ಮಿತ್ರ ಶ್ರೇಣಿಯೊಳ್ ವಾಣಿ: ಪಿ.ಎಂ.ಸುಬ್ರಮಣ್ಯ, ಬ.ಹಳ್ಳಿ


ಕಾಲದೊಳಗೆ  ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜವೈ
ಹಾಳಿಯಲಿ ದೇವೆಂದ್ರ ಮಿತ್ರಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನ್ಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ   (ಕುಮಾರವ್ಯಾಸ ಭಾರತ)

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವ ಗಾದೆಮಾತು ಪ್ರಸ್ತುತ ಸನ್ನಿವೇಶದಲ್ಲಿ ಅರ್ಧಸತ್ಯವಾಗ್ತಿದೆ.  ಏಕೆಂದರೆ ಈ ಗಾದೆಯ ಮೊದಲ ಅರ್ಧ ಸರಿ ಎನಿಸಿದರೂ ಉಳಿದರ್ದ ಏಕೋ ಸರಿ ಕಾಣ್ತಿಲ್ಲವೇನೋ ಎನಿಸುತ್ತೆ.  ಒಲೆ  ಎನ್ನೋ ಮಾತೇ ಮರೆತು ಹೋಗಿದೆ.  ಜನಸಂಪದ ಗ್ಯಾಸ್‌ಸ್ಟವ್, ಎಲೆಕ್ಟ್ರಿಕಲ್‌ಸ್ಟವ್, ಎಲೆಕ್ಟ್ರಾನಿಕ್ ಓವೆನ್, ಇಂಡಕ್ಷನ್ ಕುಕ್ ಟಾಪ್ ಒಲೆಗಳ ಮುಂದೆ ಸಾಂಪ್ರದಾಯಕ ಒಲೆ ಮರೆತು ಹೋಗಿದ್ರೆ ಅದು ಅಸಹಜವೇನೂ ಅಲ್ಲ ಬಿಡಿ.  ಸಧ್ಯಕ್ಕೆ ನಾನು ಹೇಳೋಕೆ ಬಂದಿದ್ದು ಮಾತಿನ ಬಗ್ಗೆ.  ’ಮಾತು ಬಲ್ಲವ ಬರದಲ್ಲೂ ಬದುಕಬಲ್ಲ' ಎನ್ನುವ ಸೈದಾಂತಿಕ ಬಂಧಕ್ಕೆ ಸಿಕ್ಕವ ನಾನು.  ನೀವೂ ಸಹ!. ಮಾತಿಗೆ ಅಂತಹ ಮಹತ್ವ ಇದೆ.  ದಿನಬಳಕೆಯಲ್ಲಿ ನಾವಾಡುವ ಮಾತುಗಳು ನಮ್ಮ ಜವಾಬ್ದಾರಿಯನ್ನು ಗುರುತು ಮಾಡುತ್ತೆ.  ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾನೆ ಎಂದರೆ ಅವರಿಬ್ಬರ ನಡುವಿನ ಮಾತುಗಾರಿಕೆ ಗಟ್ಟಿಯಾಗಿರುತ್ತದೆ.  ಇದನ್ನೆ ’ಉದ್ಯೋಗ ಪರ್ವ’ದ ’ವಿದುರನೀತಿ’ ಅಧ್ಯಾಯದಲ್ಲಿ ಕುಮಾರವ್ಯಾಸ  ಮಿತ್ರ ಶ್ರೇಣಿಯೊಳ್ ವಾಣಿ…..  ಎಂದು ಉಲ್ಲೇಖಿಸಿದ್ದಾನೆ.  ಇಲ್ಲಿನ ’ವಾಣಿ’ ಎಂಬ ಪದವನ್ನು ನಾವು ’ಮಾತು’ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ.  ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಈ ’ವಾಣಿ’ ಅಥವಾ ’ಮಾತುಗಾರಿಕೆ’ ಪ್ರಮುಖ ಪಾತ್ರವಹಿಸಿರುತ್ತದೆ.  ಅದನ್ನೇ ಮಾತೇ ಮುತ್ತು; ಮಾತೇ ಮೃತ್ಯು  ಎನ್ನಬಹುದು.  

ವ್ಯಕ್ತಿಯೊಬ್ಬ ಉತ್ತಮ ಮಾತುಗಾರನಾದರೆ ಅವನ ವ್ಯಕ್ತಿತ್ವ  ಉತ್ತಮಗೊಳ್ಳುತ್ತದೆ.  ವ್ಯಕ್ತಿತ್ವ ಉತ್ತಮಗೊಂಡಾಗ  ಉತ್ತಮ ನಾಯಕ ರೂಪುಗೊಳ್ಳುತ್ತಾನೆ.  ಈ ನಾಯಕ ತನ್ನ ಹಿಂದೆ ಬರುವ ತನ್ನವರನ್ನು ಪಕ್ವಗೊಳಿಸುತ್ತಾನೆ.  ಅನೇಕ ದಾರ್ಶನಿಕರು ಮಾತುಗಾರಿಕೆಯನ್ನು ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸುತ್ತಾರೆ.  ಹತ್ತನೆಯ ಶತಮಾನದಲ್ಲಿ ಪಂಪ ತನ್ನ ಪಂಪಭಾರತ ದಲ್ಲಿ ’ನಾಲಗೆ ಕುಲವಂ ತುಬ್ಬುವವೋಲ್’ ಎಂದು ದ್ರೋಣನಿಂದ ಹೇಳಿಸುತ್ತಾನೆ.  ಹನ್ನೆರಡನೆಯ ಶತಮಾನದ ಬಸವಣ್ಣನವರು ’ನುಡಿದರೆ ಮುತ್ತಿನ ಹಾರದಂತಿರಬೇಕು, ಸ್ಪಟಿಕದ ಶಲಾಕೆಯಂತಿರಬೇಕು, ಎಲ್ಲರೂ ಮೆಚ್ಚಿ ಅಹುದಹುದೆನಬೇಕು’ ಎನ್ನುತ್ತಾರೆ. ದಾಸ ಸಾಹಿತ್ಯ ಪರಂಪರೆಯಲ್ಲಿ ದಾಸರು ’ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂಬ ಚಾಟಿ ಏಟಿನ ನುಡಿಯಲ್ಲಿ ಮಾತಿನ ತೀಕ್ಷ್ಣತೆಯನ್ನು ಗುರುತಿಸಬಹುದು.  ಇನ್ನು ಸರ್ವಜ್ಞ ಸಹ ಮಾತುಗಾರಿಕೆಯನ್ನು ಕುರಿತು ಉದ್ದರಟು ಮಾತಾಡಿ, ಇದ್ದುದನು ಹೋಗಾಡಿ, ಉದ್ದನಾ ಮರದ ತುದಿಗೇರಿ ಕೈ ಜಾರಿ ಬಿದ್ದು ಸತ್ತಂತೆ ಎನ್ನುವ ನಿತ್ಯಸತ್ಯತೆಯನ್ನು  ನುಡಿಯುತ್ತಾರೆ.  ದಾರ್ಶನಿಕ ಕವಿ ಡಿವಿಜಿ ಹೇಳುತ್ತಾರೆ.

ಇಳೆಯಿಂದ ಮೊಳಕೆಯೊಗೆವೊಂದು ತಮಟೆಗಳಿಲ್ಲ
ಫಲಮಾಗುವೊಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯ ಚಂದ್ರರದೊಂದೂ ಸದ್ದಿಲ್ಲ 
ಹೊಲಿನಿನ್ನ ತುಟಿಗಳನು ಮಂಕುತಿಮ್ಮ.

ಎಂಥ ಕಾಣ್ಕೆ ಇಲ್ಲಿದೆ.  ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ, ಅಹಂಮಿನಿಂದ ವರ್ತಿಸುವ ಜನರಿಗೆ ಡಿವಿಜಿ ಹೇಳಿದ  ಕಿವಿಮಾತು.  ಹಾಗದರೆ ಮಾತನಾಡಬಾರದೆ? ಎಂದರೆ…….  ಅದಕ್ಕೆ ಮಾತು ಹೇಗಿರಬೇಕು ಎಂದು ತಿಳುವಳಿಕೆ ನೀಡುತ್ತಾರೆ.  

ಹೃದಯಕೊಪ್ಪುವ ಭಾಷೆ ರಾಗಲಯ ವಿಸ್ತಾರ
ಪದಚರ್ಚೆ ಮತಿ ವಿಚಾರಕೆ ತಕ್ಕ ಭಾಷೆ
ಹೃದಯಮತಿ ಸತಿ-ಪತಿಗಳಂತೆ ಯುಕ್ತವದು 
ಬದುಕು ರಸತರ್ಕೈಕ್ಯ – ಮಂಕುತಿಮ್ಮ   

ಇಲ್ಲಿ ಭಾಷೆ ಎನ್ನುವುದೇ ಮಾತು. ಮಾತಿನಲ್ಲಿ ರಾಗ ಲಯ ವಿಚಾರಗಳ ಐಕ್ಯವೇ ಭಾಷೆ.   
ಹೀಗೆ ಮಾತಿನ ಮಹತ್ವವನ್ನು ಅರಿತು ಸಮಾಜದ ಸಜ್ಜನ ಬಂಧುವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಲೋಚಿಸಬೇಕಾದ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ನಮಗೆದುರಾಗಿರುವುದು ದುರ್ದೈವವೇ ಸರಿ.  ಧರ್ಮ ದಾರಿ ತಪ್ಪಿರುವ ಈ ದಿನಗಳು ಮುಗ್ಧ ಮಕ್ಕಳ ಮೃದು ಮನಸ್ಸುಗಳನ್ನು ಕಲುಷಿತಗೊಳಿಸುವ ಅಪಾಯ ಎದುರಾಗಿರುವುದು ಪ್ರಳಯದ ಭಯಕ್ಕಿಂತಲೂ ದೊಡ್ಡ ಭಯವಾಗಿದೆ.  
ವಚನ ಭ್ರಷ್ಟತೆಯ, ನೀತಿ ತಪ್ಪಿದ ಭ್ರಷ್ಟ ರಾಜಕೀಯ, ರಾಜಕಾರಣ, ರಾಜಕಾರಣಿಗಳು ನಮ್ಮ ನಾಯಕರು.  ಇದಕ್ಕೆ ಪೂರಕವೆಂಬಂತೆ ವಿದ್ಯುನ್ಮಾನ ದೃಕ್ ಶ್ರವಣ ಮಾಧ್ಯಮಗಳ ಅತಿ ವೈಭವಿಕರಿಸಿದ ವಿಷಯ ಪ್ರಸಾರಗಳು ಮಕ್ಕಳಲ್ಲೂ ನೈತಿಕ ಪ್ರಜ್ಞೆ ತಪ್ಪಿಸುವತ್ತ ದಾಪುಗಾಲು ಹಾಕುತ್ತಿವೆ. 

’ಅತಿಯಾದರೆ ಅಮೃತವೂ ವಿಷ’ ಎಂಬ ಮಾತಿನಂತೆ ಬಾಯಿ ಇದೆ ಎಂದು ಮನಸ್ಸಿಗೆ ಬಂದಂತೆ ಮಾತನಾಡಿ ತಮ್ಮ ವರ್ಚಸ್ಸನ್ನು ಕಳೆದು ಕೊಂಡಿರುವ ಅನೇಕರನ್ನು ನಾವು ಕಂಡಿದ್ದೇವೆ. ಕಾಣುತ್ತಿದ್ದೇವೆ.  ಇದನ್ನೇ ಕುರಿತು ಮುದ್ದುರಾಮನ ಪದದಲ್ಲಿ ಕೆ.ಸಿ. ಶಿವಪ್ಪನವರು ಹೀಗೆ ಹೇಳುತ್ತಾರೆ.  

ಹೆಚ್ಚು ಮಾತಾಡಿದರೆ ಅಷ್ಟು ತಪ್ಪುಗಳಧಿಕ
ಎಷ್ಟು ಕಡಿಮೆಯೋ ಮಾತು ತಪ್ಪಷ್ಟು ಕಮ್ಮಿ
ಅನಗತ್ಯ ಮಾತುಕಥೆ ಸೋನೆಮಳೆ ಸುರಿದಂತೆ
ಮೌನ ನಿಜ ಬಂಗಾರ – ಮುದ್ದುರಾಮ. 

ನಾವೆಲ್ಲಾ ಭಾವನೆಗಳ ಬಂಧಿಗಳು.  ವ್ಯಕ್ತಿಯೊಬ್ಬ ತನ್ನ ಅನಿಸಿಕೆಗಳನ್ನು ಅಭಿವ್ಯಕ್ತಿಸುವುದೇ ಭಾವನೆಗಳು.  ಭಾವನೆಗಳ ಶಬ್ದ ರೂಪವೇ ಮಾತು.  ಮಾತು ದೇವರು ಕೊಟ್ಟ ಕೊಡುಗೆಯೇನೂ ಅಲ್ಲ.  ಅದನ್ನು ನಾವಾಗಿಯೇ ಗಳಿಸಿಕೊಂಡದ್ದು.  ನಮ್ಮ ದೇಹದ ಅಂಗರಚನೆಯ ಅವಯವಗಳ ಬಳಕೆಯಿಂದ ಉತ್ಪಾದನೆಯಾದ  ಉಪವಸ್ತುವೇ ಮಾತು.   ಈ ಮಾತುಗಳನ್ನು ಕೇಳುವ ಕೌಶಲ್ಯ ಬೆಳೆಸಬೇಕು.  ಏಕೆಂದರೆ ಕೇಳುವ ಕೌಶಲ್ಯವೇ ಒಂದು ಒಳ್ಳೆಯ ಕಲಿಕೆ.   ಕಲಿಕೆಯ ಕೌಶಲ್ಯಕ್ಕಾಗಿ ಮಾತುಗಳನ್ನು ಗಟ್ಟಿಗೊಳಿಸುತ್ತಾ, ನಮ್ಮ ಮುಂದಿನ ಪೀಳಿಗೆಗೆ ಮಾತಿನ ನೈತಿಕ ಮಹತ್ವದ ಅರಿವು ಮೂಡಿಸಿ ವಾಗ್ಭೂಷಣಂ ಭೂಷಣಂ ಎನ್ನುವ ನುಡಿಯಂತೆ ಬದುಕಲು ದಾರಿ ಮಾಡಿಕೊಡಬೇಕಾದದ್ದು ನಮ್ಮ ನಿಮ್ಮೆಲ್ಲರ ಹೊಣೆ.  ಮುಗ್ಧ ಮನಸ್ಸುಗಳನ್ನು ಉತ್ತಮಗೊಳಿಸುವ ಅಥವಾ ಕಲುಷಿತಗೊಳಿಸುವ ಶಕ್ತಿ ಮಾತಿಗಿದೆ.  ನಮ್ಮ ಹಲವಾರು ನಾಯಕರ ಮಾತಿನ ಮೋಡಿ ಹೇಗಿತ್ತೆಂದರೆ ಕಿಂದರಜೋಗಿಯ ಕಿನ್ನರಿನಾದಕ್ಕೆ ತಲೆದೂಗಿ ಅವನ ಹಿಂದೆಯೇ ಹೋಗಬಹುದಾದ ಸೆಳೆತ ಅವರಲ್ಲಿತ್ತು.  ವಿವೇಕಾನಂದರ ಅಮೇರಿಕಾದ ಭಾಷಣ, ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಗೆ ನೀಡಿದ ಕರೆ, ಅಟಲ್ ಬಿಹಾರಿ ವಾಜಪೇಯಿ ಭಾಷಣ, ಮಾಸ್ಟರ್ ಹಿರಣ್ಣಯ್ಯನವರ ವಾಗ್ಝರಿ, ನರೇಂದ್ರ ಮೋದಿಯವರ ಖಡಕ್ಕಾದ ಮಾತುಗಳು-  ಮಾತುಗಾರಿಕೆಗೆ ನೀಡಬಹುದಾದ ಕೆಲವು ಉದಾಹರಣೆಗಳು.  ಇಲ್ಲಿನ ಹೆಸರುಗಳಷ್ಟೇ ಅಲ್ಲ ಈ ಪಟ್ಟಿಗೆ ನೂರಾರು ಹೆಸರುಗಳು ಸೇರುತ್ತವೆ.  

ಉತ್ತಮ ನಾಯಕ ತನ್ನ ಮಾತು ಮತ್ತು ವ್ಯಕ್ತಿತ್ವದಿಂದ  ತನ್ನ ಹಿಂಬಾಲಕರನ್ನು ಪಕ್ವಗೊಳಿಸುತ್ತಾ ಮೌಲ್ಯವಂತರ ಬೆಳವಣಿಗೆಗೆ ಕಾರಣನಾಗುತ್ತಾನೆ.  ಅದೇ ಅವನ ಮಾತಿನಲ್ಲಿ ಹಿಡಿತ ತಪ್ಪಿದರೆ, ನುಡಿಯಲ್ಲಿ ಎಡವಿದರೆ, ತನ್ನ ಅವಸಾನಕ್ಕೆ  ತಾನೇ  ಚರಮಗೀತೆ ಹಾಡಿದಂತಾಗುತ್ತದೆ.  ನಮ್ಮ ರಾಜಕೀಯ ರಂಗದಲ್ಲಿ ಇಂತಹ ಹಲವಾರು ಘಟನೆಗಳು ಉದಾಹರಣೆಯಾಗಿ ಸಿಗುತ್ತದೆ.  ಮಾತಿಗೆ ಇರುವ ಶಕ್ತಿಯನ್ನು ಮುದ್ದುರಾಮನ ನುಡಿಯಲ್ಲಿ ಹೀಗೆ ವರ್ಣಿಸುತ್ತಾರೆ.

ಕೋಟೆ ಕೊತ್ತಲದಲ್ಲಿ ಮದ್ದು ಗುಂಡಿರಬಹುದು
ಹಿಮ್ಮೆಟ್ಟಿ ತಳ್ಳಲಿಕೆ ಶತ್ರು ಪಾಳಯವ 
ಒಲವಿರದ ನುಡಿಸಾಕು ನೇಹಿಗರನಟ್ಟಲಿಕೆ 
ಮಾತೊಂದು ಸಿಡಿಮದ್ದೊ – ಮುದ್ದುರಾಮ.   

ಎಂಬಂತೆ ಮಾತು ಸಿಡಿಮದ್ದೋ, ಗಾಯಗೊಂಡ ಮನಸ್ಸಿಗೆ ಮುಲಾಮೋ ಎಂಬ ಅರಿವು ಮಾತುಗಾರನಿಗೆ ಇರಬೇಕು.  ಮಾತಿನ ಕಲಿಕೆಯ ಕೇಂದ್ರಗಳು ಕಲಿಸುವ ತಾಣಗಳಾಗದೆ ಕಲಿಯುವ ತಾಣಗಳಾಗಬೇಕು. ಈ ಹೊಣೆಗಾರಿಕೆಯನ್ನು ಅತಿ ಜವಾಬ್ದಾರಿಯುತವಾಗಿ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು, ಸಮಾಜದಲ್ಲಿ ನಾಗರೀಕರು ಹೊತ್ತು ಮುಂದಿನ ಭಾವಿ ಪ್ರಜೆಗಳನ್ನು ರೂಪಿಸುವ ರೂವಾರಿಗಳಾಗುವತ್ತ ನಮ್ಮ ದಾಪುಗಾಲನಡೆ ನಡೆಯಲಿ. ನಡೆಯುತ್ತದೆ ಎಂಬ ಹಂಬಲದೊಂದಿಗೆ………… .  
    
ಪಿ.ಎಂ.ಸುಬ್ರಮಣ್ಯ,ಬ.ಹಳ್ಳಿ., 

*****
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x