಸ್ಸು ಹಿಂದೇಟು ಹಾಕುತ್ತದೆ. ತರಗತಿಯಿಂದ ತರಗತಿಗೆ ಸಾಮರ್ಥ್ಯಗಳು ಹೆಚ್ಚಾಗುತ್ತಾ ಹೋಗುವುದರಿಂದ ಅವುಗಳಿಗೆ ತಕ್ಕಂತೆಯೇ ನಮ್ಮ ಮನೋಬಲವೂ ವೃದ್ಧಿಯಾಗಬೇಕಾಗುತ್ತದೆ. ಹೊಸ ಅಧ್ಯಾಯಾಂಶಗಳು ನಮ್ಮೊಳಗೆ ಇಳಿಯಲು ಕಷ್ಟವಾಗುತ್ತದೆ. ಆ ಸಮಸ್ಯೆ ನಿವಾರಣೆಗೆ ಬೇಕಾಗಿರುವುದೇ ಅಭ್ಯಾಸ ಜನ್ಯವಾದ ಆತ್ಮ ವಿಶ್ವಾಸ. ತಪ್ಪು ಮಾಡದವರು ಈ ಜಗತ್ತಿನಲ್ಲಿ ಯಾರೂ ಯಶಸ್ಸು ಕಂಡ ಉದಾಹರಣೆಗಳಿಲ್ಲ. ಮಾಡಿದ ತಪ್ಪು ಹೇಗಾಯಿತೆಂಬುದನ್ನು ಕಂಡು ಹಿಡಿದು ಸರಿಪಡಿಸಿಕೊಂಡು ಮುಂದಡಿಯಿಟ್ಟವರೇ ಇಂದು ನಮ್ಮ ನಡುವೆ ಸಾಧಕರ ಪಟ್ಟಿಯಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಅಂತಹವರ ಬದುಕನ್ನು ನಮ್ಮ ಯಶೋದಾರಿಗೆ ಸ್ಫೂರ್ತಿಯಾಗಿ, ಬಾಳ ದಾರಿಗೆ ದೀಪವಾಗಿ ಇಟ್ಟುಕೊಳ್ಳಬೇಕು.

*ಹಿಮಾಲಯ ಪರ್ವತವನ್ನು ಏರುವ ಸಂಕಲ್ಪ ಮಾಡಿಕೊಂಡ ತೇನ್ ಸಿಂಗ್ ಒಂದೇ ಪ್ರಯತ್ನಕ್ಕೆ ಆ ಸಾಧನೆ ಮಾಡಲಾಗಲಿಲ್ಲ. ಹಾಗೆಂದು ಅವನು ಎದೆಗುಂದಿದ್ದರೆ ಇಂದು ಆತ ಚರಿತ್ರೆಯ ಪುಟ ಸೇರಿರುತ್ತಿರಲಿಲ್ಲ. ಸೋಲಿಗೆ ಕಾರಣ ಹುಡುಕಿ, ವಿಶ್ಲೇಷಿಸಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡೇ ಮುಂದೆ ಸಾಧನೆ ಮಾಡಿ ವಿಶ್ವ ಖ್ಯಾತಿ ಹೊಂದಿದನು.

*ಜಗತ್ತಿಗೆ ವಿದ್ಯುತ್ ಬುರುಡೆ ಬಲ್ಬ್ ಆವಿಷ್ಕರಿಸಿಕೊಟ್ಟ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಅದರಲ್ಲಿ ಯಶಸ್ವಿಯಾಗುವ ಮೊದಲು ಸಾವಿರಾರು ಪ್ರಯತ್ನಗಳು ವಿಫಲವಾಗಿದ್ದವಂತೆ. ಸಾಮಾನ್ಯವಾಗಿ ಕೆಲವೇ ಬಾರಿ ಸೋಲು ಕಂಡರೂ ಹಿಂದೇಟು ಹಾಕುವ ಮಂದಿಯೇ ಬಹಳ, ಅಂತಹದ್ದರಲ್ಲಿ ಸಾವಿರಾರು ಪ್ರಯತ್ನಗಳ ಹಿಂದೆ ಅದೆಂತಹ ಅದಮ್ಯವಾದ ಆತ್ಮ ವಿಶ್ವಾಸವಿತ್ತು ಎಂಬುದನ್ನು ಊಹಿಸಿಕೊಂಡರೆ ನಂಬುವುದೂ ಕಷ್ಟ.

*ವರನಟ ಡಾ.ರಾಜ್ ಕುಮಾರ್ ರವರು ಕೇವಲ ಮೂರನೇ ತರಗತಿವರೆಗಿನ ವಿದ್ಯಾಭ್ಯಾಸ ಮಾಡಿದ್ದರೂ ಮುಂದೆ ನಾಯಕರಾಗಿ, ಗಾಯಕರಾಗಿ ಜನಪ್ರಿಯರಾಗಿದ್ದು ಅವರ ಅನನ್ಯ ಸಾಧನೆ ಮತ್ತು ಅದ್ಭುತವಾದ ಆತ್ಮವಿಶ್ವಾಸದಿಂದ.

ಹೀಗೆ ಯಾವುದೇ ಕೆಲಸ ಕಾರ್ಯಗಳಲ್ಲಿ ಭಾಗವಹಿಸಲು, ಯಶಸ್ಸು ಪಡೆಯಲು ಧೈರ್ಯ, ಸಾಮರ್ಥ್ಯ, ಸಾಧನಾಶೀಲವಾದ ಮನಸ್ಸು ಜೊತೆಗೆ ಆತ್ಮವಿಶ್ವಾಸ ಇರಲೇಬೇಕು. ಸಾಮರ್ಥ್ಯವಿದ್ದರೂ ಧೈರ್ಯವಿಲ್ಲದಿದ್ದರೆ ಪ್ರಯೋಜನವಿಲ್ಲ. ಧೈರ್ಯದೊಂದಿಗೆ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಅವುಗಳ ಬಳಕೆಯೊಂದಿಗೆ ಪರಿಶ್ರಮ ಸೇರಿಬಿಟ್ಟರೆ, ಸಾಧನೆ, ಸಫಲತೆಗಳು ಬಹಳ ಸುಲಭವಾಗಿಬಿಡುತ್ತವೆ.

ದೇಹ ಬಲಕ್ಕಿಂತ ಆತ್ಮಬಲ ದೊಡ್ಡದು:
ಆಯ್ದ ಒಂದು ವಿಷಯವನ್ನು ಒಮ್ಮೆ ಓದಿದರೆ ಅದರ ಅರ್ಥ ಒಂದೇ ಪ್ರಯತ್ನಕ್ಕೆ ಗೋಚರಿಸದೇ ಇರಬಹುದು. ಅದನ್ನೇ ಪುನಃ ಪುನಃ  ನಾಲ್ಕಾರು ಬಾರಿ ಓದಿದರೆ, ಮೊದಲ ಪ್ರಯತ್ನಕ್ಕಿಂತ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗೆಯೇ ಒಂದು ಹಾಡನ್ನು  ಕಲಿಯಬೇಕೆಂದಾಗ ಒಂದೇ ಪ್ರಯತ್ನಕ್ಕೆ ಸಾಧ್ಯವಾಗುವುದಿಲ್ಲ. ಆ ಹಾಡನ್ನು ಮತ್ತೆ ಮತ್ತೆ ಕೇಳಿ, ಶ್ರುತಿ, ಲಯ, ತಾಳ ಏರಿಳಿತಗಳು ಭಾವಕ್ಕೆ ತಕ್ಕಂತೆ ಅಳವಡಿಕೆಯಾಗಿರುವುದನ್ನು ಗಮನಿಸಿ, ಅರ್ಥೈಸಿಕೊಂಡುಬಿಟ್ಟರೆ, "ಕಲಿಕೆ" ದೃಢೀಕರಣಗೊಳ್ಳುತ್ತದೆ. ಈ ರೀತಿಯ ಅಭ್ಯಾಸಗಳಿಂದಲೇ ನಾವು ವಿದ್ಯಾಭ್ಯಾಸ ಮಾಡುವಾಗ ತೊಡಗುವ ಕಲಿಕಾ ಚಟುವಟಿಕೆಗಳನ್ನು ಮನನ ಮಾಡಿಕೊಳ್ಳಲು ಸುಲಭವಾಗುತ್ತದೆ. ಅಲ್ಲದೆ, ಸಿದ್ಧಿಸಿದ ಜ್ಞಾನವನ್ನು ನಮ್ಮ ನಿತ್ಯ ಜೀವನದ ಅಗತ್ಯಗಳಿಗೆ ಅನ್ವಯಿಸಿಕೊಳ್ಳುವ ಕೌಶಲ್ಯವೂ ಸಿದ್ಧಿಯಾಗುತ್ತದೆ.

ದೈಹಿಕವಾಗಿ ನ್ಯೂನತೆಯಿದ್ದರೂ ಮನೋಬಲದಿಂದಲೇ ಹಿಂಜರಿಕೆಯನ್ನು ಹಿಂದಿಕ್ಕಿ ಮುಂದಡಿಯಿಟ್ಟು ಸಾಧನೆಗೈದಿರುವ ಅನೇಕ ಸಾಧಕರ ಯಾದಿಯೇ ನಮ್ಮ ಕಣ್ಣ ಮುಂದಿದೆ. ಅವರ ಬದುಕು ನಮಗೆಲ್ಲಾ ಆದರ್ಶ ಮತ್ತು ಅನುಕರಣೀಯವಾಗಬೇಕು.

* ಹುಟ್ಟುಕುರುಡರಾಗಿದ್ದೂ ಗಾನಯೋಗಿಗಳಾಗಿ ಹೊರಹೊಮ್ಮಿದ ಪಂ.ಪಂಚಾಕ್ಷರಿ ಗವಾಯಿಗಳು.
* ದೈಹಿಕ ನ್ಯೂನತೆಯಿದ್ದರೂ, ಮಾನಸಿಕ ಸಾಮರ್ಥ್ಯದ ಸದ್ಭಳಕೆಯಿಂದಲೇ ಸಾಧನೆ ಮಾಡಿರುವ ಸಾಫ್ಟ್ ವೇರ್ ಉದ್ಯೋಗಿ ಅಶ್ವಿನ್.
* ಬಹುಅಂಗವೈಕಲ್ಯತೆಯಿದ್ದರೂ ವ್ಯಂಗ್ಯಚಿತ್ರಕಾರರಾಗಿ ಹೆಸರು ಮಾಡಿರುವ ಅರುಣ್ ನಂದಗಿರಿ.
*ವಿಕಲಾಂಗ ಸ್ಥಿತಿಯಿದ್ದರೂ ಪ್ಯಾರಾಲಂಪಿಕ್ ನಲ್ಲಿ ಬೆಳ್ಳಿ ಪದಕ ಗಳಿಸಿದ ಹಳ್ಳಿಯ ಪ್ರತಿಭೆ ಹೊಸನಗರದ ಹೆಚ್.ಎನ್.ಗಿರೀಶ್.

ಇವರಷ್ಟೇ ಅಲ್ಲದೆ ಇಂತಹ ನೂರಾರು ಸಾಧಕರು ನಮ್ಮೆಲ್ಲರ ನಡುವೆಯೇ ತಮ್ಮ ನ್ಯೂನತೆಗಳನ್ನು ಮೆಟ್ಟಿ ನಿಂತು ಆತ್ಮಬಲದ ಮೂಲಕವೇ ಸಾಧನೆ ಮಾಡಿರುವ ನಿದರ್ಶನಗಳನ್ನು ಕಲಿಕಾರ್ಥಿಗಳು ಪ್ರೇರಣೆಯಾಗಿ ಪಡೆದುಕೊಂಡು ಹಿಂಜರಿಕೆ ಬಿಟ್ಟು ಮುಂದಡಿಯಿಡಬೇಕಾದುದು ಅತ್ಯಗತ್ಯ. ಆರಂಭದ ಸೋಲುಗಳನ್ನೇ ಅಡಿಗಲ್ಲುಗಳಾಗಿ ಇಟ್ಟುಕೊಂಡು, ಅವುಗಳ ಬುನಾದಿಯ ಮೇಲೆ ಗೆಲುವುಗಳ ಗೋಡೆ ಕಟ್ಟಿಕೊಂಡು ಸಾಧನೆಯ ಬೃಹತ್ ಬಂಗಲೆ ನಿರ್ಮಿಸಬಹುದಾಗಿದೆ.
-ಹೊರಾ.ಪರಮೇಶ್ ಹೊಡೇನೂರು

  *****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x