ಕವಿತೆಯ ಕನವರಿಕೆಗಳು: ಸಂಗೀತ ರವಿರಾಜ್

               
ಸಾಹಿತ್ಯದ ಎಲ್ಲಾ ಪ್ರಕಾರಗಳಿಂದಲೂ ಕವಿತೆಯೆ ಹೆಚ್ಚು ಅನುಭೂತಿಯನ್ನು ನೀಡುವಂತದ್ದು. ಇದು ಸಾಹಿತ್ಯದ ಬಗೆಗೆ ಆಸಕ್ತಿಯಿರುವವರ ಅಂಬೋಣ. ಆದರೆ ಕವಿತೆ ಅಂದರೆ ಮಾರುದೂರ ಹೋಗುವ, ಮೂಗು ಮುರಿಯುವ ಜಾಯಮಾನದವರೆ ಹೆಚ್ಚಿರುವ ಈ ಕಾಲದಲ್ಲಿ ಕವಿತೆ ಬಗ್ಗೆ ಚೂರು ಪಾರು ಅಭಿಮಾನ ಹೊಂದಿರು ನಮ್ಮಂತವರ ಗತಿ ದೇವರಿಗೆ ಪ್ರೀತಿ! ಸಿನಿಮಾಗಳಲ್ಲಿ, ಹಾಸ್ಯ ಧಾರಾವಾಹಿಗಳಲ್ಲಿ ಬರಹಗಾರರನ್ನು ವಿದೂಷಕರನ್ನಾಗಿ ತೋರಿಸುವ ಪರಿಪಾಟಲು ಹಿಂದಿನಿಂದಲೇ ನಡೆದು ಬಂದಿದೆ. ವಾಸ್ತವವಾಗಿ ಏನಾಗುತ್ತದೆಯೆಂದರೆ ಓದುಗರ ಸಂಖ್ಯೆ ಕಡಿಮೆಯಿರುವಾಗ , ಬರೆದವರೆ ತಮ್ಮ ಕವಿತೆ ಓದಿ ಅಂತ ದುಂಬಾಲು ಬೀಳುತ್ತಾರೆ. ಇದನ್ನೆ ಚಲನಚಿತ್ರಗಳಲ್ಲಿ ಬೆನ್ನು ಬಿಡದಂತೆ ಓದಿ ಹೇಳುವ ಹಾಗೆ ಚಿತ್ರಿಸಿ ನಗೆ ಉಕ್ಕಿಸುತ್ತಾರೆ. ಮೊದಮೊದಲು ನನ್ನ ಕವಿತೆಗಳು ಪ್ರಕಟಗೊಂಡಾಗ ನೆಂಟರಿಷ್ಟರಿಗೆ, ಗೆಳತಿಯರಿಗೆ ಓದಿ ಅಂತ ಒಂದು ಎಸ್.ಎಮ್. ಎಸ್. ಮಾಡುತ್ತಿದ್ದೆ. ಆದರೆ ಅವರುಗಳಿಂದ ನಾನು ನಿರೀಕ್ಷೆ ಮಾಡಿದ್ದು  ಸಿಗುತ್ತಿಲ್ಲ ಎಂದಾಕ್ಷಣ ಆ ಪರಿಪಾಠವನ್ನೆ ಬಿಟ್ಟಿದ್ದೇನೆ. ಆದರೆ ಕವಿತೆ ಬರೆದು ಕಳುಹಿಸುವುದನ್ನು ಮಾತ್ರ ಬಿಡಲಿಲ್ಲ.  ಆಸಕ್ತಿ ಇರುವವರು ಕರ್ನಾಟಕದ ಮೂಲೆ ಮೂಲೆಯಲ್ಲಿರುವಾಗ ನಾನು ಹೇಳದೆಯೆ ಅವರು ಓದುತ್ತಾರೆ ಅಂತ ಖುಷಿಪಡುತ್ತಿದ್ದೆ.

ಕವಿಗಳಾಗುವ ಹಿನ್ನೆಲೆಯನ್ನು ನೋಡಿದರೆ ಅದರಲ್ಲಿ ಎರಡು ರೀತಿಯ ಅಂಶಗಳಿವೆ ಎಂಬುದು ನನ್ನಭಿಪ್ರಾಯ. ಮೊದಲನೆಯದಾಗಿ ಅದು ರಕ್ತಗತವಾಗಿ ಬಂದಿರುತ್ತದೆ. ಕುವೆಂಪು_ತೇಜಸ್ವಿ, ಡಿವಿಜಿ-ಬಿಜಿಎಲ್ ಸ್ವಾಮಿ,  ಗೌರೀಶ್ ಕಾಯ್ಕಿಣಿ-ಜಯಂತ್ ಕಾಯ್ಕಿಣಿ, ಅನುಪಮ ನಿರಂಜನ-ತೇಜಸ್ವಿನಿ ನಿರಂಜನ ಹೀಗೆ ಹಲವಾರು ಉದಾಹರಣೆ ಕೊಡಬಹುದು. ಇನ್ನೊಂದು ಅಂಶ ಅತಿಯಾದ ಸಾಹಿತ್ಯದ ಓದಿನಿಂದ ಬರವಣಿಗೆಯ ಕಲೆ ಹಾಸುಹೊಕ್ಕಾಗುತ್ತದೆ. ನನ್ನ ತಂದೆ ಹೀಗೆ ಅತಿಯಾದ ಓದುವ ಗೀಳನ್ನು ನನ್ನಲ್ಲಿ ಬೆಳೆಸಿಬಿಟ್ಟರು. ಸಾಮಾನು ಕಟ್ಟಿ ತಂದ ಪೇಪರಿನ ಪ್ರತಿ ಚೂರನ್ನು ಬಿಡದೆ ಓದಿದವಳು ನಾನು. ಇಷ್ಟೆ ಏಕೆ ನಮ್ಮ ಮನೆಯ ಮುಂದೆ ಹಸಿಮೀನು ವ್ಯಾನ್ ದಿನಂಪ್ರತಿ ಹೋಗುತ್ತಿತ್ತು. ಹಾಗೆ ಪ್ರತಿಸಲ ಮೀನು ತೆಗೆದುಕೊಂಡಾಗ ಕಟ್ಟಿ ಕೊಡುತ್ತಿದ್ದ ಗಲೀಜು ಪೇಪರನ್ನೆ  ಸಾದ್ಯವಾದಷ್ಟು ಓದುತ್ತಿದ್ದೆ. ಆದಿತ್ಯವಾರದ ಸಾಪ್ತಾಹಿಕವಾಗಿದ್ದರೆ ಅಮ್ಮನೊಂದಿಗೆ ಬೈಯಿಸಿಕೊಂಡು ಹೇಗಾದರು ಮಾಡಿ ಓದಿ ಬಿಡುತ್ತಿದ್ದೆ.  ಬಾಲಮಂಗಳ,ಚಂಪಕ ಓದುತ್ತಿದ್ದ ಬಾಲ್ಯಕಾಲದಲ್ಲಿ ರಜೆ ಯಾವಾಗ ಬರುತ್ತದೆ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಯಾಕೆಂದರೆ ಒಮ್ಮೆ ಓದಿ ಪೇರಿಸಿಟ್ಟ  ಪುಸ್ತಕಗಳನ್ನೆಲ್ಲ  ಮತ್ತೆ ತೆಗೆದು ಓದುತ್ತಿದ್ದೆ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಅಮ್ಮ ನಿರಂತರ ಮಂಗಳ ಪತ್ರಿಕೆ ಓದುತ್ತಿದ್ದರು. ಆ ಪುಸ್ತಕವನ್ನು ನಾನು ಓದಿದರೆ ಮಾತ್ರ ಅವರಿಗೆ ಸಿಟ್ಟು ಬರುತ್ತಿತ್ತು.. ಆದರು ಕದ್ದು ಕದ್ದು ಆ ಪುಸ್ತಕವನ್ನು ಸಂಪೂರ್ಣ ಓದಿ ಮುಗಿಸುತ್ತಿದ್ದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ ನಾನು ಪ್ರೌಢಶಾಲೆಯಲ್ಲಿದ್ದಾಗ ಪಠ್ಯಪುಸ್ತಕದ ನಡುವೆ ಕಥೆ ಪುಸ್ತಕಗಳನ್ನಿಟ್ಟು ಓದುತ್ತಿದ್ದೆ.  ಆದರಿಂದಲೇ ಏನೋ ನನ್ನ ಅಂಕಗಳು ಯಾವತ್ತು 50ರಿಂದ 60ರ ನಡುವೆಯೆ ಇರುತ್ತಿತ್ತು. ನನ್ನ ಪುಣ್ಯಕ್ಕೆ ಶಾಲೆಯಲ್ಲಿ ಓದುವಾಗ ಗುರುಗಳಿಗೆ ಸಿಕ್ಕಿ ಬೀಳಲಿಲ್ಲ. ಆದರೆ ಕನ್ನಡ ತರಗತಿಗಳನ್ನು ತುಂಬಾ ಜತನದಿಂದ ಕೇಳುತ್ತಿದ್ದೆ. ಪದ್ಯಗಳನ್ನು ಪಾಠ ಮಾಡುವ ಮೊದಲೇ ಓದಿಕೊಂಡು ನಾನು ಅರ್ಥ ಮಾಡಿಕೊಂಡಿರುವುದಕ್ಕು  ಗುರುಗಳು ಹೇಳುವುದಕ್ಕು  ಏನು ವ್ಯತ್ಯಾಸವಿದೆ ಎಂದು ಕೇಳುವ ತವಕ.

ನಾನು ಹೈಸ್ಕೂಲ್ ಸೇರಿದ ನಂತರ ಹತ್ತನೆ ತರಗತಿಯಲ್ಲಿರುವಾಗ  ನಮ್ಮ ಕನ್ನಡ ಗುರುಗಳು ಸ್ವಾತಂತ್ರ್ಯ ದಿನದ ಅಂಗವಾಗಿ ಕವನ ಸ್ಪರ್ಧೆ ಏರ್ಪಡಿಸಿದರು. ಆಗಸ್ಟ್ ತಿಂಗಳ ಮಳೆಯ ಭರಾಟೆಯನ್ನು ನೋಡಿ ಮಳೆ ಎಂಬ ಶೀರ್ಷಿಕೆಯನ್ನು ನೀಡಿದರು. ಮಕ್ಕಳ ಕವಿತೆಗಳನ್ನೆಲ್ಲಾ ಓದುತ್ತಿದ್ದ ನಾನು ಏನೋ ಗೀಚಬಹುದೆಂಬ ಹುಂಬತನದ ಮೇಲೆ ಹೆಸರು ಕೊಟ್ಟೆ. ಮನಸ್ಸಿಗೆ ತೋಚಿದಂತೆ ಬರೆದ  ನನ್ನ ಜೀವನದ ಪ್ರಥಮ ಕವಿತೆಗೆ ಪ್ರಥಮ ಬಹುಮಾನ ಬಂತು. ನಿಜವಾಗಿಯು ನಾನಂದು ಆನಂದತುದಿತಳಾಗಿದ್ದೆ. ನನಗೀಗಲು ನೆನಪಿದೆ.  ನಾಲ್ಕು ಸಾಲುಗಳ ಆರು ಪ್ಯಾರಾಗ್ರಾಫ್ ಮಾಡಿದ ಆ ಕವಿತೆಯಲ್ಲಿ ಪ್ರತಿ ನಾಲ್ಕು ಸಾಲುಗಳು ಪ್ರಾಸಪದದಿಂದ ಕೂಡಿದ್ದವು. ಅಂದು ಕನ್ನಡದ ಗುರುಗಳು ನೀಡಿದ ಪ್ರಶಂಸೆಯನ್ನು ನಾನಿಂದು ಮರೆತಿಲ್ಲ. ಭಗವದ್ಗೀತೆ ಸಂಪುಟದ ಚಿಕ್ಕ ಪಾಕೆಟ್ ಪುಸ್ತಕ ಬಹುಮಾನವಾಗಿ ಬಂದಿತ್ತು. ಬೀಗುತ್ತಾ ಹೋಗಿ ಬಹುಮಾನ ತೆಗೆದುಕೊಂಡೆ. ಭಗವದ್ಗೀತೆಯ ಆ ಪುಸ್ತಕವನ್ನು ಕೆಲವೇ ದಿನಗಳಲ್ಲಿ ಓದಿಯು ಮುಗಿಸಿದೆ. ಈಗಲೂ ಆ ಪುಸ್ತಕ ಜೋಪಾನವಾಗಿ ಸುಮಧುರ ನೆನಪಿನ ಪ್ರತೀಕವಾಗಿ ನನ್ನೊಂದಿಗಿದೆ. ಮತ್ತೆ ಪಿಯುಸಿಯಲ್ಲಿ ಚಿತ್ರಕವನ ಸ್ಪರ್ಧೆ ಏರ್ಪಡಿಸಿದರು. ಅದು ಹೊಸ ಅನುಭವವನ್ನು ನೀಡಿತು. ಹಳೆಯ ಕಲ್ಲಿನ ಪಾಳು ಮಂಟಪದಲ್ಲಿ ಹಣ್ಣು ಹಣ್ಣು ಮುದುಕಿಯೊಬ್ಬಳು ಕುಳಿತು ಶೂನ್ಯ ದಿಟ್ಟಿಸುವ ಚಿತ್ರ. ಚಿತ್ರದ ಭಾವನೆಗಳನ್ನು ನನ್ನ ಭಾವನೆಗಳೊಂದಿಗೆ ಮೇಳೈಸಿ ಬರೆದ ಕವಿತೆಗು ಪ್ರಥಮ ಬಹುಮಾನ ಬಂತು. ಅದು ನಾನು ಜೀವನದಲ್ಲಿ ಬರೆದ ಎರಡನೆ ಕವಿತೆ. ಈಗ ಮಯೂರ, ತುಷಾರದ ಚಿತ್ರಕವನ ಸ್ಪರ್ಧೆಗಳಲ್ಲಿ ಬಹುಮಾನ ಬಂದರು ಅವತ್ತಿನ ಖುಷಿಯೆ ಬೇರೆ! ಎರಡು ಕವಿತೆ ಆದ ಕೂಡಲೆ ತಂದೆಯ ಬಳಿ ಇದ್ದ ಡೈರಿಯೊಂದನ್ನು ಹೇಗೋ ಕೇಳಿ ಪಡೆದುಕೊಂಡು ಅದರಲ್ಲಿ ದಿನಾಂಕ ನಮೂದಿಸಿ ಬರೆದಿಟ್ಟೆ. ಮತ್ತೆ ಆಡೈರಿ ತುಂಬುವ ಭರಾಟೆಯು ಸೇರಿ ಪುಂಖಾನುಪುಂಖವಾಗಿ ಬರೆಯತೊಡಗಿದೆ. ಡಿಗ್ರಿಯ ಕೊನೆಯ ವರ್ಷದಲ್ಲಿ ಮೂವತ್ತೈದು ಕವಿತೆಗಳ ನನ್ನ ಪ್ರಥಮ ಕವನಸಂಕಲನವನ್ನು ಕಾಲೇಜಿನಲ್ಲಿ ಬಿಡುಗಡೆಯು ಮಾಡಿದರು. ಮತ್ತೆ ಏಳು ವರ್ಷದ ನಂತರ ನನ್ನ ಎರಡನೆ ಕವನ ಸಂಕಲನವು ಬಂತು. ಪ್ರಥಮ ಕವನಸಂಕಲನವನ್ನು ಯಾಕೋ ಏನೋ ಯಾರಿಗು ಹೆಚ್ಚು ಕೊಡಲಿಲ್ಲ. ಎರಡನೆ ಪುಸ್ತಕವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಲ್ಲರಿಗು ಉದಾರವಾಗಿ ಹಂಚಿಬಿಟ್ಟಿದ್ದೆ. ಮೊದಲ ಸಂಕಲನ ಪ್ರಕಟವಾದಾಗ ಇವರ ಯಾವುದೊಂದು ಕವಿತೆಯನ್ನು ನಾನು ಇದುವರೆಗು ರಾಜ್ಯಮಟ್ಟದ ಪತ್ರಿಕೆಯಲ್ಲಿ ನೋಡಲಿಲ್ಲ ಎಂದೊಬ್ಬರು ಹೇಳಿದರು. ಅಂದಿನಿಂದಲೇ ಪತ್ರಿಕೆಗಳಿಗೆ ಕಳುಹಿಸಲು ಶುರುಮಾಡಿದ್ದೆ. ತುಂಬಾ ಕಾಲ ಯಾವುದೊಂದು ಪತ್ರಿಕೆಯಲ್ಲಿ ಬಾರದೆ,ತದನಂತರ ಅಲ್ಲೊಮ್ಮೆ ಇಲ್ಲೊಮ್ಮೆ   ಪತ್ರಿಕೆಗಳಲ್ಲಿ ಪ್ರಕಟವಾದಾಗ ಪುಳಕಗೊಳ್ಳುತ್ತಿದ್ದೆ. ಬರೆಯುತ್ತಾ ಹೋದಂತೆ ಅದು ಬೆಳಕು ಕಾಣಲಿ ಎಂಬ ಹಂಬಲವು ಸಹಜ. ಕವಿತೆ ಸ್ವೀಕೃತ ಆಗಿ ಪ್ರಕಟವಾದರೆ ನಮ್ಮ ಹೆಸರು ನಾಲ್ಕು ಜನರಿಗೆ ತಿಳಿದು ಬಿಡುತ್ತದೆ. ಜೊತೆಗೆ ಚಿಕ್ಕಪುಟ್ಟ ಕವಿಗೋಷ್ಠಿಗಳಿಗೆ ಆಹ್ವಾನವು ಬರುತ್ತದೆ. ಇದಕ್ಕೆ ನಾನು ಹೊರತಾಗಿಲ್ಲ.

ಕವಿಗೋಷ್ಠಿಗಳ ಬಗ್ಗೆ ವಾಸ್ತವದ ನಿಜಾಂಶವನ್ನು ಮರೆಮಾಚದೆ ಹೇಳಬೇಕೆಂದರೆ ಕಾರ್ಯಕ್ರಮದಲ್ಲಿ ವಾಚಿಸುವ ಕವಿಗಳು ಮತ್ತು ಅವರೊಂದಿಗೆ ಬಂದಿರುವ ಒಂದಿಬ್ಬರು ಇರುತ್ತಾರಷ್ಟೆ! ಆದರೆ ನಮಗೆ ಸಮಧಾನ ಕೊಡುವ ದೊಡ್ಡ  ಅಂಶವೆಂದರೆ ಅಲ್ಲಿರುವವರೆಲ್ಲಾ ಕವಿತೆಯ ಬಗೆಗೆ ಅತೀವ ಆಸಕ್ತಿ ಇರುವವರೆ ಆಗಿರುತ್ತಾರೆ. ಕೆಲವೇ ಕೆಲವು ಜನರ ಸಮ್ಮುಖ ನಮ್ಮ ಕವಿತೆ ಸಾರ್ಥಕಗೊಳ್ಳುತ್ತದೆ..ದಸರಾ ಕವಿಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೇಳನದಂತಹ ಕವಿಗೋಷ್ಠಿಗಳಲ್ಲಿ ಜನ ಜಾತ್ರೆಯಂತೆ ಸೇರಿರುತ್ತಾರೆಯೆ ಹೊರತು ಕೇಳುಗರು ಕೆಲವೇ ಕೆಲವು ಮಂದಿ ಮಾತ್ರ. ಕವಿಗೋಷ್ಠಿ ಕಾರ್ಯಕ್ರಮ ಆಯೋಜನೆಯ ಬಗ್ಗೆ ಇನ್ನೊಂದು ಬಹುಮುಖ್ಯ ವಿಷಯವಿದೆ. ಕವಿತೆ ವಾಚಿಸಲು ಹೆಚ್ಚೆಂದರೆ ಹತ್ತು ಮಂದಿ ಕವಿಗಳಿಗೆ ಅವಕಾಶ ನೀಡಬೇಕು ಎಂಬುದು ನನ್ನಭಿಪ್ರಾಯ. ಕವಿತೆ ಬಗ್ಗೆ ಎಷ್ಟೆ ಆಸಕ್ತಿಯಿದ್ದರು ಜನ ಜಾಸ್ತಿಯಾದ ಕೂಡಲೇ ಬೋರ್ ಆಗಿಬಿಡುವ ಸಾಧ್ಯತೆಯೆ ಹೆಚ್ಚು. ಇದು ನಾನು ಕಣ್ಣಾರೆ ನೋಡಿದ ಅನುಭವವು ಹೌದು ಮತ್ತು ನನ್ನ ಅನುಭವವು ಹೌದು. ಆಳ್ವಾಸ್ ನುಡಿಸಿರಿಯ ಕವಿಗೋಷ್ಠಿ ಕಾರ್ಯಕ್ರಮ ಕವಿಸಮಯ=ಕವಿನಮನವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸುತ್ತಾರೆ. ಕವಿತೆಯನ್ನು ಇತರ ಕಾರ್ಯಕ್ರಮಗಳ ನಡು ನಡುವೆ ಹಾಕಿ ಆ ಸಮಯದಲ್ಲಿ ಒಂದೇ ಕವಿಗೆ ಅವಕಾಶ ನೀಡಿ, ಜನ ಕಾದು ಕುಳಿತು ಕವಿತೆಯನ್ನು ಕೇಳುವಂತೆ ಮಾಡಿದ್ದಾರೆ. ಕವಿಗೋಷ್ಟಿಯನ್ನು ಕಾವ್ಯ ಗಾನ ಕುಂಚದೊಂದಿಗೆ ಮೇಳೈಸಿ ಮಾಡಿದರೆ ಅದರ ರುಚಿ ಇನ್ನು ಸ್ವಾದಿಷ್ಟ.

ನನ್ನ ಗೆಳತಿಯರ ಮಕ್ಕಳಿಗೆ ಶಾಲೆಯಲ್ಲಿ ಕವಿತೆ ಬರೆಯಿರಿ ಅಂತೇನಾದರು ಹೇಳಿ ಕಳುಹಿಸಿದರೆ ತಕ್ಷಣ ನನಗೆ ಫೋನಾಯಿಸಿ ಬರೆಯಿಸಿಕೊಳ್ಳುತ್ತಾರೆ. ಇದನ್ನು ಯಾಕೆ ಹೇಳಿದೆ ಅಂದರೆ ಬರೆದುಕೊಡುವ ನನಗೆ ಖಂಡಿತಾ ತ್ರಾಸವಿಲ್ಲ. ಆದರೆ ಪ್ರಯತ್ನಪಟ್ಟರೆ ನಾಲ್ಕು ಸಾಲನ್ನು ಯಾರು ಬೇಕಾದರು ಬರೆಯಬಹುದು. ಪಳಗಿದ ಕವಿಗಳಿಗೆ ಕವಿತೆ ಅಂತರಂಗದಲ್ಲಿ ಮೊಳಕೆಯೊಡೆದು ನಂತರ ಹೆಮ್ಮರವಾಗುವ ಪ್ರಕ್ರಿಯೆ. ಆದರೆ ಅನಿವಾರ್ಯವಾಗಿ ಬರೆಯಬೇಕೆಂದರೆ ಮೊದಲಿಗೆ ಮೊಳಕೆ ಚಿಗುರೊಡೆದರೆ ಅಷ್ಟೆ ಸಾಕು!  ನಾಲ್ಕು ಸಾಲು ಗೀಚುವ ಗೋಳು ಇದ್ದವರ ನೋಟ್ ಪುಸ್ತಕದ ಕೊನೆಯ ಭಾಗದಲ್ಲಿ, ರಫ್ ಪುಸ್ತಕದಲ್ಲಿ, ಬೈಂಡ್ ಮೇಲೆ ಜಾಗ ಇದ್ದಲ್ಲಿ ಅವರ ಕವಿತೆ ಸಾಲು ಗೋಚರಿಸುತ್ತವೆ. ಮಕ್ಕಳ ಆಸಕ್ತಿ ಇದರಲ್ಲಿಯೆ ಗೊತ್ತಾಗಿಬಿಡುತ್ತದೆ. ಚಿತ್ರಕಲೆಯಲ್ಲಿ ಆಸಕ್ತಿ ಇದ್ದರೆ ಚಿತ್ರ ಬಿಡಿಸುತ್ತಾರೆ. ಆಟೋಗ್ರಾಫ್ ಬರೆಯುವಾಗ ಸಿಕ್ಕಿದ್ದೆ ಅವಕಾಶ ಎಂಬಂತೆ ಅದರಲ್ಲು ನಮ್ಮ ಕೈ ಚಳಕ ತೋರಿಸಿ ಬಿಡುತ್ತೇವೆ. ಮದುವೆಯ ಆಮಂತ್ರಣ ಪತ್ರಿಕೆಗು ಕವಿತೆಯ ಸಾಲುಗಳನ್ನು ಹಾಕಿಬಿಡುತ್ತೇವೆ.  ಅದೆಷ್ಟೋ ಸಾಹಿತ್ಯ ವೇದಿಕೆಗಳು ಪತ್ರಿಕೆಗಳ ಮುಖಾಂತರ ಕವಿತೆ ಆಹ್ವಾನಿಸಿ ಅದನ್ನು ಪುಸ್ತಕ ರೂಪದಲ್ಲಿ ಹೊರತರುತ್ತೇವೆ ಎಂಬುದಾಗಿ ಕೇಳುತ್ತಾರೆ. ಹೊಸ ಬರಹಗಾರರು ಇಂತದನ್ನು ಕಂಡರೆ ತಪ್ಪದೆ ಕಳುಹಿಸುತ್ತಾರೆ. ಸರಿ ಎಂದು ಕಳುಹಿಸಿದರೆ ಪುಸ್ತಕ ಪ್ರಕಟಣೆಗೆ ಇಂತಿಷ್ಟು ಹಣ ಕಳುಹಿಸಿ ಎಂದು ಕಾರ್ಡ್ ಹಾಕುತ್ತಾರೆ. ಉದಯೋನ್ಮುಖ ಬರಹಗಾರರು ಎಲ್ಲದ್ದಕ್ಕು ಸೈ. ದುಡ್ಡು  ಕಳುಹಿಸಿ ಕವನ ಹಾಕಿಸಿಕೊಂಡು ಸಂತಸ ಪಡುತ್ತಾರೆ. ದುಡ್ಡು ಕಳುಹಿಸದಿದ್ದರೆ ಕವನ ಹಾಕದಿರುವುದು ನನ್ನ ಅರಿವಿಗೆ ಬಂದಿದೆ. ಆದರೆ ಮುಂದಿನ ಸಲ ಇಂತಹ ಅನುಭವ ಆದವರು ಇದರಲ್ಲೇನಿದೆ ಅಂತ  ಕೈ ಚೆಲ್ಲುತ್ತಾರೆ.

 ಹುಡುಗಿಯರಿಗೆ ಮದುವೆ ಮತ್ತು ಹುಡುಗರಿಗೆ ಉದ್ಯೋಗ ಇವೆರಡು ದಕ್ಕಿದ ಮೇಲೆ, ಬರವಣಿಗೆಯ ಅಭ್ಯಾಸ ಇದ್ದವರು ಸಮಯದ ಅಭಾವ ಎಂಬ ಕುಂಟು ನೆಪ ಹೇಳಿ ಅದನ್ನು ಬಿಟ್ಟು ಬಿಡುತ್ತಾರೆ. ಆದರೆ ನನ್ನ ವಿಷಯದಲ್ಲಿ ಹೇಳುವುದಾದರೆ ಮದುವೆಯ ನಂತರವೆ ಹೆಚ್ಚೆಚ್ಚು ಕವನಗಳನ್ನು ಇಲ್ಲದ ಸಮಯ ಹೊಂದಿಸಿಕೊಂಡು ಬರೆದೆ. ನಮ್ಮ ಸ್ವಂತಿಕೆಯನ್ನು ಒಂದು ಚುಕ್ಕಿಯಷ್ಟಾದರು ಮರೆಮಾಚುವ ಸಂಧರ್ಭ ಪ್ರತಿಹೆಣ್ಣಿಗು ಮದುವೆಯ ನಂತರ ಬರುತ್ತದೆ ಎಂಬುದು ನನ್ನ ಭಾವನೆ. ಅಂತಹ  ಸಮಯದಲ್ಲಿ  ನಮ್ಮ ಸಹಾಯಕೆ ಬರುವುದು ನಮ್ಮಲೇನಾದರು ಪ್ರತಿಭೆ ಇದ್ದರೆ ಮಾತ್ರ. ಆ ಕ್ಷಣದ ಬಿಡುಗಡೆಗೆ ನನಗೋಸ್ಕರ ಮಾತ್ರವೆ ಬರೆದ ಕವಿತೆಗಳು ,ನನ್ನ ಇಷ್ಟಕ್ಕು ಮೀರಿ ಕೆಲವು ಜನ ಗುರುತಿಸುವಂತೆ ಮಾಡಿದೆ. ಹಾಗಿದ್ದ ಮೇಲೆ ಕವಿತೆಗಳಿಗೆ ನಾನು ಪುನೀತಳಾಗಿಲ್ಲವೆಂದು ಹೇಗೆ ಹೇಳಲಿ? ಕವಿತೆಗಳೆ ನನ್ನ ಜೀವನದ ಭರವಸೆ.  ಮದುವೆಯಾದ ಹೊಸತರಲ್ಲಿ ಮಯೂರದಲ್ಲೊಂದು ನನ್ನ ಕವನ ಪ್ರಥಮವಾಗಿ ಪ್ರಕಟಗೊಂಡಿತು.  ಆ ಹುಮ್ಮಸ್ಸಿನಿಂದಲೇ ನೀನು ಕವಿತೆ ಬರೆಯುತಿರೋದು ಅಂತ ಗೆಳತಿಯೊಬ್ಬಳು ಚುಡಾಯಿಸುತ್ತಿದ್ದಳು ಅದಕ್ಕೆ  ಪ್ರತ್ಯುತ್ತರವಾಗಿ ಮಗದೊಬ್ಬಳು ಪದ್ಯ ಹೆಂಗಸಿಗೆ ಗದ್ಯ ಗಂಡಸಿಗೆ ಅಂತ ಕವಿತೆ ಮಾತ್ರವೆ ಬರೆಯುತ್ತಿದ್ದ ನನಗೆ ಹೇಳುತ್ತಿದ್ದಳು.  ಬಹುಶ: ಇದು ಪದ್ಯವನ್ನು ಹೆಂಗಸಿಗು ಗದ್ಯವನ್ನು ಗಂಡಸಿಗು ಹೋಲಿಸಿ ಹೇಳಿದ್ದಿರಬೇಕು. ಅತ್ಯಂತ ನಾಜೂಕಾಗಿ. ಸೂಕ್ಷ್ಮವಾಗಿ , ಮನಸೆಳೆಯುವಂತಹ,ಮೃದುವಾದ ಬರಹದ ಕವಿತೆಯನ್ನು ಹೆಣ್ಣಿಗಲ್ಲದೆ ಇನ್ಯಾರಿಗೆ ಹೋಲಿಸಲು ಸಾಧ್ಯ? ಇದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ಪದ್ಯ ಬರೆಯುವವರು ಹೆಂಗಸರು, ಗದ್ಯದ ರೂವಾರಿ ಗಂಡಸರು ಎಂದಾದರೆ ಅದನ್ನು ಸಮರ್ಥಿಸಿಕೊಳ್ಳಬಹುದು!

ನಾವು ಚಿಕ್ಕವರಿರುವಾಗ ಶಾಲೆಗಳಲ್ಲಿ  ದೊಡ್ಡದಾದ ಮೇಲೆ ಏನಾಗಬಯಸುತ್ತೀರಿ ಎಂದು ಕೇಳಿದರೆ ಟೀಚರ್, ಲಾಯರ್, ಪೈಲೆಟ್, ಡಾಕ್ಟರ್ ಹೀಗೆ ಟುಸ್ ಪಟಾಕಿ ಹೊಡೆದಿರುತ್ತೇವೆ. ಆದರೆ ದೊಡ್ಡದಾದ ಮೇಲೆ ಇನ್ನೇನೋ ಆಗಿಬಿಡುತ್ತೇವೆ. ಆದರೆ ಯಾರೊಬ್ಬರು  ನಾನು ಸಾಹಿತಿಯಾಗುತ್ತೇನೆ ಅನ್ನುವುದಿಲ್ಲ. ಕವಿಯಾಗುವ ವಿಷಯ ಬಾಲ್ಯದಲ್ಲೇ ತಿಳಿದಿರಲಾರದು. ಇದನ್ನು ಯಾಕೆ ಹೇಳುವುದಿಲ್ಲವೆಂದರೆ ಬರವಣಿಗೆ ಹವ್ಯಾಸವಾಗಿ ಇರುವಂಥದ್ದು ಎಂಬುದಾಗಿ ಎಲ್ಲರು ಅಂದು ಕೊಂಡಿರಬಹುದು. ಚಲನಚಿತ್ರಗಳಲ್ಲಿ ಕವಿಗಳನ್ನು ಚಿತ್ರಿಸುವಾಗ ಬಡವನಾಗಿ ಚಿತ್ರಿಸುವುದು ಸಾಮಾನ್ಯವಾಗಿಬಿಟ್ಟಿದೆ. ಒಂದು ಜೋಳಿಗೆ, ಪೈಜಾಮ, ಹವಾಯಿ ಚಪ್ಪಲು ಹೀಗಿರುವವರ ಹತ್ತಿರ ಎಷ್ಟು ದುಡ್ಡಿರುತ್ತದೆ ಎಂಬ ಭಾವನೆ ಮಕ್ಕಳು ಸಾಹಿತಿಯಾಗುವ ಆಸೆ ತೋರಿಸದಿರಲು ಕಾರಣವಾಗಿರಬಹುದು.ಅಕ್ಷರದಿಂದಲೇ ಅನ್ನ ಕಂಡುಕೊಂಡ ಎಷ್ಟೋ ಮಹಾನುಭಾವರು ನಮ್ಮ ನಡುವೆ ಇದ್ದಾರೆ. ಆದರು ಬರವಣಿಗೆಯನ್ನು ಇತರ ಉದ್ಯೋಗದೊಂದಿಗೆ ಹೊಂದಿಸಿಕೊಂಡು  ಹೋಗುತ್ತಾರೆ ವಿನಹ ಬರವಣಿಗೆಯನ್ನು ಉದ್ಯೋಗ ಮಾಡಿಕೊಂಡಿರುವವರು ಸಿಗುವುದು ಅಪರೂಪ.

ಆಕಾಶವಾಣಿಗಳಲ್ಲಿ ಕವಿತೆಗಳಿಗೆ ಹೆಚ್ಚಿನ ಅವಕಾಶ ನೀಡುತ್ತಾರೆ. ಹದಿನೈದು ನಿಮಿಷದ ಸಮಯವಕಾಶ ನೀಡಿ ಸುಮಾರು ಹತ್ತು ಕವಿತೆಗಳನ್ನು ವಾಚಿಸುವಂತೆ ಹೇಳುತ್ತಾರೆ. ನಾನು ಮಡಿಕೇರಿ ಮತ್ತು ಮಂಗಳೂರು ಆಕಾಶವಾಣಿಗಳಲ್ಲಿ ಈ ರೀತಿ ನಿರಂತರವಾಗಿ ಹದಿನೈದು ನಿಮಿಷ ವಾಚಿಸಿದ್ದೇನೆ. ಕವಿತೆಗಳು ಭಿತ್ತರಗೊಂಡ ಮರುದಿನದಿಂದ ನನ್ನೂರಿನ ಜನರು, ಬಂಧುಗಳು, ಗೆಳತಿಯರು ಹೇಳುವ ಮಾತುಗಳನ್ನು ಕೇಳಿದರೆ ಸುಸ್ತಾಗಿಬಿಡುತ್ತೇನೆ. ಈಗ ಕಾರ್‍ನಲ್ಲಿ, ಮೊಬೈಲ್‍ನಲ್ಲಿ ಎಫ್.ಎಮ್ ಇಪ್ಪತ್ನಾಲ್ಕು ಗಂಟೆ ಸಿಗುವುದರಿಂದ ಆಕಾಶವಾಣಿ ಗಗನಕುಸುಮವಾಗಿ ಉಳಿದಿಲ್ಲ. ಹೀಗೆ ವಾಹನದಲ್ಲಿ ಸಾಗುವವರು, ನನ್ನೂರಿನಂತಹ ಕರೆಂಟ್ ಇಲ್ಲದ ತೀರಾ ಕುಗ್ರಾಮದಲ್ಲಿರುವವರು ಪೂರ್ತಿಯಾಗಿ ಕೇಳಲೇಬೇಕೆಂಬ ಅನಿವಾರ್ಯತೆಯಿಂದ ಕೇಳಿಬಿಡುತ್ತಾರೆ. ಮನರಂಜನೆಗೆ ಬೇರೇನು ಅವಕಾಶ ಇಲ್ಲದ ಆ ಹೊತ್ತಿನಲ್ಲಿ "ಆಫ್" ಮಾಡುವ "ರಿಸ್ಕ್'' ಅನ್ನು ಇವರುಗಳು ತೆಗೆದುಕೊಳ್ಳವುದಿಲ್ಲ. ನಂತರ ಇವರ ಮಾತು ಹೇಗಿರುತ್ತೆ ಅಂದರೆ ಒಮ್ಮೆ ಮುಗಿದರೆ ಸಾಕು ಎಂದಾಗಿತ್ತು ಅನ್ನುತ್ತಾರೆ. ನಿಜವಾದ ಆಸಕ್ತಿಯಿದ್ದವರಿಗೆ ನಾನೆ ಪ್ರಸಾರಗೊಳ್ಳುತ್ತಿದೆ ಕೇಳಿ ಎಂದು ಹೇಳಿಬಿಡುತ್ತೇನೆ ಮತ್ತು ಅವರಿಂದ ಪ್ರಾಮಾಣಿಕ ಪ್ರಶಂಸೆಯನ್ನು ಕೇಳುತ್ತೇನೆ. ನನ್ನ ಆಂಟಿಯ ಮಗ ಅಭಿ " ನಿನ್ನ ಕವಿತೆ ಭಾರಿ ಚೆನ್ನಾಗಿತ್ತು ಗೀತಕ್ಕ ಆದ್ರೆ ಅದು ಎಷ್ಟೋತ್ತಾದ್ರು ಮುಗಿಲೇ ಇಲ್ಲ! ಅಂತ ನಿಟ್ಟುಸಿರಿಟ್ಟು ಹೇಳಿದಾಗ ನಾನು ಸುಸ್ತು. ಅದರರ್ಥ ಅವರಿಗೆ ಹದಿನೈದು ನಿಮಿಷ ಅದೆಷ್ಟೋ ತಾಸು ಕೇಳಿದಂತೆ ಭಾಸವಾಗಿದೆ. ಮುಂದೆ ಕವಿತೆಯ ಭವಿಷ್ಯ ಹೇಗಿರಬಹುದೆಂದು ಯೋಚಿಸುತ್ತಾ ಒಮ್ಮೊಮ್ಮೆ ನಾನು ಬೆಚ್ಚಿ ಬೀಳುತ್ತೇನೆ. ನನ್ನ ಐದು ವರ್ಷದ ಮಗಳ ಹತ್ತಿರ ಹೊಸ ಕವಿತೆಯೊದನ್ನು ಬರೆದಿರುವೆ  ಬಾ ಓದುವೆ ಅಂತ ಕರೆದರೆ  " ಪೊಪ್ಪ ಎಲ್ಯೊಳರಿ,ಇಲ್ಲಿಂದ ನಾವು ಓಡಿ ಪೋಯಿ, ಅಮ್ಮ ಹೊಸ ಕವಿತೆ ಓದಿದೆ ಗಡ" [ಅಪ್ಪ ಎಲ್ಲಿದ್ದೀರ. ನಾವಿಲ್ಲಿಂದ ಓಡಿ  ಹೋಗೋಣ ಅಮ್ಮ ಕವಿತೆ ಓದುತ್ತಾಳಂತೆ] ಅನ್ನುತ್ತಾಳೆ. ಅವಳಪ್ಪನು ನಾವಿಲ್ಲಿಂದ ಓಡೋದೆ ಸರಿ ಅಂತ ಧ್ವನಿಗೂಡಿಸುತ್ತಾರೆ. ಮೇಲ್ನೋಟಕ್ಕೆ ನಮಗಿದು ತಮಾಷೆಯಾಗಿ ಕಂಡರು  ವಾಸ್ತವದ ಬೇರಿನ ಆಳಕ್ಕಿಳಿದು ನಾವಿದನ್ನು ಪರಾಮರ್ಶಿಸಬೇಕು. ನಮ್ಮ ಮುಂದಿನ ತಲೆಮಾರಿಗೆ ಕವಿತೆಯ ಸ್ಪರ್ಶವನ್ನು ದಾಟಿಸುವುದು ಹೇಗೆ? ಪತ್ರಿಕೆಯವರು ಕವಿತೆಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂಬುದು ನನ್ನ ಭಾವನೆ. ರಾಜ್ಯ ಮಟ್ಟದ ಕೆಲವೇ ಕೆಲವು ಪತ್ರಿಕೆಗಳು  ವಾರಕ್ಕೆ ಒಂದು ಕವಿತೆಯನ್ನು ಪ್ರಕಟಿಸುತ್ತಾರೆ. ಇನ್ನು ಕೆಲವು ರಾಜ್ಯ ಮಟ್ಟದಲ್ಲಿ ಪತ್ರಿಕೆಗಳಲ್ಲಿ ಕವಿತೆಯೆ ಇರುವುದಿಲ್ಲ. ಕನ್ನಡಿಗರು ಅದೆಷ್ಟೋ ಜನ ಕವಿತೆ ಕಳುಹಿಸುವವರು ಇರುವಾಗ ವಾರಕ್ಕೆ ಒಂದು ಕವಿತೆ ಹಾಕಿದರೆ ಸಾಕೇ? ಇನ್ನೊಂದು ವಿಷಯವಿದೆ ಉಳಿದಂತೆ ಲೇಖನ , ಕಥೆಗಳಿಗೆ ನೀಡುವ ಸಂಭಾವನೆಗಿಂತ ಕವಿತೆಗೆ  ಕಡಿಮೆ ಸಂಭಾವನೆ.  

ನವ್ಯ ಕವಿತೆಗಳು ಅರ್ಥವಾಗುವುದಿಲ್ಲ ಎಂಬ ಮಾತನ್ನು ಹಲವರು ಹೇಳುತ್ತಿರುತ್ತಾರೆ. ಕವಿತೆಗೆ ಅರ್ಥದ ಹಂಗು ಬೇಕೆ? ಓದಿ ಆಸ್ವಾದಿಸಿದರೆ ಸಾಲದೆ ?ಕವಿ ತನ್ನ  ಅನುಭವದ ಮೂರ್ತರೂಪವನ್ನು ಬರೆಯುವಾಗ ಅದು ಅಮೂರ್ತ ಕಲ್ಪನೆಯಾಗುವುದರಲ್ಲಿ ಎರಡು ಮಾತಿಲ್ಲ. ತನ್ನ ಅನುಭವದ ಗುಚ್ಛವನ್ನು ಏಳೆಂಟು ಸಾಲುಗಳಲ್ಲಿ ಹಿಡಿದಿಡುವ ಕವಿತೆಯನ್ನು ಅರ್ಥಮಾಡಿಕೊಳ್ಳುವುದು ಸುಲಭವು ಅಲ್ಲ.ಇದು ಕವಿತೆ ಓದದಿರುವುದಕ್ಕೆ ಕಾರಣವು ಅಲ್ಲ.ಇದಕ್ಕೆ ಅನುರೂಪವಾದ ಮಾತೊಂದನ್ನು ವೈನ್‍ಕೆ ಯವರು ಹೇಳಿದ್ದಾರೆ " ಕವಿತೆ ನೀನೇಕೆ ಪದಗಳಲ್ಲಿ ಅವಿತೆ". ಎಷ್ಟೊಂದು ಅರ್ಥಗರ್ಭಿತ ಮತ್ತು ಮಾರ್ಮಿಕ ಸಾಲು ಇದು. .ಕವಿತೆಯ ಭವಿಷ್ಯ ಉಜ್ವಲವಾಗಿರಲೆಂದು ನಾನು ಕಾಯಾ ವಾಚಾ ಮನಸಾ ಪ್ರಯತ್ನಿಸುತ್ತಿರುವೆ. ನೀವು ನನ್ನೊಂದಿಗೆ ಕೈ ಜೋಡಿಸಿ.

*****    

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಜೆ.ವಿ.ಕಾರ್ಲೊ
ಜೆ.ವಿ.ಕಾರ್ಲೊ
9 years ago

ನಿಮ್ಮ ಬರಹ ತುಂಬಾ ಇಷ್ಟವಾಯ್ತು. ಎಲ್ಲಾ ಸಾಹಿತ್ಯ ಪ್ರಕಾರಗಳಿಂಗಿಂತಲೂ ಕಾವ್ಯವೇ ಹೆಚ್ಚು ಅನುಭೂತಿ ಕೊಡುವಂತಾದ್ದು ಎಂದು  ಈ ಮೊದಲೂ ಕೇಳಿ ನಾನು ಬಹಳ  ನಿಕೃಷ್ಟಭಾವವನ್ನು ಅನುಭವಿಸಿದ್ದೇನೆ. ಕೆಲವು ಕವಿತೆಗಳನ್ನು ಯಾವ ವಿಮರ್ಶಕರ ನೆರವೂ ಇಲ್ಲದೆ  ಓದಿ/ಕೇಳಿ ಸಂತೋಷಪಟ್ಟಿದ್ದೇನೆ. ಮತ್ತೇಷ್ಟೋ ಆಲ್ಜೀಬ್ರಾವೋ, ಫಿಜಿಕ್ಸೋ ಅನ್ನುವಷ್ಟು ಅದು ನನಗಲ್ಲ ಅಂದಿದ್ದೂ ಉಂಟು. ಕೆಲವೊಮ್ಮೆ ಅನ್ನಿಸಿದ್ದು: ರವಿ ಕಾಣದ್ದನ್ನು ಕವಿ ಕಂಡ; ಕವಿ ಕಾಣದ್ದನ್ನು ವಿಮರ್ಶಕ ಕಂಡ!

ಟಿಪಿಕಲ್ ಕವಿಗಳನ್ನು ಜೋಳಿಗೆ, ಹವಾಯಿ ಚಪ್ಪಲ್, ಪೈಜಾಮ.. ಹೀಗೆ ವರ್ಣಿಸಿರುತ್ತಾರೆ. ಅದೃಷ್ಟವಶಾತ್ ಟಿಪಿಕಲ್ ಕವಯತ್ರಿಯರಿಲ್ಲದಿರುವುದು ನಮ್ಮ ಪುಣ್ಯ!

smitha Amrithraj
smitha Amrithraj
9 years ago

chennagi niroopisiruve sangeetha…

2
0
Would love your thoughts, please comment.x
()
x