ನಮ್ಮ ಬಳಿ ಇಲ್ಲದಿರುವುದಕ್ಕೆ: ಪದ್ಮಾ ಭಟ್


ಹೈಸ್ಕೂಲು ದಿನಗಳಲ್ಲಿ ಆ ಪದ್ಯ ಓದಿದ ನೆನಪು.. ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು. ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು ಎಂಬ ಪದ್ಯದ ಹೆಸರು ಇಕ್ಕಳ ಎಂದು.. ಹೌದಲ್ವಾ.. ನಮಗೆ ಕಳೆದುಹೋಗಿದ್ದೇ ಚನ್ನಾಗಿರುತ್ತದೆ..ಚಿಕ್ಕವರಿರುವಾಗ ದೊಡ್ಡವರಾಗುವ ಕನಸುಗಳು. ದೊಡ್ಡವರಾದ ಮೇಲೆ ಬಾಲ್ಯವೇ ಚನ್ನಾಗಿತ್ತೆಂಬ ಮನಸು.. ಪ್ರತೀದಿನವೂ ಪ್ರತೀಕ್ಷಣವೂ ಸಿಗದೇ ಇರುವುದೇ ಒಳ್ಳೆಯದೆಂಬ ಮರೀಚಿಕೆ ನಮಗೆ.. ಸಿಗದಿರುವ ದ್ರಾಕ್ಷಿ ಹುಳಿಯೇ ಎಂದು ನರಿಯಂತೆ ನಾವಂದುಕೊಳ್ಳುವುದಿಲ್ಲ. . ಸಿಗದೇ ಇರುವುದೇ ಚನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತೇವೆ ಅಲ್ವಾ..? ಬೇರೆಯವರು ಹಾಕಿಕೊಂಡ ಬಟ್ಟೆಯೇ ಚನ್ನಾಗಿರುತ್ತದೆ.. ನಮ್ಮ ಬಟ್ಟೆ ಚನ್ನಾಗಿ ಕಾಣಿಸುವುದೇ ಇಲ್ಲ.. ಅಪ್ಪ ಅಮ್ಮಂದಿರಿಗೂ ಅಷ್ಟೇ.. ಉದಾಹರಣೆಯಾಗಿ ಪಕ್ಕದ ಮನೆಯ ಮಕ್ಕಳನ್ನೇ ಹೇಳುತ್ತಿರುತ್ತಾರೆ.. ನಮಗಿರೋದರಲ್ಲಿ ಖುಷಿ ಪಡುವ ಬದಲು ಬೇರೆಯವರಲ್ಲಿ ಇರುವುದಕ್ಕೇ ಖುಷಿಪಡುತ್ತೇವೆ..

ಎಲ್ಲಾದರೂ ನೆಂಟರ ಮನೆಗೆ ಹೋದರೆಂದಿಟ್ಟುಕೊಳ್ಳಿ.. ಅಲ್ಲಿ ಹೋದವರನ್ನು ಹೇಗಿದ್ದೀರಾ ಎಂದು ಕೇಳುವ ಬದಲು, ನಮ್ಮ ಜೊತೆ ಬೇರೆಯವರು ಯಾಕೆ ಬಂದಿಲ್ಲಾ ಎಂದು ಕೇಳುವುದೇ ಹೆಚ್ಚು..ನೀವೆಷ್ಟೊತ್ತಾಯ್ತು ಬಂದು ಕೇಳುವುದು ಬದಿಗಿರಲಿ.. ಮನೆಯವರನ್ನೆಲ್ಲಾ ಯಾಕೆ ಕರ್‍ಕೊಂಡ್ ಬಂದಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿಯೇ ಸಾಕಾಗಬೇಕು..ಇನ್ನು ಅಕ್ಕಪಕ್ಕದ ಮನೆಗಳಲ್ಲಂತೂ ಹೋಲಿಕೆ ಮಾಡಿಯೇ ಮುಗಿಯುವುದಿಲ್ಲ..ಪಕ್ಕದ ಮನೇಲಿ ಹೊಸ ಕಾರ್ ತೆಗೆದುಕೊಂಡಿದ್ದಾರೆ ನಮ್ಮನ್ನೇಲೂ ತೊಗೋಬೇಕು ಎಂದು ಹೆಂಡತಿಯು ಅಡಿಗೆಮನೆಯಲ್ಲಿಯೇ ಸಣ್ಣಗೆ ಪಿಸುಗುಟ್ಟುವುದು..ಅಯ್ಯೋ  ಆವತ್ತು ಪಕ್ಕದ ಮನೆಯವರು ಒಂದು ಸ್ವೀಟ್ ಕೊಟ್ಟಿದ್ದರಲ್ವಾ..ಅದೆಷ್ಟು ಚನ್ನಾಗಿತ್ತು.. ತುಂಬಾ ಚನ್ನಾಗಿ ಅಡಿಗೆಯನ್ನು ಮಾಡುತ್ತಾಳೆ ಅವಳು ಎಂಬ ಮಾತು..ಮನೆಯ ಅಡಿಗೆಯಲ್ಲಿ ಪ್ರೀತಿಯಿಟ್ಟು ಬಡಿಸಿದರೆ, ಅದ್ಯಾರೋ ಮಾಡಿದ ಅಡುಗೆಯೇ ಅಮೃತದಂತೆ ಕಾಣಿಸುತ್ತದೆ..

ನಮ್ಮ ಬಳಿ ಇರುವುದು, ನಮ್ಮದು ಎಂಬಂತಹದ್ದು ಯಾಕೋ ನಮಗೆ ಸ್ವಲ್ಪ ದೂರವೇ..ಅದನ್ನು ಕಂಡ್ರೆ ಅಷ್ಟಕ್ಕಷ್ಟೆ ಅನ್ನೋ ಹಂಗೆ.. ಇನ್ಯಾರದ್ದೋ ವಸ್ತುವೇ ಚಂದವಾಗಿ ಕಾಣಿಸುತ್ತದೆಇ॒ನ್ನು ಪರೀಕ್ಷೆಯ ರಿಸಲ್ಟು ಬಂದಾಗಲಂತೂ ಕೇಳುವುದೇ ಬೇಡ. ನಿನ್ ಪ್ರೆಂಡ್ ನೂರಕ್ಕೆ ತೊಂಬತ್ತೈದು ತೆಗೆದಿರೋದು,, ನೀ ನೋಡಿದ್ರೆ ಬರೀ ಎಂಬತ್ತೈದು ಎಂಬ ಮಾತುಗಳು..ಅವನು ಯಾವುದೋ ಒಳ್ಳೆಯ ಕೋರ್ಸಿಗೆ ಸೇರ್‍ತಾನಂತೆ, ನಿನ್ನ ಕೋರ್ಸಿಗೆ ಅಷ್ಟೊಂದು ಬೆಲೆ ಇಲ್ಲವೆಂಬ ಅಣುಕುಗಳು, ಕೆಲಸ ಅಂತ ಸಿಕ್ಕಿದ ಮೇಲೆ, ಅವಳು ಮಲ್ಟಿನ್ಯಾಶನಲ್ ಕಂಪನೀಲಿ, ನೀನು ಇದ್ಯಾವುದೋ ಮಳ್ಳು ಕಂಪನೀಲಿ ಕೆಲಸ ಮಾಡ್ತೀಯಾ ಎಂಬ ಹತ್ತಾರು ಹೋಲಿಕೆಗಳು.. ಎಷ್ಟೋ ಅಮ್ಮ ಅಪ್ಪಂದಿರನ್ನು ನೋಡಿದ್ದೇನೆ.. ಯಾವಾಗಲೂ ಬೇರೆಯವರ ಮಕ್ಕಳನ್ನು ನೋಡಿ, ಇವರ ಮಕ್ಕಳ ಬಗ್ಗೆ ಕೊರಗುವುದು. ಜೀ ಕನ್ನಡದ ಸ.ರಿ.ಗ.ಮ.ಪ ಕ್ಕೆ ನಮ್ ಹುಡುಗ ಹೋಗುವಷ್ಟೇನೂ ಅದೃಷ್ಟವಂತ ಅಲ್ಲ ಬಿಡು ಎಂಬಂತಹ ಒಂದಿಷ್ಟು ತಳಮಳಕ್ಕೆ ಏನುಹೇಳಬೇಕೋ.. ಅವರವರ ಸಾಮರ್ಥ್ಯಕ್ಕೆ ತಕ್ಕಂತೆಯೇ ಅವರವರು ಇರುತ್ತಾರೆ.. ಅದರಲ್ಲಿ ಕೊರಗುವುದು ವ್ಯರ್ಥವಷ್ಟೇ..

ಎಲ್ಲರಿಗೂ  ವಿಭಿನ್ನ ರೀತಿಯ ಜೀವನ ಶೈಲಿಯೇ ಬೇಕು.. ಅದು ತಪ್ಪಲ್ಲ.. ಆದರೆ ಇಲ್ಲದಿರುವುದಕ್ಕೆ ಹೋಲಿಸಿಕೊಳ್ಳುವುದು ಒಂದರ್ಥದಲ್ಲಿ ನಮ್ಮನ್ನೇ ನಾವು ಋಣಾತ್ಮಕ ಚಿಂತನೆಗೆ ಒಳಪಡಿಸಿದಂತೆ. ಹುಡುಗರಿಗೆ ಪ್ರೀತಿಸಿದ ನಂತರ ಅವಳ ಗೆಳತಿಯೇ ಇನ್ನೂ ಚಂದ ಕಾಣಲು ಶುರುವಾದರೆ, ಇವನ ಗೆಳೆಯ ಅವಳಿಗೆ  ಸೋ ಹ್ಯಾಂಡ್ ಸಮ್ ಎನಿಸುತ್ತವೆ..ಎಲ್ಲರ ನಡುವೆಯಲ್ಲಿಯೂ ಒಂದು ಅಂತರವನ್ನು ಸೃಷ್ಟಿಸಿಬಿಡುತ್ತದೆ ನೋಡಿ ಈ ಹೋಲಿಕೆಯ ಮೋಡಿ.. ಪರೀಕ್ಷೆಯ ಹಾಲ್‌ನಿಂದ ಹಿಡಿದು, ಅಯ್ಯೋ ಅವನು ಎಡಿಶನಲ್ ಶೀಟ್ ತೊಗೊಂಡ, ನಾನಿನ್ನೂ ತೆಗೆದುಕೊಂಡಿಲ್ಲ ಎಂಬ ಯೋಚನೆ ॒ಶಾಲೆಗಳಲ್ಲಿಯೂ ಎಷ್ಟೋ ಜನ ಶಿಕ್ಷಕರಿಗೆ, ಬುದ್ದಿವಂತನನ್ನು ದಡ್ಡರಿಗೆ ಹೋಲಿಸುವುದೇ ರೂಢಿಯಾಗಿಬಿಟ್ಟಿರುತ್ತದೆ..ಐದೂ ಬೆರಳುಗಳೂ ಒಂದೇ ಸಮನಾಗಿರುವುದಿಲ್ಲವಲ್ಲ.. ಒಂದು ಗುಡ್ಡಕ್ಕಿಂತ ಇನ್ನೊಂದು ಗುಡ್ಡ ಎತ್ತರವೇ ಇರುತ್ತದೆ.. ಅವರವರ ಕಸರತ್ತಿಗೆ ಬಿಟ್ಟ ವಿಚಾರವದು.

ಸಣ್ಣ ಮಗುವಿನಿಂದಲೇ ಶುರುವಾಗುತ್ತದೆ.. ನಮ್ಮ ಬಳಿ ಇಲ್ಲದಿರುವುದೇ ಬೇಕೆಂಬ ಹಠವು..ಸಾವಿರ ಆಟಿಕೆ ಸಾಮಾನುಗಳಿದ್ದರೂ, ಇನ್ಯಾರದ್ದೋ ಕೈಯಲ್ಲಿ ಬೇರೆಯ ತರಹದ್ದಿದ್ದರೆ, ತನಗೂ ಅಂತಹದ್ದೇ ಬೇಕೆಂಬ ಹಠ ಮಾಡುವ ಮಕ್ಕಳು..ನನ್ ಪ್ರೆಂಡ್ ಅಪ್ಪ ಅವಳ ಹುಟ್ಟಿದ ಹಬ್ಬಕ್ಕೆ ಸೈಕಲ್ ಕೊಡಿಸಿದ್ದಾನೆ..ನೀ ಮಾತ್ರ ಬರೀ ಡ್ರೆಸ್ ಕೊಡಿಸ್ತೀಯಾ ಅನ್ನೋವರೆಗೂ ಮಕ್ಕಳ ಗಮನವು ಎಲ್ಲೆಡೆ ಹರಡಲು ಶುರುಮಾಡಿರುತ್ತದೆ..ಹಳ್ಳಿಗಳಲ್ಲಿಯೂ ಎಷ್ಟೋ ಮನೆಗಳಲ್ಲಿ ಅಜ್ಜ ಅಜ್ಜಿಗೆ ದೂರವಿದ್ದ ಮಗನನ್ನು ಕಂಡರೇ ಹೆಚ್ಚು ಪ್ರೀತಿ..ಏಕೆಂಧರೆ ವರುಷಕ್ಕೆ ಒಂದೋ ಎರಡೋ ಬಾರಿ ಬಂದು ಹೋಗುವ ಅವರು ಒಂದು ಮಾತನ್ನೂ ಬೈಯ್ಯುವುದಿಲ್ಲ..ಆದರೆ ವರುಷವಿಡೀ ನೋಡಿಕೊಳ್ಳುವ ಮಗ ಏನೋ ಒಂದೆರಡು ಮಾತು ಹೇಳಿಬಿಟ್ಟಿರುತ್ತಾನೆ.

ಉದಾಹರಣೆಯಾಗಿ ಕೊಡುವಾಗಲೂ ನೋಡಿ, ಅಮೇರಿಕಾ ಜಪಾನ್ ಅಂತ ಸುದ್ದಿಯನ್ನು ಹೇಳಿಕೊಳ್ಳುತ್ತೇವೆ.. ಫಾರೆನ್ ಬರಹಗಾರರೇ ಹೆಚ್ಚೆಂದು ಹೇಳುತ್ತೇವೆ.. ಅದ್ಯಾಕೆ ಫಾರೆನ್ ವಸ್ತುಗಳೆಂದರೇ ನಮಗೆಲ್ಲ ಹೆಚ್ಚು ಪ್ರೀತಿ..ಎಂತಹ ವಿಪರ್‍ಯಾಸ ನೋಡಿ..ಎಲ್ಲರಿಗೂ ತಮ್ಮ ಬಳಿ ಇರುವುದಕ್ಕಿಂತ ಇಲ್ಲದಿರುವುದರ ಬಗ್ಗೆಯೇ ಹೆಚ್ಚು ಪ್ರೀತಿ.. ಈಗ ಏನಿದೆಯೋ ಅದು ಬೇಡವೆಂಬ ಕೊಂಕುಮಾತು.. ಇದ್ದುದರಲ್ಲಿಯೇ ತೃಪ್ತಿಯಿದೆ ಎಂದು ಹೇಳುವವರು ಎಷ್ಟು ಜನರಿದ್ದಾರೆ ಅಲ್ವಾ?? ಪಕ್ಕದ ಮನೆಯವರೇ ಇನ್ನೂ ಚಂದವಾಗಿ ಕಾಣುತ್ತಾರೆ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x