Facebook

ನನ್ನೆಲ್ಲಾ ಭಾವಗಳಿಗೆ ನಿನ್ನ ಪ್ರೀತಿಯ ಲೇಪನ..: ಪದ್ಮಾ ಭಟ್

ಕನ್ನಡದ ಬರಹಗಳನ್ನು ಹಂಚಿ ಹರಡಿ

         
ಕೂಸೆ.. ನಿನ್ ಸಂತಿಗೆ ಮಾತಾಡ್ತಾ ಇದ್ರೆ, ಸಮಯ ಹೋಗೋದೇ ಗೊತ್ತಾಗ್ತಿಲ್ಲೆ.. ಅದೆಂತಕ್ಕೆ ನೀ ಯಂಗೆ ಅಷ್ಟು ಇಷ್ಟ ಆದೆ.. ಅಂತಾ ಪದೇ ಪದೇ ಹೇಳುವ ನಿನಗೆ ನನ್ನಿಂದ ಉತ್ತರ ಕೊಡುವುದು ಕಷ್ಟ.. ಅದೇ ಆ ದಿನ. ಆ ಮುಸ್ಸಂಜೆಯ ಕೋಲ್ಮಿಂಚಿನಲಿ, ನಿನ್ನ ಮುಖವಷ್ಟೇ ಕಾಣುತ್ತಿದ್ದ ತುಸು ಬೆಳಕು, ಹೃದಯದ ಬಡಿತ ಇಷ್ಟು ಜೋರಾಗಿದ್ದನ್ನು ನಾನೆಂದೂ ಕೇಳಿರಲಿಲ್ಲ.. ಚಳಿಯಿಂದ ಮೈ ಕೊರೆಯುತ್ತಿತ್ತು.. . ಮೌನದ ಆಳದೊಳಗೆ , ಆಡಲಾಗದ ಮಾತುಗಳನ್ನೆಲ್ಲಾ ಕಣ್ಣುಗಳೇ ಹೇಳುತ್ತಿತ್ತು..  ಗೆಳೆಯಾ ನೀ ನನಗೇ ಗೊತ್ತಿಲ್ಲದಂತೆ,  ನನ್ನ ಹೃದಯದ ಸಾಮ್ರಾಜ್ಯದಲ್ಲಿ  ಲಗ್ಗೆಯಿಟ್ಟೆ.. ನಮ್ಮ ನಡುವಿನ ಹುಚ್ಚು ಕನಸುಗಳೆಲ್ಲಾ ಶುರುವಾಗಿದ್ದು , ನಾಳಿನ ಭರವಸೆಗಳನ್ನು ಭದ್ರವಾಗಿ ಇರಿಸಿಕೊಂಡದ್ದು, ಚೂರು ಕೈಗೆ ಕೈ ತಾಕಿದರೂ ಮಡಿಯೆಂಬಂತೆ ಶುರುವಾದ ಆ ಪ್ರೀತಿಗೆ ಅದೆಷ್ಟು ಅರ್ಥವಾಗದ ಮುಖಗಳೋ ಕಾಣೆ.. ’ಪ್ರೀತಿ ಗೀತಿ ಇದೆಲ್ಲಾ ನಾ ನಂಬೋಲ್ಲ’ ಅಂತಾ ಹಾಸ್ಟೇಲಿನ ಸ್ನೇಹಿತೆಯರ ಬಳಿ ಚರ್ಚೆಗಿಳಿಯುತ್ತಿದ್ದ ನಾನೇ ನಿನ್ನ ಪ್ರೀತಿಯೊಳಕ್ಕೆ ಬಂದೆ ಅಂದರೆ, ನೀ ನನ್ನ ಅದೆಷ್ಟು ಮೋಡಿ ಮಾಡಿರಬಹುದೋ..ಪ್ರತೀ ದಿನದ ಮುಸ್ಸಂಜೆಯೂ ಮುಗಿಯದಿರಲೆಂದು ಅಂದುಕೊಳ್ಳುತ್ತೇನೆ..ಅದೇ ಆ ಮೈದಾನದ ಕಟ್ಟೆಯ ಮೇಲೆ ಕೂತು, ನೀ ನನ್ನನ್ನು ಕಾಡಿಸುತ್ತೀಯಲ್ವಾ ಆ ಕ್ಷಣಕ್ಕಾಗಿಯೇ ಪ್ರತೀ ದಿನವೂ ಕಾಯುತ್ತೇನೆ.. ಇತ್ತೀಚಿಗಂತೂ ನಿನಗಾಗಿ ಕಾಯುವುದೆಂದರೂ ಇಷ್ಟವಾಗತೊಡಗಿದೆ..

ಕೋಳಿ ಜಗಳ, ಸಣ್ಣ ಮುನಿಸು,  ಕಣ್ಣಿಂದ ಜಾರಿದ ಭಾವಗಳು ಎಲ್ಲದಕ್ಕೂ ಪ್ರೀತಿಯ ಲೇಪನವಿರುತ್ತೆ.. ಮುಂಜಾನೆಯ ಮುಸುಕಿನಲಿ, ಸೂರ್‍ಯೋದಯದ ಬೆಳಗಿನಲಿ, ಹಕ್ಕಿಗಳ ಚಿಲಿಪಿಲಿ ಕಲರವದಲ್ಲಿ, ಮಳೆ ಬಂದಾಗ ಬರುವ ಮಣ್ಣಿನ ಕಂಪಿನಲ್ಲಿಯೂ ನಿನ್ನ ಕಾಣುವ ಹಂಬಲ..ನಿದ್ರೆ ಮಾಡಿದಾಗ್ಲೂ ಬಿಡೋದಿಲ್ವಲ್ಲೋ, ಕನಸಲ್ಲಿ ಬಂದು ಮುತ್ತು ಕೊಡ್ತೀನಿ ಅಂತ ಹೇಳಿ ಬೆಚ್ಚು ಬೀಳಿಸ್ತೀಯ.. ನೂರು ಸಾವಿರ ಜನರ ನಡುವೆಯಾದರೂ, ಪಟಕ್ಕನೇ ಹುಡುಕುವ ನಿನ್ ಕಣ್ ಮಾತ್ರ ಭಾರೀ ಜೋರು.. ನನ್ನ ತೊಡೆಯ ಮೇಲೆ ನೀನು ಒರಗಿ ಜೋಗುಳ ಹಾಡು ಎಂದಾಗ, ಸಂಗೀತಗಾರ್ತಿಯೇ ಆಗಿಬಿಡುತ್ತೇನೆ ನಾನು.. ನನ್ನ ಮಗುವೇ ಆಗಿಬಿಡುತ್ತೀಯ ನೀನು.. ಮುದ್ದಿನಿಂದ ತಲೆಸವರಿದಾಗ ಮುಗಿಯದಷ್ಟು ಪುಟ್ಟ ಹಠ ನಿಂದು..ಕನಸುಗಳನ್ನೆಲ್ಲಾ ಹೊಸೆದು ನನಸು ಮಾಡಬೇಕೆಂಬ ಆ ಚಿಗುರು ಮರವಾಗಲು ಈ ಪ್ರೀತಿಯ ನೀರೇ ಬೇಕು ಅಲ್ವೇನೋ ?
 
ಪ್ರತೀ ಸಲವೂ ನಾ ನಿನ್ನ ಬಳಿ ಜಗಳವಾಡಿ ಮುನಿಸಿಕೊಂಡು ಹೋದರೂ  ನನ್ನನ್ನು ಅದೆಷ್ಟು  ಸಂತೈಸುತ್ತೀಯಲ್ವಾ.. ತಪ್ಪು ನನ್ನದೇ ಇದ್ದರೂ ನೀನು ಸ್ಸಾರಿ ಅಂತಾ ಕೇಳ್ತೀಯ.. ನಂಗೂ ಗೊತ್ತು ಕಣೋ.. ನಮ್ಮ ಇಗೋ ಗಿಂತಲೂ, ಸಂಬಂಧವೇ ದೊಡ್ಡದು ಅಂತಾ. ನನ್ನಂತಹ ಜಗಳಗಂಟಿಯನ್ನೇ ಸಹಿಸಿಕೊಂಡಿದ್ದೀಯಲ್ಲ ನೀನು.. ಅದ್ಯಾವ್ ತರಹ ಹುಡುಗ ಅಂತಾನೇ ಗೊತ್ತಾಗಲ್ಲ..ನಾನು ಒಂದು ಹುಡುಗನ ಹತ್ರ ಮಾತನಾಡಿದ್ರೂ, ನಿನ್ ಮುಖ ಒಳ್ಳೆ ಕಿತ್ತೋಗಿರೋ ಚಾಪೆ ತರಹ ಆಗುತ್ತಲ್ವ.. ಅದನ್ ನೋಡೋದೂ ನಂಗೆ ಒಂಥರಾ ಮಜ ನಿನ್ನನ್ನು ಕಾಡಿಸುವುದರಲ್ಲಿಯೂ, ನನ್ನೊಲವ ಕಂಪು ತುಂಬಿರುತ್ತೆ ನೋಡು..ನೀನಂದ್ರೆ ಬರೀ ಹೆಸರಲ್ಲ ನಂಗೆ.. ನೀನಂದ್ರೆ ನಂಗೆ ಉಸಿರು..ಮರಭೂಮಿಯಲ್ಲಿ ಸಿಕ್ಕ ಓಯಸಿಸ್.. ಬಾಯಾರಿ ಬಳಲಿ ಬಂದ ಜೀವಕೆ ತಂಪೆರೆಯುವ ಅಮೃತ ನೀನು..

ಪುಸ್ತಕಗಳ ಮಧ್ಯೆ ನೀ ಕೊಟ್ಟ ನವಿಲುಗರಿ, ಮೊದಲ ಬಾರಿಗೆ ನೀನಿತ್ತ ಗೆಂಪುಗುಲಾಬಿಯ ಹೂವು, ಲೆಕ್ಕವಿಲ್ಲದಷ್ಟು ಪ್ರೇಮಪತ್ರಗಳು ಇಂದಿಗೂ ನನ್ನಲ್ಲಿ ನಲಿಯುತ್ತಿದೆ..ಹುಟ್ಟು ಹಬ್ಬದ ದಿನ ನನ್ನ ಬಳಿ ಬಂದು, ಒಂದು ಸಾರಿ ತಬ್ಬಿಕೊಳ್ಳಲಾ? ಅಂತಾ ನನ್ನ ಅನುಮತಿಗಾಗಿ ಕಾಯುತ್ತಿದ್ದ ಆ ನಿನ್ನ ನೋಟ ಎಂದಿಗೂ ಹಸಿರು..ಮಳೆಗಾಲದಲ್ಲಿ ಛತ್ರಿ ತರದ ನೆಪವೊಡ್ಡಿ ಬರುವ ನಿಂಗೆ, ನನ್ನೊಡನೆಯೇ ಒಂದೇ ಛತ್ರಿಯಲ್ಲಿ ಹೋಗುವ ಬಹು ಆಸೆ ಅಂತಾ ನಂಗೂ ಗೊತ್ತು.. ನಿನ್ನ ಉಗುರಿನ ತುದಿಯೂ ಆಗಾಗ ನಗುವುದು ನಂಗೆ ಕೇಳಿಸುತ್ತೆ ಕಣೋ..ಎಂದಿಗೂ ಸಾಹಿತ್ಯವನ್ನು ಅರಿಯದ ನನ್ನೊಳಗೂ ಆ ದಿನ ಈ ಸಾಲುಗಳು ಮೂಡಿಬಿಟ್ಟಿದ್ದವು ನಿನ್ನ ಬಗೆಗೆ..

ನನ್ನೆದೆಯ ಮಿಡಿತಗಳಲಿ,
ಮುಚ್ಚಿಟ್ಟ ಕನಸಿನಂಗಳದಿ,
ಬಣ್ಣ ಹಚ್ಚಿತೊಂದು ಜೀವ..
ಬಿಸಿಯುಸಿರ ಜಾಡಿನಲಿ,
ಮರಳಿ ತಂದ ಬೆಡಗಿನಲಿ,
ಅರಳಿತೊಂದು ಭಾವ..

ನೋಡು.. ನಿನ್ನಿಂದ ನಾನೂ ಕವಯಿತ್ರಿಯಾಗಿಬಿಟ್ಟೆ.. ನಿನ್ನ ಬಗೆಗೆ ಬರೆದು ಬರೆದು..ಈ ಪತ್ರವನ್ನು ಪರಿಪೂರ್ಣವಾಗಿ ಬರೆಯಲು ನಂಗೆ ಸಾಧ್ಯವಾಗಲೇ ಇಲ್ಲ.. ಕಾರಣ ಇಷ್ಟೇ.. ನನ್ನೆಲ್ಲಾ ಭಾವಗಳನು ಬರಹದಲ್ಲಿ ವರ್ಣಿಸಲಾಗದು.. ಈ ಅಕ್ಷರಗಳೆಲ್ಲಾ ಸಾಕೇ ಆಗಲ್ಲ ನಿನ್ನ ಬಗ್ಗೆ ಬರೆಯೋದಕ್ಕೆ..  ನನ್ನೆಲ್ಲಾ ಮೌನಗಳನು, ನಿನ್ನಲ್ಲಿ ಧ್ವನಿಯಾಗಿಸಿದಾಗಲೇ ಚಂದ..ಗೆಳೆಯಾ ಈ ಪ್ರೀತಿಯ ಪ್ರಬುದ್ಧತೆಯೇ ನಮ್ಮ ನಾಳೆಯನ್ನು ಬೆಳಗುವಂಥದ್ದು.. ನಿನ್ನ ಕೈ ಹಿಡಿದು, ಬದುಕು ಒಡ್ಡುವ ಸವಾಲುಗಳನ್ನೆಲ್ಲಾ ಬಗೆಹರಿಸಬೇಕಿದೆ. ಜೀವನದ ಗಾಳಿಪಟದ ಒಂದೇ ದಾರವನ್ನು ಇಬ್ಬರೂ ಹಿಡಿದು ಬಾನೆತ್ತರಕೆ ಹಾರಿಸಿದಾಗ, ಬದುಕು ನಿನ್ನಂತೆಯೇ ಚಂದ ಚಂದ.. ಪ್ರೀತಿ ಮಾಡುವುದು  ದೊಡ್ಡದಲ್ಲ..ಅದನ್ನು ಪುಟ್ಟ ಮಗುವಿನಷ್ಟು ಜೋಪಾನವಾಗಿ ಕಾಯ್ದುಕೊಳ್ಳಬೇಕಿದೆ..

ಗೆಳೆಯಾ ಬದುಕಿನಾದ್ಯಂತ ಚಿಕ್ಕ ಪುಟ್ಟ ಖುಷಿಗಳನ್ನು ದೊಡ್ಡದಾಗಿ ಅನುಭವಿಸಬೇಕು..ನಿನ್ನೊಡನೆ ನಡೆಯುತ್ತ, ದಾರಿ ಮಧ್ಯೆ ಸಿಗುವ ಮುತ್ತು ಹರಳುಗಳನ್ನು ಆರಿಸಬೇಕು..

ಎಂದಿಗೂ ನಿನ್ನ ಕಣ್ಣಿನಲ್ಲಿ ನಗೆಯ ಹೂವಿನ ಎಸಳನ್ನು ಹುಡುಕುತ್ತಿದ್ದ

ನಿನ್ನವಳು.

******
                      


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ನನ್ನೆಲ್ಲಾ ಭಾವಗಳಿಗೆ ನಿನ್ನ ಪ್ರೀತಿಯ ಲೇಪನ..: ಪದ್ಮಾ ಭಟ್”

Leave a Reply