ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಡಗಿರುವ ರಾಜಕೀಯ…! : ನಂದಿಕೇಶ್. ಬಾದಾಮಿ

        

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರೆಂದು ಪಿಂಚಣಿ ಪಡೆಯುತ್ತಿರುವವರ ವಿವರವನ್ನು ಗಮನಿಸಿದರೆ, ಕಲೆಯ ಗಾಳಿ;ಗಂಧ ಗೊತ್ತಿರದವರೆ ಬಹುಪಾಲು ಆ ಪಟ್ಟಿಯಲ್ಲಿ ತುಂಬಿಕೊಂಡಿದ್ದಾರೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕ/ಕಿ ಪ್ರಶಸ್ತಿ ಪಡೆದವರ ವಿವರವನ್ನು ಪರಿಶೀಲಿಸಿದರೆ ಅದರಲ್ಲೂ ಕೂಡಾ ರಾಜಕೀಯ ದುರ್ವಾಸನೆಯ ಘಾಟು ಮೂಗಿಗೆ ಅಮರಿಕೊಳ್ಳುತ್ತದೆ. ಇನ್ನು ಬಹುತೇಕ ಪ್ರಶಸ್ತಿ ಪುರಸ್ಕಾರಗಳಂತೂ ರಾಜಕೀಯ ಕರಿನೆರಳಿನಲ್ಲಿಯೇ ವಿತರಣೆಯಾಗುತ್ತಿವೆ. ಮೊನ್ನೆಮೊನ್ನೆಯಷ್ಟೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪನವರು, ’ಜ್ಞಾನಪೀಠ’ ಒಂದು ನಾನ್‌ಸೆನ್ಸ ಪ್ರಶಸ್ತಿ ಎಂದರು, ಡಾ. ಎಂ. ಎಂ ಕಲಬುರ್ಗಿಯವರು ’ಬಸವ ಈಜ್ ಎ ನಾನ್‌ಸೆನ್ಸ್ ಫಿಲಾಸಫರ್’ ಎಂದರು ಈ ಇರ್ವರ ಹೇಳಿಕೆಗಳ  ಹಿಂದಿರುವ ವಾಸ್ತವ ಜಗಜ್ಜಾಹಿರಾಯಿತು. ಒಟ್ಟಾರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಇಲ್ಲಿಯವರೆಗೆ ಬೂದಿ ಮುಚ್ಚಿದ ಕೆಂಡದಂತಿದ್ದ ರಾಜಕೀಯ ಇಗೀಗ ತನ್ನೆಲ್ಲ ಮಗ್ಗಲುಗಳನ್ನು ತೆರೆದುಕೊಳ್ಳುವದರೊಂದಿಗೆ ತೆರೆಸಿಕೊಳ್ಳುತ್ತಿದೆ. 

ಪ್ರಶಸ್ತಿ, ಪುರಸ್ಕಾರ, ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ ಲಾಭ ಪಡೆಯುವ ದುರಾಸೆಯಿಂದ ಅನೇಕರು ಬದ್ಧತೆಯನ್ನು ಬದಿಗೊತ್ತಿ, ತೆರೆಯ ಮರೆಯಲ್ಲಿ ಏನೆಲ್ಲ ರಾಜಿಮಾಡಿಕೊಂಡು, ನೆರೆಯವರಿಗೆ ಮತ್ತು ಸ್ನೇಹಿತರಿಗೆ ಯಾವ ಲಾಬಿಮಾಡದೆ ನನಗೆ ಪ್ರಶಸ್ತಿ, ಪುರಸ್ಕಾರ, ಹಾರ, ತುರಾಯಿ, ಅಭಿನಂದನೆಗಳು ಸಂದಿವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಹೀಗೆ ಕೊಚ್ಚಿಕೊಂಡವರೆಲ್ಲ ಒಂದು ದಿನ ನಿಚ್ಚಳವಾಗಿ ನುಚ್ಚುನೂರಾಗುತ್ತಾರೆ. ಕೆಲವರು ತಮ್ಮದೆಲ್ಲವೂ ಮುಚ್ಚಿಕೊಂಡಿದೆ ಎಂದು ನೆಚ್ಚಿಕೊಂಡಿದ್ದಾರೆ. ಇಲ್ಲಿ ಎನನ್ನೂ ಮುಚ್ಚಿಡಲು ಸಾಧ್ಯವಿಲ್ಲ, ಎಲ್ಲವೂ ಒಂದಿಲ್ಲಾ ಒಂದು ದಿನ ಬಿಚ್ಚಿಕೊಂಡು ಬಕ್‌ಬರ್‍ಲೆ ಬೀದಿಗೆ ಬಿದ್ದು ಬಟಾಬಯಲಾಗುತ್ತದೆ.  

ಸರಕಾರ ಶಾಲಾ ಸುಧಾರಣಾ ಸಮಿತಿ(ಎಸ್‌ಡಿಎಂಸಿ)ಯನ್ನು ಜಾರಿಗೆ ತಂದ ಮೇಲೆ ಮರಿ ರಾಜಕಾರಣಿಗಳೆಲ್ಲ ಸಮೀತಿ ಸದಸ್ಯರಾಗಿ, ಶಾಲೆಯೊಳಗೆ ನುಗ್ಗಿ ಶಿಕ್ಷಕರನ್ನ ಮತ್ತು ಶಾಲಾ ವ್ಯವಸ್ತೆಯನ್ನ ಹಿಗ್ಗಾಮುಗ್ಗಾ ಮಾಡಿರುವದು ಪ್ರಾಯಶಃ ತಮಗೆಲ್ಲ ಗೊತ್ತಿದೆ. ಸರಕಾರದ ಧನಸಹಾಯ ಬರುವ ಪರಿಷತ್ತು, ಅಕಾಡೆಮಿ, ಪ್ರಾಧಿಕಾರ ಮುಂತಾದಡೆ ಅರ್ಹ ಕವಿ ಸಾಹಿತಿ ಕಲಾವಿದರನ್ನು ಹಿಂದಿಕ್ಕಿ ಸ್ವಯಂಘೋಷಿತ ಕವಿ ಸಾಹಿತಿ ಕಲಾವಿದರು ಅರ್ಥಾತ್ ರಾಜಕಾರಣಿಗಳು ಕುರ್ಚಿ ಅಲಂಕರಿಸುವ ಪರಂಪರೆ ಈಗಾಗಲೇ ಅಲ್ಪಸ್ವಲ್ಪ ಜಾರಿಯಲ್ಲಿದೆ. ಮುಂಬರುವ ದಿನಮಾನಗಳಲ್ಲಿ ಎಲ್ಲವೂ ರಾಜಕೀಯಮಯಗೊಂಡರೆ ನಾವು ನೀವು ಅಚ್ಚರಿ ಪಡಬೇಕಿಲ್ಲ. ಕೆಲ ಅದಕ್ಷ ಜಿಲ್ಲಾ/ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ತಮಗೆ ಬೇಕಾದವರಿಗೆ, ಬಾಲಾಬಡುಕರಿಗೆ ಅಥವಾ ಸ್ವಜಾತಿಯವರಿಗೆ ರಾಜ್ಯ/ಜಿಲ್ಲಾ/ತಾಲೂಕಾ ಸಮ್ಮೇಳನಗಳಲ್ಲಿ ಏನೇಲ್ಲಾ ಅವಕಾಶ ಕಲ್ಪಿಸಿಕೊಡುತ್ತಾರೆ. ಒಟ್ಟಾರೆ ಕವಿ ಸಾಹಿತಿಗಳ ವ್ಯಕ್ತಿತ್ವವನ್ನು ಮನಸ್ಸು ಮಾಡಿದರೆ ನಾವು ಬೆಳೆಸಬಲ್ಲೆವು, ಅಳಿಸಲೂ ಬಲ್ಲೆವು ಎಂದು ಪರಿಭಾವಿಸಿಕೊಂಡಿದ್ದಾರೆ. 

ಹೀಗೆ ಭಾವಿಸಿಕೊಳ್ಳುವವರ ಸಂಖ್ಯೆ ದಿನೆದಿನೇ ಹೆಚ್ಚುತ್ತಿರುವದರಿಂದಲೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಮತ್ತಷ್ಟು ವಿಷಮಗೊಳ್ಳುತ್ತಿದೆ, ಇಲ್ಲಡಗಿರುವ ರಾಜಕೀಯಕ್ಕಿಂತ ಆ ಖಾದಿ ರಾಜಕೀಯವೇ ಕೊಂಚ ಲೇಸೆಂಬ ತಿರ್ಮಾನಕ್ಕೆ ಬಂದಿರುವೆ. ’ಮಾನವಂತರು ಮಾನಕ್ಕಂಜಿದರೆ, ಮಾನಗೇಡಿಗಳು ನಮಗೆ ಅಂಜಿದ್ದಾರೆಂದು ನಂಬಿದ್ದಾರೆ’ ತನ್ನಿಮಿತ್ಯ ಒಳ್ಳೆಯವರೆಲ್ಲ ಆಗಾಗ ಬರಹ/ಭಾಷಣದ ಮೂಲಕ ತಮ್ಮ ಅಭಿಪ್ರಾಯಗಳನ್ನು ಬಿಚ್ಚಿಡಬೇಕು, ಚರ್ಚೆ ಚಿಂತನೆಯ ಹಣತೆಯೊಂದನ್ನು ಹಚ್ಚಿಡಬೇಕು. ಹಚ್ಚಿಟ್ಟ ಹಣತೆಯ ಬೆಳಕು ಭ್ರಷ್ಟ ಕವಿ ಸಾಹಿತಿ ಮತ್ತು ಶತಮೂರ್ಖ ಸಂಶೋಧಕರ ಬೆವರಿಳಿಸಬೇಕು;ಬೆತ್ತಲಾಗಿಸಬೇಕು. ಈ ನಿಟ್ಟಿನಲ್ಲಿ ರಾಜಸ್ಥಾನದ ಹೋರಾಟಗಾರ್ತಿ ಭಾಂವ್ರಿದೇವಿಯವರ ಅರ್ಥಪೂರ್ಣವಾದ ಈ ಕೆಳಗಿನ ಮಾತನ್ನು ನಾವೆಲ್ಲಾ ತುಂಬು ಶ್ರದ್ಧೆಯಿಂದ ಗಮನಿಸಿ ಪಾಲಿಸಬೇಕಿದೆ. 
      ನನ್ನ ಹೊಟ್ಟೆ ತುಂಬುವದು ಪ್ರಶಸ್ತಿ ಪುರಸ್ಕಾರ ಸನ್ಮಾನಗಳಿಂದಲ್ಲ ನ್ಯಾಯದಿಂದ 
     

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x