ಯು.ಆರ್.ಅನಂತಮೂರ್ತಿ; ಮತ್ತೆಂದೂ ಮರಳದ ಚೇತನ: ಹೃದಯಶಿವ


ಅನಂತಮೂರ್ತಿಯವರ ಕುರಿತು ಒಂದಿಷ್ಟು ಧ್ಯಾನಿಸುವ ಸಮಯವಿದು. ಅನಂತಮೂರ್ತಿ ನಮ್ಮನ್ನು ಅಗಲಿದ್ದಾರೆ. ಬರೋಬ್ಬರಿ ಎಂಭತ್ತೊಂದು ವರ್ಷ ಬಾಳಿದ ತುಂಬುಜೀವನ ಅವರದು; ನಮಗೆಲ್ಲ ಗುರುವಿನಂತಿದ್ದರು. ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಯಾವುದಾದರು ಸಮಸ್ಯೆ ಎದುರಾದಾಗ ಅನಂತಮೂರ್ತಿ ಏನು ಹೇಳುತ್ತಾರೆ ಎಂದು ಕಾತರಿಸುತ್ತಿದ್ದೆವು. ಅವರನ್ನು ನೋಡುವುದು, ಅವರೊಂದಿಗೆ ಮಾತಾಡುವುದು ಇನ್ನು ಸಾಧ್ಯವಿಲ್ಲ. ಅವರು ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲ ನಾವು ಆತಂಕಗೊಳಗಾಗುತ್ತಿದ್ದೆವು. ಅವರಿಲ್ಲದ ಈ ಶೂನ್ಯವನ್ನು ತುಂಬಿಕೊಳ್ಳಲು ಈಗ ಸ್ವಲ್ಪ ಕಷ್ಟವಾಗುವುದಂತೂ ನಿಜ. ಅವರ ಮುಪ್ಪು, ವಿವಾದಗಳಿಂದ ಜರ್ಜರಿತವಾದ ಕವಿಮನಸು, ಟೀಕಾಕಾರರ ಮಾತುಗಳಿಂದ ನೊಂದುಹೋದ ಮುದಿಜೀವ- ಇವುಗಳೆಲ್ಲ ನಮ್ಮನ್ನು ಬಾಧಿಸದೇ ಇರಲಾರವು.  

ಆಗಷ್ಟೇ ಮಳೆ ನಿಂತು ತಣ್ಣಗಿದ್ದ ಶುಕ್ರವಾರದ ಸಂಜೆ ನಾವೆಲ್ಲಾ ಶೆರಟಾನ್ ಹೋಟೆಲಿನಲ್ಲಿ ನಾನು ಹಾಡು ಬರೆದಿದ್ದ 'ಸಾಫ್ಟ್ ವೇರ್ ಗಂಡ' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿದ್ದಾಗ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಯತಿರಾಜ್  ಅನಂತಮೂರ್ತಿ ನಿಧನದ ಸುದ್ದಿ ಪ್ರಕಟಿಸಿದಾಗ ಜಗ್ಗೇಶ್, ನಿಖಿತಾ, ಶ್ರೀನಾಥ್, ಎಚ್.ಡಿ. ಗಂಗರಾಜು ಸೇರಿದಂತೆ ಇಡೀ ಚಿತ್ರತಂಡ, ಪತ್ರಕರ್ತ ವೃಂದ, ಮಾಧ್ಯಮ ಮಂದಿ ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದೆವು. ನನ್ನ ಮನಸ್ಸು ಅಷ್ಟರಲ್ಲಿ ಮೆತ್ತಗಾಗತೊಡಗಿತ್ತು. ಬೆಳಗ್ಗೆಯಷ್ಟೇ ಟಿ.ಎನ್.ಸೀತಾರಾಮ್ ಅವರು 'ಗುರುಗಳ ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿದೆ' ಎಂದು ಫೇಸ್ ಬುಕ್ಕಿನಲ್ಲಿ ಸ್ಟೇಟಸ್ ಹಾಕಿದ್ದಾಗಾಲೇ ಆತಂಕಕ್ಕೊಳಗಾಗಿದ್ದೆ. ಆಗಾಗ ಗೂಗಲ್ ನಲ್ಲಿ, ಫೇಸ್ ಬುಕ್ ನಲ್ಲಿ ಅನಂತಮೂರ್ತಿಯವರ ಆರೋಗ್ಯ ಸುಧಾರಣೆ ಬಗ್ಗೆ ಏನಾದರೂ ಅಪ್ ಡೇಟ್ಸ್ ಬರುತ್ತಿವೆಯೇ ಅಂತ ನೋಡುತ್ತಲೇ ಇದ್ದೆ. 

ಶನಿವಾರ ಬೆಳಗ್ಗೆಯೇ ಅನೇಕರು ರವೀಂದ್ರಕಲಾಕ್ಷೇತ್ರದ ಕಡೆಗೆ ಹೊರಟಿದ್ದರು. "ನೀವೂ ಬರ್ತಾ ಇದ್ದೀರಾ?" ಅಂತ ಫೋನ್ ಮಾಡಿ ಕೇಳುತ್ತಿದ್ದರು. ಅನೇಕ ಸಾಹಿತಿಗಳು, ರಾಜಕಾರಣಿಗಳು, ಸಾಹಿತ್ಯಾಸಕ್ತರು, ಕುತೂಹಲಕ್ಕೆ ಒಳಗಾದವರು ಅನಂತಮೂರ್ತಿಯವರ ಕಟ್ಟಕಡೆಯ ದರ್ಶನಕ್ಕಾಗಿ ಹೊರಟಿದ್ದರು. ನಾನೂ ಹೊರಡಲು ರೆಡಿಯಾದೆ. ಆದರೆ ತಲೆಸಿಡಿತ, ಮೈ ಬಿಸಿ, ಧ್ವನಿಯಲ್ಲಿ ಗದ್ಗದ, ಕಣ್ಣುರಿ ಇದ್ದುದರಿಂದ ಅರ್ಧ ಗಂಟೆ ಮಟ್ಟಿಗೆ ನಿದ್ರಿಸಲು ನಿರ್ಧರಿಸಿದೆ. ರೂಮಿನ ಬಾಗಿಲು ಮುಚ್ಚಿ ತಬ್ಬಲಿಯಂತೆ ಬಿದ್ದುಕೊಂಡೆ; ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಮನಸಿನಲ್ಲೇ ಹೇಳಿಕೊಂಡೆ: ಕುವೆಂಪು ನಂತರ ನಮ್ಮನ್ನು ತಟ್ಟಿ ಎಬ್ಬಿಸುತ್ತಿದ್ದ ಲಂಕೇಶ್, ತೇಜಸ್ವಿಯನ್ನು ಯಾವತ್ತೋ ಕಳೆದುಕೊಂಡ ನಾವು ಈಗ ಇವರನ್ನೂ ಕಳೆದುಕೊಂಡೆವಲ್ಲಾ… ಅಂತ. ಆಗ ತಕ್ಷಣಕ್ಕೆ ಕೇರಳದ ಕವಿ ಕೆ.ಜಿ.ಶಂಕರಪಿಳ್ಳೆ ಹೇಳಿಕೊಂಡಿದ್ದ ಮಾತು ನೆನಪಿಗೆ ಬಂತು. ಅವರ ಅರವತ್ತು, ಎಪ್ಪತ್ತರ ದಶಕದ ಕಾವ್ಯವನ್ನು ಕುರಿತು ಸಂದರ್ಶಕನೊಬ್ಬ ಕೇಳಿದ್ದ: "ಆ ಕಾಲದ ಸಾಮಾಜಿಕ, ರಾಜಕೀಯ ಸ್ವರೂಪ ಹೇಗಿತ್ತು?". ಅದಕ್ಕೆ ಶಂಕರಪಿಳ್ಳೆ ಉತ್ತರಿಸಿದರು, "…ರಾಷ್ಟ್ರೀಯತೆ, ಸ್ವಾತಂತ್ರ್ಯ, ಸಮತ್ವ, ಪ್ರಜಾಪ್ರಭುತ್ವ, ಗ್ರಾಮಸ್ವರಾಜ್ಯ, ಪರಿಸರ, ಸ್ವಚ್ಚವಾದ ಜನಪರ ಸಾಂಸ್ಕೃತಿಕ ವ್ಯವಸ್ಥೆಗಳು, ನವೋದಯ- ಪ್ರಗತಿಶೀಲ ಚಳವಳಿಗಳು, ಹೀಗೆ ವಿಕೇಂದ್ರಿಕೃತವಾದ ಮತ್ತು ಜನಪರವಾದ ಎಲ್ಲವೂ ಸೋಲನ್ನನುಭವಿಸುತ್ತಿತ್ತು. ಆ ಕಾಲ ಮಹತ್ತರವಾದ ಎಲ್ಲ ಆದರ್ಶಗಳ ಚರಮ ಸಮಯವಾಗಿತ್ತು. ಪ್ರಜಾಪ್ರಭುತ್ವದ ಹಕ್ಕು ಮತ್ತು ಮೌಲ್ಯಗಳು ಒಂದೊಂದಾಗಿ ನಿಯಮದ ನವೀಕರಣಗಳ ಮೂಲಕ ನಿರ್ನಾಮಗೊಳ್ಳುತ್ತಿತ್ತು. ಅಧಿಕಾರ ಹೆಚ್ಚೆಚ್ಚು ಕೇಂದ್ರೀಕೃತವಾಯ್ತು. ಅದು ತನ್ನ ಭದ್ರತೆಗಾಗಿ ಸಾಂಸ್ಕೃತಿಕ ವಿಚ್ಚೇದಗಳನ್ನು ಪ್ರಚೋದಿಸಿತು. ಜಾತಿ, ವಂಶ, ಪಂಗಡ, ಮೂಲಭೂತವಾದ, ಭಯೋತ್ಪಾದಕತೆ ಮತ್ತು ಉಪಭೋಗ ಆಸಕ್ತಿಗಳನ್ನು ಅದು ಪ್ರಚೋದಿಸಿತು." ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿ ಆ ಕಾಲಮಾನದಲ್ಲಿಯೇ ಅಂದರೆ 1965ರಲ್ಲೇ ರಚನೆಯಾಗಿದ್ದನ್ನು ಇಲ್ಲಿ ಗಮನಿಸಬೇಕು. 

ಶ್ರೇಷ್ಠ ಸಾಹಿತಿಯ ಬರಹಕ್ಕೆ ಬದುಕೂ, ಬದುಕಿಗೆ ಬರಹವೂ ಪರಸ್ಪರ ಕನ್ನಡಿಯಾಗಿರಬೇಕು. ಅನಂತಮೂರ್ತಿಯವರ ಬಗ್ಗೆ ಯೋಚಿಸಿದಾಗಲೆಲ್ಲಾ ಈ ಮಾತು ಕಾಡುತ್ತದೆ. 1932ರಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ ಅನಂತಮೂರ್ತಿ ತಮ್ಮ ಆರಂಭಿಕ ಶಿಕ್ಷಣದಲ್ಲಿ ಸಾಂಪ್ರದಾಯಿಕ ಸಂಸ್ಕೃತವನ್ನು ಅಭ್ಯಸಿಸಿದ್ದರು. ಮನುಷ್ಯನೇ ಹುಟ್ಟೇ ನಿಜಕ್ಕೂ ಚೋದ್ಯ; ಅಲ್ಲಿಯ ಮಲೆನಾಡು, ಸುತ್ತಲ ಹಸಿರ ಸಿರಿ, ಮಳೆಯ ನಡುವಿನ ಸೂರ್ಯನ ಕಿರಣ, ಹಗಲಿರುಳುಗಳ ನಡುವೆ ಅರಳಿಕೊಳ್ಳುವ ಲೋಕ, ಇದಕ್ಕೆ ಕಾರಣವಾಗಿರಬಹುದಾದ ಆ ಸುಪ್ರೀಂ ಎನರ್ಜಿ, ಇವೆಲ್ಲವೂ ಎಳೆಯ ಸಸಿಯಂಥ ಮನಸಿನ ಮೇಲೆ ಅಚ್ಚೊತ್ತುವ ಪರಿ, ಬೀರುವ ಪ್ರಭಾವ- ನಿಜಕ್ಕೂ ಅದ್ಭುತ. ಧರ್ಮ, ದೇವರ ಬಗ್ಗೆ ಧ್ಯಾನಿಸುವ ಕುಟುಂಬದಲ್ಲಿ ಹುಟ್ಟಿದ ಅನಂತಮೂರ್ತಿ ಸಕಲವನ್ನೂ ಗಮನಿಸುತ್ತಾ ತಮ್ಮ ಜಾತಿಯಲ್ಲಿನ, ಆಚರಣೆಯಲ್ಲಿನ, ಶ್ರೇಷ್ಠತೆಯಲ್ಲಿನ ಕುರಿತಾಗಿ ಗ್ರಹಿಸಿದ ಸೂಕ್ಷ್ಮಗಳು, ಆಚಾರವಿಚಾರಗಳ ಕುರಿತಂತೆ ಅವರಲ್ಲಿ ಉಂಟಾಗುತ್ತಿದ್ದ ದ್ವಂದ್ವ, ಜಿಜ್ಞಾಸೆ ಎಂಥವರಿಗೂ ಕುತೂಹಲ ಮೂಡಿಸುತ್ತದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಅದೆಷ್ಟೋ ಇತರ ಸಾಹಿತಿಗಳಿಗೆ ದಕ್ಕದ ಅವಲೋಕನ ಗುಣ, ವಿಮರ್ಶಾ ನೋಟ ಇವರಿಗೆ ದಕ್ಕಿತ್ತು ಎಂಬುದಂತೂ ಸತ್ಯ. ಅನಂತಮೂರ್ತಿಯವರ ವಿಕಸನದಲ್ಲಿ ಈ ಅಂಶದ ಪಾತ್ರ ಹಿರಿದೂ, ಅನಂತವಾಗಿ ಹಬ್ಬಿಕೊಳ್ಳಲು ಸಾಧ್ಯವಾಗಿದ್ದು, ಪರಿಧಿಗಳನ್ನು ದಾಟಿ ಚಿಂತಿಸಬಲ್ಲ, ಬರೆಯಬಲ್ಲ, ಬದುಕಬಲ್ಲ ತನಕ್ಕೆ ಬೀಜವಾಗಿದ್ದೂ ಇದರ ವೈಶಿಷ್ಟ್ಯ. 

ಅನಂತಮೂರ್ತಿ ನೇರವಾಗಿ, ಧೈರ್ಯವಾಗಿ ಜಾತೀಯತೆ, ಧರ್ಮಾಂಧತೆ, ಮೂಢತನದ ಬಗ್ಗೆ ಧ್ವನಿ ಎತ್ತಿದ್ದಾರೆ. ನಾಲ್ಕು ದಶಕಗಳ ಹಿಂದೆಯೇ ನಿಷ್ಠುರವಾಗಿ ಬರೆದಿದ್ದಾರೆ; ಇಂದಿಗೂ ಅದು ಪ್ರಸ್ತುತ. "ಆಧುನಿಕರಾಗಿಬಿಟ್ಟ ನಮ್ಮಂಥವರು ಹುಡುಕುತ್ತಿರುವುದು ದೇವರು ಎಂಬ ಒಂದು ವಿಶಿಷ್ಟ ಸೃಷ್ಟಿಕರ್ತನ ಅಗತ್ಯವಿಲ್ಲದಂತೆ ಆಧ್ಯಾತ್ಮಿಕವಾದ ಬೆರಗಿನಲ್ಲಿದ್ದೇ, ಮನಸ್ಸಿನ ಅಲ್ಪ ಸಮಾಧಾನಕ್ಕಾಗಿ ಈ ಬೆರಗನ್ನು ವಿವರಣೆಗಳಲ್ಲಿ ಸರಳಗೊಳಿಸಿಕೊಳ್ಳದೇ ಜಗತ್ತಿನ ಸೃಷ್ಟಿಗೆ ಎದುರಾಗುವುದು. ಗೌತಮ ಬುದ್ಧ ಇದರಲ್ಲಿ ನಮಗೆ ಆಪ್ತ" ಅಂದಿದ್ದರು ಅನಂತಮೂರ್ತಿ. ಅವರಿಗೆ ಆ ಕಾಲದ ಜಾತಿವ್ಯವಸ್ಥೆ ಅಸಹನೀಯವಾಗಿ ಕಂಡಿದೆ; ಜಡ ನಂಬಿಕೆಗಳ ಮೇಲೆ ಸಿಟ್ಟಿದೆ. ಅವರು ಲೇಖನವೊಂದರಲ್ಲಿ ಬರೆಯುತ್ತಾರೆ: "ಸಾಚಾ ಜಾತಿವಂತ ಇವತ್ತಿನ ಆಧುನಿಕ ಪ್ರಪಂಚದಲ್ಲಿ ಗೊಡ್ದಾಗಿರುತ್ತಾನೆ. ಆದರೆ ಅವನ ನೈತಿಕ ಪ್ರಜ್ಞೆ ಎಷ್ಟೇ ದೋಷಪೂರಿತವೆನ್ನಿಸಿದರೂ ಸ್ಪಷ್ಟವಾಗಿ ದಿಟ್ಟವಾಗಿ ಅವನ ಜಾತಿಯಿಂದ ಅವನಿಗೆ ಅದು ಬಂದಿರುತ್ತದೆ"

ಅನಂತಮೂರ್ತಿ ವೈದಿಕ ಜಗತ್ತನ್ನು, ಅದರ ಆಚಾರವಿಚಾರಗಳನ್ನು ಚಿಕಿತ್ಸಕ ನೋಟದಿಂದ ವಿಮರ್ಶಿಸುವ ಸಾಹಸಕ್ಕೆ ಕೈಹಾಕಿದರು. ಸ್ವಂತ ಜಾತಿಯವರನ್ನೇ ಎದುರುಹಾಕಿಕೊಂಡು ಅವರ ದೂಷಣೆಗೆ ಗುರಿಯಾದರು. ಅನಂತಮೂರ್ತಿಯವರೊಳಗಿನ ಜಾತಿಯಾಚೆಗಿನ ಚಿಂತಕ ಮಾತಾಡಹತ್ತಿದ್ದ; ದೈನಂದಿನ ಕುತೂಹಲಗಳ ಜೊತೆಗೆ ಏಕದಿಂದ ಅನೇಕದೆಡೆಗಿನ ಧ್ಯಾನ, ಬಹುಮುಖಿ ನೋಟ, ಭಾವಾಂತರಂಗವನ್ನು ಪರಿಣಾಮಕಾರಿಯಾಗಿ ಸಮನ್ವಯಗೊಳಿಸುವ ಪರಿ, ಕಥನದೊಳಗೆ ಕಾವ್ಯವನ್ನು ಮಿಳಿತಗೊಳಿಸುವ ಕಲೆ ಅವರಿಗೆ ಕರಗತವಾಗಿತ್ತು. ಅನಂತಮೂರ್ತಿಯವರ ಆಸಕ್ತಿ, ಓದಿನ ವಿಸ್ತಾರ, ಲೋಕ ಸುತ್ತಾಟದ ವ್ಯಾಪ್ತಿ, ಒಡನಾಡುವ ವ್ಯಕ್ತಿಗಳು ಗಮನಿಸಬೇಕಾದುದ್ದು. ಸಾಮಾಜಿಕ ಏರುಪೇರು, ರಾಜಕೀಯ ತಲ್ಲಣ, ಧಾರ್ಮಿಕ ಸಂಗತಿಗಳು, ಪಾಶ್ಚ್ಯಾತ್ಯ ಸಾಹಿತ್ಯ, ಪರಿಸರವಾದ, ಕಾವೇರಿ ಬಗೆಗಿನ ನಿಲುವು, ಗೋಮಾಂಸ ಕುರಿತ ಧೋರಣೆ, ನರೇಂದ್ರ ಮೋದಿ ಬಗೆಗಿನ ನಿಲುವು; ಇವೆಲ್ಲದರ ಬಗ್ಗೆ ಚಿಂತಿಸುವ, ಬರೆಯುವ, ಹೇಳಿಕೆ ನೀಡುವ ಪ್ರಾಮಾಣಿಕ ಪ್ರಯತ್ನ ಅವರದು.  

ಅನಂತಮೂರ್ತಿಯವರ ಒಟ್ಟು ಬದುಕಿನಲ್ಲಿ ನಮ್ಮನ್ನು ಆಕರ್ಷಿಸುವುದು- ತನ್ನೊಳಗಿನ ಜಗತ್ತನ್ನು, ತನ್ನ ಸುತ್ತಲಿನ ಜಗತ್ತನ್ನು, ಪರಾಮರ್ಶೆಗೊಳಪಡಿಸುವ, ವಿಮರ್ಶೆಗೊಡ್ಡಿಕೊಳ್ಳುವ ಅದ್ಭುತ ಬೆಳವಣಿಗೆ. ಮಳೆ, ಹಸಿರ ನಡುವೆ ಅನಂತಮೂರ್ತಿ ಹುಟ್ಟಿದ ಕಾಲದಲ್ಲಿ ಈ ದೇಶ ಸಾಮಾಜಿಕವಾಗಿ ಅಸಮಾನತೆಯಿಂದಲೂ, ಧಾರ್ಮಿಕವಾಗಿ ಅಂಧತ್ವದಿಂದಲೂ, ಶೈಕ್ಷಣಿಕವಾಗಿ ಹಿಂದೆಯೂ ಉಳಿದಿತ್ತು. 'ಸಂಸ್ಕಾರ'ದ ಹೊತ್ತಿಗೆ ಅಂದರೆ ಅನಂತಮೂರ್ತಿ ಮೂವತ್ತರ ಗಡಿ ದಾಟುವಷ್ಟರಲ್ಲಿ ಅವರಿಗಿದು ಗೊತ್ತಾಯಿತು. ಧರ್ಮವೇ ಮನುಕುಲಕ್ಕೆ ವೈರಿಯಾಗಿ ಪರಿಣಮಿಸಿರುವುದು, ಜಾತಿಯೆಂಬ ರಾಕ್ಷಸ ಮನಸುಮನಸುಗಳ ನಡುವೆ ಬೇಲಿಯಾಗಿ ನಿಂತಿರುವುದು ಇವರ ಅರಿವಿಗೆ ಬಂತು. ಆದ್ದರಿಂದಲೇ ಅನಂತಮೂರ್ತಿ ಸಮಾಜದ ವಿರುದ್ಧ ದಿಕ್ಕಿನಲ್ಲಿ ಈಜುವ ಪಣತೊಟ್ಟಿದ್ದು. ವಿವಾದಗಳ ಮೇಲೆ ವಿವಾದಗಳನ್ನು ಮೇಲೆಳೆದುಕೊಂಡು ಛಲಬಿಡದ ಜಟ್ಟಿಯಂತೆ ಆತ್ಮಕ್ಕೆ ಸತ್ಯ ಅನ್ನಿಸಿದ್ದನ್ನು ಮುಚ್ಚುಮರೆಯಿಲ್ಲದೆ ಬರೆಯುತ್ತಾ ಸಾಗಿದ್ದು. ಆ ಮೂಲಕ ಆಯಾಯಾ ಕಾಲವನ್ನು ಚರಿತ್ರೆಯ ಪುಟಗಳಲ್ಲಿ ಸ್ಥಿರವಾಗಿ ದಾಖಲಿಸುತ್ತಾ ಹೋಗಿದ್ದು. 

ತಮ್ಮನ್ನು ಕುವೆಂಪು ಮುಂದುವರಿಕೆ ಎಂದು ಹೇಳಿಕೊಳ್ಳುವ ಅನಂತಮೂರ್ತಿ ಸ್ವತಃ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ್ದರೂ ಪುರೋಹಿತಶಾಹಿಯನ್ನು, ಜಾತಿಪದ್ಧತಿಯನ್ನು ಕಟುವಾಗಿ ವಿರೋಧಿಸುತ್ತಾರೆ. ಆ ವಿರೋಧವನ್ನು ತಮ್ಮ ಕಥೆ, ಕಾದಂಬರಿಯ ಪಾತ್ರಗಳ ಮೂಲಕ, ಸನ್ನಿವೇಶಗಳ ಮೂಲಕ, ಕವಿತೆ, ಲೇಖನ, ಪ್ರಬಂಧಗಳ ಮೂಲಕ ವ್ಯಕ್ತಪಡಿಸುತ್ತಾರೆ. ಅನಂತಮೂರ್ತಿ ತಮ್ಮ ಇಡೀ ಜೀವನದುದ್ದಕ್ಕೂ ವರ್ತಮಾನವನ್ನು ದಾಖಲಿಸುವ, ರಾಜಕೀಯವಾಗಿ ವಿಮರ್ಶಿಸುವ, ಸಾಹಿತ್ಯಿಕವಾಗಿ ಚಿಂತಿಸುವ, ಸಾಂಸ್ಕೃತಿಕವಾಗಿ ಚರ್ಚಿಸುವ ಪರಿಪಾಠ ರೂಢಿಸಿಕೊಂಡಿದ್ದ ಅಪರೂಪದ ವ್ಯಕ್ತಿ. ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾವುದನ್ನು ವಿರೋಧಿಸಿದ್ದ ಇವರನ್ನು ಟಿವಿ ಸಂದರ್ಶಕನೊಬ್ಬ "ಪದೇ ಪದೇ ವಿವಾದಗಳನ್ನೇಕೆ ಮೈ ಮೇಲೆ ಎಳೆದುಕೊಳ್ಳುತ್ತೀರಿ?" ಎಂದು ಕೇಳಿದ್ದ. ಅದಕ್ಕೆ ಹೀಗನ್ನುತ್ತಾರೆ: "ಈ ವಿವಾದಗಳು ಇವತ್ತಿನದಲ್ಲ. ನಾನು ಬರೆಯಲು ಶುರುಮಾಡಿದಾಗಿನಿಂದಲೂ ಈ ವಿವಾದಗಳು ನನಗೆ ಅಂಟಿಕೊಂಡಿವೆ. ನಾನು ಇವುಗಳಿಗೆ ಹೆದರುವವನಲ್ಲ. ಕಾಲವನ್ನು ದಾಖಲಿಸುವುದಷ್ಟೇ ನನ್ನ ಕೆಲಸ."

ಈ ಕಾರಣದಿಂದಲೇ ಅನಂತಮೂರ್ತಿಯವರನ್ನು ಕೇವಲ ವಿವಾದಿತ ವ್ಯಕ್ತಿ, ನಿಷ್ಠುರ ಮಾತುಗಾರ ಎಂದು ಟೀಕಿಸುವವರು ಅನಂತಮೂರ್ತಿಯವರ ಆಂತರ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಎಡವುತ್ತಾರೆ. ಅವರ ಒಟ್ಟು ಕೃತಿಗಳ ಆಶಯವನ್ನು, ಅವರೊಳಗಿನ ಅದ್ಭುತ ಕಥನಕಾರನನ್ನು, ಸೃಜನಶೀಲ ಬರಹಗಾರನನ್ನು, ಸಂವೇದನಾಶೀಲ ಕವಿಯನ್ನು, ಪ್ರಾಮಾಣಿಕ ಚಿಂತಕನನ್ನು ಆಳವಾಗಿ ಅರಿತುಕೊಳ್ಳದೆ ಕೇವಲ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಪ್ರಕಟವಾದ, ಅವರಿವರ ಬಾಯಿಗಳಲ್ಲಿ ಕೇಳಿಬಂದ ಸುದ್ಧಿಯನ್ನಷ್ಟೇ ಅವಲಂಬಿಸಿ, ಆಧರಿಸಿ, ಮೇಲ್ಮೇಲೆ ಗ್ರಹಿಸಿ ಮಹಾನ್ ಚತುರರಂತೆ ಮಾತಾಡುತ್ತಾರೆ. ಧರ್ಮದ ಗುತ್ತಿಗೆದಾರರಂತೆ ನಾಲಿಗೆ ಬೆಳೆಸುತ್ತಾರೆ. ಅವರು ಸತ್ತಾಗ ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ತಮ್ಮ ವಿಕೃತ ಮನಸ್ಥಿತಿಯನ್ನು ತೆರೆದಿಡುತ್ತಾರೆ. ಅನಂತಮೂರ್ತಿ ಬ್ರಾಹ್ಮಣ ವಿರೋಧಿಯೂ ಅಲ್ಲ, ಶೂದ್ರದ ಪರರೂ ಅಲ್ಲ, ನಿಂತಲ್ಲೇ ನಿಂತ ಸಮಾಜಕ್ಕೆ ಚಲನೆ ನೀಡಬಯಸಿದ, ಜಡ್ಡುಗಟ್ಟಿದ ಸಿದ್ಧಾಂತಗಳಿಗೆ ಪಾಲಿಶ್ ಕೊಡಲಿಚ್ಚಿಸಿದ, ಅಂಧ ಧಾರ್ಮಿಕ ನಿಲುವುಗಳಿಗೆ ಕಣ್ಣು ತೊಡಿಸಲು ಆಶಿಸಿದ, ಸಾಮಾಜಿಕ ಸಮತೆಗಾಗಿ, ರಾಜಕೀಯ ಪಾರದರ್ಶಕತೆಗಾಗಿ ತುಡಿಯುತ್ತಿದ್ದ ಮನಸು ಅವರದ್ದು. ಅಲ್ಲಿಯೇ ಅನಂತಮೂರ್ತಿ ಪ್ರತಿಫಲಿಸುವುದು. 

ಅವರ 'ಘಟಶ್ರಾದ್ಧ', 'ಕಾರ್ತೀಕ' ಕಥೆಗಳಲ್ಲಿನ ವಿಶಿಷ್ಟ ಒಳನೋಟ ಇವತ್ತಿಗೂ ಬೆರಗು ಮೂಡಿಸುತ್ತದೆ; ಅವರ 'ಪ್ರಶ್ನೆ'ಯಲ್ಲಿನ ಸಂವೇದನೆ 'ಪಚ್ಚೆ ರೆಸಾರ್ಟ್'ನ ಭಾಗೇರತಿಯ ಪಾತ್ರಚಿತ್ರಣ, ಭಾವುಕತೆ ಅನಂತಮೂರ್ತಿಯವರ ಗಾಂಭೀರ್ಯತೆಯ ನೆಲೆಯನ್ನು ಪರಿಚಯಿಸಿಕೊಡುತ್ತವೆ. ಒಮ್ಮಿಂದೊಮ್ಮೆಲೇ ಗಾಂಧಿ, ಲೋಹಿಯಾ, ಅಂಬೇಡ್ಕರ್, ಅಡಿಗರು, ಶೇಕ್ಸ್ ಪಿಯರ್, ಯೇಟ್ಸ್, ಟಾಯ್ನ್ ಬಿ, ಸೈಮನ್ ಬಗ್ಗೆ ಚಿಂತಿಸುವ ಅನಂತಮೂರ್ತಿ, 'ಸೂರ್ಯನ ಕುದುರೆ'ಯ ಹಡೆ ವೆಂಕಟನನ್ನು ಚಿತ್ರಿಸುವಾಗಿನ ಕಲೆಗಾರಿಕೆ ಮತ್ತು ಆ ಕತೆಯಲ್ಲಿನ ಅನೇಕ ಚಿತ್ರವತ್ತಾದ ಪ್ರಸಂಗಗಳು- ಎಲ್ಲವೂ ಅನಂತಮೂರ್ತಿಯವರ ಅವಲೋಕಿತ ಜಗತ್ತಿನ ವಿವಿಧ ಮುಖಗಳು. ಅವರ 'ಅಜ್ಜನ ಹೆಗಲ ಸುಕ್ಕುಗಳು' ಅಷ್ಟೇ. ವಿಚಿತ್ರ ಚಿಂತನೆಗೆ ಹಚ್ಚುವ ಅಲ್ಲಿಯ ಕವಿತೆಗಳು ಆಧುನಿಕ ಕನ್ನಡ ಕಾವ್ಯಸಂದರ್ಭದಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ; ಕಥೆಗಳಲ್ಲಿ ಕಾವ್ಯದ ಸೆಲೆಯನ್ನು ತರುವ ಅನಂತಮೂರ್ತಿಯವರ ಕಾವ್ಯಕಲೆ ಇಲ್ಲಿನ ಕವಿತೆಗಳಲ್ಲಿ ಸಮರ್ಥವಾಗಿ, ಧ್ವನಿಪೂರ್ಣವಾಗಿ ಅನಾವರಣಗೊಳ್ಳುತ್ತದೆ.

ಅನೇಕ ಕತೆಗಳು, ಐದು ಕಾದಂಬರಿಗಳು, ಒಂದು ನಾಟಕ, ಮೂರು ಕವನಸಂಕಲನಗಳು, ಒಂದಿಷ್ಟು ವಿಮರ್ಶಾಬರಹಗಳು, ಚಿಂತನಪರ ಬರಹಗಳು, ಸಾಕಷ್ಟು ಅನುವಾದಗಳು ಎಂದು ಅನಂತಮೂರ್ತಿಯವರ ಪುಸ್ತಕಗಳ ಕುರಿತು ಲೆಕ್ಕ ಹಾಕುವ ಮಂದಿಗೆ ಅವರ ಧಾರ್ಮಿಕ ನಿಲುವು, ಆಧ್ಯಾತ್ಮದ ಒಳಬೆಳಕು, ರಾಜಕೀಯ ಪ್ರಜ್ಞೆ, ಸಾಮಾಜಿಕ ಹಿತಾಸಕ್ತಿ, ಜಾತ್ಯಾತೀತ ಗುಣ, ನಿಷ್ಠುರವಾದದ ಉದ್ದೇಶ, ಮುಕ್ತ ಬದುಕಿನ ಆಶಯ, ಸಂವೇದನಾಶೀಲ ಗುಣ, ಬಹುಮುಖತೆಯೆಡೆಗಿನ ತುಡಿದ ಗಮನಕ್ಕೆ ಬರಲಿಕ್ಕಿಲ್ಲ. ಅವರಿಗಿಂತಲೂ ದೊಡ್ಡ ಕವಿ, ಕಥನಕಾರರಿದ್ದರೂ ಅನಂತಮೂರ್ತಿಯವರಷ್ಟು ಸಾಮಾಜಿಕವಾಗಿ ಬದುಕಿದ, ರಾಜಕೀಯವಾಗಿ ಚರ್ಚಿಸಿದ, ಅಷ್ಟೇ ಪ್ರಮಾಣದಲ್ಲಿ ವಿವಾದಕ್ಕ್ಕೆ ಗುರಿಯಾದ ಇನ್ನೊಬ್ಬ ಸಾಹಿತಿ ಕುವೆಂಪು, ಕಾರಂತ, ಲಂಕೇಶ್, ತೇಜಸ್ವಿ, ಅಡಿಗರ ನಂತರ ಕನ್ನಡದಲ್ಲಿ ಸಿಗಲಾರ. ಜ್ಞಾನಪೀಠ ಪುರಸ್ಕಾರ, ಪದ್ಮಭೂಷಣ, ನಾಡೋಜ, ರಾಜ್ಯೋತ್ಸವ ಪ್ರಶಸ್ತಿ- ಇನ್ನಿತರೇ ಯಾವುದೇ ಪ್ರಶಸ್ತಿಗಳು ಇವರಿಗೊಲಿದಿದ್ದರೂ, ಇವುಗಳಾಚೆಯ ಇವರ ಬದುಕು, ಬರಹ, ಚಿಂತನೆ, ನೇರ ನಡೆ, ದಿಟ್ಟ ವ್ಯಕ್ತಿತ್ವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುವಥದ್ದು. ಅನೇಕ ಸಾಹಿತಿಗಳು ಮುಂದೆಯೂ ಕನ್ನಡದಲ್ಲಿ ಬರಬಹುದು, ಅನಂತಮೂರ್ತಿ ಮತ್ತೆಂದೂ ಬರಲು ಸಾಧ್ಯವಿಲ್ಲ.  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಸತ್ಯವಾದ ಮಾತುಗಳು
ಧನ್ಯವಾದಗಳು ಹೃದಯಶಿವ.

ಅಂದ ಹಾಗೆ ಸಾಫ್ಟ್ ವೇರ್ ಗಂಡ
ಬಹುಪಾಲು ಚಿತ್ರಿಕರಿಸಿದ್ದು ಸಾಗರ ಸುತ್ತ-ಮುತ್ತ.

hridayashiva
hridayashiva
9 years ago

yes sir

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಶ್ರೀಯುತ ಯು.ಆರ್. ಅನಂತಮೂರ್ತಿಯವರಿಗೆ ಸಲ್ಲಿಸಿದ ನುಡಿ ನಮನ ಮತ್ತು ಅವರ ವ್ಯಕ್ತಿತ್ವದ ಕುರಿತು ಬರೆದದ್ದು ಬಹಳ ಇಷ್ಟವಾಯ್ತು. ಅವರ "ಸಂಸ್ಕಾರ" ಓದಿದ್ದು ಹದಿನೈದು ವರ್ಷದ ಹಿಂದೆ…  ಅದನ್ನು ಅವರು  ಬರೆದದ್ದು ಇನ್ನೂ ಓದುತ್ತಿದ್ದ ಕಾಲದಲ್ಲಿಯಾದರೂ  ಜಾತಿ ಪದ್ಧತಿ, ಸಂಪ್ರದಾಯದ ಹೆಸರಲ್ಲಿ ನಡೆವ ಅನಾಚಾರಗಳನ್ನು ಖಂಡಿಸಿ ಬರೆದದ್ದು ಇವತ್ತಿಗೂ ಪ್ರಸ್ತುತ.

hridayashiva
hridayashiva
9 years ago

ಅವರ ಒಟ್ಟು ಸಾಹಿತ್ಯ ನನಗಿಷ್ಟ…

prashasti.p
9 years ago

ಚೆನ್ನಾಗಿದೆ ಹೃದಯಶಿವರೇ..

hridayashiva
hridayashiva
9 years ago
Reply to  prashasti.p

ಧನ್ಯವಾದ ಪ್ರಶಸ್ತಿಯವರೇ…

6
0
Would love your thoughts, please comment.x
()
x