ಬ್ಲಾಗುಗಳ ಲೋಕದಲ್ಲಿ: ಪ್ರಶಸ್ತಿ ಪಿ.

ಮುಂಚೆಯೆಲ್ಲಾ ಸಾಹಿತಿಯೆಂದ್ರೆ ಅವ ಕವಿಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ತನ್ನ ಕವಿತೆಯನ್ನೋ, ಸಾಹಿತ್ಯಪ್ರಕಾರವನ್ನೂ ಪ್ರಸ್ತುತಪಡಿಸುವವನು, ಒಂದು ಖಾದಿ ಜುಬ್ಬ, ಜೋಳಿಗೆಯೊಂದಿಗೆ ತಿರುಗಾಡುವವನು ಎಂಬೆಲ್ಲಾ ಕಲ್ಪನೆಗಳಿರುತ್ತಿದ್ದವು.ಆದರೆ ಬದಲಾಗುತ್ತಿರುವ ಕಾಲದೊಂದಿಗೆ ಈ ಪರಿಕಲ್ಪನೆಯೂ ಬದಲಾಗುತ್ತಿರುವಂತೆ ಕಾಣುತ್ತಿದೆ. ಪುಸ್ತಕಗಳ ಮೂಲಕವೇ ಜನರ ಮನಗೆಲ್ಲುತ್ತಿರುವ ಹಿಂದಿನ ಜಮಾನಾದ ಸಾಹಿತಿಗಳೊಂದಿಗೆ, ಒಂದೇ ಒಂದು ಪುಸ್ತಕವನ್ನು ಬರೆಯದಿದ್ದರೂ ತಮ್ಮ ಜಮಾನಾದ ಗೆಳೆಯರ ಬಳಗದಲ್ಲಿ ಗುರುತಿಸಿಕೊಳ್ಳುತ್ತಿರುವ ಹೊಸ ಪೀಳಿಗೆಯ ಸಾಹಿತಿಗಳ ಉಗಮವಾಗುತ್ತಿರುವಂತೆ ಕಾಣುತ್ತಿದೆ. ಕವಿ, ಸಾಹಿತ್ಯ ಸಮ್ಮೇಳನಕ್ಕಾಗಿ ತಮ್ಮ ಸಮಯ ಮೀಸಲಿಡುವಷ್ಟು ಪುರುಸೊತ್ತಿನವರಲ್ಲ ಈ ಎರಡನೇ ಪೀಳಿಗೆಯವರು. ನವ್ಯ, ನವೀನ, ದಲಿತ, ಬಂಡಾಯ ಹೀಗೆ ಯಾವ ಪ್ರಕಾರದಲ್ಲೂ ಹೆಚ್ಚು ಗುರುತಿಸಿಕೊಳ್ಳದೇ ತಮ್ಮದೇ ಹೊಸ ಪ್ರಕಾರ ಕಟ್ಟುತ್ತೀವಿ ಎಂದು ಮುಂದಾಗುವವರು, ನಾವು ನವ್ಯ, ನವೀನಗಳಿಂದ ಪ್ರಭಾವಿತರಾಗಿದ್ದೇವೆ. ಆದ್ರೆ ಅದರಲ್ಲೇ ಬರೆಯಬೇಕೆಂಬ ಒತ್ತಡದಲ್ಲೇನಿಲ್ಲ. ಸದ್ಯ ಬರೆಯುತ್ತಿರುವುದು ನಮ್ಮ ಸಂತೋಷಕ್ಕೋಸ್ಕರ ಮಾತ್ರ ಎನ್ನುವವರು ಇರುವುದು ಈ ಎರಡನೇ ಪ್ರಕಾರದಲ್ಲೇ. ಪುಸ್ತಕ ಪ್ರಕಾಶನವಿಲ್ಲ. ಸಮ್ಮೇಳನಗಳಲ್ಲಿ ಹಾಜರಾತಿ ಮೊದಲೇ ಇಲ್ಲ. ಹಾಗಿದ್ದ ಮೇಲೂ ಮುಖ್ಯ ಸಾಹಿತ್ಯವಾಹಿನಿಯಿಂದ ದೂರಾದ ಈ ಸಾಹಿತಿಗಳು ಬೆಳಕು ಕಾಣುತ್ತಿರುವುದು, ಬದುಕುತ್ತಿರುವುದು ಎಲ್ಲಿ ಅಂದರೆ ? ಅದಕ್ಕೆ ಉತ್ತರ ಬ್ಲಾಗುಗಳು.

೨೦೧೦ ರ ಕೊನೆಯ ಹಂತ.  ಆಗಿನ್ನು ನಾನು ಫೇಸ್ಬುಕ್ಕಿನ ಖಾತೆ ತೆಗೆದು ಎರಡು ಮೂರು ತಿಂಗಳಾಗಿತ್ತಷ್ಟೆ. ಎರಡು ಮೂರು ವರ್ಷಗಳಿಂದ ಇದ್ದ ಆರ್ಕುಟ್ಟಿನ ಉಚ್ಚ್ರಾಯ ಕಾಲ ಮುಗಿದು ಫೇಸ್ಬುಕ್ಕೇ ಸರ್ವಸ್ವವೂ ಆಗಿಬಿಡಬಹುದಾದ ಅಪಾಯದ ಗಾಳಿ ಸದ್ದಿಲ್ಲದೇ ಬೀಸುತ್ತಿತ್ತು. ಹಿಂಗೇ ಒಂದಿನ ಗೆಳತಿಯೊಬ್ಬಳು ಕ.ಕ.ಕಾ ಅನ್ನೋ ಫೇಸ್ಬುಕ್ಕಿನ ಗುಂಪಿಗೆ ಸೇರಿಸಿದಳು. ಪ್ರಾಯಶಃ ಅದು ನಾನು ಸೇರಲ್ಪಟ್ಟ(ಸೇರಿಸಲ್ಪಟ್ಟ) ಮೊದಲ ಮೂರು ಗುಂಪುಗಳಲ್ಲೊಂದಾಗಿದ್ದೀತು. ಅಲ್ಲಿ ಬರೆಯುತ್ತಿದ್ದವರನ್ನು ನೋಡುತ್ತಿದ್ದಾಗಲೇ ನಾನೂ ಹೀಗೆ ಬರೆಯಬಾರದೇಕೆಂಬ ಸ್ಪೂರ್ತಿ ಹುಟ್ಟಿದ್ದು. ಹೈಸ್ಕೂಲಿನ ಪ್ರಬಂಧ ಸ್ಪರ್ಧೆಗಳಲ್ಲಿ, ತಾಲ್ಲೂಕು ಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ಭಾಷಣ ಕುಟ್ಟಿದ್ದು, ಆಮೇಲೆ ಸಾಗರದ ಜೂನಿಯರ್ ಕಾಲೇಜಿನ "ಭಾವಬಿತ್ತಿ"ಯೆಂಬ ಗೋಡೆ ಪತ್ರಿಕೆಗ ಗೀಚಿದ್ದಾದರೂ ಪದವಿ ಹಂತದ ಮೊದಲೆರಡು ವರ್ಷಗಳಲ್ಲಿ ಬರೆದಿದ್ದೆಂದರೆ ಅದು ಎಕ್ಸಾಮಿಗೆ, ಇಂಟರ್ನಲ್ಸುಗಳಿಗೆ ಮಾತ್ರ ಎಂಬತ್ತಾಗಿತ್ತು. ಕೊನೆಗೂ ಬರೆಯೋ ಸಮಯ ಬರಬೇಕಾದ್ರೆ ಕೊನೆವರ್ಷವೇ ಬರಬೇಕಾಯ್ತು. ವಿಪರ್ಯಾಸವೆಂದರೆ ಮನದಲ್ಲಿ ಮೂಡುತ್ತಿದ್ದ ತಳಮಳಗಳಿಗೆ, ಭಾವಗಳಿಗೆ ದಕ್ಕದ ಪದಗಳನ್ನು ಕವಿತೆಯಾಗಿಸಿದ್ದೊಂದು ಕೊನೆ ಸೆಮ್ಮು ಬಂತಲ್ಲಾ ಅನ್ನೋ ವ್ಯಥೆ. ನೋಡ ನೋಡ ಕೊನೆ ಸೆಮ್ಮು ಬಂದಿತಲ್ಲಾ ಅಂತ ಅನಿಸಿದ ಅನಿಸಿಕೆಗಳನ್ನೆಲ್ಲಾ ನನಗೆ ಕವಿತೆ ಅಂತ ತೋಚಿದ ತರ ಗೀಚಿದ್ದೆ. ಅಷ್ಟೇ ಅಲ್ಲದೇ ಅದನ್ನ ಧೈರ್ಯ ಮಾಡಿ ಫೇಸ್ಬುಕ್ಕಿನ ಗೋಡೆಯ ಮೇಲೂ ಹಾಕಿದ್ದೆ. ತಗೋ.ಶುರುವಾಯಿತು ಕಾಮೆಂಟುಗಳ ಮಹಾಪೂರ. ಮೊದಲಿಗೆ ನಾನು ಹೀಗೆ ಬರೆಯಬಹುದು ಅಂತಲೂ ನಿರೀಕ್ಷಿಸದ ಸ್ನೇಹಿತರೆಲ್ಲಾ ಸಖತ್ ಆಶ್ಚರ್ಯದಿಂದಲೋ , ಖುಷಿಯಿಂದಲೋ ಬೆನ್ನು ತಟ್ಟಿದರು. ಸಖತ್ತಾಗಿ ಬರಿತಿದೀಯ. ಮುಂದುವರೆಸು ಅಂತ ಹೇಳಿದರು. ಹೇಗೆ ಬರೆದಿದ್ದೆನೋ ಗೊತ್ತಿಲ್ಲ. ಒಟ್ಟು ಸಿಕ್ಕಾಪಟ್ಟೆ ಸ್ಪೂರ್ತಿ ಸಿಕ್ಕಿದ್ದೆಂತೂ ನಿಜ ಆ ಘಟನೆಯಿಂದ.

ಆಮೇಲೆ ಸತ್ತ ಹೆಣದ ಮೆರವಣಿಗೆ, ಶಿವಮೊಗ್ಗದ ಕನ್ಯಕಾ ಪರಮೇಶ್ವರೀದೇವಿ, ಶಿವಮೊಗ್ಗ ಜಿಲ್ಲೆ .. ಹೀಗೆ ಸಿಕ್ಕಿದ್ದೆಲ್ಲಾ ಕವಿತೆಯ ವಸ್ತುಗಳಾಗುತ್ತಾ ಹೋದವು. ಆಗ ನನ್ನ ಹೈಸ್ಕೂಲ್ ಗೆಳೆಯ ಆದಿ ನೀನು ಬರೆದಿದ್ದೆಲ್ಲಾ ಈ ಫೇಸ್ಬುಕ್ಕೆಂಬ ಸಾಗರದಲ್ಲಿ ಕಳೆದುಹೋಗುವುದು ಬೇಡ. ನಿನ್ನದೇ ಒಂದು ಬ್ಲಾಗೆಂದು ಆರಂಭಿಸು. ಅದರಲ್ಲಿ ಇಲ್ಲಿ ಹಾಕಿದ್ದನ್ನೇ ಹಾಕು. ಫೇಸ್ಬುಕ್ಕಲ್ಲಿ ನಿನ್ನ ಗೆಳೆಯರಾಗದವರೂ ನಿನ್ನ ಬ್ಲಾಗಿಗೆ ಬಂದು ಓದಲನುವಾಗತ್ತೆ. ನಿನಗೂ ಬರೆದ ಅಂಶಗಲ ದಾಖಲೆಯಿರುತ್ತೆ ಎಂದ್. ಸರಿಯೆನಿಸಿ ಶುರುಮಾಡಿದ್ದೇ ಪ್ರಶಾಂತವನ. ಬ್ಲಾಗೆಂದು ಶುರುಮಾಡಬೇಕೆಂದಾಗ ಎಲ್ಲಿ ಶುರುಮಾಡೋದು ಎಂಬ ಶಂಕೆ ಕಾಡಿದ್ದು ನಿಜ. ಪದವಿಯ ಮೊದಲ ವರ್ಷದಲ್ಲಿ ಇಂಗ್ಲೀಷಲ್ಲಿ ಒಂದು ಬ್ಲಾಗ್ ಪ್ರಾರಂಭಿಸಬೇಕೆಂಬ ಪ್ರಯತ್ನದಲ್ಲಿ livejournal ಹೊಕ್ಕು ಅಲ್ಲಿನ ಸೌಲಭ್ಯಗಳನ್ನು ನೋಡಿದ್ದೆ. wordpress ಅನ್ನೂ ತಡಕಿದ ನಂತರ ಯಾಕೋ blogspotನಲ್ಲಿನ ವಿನ್ಯಾಸಗಳು ಇಷ್ಟವಾಯ್ತು. ತಗೋ ಇಲ್ಲೇ ಶುರುಮಾಡೋಣ ಅಂದಾಗ ಬಂದಿದ್ದು ಹೆಸರಿನ ಸಮಸ್ಯೆ. ಏನಂತ ಶುರುಮಾಡೋಣ ? ಜನ್ಮವಿತ್ತೋರ ನೆನಪಿಗೆ ಸವಿತಾಪ್ರಭಾಕರತನಯ ಅಂತ ಇಡೋಣವಾ ಅಂತ ಪ್ರಯತ್ನಿಸಿದೆ. ಯಾಕೋ ಸ್ವಲ್ಪ ಉದ್ದವಾಯ್ತು ಅನಿಸಿ ಮನೆಯ ಹೆಸರಾದ ಪ್ರಶಾಂತವನ ಎಂದು ಯೋಚಿಸಿದೆ. ಅದೇ ಇಷ್ಟನಾಮವಾಗೋಯ್ತು ಬ್ಲಾಗಿಗೆ. ಅಂಬೆಗಾಲಿಡುತ್ತಿದ್ದ ಬ್ಲಾಗಿನಲ್ಲಿ ದಿನಗಳೆದಂತೆ ಕತೆಗಳು, ಕವನಗಳು, ಪ್ರವಾಸ ಕಥನಗಳು ತುಂಬುತ್ತಾ ಹೋದವು. ಹಾಗೇ ಬೇರೆಯವರ ಬ್ಲಾಗಿಗೆ ಹೋಗಿ ಓದುವುದು. ಅಲ್ಲಿ ಲಿಂಕು ಸಿಕ್ಕ ಮತ್ತೊಬ್ಬರ ಬ್ಲಾಗಿಗೆ ಹೋಗುವುದು. ಅವರು ನನ್ನಲ್ಲಿಗೆ ಬರುವುದು ಹೀಗೆ ಸುಮಾರಷ್ಟು ಸಮಾನಮನಸ್ಕರ ಪರಿಚಯವಾಗೋಕೆ ಶುರುವಾಯ್ತು.

ಈ ಸಮಯದಲ್ಲೇ ಪರಿಚಯವಾದ ಸತ್ಯಚರಣರು ಪರಿಚಯಿಸಿದ್ದು ನಿಲುಮೆ, ಕೆಂಡಸಂಪಿಗೆ ಮತ್ತು ಸಂಪದ. ಸಂಪದದ ಪಾರ್ಥಸಾರಥಿಯವರು, ಶ್ರೀಧರ ಬಂಡಿಯವರು, ನಿಲುಮೆಯ ಸಾತ್ವಿಕ್ ಅವರು ಬರಹಗಳಿಗೆ ಬೆನ್ನುತಟ್ಟುತ್ತಿದ್ದ ಪರಿ ಇನ್ನೂ ಕಣ್ಣಿಗೆ ಕಟ್ಟುತ್ತದೆ. ಈ ಬರಹಗಳಿಂದಲೇ ನಮ್ಮ ಕಾಲೇಜಿನ ಸುಮಾರಷ್ಟು ಜೂನಿಯರ್ಗಳೂ ಬರೆಯುವ ಬಗೆ ತಿಳಿಯಿತು. ಅದಕ್ಕಾಗಿ ಸ್ವಲ್ಪ ಓಡಾಡಿ, ಸ್ವಲ್ಪ ವರ್ಷದಿಂದ ನಿಂತೇ ಹೋಗಿದ್ದ ಬ್ರಾಂಚ್ ಮ್ಯಾಗಜೀನನ್ನ "ಕೌಶಲ್ಯದೀಪ"ವೆಂಬ ಹೆಸರಲ್ಲಿ ಮರುಸ್ಥಾಪಿಸಿದ್ದೂ ಆಯ್ತು. ಆದರೆ ಇಷ್ಟೆಲ್ಲಾ ಆಗುವಷ್ಟರ ಹೊತ್ತಿಗೆ ಕೊನೆಯ ವರ್ಷದ ಎಕ್ಸಾಂಗಳು ಸಮೀಪಿಸಿತು.

ಎಕ್ಸಾಮೆಂದರೆ ಗೊತ್ತಲ್ಲ. ಬರಹವಿಲ್ಲ. ಬ್ಲಾಗಿಲ್ಲ. ಕಾಲೇಜೇ ಎಲ್ಲಾ ಆದ ಮೌನ.

ಕೊನೆಗೂ ಪದವಿ ಮುಗಿಯಿತು. ಕೆಲಸಕ್ಕೆ ಸೇರೋ ಮುನ್ನ ಮನೆಯಲ್ಲಿದ್ದ ಸಮಯದಲ್ಲಿ ಮತ್ತದೇ ಓದು-ಬರಹ. ಇದೇ ಕಾರಣಕ್ಕೆ ೨೦೧೧ರ ಬ್ಲಾಗ್ ಪೋಸ್ಟುಗಳ ಸಂಖ್ಯೆ ೧೪೧ ಮುಟ್ಟಿತು ಅಂತೇನು ಹೇಳಬೇಕಾಗಿಲ್ಲ. ಈ ಬರಹಗಳ , ಬ್ಲಾಗುಗಳ ಮೂಲಕ ಪರಿಚಯವಾದವರು ಒಬ್ಬಿಬ್ಬರಲ್ಲ. ಈಶ್ವರ ಕಿರಣರು, ಬದ್ರಿ ಭಾಯ್, ಮಂಜು ಭಾಯ್, ಪಂಜು ನಸೀಮ, ಶ್ರೀಕಾಂತಣ್ಣ, ದಿ.ರವಿ ಮೂರ್ನಾಡು, ಸತ್ತಾರ್ ಭಾಯ್, ಹೃದಯ ಶಿವಣ್ಣ, ಪುಷ್ಪಣ್ಣ, ಹೀಗೆ ಅನೇಕ ಹಿರಿಯರು ನಮ್ಮ ಜಮಾನಾದ ಭಾಗ್ಯ, ಪದ್ಮಾ, ಚಿನ್ಮಯ್, ಸತೀಶ್, ವೆಂಕಟೇಶ್, ಸುಷ್ಮಾ, ಶ್ರೀವತ್ಸ, ಪ್ರಸಾದ್, ಪಮ್ಮಿ.. ಹೀಗೆ ಹತ್ತಾರು ಸ್ನೇಹಿತರ ಮುಖ ನೋಡೋ ಮೊದಲೇ ಬ್ಲಾಗುಗಳ ಮೂಲಕ ಆತ್ಮೀಯರೆನಿಸಿಬಿಟ್ಟಿದ್ದರು, ನಮ್ಮ ಕಾಲೇಜಿನವರು ಕಾಲೇಜು ಬಿಟ್ಟ ನಂತರವೂ ಮತ್ತೆ ಆತ್ಮೀಯರೆನಿಸಿದ್ದು ಈ ಬರಹಗಳಿಂದಲೇ.. ಎಲ್ಲರ ಬಗ್ಗೆಯೂ ಬರೆಯಹೋದರೆ ಅದೇ ಒಂದು ಕತೆಯಾಗಬಹುದು. ಸಖಿಯಲ್ಲಿ, ವಿ.ನೆಕ್ಟಿನಲ್ಲಿ ಬರೆಯೋ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಅದಕ್ಕೆ ಮುಖ್ಯ ಕಾರಣ ನನ್ನ ಬರಹವನ್ನು ಎಲ್ಲೋ ಓದಿದ, ಮೆಚ್ಚಿದ ಪುಣ್ಯಾತ್ಮರೆನಿಸುತ್ತೆ. ಆದರೂ ಸಿಕ್ಕಾಪಟ್ಟೆ ಬೇಸರವಾದಾಗ , ಖುಷಿಯಾದಾಗ ಗೀಚಿದ ಗೀಚುಗಳನ್ನ ಬ್ಲಾಗಲ್ಲಿ ದಾಖಲಿಸೋಕೆ, ಹಿಂದೆಂದೋ ಬರೆದದ್ದನ್ನ ಓದೋಕೆ, ಹೀಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಹೀಗೆ ಬರೆಯಬಾರದಿತ್ತೇನೋ ಎಂದುಕೊಳ್ಳೋಕೆ ಸಖತ್ ಖುಷಿಯಾಗುತ್ತೆ. ಬರಹವನ್ನು ಓದಿ ಎಂದು ತೆಗೆದುಕೊಂಡು ಹೋಗಿ ಎರಡು ಮೂರು ಸಲ ಹೋದ ಗುರುಗಳು ನೀನು ಇಲ್ಲಿಯವರೆಗೆ ಬರೆದದ್ದೆಲ್ಲಾ ವ್ಯರ್ಥ ಎಂದಾಗ ಬೇಜಾರಾಗಿ ಬರಹವನ್ನೇ ನಿಲ್ಲಿಸಿಬಿಟ್ಟಾಗಲೂ ಮತ್ತೆ ಬರೆಯಲು ಪ್ರೋತ್ಸಾಹಿಸಿದ್ದು ಸಮಾನ ಮನಸ್ಕ ಬ್ಲಾಗಿಗರು. ಯಾವುದೋ ಸರಣಿಯನ್ನು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿದಾಗಲೋ, ಸಮಯಕ್ಕೆ ಸರಿಯಾಗಿ ಬರೆಯದಾಗಲೋ ಪ್ರೀತಿಯಿಂದ ಗದರಿದವರು, ಚೆನ್ನಾಗಿ ಬರೆಯದಿದ್ದಾಗ ಪ್ರತ್ಯಕ್ಷ/ಪರೋಕ್ಷವಾಗಿ ಬೈದ ಬಂಧುಗಳೂ ಇವರೇ. ಫೇಸ್ಬುಕ್ಕಲ್ಲಿ ಹಾಕಿದ್ದಾನಲ್ಲಾ, ಬೇಜಾರಾಗುತ್ತೆ ಅನ್ನೋ ಸಂಕಟಕ್ಕಾದರೂ ಒಂದಿಷ್ಟು ಜನ ಓದದೆಯೂ ಲೈಕಿಸಬಹುದು. ದಾಕ್ಷಿಣ್ಯಕ್ಕೆ ಕಮೆಂಟಿಸಬಹುದು. ಆದ್ರೆ ಬ್ಲಾಗುಗಳಲ್ಲಿ ಹಾಗಲ್ಲ. ಬ್ಲಾಗಿಗರಲ್ಲೇ ಒಂದಿಷ್ಟು ಪಂಗಡಗಳಿವೆ. ಅವರು ಬೇರೆಯವರ ಬ್ಲಾಗಿಗೆ ಜಪ್ಪಯ್ಯ ಅಂದ್ರೂ ಬರೋಲ್ಲ ಅನ್ನೋ ಬೇಸರಗಳು ಮೊದಲಿಗೆ ಇದ್ದರೂ ಎಷ್ಟೋ ಕಾಲದ ನಂತರ ನಮ್ಮ ಬ್ಲಾಗಿಗೆ ಬಂದು, ಕಾಮೆಂಟುಗಳಿಲ್ಲದ ಪೋಸ್ಟುಗಳನ್ನು ಓದುವುದಕ್ಕೂ ಖುಷಿಯಾಗುತ್ತದೆ. 

ಅಷ್ಟಕ್ಕೂ ಬರೆಯುವುದು ನಮ್ಮ ಖುಷಿಗೆಂದ ಮೇಲೆ ಲೈಕು , ಕಾಮೆಂಟುಗಳ ಚಿಂತೆಯೇಕೆ ? ಬ್ಲಾಗಲ್ಲಿ ನನ್ನ ಪಾಡಿಗೆ ಗೀಚುತ್ತಿದ್ದ  ಸಮಯದಲ್ಲಿ ಅಂಕಣಕಾರನಾಗಿ  ಅವಕಾಶ ಕಲ್ಪಿಸಿದ್ದು ಪಂಜು. ಸಾಹಿತ್ಯ ಗ್ರೂಪೊಂದರ ನಿರ್ವಾಹಕನಾಗೆಂದಾಗ ಕೆಲಸದ ಒತ್ತಡದಲ್ಲಿ ಆಗೋಲ್ಲವೆಂದು ನಿರಾಕರಿಸಿದ್ದ ನಾನು ಈ ಪ್ರತೀ ವಾರ ಬರೆಯೋ ಕೆಲಸಕ್ಕೆ ಒಪ್ಪಿದ್ದು ಒಂತರಾ ಆಕಸ್ಮಿಕವೇ. ಕೆಲಸದ ನಡುವೆ ಕಳೆದುಹೋಗಿ ಬ್ಲಾಗಲ್ಲಿ ತಿಂಗಳಿಗೊಂದು ಬರಹವನ್ನೂ ಹಾಕಲಾಗದ ದುಸ್ಥಿತಿಗೆ ತಲುಪಿದ್ದ ನನ್ನಲ್ಲಿ ಪ್ರತೀವಾರವೂ ಏನಾದ್ರೂ ಬರೆಯೂ ಅನಿವಾರ್ಯತೆಯನ್ನ, ಉತ್ಸಾಹವನ್ನ ಹುಟ್ಟುಹಾಕಿದ ಪಂಜುವಿಗೆ ನಾನೆಷ್ಟು ಕೃತಜ್ನನಾದ್ರೂ ಕಮ್ಮಿಯೇ ಅನಿಸುತ್ತೆ. ಇದು ಬರೀ ನನ್ನ ಆತ್ಮಕಥನವೆಂದಲ್ಲ. ಪಂಜುವಿಗಾಗಿ ಬರೆದ ಇನ್ನೂರೈವತ್ತಕ್ಕಿಂತಲೂ ಹೆಚ್ಚಿನ ಸಾಹಿತಿಗಳನ್ನು ಕೇಳಿದರೆ ಕನಿಷ್ಟವೆಂದರೂ ಇನ್ನೂರು ಬ್ಲಾಗುಗಳು ಸಿಕ್ಕೀತು ! ಪಂಜುವಿನಂತಹ ಸಾವಿರಾರು ಓದುಗರು ಓದುವ ಮುಖ್ಯವಾಹಿನಿಗೆ ಬರುವುದು ವಾರಕ್ಕೋ, ತಿಂಗಳಿಗೋ ಆದರೂ ಅವರ ಸಾಹಿತ್ಯ ಕೃಷಿಯ ದಾಖಲಾತಿ ಬ್ಲಾಗುಗಳಲ್ಲಿ ನಿರಂತರವಾಗಿ ಸಾಗೇ ಇದೆ. ಮುಂದೊಮ್ಮೆ ಬ್ಲಾಗುಗಳಲ್ಲಿನ ಸಾಹಿತ್ಯವೂ ಪುಸ್ತಕವಾಗಿ ಅಥವಾ ಪುಸ್ತಕಗಳಷ್ಟೇ ಮನ್ನಣೆ ಪಡೆಯುವಂತೆ ಸಾಹಿತ್ಯದ ಮುಖ್ಯವಾಹಿನಿಗೆ ಬಂದೀತೆ ? ಸದ್ಯಕ್ಕೆ ಕೆಲ ಬ್ಲಾಗ್ ಸಾಹಿತ್ಯವನ್ನೇ ಪುಸ್ತಕವಾಗಿಸುವ ಕೆಲಸ ಕೆಲವೆಡೆ ನಡೆಯುತ್ತಿದೆ. ಲಘುವಾಗಿದ್ದನ್ನು ಮಾತ್ರ ಬ್ಲಾಗಲ್ಲಿ ಬರೆ, ಸೀರಿಯಸ್ಸಾಗಿದ್ದನ್ನು ಪುಸ್ತಕವಾಗಿಸೆಂಬ ಮಾತಿದ್ದರೂ ಪುಸ್ತಕವನ್ನಾಗಿಸಲು ಪ್ರಕಾಶಕರು ಸಿಗದವರು, ತಮ್ಮ ಸಾಹಿತ್ಯ ಕೃಷಿಗಿನ್ನೂ ಪುಸ್ತಕವಾಗಿಸುವಷ್ಟು ಪ್ರೌಢಿಮೆ ಬಂದಿಲ್ಲವೆನ್ನೂ ಅಭಿಪ್ರಾಯದ ಗೆಳೆಯರು.. ಹೀಗೆ ಹಲತರದ ಮನೋಭಾವದವರು ತಮ್ಮ ಸಾಹಿತ್ಯ ಕೃಷಿಯನ್ನು ಸಾಯಗೊಡದೇ ಬ್ಲಾಗುಗಳ ಮೂಲಕ ಜೀವಂತವಾಗಿಟ್ಟಿದ್ದಾರೆ. ಆಗೊಮ್ಮೆ , ಈಗೊಮ್ಮೆ ಸಣ್ಣ ಪುಟ್ಟ ವೇದಿಕೆಗಳಲ್ಲಿ ಮಿನುಗುತ್ತಿದ್ದಾರೆ.ತುಂಬಾ ದಿನಗಳಿಂದ ಸೆಂಟಿಮೀಟರುಗಳಲ್ಲಿದ್ದ ಮಾತುಗಳನ್ನು ಇಂದು ಇಂಚಿಂಚಾಗಿ ಹೊರಹರಿಸಲು ಸಹಾಯ ಮಾಡಿದ್ದು ಮತ್ತದೇ ಭಾವ ಪ್ರವಾಹ, ಮತ್ತದೇ ಬ್ಲಾಗು ಪ್ರಭಾವ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Badarinath Palavalli
9 years ago

ನಿಮ್ಮ ಈ ಬರಹವು ಬ್ಲಾಗ್ ಲೋಕದ ಔನತ್ಯವನ್ನು ಗುರುತಿಸುವ ಜೊತೆಗೆ ಬ್ಲಾಗಿಗರ ಪರಿಪಾಟಲನ್ನೂ ದಾಖಲಿಸಿತು.
ನನ್ನ ಮಟ್ಟಿಗೆ ನಾನು ಬೇರೆಯಲ್ಲ ಬ್ಲಾಗು ಬೇರೆಯಲ್ಲ.
ನಿಮ್ಮೆಲ್ಲರ ಅಭಿಮಾನಿ ನಾನು.

RAVISHANKAR
9 years ago

ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ…
ಶುಭವಾಗಲಿ….!

ಸತ್ಯಚರಣ ಎಸ್. ಎಮ್.

ಪ್ರಶಸ್ತಿ..!

ನಾ ಸದಾ ನೆನಪಿಸಿಕೊಳ್ಳೋದು, ಅಂಬಿಗ/ಡ್ರೈವರ್ ಕೆಲಸ ಆಗಿದೆ ನಮ್ಮದು. ಇಲ್ಲಿಂದ ಅಲ್ಲಿಗೆ ಬಿಡೋದು ಅಷ್ಟೆ. ನಾವು ಆ ದಾರಿಯಲ್ಲಿ ಮುಂದುವರೆಯೋಣ ಅಂತರ ಸಾವಿರಾರು ನೆಪಗಳು. ಆದರೂ ನಿಮ್ಮ/ನಿಮ್ಮ ಬರಹ ನೋಡಿದಾಗಲೆಲ್ಲಾ ನನ್ನ ಬಗ್ಗೆಯೇ "ಛೇ..! ನಾನ್ಯಾವಾಗ?" ಅಂತ ಅನ್ಕೋಳೋದು, ಮತ್ತೆ ಅದೇ ನೆಪಗಳಲ್ಲಿ ಮುಳುಗಿ, ಜಗತ್ತನ್ನೇ ಮರೆತವರಂತಾಗೋದು, ಸಾಮಾನ್ಯವಾಗಿದೆ. ಬಹುಷಃ ವಿಧಿ/ಭಗವಂತ ಪ್ರತಿಯೊಬ್ಬರಿಗೂ ವಿಭಿನ್ನ ಜವಾಬ್ದಾರಿಗಳನ್ನ ಕೊಟ್ಟಿರುತ್ತಾನೇನೋ ಅಂತ ನಮಗೆ ನಾವೇ ಸಮಾಧಾನ ಮಾಡಿಕೊಳ್ಳೋದಾಗಿದೆ..!
ನಿಮ್ಮ, ನಿಮ್ಮಂತವರ ಸಾಹಿತ್ಯ ಕೃಷಿ ಮುಂದುವರೆಯಲಿ, ಬೆಳೆಯಲಿ ಅಂತ ಹಾರೈಸುತ್ತಾ..

ನಿಮ್ಮೊಲವಿನ,

ಸತ್ಯ

Sushrutha Dodderi
9 years ago

hmmm…

4
0
Would love your thoughts, please comment.x
()
x