ನೊಬೆಲ್ ಪ್ರಶಸ್ತಿ – ೨೦೧೪: ಜೈಕುಮಾರ್. ಹೆಚ್. ಎಸ್.


ಭೌತವಿಜ್ಞಾನ: ನೀಲಿ ವರ್ಣದ ಬೆಳಕು ಆವಿಷ್ಕಾರ ಮಾಡಿದ ವಿಜ್ಞಾನಿಗಳಿಗೆ
ಕಡಿಮೆ ವಿದ್ಯುತ್‌ನಿಂದ ಹೆಚ್ಚಿನ ಬೆಳಕು ನೀಡುವ ದೀಪಗಳಿಗಾಗಿ ಶೋಧನೆ ನಿರಂತರವಾಗಿ ನಡೆಯುತ್ತಲೇ ಇದೆ. ೨೦ ನೇ ಶತಮಾನದಲ್ಲಿ ಇನ್‌ಕ್ಯಾಂಡಿಸೆಂಟ್ ಎಂದು ಕರೆಯಲಾಗುವ ಬಲ್ಬ್ ಗಳದೇ ಪಾರುಪತ್ಯ. ಇಂದಿಗೂ ನಮ್ಮ ಬಹುತೇಕ ಮನೆಗಳಿಂದ ಇವು ಕಣ್ಮರೆಯಾಗಿಲ್ಲ. ಇದರಲ್ಲಿ ಟಂಗಸ್ಟನ್ ಫಿಲಮೆಂಟ್ ಇದ್ದು, ಫಿಲಮೆಂಟ್ ಕಾದ ನಂತರ ಬೆಳಕನ್ನು ನೀಡಲಾರಂಭಿಸುತ್ತವೆ. ಆಮೇಲೆ ಟ್ಯೂಬ್‌ಲೈಟ್ (ಪ್ಲೋರೋಸೆಂಟ್) ದೀಪಗಳು ಬಂದವು. ಇದರಲ್ಲಿ ಪಾದರಸದ ಅನಿಲದ ಬಾಷ್ಪಗಳು ವಿದ್ಯುತ್ ಸರಬರಾಜಿನಿಂದ ಕಾದು ರಂಜಕದ ಕೋಟಿಂಗ್‌ನ್ನು ಬೆಳಗಿಸಿ, ಬೆಳಕು ಹರಿಸುತ್ತದೆ. ನಂತರದಲ್ಲಿ, ತಮ್ಮ ಕಡಿಮೆ ವಿದ್ಯುತ್‌ನಿಂದ ಹೆಚ್ಚಿನ ಬೆಳಕು ನೀಡುವ ಸಿಎಫ್‌ಎಲ್ ಬಲ್ಬ್‌ಗಳು (ಇವು ಟ್ಯೂಬ್‌ಲೈಟ್‌ನ ಸುಧಾರಿತ ತಳಿಗಳು) ನಿಧಾನವಾಗಿ ಆವರಿಸಿಕೊಳ್ಳುತ್ತಿದ್ದು, ಇನ್‌ಕ್ಯಾಂಡಿಸೆಂಟ್ ಬಲ್ಬ್‌ಗಳು ವಿದಾಯ ಹೇಳುತ್ತಿವೆ. ಇದೀಗ ೨೧ ನೇ ಶತಮಾನದಲ್ಲಿ ಬೆಳಕು ನೀಡುವ ದೀಪಗಳಾಗಿ ಪ್ರವರ್ಧಮಾನಕ್ಕೆ ಬರುತ್ತಿರುವವೆಂದರೆ ಎಲ್.ಇ.ಡಿ ದೀಪಗಳು (ಲೈಟ್ ಎಮಿಟಿಂಗ್ ಡಯೋಡ್). 

ಈ ವರ್ಷದ ಭೌತವಿಜ್ಞಾನದ ನೊಬೆಲ್ ಪಾರಿತೋಷಕವನ್ನು ನೀಲಿ ವರ್ಣದ ಎಲ್.ಇ.ಡಿ ದೀಪಗಳನ್ನು ಶೋಧಿಸಿದ ಜಪಾನಿನ ವಿಜ್ಞಾನಿಗಳಾದ ಇಸಮು ಅಕಸಕಿ, ಹಿರೊಶಿ ಅಮನೊ ಮತ್ತು ಕ್ಯಾಲಿಪೋರ್ನಿಯಾದಲ್ಲಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿ ಶುಜು ನಕಮುರ ಎಂಬುವರಿಗೆ ನೀಡಲಾಗಿದೆ. ಎಲ್.ಇ.ಡಿ ದೀಪಗಳು ಯಾವುದೇ ಅನಿಲಗಳನ್ನಾಗಲಿ, ಫಿಲಮೆಂಟನ್ನಾಗಲಿ ಬಳಸುವುದಿಲ್ಲ, ಹಾಗಾಗಿ ಇವು ಪರಿಸರ-ಸ್ನೇಹಿ. ಅಲ್ಲದೆ, ಇನ್‌ಕ್ಯಾಂಡಿಸೆಂಟ್ ಮತ್ತು ಪ್ಲೋರೋಸೆಂಟ್ ದೀಪಗಳಿಗೆ ಹೋಲಿಸಿದರೆ, ಎಲ್.ಇ.ಡಿ ದೀಪಗಳು ವಿದ್ಯುಚ್ಛಕ್ತಿಯನ್ನು ನೇರವಾಗಿ ಬೆಳಕಿನ ಕಣಗಳನ್ನಾಗಿ ಪರಿವರ್ತಿಸುತ್ತವೆ. ಅಲ್ಲದೆ, ಇವುಗಳಿಂದ ಹೊರಡುವ ಬೆಳಕು ಸುತ್ತಲೂ ಚದುರದಂತೆ ಒಂದೇ ದಿಕ್ಕಿನಲ್ಲಿ ಸಾಂದ್ರತೆಯಿಂದ ಹಾಯಿಸಬಹುದು. ಇದರಿಂದಾಗಿ ಬಹುತೇಕ ಪ್ರಮಾಣದ ವಿದ್ಯುತ್ ನಷ್ಟವಾಗದೆ ಶಾಖವಾಗಿ ಪರಿವರ್ತನೆಗೊಂಡು ಹೆಚ್ಚಿನ ಬೆಳಕು ನೀಡುತ್ತದೆ, ಹಾಗಾಗಿಯೇ ಹೆಚ್ಚು ಇಂಧನ-ಕ್ಷಮತೆ ಹೊಂದಿವೆ. 

ಎಲ್.ಇ.ಡಿ ಎಂದರೆ ಗಾಲಿಯಂ ಫಾಸ್ಫೈಡ್, ಗಾಲಿಯಂ ನೈಟ್ರೈಡ್ ನಂತಹ ರಾಸಾಯನಿಕಗಳಿಂದ ತಯಾರಿಸಿದ ಜಂಕ್ಷನ್ ಹೊಂದಿರುವ ಒಂದು ರೀತಿಯ ಅರೆವಾಹಕಗಳು. ಇವುಗಳ ಮೂಲಕ ಕರೆಂಟನ್ನು ಹಾಯಿಸಿದಾಗ, ಇವುಗಳಲ್ಲಿರುವ ಕುಳಿಗಳು ಮತ್ತು ಎಲೆಕ್ಟ್ರಾನ್‌ಗಳು ಜಂಕ್ಷನ್ ಪರಸ್ಪರ ಸೇರಿಕೊಳ್ಳುವಂತೆ ಉದ್ದಕ್ಕೂ ಹರಿಯುತ್ತವೆ, ಈ ಪ್ರಕ್ರಿಯೆಯಲ್ಲಿ ಬೆಳಕನ್ನು ಬಿಡುಗಡೆ ಮಾಡುತ್ತವೆ. 

೧೯೫೦ರ ದಶಕದಲ್ಲಿಯೇ ಕೆಂಪು ಮತ್ತು ಹಸಿರು ವರ್ಣದ ಎಲ್.ಇ.ಡಿ ದೀಪಗಳನ್ನು ಆವಿಷ್ಕರಿಸಲಾಗಿದ್ದು, ಅವುಗಳನ್ನು ಡಿಜಿಟಲ್ ಡಿಸ್‌ಪ್ಲೇಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದಕ್ಕೆ ನೀಲಿ ವರ್ಣವನ್ನು ಕೂಡ ಸೇರಿಸಿದಲ್ಲಿ ಹೆಚ್ಚು ಪ್ರಕಾಶಮಾನದ ಬಿಳಿ ಬೆಳಕನ್ನು ಪಡೆಯುವುದು ಸಾಧ್ಯ. ಆದರೆ, ನೀಲಿ ವರ್ಣದ ಎಲ್.ಇ.ಡಿ ದೀಪದ ಆವಿಷ್ಕಾರ ಬಹಳ ಕಷ್ಟಕರವಾಗಿತ್ತು. ಪುಡಿ ರೂಪದಲ್ಲಿದ್ದ ಗಾಲಿಯಂ ನೈಟ್ರೈಡ್‌ನ್ನು ಹರಳಿನ ರೂಪಕ್ಕೆ ತಂದು ಅದರಿಂದ ಎಲ್.ಇ.ಡಿ ತಯಾರಿಸುವುದು ಸವಾಲಿನದ್ದಾಗಿದ್ದರೆ, ಅದನ್ನು ವಿದ್ಯುತ್ ನಷ್ಟ ಮಾಡದ ಪದರುಗಳಾಗಿ ರೂಪಿಸಿ ಫ್ಯಾಬ್ರಿಕೇಟ್ ಮಾಡುವುದು ಮತ್ತೊಂದು ಸವಾಲಾಗಿತ್ತು. ಈ ಸವಾಲುಗಳನ್ನು ಎದುರಿಸಿ, ನೀಲಿ ವರ್ಣದ ಎಲ್.ಇ.ಡಿ ದೀಪಗಳನ್ನು ಆವಿಷ್ಕರಿಸುವಲ್ಲಿ ಈ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. 

ಇದರಿಂದಾಗಿ, ಸಂಗೀತ, ಚಿತ್ರಗಳು, ಮತ್ತು ಚಲನಚಿತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಈ ತಂತ್ರಜ್ಞಾನ ನೆರವಾಗಿದೆ. ಇಂದು ಎಲ್.ಇ.ಡಿ ದೀಪಗಳನ್ನು ಸ್ಮಾರ್ಟ್‌ಪೋನ್‌ಗಳು, ಟಾರ್ಚ್ ಲೈಟ್‌ಗಳು, ಇತ್ಯಾದಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಎಲ್.ಇ.ಡಿ ಯಿಂದ ಬೆಳಗುವ ಬಿಳಿಯ ಬೆಳಕು ಇತರೆ ಮೂಲಗಳಿಗಿಂತ ಹೆಚ್ಚು ಇಂಧನ-ಕ್ಷಮತೆ ಹೊಂದಿದೆ. ಟಂಗ್‌ಸ್ಟನ್ ಬಲ್ಬ್ ಸುಮಾರು ೧,೦೦೦ ಘಂಟೆ ಉರಿದರೆ, ಟ್ಯೂಬ್ ಲೈಟ್ ಸುಮಾರು ೧೦,೦೦೦ ಘಂಟೆ ಬೆಳಗಬಲ್ಲದು, ಆದರೆ ಎಲ್.ಇ.ಡಿ ದೀಪ ಸುಮಾರು ೧ ಕ್ಷ ಘಂಟೆ ಬೆಳಗಬಲ್ಲುದು. ಸೂರ್ಯ ಶಕ್ತಿಯಿಂದಲೂ ಇವುಗಳಿಗೆ ವಿದ್ಯುತ್ ಹಾಯಿಸಿ ಉರಿಸಬಹುದು. 

******

ವೈದ್ಯಕೀಯ: ಮೆದುಳಿನಲ್ಲಿ ’ಜಿಪಿಎಸ್’ ಸಿಸ್ಟಮ್!
ಶರೀರಶಾಸ್ತ್ರದ (ಅಥವಾ ವೈದ್ಯಕೀಯ) ಆವಿಷ್ಕಾರಕ್ಕೆ ಮೀಸಲಿರುವ ನೊಬೆಲ್ ಪ್ರಶಸ್ತಿಯನ್ನು ಈ ಸಲ ನಮ್ಮ ಸ್ಥಾನ ವ್ಯವಸ್ಥೆ ಕುರಿತು ತಿಳಿಯಪಡಿಸುವ ಮೆದುಳಿನಲ್ಲಿರುವ ಕೋಶಗಳ ಆವಿಷ್ಕಾರಕ್ಕಾಗಿ ನೀಡಲಾಗಿದೆ. ಲಂಡನ್‌ನ ವಿಜ್ಞಾನಿ ಜಾನ್ ಒ’ಕೀಫ್ ರವರು ಅರ್ಧ ಪ್ರಶಸ್ತಿಯನ್ನು, ಮತ್ತು ಇನ್ನರ್ಧವನ್ನು ನಾರ್ವೆಯ ವಿಜ್ಞಾನಿ ಮೇ-ಬ್ರಿಟ್ ಮೋಸರ್ ಮತ್ತು ಎಡ್ವರ್ಡ್ ಮೋಸರ್ ರವರುಗಳು ಹಂಚಿಕೊಂಡಿದ್ದಾರೆ. ಈ ಕೋಶಗಳು ನಾವು ಯಾವ ಪರಿಸರದಲ್ಲಿದ್ದೇವೆಂಬ ಕುರಿತು ನಮಗೆ ಅರಿವು ನೀಡುತ್ತವೆ ಮತ್ತು ಪಯಣ ನಡೆಸಲು ಸಾಮರ್ಥ್ಯ ನೀಡುತ್ತವೆ. ಸ್ಥಾನದ ಕುರಿತು ಅರಿವು ನೀಡುವ ಕೋಶಗಳಿಂದ ನಮಗೆ ಪರಿಸರಕ್ಕೆ ಸಂಬಂಧಿಸಿದಂತೆ ನಾವಿರುವ ಸ್ಥಾನದ ಕುರಿತು ತಿಳಿದರೆ, ಪಯಣದ ಸಾಮರ್ಥ್ಯದಿಂದಾಗಿ ಹಿಂದಿನ ಸ್ಥಾನದಿಂದ ನಮಗೆ ದಿಕ್ಕು ಮತ್ತು ದೂರದ ಅರಿವು ಉಂಟಾಗುತ್ತದೆ. ಇದನ್ನೇ ಮೆದುಳಿನಲ್ಲಿರುವ ’ಜಿಪಿಎಸ್’ ವ್ಯವಸ್ಥೆ ಎನ್ನಬಹುದು!

೧೯೪೮ರಷ್ಟು ಹಿಂದೆಯೇ ಅಮೇರಿಕಾದ ಮನೋಶಾಸ್ತ್ರಜ್ಞ ಎಡ್ವರ್ಡ್ ತೋಲ್ಮನ್ ಎಂಬಾತ ನಮ್ಮ ಮೆದುಳಿನಲ್ಲಿ ನಕ್ಷೆ ರೀತಿಯ ಪರಿಕಲ್ಪನೆ ವ್ಯವಸ್ಥೆ ಇದೆ ಎಂದು ಪ್ರತಿಪಾದಿಸಿದ್ದ. ಆದರೆ ಈ ಕಾರ್ಯಗಳನ್ನು ನಡೆಸುವ ಕೋಶಗಳು ಮೆದುಳಿನ ಯಾವ ಭಾಗದಲ್ಲಿವೆ ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಗೊತ್ತಿರಲಿಲ್ಲ. 

ಸ್ಥಳ ಕೋಶಗಳು
ವಿಜ್ಞಾನಿ ಒ’ಕೀಫ್ ನು ಮುಕ್ತವಾಗಿ ಚಲಿಸುವ ಪ್ರಾಣಿಗಳನ್ನು ಪ್ರಯೋಗಕ್ಕೆ ಬಳಸುವುದರ ಮೂಲಕ ಸ್ಥಳ ಸಂಬಂಧಿಸಿದ ಇಂದ್ರಿಯ ಕೋಶದ ಅಸ್ತಿತ್ವದ ಕುರಿತು ಪ್ರತಿಪಾದಿಸಿದನು. ಪ್ರಾಣಿಗಳು ಚಲಿಸಿದಂತೆಲ್ಲ ಅವುಗಳ ಮೆದುಳಿನ ನರಕೋಶಗಳ ಚಟುವಟಿಕೆಯಿಂದಾಗಿ ಸ್ಥಳ ಕ್ಷೇತ್ರವನ್ನು ಕಂಡುಹಿಡಿಯುವುದಕ್ಕೂ ಮತ್ತು ಸ್ಥಳ ಕುರಿತಂತೆ ಇಂದ್ರಿಯಕ್ಕೆ ಸಂಬಂಧಿಸಿದ ನರತಂತುವಿನ ಚಟುವಟಿಕೆಯನ್ನು ಅರಿಯುವುದಕ್ಕೂ ಸಾಧ್ಯವಾಯಿತು. ಮೆದುಳಿನಲ್ಲಿರುವ ಹಿಪ್ಪೊಕ್ಯಾಂಪಸ್ ಎಂಬ ಭಾಗದಲ್ಲಿ ಈ ನರ ಚಟುವಟಿಕೆಗಳಿರುವುದನ್ನು ಕಂಡುಹಿಡಿಯಲಾಯಿತು. 

ಹೀಗೆ ಮೆದುಳಿನಲ್ಲಿರುವ ಹಿಪ್ಪೊಕ್ಯಾಂಪಸ್ ಭಾಗದಲ್ಲಿ ಸ್ಥಳ ಕೋಶಗಳಿರುವುದು, ಅವುಗಳಿಂದಾಗಿ ಮೆದುಳು-ನಕ್ಷೆ ಇರುವುದು ಸಾಬೀತಾಯಿತು. ಈ ಸ್ಥಳಕೋಶಗಳು ತಮ್ಮ ಅರಿವಿಗೆ ಬರುವ ಪರಿಸರದ ವಿವಿಧ ಸ್ಥಳಗಳನ್ನು ನೆನಪಿನ ಸೆಲೆಯಲ್ಲಿ ಕ್ರೋಢೀಕರಿಸುತ್ತಾ ಇರುತ್ತವೆ.   

ಪಯಣದ ಕೋಶಗಳು
ಮೋಸರ್ ವಿಜ್ಞಾನಿಗಳು ಇನ್ನೂ ಮುಂದೆ ಹೋಗಿ, ಮೆದುಳಿನಲ್ಲಿ ಪಯಣದ ಕೋಶಗಳು (ಗ್ರಿಡ್ ಸೆಲ್‌ಗಳು) ಇರುವುದನ್ನು ಪತ್ತೆ ಹಚ್ಚಿದರು. ಸ್ಥಳ ಕೋಶಗಳು ಸ್ಥಳದ ನಕ್ಷೆಯನ್ನು ರೂಪಿಸಿದರೆ, ಗ್ರಿಡ್ ಕೋಶಗಳು ಹಾದಿಗೆ ಅನುವಾಗಲು ಪಯಣದ ವ್ಯವಸ್ಥೆಯನ್ನು ರೂಪಿಸುತ್ತವೆ. ಈ ಕೋಶಗಳು ತಲೆಯ ದಿಕ್ಕಿನ ಕೋಶಗಳು ಮತ್ತು ಗಡಿಯ ಕೋಶಗಳ ಜೊತೆಗೆ ಹೆಣೆದುಕೊಂಡಿವೆ. ಇವುಗಳ ಸಮಗ್ರ ಮತ್ತು ಐಕ್ಯ ಚಟುವಟಿಕೆಯಿಂದ ಪಯಣಕ್ಕೆ ಸಹಕಾರಿಯಾಗುತ್ತದೆ. 

ಈ ಪ್ರಯೋಗಗಳನ್ನು ಇಲಿಗಳ ಮೇಲೆ ನಡೆಸಿ ದೃಢಪಡಿಸಿಕೊಂಡಿದ್ದರೂ, ಅಂತಹ ನರಕೋಶಗಳ ವ್ಯವಸ್ಥೆಯು ಮನುಷ್ಯರನ್ನು ಒಳಗೊಂಡಂತೆ ಇತರೆ ಪ್ರಾಣಿಗಳಲ್ಲಿಯೂ ಇದೆ. ಸಸ್ತನಿಗಳು ಮತ್ತು ಸಸ್ತನಿಯೇತರ ಪ್ರಾಣಿಗಳಲ್ಲಿಯೂ ಪಯಣ ಸಾಮರ್ಥ್ಯದೊಂದಿಗೆ ಹಿಪ್ಪೊಕ್ಯಾಂಪಸ್-ರೀತಿಯ ಆಕೃತಿಯನ್ನು ಕಾಣಬಹುದಾಗಿದೆ. ಇದರಿಂದ ಬೆನ್ನೆಲುಬಿರುವ ಪ್ರಾಣಿಗಳಲ್ಲಿ ಈ ಕೋಶ ವ್ಯವಸ್ಥೆ ಮತ್ತು ಕಾರ್ಯನಿರ್ವಹಣೆಗಳು ಅಭಿವೃದ್ಧಿಗೊಳ್ಳುತ್ತಾ ಬಂದಿವೆ. 

ಮೆದುಳು ಶಸ್ತ್ರಚಿಕಿತ್ಸೆಗೊಳಪಟ್ಟ ರೋಗಿಗಳಲ್ಲಿಯೂ ಇದು ದೃಢಪಟ್ಟಿದ್ದು, ಈ ಆವಿಷ್ಕಾರದಿಂದ ಮರೆಗುಳಿತನ ಒಳಗೊಂಡಂತೆ ಹಲವು ರೋಗಗಳ ಚಿಕಿತ್ಸೆಗೆ ಸಹಕಾರಿಯಾಗುವುದು. ಮರೆಗುಳಿತನ ಇದ್ದವರಿಗೆ ಸ್ಥಳ ಮತ್ತು ಪಯಣದ ಕುರಿತು ಅರಿವು ನಶಿಸಿಹೋಗುತ್ತದೆ. 

******

ರಸಾಯನಶಾಸ್ತ್ರ: ಸೂಕ್ಷ್ಮದರ್ಶಕ ನ್ಯಾನೋದರ್ಶಕವಾದದ್ದು ಹೇಗೆ?
ವಿಜ್ಞಾನದ ಹಿರಿಮೆ ಇರುವುದು – ಮನುಷ್ಯ ಯಾವುದನ್ನು ಮಿತಿ ಎಂದುಕೊಳ್ಳುತ್ತಾನೋ ಅದನ್ನು ನಿಸರ್ಗದ ನಿಯಮವನ್ನರಿತು ಮೀರುವುದೇ ಆಗಿದೆ. ೧೭ ನೇ ಶತಮಾನದಲ್ಲಿ ಮೊದಲ ಬಾರಿಗೆ ಸೂಕ್ಷ್ಮ ದರ್ಶಕವೊಂದನ್ನು ಆವಿಷ್ಕರಿಸಿ ಅದರ ಮೂಲಕ ಕಣ್ಣಿಗೆ ಕಾಣದೇ ಇದ್ದ ಕೆಂಪು ರಕ್ತ ಕಣಗಳು, ಬ್ಯಾಕ್ಟೀರಿಯಾ, ಈಸ್ಟ್ ಕೋಶಗಳು, ಇತ್ಯಾದಿ ಸೂಕ್ಷ್ಮಾಣು ಜೀವಿಗಳನ್ನು ಕಾಣಲಾಯಿತು. ೧೮೭೩ರಲ್ಲಿ ಸೂಕ್ಷ್ಮದರ್ಶಕ ತಜ್ಞ ಅರ್ನ್ಸ್ಟ್ ಅಬ್ಬೆ ಎಂಬುವನು ಒಂದು ಸಮೀಕರಣವನ್ನು ಪ್ರಕಟಿಸಿ ಸೂಕ್ಷ್ಮದರ್ಶಕದ ಚಿತ್ರದ ಸ್ಪಷ್ಟತೆ (ಡಿesoಟuಣioಟಿ) ಗೊಂದು ಮಿತಿಯಿದ್ದು ಇದಕ್ಕೆ ಪ್ರಧಾನವಾಗಿ ಬೆಳಕಿನ ತರಂಗಾಂತರ (ಅಲೆಯಗಲ) ವೇ ಕಾರಣ ಎಂದು ಸಾಧಿಸಿದ. ಹೀಗಾಗಿ ೨೦ನೇ ಶತಮಾನದ ಪೂರಾ ವಿಜ್ಞಾನಿಗಳು ಏನೆಂದು ನಂಬಿದ್ದರೆಂದರೆ ೦.೨ ಮೈಕ್ರೋಮೀಟರ್ ಗಿಂತ ಸಣ್ಣವಿರುವ ವಸ್ತುಗಳನ್ನು ಸೂಕ್ಷ್ಮದರ್ಶಕಗಳಿಂದ ನೋಡಲು ಸಾಧ್ಯವೇ ಇಲ್ಲ ಎಂದು. ನಮ್ಮ ತಲೆಗೂದಲು ೧೦೦ ಮೈಕ್ರೋ ಮೀಟರ್ ಇದೆ. ಹೆಚ್ಚೆಂದರೆ ಕೂದಲಿಗಿಂತ ೫೦೦ ಪಟ್ಟು ಕಡಿಮೆ ಗಾತ್ರವಿರುವ ವಸ್ತುಗಳನ್ನು ನೋಡಬಹುದಾಗಿತ್ತು. ಆದರೆ ಅದಕ್ಕಿಂತಲೂ ಸಣ್ಣವಿರುವ ವೈರಸ್, ಪ್ರೋಟೀನ್, ಸಣ್ಣ ಅಣುಗಳು ಕೂದಲಿಗಿಂತಲೂ ಸಾವಿರ, ಲಕ್ಷ ಪಟ್ಟು ಕಡಿಮೆ ಗಾತ್ರ ಇವೆ. ಕೋಶದೊಳಗಿನ ಪ್ರೋಟೀನ್‌ನ್ನು ಕಾಣಬಹುದಾಗಿತ್ತೇ ಹೊರತು, ಪ್ರೋಟೀನ್ ಅಣುಗಳ ನಡುವಿನ ಅಂತರಕ್ರಿಯೆಯನ್ನು ನೋಡಲು ಸಾಧ್ಯವಿರಲಿಲ್ಲ. 

ಇದೀಗ ಅಬ್ಬೆಯ ಸಮೀಕರಣವನ್ನು ಹಿಂದಿಕ್ಕಿ, ವಸ್ತುಗಳು ಅದೆಷ್ಟೇ ಸಣ್ಣಾತಿಸಣ್ಣ ಇದ್ದರೂ ಅವುಗಳನ್ನು ನೋಡಲು ಸಾಧ್ಯವೆಂದು ನ್ಯಾನೋದರ್ಶಕವನ್ನು ಆವಿಷ್ಕರಿಸಿರುವ ಎರಿಕ್ ಬೆಟ್ಜಿಗ್, ಸ್ಟೆಫನ್ ಹೆಲ್ ಮತ್ತು ವಿಲಿಯಮ್ ಮೊಯಿರ್‍ನರ್ ಎಂಬ ಮೂವರು ವಿಜ್ಞಾನಿಗಳಿಗೆ ಈ ಸಲದ ರಸಾಯನಶಾಸ್ತ್ರದ ನೊಬೆಲ್ ಪಾರಿತೋಷಕ ನೀಡಲಾಗಿದೆ. 

ಸ್ಟೀಫನ್ ಹೆಲ್ ವಿದ್ಯಾರ್ಥಿಯಾಗಿದ್ದಾಗ ಅಬ್ಬೆ ಮಿತಿಯನ್ನು ಮೀರಿ ಮುಂದೆ ಹೋಗಬಹುದೆಂಬ ವಿಚಾರ ಹೊಳೆದಿತ್ತು. ಇದಕ್ಕಾಗಿ ಅವನು ಅದೆಷ್ಟೇ ಹೆಣಗಿದರೂ ಹಲವು ಪ್ರತಿಷ್ಟಿತ ವಿಜ್ಞಾನಿಗಳು ಇವನ ವಿಚಾರದ ಕುರಿತು ಸಂದೇಹ ವ್ಯಕ್ತಪಡಿಸಿದ್ದರು. ಪ್ಲೋರೋಸೆಂಟ್ ಅಣುಗಳನ್ನು ಬಳಸಿಕೊಂಡು ಜೀವಕೋಶವೊಂದರ ಭಾಗಗಳ ಚಿತ್ರ ಸೆರೆಹಿಡಿಯುವ ಕಾರ್ಯದಲ್ಲಿ ಮಗ್ನನಾದ. ಪ್ಲೋರೋಸೆಂಟ್ (ಅಂದರೆ ಬೆಳಕು ಸೂಸುವ ಗುಣವುಳ್ಳ) ಪ್ರತಿರೋಧಕಗಳನ್ನು ಜೀವ ಕೋಶದೊಳಗಿರುವ ಡಿಎನ್‌ಎ ಜೊತೆ ಜೋಡಿಸಲಾಯಿತು. ಬೀಜಾಣುವಿನೊಳಗಿರುವ ಡಿಎನ್‌ಎ ಜೀವಕೋಶದ ಕೇಂದ್ರದಿಂದ ಬೆಳಕನ್ನು ಸೂಸಬಲ್ಲದಿತ್ತು. ಆದರೆ ಇದರಿಂದ ಹೆಚ್ಚೆಂದರೆ ಅಣುಗಳ ಗೊಂಚಲನ್ನಷ್ಟೇ ಗುರುತಿಸಬಹುದಿತ್ತೇ ಹೊರತು ಪ್ರತಿ ಡಿಎನ್‌ಎ ತಂತುವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆ ಪರಿಹರಿಸಲು ಲೇಸರ್ ಕಿರಣವನ್ನು ಅಣುಗಳಡೆಗೆ ಹಾಯಿಸಿ ಪ್ಲೋರೋಸೆಂಟ್ ಅಣುಗಳು ಉದ್ರೇಕಗೊಳ್ಳುವಂತೆ ಮಾಡುವುದು ಮತ್ತು ನ್ಯಾನೋ ಗಾತ್ರದ (ಸಾವಿರ ಕೋಟಿಯಲ್ಲಿ ಒಂದನೇ ಭಾಗ) ವಿಧಾನವನ್ನನುಸರಿಸಿ ವಸ್ತುವೊಂದರ ಸ್ಪಷ್ಟ ಚಿತ್ರಣ ಪಡೆಯುವಲ್ಲಿ ಯಶಸ್ವಿಯಾದ. 

ಸ್ಟೀಫನ್‌ನಂತೆಯೇ ಎರಿಕ್ ಬೆಟ್ಜಿಗ್ ಕೂಡ ಅಬ್ಬೆಯ ಮಿತಿಯನ್ನು ಮುರಿಯಬೇಕೆಂದಿದ್ದ. ಇದಕ್ಕಾಗಿ ಸೂಕ್ಷ್ಮದರ್ಶಕದ ಕುರಿತು ಸಂಶೋಧನೆ ನಡೆಸಿದ್ದ. ಆದರೆ ಸಂಶೋಧನೆ ಫಲ ಕಾಣದಿದ್ದಾಗ ವೈಜ್ಞಾನಿಕ ಸಂಶೋಧನೆ ಕುರಿತು ಬೇಸತ್ತು ತಾನು ಕೆಲಸ ಮಾಡುತ್ತಿದ್ದ ಬೆಲ್ ಲ್ಯಾಬ್ಸ್‌ಗೆ ರಾಜಿನಾಮೆ ನೀಡಿದ. ಆದರೆ ಅಬ್ಬೆಯ ಮಿತಿ ತಲೆ ಕೊರೆಯುತ್ತಿತ್ತು. ಕೆಲಸ ಬಿಟ್ಟು ಅಲೆಯುತ್ತಿದ್ದಾಗ, ಅದೇ ಪ್ರಯೋಗಗಳನ್ನು ಮತ್ತೊಂದು ವಸ್ತುವನ್ನು ಬಳಸಿ ನಡೆಸಬಾರದೇಕೆ ಎಂಬ ವಿಚಾರ ಹೊಳೆಯಿತು. ಅತ್ಯುತ್ತಮ ಚಿತ್ರ ಸೆರೆಹಿಡಿಯುವಲ್ಲಿ ಕೊನೆಗೂ ಸಫಲಗೊಂಡ. 

ನ್ಯಾನೋದರ್ಶಕ ತಂತ್ರಜ್ಞಾನದಿಂದಾಗಿ ಕಳೆದ ಹತ್ತುವರ್ಷಗಳಿಂದ ಹಲವು ಮುನ್ನಡೆಗಳನ್ನು ಸಾಧಿಸಲು ಸಾಧ್ಯವಾಗುತ್ತಿದೆ. ಉದಾಹರಣೆಗೆ, ಮನುಷ್ಯನ ಮೆದುಳಿನ ನರತಂತುಗಳ ಅಧ್ಯಯನ, ಪ್ರೋಟೀನುಗಳ ಕುರಿತು ಅಧ್ಯಯನ ಭ್ರೂಣಾವಸ್ಥೆಯ ತಿಳುವಳಿಕೆಯಲ್ಲಿ ಪ್ರಗತಿ, ಇತ್ಯಾದಿ. 
-ಜೈಕುಮಾರ್. ಹೆಚ್. ಎಸ್.
ಭಾರತ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು

**********

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
prashasti.p
9 years ago

ಸಂಗ್ರಹಯೋಗ್ಯ ಲೇಖನ ಜೈಕುಮಾರ್ ಅವ್ರೆ. ಒಂದೊಳ್ಳೆಯ ಲೇಖನಕ್ಕಾಗಿ ಅಭಿನಂದನೆಗಳು 🙂

1
0
Would love your thoughts, please comment.x
()
x