ಸಾಯಲೇ ಬೇಕು ಎಲ್ಲರಲ್ಲಿನ ಸೀಸರ್: ಸಚೇತನ

ಷೇಕ್ಸ್ ಪಿಯರ್ ಎನ್ನುವ ಸದಾ ತುಂಬಿ ಹರಿಯುವ ನದಿಯಿಂದ ಮೊಗೆ ಮೊಗೆದು ತೆಗೆದ ಅದೆಷ್ಟೋ ಸಾವಿರ ಸಾವಿರ ಬೊಗಸೆ ನೀರು ಲೆಕ್ಕವಿಲ್ಲದಷ್ಟು  ಸಾಹಿತ್ಯದ ಬೀಜಗಳನ್ನು ಹೆಮ್ಮರವಾಗಿಸಿ ಫಲ ಕೊಡುತ್ತಿದೆ.  ಕರುಣೆ ಕ್ರೌರ್ಯ ಪ್ರೀತಿ ಹಾಸ್ಯ ಪ್ರೇಮ ಮೋಸ ಎಲ್ಲ  ಮಾನವೀ ಭಾವಗಳ ಸಮಪಾಕವನ್ನು ನಾವೆಲ್ಲರೂ ಅದೆಷ್ಟೋ ಸಲ ರುಚಿಕಟ್ಟಾಗಿ ಉಂಡಿದ್ದರೂ ಯಾವತ್ತಿಗೂ ಅವು ಸಾಕು ಎನಿಸಿಲ್ಲ. ಹರಿಯುವ ನದಿಯಿಂದ ಕೈ ಒಡ್ಡಿ ಕುಡಿದ ಸಿಹಿ ನೀರು ಮತ್ತೆ ಮತ್ತೆ ಬೇಕೆನಿಸಿದೆ. ಸೀಸರ್ ಎನ್ನುವ ದುರಂತ ನಾಯಕನ ಕತೆಯಿಂದ ಲೆಕ್ಕವಿಲ್ಲದಷ್ಟು ನಾಟಕಗಳು, ಸಿನಿಮಾಗಳು ನೇರವಾಗಿ ಅಥವಾ ಸ್ಪೂರ್ತಿಗೊಂಡು ರಚಿಸಲ್ಪಟ್ಟಿವೆ. ಸಿಸರನನ್ನು ಸಾಯಿಸಲೇ ಬೇಕಾದ ಮತ್ತು ಸೀಸರ್ ಸಾಯಲೇ ಬೇಕಾದ  ಕಥನವನ್ನು ತೆರೆಯ ಮೇಲೆ ಕಟ್ಟಿ ಕೊಡುವ ಪ್ರಯತ್ನ 'ಸೀಸರ್ ಮಸ್ಟ್  ಡೈ' ಸಿನಿಮಾವನ್ನು ರೋಮ್ ನ ತೀವ್ರ ಸೆಕ್ಯೂರಿಟಿ  ಬಂದಿಖಾನೆಯಾದ 'ರೆಬಿಬ್ಬಿಯಾ'  ಎನ್ನುವಲ್ಲಿ ಚಿತ್ರೀಕರಿಸಲಾಯಿತು.  ಸರಳುಗಳ ಹಿಂದೆ ಕ್ಷಣಗಳ ಕಳೆಯುತ್ತ ನಿಂತ  ನಿಜ ಜೀವನದ ದುರಂತ ಸೀಸರ್ ಗಳು ಸಿನಿಮಾದ ಪಾತ್ರಗಳನ್ನು ನಿರ್ವಹಿಸುತ್ತಾರೆ.. ಕಪ್ಪು ಬಿಳುಪಿನಲ್ಲಿ ಅಗಾಧವಾದ ರಂಗಭೂಮಿಯೊಂದನ್ನು ಸಿಧ್ಧ ಪಡಿಸಿ, ಅದರಲ್ಲಿ ನಟರನ್ನು ಸಿನಿಮಾಕ್ಕೆ ಅಷ್ಟಾಗಿ ಒಗ್ಗದ ರಂಗಭೂಮಿಯ ನಾಟಕೀಯತೆಯಿಂದ ಚಿತ್ರೀಕರಿಸಿದ ರೀತಿ, ಸಿನಿಮಾಕ್ಕೆ ಬೃಹತ್ ಥಿಯೇಟರಿನ ಆಯಾಮವನ್ನು ಕಲ್ಪಿಸಿಕೊಡುತ್ತದೆ. "ನಾವು ಜೂಲಿಯಸ್ ಸೀಸರ್ ನನ್ನು ಆಯ್ಕೆ ಮಾಡಿಕೊಂಡಿದ್ದೇವೆ "  ಸಿನಿಮಾದ ನಿರ್ದೇಶಕರಾದ ಟೈವಾನಿಸ್ ಸಹೋದರರು ಹೇಳುತ್ತಾರೆ ಯಾಕೆಂದರೆ ಇದು ಸರ್ವಾಧಿಕಾರದ ಕರಾಳ ಮುಖವನ್ನು ಚಿತ್ರೀಕರಿಸುತ್ತದೆ,  ಒಂದು ಕ್ರೂರ ನರಹತ್ಯೆಗೆ ಕನ್ನಡಿಯಾಗಿದೆ, ಸ್ನೇಹದ ಜೊತೆಯಲ್ಲಿ ನಡೆದ ನಂಬಿಕೆ ದ್ರೋಹದ ವಸ್ತುವಾಗಿದೆ, ವಿಶ್ವಾಸಘಾತುಕತನ ಮತ್ತು ಪಿತೂರಿಯ ಕತೆಯಾಗಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇದು ನಮ್ಮದೇ ಇಟಲಿಯ ರೋಂ ನಲ್ಲಿ ನಡೆದುದಾಗಿದೆ. ೭೬ ನಿಮಿಷಗಳ ಕಾಲದ ಸಿನಿಮಾದಲ್ಲಿ ಹರಿಯುವ ವಿದ್ಯುತ್ ಶಕ್ತಿ ಸೀಸರ್ ಮತ್ತು ಅವನ  ಸುತ್ತಲಿನ ಪಾತ್ರಗಳನ್ನು ದಾಟಿ ಪ್ರೇಕ್ಷಕನನ್ನಷ್ಟೇ ಅಲ್ಲದೆ ತೆರೆಯ ಮೇಲಿನ ಪಾತ್ರಧಾರಿಗಳ ಸೆರೆಮನೆಯನ್ನು ಹೊಕ್ಕು ಎಲ್ಲರಲ್ಲಿ ನಾಟಕದ ಪರಿಭಾಷೆಯೊಂದನ್ನ ತೆರೆಯುತ್ತದೆ. ನೆನಪಿಡಿ ಈ ರಂಗಭೂಮಿರೂಪಿ ಸಿನಿಮಾದಲ್ಲಿ ಸೀಸರ್ ನ ಕೊಲೆಗೆ ಹೊಂಚು ಹಾಕುವ ಪಾತ್ರಧಾರಿಗಳು ಕೇವಲ ತೆರೆಯ ಮೇಲಷ್ಟೇ ಸಂಚಿನ ಭಾಗವಾಗಿ ನಿಂತವರಲ್ಲ, ಅವರೆಲ್ಲರ ಭೂತಕಾಲದಲ್ಲಿ ಇಂಥದ್ದೇ ಒಂದಲ್ಲ ಒಂದು ಸಂಚಿನಲ್ಲಿ, ಹಿಂಸಾಚಾರದಲ್ಲಿ ಭಾಗವಹಿಸಿದ ಅನುಭವವಿದೆ. ಕ್ರೌರ್ಯವನ್ನು ಕ್ಷಣಿಕವಾಗಿ ಆರೋಪಿಸಿ ನಿಂತವರಲ್ಲ. ಕ್ರೌರ್ಯದ ಮಜಲುಗಳನ್ನು ಏರಿ ನಿಂತವರು ಅವರು. ಹೀಗಾಗಿ ಸಿನಿಮಾದ ಪಾತ್ರಧಾರಿಗಳಿಗೆ, ಕಥೆಯಲ್ಲಿ ಪಾತ್ರಗಳ ಹತಾಶೆ, ರೋಷ, ಕಪಟತೆ, ನಯ, ನಾಜೂಕು ಎಲ್ಲವು ಸಹ ನಿಜ ಜೀವನದ ಭಾಗವೇ ಆಗಿದೆ. ಕತೆಯಲ್ಲಿನ ಸೀಸರ್ ನ ಸುತ್ತಲಿನ ಎಲ್ಲ ಭಾವಗಳು ಈ ನಟರ ನಿಜ ಜೀವನದ ಭಾವವೂ ಆಗಿವೆ. ಇಡೀ ಸಿನಿಮಾದಲ್ಲಿ ಸೀಸರ್ ನ ಸಾವಿನ ಬಲೆಯನ್ನು ಎಳೆ ಎಳೆಯಾಗಿ ಹೆಣೆಯುವ ಯೋಜನೆಯನ್ನು ತುಣುಕು ತುಣುಕಾಗಿ ನಾಟಕೀಯವಾಗಿ  ತೋರಿಸಲಾಗಿದೆ.  

ಜೂಲಿಯಸ್ ಸೀಸರ್ ನ ಕತೆಯನ್ನು ಕೈದಿಗಳು ಅಭಿನಯಿಸುವದು  ಸಂಪೂರ್ಣ ಸಿನಿಮಾದ ಕತೆ. 
ಸಿನಿಮಾದ ಕೊನೆಯಲ್ಲಿ ಎಲ್ಲ ಕೈದಿಗಳು ರಂಗದ ಮೇಲೆ ಅಭಿನಯಿಸಿದ ನಾಟಕದ ದೃಶ್ಯವನ್ನು  ಬಣ್ಣದಲ್ಲಿ ತೋರಿಸಿದ್ದರೂ ಸಹ ಸಿನಿಮಾದ ಬಹು ಭಾಗದ ಕತೆ ಸಾಗುವ, ರಂಗಭೂಮಿಯ ತಾಲೀಮು ಕಪ್ಪು ಬಿಳುಪಿನಲ್ಲಿ ಸೆರೆಯಾಗಿದೆ. 

ಸಿನಿಮಾದಲ್ಲಿ ನಟರು ನಮಗೆ ಮುಖಮುಖಿಯಾಗುವದು 'ಸೀಸರ್' ನಾಟಕಕ್ಕೆ ನಟರನ್ನು ಹುಡುಕುವ ಪ್ರಕ್ರಿಯೆಯಲ್ಲಿ.  ಎಲ್ಲ ನಟರಿಗೆ ಅವರಿಗೆ ಭಯದ ಕೋಪದ ಒಂದೊಂದು ಕ್ಷಣಗಳನ್ನು ಅಭಿನಯಿಸಲು ಹೇಳಲಾಗಿದೆ. ಈ ಕೈದಿಗಳು ಎಲ್ಲವನ್ನು ಮರೆತು ಕೇವಲ ಮನುಷ್ಯರಾಗಿ, ನಟರಾಗಿ ಪಾತ್ರಗಳಾಗಿ ಸನ್ನಿವೇಶವನ್ನು ಕಟ್ಟಿಕೊಡುವ ಬಗೆ  ಅಪರಾಧದ ತಡೆ ಗೋಡೆಯಾಗಿ ನಿರ್ಮಿಸಿದ ಜೈಲಿನ ಗೋಡೆ ಸರಳುಗಳ ಆಚೆಗೆ ಹೇಗೆ ಇವರೆಲ್ಲರೂ ಅತ್ಯುತ್ತಮ ನಟರಾಗ ಬಲ್ಲದು ಎನ್ನುವದನ್ನು ತೋರಿಸುತ್ತದೆ. ಮನುಷ್ಯನ ಕ್ರೌರ್ಯದ ವಿವಿಧ ಮುಖಭಾವವನ್ನು ಹೊತ್ತು ಬರುವ ಇವರೆಲ್ಲರ ಮುಖದಲ್ಲಿನ ಸಹಜ ಒರಟುತನ, ಕೋಪ, ಗೋಡೆಯಾಚೆಗೆ ಕಳೆದ ಕಳೆಯುವ ದಿನಗಳ ಹತಾಶೆ ನಾಟಕೀಯತೆಯಲ್ಲದೆ ನೈಜತೆಯಂತೆ ಭಾಸವಾಗಿ ನಮ್ಮನ್ನು ಕಾಡುವದು ಸಹ ನಿಜ. ಕೇವಲ ಒಂದು ಬಾರಿ ಮಾತ್ರ ಸಿನಿಮಾದಲ್ಲಿ  ಎಲ್ಲ ಸೀಸರ್ ಗಳ ಅಪರಾಧಿ ಜೀವನದ ವಿಷಯವನ್ನು ತೋರಿಸಲಾಗಿದೆ. ಇವರಲ್ಲಿ ಬಹುತೇಕ ಮಂದಿ ಭೂಗತ ಜಗತ್ತಿನ ಜೊತೆಗೆ ಸಂಬಂಧ ಹೊಂದಿದವರು.  ಹಲವರು ಒಂದಷ್ಟು ಜೀವಗಳನ್ನು ಇಲ್ಲವಾಗಿಸಿದ್ದಾರೆ ಇನ್ನು ಹಲವರು ಅಮಾಯಕ ಜೀವಗಳಿಗೆ ಮಾದಕ  ವಸ್ತು ಮಾರಿದ್ದಾರೆ.  ಸೀಸರ್ ನನ್ನು ಸಾಯಿಸಿದ್ದಾರೆ ಅಥವಾ ಸಾವಿಗೆ ಸಂಚು ಮಾಡಿದ್ದಾರೆ. ನಾಟಕದ ತಾಲೀಮು ಸಾಗಿದಂತೆ ನಾಟಕ ಪ್ರತಿಯಿಬ್ಬರಲ್ಲೂ ಆಳವಾಗಿ  ಒಳಹೊಕ್ಕಿದೆ ಒಳಹೊಕ್ಕಿದೆ. ಸೀಸರ್ ನ ಜೀವನದ ಹಲವಷ್ಟು ಘಟನೆಗಳನ್ನು ತಮ್ಮ ಜೀವನದ ಜೊತೆಗೆ ಸಮೀಕರಿಸಿ ನಟರು ಸೀಸರ್ ನನ್ನು ತಮ್ಮವನ್ನಾಗಿ ಮಾಡಿಕೊಂಡಿದ್ದಾರೆ,  ಸೀಸರ್ ನ ಪ್ರಬುದ್ಧ ಇಟಲಿ ಭಾಷೆಗೆ ತಮ್ಮ ತಮ್ಮ ಭಾಷೆಯ ಕಟ್ಟುಗಳನ್ನ ಸೇರಿಸಿದ್ದಾರೆ, ಸೀಸರ್ ನ ಕತೆ ಎಲ್ಲರ ಕತೆಯಾಗಿ ಹೊರಟಿದೆ.   ನಾಟಕದ ಮಾತುಗಳಲ್ಲಿ, ಭಾವಗಳಲ್ಲಿ ಎಲ್ಲರು ತಮ್ಮ ತಮ್ಮ ಕತೆಯನ್ನು ಹೇಳಹೊರಟಿದ್ದಾರೆ. 

ಸನ್ನಿವೇಶವೊಂದರಲ್ಲಿ ಕ್ಯಾಮ್ಮೊರ್ರ ಎನ್ನುವ ಪಾತ್ರಧಾರಿ ರೋಮ್ ಎನ್ನುವ ಬದಲಿಗೆ  ನೇಪಲ್ಸ್ ಎಂದು ಹೇಳುತ್ತಾನೆ, ಮತ್ತು ಹಾಗೆ ಬದಲಿಸಿ ಹೇಳಿದ್ದು ಯಾಕೆಂದು ವಿವರಿಸುತ್ತ ಅವನು ನುಡಿಯುತ್ತಾನೆ " ಈ ಶೇಕ್ಸ್ ಪಿಯರ್ ನನ್ನ ನಗರದ ಬೀದಿಗಳಲ್ಲಿ ನಡೆದಂತೆ ಅದು ತೋರುತ್ತದೆ. "ಇನ್ನೊಂದು ಸನ್ನಿವೇಶದಲ್ಲಿ ಗತ ಕಾಲದಲ್ಲಿ ಯಾವುದೋ ಮಾಫಿಯಾದ ಸದಸ್ಯನಾಗಿದ,  ಭವ್ಯ  ಸೀಸರ್ ನ ಪಾತ್ರಧಾರಿ  ದೆಸಿಯಸ್ ಮೇಲೆ ಉರಿದುಬಿದ್ದಿದ್ದಾನೆ, ಸೀಸರ್ ನ ಸಾವಿಗೆ ಸಂಚು ಮಾಡಿದಂತೆ ದೆಸಿಯಸ್ ತನ್ನ ಸೆರೆಮನೆಗೆ ಸಂಚು ಮಾಡಿದ್ದಾನೆ ಎನ್ನುವದು ಅವನ ಭಾವನೆ. 

ಸಿನಿಮಾದಲ್ಲಿನ ಅತ್ಯಂತ ಶಕ್ತಿಯುತ ಕೇಂದ್ರವೆಂದರೆ ಕೈದಿಗಳ ಮನುಷ್ಯ ಸಹಜ ಮೃದು ಭಾವನೆಯನ್ನು ಹಿಡಿದಿಡುವದು. ದೃಶ್ಯವೊಂದರಲ್ಲಿ ನಟನೊಬ್ಬ ಥಿಯೇಟರಿನ ಕುರ್ಚಿಯೊಂದರ ಬಳಿ ಓಡಿ  ಹೋಗಿ ಅದರ ಮೇಲೆ ಕೈ ಆಡಿಸುತ್ತ ಹೇಳುತ್ತಾನೆ " ಬಹುಶ: ಇದರ ಮೇಲೆ ಮಹಿಳೆಯೊಬ್ಬಳು ಕುಳಿತುಕೊಳ್ಳ ಬಹುದು " 

ನಾಟಕದ ಆರಂಭಿಕ ಭಾಗಗಳನ್ನು ತಾಲೀಮಿನ ರೂಪದಲ್ಲಿ  ತೋರಿಸಲಾಗಿದೆ 

ಆದರೆ ಹತ್ಯೆಯ ದಾರಿಕಲ್ಪಿಸುವ ದೃಶ್ಯಗಳನ್ನು ಎಲ್ಲಾ ಸೆಲ್ ಬ್ಲಾಕ್ ನ ಹಾದು  ಬರವಂತೆ ಚಿತ್ರಿಕರಿಸಲಾಗಿದೆ.  ಎಲ್ಲ ಸೀಸರ್ ನ ಪಾತ್ರವನ್ನು  ಒಳಗೊಂಡು ಎಲ್ಲ ಕೈದಿಗಳೂ ಸಹ  ಅವರವರ ಇತಿಹಾಸದಲ್ಲಿ ಸಂಚಿನ ಭಾಗವಾಗಿದ್ದರು ಎನ್ನುವ೦ತೆ ಭಾಸವಾಗುತ್ತದೆ. 

ಕೈದಿಗಳ ವ್ಯಾಯಾಮ ಮೈದಾನದಲ್ಲಿ ಸೀಸರ್ ನ ಶವ ಇಡಲಾಗಿದೆ, ಸುತ್ತಲಿನ ಕಟ್ಟಡಗಳ ಮೇಲೆ  ಸರಳುಗಳ ಹಿಂದಿನ ಎಲ್ಲ ನಿವಾಸಿಗಳು  ಸೀಸರ್ ನ ಸಾಮ್ರಾಜ್ಯದ ಜನರಾಗಿದ್ದಾರೆ, ಕಿಟಕಿಗಳಿಂದ  ಜನಸಾಮಾನ್ಯರ ಭೀತ ಕಣ್ಣುಗಳು ಕಾಣಸಿಗುತ್ತಿದೆ.   ಶಕ್ತಿಶಾಲಿ ದೊರೆಯೊಬ್ಬ  ಕೇವಲ ಹೆಣವಾಗಿದ್ದಾನೆ.ಈಗ ಜಲಿನ ಜೀವನ ಮತ್ತು ನಾಟಕದ ಜೀವನ ಎರಡನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲದ ದೃಶ್ಯವೊಂದು  ನಿರ್ಮಾಣವಾಗಿದೆ.  ನಟರು ದರೋಡೆಕೋರರು ಎನ್ನುವ ಗೆರೆಯಿಲ್ಲದೆ ಎಲ್ಲರೂ ಸಹ  ತಮ್ಮ ತಮ್ಮ ಪಾತ್ರದೊಳಗೆ ವಿಲೀನವಾಗಿದ್ದರೆ.  ನೋಡಲು  ಕುಳಿತ ನಮ್ಮ ಮನಸ್ಸಿನಲ್ಲಿ ನಟರ ಪುರ್ವಾಶ್ರಮ ನೆನಪಿದೆಯೇ ಹೊರತು ತೆರೆಗಲ್ಲ. ಅದು ಒಪ್ಪಿದೆ, ನಟರು ಒಪ್ಪಿಸಿಕೊಂಡಿದ್ದಾರೆ. ಮಾರ್ಕ್ ಆಂಟೊನಿ ಕೇವಲ ಅವನ ಮಾತುಗಳನ್ನು ಆಡುತ್ತಿಲ್ಲ, ನೆರೆದ ಎಲ್ಲ  ಗುಂಪಿನ ಮಾತನನ್ನು ಆಡುತ್ತಿದ್ದಾನೆ. ಸ್ವಾತಂತ್ರ್ಯ ಮತ್ತು ಬಂಧನ ಜೀವನದ ಎರಡೂ ಜೀವನದ ಅನುಭವಕ್ಕೆ  ಬಹುಮುಖ್ಯ  ಚಿತ್ರಗಳು.   ಸೆರೆಮನೆಯಿಂದ ದಾಟಿ ಕಲೆಯ  ಜಗತ್ತಿನಲ್ಲಿ ಅವರ ಬಂದನವನ್ನು ಕಳೆಯಲು ಅವಕಾಶ ಕಲ್ಪಿಸಲಾಗಿದೆ. ನಾಟಕದಲ್ಲಿ  ತಮ್ಮನ್ನು  ಮರೆತಿದ್ದಾರೆ, ಅಲ್ಲಿ ಕಲ್ಮಶವಿಲ್ಲದ ಲೋಕದಲ್ಲಿನ ಪ್ರಜೆಗಳು ಅವರು. 

ಪ್ರದರ್ಶನದ ನಂತರ ಒಬ್ಬೊಬ್ಬರಾಗಿ ನಟರು ತಮ್ಮ ಜೈಲಿನ ಕೋಣೆಗೆ  ಹೊರಟಿದ್ದಾರೆ.  ಏಕಾಂತದ ಸೆರೆಗೆ ಬೀಗ ಜಡಿಯಲಾಗಿದೆ.  ಕ್ಷಣಿಕ ದೌರ್ಬಲ್ಯಕ್ಕಾಗಿ ಅವರ ಮನುಷ್ಯತ್ವಕ್ಕೆ ಬೀಗ ಹಾಕಿದಂತೆ ತೋರುತ್ತಿದೆ. ಕೊನೆಯಲ್ಲಿ ಕ್ಯಾಸ್ಸಿಯಸ್ ಪಾತ್ರಧಾರಿಯೊಬ್ಬ ತನ್ನ ಜೈಲಿನ ಕೋಣೆಯಲ್ಲಿ ಆಡಿದ ಮಾತುಗಳನ್ನು ನೀವು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ: "ನಾನು ಕಲೆಯ ಅನ್ವೇಷಣೆಯಲ್ಲಿ ಬದುಕಿ ಬಂದಿದ್ದರಿಂದ ಈಗ ನನಗೆ ಈ ಕೋಣೆ ಜೈಲಾಗಿ ತೋರುತ್ತಿದೆ. "

ಎಲ್ಲರಲ್ಲಿನ ಸೀಸರ್ ಶವವಾಗಿದ್ದಾನೆ, ಎಲ್ಲರಲ್ಲಿನ ಸಂಚು ಅಟ್ಟಹಾಸ ಮಾಡುತ್ತಿದೆ. ದೂರದಲ್ಲಿ ಕುಳಿತ ಮನುಷ್ಯ ಬಿಕ್ಕುತ್ತಿದ್ದಾನೆ. 

ಸಿನಿಮಾ: ಸೀಸರ್ ಮಸ್ಟ  ಡೈ   (Caesar Must Die) ಮೂಲ ಹೆಸರು  : Cesare deve morire
ಭಾಷೆ: ಇಟಾಲಿಯನ್ 
ದೇಶ: ಇಟಲಿ 
ನಿರ್ದೇಶನ:   ಪೌಲೋ  ಟೈವಾನಿಸ್ ಮತ್ತು ವಿಟ್ಟೋರಿಯೋ ಟೈವಾನಿಸ್ 

ಇಂತಿ, 
ಸಚೇತನ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Rukmini Nagannavarಋ
Rukmini Nagannavarಋ
9 years ago

ಒಳ್ಳೆಯ ನಿರೂಪಣೆ ಸರ್..
ನೋಡಲೇಬೇಕು ಅನ್ನಿಸುತ್ತಿದೆ. .

Sachetan
Sachetan
9 years ago

ಖಂಡಿತ ಸಿನಿಮಾ ನೋಡಿ , ನಿಮ್ಮ ಅಭಿಪ್ರಾಯ ತಿಳಿಸಿ 

2
0
Would love your thoughts, please comment.x
()
x