Facebook

ಗೊತ್ತಿಲ್ಲದ ನಿನ್ನ ಬಗೆಗೊಂದಿಷ್ಟು: ಪದ್ಮಾ ಭಟ್

Spread the love

ನಿನ್ನ ಬಗ್ಗೆ ಏನಾದರೂ ಬರೀಲೇಬೇಕು.. ಬರೀತಾನೇ ಇರ್ತೀನಿ. ತುಂಬಾತುಂಬಾ ಯೋಚಿಸ್ತೀನಿ.. ಸ್ನೇಹಿತೆಯರ ಗುಂಪಿನಲ್ಲಿ ಕನಸನ್ನು ಹಂಚಿಕೊಂಡು ಒಮ್ಮೆಲೇ ತಲೆಯನ್ನು ಕೆಳಗೆ ಮಾಡಿ ಮುಖ ಕೆಂಪಗೆ ಮಾಡಿಕೊಳ್ಳುತ್ತೀನಿ.. ಪ್ರೀತಿ ಪ್ರೇಮಗಳ ಬಗ್ಗೆ ಚಿಕ್ಕ ಚಿಕ್ಕ ಕವನಗಳನ್ನು ಬರೆದಾಗ ಎಷ್ಟೋ ಜನರು ಕೇಳಿದ್ದುಂಟು..ನಿಂಗೆ ಲವರ್ ಇಲ್ವಾ? ಅಂತ. .ಇಲ್ಲಾ ಎಂದು ನಿಜವನ್ನೇ ಹೇಳಿದ್ದೇನೆ.. ನೀನು ಯಾರೆಂದೇ ಗೊತ್ತಿಲ್ಲ ನೋಡು ನಂಗೆ..ಎಲ್ಲಿದ್ದೀಯೋ, ಹೇಗಿದ್ದೀಯೋ ಏನ್ ಮಾಡಾ ಇದ್ದೀಯೋ..ಒಂದೂ ಗೊತ್ತಿಲ್ಲ ನಿ॒ನ್ನ ಬಗ್ಗೆ ಸಾಸಿವೆಯಷ್ಟೂ ಗೊತ್ತಿಲ್ಲ ಮುಂದೆ ನೀನೆಂದೋ  ಬರುವೆಯಲ್ಲ..ನಿನ್ನ ಜೊತೆಗೆ ಬದುಕನ್ನು ಕಳೆಯುವ ಆಗಿನ ಕನಸುಗಳಷ್ಟೇ…ಕನಸುಗಳನ್ನೇನೋ ಕಂಡಿರುವೆನಾದರೂ ಎಲ್ಲಾ ಕನಸುಗಳೂ ನೆರವೇರುತ್ತದೆಯೆಂಬ ಭ್ರಮೆಯು ಕೂಡ ನನಗಿಲ್ಲ..

ಹೂಂ ಕಣೋ.. ನಂಗೂ ಆ ಒಂದು ದಿನ ಬರುತ್ತೆ.. ಫೇಸ್‌ಬುಕ್‌ನಲ್ಲಿ ಈಗ ಖಾಲಿ ಬಿಟ್ಟಿರೋ ಆಫ್ಶನ್‌ನ್ನು ತುಂಬೋ ದಿನ..ಎಲ್ಲರ ಬಳಿಯಲ್ಲೂ ಕಂಗ್ರಾಟ್ಸ್ ಎಂದು ಹೇಳಿಸಿಕೊಳ್ಳುವ ದಿನ. ಆದರೆ ಬದುಕಿನ ಓದು ಕೆಲಸದಂತಹ ಕಮಿಟ್‌ಮೆಂಟ್‌ಗಳು ಒಂದು ಹಂತದವರೆಗೆ ಬಂದರೆ ನಿನಗೂ, ನಿನ್ನ ಕುಟುಂಬದವರಿಗೆಲ್ಲವೂ ನನ್ನ ಬಗ್ಗೆ ಹೆಮ್ಮೆಇರುತ್ತದೆಯಲ್ಲವಾ?? ಅದರಲ್ಲೂ ಪ್ರೀತಿ ಇರುತ್ತದೆ ಗೆಳೆಯಾ.. ದಿನಪೂರ್ತಿ ನೀ ನನ್ ಜೊತಗೇ ಇರಬೇಕು ಅಂತಾ ನಾ ಹೇಳೋಲ್ಲ..ನೋಡು ನಂಗೂ ಗೊತ್ತು. ಒಟ್ಟಿಗೆ ಅಂಟಿಕೊಂಡು ಕೂತಿದ್ರೆ ಕೆಲಸ ಮಾಡೋವರುಯಾರು..ಆದರೆ ನೀ ಯೋಚಿಸುವ ಯೋಚನೆಯಲ್ಲಿ, ಕಾಣುವ ಕನಸಿನಲ್ಲಿ ಎಲ್ಲದರಲ್ಲಿಯೂ ನಾನೇ ಇರಬೇಕೆಂಬ ದೊಡ್ಡ ಸ್ವಾರ್ಥಿ ಕಣೋ ನಾನು.

ನೀ ನನ್ನ ಬದುಕಿನಲ್ಲಿ ಬಂದಕ್ಷಣದಿಂದಲೇ ನೀ ನನ್ನವನೆಂದು ತಿಳಿದು ಬಿಡುವಷ್ಟು ಪ್ರೀತಿಸುವ ಮನಸ್ಸು ನಂದು.. ಹೂಂ ಅಂದ ಹಾಗೆ ನಾ ನೋಡೋಕೆ ಚನ್ನಾಗಿಲ್ದೇ ಇದ್ರೆ ಏನು..ಒಂದು ದಿನವೂ ಪ್ರೀತಿಯ ಕೊರತೆಯಾದಂತೆ ನಿನ್ನನ್ನು ನೋಡಿಕೊಂಡರೆ ಸಾಕಲ್ಲವೇ?? ನಿನ್ ಕೈ ಹಿಡಿದು ಮುಂಜಾನೆಯ ತುಂತುರು ಮಳೆಯಲ್ಲಿ ಸಣ್ಣ ಛತ್ರಿ ಹಿಡಿದು ಒಂದಷ್ಟು ದೂರ ಸಾಗುವ ಆಸೆ. ಹುಣ್ಣಿಮೆ, ಅಮವಾಸ್ಯೆಯೆಂಬ ಬೇಧವಿಲ್ಲದಯೇ, ಆಗಸವು ಕೊಡು  ಚೂರು ಬೆಳಕಿನಲ್ಲಾದರೂ ನಿನ್ನ ಕಣ್ಣಿನಲ್ಲಿ ನನ್ನ ಬಿಂಬವ ಅಚ್ಚಾಗಿಸುವ ಆಸೆ ಎಂದೋ ಅಪರೂಪದ ದಿನಗಳಲ್ಲಿ ಪತ್ರ ಬರೆದು, ನಿನ್ನ ಪುಟ್ಟ ಹೃದಯವು ನಗುವಂತೆ ಮಾಡುವ ಚೂರೇಚೂರು ಆಸೆ.. 

ಅಂದಹಾಗೆ ನಾ ನಿನ್ನನ್ನು ಎಷ್ಟು ಪ್ರೀತಿ ಮಾಡ್ತೀನಿ ಅಂದ್ರೆ..ಇಲ್ಲೆಲ್ಲಾ ಹೇಳೋಕ್ಕಾಗಲ್ಲ.. ಥೂ.. ಬರೀ ನಿನ್ ಬಗ್ಗೆನೇ ಬರೀತಾ ಕೂತ್ಕೊಂಡ್ ಬಿಡ್ತೀನಿ ನೋಡು..ಎಷ್ಟೋ ಬಾರಿ ಅಕ್ಷರಗಳೇ ಸಾಕಾಗುವುದಿಲ್ಲ. ಕನಸಿನ ಬಗ್ಗೆ ಬರೆಯಲು.. ಮುಂದಿನ ಬದುಕನ್ನು ನಿನ್ನ ಜೊತೆಗೆ ನನಸು ಮಾಡಿಕೊಳ್ಳಲು….ಲವ್ ಗಿವ್ ಅಂತ ಈಗಂತೂ ಸದ್ಯಕ್ಕೆ ಟೈಮ್ ವೇಸ್ಟ್ ಮಾಡೋ ಪರಿಸ್ಥಿತಿಯಲ್ಲಿ ನಾನಿಲ್ಲ.. ಎಲ್ಲಕ್ಕಿಂತ ಬದುಕು ದೊಡ್ಡದು ಅಲ್ವಾ? ನೀನೂ ನನ್ ಜಾಣ ಅಂದ್ಮೇಲೆ ನಾನೂ ನಿನ್ ಜಾಣೆ ಆಗಿರಬೇಕಲ್ವಾ? ಸೋ ಸ್ವಲ್ಪ ಕಾದುಬಿಡು ಹಂಗೆ.. ..ನಮ್ಮದು ಪ್ಯೂರಲಿ ಅರೆಂಜ್ಡ್ ಮ್ಯಾರೇಜ್ ಆಗಿದ್ರೇನೆ ಚಂದ ಬಹುಶಃ ನಾನ್ ಈ ತರ ನಿನ್ ಬಗ್ಗೆ ಬರ್‍ದಿರೋದನ್ ಓದಿ ಓದಿ ಓದೋವ್ರಿಗೆ ಬೋರ್ ಬಂದಿರಬಹುದೇನೋ.. ಆದರೆ ನಾನಂತೂ ಬರೆಯೋದನ್ ನಿಲ್ಲಿಸೋಲ್ಲ.

ನನ್ನಂತ ಹುಡುಗಿ ನಿಂಗೆ ಸಿಗಬೇಕು ಅಂದ್ರೆ ನೀನು ತುಂಬಾ ಲಕ್ಕಿ ಆಗಿರಬೇಕು ಬಿಡು.. ಎಷ್ಟು ಪುಣ್ಯ ಮಾಡಿರಬೇಕು ನೀನು..ಯಾಕಂದರೆ ನಾ ನಿನ್ ಬಗ್ಗೆ ತುಂಬಾ ಕನಸು ಕಂಡಿದ್ದೀನಿ..ಬೊಗಸೆ ತುಂಬಾ ಒಲವನ್ನು ಕೊಡುವೆನೆಂಬ ಮನಸಿನಲಿ ನನಗಿಂತಲೂ ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ..ಇದೆಲ್ಲಾ ಹೇಳೋಕ್ಕಾಗಲ್ಲ ಬಿಡು..ಇನ್ನೊಂದಿಷ್ಟು ವರುಷಗಳಲ್ಲಿ ನಾನು ನಿಂಗೆ ಸಿಕ್ಕೇ ಸಿಗ್ತೀನಿ..ಆಗ ಈ ಬರಹವನ್ನು ನಿನಗೆ  ಓದಲು ಕೊಡತ್ತೇನೆ ಯಾರ ಉಸಿರಲಿ ಯಾರ ಹೆಸರೋ ಯಾರೋ ಬಲ್ಲರು..? ನೀನ್ಯಾರೋ ನನಗಂತೂ ತಿಳಿಯದು..

ಇಂತಿ ನಿನ್ನ

*****

You can leave a response, or trackback from your own site.

One Response to “ಗೊತ್ತಿಲ್ಲದ ನಿನ್ನ ಬಗೆಗೊಂದಿಷ್ಟು: ಪದ್ಮಾ ಭಟ್”

  1. Santhosh says:

    ತುಂಬಾ ಚೆನ್ನಾಗಿದೆ! ಆದಷ್ಟು ಬೇಗ ನಿಮ್ ಹುಡುಗ ನಿಮಗೆ ಸಿಗುವಂತಾಗಲಿ!

Leave a Reply