Facebook

ಫ಼ೈಂಡಿಂಗ್ ಫ಼ಾನ್ನಿ ಮತ್ತು ನಮ್ಮೊಳಗಿನ ಮುಗಿಯದ ಹುಡುಕಾಟ: ಪ್ರಶಾಂತ್ ಭಟ್

ಕನ್ನಡದ ಬರಹಗಳನ್ನು ಹಂಚಿ ಹರಡಿ

ಈಗ ನನ್ನ ಬಹಳ ಕಾಡಿದ ಒಂದು ಸಿನಿಮಾ ಬಗ್ಗೆ ಬರೆಯಬೇಕು. 
ಅದರಲ್ಲಿ ಬರುವ ಒಂದು ಡೈಲಾಗ್ ಬಗ್ಗೆ 'ನಮ್ಮ ರಾಜ್ಯಕ್ಕೆ ಅಪಮಾನವಾಯಿತು' ಅಂತ ಬೊಬ್ಬಿರಿದ ನನ್ನ ರಾಜ್ಯದ ಕೆಲವರ ಬಗ್ಗೆ ನಿಜಕ್ಕೂ ಕನಿಕರವಿದೆ. ಹೌದು. ಇದು ಅದೇ ಸಿನಿಮಾ. 'ಫ಼ೈಂಡಿಂಗ್ ಫ಼ಾನ್ನಿ' ಹೋಮಿ ಅಡಜನಿಯ ನಿರ್ದೇಶನವಿರುವ  (ಇವನ ಬೀಯಿಂಗ್ ಸೈರಸ್ ಕೂಡ ಒಳ್ಳೆಯ ಪ್ರಯತ್ನ) ಕೆಲವು ಕಡೆ 'ಲೆಟ್ಟರ್ಸ್ ಟು ಜೂಲಿಯಟ್' ಅನ್ನು ಹೋಲುತ್ತದೆ. ಅರ್ಜುನ್ ಕಪೂರ್, ದೀಪಿಕಾ ಪಡುಕೋಣೆ (ಇವಳ ಸ್ಕರ್ಟ್ ನ ಅಂದವನ್ನು ಬಣ್ಣಿಸಲೇ?) ನಾಸಿರುದ್ದೀನ್ ಶಾ, ಪಂಕಜ್ ಕಪೂರ್, ಡಿಂಪಲ್ ಕಪಾಡಿಯ ಮುಖ್ಯ ಭೂಮಿಕೆಯ ಇದು ಕಳೆದ ವರ್ಷ ಬಿಡುಗಡೆಯಾಯಿತು(೨೦೧೪) ಇನ್ನು ಕತೆಯ ಬಗ್ಗೆ ಹೇಳುವುದಾದರೆ, ಕತೆ ನಡಿಯುವುದು ಗೋವಾದಲ್ಲಿ, ಕಾಲಮಾನ ಸರಿ ಸುಮಾರು ಯಾವಾಗ ಬೇಕಾರೂ ತಗೊಳ್ಳಿ ಯಾಕಂದ್ರೆ ನಮಗೆ ನಿರ್ದಿಷ್ಟವಾಗಿ ಅದು ಗೊತ್ತಾಗೊಲ್ಲ. ಪೊಕೊಲಿಯಮ್ ಎಂಬ ಗೋವದ ಹಳ್ಳಿಯಲ್ಲಿನ ಐದು ಜನ ವಿಚಿತ್ರ ಮನುಷ್ಯರ ಕತೆ(ಹಾಗಂತ ನಮಗನಿಸುವುದು) .ಅಲ್ಲಿನ ಪೋಸ್ಟ್ ಮ್ಯಾನ್ ಫ಼ರ್‍ದಿಯ ಮನೆ ಬಾಗಿಲಿನ ಕೆಳಗೆ ಯಾರೋ ಹಾಕಿಟ್ಟ ಪತ್ರವೊಂದು ಸಿಗುತ್ತದೆ. ಅದು ಅವನು ೪೬ ವರ್ಷಗಳ ಕೆಳಗೆ ಸ್ಟೀಫ಼ನಿ ಫ಼ರ್ನಾಂಡೀಸ್ ಅಕಾ ಫ಼ಾನ್ನಿ ಎಂಬ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿ ಕಳಿಸಿದ ಪತ್ರ. ಅದು ವಾಪಾಸಾಗಿರುತ್ತದೆ. ಫ಼ರ್‍ದಿ ಆ ೪೬ ವರ್ಷವೂ ಅವಳು ಎಂದಾದರೊಂದು ದಿನ ತನ್ನ ಪತ್ರಕ್ಕೆ ಮಾರುತ್ತರ ಬರಬಹುದೆಂಬ ನಿರೀಕ್ಷೆಯಲ್ಲಿರುತ್ತಾನೆ. ಈಗ ಅಚಾನಕ್ ಆಗಿ ತನ್ನ ಪತ್ರ ಅವಳಿಗೆ ದೊರಕೇ ಇಲ್ಲವೆಂಬ ಸತ್ಯ ತಿಳಿದು ತೀವ್ರ ಕ್ಷೋಭೆಯಲ್ಲಿರುತ್ತಾನೆ. ಆಗ ಅಲ್ಲಿಗೆ ಬರುವ ಆ ಊರಿನ ವಿಧುರೆ ( ಕನ್ಯೆ ಅನ್ನಬಹುದು. ಅವಳ ಗಂಡ ಮದುವೆ ದಿನವೇ ಮದುವೆಯ ಕೇಕ್ ತಿನ್ನುವಾಗ ಉಸಿರುಗಟ್ಟಿ ಸತ್ತಿರುತ್ತಾನೆ) ಆಂಜಿ, ಅವನಿಗೆ ಸಹಾಯ ಮಾಡಲು ನಿರ್ಧರಿಸುತ್ತಾಳೆ.

ಫ಼ಾನ್ನಿಯ ಹುಡುಕುವ ಈ ಸಾಹಸಕ್ಕೆ ಅವಳ ಅತ್ತೆ ರೋಸಿ, ಆ ಅತ್ತೆಯ ದೊಡ್ಡ ಹಿಂಭಾಗದ ಆರಾಧಕನಾಗಿ ಅವಳನ್ನು ಮಾಡೆಲ್ ಆಗಿಟ್ಟುಕೊಂಡು ಚಿತ್ರ ಬರೆಯುವ ಸಂಕಲ್ಪದ ಚಿತ್ರಕಾರ ಡಾನ್ ಪೆಡ್ರೊ, ಆಂಜಿಯ ಬಾಲ್ಯ ಸಖ, ಅವಳ ಗುಟ್ಟಾಗಿ ಪ್ರೀತಿಸಿ ಹೇಳಲಾಗದೆ ಅವಳ ಮದುವೆಯ ದಿನ ಮುಂಬೈಗೆ ಓಡಿ ಹೋಗಿ ಈಗ ವಾಪಸ್  ಬಂದಿರುವ ಸಾವಿಯೋ ಇವರೆಲ್ಲಾ ಜೊತೆಯಾಗುತ್ತಾರೆ. ಅವರು ಫ಼ಾನ್ನಿಯ ಹುಡುಕಿದರೇ? ಡಾನ್ ಪೆಡ್ರೋ ,ರೋಸಿಯ ಚಿತ್ರ ಬಿಡಿಸಿದನೇ? ಸಾವಿಯೋ , ಆಂಜಿ ಒಂದಾದರೇ? ಎಂಬುದೆಲ್ಲ ಪ್ರಶ್ನೆಗಳಿಗೆ ಉತ್ತರ ನೋಡಿಯೇ ಸವಿಯಬೇಕು. (ಆಗ ಅದು ನಗಣ್ಯವೆನಿಸಿರುತ್ತದೆ.)

ಕಾಲ ಚಲಿಸಲು ನಿಲ್ಲಿಸಿದ ಹಳ್ಳಿಯೊಂದರಿಂದ ಶುರುವಾಗುವ ಕತೆ, ನಿಧಾನವಾಗೇ ಚಲಿಸುತ್ತದೆ. ಇಲ್ಲಿ ಎಲ್ಲರೂ ಆರಾಮ ಜೀವಿಗಳು. ಅರ್ಥ ಹೀನ ಮಾತುಕತೆ, ಗೊತ್ತಿರದ ರಹಸ್ಯಗಳು, ತಪ್ಪು ತಿಳುವಳಿಕೆಗಳು (ಮತ್ತು ಇದ್ಯಾವುದೂ ಬದುಕ ಬದಲಾಯಿಸುವ ಸ್ಪೋಟಕತ್ವ ಕಳಕೊಂಡ ವಿಷಯಗಳು). ಎಲ್ಲವು ಅಲ್ಲಲ್ಲಿ ಬಂದು ಹೋಗುತ್ತದೆ. ಬಹುತೇಕ ಮಾತುಗಳಲ್ಲಿ, ಪ್ರಯಾಣದಲ್ಲಿ ಚಿತ್ರ ನಡೆಯುವುದರಿಂದ ಹಳೆಯ ಗುಜುರಿ ಕಾರಲ್ಲಿ ಕೂತು ಗೋವಾ ಟೂರು ಹೋದ ಅನುಭವ ಕೊಡುತ್ತದೆ (ಮತ್ತು ಗೋವಾಕ್ಕೆ ಅದೇ ಸರಿ). ನಾವು ಬಾತ್ರೂಮಿನಲ್ಲಿ ನಮ್ಮಷ್ಟಕ್ಕೇ ಕಿರುಚುವ ಲಹರಿಯಂತೆ, ಸಂಗೀತವಿದೆ. ಸ್ಕರ್ಟ್ ಧರಿಸಿದ ಆಂಜಿಯ ನೀಳ ಕಾಲುಗಳೂ, ಎದೆಯ  ಸೀಳೂ ಖುಷಿ ಕೊಡುತ್ತದೆ. ಫ಼ರ್‍ಡಿಯ ಕಾಯುವಿಕೆ, ರೋಸಿಯ ಒಣ ಜಂಭ, ಡಾನ್ ಪೆಡ್ರೋ ನ ಚಡಪಡಿಕೆ, ಸಾವಿಯೋ ನ ಗೊಂದಲ ಇವೆಲ್ಲಾ ನಮ್ಮನ್ನೂ ಕಾಡುತ್ತದೆ. ಅವಗಾವಾಗ ಹಾಳಾಗುವ ಗಾಡಿ ಬದುಕಿನಂತೇ, ಅದೇ ಪಾತ್ರವಾಗಿದೆ. ಚರ್ಚಿನ ಪಾದ್ರಿ ,ಫ಼ರ್‍ದಿಯ ಕನಸಿನ ಫ಼ಾನ್ನಿ ಮಿಣುಕಿ ಮರೆಯಾಗುತ್ತಾರೆ.

ಈಗಿನ ವೇಗದಲ್ಲೂ ನಿಂತು  ಆಸ್ವಾದಿಸುವ ಗುಣ ಇರುವುದರಿಂದ 'ಫ಼ೈಂಡಿಂಗ್ ಫ಼್ಯಾನಿ' ಇಷ್ಟವಾಗುತ್ತದೆ.

*****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಫ಼ೈಂಡಿಂಗ್ ಫ಼ಾನ್ನಿ ಮತ್ತು ನಮ್ಮೊಳಗಿನ ಮುಗಿಯದ ಹುಡುಕಾಟ: ಪ್ರಶಾಂತ್ ಭಟ್”

  1. Rukmini Nagannavarಋ says:

    ಹಾಗಿದ್ರೆ ಒಮ್ಮೆ ನೋಡಲೇಬೇಕು ಈ ಸಿನೇಮಾವನ್ನ…
    ಧನ್ಯವಾದಗಳು ಸರ್…

Leave a Reply