ನಾಯಿ ಪಾಡು: ಗುಂಡುರಾವ್ ದೇಸಾಯಿ


ವಾರದಿಂದ ತಲೆ ಸಿಡದು ಹೋದಂಗಾಗಕತಿತು. ಕ್ಷಣ ಕ್ಷಣಕ್ಕೂ ಭಯ ಆತಂಕ ಸುರುವಾಗಕತಿತು, ಶಾಲೆಯಲ್ಲಿ ಪಾಠ ಮಾಡುವಾಗಲು ಮನೆ ವಾತಾವರಣ ನೆನಸಿಕೊಂಡ ಕೂಡಲೆ ಸ್ಥಬ್ಧನಾಗಿ ನಿಂತುಬಿಡುತ್ತಿದ್ದೆ.  ಮಕ್ಕಳು ’ಸಾರ್, ಮುಂದು ಹೇಳ್ರೀ ಯಾಕ ಹಾಂಗ ನಿಂತ್ರಿ’ ಎಂದು ಎಚ್ಚರಿಸಿದಾಗಲೇ ವಾಸ್ತವಕ್ಕೆ ಬರೋದು. ಸಹುದ್ಯೋಗಿಗಳು ’ಯಾಕ ಹಿಂಗಾಗ್ಯಾರ? ಏನು ತಾಪತ್ರಯನೋ ಏನೋ? ಅಥವಾ ಮನೆಯಲ್ಲಿ ಮನೆಯವರ ಜೊತೆಗೆ ಮನಸ್ತಾಪನೋ?’ ಎಂದು ಹಲವು ಬಾರಿ ಕೆದುಕಲೆತ್ನಿಸಿದರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ನಿಮಗೂ ಏನೇನೋ ಕಲ್ಪನೆಗಳು ನನ್ನ ಬಗ್ಗೆ ಮೂಡಿರಬೇಕಲ್ಲ. ಅದು ಹೇಳುವ ವಿಷಯವೇನು ಆಗಿರಲಿಲ್ಲ. ಅದೇ ನನ್ನ ಒಂದುವರೆ ವರ್ಷದ ಕುಮಾರ ಸಂಭವ ನಾಯಿ ಮೇಲೆ ತೋರುತ್ತಿದ್ದ ಪ್ರೀತಿ. ಅದರಲ್ಲಿ ಸಿರಿಯಸ್ಸಾಗಿ ತೋಳ್ಳುವಂತಹದ್ದು ಏನದ ಅಂತ ತಾವು ಭಾವಿಸಬಹುದು, ನಾನು ಭಾವಿಸಿರಲಿಲ್ಲ. ಕೇಳ್ರಿ ಆ ಕಥಿ.

ನನ್ನ ಮನೆಯ ಪಕ್ಕದ್ದು ಕೂಲಿನಾಲಿ ಮಾಡಿ, ಮುಸುರಿ ತಿಕ್ಕಿ ಬದುಕುವ ಕುಟುಂಬ. ಬಡತನ ಬದುಕಿಗಿದ್ದರೂ ಬಾಯಿಯ ಬಡಿವಾರಕ್ಕೆನೂ ಕಮ್ಮಿ ಇರಲಿಲ್ಲ. ಗಂಡ ಹೆಂಡಿರ ಬಾಯಿ ಅಂದ್ರ ಬಾಯಿ. ಹೊಸದಾಗಿ ಮನೆಗೆ ಬಂದಾಗ ನಿತ್ಯ ರಾತ್ರಿಯಿಡಿ ಆಡುತ್ತಿದ್ದ ಜಗಳಾಟ ಕಿರುಚಾಟಕ್ಕೆ ನಿದ್ದೆನೆ ಬರತಿರಲಿಲ್ಲ. ಈರ್ವರ ಬಾಯಿಯಿಂದ ಬರುತ್ತಿದ್ದ ಮಾತುಗಳೋ ದೇವರಿಗೆ ಪ್ರೀತಿ. ಏನ ಮಾತಾ ಏನೋ ಆ ಓಣಿಯ ಜನ ಹ್ಯಾಂಗ ಸಹಿಕೊಂಡಿದ್ದರೋ, ನನಗೂ ಮಿಕ್ಕಿ ಒಂದು ದಿನ ಇಬ್ಬರಿಗೂ ತಿಳಿಸಿ ಹೇಳಿದ್ದೆ, ಜಗಳಾಡುತ್ತಿದ್ದ ಈರ್ವರು ನನ್ನ ಮೇಲೆ ಎರಗಬೇಕೆ. ನೀನು ಸಾಲಿ ಕಲಸ ಮಾಸ್ತರಿರಬಹುದು, ನಮಗ ಬುದ್ಧಿ ಹೇಳಾಕ ಬರಬ್ಯಾಡ್ರಿ, ನಾವು ಹೆಂಗಾರ ಜಗಳ ಮಾಡವಲ್ಯಾಕ ಹಾಳಭಾವಿ ಬೀಳವಲ್ಯಾಕ ನಿಮಗ್ಯಾಕರಿ ಉಸಾಬರಿ ಎಂದು ಉಗಿದ್ದಿದ್ದರು. ಈಚೆಯ ಮನೆಯವರು ’ಅವು ಇರೋದ ಹಾಂಗರಿ, ಹೇಳಿ ಹೇಳಿ ಕೈ ಬಿಟ್ಟಿವಿ. ಹಾಳಾಗಿ ಹೋಗವಲ್ಯಾಕ ಗಪ್ಪಿದ್ದಬಿಡ್ರೀ’ ಎಂದ್ರು.  ಅಂದಿನಿಂದ ಆ ಯಪ್ಪಾ ಹೆಂಡ್ತಿಗೆ ರಕ್ತಾ ಬರಿಯಾಂಗ ಹೊಡಿತಿದ್ರು, ’ಎಣ್ಣಾ… ಬಿಡಸು ಬರ್ರಿ’ ಅಂತಿದ್ರು ಹೋಗತಿರಲಿಲ್ಲ, ಅವ ಜಗಳಾಡಿ ಒದಿರ್‍ಯಾಡಿ ಸುಮ್ಮನಾಗತಿದ್ವು. ಅಂತಾವು ಅವಕ್ಕ ತುತ್ತಿಗೆ ಗತಿ ಇರದೆ ಇರಬೇಕಾದ್ರೆ ಅವುಕ್ಕ  ನಾಯಿ ಸಾಕಬೇಕೆಂಬ ಚಪಲಾ ಹುಟ್ಟಿ ನಾಯಿ ಒಂದನ್ನ ತಂದೆ ಬಿಟ್ರು.  ಹಡದ ಮಕ್ಕಳಿಗೆ ಒಂದಿನ ಹಾಲ ಕುಡಿಸದಿದ್ರೂ ಅದಕ್ಕ ಕೂಲಿ ನಾಲಿ ಮಾಡಿ ಬಂದ ರೊಕ್ಕದಿಂದ ಹಾಲು ಕುಡಸಾಕತಿದ್ರು, ತಾವು ತಿನ್ನೋದ್ರಲ್ಲಿ ಅರ್ಧ ಇಕ್ಕಕತಿದ್ರು. ಒಮ್ಮೊಮ್ಮೆ ಇವರ ಜಗಳದ ನಡುವೆ ರಾತ್ರಿಯಲ್ಲ ಅದಕ್ಕೆ ಊಟ ಸಾಲದೆ ’ಕುಯಿಂ ಕಯಿಂ’ ಅಂತಿತ್ತು.  ಇದರ ನಡುವೆ ಮಗ ಅದರ ಜೊತೆ ಹ್ಯಾಂಗ ದೋಸ್ತಿ ಬೆಳಸಿಕೊಂಡನೋ ಗೊತ್ತಿಲ್ಲ ಗಳಸ್ಯ ಗಂಠಸ್ಯ ಆಗಿ ಬಿಟ್ಟಿದ್ದ. ಮಗನೆಂಬ ಕಾರಣಕ್ಕೆ ಸೂಕ್ಷ್ಮವಾಗಿ ಬೆಳಸಿದವನು ನಾನಲ್ಲ. ಈಚೆ ಮನೆಯವರು ’ಹಾಂಗ್ಯಾಲ್ಲ ಹೊರಗಡೆ ಬಿಡಬೇಡಿ ಅವರ ಮನೆಯಾಗ ಕಳಸಬೇಡಿ, ಇವರ ಮನ್ಯಾಗ ಕಳಸಬೇಡಿ. ಕೂಸಿಗೆ ಏನಾದ್ರೂ ಆದಿತು, ಕಪ್ಪು ಜನ. ಏನಾದ್ರು ಮಾಡಿಯಾರು’ ಅಂತೆಲ್ಲ ಹೇಳತಿದ್ರು ನಾನು ಕೇಳತಿರಲಿಲ್ಲ, ’ಬೀದ್ಯಾಗ ಬೆಳದದ್ದು ಜಟ್ಯಾಂಗ ಆಗತಾವ’ ಅಂತ ಹೇಳಿ ಕೈ ತೋಳಕಂತಿದ್ದೆ. ಅವರ ಮನೆಯಲ್ಲಿ ಸಮು ವಾರಿಗಿನ ಮಗಳು, ಅದಕ್ಕಿಂತ ಮೂರು ವರ್ಷದ ಮಗ ಇದ್ರೂ ಹೊಸ್ತಲ ದಾಟಸ್ತಿದ್ದಿಲ್ಲ, ಹೊರ ಬಂದರೂ ಅಪ್ಪ ಅಮ್ಮನ, ಕಾಕನ ಅಥವಾ ಅಜ್ಜಿಯ ಸುಪರ್ದಿಯಲ್ಲಿ ಹೊರಬರೋವು. ಆಚೆಯ ಅಂಗಳ ದಾಟಲು ಬಿಡುತಿರಲಿಲ್ಲ. ಈವನಿಗೆ ಯಾವುದೆ ಕಟ್ಟುಪಾಡು ಹಾಕಿರಲಿಲ್ಲವಾದ್ದರಿಂದ ಈಡಿ ಓಣೆಲ್ಲ ತಿರುಗಾಡಿ ಬರತಿದ್ದ, ತನ್ನ ಬಾಲ್ಯ ಚೇಷ್ಟೆಗಳಿಂದ ಎಲ್ಲರನ್ನು ಮೋಡಿ ಮಾಡಿದ್ದ. ಎಲ್ಲರಿಗೂ ಏನನ್ನೂ ತಿನ್ನಸ ಬೇಡ್ರೀ ಅಂತ ಹೇಳಿದ್ದರೂ ಗೊತ್ತಿರದಂತೆ ತಿಂತಿದ್ದ. ಇಂತಿಪ್ಪ ಮಗ ನಾಯಿ ಜೊತೆ ಅಪಾರ ಸಖ್ಯೆ ಬೆಳಸಿಕೊಂಡಿರೋದು ಗೊತ್ತೆ ಇರಲಿಲ್ಲ. 

ಈಕಿಗೂ ಬೆಳಗಿನ ಕೆಲಸದ ಹೊರೆ, ಅವ ಹೊರಗಿದ್ರ ಸಲೀಸಾಗತಾವ ಅಂತ ಅವರಿವರ ಮನೆಯಲ್ಲಿ ಆಡಲು ಬಿಡುತ್ತಿದ್ದರಿಂದ  ಗೊತ್ತು ಇರಲಿಲ್ಲ. ಒಂದು ಸಾರಿ ನಾಯಿ ಬಾಲ ಜಗ್ಗುದ, ಅದನ್ನು ಅಟ್ಟಿಸಿಕೊಂಡು ಹೋಗುತ್ತಿರೊದನ್ನ ನೋಡಿ ಗಾಭರಿಯಾಗಿ ಈಕಿಗೆ ಅದನ್ನು ತಪ್ಪಿಸಲು ಹೇಳಿದ್ದೆ. ಅಲ್ರೀ ಯಾರಿಗೆ ಏನೆ ಮಾಡಿದ್ರೂ ನಮ್ಮ ಸಮುಗೆ ಅದು ಚಕಾರ ಎತ್ತಲ್ಲಂತ್ರಿ, ಅದು ಅಷ್ಟು ಹಚಗೊಂಡು ಬಿಟ್ಟಾದಂತ್ರಿ ಅಂತ ಅಂದ್ಲು. ’ಏನೆ ಆಗಲಿ ಅವು ಮೂಕ ಪ್ರಾಣಿಗಳು ಎಷ್ಟು ಛಲೂ ಇದ್ರೂ ಸಿಟ್ಟ ಬಂದ್ರ ಮನುಷ್ಯರಂಗ, ಆದಷ್ಟು ಇವನನ್ನ ಅದರಿಂದ ದೂರಿಡ ವ್ಯವಸ್ಥ ಮಾಡು’ ಎಂದು ಈಕಿಗೆ ಒತ್ತಾಯಿಸಿದೆ. ನಾನು ಹೇಳಿದ್ದು ಬೋರ್ಗಲ್ಲ ಮೇಲೆ ನೀರು ಎರದಂತಾಗಿತ್ತು. ಮನ್ಯಾಗಿದ್ರ ಇವ ಕುಚೇಷ್ಠೆ ಮಾಡವ, ಕೆಲಸಕ್ಕ ಅಡ್ಡಾಗವ, ಅಜ್ಜಿನೂ ರೇಗಸಾವ. ಅವನ ಹಿಡಕೊಂಡು ಕೂತ್ರಾ, ಅವ್ವ ’ಕೆಲಸಮಾಡಲ್ಲ, ಹಿಡಕೊಂಡು ಕೂಡತಿ’ ಅಂತ ಮಂಗಳಾಷ್ಟಕ ಹಾಡಾಕಿ. ಕೆಲಸ ಹವರ ಮಾಡಿಕೊಳ್ಳಲು ಇನ್ನೊಬ್ಬರ ಮನಿಗೆ ಬಿಡಕಿ. ಅವ ಅಲ್ಲಿಂದ ತಪ್ಪಿಸಿಕೊಂಡ ಬಂದು ನಾಯಿ ಜೊತೆ ಆಟ ಆಡಿಕೊಂತ ಕೂಡಾವ, ಅದರ ಮೇಲೆ ಹತ್ತಾವ, ಬಾಲಜಗ್ಗಾವ, ಬಡಿಗೆ ತೊಂಡು ಹೇಟು ಹಾಕಾವ, ಎತ್ತೆತ್ತೆ ಉಳ್ಳಾಡಿಸಿ ಒಗ್ಯಾವ. ಅವನು ಅಷ್ಟು ಸಲಿಗಿಯಿಂದ ನಾಯಿ ಜೊತೆಗೆ ವರ್ತಿಸೋದು ನೋಡಿ ಆ ಮನೆಯವು, ಓಣಿಯಾಗಿನ ಮಂದಿ, ಮಕ್ಕಳಾದಿಯಾಗಿ ಖುಷಿ ಪಡೋರು. ಮಗನ ಸಾಹಸವನ್ನ ಇವರಮ್ಮಗ, ಅಜ್ಜಿಗೆ ಬಂದು ಹೇಳೋರು. ಅವರು ಅಂಜಿಕಿಲ್ಲದೆ ಆಡುವುದನ್ನು ನೋಡಿ ಸಂಭ್ರಮಿಸೋರು, ಪಕ್ಕದ ಆ ಕುಟುಂಬ ಮಾಂಸಹಾರಿಗಳು, ಒಮ್ಮೆ ನಾಯಿ ಹಸಿವಿನಿಂದ ತತ್ತರಿಸೋದನ್ನು ಕಂಡು ಮಾಂಸ ಹಾಕಿದ್ದನ್ನು ನೋಡಿದೆ, ಮಾಂಸದ ರುಚಿ ಹತ್ತಿದ ನಾಯಿ ಎಲ್ಲಿ ಕ್ರೂರವಾಗುವುದೋ ಎಂದು ಅಂಜಿದೆ, ಮೊತ್ತಮ್ಮೆ ಇವ ನಾಯಿ ಪಕ್ಕದಲ್ಲೆ ಮಲಗಿದ್ದನ್ನು, ಇನ್ನ್ತೊಮ್ಮೆ ನಾಯಿಗೆ ತಾನು ತಿನ್ನುವ ಭಕ್ರಿಯನ್ನು ತಿನ್ನಿಸುತ್ತಿರುವದನ್ನು, ಮಗದೊಮ್ಮೆಯಂತೂ ಇವ ನಾಯಿಗೆ ಮುತ್ತಿಡುವದನ್ನು, ಅದರ ಬಾಯೊಳಗೆ ಕೈ ಹಾಕಿ ಆಟ ಆಡುತ್ತಿರುವದನ್ನು ನೋಡಿ ಮನ್ಯಾಗ ಎಳಕೊಂಡು ಬಂದು ಎರಡು ಬಿಗಿದಿದ್ದೆ. ಅವ್ವಗ, ಈಕಿಗೆ ದಬಾಯಿಸಿ ಕೆಲಸ ನಿಂತ್ರು ಚಿಂತಿಲ್ಲ ಆ ಮನೆಯತ್ತ ಸುಳಿದಿರುವಾಂಗ ಮಾಡು  ಅಂದು ಕಟ್ಟಪ್ಪಣೆ ವಿಧಿಸಿದೆ.  ನನಗೆ ಪ್ರಾಣಿಗಳ ಬಗ್ಗೆ ಮಮಕಾರ ಇದ್ರೂ ಈ ನಾಯಿಗಳ ಬಗ್ಗೆ ಭಯ ನನಗೆ.  ಎಂತಹ ಅಪರಾತ್ರಿಯಲ್ಲೂ ಅಡ್ಡಾಡುತ್ತೇನಾದ್ರೂ ನಾಯಿ ’ಬೌ ಬೌ’ ಎಂದು ಬೊಗಳಿದ್ರೆ ತತ್ತರಿಸಿ ಬಿಡ್ತೀನಿ. ನನ್ನ ಚಲನೆ ನಿಂತು ಬಡುತ್ತೆ. ಕೆಟ್ಟ ಮೂಡಿ ಫೇಲೋ ಈ ನಾಯಿಗಳು. ಅವುಗಳ ಗುಂಪಿದ್ರಂತು ಗೋವಿಂದ! ಇವು ಭಾರಿ ಬೆರಿಕಿಯಾ ಮತೆ. ’ಬೌಬೌ’ ಅಂತ ಬೊಗೊಳಿಕೊಂತ ಹಿಂಬಾಲಸ್ತಾವೆ, ಅವಾಗ ಅದರುತ್ತಿರುವ ದೇಹದ ಪರಿ ಎಂತಹದು. ಬಿಟ್ಟು ಬಿಟ್ಟು ಹಿಡದಾಂಗ ಆಗತಿರುತ್ತೆ, ಆ ಏರಿಯಾ ಯಾವಾಗ ತಡಾಯಿತಿವೊ ಅಂತಿರುತ್ತೇವೆ. ಸ್ವಲ್ಪ ಧ್ವನಿ ಮಾಡಿದ್ರೆ, ಮೇಲೆ ಏರುವ ಪೋಜಿಶನ್‌ನಲ್ಲಿ ಇರತಾವೆ. ಆ ಏರಿಯ ದಾಟಿದ ಮೇಲೆ ಅಲ್ಲಿನೂ ಅದ ಪರಿಸ್ಥಿತಿ ಎದುರಿಸಬೇಕು. ಒಮ್ಮೆ ಬಾಲ್ಯದಾಗ ಯಾರದೋ ಮನಿಗೆ ಹೋದಾಗ ಸಾಕಿದ ನಾಯಿಯೊಂದು ಏಕಾಏಕಿ ಬಂದು ಕಚ್ಚಬೇಕೆ. ’ಟಾಮಿ ಕಮ್,ಕಮ್ ಬ್ಯಾಕ’ ಅಂತ ಕೇಳದೆ, ಅದಕ್ಕಾಗಿ ನಾನು ಹೊಕ್ಕಳ ಸುತ್ತ ೨೪ ಇಂಜಕ್ಷನ್ನಗಳನ್ನು ಹಾಕಿಸಿಕೊಳ್ಳಬೇಕಾಯಿತು. ಅದು ಮಂಡ ಸೂಜಿ ಇದ್ದ ಆ ಟೈಮಿನಲ್ಲಿ.  ಅಂದಿನಿಂದ ನಾಯಿಕಂಡ್ರ, ಅದನ್ನ ಸಾಕವರನ್ನ ಕಂಡ್ರ ಅಷ್ಟಕಷ್ಟೆ. 

ಕಟ್ಟಪ್ಪಣೆ ಹಾಕಿದ ಮೇಲೆ ಮಗನ್ನ ಟೈಟ ಮಾಡಿದ್ರು, ಅವ ’ಆಯಿ ಆಯಿ’ ಅಂತ ತತ್ತರಿಸಕತ್ತಿದ, ರಾತ್ರಿ ಅದು ಬೊಗೊಳಿದ ಕೂಡಲೆ ’ಆಯಿ ಆಯಿ’ ಅಂತ ತಾಸಗಟ್ಟಲೇ ಅಳಕ ಶುರುಮಾಡವ, ಅವನ್ನ ರಮಸಾಕ ರಾತ್ರಿಯಲ್ಲ ನಿದ್ದೆಗೆಡಬೇಕಾಯಿತು, ನಾಲ್ಕೈದು ದಿನವಾದ್ರೂ ಇವನಿಗೆ ನಾಯಿ ವ್ಯಾಮೋಹ ಕಡಿಮೆಯಾಗಲಿಲ್ಲ, ಯಾವುದೆ ಮಾಯದಲ್ಲಿ ಹೊರಗೋಗಿ ಅದರ ಜೊತಿ ಆಟ ಆಡಾವ. ನನಗೂ ಮಿಕ್ಕಿ ಯಾವಾಗ ಈ ನಾಯಿ ತೊಲಗುತ್ತೋ ಅಂತ ಚಿಂತಿ ಆಯಿತು. ಸಿಟ್ಟ ಬಂದೂ ತಿನ್ನಕ ಕೂಳಿಲ್ಲಿಕ್ರೂ ಸಾಕುವ ಅವರ ಹಠ ಕಂಡು ಅಸಹ್ಯ ಎನಿಸಿತು. ಅವರಿಗೆ ಬಯ್ದು ಹೇಳೊಣ ಅಂದ್ರ ಮೊದಲೆ ಒದರುಮಾರಿಗಳಾಗಿರುವುದರಿಂದ ನಾವೇ ಮನೆ ಬದಲಾಯಿಸಬೇಕೆಂಬ ಯೋಚನೆ ಮಾಡಕ ಹತ್ತಿದೆ. ಮನೆಯೂ ಆ ಮಧ್ಯದಲ್ಲಿ ಸರಳವಾಗಿ ಯಾವು ಸಿಗಲಿಲ್ಲ. ಸಿಕ್ಕವೂ ನಮ್ಮ ಬಜೆಟ್ಟಗೆ ಗಿಟ್ಟುವಂತಿರಲಿಲ್ಲ. ಹಗಲು ರಾತ್ರಿ ನಾಯಿ ಯೋಚನೆಯಿಂದ ಬದುಕೆ ನಾಯಿಪಾಡಾದಂತಾಯಿತು. ಅದು ಯಾವಾಗ ಓಡಿ ಹೋಗುತ್ತೊ, ಇವ ಅದರ ಹುಚ್ಚು ಯಾವಾಗ ಬಿಟ್ಟಾನೋ ಅನ್ನೊ ಚಿಂತೆ ಹತ್ತಿತ್ತು. ಇದರಾಗ ಒಳ್ಳೆ ಯೊಚನೆಯೊಂದು ಹೊಳಿತು. ಅವ್ವಗ ಆ ಮನ್ಯಾಯಾಕಿಗೆ ಚಲೋ ಬಾಂಧವ್ಯ ಇತ್ತು, ಹಾಗಾಗಿ ಇಕಿ ಊಟ ಮಾಡಿ ಉಳಿದಿದ್ದೆಲ್ಲ ಅವರಿಗೆ ಕೊಡಾಕಿ, ಆಕಿಯೂ ಅವ್ವಂದು ಬಾಳ ಗುಣಗಾನ ಮಾಡುತ್ತಿದ್ದರಿಂದ ಇತ್ತಿತ್ತಲಾಗಿ ಮನೆಯಲ್ಲಿ ರೊಟ್ಟಿ ಬಡಿಯುವದು ಹೆಚ್ಚಾಗಿತ್ತು, ಹೆಚ್ಚಾಗಿದ್ದು ಅವರ ಮನೆಗೆ ಸಾಗುತ್ತಿತ್ತು. ದಪ್ಪಾಗಿರುತ್ತಿದ್ದ ಅವ್ವಳ ಭಕ್ರಿ ತಿನ್ನೋದೆ ನಾವು ಬಿಸಿ ಇದ್ದಾಗಷ್ಟ. ನಮಗೆ ಸೇರದವು ಅವರಿಗೆ ಸೇರುತ್ತವೆಯೆ? ಎಲ್ಲರ ಮನೆಯ ರುಚಿ ಕಂಡವರವರು. ಅವ್ವ ಕೊಟ್ಟಿದ್ದನ್ನೆಲ್ಲ್ಲ ನಾಯಿಗೆ ಹಾಕುತ್ತಿರುವುದನ್ನು ನೋಡಿದ್ದೆ. ಅದು ಅವ್ವನ ದಪ್ಪನ ರೊಟ್ಟಿ ತಿಂದು ತಿಂದು ರಾತ್ರಿ ಹಾಯಾಗಿ ಮಲಗುತ್ತಿತ್ತು. ನಾನು ಅವ್ವಗ ಭೇದೋಪಾಯದಿಂದ ಅಲ್ಲ ಹೆಚ್ಚೆಚ್ಚು ಯಾಕ ಮಾಡತಿ, ಮಾಡಿದ್ದನ್ನು ಯಾಕ ಕೊಡತಿ, ಅವರೇನು ತಿಂತಾರೇನು ನಾಯಿಗೆ ಹಾಕ್ತಾರ ಅಂತ ಅಂದಿದ್ದೆ ತಡ ನಾನು ಮಾಡಿದ್ದು ನಾಯಿಗೆ ಹಾಕತಾರ! ಅಂತ ಕೆಂಡಾಮಂಡಲ ಆಗಿ ’ಪಾಪ, ತ್ರಾಸ ಅದಂತ ಕೊಟ್ರ ಇಷ್ಟು ಸೊಕ್ಕಾ….? ತಿನ್ನಲಿ ಕರಕು’ ಅಂತ ಮರುದಿನದಿಂದ ಸ್ಟಾಪ್ ಮಾಡಿದ್ಲು. ಪುಣ್ಯಕ ’ಯಾಕ ಉಳಿದಿಲ್ಲೆನಬೆ?’ ಎಂದಾಗ ’ಜ್ವಾಳ ಆಗ್ಯಾವವ’ ಅಂತ ಹೇಳಿ ಕೈ ತೊಳಕೊಂಡು ನನ್ನ ಮಾನ ಉಳಿಸಿದ್ಲು. ಯಾವಾಗ ಮನಿಯಿಂದ ಹೋಗೋದು ನಿಂತಿತೋ ನಾಯಿಗೆ ತತ್ವಾರ ಆಯಿತು, ಅವ್ವನ ರೊಟ್ಟಿ ತಿಂದು ದಷ್ಟಪುಷ್ಟವಾಗಿದ್ದ ನಾಯಿ ಸೊರಗಾಕತಿತು. ಹೊಟ್ಟೆಗೆ ಸಾಲದೆ  ಬೆಳತಾನ ಒದರಾಕತಿತು, ಅದೂ ಒದರಿಕೂಡಲೇ ಇವ ’ಆಯಿ ಆಯಿ’ ಅಂತ ಹೊರಗಹೋಗಾಕ ಏಳತಿದ್ದ. ಇದಾ ಟೈಮಿನ್ಯಾಗ ಇವನ ಮಲಿ ತಿನ್ನೊ ಚಟ ಬಿಡಿಸಬೇಕಾಗಿತ್ತು, ನಾಯಿ ಸಲುವಾಗಿ ಇವ ಏಳತಿದ್ದ, ಇವನ ಸಲುವಾಗಿ ನಾವು ಏಳಬೇಕಾಗಿತ್ತು, ಅದ ನೆವದಾಗ ಮಲಿಗೆ ಪಟ್ಟಿಗಿಟ್ಟಿ ಹಚ್ಚಿ ಹೊರಗ ಗಾಳಿಗೆ ಕರಕೊಂಡು ಹೋಗಿ ಮಲಗಿಸಿಕೊಂಡು ಬರುತ್ತಿದ್ದರಿಂದ ಪ್ರಯತ್ನ ಫಲಕೊಡಾಕತಿತು. ಪಕ್ಕದ ಮನೆಯವರಿಗೂ ಕೂಲಿನಾಲಿ ಬರುವ ಆದಾಯ ಕಡಿಮೆಯಾಗಿ ನಾಯಿಗೂ ಹಾಕಕ ಏನು ಇಲ್ಲದಾಯಿತು. ಜಟ್ಟಿ ಬಿದ್ರೂ ಮೀಸೆ ಮಣ್ಣಾಗದು ಅನ್ನೊ ಹಾಂಗ ಏನು ಇರದಿದ್ದರೂ ಸಾಲ ಮಾಡಿ ಹಾಲು ತಂದು ಹಾಕದುಕೊಂಡು ಪಿತ್ತ ನೆತ್ತಗೇರತ್ತಿತ್ತ್ತು. ’ಯಕ್ಕಾ ಶಿಲ್ಪಕ್ಕ ನಾಯಿಗೆ ಸ್ವಲ್ಪ ಹಾಲು ಹಾಕವ’ ಎಂದು ಕೇಳುತ್ತಿದ್ದಾಗ ಮನಸ್ಸು ಕುದಿಯುತಿತ್ತು. ನಾಯಿ ಮುಂಡೇದಕ್ಕ ಇಲ್ಲಿದ್ರ ಸತ್ತಹೋಗತಿನಿ ಅಂತ ಭಯ ಆಯ್ತೇನೋ ಒಂದು ರಾತ್ರಿ ತಪ್ಪಿಸಿಕೊಂಡು ಓಡೇ ಹೋಗಿಬಿಡ್ತು. ಮರುದಿನ ಓಣಿತುಂಬಾ ಅವರು ಮನೆಯವರು ಹುಡುಕುತ್ತಿದ್ದಾಗ ಈಕಿ ಬಂದು ನಾಯಿ ಪಾಪ, ಕಳಚಗೊಂಡು ಹೋಯ್ತಂತ ಅಂದ್ಲು. ನನಗ ಖುಷಿ ಆಯ್ತು. ಹಿಂದಿನ ರಾತ್ರಿ ಮನಿ ಬಾಗಲ ಹತ್ರ ಬಂದು ಮೂಸಿ ನೋಡಿ ’ಮೋ ಮೋ’ ಅಂತ ಒದರಿದ್ದು ಅಪಾ, ಆಯಿ ಬಂತು, ಆಯಿ ಬಂತು’ ಅಂತ ಇವ ಎಬ್ಬಿಸಿದ್ದ. ಅಲ್ಲಲೇ ಅದೂ ಆಯಿ ಅಲ್ಲ ಆನಿ, ಎತ್ತಿಕೊಂಡು ಹೋಗುತ್ತ ಅಂತ ಹೆದರಿಸಿ ಮಲಗಿಸಿದ್ದೆ. ಪೀಡ ಹೋಯ್ತು ಅಂತ ಈಗ ನಿರಮ್ಮಳನಾಗಿದ್ದೇನೆ. ಅದರ ಬಗ್ಗೆ ಏನೆ ಸಿಟ್ಟಿದ್ದರೂ ಪಾಪ, ಸಮುನ ಕೊನೆ ಬಾರಿ ನೋಡಲು ಬಂದಿದ್ದ ನಾಯಿಗೆ ಅವಕಾಶ ಕೊಡದಿದ್ದಕ್ಕೆ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಸಮುನ ಕೊನೆ ಬಾರಿ ನೋಡಲು ಬಂದಿದ್ದ ನಾಯಿಗೆ ಅವಕಾಶ ಕೊಡದಿದ್ದಕ್ಕೆ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಚೆನ್ನಾಗಿದೆ, ನಿಮ್ಮ ತುಮುಲಗಳನ್ನು ವಿಶಿಷ್ಟವಾಗಿ ನಿರೂಪಿಸಿದ್ದೀರಿ. ಧನ್ಯವಾದಗಳು ದೇಸಾಯೀಜಿ

gundurao
gundurao
9 years ago

ಧನ್ಯವಾದಗಳು ಅಖಿಲೇಶರವರೆ,

2
0
Would love your thoughts, please comment.x
()
x