ಡುಮ್ಮಾ-ಡುಮ್ಮಿ (ಆಡಿಯೋ ಕತೆ): ಸುಮನ್ ದೇಸಾಯಿ

ಈ ಪುಟ್ಟ ಕತೆಯನ್ನು ಸುಮನ್ ದೇಸಾಯಿಯವರು ಮಕ್ಕಳಿಗಾಗಿ ಬರೆದು ಮತ್ತು ಆ ಕತೆಯನ್ನು ರೆಕಾರ್ಡ್ ಮಾಡಿ ಕಳಿಸಿದ್ದಾರೆ.  ಈ ಕತೆಯನ್ನು ಅವರ ಧ್ವನಿಯಲ್ಲಿ ಕೇಳಲು ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ…

Suman Desai- Dumma Dummi

ಹಿಂಗೊಂದ ಊರಾಗ ಡುಮ್ಮಾ-ಡುಮ್ಮಿ ಇದ್ರಂತ. ಡುಮ್ಮಗ ಒಂದಿನಾ ದ್ವಾಸಿ ತಿನಬೆಕನಿಸ್ತಂತ. ಆವಾಗ ಆಂವಾ ಡುಮ್ಮಿಗೆ ಅಂದ್ನಂತ, “ಡುಮ್ಮಿ ಡುಮ್ಮಿ ದ್ವಾಸಿ ಮಾಡು” ಅಂತ ಹೇಳಿ, ಆವಾಗ ಡುಮ್ಮಿ ಅಂದ್ಲಂತ ” ಹೋಗೊ ಡುಮ್ಮಾ, ಮನ್ಯಾಗ ಒಲಿ ಹಚ್ಚಲಿಕ್ಕೆ ಕಟ್ಟಿಗಿ ಇಲ್ಲ, ಮೊದ್ಲ ಕಾಡಿಗೆ ಹೋಗಿ ಕಟ್ಟಿಗಿ ಕಡಕೊಂಡ ಬಾ, ಆಮ್ಯಾಲೆ ದ್ವಾಸಿ ಮಾಡ್ತೇನಿ ಅಂದ್ಲಂತ. ಅದಕ್ಕ ಡುಮ್ಮಾ ಆಯ್ತ ಹಂಗಾದ್ರ ಅಂತ ಹೇಳಿ ಕಾಡಿಗೆ ಹೋದ್ನಂತ. ಕಾಡಿಗೆ ಹೋಗಿ ಕಟ್ಟಿಗಿ ಕಡದ ಕಡದ್ನಂತ, ಕಡದ ಕಡದ್ನಂತ, ಒಂದ ದೊಡ್ಡದೊಂದ ಹೊರಿ ಮಾಡಿದ್ನಂತ. ದೊಡ್ಡ ಹೊರಿ ವಝ್ಝಾ ಆಗಿಬಿಟ್ಟಿತ್ತಂತ. ಹೇಂಗ ಹೊತ್ಕೊಳ್ಳೊದು ಅಂತ ವಿಚಾರ ಮಾಡ್ಕೋತ ಕೂತಾಗ ಅಲ್ಲೆ ಒಬ್ಬಾಂವ ರಾಕ್ಷಸ ಬಂದ್ನಂತ. ಆ ರಾಕ್ಷಸ ಡುಮ್ಮನ್ನ ನೋಡಿ, “ಡುಮ್ಮಾ ಡುಮ್ಮಾ ನಾ ನಿನ್ನ ತಿಂತೇನಿ” ಅಂದ್ನಂತ. ಅದಕ್ಕ ಡುಮ್ಮಾ ಅಂದ್ನಂತ “ನನ್ನ ತಿನ್ನಬ್ಯಾಡಪ್ಪಾ, ಮನ್ಯಾಗ ಬಾ, ಡುಮ್ಮಿ ದ್ವಾಸಿ ಮಾಡಿರ್ತಾಳ, ನಿಂಗು ಕೋಡಸ್ತೇನಿ” ಅಂದ್ನಂತ.  ಆವಾಗ ಆ ರಾಕ್ಷಸ, ಅಂದ್ನಂತ  ಓ ಇಂವನಕಿಂತಾ ರುಚಿ ದ್ವಾಸಿನ ಇರಬೇಕು ತಿಂದ ನೊಡೊಣು ಹಂಗಂದ್ರ ನಡಿ ಅದ್ನಂತ. ಅವಾಗ ಡುಮ್ಮ ಅಂದ್ನಂತ ಮೊದಲ ಈ ಕಟ್ಟಿಗಿ ಹೊರಿ ಹೊರಸು ಅಂದ್ನಂತ. ಅದಕ್ಕ ರಾಕ್ಷಸ ಹೂಂ ಅಂಥೇಳಿ ಕಟ್ಟಿಗಿ ಹೊರಿ ಹೊರಿಸಿದ್ನಂತ. ಇಬ್ಬರು ಕೂಡೆ ಮನಿ ಕಡೆ ಹೊಂಟ್ರಂತ. 

ದಾರಿಯೊಳಗ ಹೋಗಬೇಕಾದ್ರ ರಾಕ್ಷಸಗ ಜೋರಾಗಿ ನೀರಡಿಕಿ ಆತಂತ. ಅದಕ್ಕ ಆಂವ “ಡುಮ್ಮಾ ಸ್ವಲ್ಪ ನಿಂದ್ರು ನಾ ಇಲ್ಲೆ ಹೊಳಿಗೆ ಒಳಗ ನೀರು ಕುಡುದು ಬರ್ತೇನಿ” ಅಂದ್ನಂತ. ಅದಕ್ಕ ಡುಮ್ಮ, ನಾ ಮುಂದ ಹೋಗಿ ಡುಮ್ಮಿಗೆ ದ್ವಾಸಿ ಮಾಡಿಸಿಟ್ಟರತೇನಿ, ’ನೀ ಹೋಗಿ ನೀರ ಕುಡುದು ಸವಕಾಶ ಬಾ ಅಂದ್ನಂತ. ಆತ ಅಂಥೇಳಿ ರಾಕ್ಷಸ ಹೊಳಿ ಕಡೆ ನೀರ ಕೂಡಿಲಿಕ್ಕೆ ಹೋದ್ನಂತ. 

ಆವಾಗ ಡುಮ್ಮ ಲಗೂ ಲಗೂ ಮನಿಗೆ ಬಂದ್ನಂತ. ಕಟ್ಟಿಗಿ ಹೊರಿ ಇಳಿಸಿದ್ನಂತ. ಡುಮ್ಮಿ ಒಲಿ ಹೊತ್ತಿಸಿ ಬಿಸಿ ಬಿಸಿ ದ್ವಾಸಿ ಮಾಡಿ ಹಾಕಿದ್ಲಂತ. ಇಬ್ಬರೂ ಕೂಡೆ ಗಡದ್ದಾಗಿ ತಿಂದು ಎಲ್ಲಾ ಖಾಲಿ ಮಾಡಿ ಕೂತಬಿಟ್ರಂತ. ಆವಾಗ ಡುಮ್ಮಗ ಒಮ್ಮಿಗಲೇ ನೆನಪಾತಂತ, “ ಅಯ್ಯೊ ಡುಮ್ಮಿ, ರಾಕಕ್ಷಸಗ ಬಾ ಅಂತ ಹೇಳಿದ್ದೆ ನಾನು, ದ್ವಾಸಿ ಕೊಡ್ತೇನಂತ ಹೇಳಿದ್ದೆ, ಈಗ ಎಲ್ಲಾ ಖಾಲಿ ಆಗಿಬಿಟ್ಟಾವ ಎನ ಮಾಡೊದು, ಆಂವಾ ಬಂದ್ನಂದ್ರ ನಮ್ಮಿಬ್ಬರನು ತಿಂತಾನ. ಎನ ಮಾಡೊದು ಅಂದ್ನಂತ. ಅದಕ್ಕ ಡುಮ್ಮಿ ಅಂದ್ಲಂತ, “ ಡುಮ್ಮಾ ಎಂಥಾ ಕೆಲಸಾ ಮಾಡಿದಿ ಮೊದಲ ಹೇಳಬೇಕಿಲ್ಲೊ, ಈಗ ಏನಮಾಡೊದು ಅಂತ ಇಬ್ಬರೂ ಕೂಡೆ ವಿಚಾರ ಮಾಡಿದ್ರಂತ. ಅಷ್ಟೊತ್ತಿಗೆ ಡುಮ್ಮಿಗೆ ಒಂದ ಉಪಾಯ ಹೊಳಿತಂತ. ಹಿತ್ತಲದಾಗ ಕುಂಬಳಬಳ್ಳ್ಯಾಗ ಒಂದ ದೊಡ್ಡ ಕುಂಬಳಕಾಯಾಗೇದ. ಅದಕ್ಕ ತೂತು ತೆಗದು ಒಳಗ ಹೋಗಿ ಕೂತಬಿಡೊಣು, ಅಂದ್ರ ರಾಕ್ಷಸಗ ಗೊತ್ತಾಗಂಗಿಲ್ಲ ಅಂದ್ಲಂತ. ಅದಕ್ಕ ಡುಮ್ಮ ಹೂಂ ನಡಿ ಹೋಗೊಣು ಅಂದ್ನಂತ. ಇಬ್ಬರೂ ಕೂಡೆ ಹಿತ್ತಲಕ್ಕ ಹೋದ್ರಂತ, ಅಲ್ಲೆ ದೊಡ್ಡ ಕುಂಬಳ ಬಳ್ಳ್ಯಾಗ, ದೊಡ್ಡ ಕುಂಬಳಕಾಯಿ ಆಗಿತ್ತಂತ, ಅದರಾಗ ದೊಡ್ಡದೊಂದ ತೂತು ತೆಗೆದು ಒಳಗ ಹೋಗಿ ಕೂತ್ರಂತ. 

ಇತ್ಲಾಕಡೆ ರಾಕ್ಷಸ ಬಂದ್ನಂತ. “ಡುಮ್ಮಾ ಡುಮ್ಮಾ ಬಾಗಲಾ ತಗಿಯೊ ಬಾರಿಸೇ ಬಾರಿಸಿದ್ನಂತ., ಬಾರಿಸೇ ಬಾರಿಸಿದ್ನಂತ.  ಯಾರು ಬಾಗಲಾ ತೆಗಿಲೆ ಇಲ್ಲಂತ. ಆವಾಗ ಬಾಗಲಾ ಮುರುದು ಒಳಗ ಬಂದ್ನಂತ. ನೊಡ್ತಾನಂತ ಅಲ್ಲೆ ಹೊತ್ತಿದ್ದು ಹುರಕಡ್ಲ್ಯಾಗಿದ್ವು ದ್ವಾಸಿ ಬಿದ್ದಿದ್ವಂತ.ಎಲ್ಲಾ ತಿಂದು ಖಾಲಿ ಮಾಡಿಬಿಟ್ಟಿದ್ರಂತ. ಅದಕ್ಕ ರಾಕ್ಷಸಗ ಸಿಟ್ಟು ಬಂದಬಿಡ್ತಂತ ಜೋರಾಗಿ “ಹಾಂ ನಾ ನಿನ್ನ ತಿಂತೇನಿ, ನಂಗ ದ್ವಾಸಿ ಕೊಟ್ಟಿಲ್ಲಾ” ಎಲ್ಲಿದ್ದಿ ಡುಮ್ಮಾ ಅಂತ ಹುಡಿಕ್ಕೊತ ಹಿತ್ತಲಕ್ಕ ಬಂದ್ನಂತ. ಅಷ್ಟೊತ್ತಿಗೆ ಅಲ್ಲೆ ಒಳಗ ಕೂತ ಡುಮ್ಮಗ ಜೋರಾಗಿ ಶೀನು ಬಂದಬಿಟ್ಟಿತ್ತಂತ. ಆವಾಗ ಆಂವಾ ಡುಮ್ಮಿಗೆ ಅಂದ್ನಂತ “ ಡುಮ್ಮಿ ಡುಮ್ಮಿ ನಂಗ ಜೋರಾಗಿ ಶೀನು ಬಂದದ” ಅಂತ. ಅದಕ್ಕ ಡುಮ್ಮಿ, ರಾಕ್ಷಸ ಇಲ್ಲೆ ಇದ್ದಾನ, ಸವಕಾಶ ಶೀನು ಅಂತ ಹೇಳಿದ್ಲಂತ. ಹೂಂ ಅಂದು ಡುಮ್ಮ ಸವಕಾಶ ಶೀನ್ಲಿಕ್ಕೆ ಹೋಗಿ ಜೋರಾಗಿ “ಆಕ್ಷ್ಞಿಇಇಇ” ಅಂತ ಶೀನಿಬಿಟ್ಟನಂತ. ಆವಾಗ ಕುಂಬಳಕಾಯಿ ಒಡದು 2 ಹೋಳಾಗಿ ಬಿಡ್ತಂತ. ಹಾಂ ಇಲ್ಲೆ ಕೂತಿರಾ ಇಬ್ರು ಅಂಥೇಳಿ ಡುಮ್ಮನ್ನ-ಡುಮ್ಮಿನ್ನ ರಾಕ್ಷಸ ತಿಂದು ಹೋಗಿಬಿಟ್ಟನಂತ…………

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
umesh desai
umesh desai
9 years ago

ಭಾರಿ ಅದ ಬಿಡರಿ ಕತಿ ಹಂಗ ಪಂಜು ಅವರ ಹೊಸಾ ಪ್ರಯೋಗನೂ ಛಂದ ಅದ

ಮಂಜುನಾಥ ಕೊಳ್ಳೇಗಾಲ

Beautiful story-telling.  ಇದೊಂದು ಹೊಸ ಪ್ರಯೋಗ, ಇಂಥವು ಇನ್ನೂ ಹೆಚ್ಚು ಹೆಚ್ಚು ಬರಲಿ

M.S.Narayana
M.S.Narayana
9 years ago

ಕಥಿ ಛಂದದ, ಛಲೋ ಹೇಳೀರಿ ಸುಮನ್ 

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
9 years ago

ಕೇಳುವುದಕ್ಕೆ ಬಹಳ ಸೊಗಸಾಗಿತ್ತು,, 🙂 ಥ್ಯಾಂಕ್ಯೂ ಸುಮನ್ರವರೇ,, 🙂

ಶ್ರೀವಲ್ಲಭ
ಶ್ರೀವಲ್ಲಭ
9 years ago

ಛೋಲೊ ಆಗಿದೆ ,,,, ವಿನೂತನ ವಿಚಾರ

jampanna
9 years ago

ಡುಮ್ಮಾ ಡುಮ್ಮಿ ,ಶೈಲಿ ಛಲೊಇತ್ತು ,

Dinesh C Holla
9 years ago

ಬಹಳ ಚೆನ್ನಾಗಿದೆ !  🙂

7
0
Would love your thoughts, please comment.x
()
x