ಪ್ರತಿಕ್ ರವರ ಸಂದರ್ಶನ: ಚೈತ್ರ ಭವಾನಿ

ಕಸ್ತೂರಿ ವಾಹಿನಿಯ ಕ್ರೈಂ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದವರಿಗೆ ಪ್ರತಿಕ್ ಅವರ ಧ್ವನಿ ಚಿರಪರಿಚಿತ. ಮಾಧ್ಯಮ ಕ್ಷೇತ್ರದಲ್ಲಿ ಇವರ ಹೆಸರನ್ನು ಕೇಳಿದವರು ಒಮ್ಮೆ ಹುಬ್ಬೆರಿಸೋದು ಸಾಮಾನ್ಯ. ಮಾಧ್ಯಮ ಕ್ಷೇತ್ರದಲ್ಲಿ ಪ್ರತಿಕ್ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತಾರೆ. ಕೆಲಸ ಮಾಡಲು ದೈಹಿಕವಾಗಿ ಸಮರ್ಥರಿದ್ದರೂ ಕೆಲಸದ ಒತ್ತಡ, ಅತೃಪ್ತಿ, ಸಂಬಳದ ಕೊರತೆ ಹೀಗೆ ನಾನಾ  ಕಾರಣಗಳಿಂದ ಮಾಧ್ಯಮ ಕ್ಷೇತ್ರಕ್ಕೆ ಗುಡ್ ಬೈ ಹೇಳುತ್ತಿರುವವರ ನಡುವೆ ಹುಟ್ಟಿದಾಗಿನಿಂದಲೂ ತಮ್ಮ ಎಡಗೈ ಸ್ವಾಧೀನ ಕಳೆದುಕೊಂಡ ಪ್ರತಿಕ್  ಅದೊಂದು ಸಮಸ್ಯೆಯೇ ಅಲ್ಲವೆಂದು  ಇಂದಿಗೂ, ಮುಂದೆಯೂ ಇದೆ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಬೇಕೆಂಬ ಆಶಾವಾದಿಯಾಗುತ್ತಾರೆ.

                                                     

                                                                        ಪ್ರತಿಕ್

ಸದ್ಯ tv9 ನಲ್ಲಿ ಬುಲೆಟಿನ್ ಪ್ರೋಡುಸೆರ್ (ಗಂಟೆಗೊಮ್ಮೆ ಬರುವ ನ್ಯೂಸ್ಗಳನ್ನು ರೂಪಿಸುವ ಸಂಪೂರ್ಣ ಜವಾಬ್ದಾರಿ )ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಮಾಧ್ಯಮದಲ್ಲಿ ಕೆಲಸ ಮಾಡಲು ೧೦ ಕೈ ಇದ್ರೂ ಸಾಲದು ಅನ್ನೋ ಪರಿಸ್ಥಿತಿಗಳ ನಡುವೆ ಪ್ರತಿಕ್  ಒಂದು ಕೈಯಲ್ಲೇ ಕೆಲಸ ನಿರ್ವಹಿಸುವ "ಸ್ಪೆಷಲ್ ಮ್ಯಾನ್ ". ನೋಡೋದಕ್ಕೆ ಖಡಕ್ ಆಗಿ ಕಾಣೋ ಇವರು ಕೆಲಸದಲ್ಲೂ ಅಷ್ಟೇ ಖಡಕ್. ಇವರ ಬಳಿ ಆಗುವುದಿಲ್ಲ ಅನ್ನೋ ಮಾತೆ ಇಲ್ಲ. ಯಾವುದು ದೌರ್ಬಲ್ಯವಲ್ಲ. ನಾವು ನೋಡುವ ದೃಷ್ಟಿ ಮೇಲೆ ಎಲ್ಲ ಅವಲಂಬಿತವಾಗಿರತ್ತೆ. ಸವಾಲುಗಳ  ಎದುರಿಸದ  ಜೀವನ ಜೀವನವೇ ?ಅನ್ನೋ ಆತ್ಮ ವಿಶ್ವಾಸದ ಗಣಿ. 

ಪ್ರತಿಕ್ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳಬೇಕು, ಅವರ ಯಶಸಿನ ಪಯಣವನ್ನೊಮ್ಮೆ ಕಾಣಬೇಕು  ಎಂದಾಗ  ಪಂಜು ಜೊತೆಗೆ ಅವರು ತೆರೆದುಕೊಂಡಿದ್ದು ಹೀಗೆ..

1)    ನೀವು ಯಾವ ಕಡೆಯವರು?  ನಿಮ್ಮ ವಿದ್ಯಾಭ್ಯಾಸ ? ಅಪ್ಪ ಅಮ್ಮನ ಬಗ್ಗೆ ಹೇಳಿ ?

ನಂದು ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ. ಓದಿದ್ದು. ಒಂದರಿಂದ 10 ರವಗೆ ಊರಲ್ಲೇ, ರಾಷ್ಟ್ರೋತ್ಥಾನ ಶಾಲೆ. ಇನ್ನು ಪಿಯುಸಿ ಆರ್ಟ್ಸ್. ಓದಿದ್ದು ವಿಜಯನಗರ ಕಾಲೇಜು ಹೊಸಪೇಟೆಯಲ್ಲಿ. ನಂತ್ರ  ಧಾರವಾಡದ  ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಬಿಎ. ಇಲ್ಲಿಂದ ನಂತ್ರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ ಎ ಇನ್ ಮಾಸ್ ಕಮ್ಯುನಿಕೇಶನ್. ಅಪ್ಪ ಡಾ.ಕೊಟ್ರೇಶ್ ಆಲೂರ್, ಖ್ಯಾತ ವೈದ್ಯರು, ಕಿವಿ, ಮೂಗು, ಗಂಟಲು ತಜ್ಞರು(ಇಎನ್ಟಿ ಸ್ಪೆಷಲಿಸ್ಟ್) ತಾಯಿ ಸಬಿತಾ ಆಲೂರ್, ವೃತ್ತಿಯಲ್ಲಿ ಪ್ರೊಫೆಸರ್. ಇನ್ನು ಒಬ್ಬಳು ತಂಗಿ ಆಕೆ ಎಂಬಿಬಿಎಸ್ ಮಾಡಿದ್ದಾಳೆ. ಮದುವೆಯಾಗಿ ಬೆಂಗಳೂರಲ್ಲೇ ಇದ್ದಾಳೆ.

2)    ನಿಮ್ಮ ಜೀವನಕ್ಕೆ ಸ್ಫೂರ್ತಿ ಯಾರು ?

ನಿಜಕ್ಕೂ ನನ್ನ ಬದುಕಿಗೆ ನನ್ನ ತಂದೆಯೇ ಸ್ಪೂರ್ತಿ..ಹಳ್ಳಿಯಿಂದ ಬಂದ ಹಿನ್ನಲೆಯಿದ್ರೂ, ವೈದ್ಯರಾಗೋ ಕನಸು ಕಂಡು ಅದನ್ನು ಸಾಧಿಸಿದರು. ಅಲ್ಲದೆ  ತಾವು ಬೆಳದ ಊರಲ್ಲೇ ಸೇವೆ ಮಾಡಬೇಕೆನ್ನೋ ಧ್ಯೇಯ. ಎಂಥಾ ಅವಕಾಶಗಳು ಬಂದಾಗಲೂ ನಿರಾಕರಿಸಿ ಹಳ್ಳಿಗರಿಗಾಗಿ ಶ್ರಮಿಸಿದವರು. ಅವರೇ ನನಗೆ ಜೀವನದ ಮೊದಲ ಸ್ಪೂರ್ತಿ. ಸ್ಪೂರ್ತಿ ಅನ್ನೋದು ಬದುಕಿನ ಹಲವು ಹಂತಗಳಲ್ಲಿ ಗೊತ್ತಿಲ್ಲದೆ ಆಗುತ್ತಲೇ ಹೋಗಿರುತ್ತೆ. ನಿಜಕ್ಕೂ ಪತ್ರಿಕೋದ್ಯಮಕ್ಕೆ ಬಂದಮೇಲೆ ಸ್ಪೂರ್ತಿ ಅಂದ್ರೆ ರವಿ ಬೆಳಗೆರೆ. ನಿಜಕ್ಕೂ ವೃತ್ತಿಯ ಆರಂಭದ ದಿನಗಳಲ್ಲಿ ಕ್ರೈಂ  ಸ್ಟೋರಿಗಳನ್ನ ಹೆಚ್ಚಾಗಿ ಬರಿಯೋ ಅವಕಾಶ ಸಿಕ್ಕಿತ್ತು. ಇದನ್ನ ನಿಭಾಯಿಸಿ ಹೊಸ ಭರವಸೆ ಪಡೆಯೋಕೆ ರವಿ ಬೆಳಗೆರೆಯವರ ಬರವಣಿಗೆಯೇ ಹಾದಿಯಾಗಿದ್ದು. 

3)    ಬಾಲ್ಯದಿಂದಲೂ ನೀವು ಯಾವ ತರಹದ ವ್ಯಕ್ತಿ ? ತರಗತಿಗಳಲ್ಲಿ ಹೇಗಿರುತ್ತಿದ್ದಿರಿ?

ಬಾಲ್ಯ ಅನ್ನೋದು ನಿಜಕ್ಕೂ ಅದ್ಭತವಾದ ದಿನಗಳು..ವಿಪರೀತ ಅನ್ನುವಷ್ಟೇ ತುಂಟ ನಾನು…ಓದಿನ ಬಗೆಗಿನ ಆಸಕ್ತಿಯಿಂದ ಈ ಭಾಷಣ, ಕ್ವಿಜ್ ಗಳಲ್ಲೇ  ಹೆಚ್ಚಿನ ಆಸಕ್ತಿ ಇತ್ತು. ರಂಗಭೂಮಿ ಬಗ್ಗೆಯೂ ಒಲವಿತ್ತು. ವಾರದಲ್ಲಿ ಕನಿಷ್ಠ ಎರಡು ಬಾರಿಯಾದ್ರೂ, ಶಾಲೆಯಿಂದ ಕಂಪ್ಲೇಂಟ್ ಬರ್ತಿತ್ತು ಅಷ್ಟರ ಮಟ್ಟಿನ ಉಡಾಳ ನಾನು. ಸದಾ ಹಿಂದಿನ ಬೆಂಚು. ಪಠ್ಯೇತರ ಚಟುವಟಿಕೆಗಳಲ್ಲೇ ಹೆಚ್ಚು ಮುಂದಿದ್ದೆ. 

4) ಬಾಲ್ಯದಲ್ಲಿ ನೀವು ಏನಾಗಬೇಕೆಂದುಕೊಂಡಿದ್ರಿ ? ಏನು ಮಾಡಿದ್ರಿ ? ಈಗ ಏನಾಗಿದ್ದಿರಿ?

ಮೊದಲಿಂದಲೂ ಹೊಸದೊಂದು ಪ್ರೊಫೆಶನ್ ಗೆ  ಹೋಗಬೇಕು ಅನ್ನೋ ಚಿಂತನೆ ಇದ್ದೇ ಇತ್ತು…ಹಾಗಂತಾ ಡಾಕ್ಟರ್, ಇಂಜಿನೀಯರ್ ಆಗೋ ಬಗ್ಗೆ ಮನೆಯಲ್ಲಿ ಒತ್ತಡವಿತ್ತಾದ್ರೂ, ಎಂದೂ ಹೀಗೆ ಆಗಬೇಕು ಅಂತಾ ಬಲವಂತ ಮಾಡಲಿಲ್ಲ. ಹಾಗಾಗಿ ಸ್ವತಂತ್ರ ನಿರ್ಣಯ ಕೈಗೊಳ್ಳೋಕೆ ಅನುವಾಯಿತು. 

ನಿಜಕ್ಕೂ ಪಿಯುಸಿ ಹಂತಕ್ಕೆ ಬರುವಷ್ಟರಲ್ಲಿ ಒಂದು ಕ್ಲೀಯರ್ ಇಮೇಜ್ ಸಿಕ್ಕಿತ್ತು. ಅವತ್ತಿನ ಮಟ್ಟಿಗೆ ನಿಜಕ್ಕೂ ನಾನು ಲಾಯರ್ ಆಗಬೇಕು ಅಂದುಕೊಂಡಿದ್ದೆ….ವಿಪರೀತ ಮಾತಾಡ್ತೀಯ ಕಣೋ ಅಂತಾ ಬಹುತೇಕರು ಅಂತಿದ್ರು..ಹೀಗಾಗಿ ಅದ್ಯಾರೋ ಹೇಳಿದ್ರು..ನೀನು ಸುಮ್ನೆ ಲಾಯರ್ ಆಗಪ್ಪಾ ಒಳ್ಳೆ ಭವಿಷ್ಯವಿದೆ ಅಂತಾ..ಹಾಗಾಗೇ ಏನೋ  ಅದೇ ತಲೇಲಿ ಉಳಿದು ಬಿಟ್ಟಿತ್ತು..ಒಬ್ಬ ಒಳ್ಳೆ ಲಾಯರ್ ಆಗಬೇಕು ಅಂತಿದ್ದೆ . ಅವತ್ತು ಧಾರವಾಡಕ್ಕೆ ಬಿಎಗೆ ಸೇರಿದಾಗ ನಿಜಕ್ಕೂ ಲಾಯರ್ ಆಗಲೇ ಬೇಕು ಅಂದುಕೊಂಡಿದ್ದೆ. ಬಟ್, ಆ ಮೂರು ವರ್ಷಗಳಲ್ಲಿ ಬದುಕಲ್ಲಿ ಬಂದು ಹೋದ ಗೆಳೆಯರ ನೆರಳೇ ನಿಜಕ್ಕೂ ನನ್ನನ್ನ ಪತ್ರಿಕೋದ್ಯಮಕ್ಕೆ ಕರೆತಂದಿದ್ದು.

 ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಗಾಗ ಕಾಲೇಜಿನ ಕೆಲಸಕ್ಕೆ ಅಂತಾ ಹೋಗಿ ಬರ್ತಿದ್ದೆ. ಹೀಗೆ  ಹೋದಾಗಲೇ ನನ್ನ ಹಿರಿಯ ಮಿತ್ರರೊಬ್ಬರು ಪತ್ರಿಕೋದ್ಯಮ ಕಲೀತಿದ್ರು. ಆ ದಿನಗಳಲ್ಲಿನ ಅವರ ಒಡನಾಟವೇ ನಿಜಕ್ಕೂ ಬದುಕಿನ ಟರ್ನಿಂಗ್ ಪಾಯಿಂಟ್. ಲಾಯರ್ ಆಗೋ ಕನಸಿಗೆ ಎಳ್ಳು – ನೀರು ಬಿಟ್ಟು ಪತ್ರಿಕೋದ್ಯಮದ ಹಾದಿ ತುಳಿದೆ. ನಿಜ ಅಂದ್ರೆ, ನನಗೆ ಪತ್ರಿಕೋದ್ಯಕ್ಕೆ ಸೇರೋವರೆಗೂ ಹಾಗಂದ್ರೆ ಏನು? ಅದನ್ನ ಕಲಿತ್ರೆ ಏನ್ ಮಾಡಬಹುದು? ಅನ್ನೋ ಪರಿಜ್ಞಾನವೂ ಇರ್ಲಿಲ್ಲ. ಅವತ್ತು ಪತ್ರಿಕೋದ್ಯಮದಲ್ಲಿ ಎಂಎ ಮಾಡ್ತೀನಿ ಅಂದಾಗ  ನಿಜಕ್ಕೂ ನನ್ನ ತಂದೆ ನಕ್ಕುಬಿಟ್ಟಿದ್ರು. 

'ಇವತ್ತಿನವರೆಗೂ ನೀನು ಒಂದೇ ಒಂದು ಅಕ್ಷರ ಬರೆದದ್ದನು  ನಾವು ನೋಡಿಲ್ಲ. ಅದ್ ಹೇಗೆ ಪತ್ರಿಕೋದ್ಯವಕ್ಕೆ ಸೇರ್ತೀಯಾ ಅಂತಾ ನಕ್ಕಿದ್ರು' ಇವತ್ತಿಗೂ ಆ ದಿನ ಚೆನ್ನಾಗಿ ನೆನಪಿದೆ. ಇದನ್ನೇ ಸವಾಲಾಗಿ ಸ್ವೀಕರಿಸಿದೆ . ಪ್ರಜಾವಾಣಿಯಲ್ಲಿ ಮೊದಲ ಆರ್ಟಿಕಲ್ ಬಂದಾಗ ನನ್ನ ತಂದೆಯಿಂದಲೇ ಶಹಬ್ಭಾಶ್ ಎನಿಸಿಕೊಂಡಿದ್ದೆ. ನಿಜಕ್ಕೂ ಆ ದಿನ ನನ್ನ ತಂದೆ ಹೆಮ್ಮೆಯಿಂದಲೇ ಬೆನ್ನು ತಪ್ಪರಿಸಿದ್ರು..ಅಷ್ಟೇ ಅಲ್ಲಾ ನನ್ನ ನಿರ್ಧಾರವನ್ನೂ ಮೆಚ್ಚಿದ್ರು. 

5)    ಸಮಾಜದ ನಡುವೆ ನಿಮ್ಮನ್ನು ನೀವು ಸಹಜವಾಗಿಟ್ಟುಕೊಳ್ಳಲು  ಹೇಗೆ ಪ್ರಯತ್ನಿಸುತ್ತಿರಿ ?

ಸಮಾಜ ನಿಜಕ್ಕೂ ಕನ್ನಡಿ ಇದ್ದ ಹಾಗೆ. ನಮ್ಮನ್ನ ನಾವು ಅದರಲ್ಲಿ ಕಾಣ್ತೀವೆ  ವಿನಾ ಮತ್ತಿನ್ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳೋಲ್ಲಾ. ಸಾವಿರ ಜನ ಸಾವಿರ ಥರ ಮಾತಾಡಿದ್ರೂ. ನಮ್ಮ ನಿರ್ಧಾರ, ವಿಶ್ವಾಸ ಎರಡೂ ಅಚಲವಾಗಿರಬೇಕು. ಅಷ್ಟೇ ಅಲ್ಲ ಕಡೆಯವರೆಗೂ ನಮ್ಮ ನಿಲುವನ್ನು ಮತ್ತೊಬ್ಬರಿಗಾಗಿ ಬದಲಿಸುತ್ತಾ ಹೋಗಬಾರದು. ಹೀಗಾದ್ರೆನೇ ಸಮಾಜವೆನ್ನೋದು ನಮ್ಮ ಹಿಂದೆನೇ ಬರುತ್ತೆ ಮತ್ತು ನಮ್ಮನ್ನೇ ಸರಿ ಎನ್ನುತ್ತೆ. ಹಾಗದಲ್ಲೇ ನಮ್ಮ ಹಾದಿಯನ್ನು ನಾವೇ ನಿರ್ಮಿಸಿಕೊಳ್ಳಬಹುದು. ಅನಿವಾರ್ಯತೆ ಅನ್ನೋದು ಎಲ್ಲವನ್ನೂ ಸಹಜವಾಗಿಸಿಬಿಡುತ್ತೆ.  ಅಷ್ಟೇ ಆಡ್ತಾ ಆಡ್ತಾ ಆಟ ಅನ್ನೋ ಹಾಗೆ ಎಲ್ಲರಂತೆಯೂ ನಾವೂ ಅಂದುಕೊಂಡ್ರೆ ಮುಗೀತು.

6)    ಮಾಧ್ಯಮದಲ್ಲಿ ಎಷ್ಟು ವರ್ಷದ ಅನುಭವ ? ಯಾವ ವಿಭಾಗದಲ್ಲಿ ಕೆಲಸ ಮಾಡಿದ್ದಿರಿ ?

ಮಕ್ಕೆ ಬಂದದ್ದೇ ಅನಿರೀಕ್ಷಿತ…ಆರಂಭದ ದಿನಗಳಲ್ಲಿ ಚೆನ್ನೈನ ವೆಬ್ ದುನಿಯಾದಲ್ಲಿ ಮೊದಲ ವೃತ್ತಿ…ಕೇವಲ ಒಂದು ತಿಂಗಳಿಗೇ ಅಲ್ಲಿಂದ ಬೆಂಗಳೂರಿಗೆ ವಾಪ್ಪಾಸ್…ಆಗಷ್ಟೇ ಆರಂಭವಾಗಬೇಕಿದ್ದ ಕನ್ನಡ ಕಸ್ತೂರಿಯಲ್ಲಿ ಅವಕಾಶ. ಕಾಪಿ ಎಡಿಟರ್ ಆಗಿ ಸೇವೆ ಆರಂಭ. ನಿಜಕ್ಕೂ ಅದೊಂದು ಸುವರ್ಣಾವಕಾಶ. ಜೊತೆಗೆ ಅದೃಷ್ಟವೂ ಇತ್ತೋ ಏನೋ . ನಿಜಕ್ಕೂ ಕೆಲಸವನ್ನ ಗುರುತಿಸಿದ್ರು. ಅವಕಾಶ ಕೊಟ್ರು. ಆರಂಭದ  ದಿನಗಳಲ್ಲಿ ಕಸ್ತೂರಿಯ ಪ್ರತಿ ಗಂಟೆಗೊಮ್ಮೆಯ 10 ನಿಮಿಷಗಳ ಬುಲಿಟಿನ್ ಮಾಡ್ತಿದ್ದೆ. ಆಮೇಲೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಬಹುತೇಕ ಕಸ್ತೂರಿಯ ಎಲ್ಲಾ ಪ್ರಮುಖ ಸ್ಟೋರಿಗಳು. ಕ್ರೈಂ ಪ್ರೋಗ್ರಾಂಗಳಿಗೆ ಧ್ವನಿ ಆಗಿದ್ದೇನೆ. ಆಮೇಲೆ ಬುಲೆಟಿನ್  ಎಡಿಟರ್ ಆಗಿ ಪ್ರಮೋಷನ್. ನಂತ್ರ ವಾಂಟೆಡ್ ಕಾರ್ಯಕ್ರಮದ ಸಹ ನಿರ್ಮಾಪಕನಾಗೋ ಅವಕಾಶ. ಅಲ್ಲಿಂದ ನ್ಯೂಸ್ ಚಾನೆಲ್ ಆದ ಮೇಲೆ ಸೀನಿಯರ್ ಬುಲೆಟಿನ್  ಪ್ರೊಡ್ಯೂಸರ್ ಆಗಿ ಕೆಲಸ…ಇನ್ನು ಕಸ್ತೂರಿ ನ್ಯೂಸ್ 24 ನ ನೈನ್ ಥರ್ಟಿ ವಿಶೇಷದ ನಿರ್ಮಾಪಕನಾಗಿಯೂ ಕೆಲಸಾ ಮಾಡಿದ್ದೇನೆ….ಆ ಏಳುವರೆ ವರ್ಷಗಳಲ್ಲಿ ಬಹುತೇಕ ಎಲ್ಲಾ ಜವಾಬ್ದಾರಿಗಳನ್ನ ನಿರ್ವಹಿಸಿದ್ದೇನೆ.

7)    ನಿಮ್ಮ ವೃತ್ತಿ ಜೀವನದ ಬಗ್ಗೆ (ಸಂತೋಷ ಮತ್ತು ಬೇಸರದ ಸಂಗತಿ ) ಒಂದೆರಡು ಘಟನೆಗಳ ಮೂಲಕ ಹಂಚಿಕೊಳ್ಳಲು ಸಾಧ್ಯವೇ ?

ವೃತ್ತಿ ಜೀವನದಲ್ಲಿ ನಿಜಕ್ಕೂ ಹೇಳಿಕೊಳ್ಳುವಂತಾ ಬೀಳುಗಳೇನೂ ನಡೆದಿಲ್ಲಾ. ಆದ್ರೆ ನನ್ನದೇ ತಪ್ಪು ನಿರ್ಧಾರದಿಂದ ಮೂರು ತಿಂಗಳು ಮಾಧ್ಯಮದ ಸಹವಾಸದಿಂದ ದೂರು ಉಳಿಯಲೇ ಬೇಕಾದ ಸನ್ನಿವೇಶವೊಂದು ನಿರ್ಮಾಣವಾಗಿತ್ತು. ಆದ್ರೆ, ಈ ಹಂತದಲ್ಲಿ ಟಿವಿ9 ನಿಜಕ್ಕೂ ನನಗೆ ಅವಕಾಶ ಕೊಟ್ಟಿದ್ದು, ನಿಜಕ್ಕೂ ಹೊಸ ಬದುಕು ಆರಂಭವಾಗುವಂತೆ ಮಾಡಿದೆ. ಇನ್ನು, ಹಲವು ಸವಾಲುಗಳನ್ನ ಎದುರಿಸಿದ್ದೂ ಸುಳ್ಳಲ್ಲ…ಇದಕ್ಕೆ ಒಂದು ಉದಾಹರಣೆ ಅಂದ್ರೆ, ಆಗಿನ್ನೂ, ಎಂಎ ಫೈನಲ್ ಸೆಮ್ ನಲ್ಲಿದ್ದೆ…ಈಟಿವಿ ಅವಕಾಶ ಸಿಕ್ಕಿತ್ತು. ರಿಟನ್ ಎಕ್ಸಾಮ್  ಪಾಸ್  ಆಗಿತ್ತು. ಇಂಟರ್ ವ್ಯೂವ್ ಗೆ ಕರೆದಿದ್ರು. ಆದ್ರೆ, ಅಲ್ಲಿದ್ದ  ಹಿರಿಯರೊಬ್ರು. ನನ್ನ ನ್ಯೂನ್ಯತೆಯ ನೆಪ ಹೇಳಿ  ಕೆಲಸಾ ಇಲ್ಲಾ ಅಂತಾ ಮುಖದ ಮೇಲೆ ಹೊಡೆದ ಹಾಗೆ ಹೇಳಿದ್ರು. ಬಟ್ ಅದೂ ಕೂಡಾ ನಾನು ಎಲೆಕ್ಟ್ರಾನಿಕ್ ಮಿಡೀಯಾಗೇ ಬರೋದಕ್ಕೆ ಚಾಲೆಂಜ್  ಆಯ್ತು. ಅವತ್ತು ಆ ಹಿರಿಯರ ಅವಹೇಳನಕರ ಮಾತೆ  ನನ್ನನ್ನು  ಎಲೆಕ್ಟ್ರಾನಿಕ್ ಮಿಡೀಯಾದಲ್ಲಿ ಇವತ್ತಿಗೆ ಈ ಹಂತಕ್ಕೆ ತಂದು ನಿಲ್ಲಿಸಿದ್ದು….ನಿಜಕ್ಕೂ ಆ ಹಿರಿಯರಿಗೆ ನಾನಿವತ್ತು ಥ್ಯಾಂಕ್ಸ್ ಹೇಳೋಕೆ ಇಷ್ಟ ಪಡ್ತೀನಿ. 

8)    ಆರಂಭದಲ್ಲಿ ನಿಮಗೆ ಎದುರಾದ ಸವಾಲುಗಳೇನು ? ಅದನ್ನು ಹೇಗೆ ನಿಭಾಯಿಸಿದಿರಿ ?

ವೃತ್ತಿ ಬದುಕಲ್ಲಿ ಹಲವು ಪ್ರಾಯೋಗಿಕ ಕೆಲಸಗಳನ್ನು ಮಾಡೋದಕ್ಕೂ ಅವಕಾಶ ಸಿಕ್ಕಿತ್ತು. ಅದ್ರಲ್ಲೂ ನನಗೆ ಮೊದಲ ಅಧ್ಬುತ ಅನುಭವ  ಅಂದ್ರೆ, ಆಂಧ್ರದ ಮಾಜಿ ಸಿಎಂ ವೈ ಎಸ್ ರಾಜಶೇಖರ್ ರೆಡ್ಡಿ ಅಪಘಾತದ ಸನ್ನಿವೇಷ ಪರ್ತಕರ್ತನಾಗಿ ನಿಜಕ್ಕೂ ಹೊಸ ಅನುಭವ ನೀಡ್ತು. ಇದರೊಟ್ಟಿಗೆ, 2009 ರ ವಿಧಾನಸಭಾ ಚುನಾವಣೆ….ವಿಷ್ಮುವರ್ಧನ್ ಸಾವು….ಭಾರತದ ತಂಡ ವಿಶ್ವಕಪ್ ಕ್ರಿಕೆಟ್ ಗೆದ್ದದ್ದು, ಮುಂಬೈ ಮೇಲಿನ ಉಗ್ರರ ದಾಳಿ, ಸಚಿನ್ ತೆಂಡೂಲ್ಕರ್ ನಿವೃತ್ತಿ. ಹಿರಿಯ ಸಂಗೀತ ನಿರ್ದೇಶ ಕ ಅಶ್ವತ್ ನಿಧನ..ಎಲ್ಲವೂ ಒಂದಲ್ಲಾ ಒಂದು ರೀತಿಯ ಸವಾಲಿನ ಕೆಲಸವೇ ಆಗಿತ್ತು.   

9)    ನಿಮ್ಮ ವೃತ್ತಿಯಲ್ಲಿ ನೀವು ಯಶಸ್ವಿ ಆಗಿದ್ದೀನಿ ಅನಿಸಿದಿಯೇ ?

ವೃತ್ತಿಯಲ್ಲಿನ ಯಶಸ್ಸು ಅನ್ನೋದಕ್ಕಿಂತ. ನಡಿಯೋ ಹಾದಿಯಲ್ಲಿ ಎಡವದೆ ಸಾಗಿದ್ದೇನೆ. ಖುಷಿಯಿಂದ ನಕ್ಕಿದಿವೆ, ನೊಂದಾಗ ಅತ್ತಿದ್ದೇನೆ, ಹಿರಿಯರು ಬೆನ್ನುತಟ್ಟಿದಾಗ ಹಿಗ್ಗಿದ್ದೇನೆ, ಮಾನ್ಯತೆ ಸಿಗದಿದ್ದಾಗ ಹತಾಶನಾಗಿದ್ದೇನೆ. ಇದೊಂಥರಾ ಓಡೋ ಕುದುರೆಯ ಬದುಕು. ತಾಳ್ಮೆ ಇರೋವರೆಗೂ ಓಡಬಹುದು. ಹಾಗಂತಾ ನಾನೇ ಗೆಲ್ಲಬೇಕು ಅನ್ನೋದು ನಮ್ಮನ್ನ ಸಣ್ಣವರನ್ನಾಗಿಸುತ್ತೆ. ಹೀಗಾಗಿ ಸೋಲೂ ಅಂತಲೂ ಹೇಳೋಲ್ಲ. ಗೆಲುವು ಅಂತಲೂ ಬಣ್ಣಿಸೋಲ್ಲ…..

10)    ನಿಮ್ಮ ಕುಟುಂಬದವರ ಸಹಕಾರ ಹೇಗಿದೆ ? 

ಕುಟುಂಬವೇ ನನ್ನ ಶಕ್ತಿ…ಆ ಶಕ್ತಿಗೀಗ ನನ್ನ ಮಗನ ಬಲವಿದೆ. ಅಷ್ಟೇ ಯಾಕೆ ಸ್ನೇಹಿತರಾಗಿರಲಿ, ಬಂಧುಗಳಾಗಿರಲಿ ಹಿತೈಶಗಳಾಗಿರಲಿ ಎಲ್ಲರೂ ನನ್ನ ಇವತ್ತಿನ ಸ್ಥಿತಿಯಲ್ಲಿ ಪಾಲುದಾರರು. ಅವರಿಲ್ಲದೆ ನಾನಿಲ್ಲ .ನಿಜಕ್ಕೂ ಸ್ನೇಹಜೀವಿ ನಾನು. ತುಂಬಾ ಗೆಳೆಯರಿದ್ದಾರೆ ಅವರೇ ನನ್ನ  ಹುಮ್ಮಸ್ಸಿನ ಪ್ರತಿಬಿಂಬ. ಆದ್ರೆ, ನಿಜಕ್ಕೂ ಎಲ್ಲರಿಗೂ ಒಳ್ಳೆಯವರಾಗಿರೋದು ದೊಡ್ಡ ಸಾವಾಲಿನದ್ದು. ಕೆಲವೊಮ್ಮೆ ನಾವು ಎಡವ್ತೀವಿ. ಮತ್ತೊಮ್ಮೆ ಅವರೂ ಎಡವಿರ್ತಾರೆ. ಇದನ್ನು ಅರ್ಥ ಮಾಡಿಕೊಂಡಾಗಲೇ ಬದುಕಿನ ಬಂಡಿ ಸಾಗೋದು. ನನ್ನದು ಅರೇಂಜ್ ಮ್ಯಾರೇಜ್….ಸುಖೀ ಕುಟುಂಬ. ನನ್ನಾಕೆ ನನಗೆ ಕಣ್ಣು. ದಿನವಿಡೀ ಕೆಲಸದ ಬಗ್ಗೆ ಜಪ ಮಾಡೋ ನಮ್ಮಂಥವರೊಟ್ಟಿಗೆ ಹೊಂದಿಕೊಂಡು  ಹೋಗೋ ವಿಶಾಲ ಹೃದಯವಂತೆ ಆಕೆ.

11)    ನಿಮ್ಮ ಪ್ಲಸ್ ಮತ್ತು  ಮೈನಸ್ ಅಂಶಗಳೇನು ?

ಯಾರನ್ನಾದ್ರೂ ಬೇಗ ನಂಬಿಬಿಡ್ತೀನಿ. ಅದೇ ನನಗೆ ಅಪಾಯವನ್ನೂ ತಂದದ್ದೂ ಇದೆ. ಅತಿಯಾದ ಆತ್ಮವಿಶ್ವಾಸ ನನ್ನ ವೀಕ್ ನೆಸ್ ಅಂತಾ ನನ್ನ ತಂದೆ ಹೇಳ್ತಿದ್ರು. ಅದನ್ನೀಗ ನಾನೂ ಒಪ್ಪುತ್ತೇನೆ. ಅದರಿಂದ ಒಳಿತು. ಕೆಡಕು ಎರಡೂ ಆಗಿದೆ. ಇನ್ನು ನನಗೆ ಬೇಡ ಸಿಟ್ಟು ಬಂದುಬಿಡುತ್ತೆ. ಅರ್ಥ ಮಾಡಿಕೊಳ್ಳದವರಿಗೆ ನಾನು ನಿಜಕ್ಕೂ ದುರಂಹಂಕಾರಿ. ಅಹಂ ಇಲ್ಲ, ಸಾಧಿಸೋ ಛಲವಿದೆ .

12)    ಬದುಕಿನಲ್ಲಿ ಅನಿರಿಕ್ಷಿತವಾಗಿ ತಿರುವುಗಳನ್ನು ಎದುರಿಸುವವರಿಗೆ ನಿಮ್ಮ ಸಲಹೆಗಳೇನು ?

ಬದುಕು ಅನ್ನೋ ಮೂರಕ್ಷರದ ಪದದಲ್ಲಿರೋದು ಬರೇ ತಿರುವುಗಳೇ..ಅದರಲ್ಲೂ ಅನಿರೀಕ್ಷಿತ ಶಾಕ್ ಗಳೇ ಎಂಥವರನ್ನಾದ್ರೂ ಗಟ್ಟಿಗೊಳಿಸೋದು. ಹಾಗಂತಾ ಈ ಅನಿರೀಕ್ಷಿತಗಳಿಲ್ಲದ ಜೀವನವೂ ಬೋರಿಂಗ್. ಪೆಟ್ಟು ತಂದ ಕಲ್ಲೇ ಮೂರ್ತಿಯಾಗೋ ಅನ್ನೋ ಹಾಗೆ. .ಏಟು ತಿಂದು ಸೋತೆವು ಅನ್ನೋದಕ್ಕಿಂತ ಇದರಿಂದ ಒಂದು ಹೆಜ್ಜೆ ಮುಂದೆ ಹೋಗೋ ಯೋಚನೆ ಮಾಡಿದ್ರೆ, ಹೊಸ ಸಾಧನೆ ನಮಗಾಗಿ ಕಾದಿರುತ್ತೆ. ಹತಾಶೆಗಳೇ ಮುಂದೊಂದು ದಿನ ನೆಮ್ಮದಿಯನ್ನು ತರೋದು ಅನ್ನೋದು ನನ್ನ ನಂಬಿಕೆ.

13)    ನಿಮ್ಮ ಪ್ರಕಾರ ಜೀವನ ಮತ್ತು ಕಷ್ಟ ಅಂದ್ರೆ ?

ಜೀವನ ಮತ್ತು ಕಷ್ಟ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನ ಬಿಟ್ಟು ಒಂದಿಲ್ಲ. ಕಷ್ಟ ಬೇಡ ಅಂದ್ರೆ ಸಾವು ಬರುತ್ತೆ. ಕಷ್ಟ ಇರಲಿ ಅಂದ್ರೆ ಬದುಕು ಮುಂದೆ ಸಾಗುತ್ತಲೇ ಹೋಗುತ್ತೆ.

14)    ನಿಮ್ಮ ಆತ್ಮವಿಶ್ವಾಸದ ಗುಟ್ಟೇನು ?

ಸದಾ ನಾಳೆಯ ಬಗ್ಗೆ ಯೋಚಿಸೋಣ. ಇವತ್ತು ಮುಗೀತು ಅಂತಾ ಇದ್ದಾಗಲೇ ನಾಳೆಯ ಸ್ಪೂರ್ತಿ ಹೆಚ್ಚಾಗೋದು. ಕೂಡಿಡಬೇಕು, ಹಣ ಮಾಡಬೇಕು, ರಾತ್ರೋ ರಾತ್ರಿ ಸ್ಟಾರ್ ಪತ್ರಕರ್ತನಾಗಿಬಿಡಬೇಕು, ದೊಡ್ಡ ಹುದ್ದೆ ಸಿಕ್ಕುಬಿಡಬೇಕು ಅನ್ನೋದು ತಪ್ಪಲ್ಲ. ಆದ್ರೆ, ಇದೆಲ್ಲದಕ್ಕೂ ನಿಜಕ್ಕೂ ಪ್ರಾಮಾಣಿಕ  ಪ್ರಯತ್ನ ಮತ್ತು ಶ್ರಮ ಬೇಕು. ಅದಿದ್ದಾಗಲೇ ಇವೆಲ್ಲವೂ ಬೇಡ ಅಂದ್ರೂ ಬರುತ್ತೆ. ಕಾರು ಓಡಿಸಲು ಬಾರದವನು ಎಂಥಾ ಕಾರನ್ನೇ ಖರೀದಿಸಿದ್ರೆ ಏನಂತೆ, ಕನಸು ಕಾಣಬೇಕು. ಆದ್ರೆ ಕಂಡ ಕನಸೆಲ್ಲವೂ ನನಸಾಗಲೇ ಬೇಕು ಅನ್ನೋದು ತಪ್ಪು. ಬಟ್ ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು.

*****

ಪಂಜುವಿಗಾಗಿ ಪ್ರತಿಕ್ ರವರನ್ನು ಸಂದರ್ಶಿಸಿದವರು ಚೈತ್ರ ಭವಾನಿ…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವನಸುಮ
9 years ago

ಉತ್ತಮ ಬರಹ. ಪ್ರತಿಕ್ ಅವರ ಆತ್ಮವಿಶ್ವಾಸದ ಗುಟ್ಟಿನ ಮಾತುಗಳು ತುಂಬಾ ಇಷ್ಟವಾಯಿತು.

 

ಶುಭವಾಗಲಿ.

1
0
Would love your thoughts, please comment.x
()
x