ಮೂರು ಕವಿತೆಗಳು: ಉರ್ಬಾನ್ ಡಿಸೋಜ, ಅಕುವ, ಶಿವಕುಮಾರ ಸಿ.

ಹುಡುಕಾಟ
ನಾನು
ನನ್ನ ಬದುಕನ್ನು ಹೀಗೆಯೇ
ಸುಮ್ಮನೆ ನೋಡಿದೆ,
ಆಗ೦ತುಕ, ಆಗ೦ತುಕನನ್ನು
ಭೇಟಿಯಾದ೦ತಾಯ್ತು.
ಇದು ನನ್ನ ಬದುಕೇ?
ಉತ್ತರ ಹುಡುಕಾಡಿದೆ.
ಒಳ್ಳೇದೇ ಮಾಡಿದೆ, 
ಕೋಟಿ ದೇವರನ್ನ ಬೇಡಿದೆ,
ಆದರೂ
ನನ್ನ ಬದುಕನ್ನು ನಾನೇ ಅರಿಯದಾದೆ.
ಇತರ ಚಿ೦ತನೆ, ಮಾತುಗಳೇ
ನಾನೆ೦ದುಕೊ೦ಡೆ.
ಕಡಿದವನ, ಕುಡಿದವನ,
ಅತ್ಯಾಚಾರಿಯ, ಲ೦ಚವಾದಿಯ
ಬದುಕು
ಯಾವ ರೀತಿಯದು ಎಂದು ನೆನೆದು ನಡುಗಿದೆ.
ಸತ್ತ ನ೦ತರದ ಬದುಕನ್ನು
ನೆನೆದು
ಈಗಿನ ಬದುಕ ಮರೆತೆ?
ಹೂವನ್ನೇ ಬಯಸಿದ ಬದುಕಿನೊಳಗೆ
ಹರಿತ ಚಾಕುವೇ ತಿವಿಯಿತು.
ಬದುಕೇ, ನೀನು ಮತ್ತೆ ಸಿಕ್ಕಾಗ
ಹೇಳು ನಾನು ಯಾರೆ೦ದು?

-ಉರ್ಬಾನ್ ಡಿಸೋಜ.

 

 

 

 

 

 

 

 

ಸಿನಿ-ಕ-ತನ

ಕಪ್ಪು ಬಿಳುಪು ಜೀವನ 
ಬಣ್ಣದ ಕಡೆ ಮುಖ ಮಾಡಿದೆ 
ಜೀವನಕೆ ರಂಗು ಹೆಚ್ಚಿದೆ
ಆಗಲೇ ರೆಕ್ಕೆ ಬಡಿದಿದೆ !

ಆಳಕ್ಕೆ ಇಳಿದ ಭಯದ ಬೇರು
ಮೂಢಭಾವಗಳ ಕವಲು ಪಸರಿದೆ 
ಒಳಜಲ ಹೀರಿ ಬತ್ತಿದೆ 
ಬರಡಾಗಿದೆ ….ಕಂಡವರಿಲ್ಲ !
ಕಂಡರೂ ಅರಿಯಲಿಲ್ಲ!

ಸೂರ್ಯ ಕೋಟಿ ಬಾರಿ ಬಂದ
ರಶ್ಮಿ ತಟ್ಟಿದ ಮಂದಿ ಎಷ್ಟೊ?
ಬೆಳಕು  ಹೊಕ್ಕ ಮನಗಳೆಷ್ಟೋ?
ಮನಸ್ಸಿಗಿಂದೂ ಸುಖದ ಹುಡುಕಾಟ !

ನನ್ನದಲ್ಲದ ಅಗ್ಗದ ವಸ್ತು
ಹಿಗ್ಗಾಮುಗ್ಗಾ ಕೊಂಡ ನೆನಪು 
ಸ್ವಚ್ಛತೆಯ ಮರೆತ ಕಸದದೊಡ್ಡಿ
ನನ್ನ ಸ್ವಚ್ಛಂದ ಜಗತ್ತು !

ಧೂಳು ಕೆಡಹದ ಮೌಲ್ಯದ ಕಪಾಟು
ತೆರವವನ ಬರುವಿಕೆಗೆ ಕಾದೆವು
ಬರುವವ ಬಂದರೂ 
ನಾವು ಸಿನಿಕರಾದೆವು ! 
ನಾವು ಸಿನಿಕರಾದೆವು !

– ಅಶೋಕ್ ಕುಮಾರ್ ವಳದೂರು ( ಅಕುವ)

 

 

 

 

 

 

ತಿರುಗಿದ್ದರೆ….

ಎದೆಯೊಳಗೆ ಕೊಳೆಯದೇ, ಕೊಳೆತು
ಹದವಾದ, ರಾಸಾಯನಿಕ ಗೊಬ್ಬರವಾದ
ಕಲ್ಪನೆಯೋ, ಪ್ರತಿಭೆಯೋ, ತಿಳಿಯದೇ
ಕುಣಿದು, ಕುಪ್ಪಳಿಸಿ ನಗುವವನೇ……
ನೀನೊಮ್ಮೆ ತಿರುಗಿದ್ದರೇ…….

ರೆಪ್ಪೆ ಕೆಳಗುದಿಗಿಟ್ಟ
ಬಟ್ಟಲುಗಣ್ಣಿನಲ್ಲಿ ಕಾಣಬಹುದಿತ್ತು
ಕಾರ್ಮೋಡ ಕವಿದು ಮಳೆಗರಿದು
ಹೊಂಗನಸ ಆಕಾಶದ ನಕ್ಷತ್ರಗಳ

ಯಾರ ಯಾರದ್ದೋ ಹೊಲಗದ್ದೆಯ
ಯಾರದ್ದೋ ಮುನ್ನುಡಿಯ ನೆಪದಲ್ಲಿ
ಕುಣಿಯುವ ಮಲ್ಲಿಗೆಯ ಹಾಸಿ
ಮೂರು ಕಾಲಿಟ್ಟ ಮಂಚಕ್ಕೊಂದು ನಾಕು ಮಾಡಿಯಾದರೂ
ನಳನಳಿಸುವವಳ ಎದೆ ಹಿರಿಯಬಹುದಿತ್ತು

ನೆನಪು ಹಾರಿದೆಯೆಂದುಕೊಂಡು
ಶಾಲಾ ಹುಡುಗನಂತೆ ಕಂಠಪಾಟ ಮಾಡುವ 
ಪಿಯಾನು ಮಾಸ್ತಾರನ ಮತ್ತವನ ಎರೆಡೆರೆಡು 
ಒಂದೇ ಅಂಕಣದ ನಾಟಕದಲ್ಲೇ ಕೇಳುತ್ತಿದ್ದರೂ
ಕೂತು ನೋಡಿ 
ಮುಕುಳಿ ಕೊಡವಿ ಎದ್ದೋಡಬಹುದಿತ್ತು

ಅದೇ ಹರುಕ ಮುರುಕ
ಹಳೇ ಬಸ್ಟಾಂಡಿನಲ್ಲಿ
ಬಿಳಿ ಬಣ್ಣದಿಂದ, ಕಲರ್ ರಂಗೇರಿದ ಹಾಗೇ
ಗೊಡ್ಡು ಗೋಳನ್ನೇ ನೋಡುತ್ತಿದ್ದ ಕಣ್ಣುಗಳಿಗೆ 
ಸೆಟ್ರಸ್ ಎತ್ತುತ್ತಿದ್ದವಳ ಬಿಳಿಮೊಲೆಯ ಇಣುಕಬಹುದಿತ್ತು

ಈಗ ಏನಾಗಿದೆ
ಸಮುದ್ರದ ಗಾಳಿ ಬಿಟ್ಟು ಬಾ
ಅಲ್ಲೇ ಅವಳ ನೆನಪನ್ನು ಬಿಟ್ಟು ಬಾ
ಕಾದಿದ್ದೇನೆ……
ಕೆಂಪು ಗುಲಾಬಿಯ ತುಟಿಬಿಟ್ಟು
ಚುಂಬನದ ಸುಗ್ಗಿಗೆಂದು…….

-ಶಿವಕುಮಾರ ಚನ್ನಪ್ಪನವರ

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಅಕ್ಕಿಮಂಗಲ ಮಂಜುನಾಥ
ಅಕ್ಕಿಮಂಗಲ ಮಂಜುನಾಥ
9 years ago

ಮೂರೂ ಪದ್ಯಗಳು ಚೆನ್ನಾಗಿವೆ

ramesh gabbur
ramesh gabbur
9 years ago

ಪಂಜು ಓದುತ್ತಾ ಇದ್ದೆ.. ಈ ಸಲದ  ಉರ್ಬಾನ್ ಡಿಸೋಜಾ, ಶಿವಕುಮಾರ್ ಮತ್ತು ಅಕುವ ರವರ ಪದ್ಯಗಳು ಚೆನ್ನಾಗಿವೆ…

ashok kumar valaduir
ashok kumar valaduir
9 years ago

dhanyavadagalu… Sir

3
0
Would love your thoughts, please comment.x
()
x