Facebook

ದೇವರ ಹೆಣ ನಿಮಗೆ ಇಷ್ಟ ಅಲ್ವಾ?: ನಟರಾಜು ಎಸ್. ಎಂ.

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದೂರಲ್ಲಿ ಒಂದು ಗಟ್ಟಿಮುಟ್ಟಾದ ಆರೋಗ್ಯವಂತ ಹಸು ಕಾಡಿಗೆ ಮೇಯಲು ಹೋಗಿ ಇದ್ದಂಕ್ಕಿದ್ದಂತೆ ಕಾಡಿನಲ್ಲೇ ಸತ್ತು ಹೋಗಿರುತ್ತದೆ. ತನ್ನ ಮಾವನ ರೇಡಿಯೋ ರಿಪೇರಿಯ ಕಲೆಯನ್ನು ಒಬ್ಬ ಹುಡುಗ  ತದೇಕಚಿತ್ತದಿಂದ ನೋಡುತ್ತಾ ಕುಳಿತ್ತಿರುತ್ತಾನೆ. ಯಾರೋ ಬಂದು ಹಸು ಸತ್ತು ಹೋಗಿರುವ ಸುದ್ದಿಯನ್ನು ಆ ಹುಡುಗನ ಮಾವನಿಗೆ ತಿಳಿಸಿದಾಗ ಆ ಹುಡುಗನ ಮಾವ "ಮಗ, ತಗೋಳು ಸೈಕಲ್ ನ." ಎಂದು ಹೇಳಿ ಮನೆ ಒಳಗೆ ಹೋದವನು ಒಂದು ಚೂರಿ, ಮಚ್ಚು, ಕುಡ್ಲು, ಹಾಗು ಎರಡು ಪ್ಲಾಸ್ಟಿಕ್ ಚೀಲದೊಂದಿಗೆ ಮನೆಯಿಂದ ಹೊರಗೆ ಬರುತ್ತಾನೆ. ಆ ಹುಡುಗ ಹಿತ್ತಲಲ್ಲಿ ನಿಲ್ಲಿಸಿದ್ದ ಸೈಕಲ್ ನ ಟ್ಯೂಬ್ ಗಳನ್ನು ಒಮ್ಮೆ ಚೆಕ್ ಮಾಡಿ ಕಡಿಮೆ ಗಾಳಿ ಇರುವ ಚಕ್ರಕ್ಕೆ ಸೈಕಲ್ ಪಂಪ್ ನಿಂದ ಪಂಪ್ ಹೊಡೆದು "ನಾನು ರೆಡಿ" ಎಂಬಂತೆ ಮಾವನ ಎದುರು ನಿಲ್ಲುತ್ತಾನೆ. ಕೆಲವು ತಿಂಗಳುಗಳ ಹಿಂದಷ್ಟೇ ಸೈಕಲ್ ಕಲಿತಿರುವ ಹುಡುಗನಿಗೆ ಮಾವನನ್ನು ಹಿಂದೆ ಕುಳ್ಳರಿಸಿಕೊಂಡು ಸೈಕಲ್ ತುಳಿಯುವುದು ರೂಢಿಯಾಗಿದೆ. ಹದಿಮೂರು ವರ್ಷದ ಹುಡುಗನಿಗೆ ಮೂವತ್ತು ವರ್ಷ ವಯಸ್ಸಿನ ಮಾವನನ್ನು ಸೈಕಲ್ ನ ಹಿಂದೆ ಕುಳ್ಳರಿಸಿಕೊಂಡು ಸೈಕಲ್ ಬ್ಯಾಲೆನ್ಸ್ ಮಾಡುತ್ತಾ ಸೈಕಲ್ ತುಳಿಯುತ್ತಾ ಅಪ್ ಬಂದಾಗ ಏದುರಿಸುಬಿಡುವುದು ಡೌನ್ ಬಂದಾಗ ನೆಮ್ಮದಿಯಿಂದ ನಿಟ್ಟುಸಿರುಬಿಡುವುದರೆಂದರೆ ಏನೋ ಖುಷಿ. ಆ ರೀತಿ ಖುಷಿಯಿಂದ ಮಾವನ ಜೊತೆ ಸೈಕಲ್ ನಲ್ಲಿ ಒಂದೈದು ಕಿಲೋ ಮೀಟರ್ ಮಣ್ಣು ರಸ್ತೆಯಲ್ಲಿ ಸಾಗಿ ನಂತರ ದಾರಿಯಲ್ಲಿ ಸಿಕ್ಕ ಊರವನೊಬ್ಬನಿಂದ ಹಸು ಇರುವ ಜಾಗವನ್ನು ತಿಳಿದು ಸೈಕಲ್ ಇಳಿದು ಕಾಡಿನ ಕಾಲು ದಾರಿಯಲ್ಲಿ ಸಾಗಿ ಹಸು ಮಲಗಿರುವ ಜಾಗ ತಲುಪಿದ ಒಂದೈದು ನಿಮಷದಲ್ಲಿ ಕಾಡಿನ ಮೂಲೆ ಮೂಲೆಗಳಿಂದ ದನ ಕುರಿ ಆಡುಗಳನ್ನು ಮೇಯಿಸಲು ಬಂದವರು ಸಹ ಈ ಇಬ್ಬರೊಡನೆ ಕೂಡಿಕೊಳ್ಳುತ್ತಾರೆ. ಆ ಹುಡುಗನ ಮಾವ ಮರದ ಕೊಂಟೊಂದನ್ನು ತುಂಡರಿಸಿ ತರುತ್ತಾನೆ. ಒಂದಿಬ್ಬರು ಹೆಂಗಸರು ಹೊಂಗೆ ಸೊಪ್ಪನ್ನು ಕಡಿದು ಒಂದೆಡೆ ಹಾಕುತ್ತಾರೆ. ಆ ಹುಡುಗನ ಮಾವ ಚೂರಿಯನ್ನು ಅಲ್ಲೇ ಕಲ್ಲೊಂದರ ಮೇಲೆ ಉಜ್ಜಿ ಉಜ್ಜಿ ಚೆನ್ನಾಗಿ ಹರಿತ ಮಾಡಿ ನಂತರ ಕಾರ್ಯತತ್ಪರನಾಗಿ ಹಸು ಮಲಗಿದ ರೀತಿಯಲ್ಲೇ ಚಾಣಚಕ್ಯತೆಯಿಂದ ಹಸುವಿನ ಚರ್ಮವನ್ನು ಸುಲಿಯುತ್ತಾನೆ. ಅವನು ಸುಲಿದ ಚರ್ಮ ಹೇಗಿರುತ್ತದೆ ಎಂದರೆ ತನ್ನ ಚರ್ಮದ ಮೇಲೆ ತಾನೆ ಹಸು ಮಲಗಿರುವಂತೆ ಭಾಸವಾಗುತ್ತದೆ. ಆ ರೀತಿ ಮಲಗಿರುವ ಹಸು ನಂತರ ಮಾಂಸದ ಗುಡ್ಡೆಗಳಾಗಿ ಅಲ್ಲಿ ಬಂದಿದ್ದ ಅಷ್ಟು ಜನರ ಪಾಲಿಗೆ ದೊರೆತಾದ ಮೇಲೆ ಉಳಿದ ದೊಡ್ಡ ಪಾಲು ಸೈಕಲ್ ನ ಎರಡೂ ಬದಿಯ ಚೀಲಗಳಲ್ಲಿ ಜಾಗ ಪಡೆಯುತ್ತದೆ. ಮಾಂಸವನ್ನು ಹೊತ್ತ ಆ ಸೈಕಲ್ ಅನ್ನು ತಳ್ಳಿಕೊಂಡು ಹುಡುಗ ಸಾಗುತ್ತಿದ್ದರೆ "ಲೇ ಮಗ ಬೀಳಿಸಿಬಿಟ್ಟೀಯ ಕಣೋ. ಉಷಾರು" ಎಂದು ತಾನು ಸಹ ಸೈಕಲ್ ಹಿಂದೆ ಬೀಡಿ ಕಚ್ಚಿಕೊಂಡು ಆ ಹುಡುಗನ ಮಾವ ಸಾಗುತ್ತಿರುತ್ತಾನೆ. 

ಅದೇ ಹುಡುಗ ಮುಂದೊಂದು ದಿನ ಕಾಲೇಜು ಮೆಟ್ಟಿಲೇರುತ್ತಾನೆ. ಒಂದು ದಿನ ತರಗತಿಯಲ್ಲಿ ಕುಂವೀ ಬರೆದ "ದೇವರ ಹೆಣ" ಎಂಬ ಕತೆಯನ್ನು ಮೇಷ್ಟ್ರು ಹಾಸ್ಯ ಬೆರೆಸಿ ರಸವತ್ತಾಗಿ ಓದುತ್ತಿರುತ್ತಾರೆ. ಆ ಕತೆಯಲ್ಲಿ ಠೊಣ್ಣಿ ಕಥಾನಾಯಕ. ಊರಿನಲ್ಲಿ ಗೌಡರು ಸತ್ತೋದ ತಮ್ಮ "ದೇವರು" ಎಂಬ ದನವನ್ನು ಸಂಪ್ರದಾಯದಂತೆ ಅದನ್ನು ತಿನ್ನುವವರಿಗೆ ನೀಡದೆ ಮಣ್ಣು ಮಾಡಿರುತ್ತಾರೆ. ಹಸಿವಿನಿಂದ ಕಂಗಾಲಾದ ಠೊಣ್ಣಿ ದೇವರ ಹೆಣವನ್ನು ಇಲ್ಲವಾಗಿಸುವುದು ಕಥಾ ವಸ್ತು.  "ಇದು ನಮ್ಮ ಅಜ್ಜಿ ಮನೆ ಕತೆ ಇದ್ದ ಹಾಗೆ ಇದೆ. ಅಂದ ಹಾಗೆ ಇವೆಲ್ಲಾ ಇದನ್ನು ಬರೆದಿರೋ ಆವಯ್ಯನಿಗೆ ನಮ್ಮ ಕತೆಯೆಲ್ಲಾ ಹೆಂಗೆ ಗೊತ್ತಾಯ್ತು." ಎನ್ನುತ್ತಾ ಆ ಹುಡುಗ ಅಚ್ಚರಿಪಡುತ್ತಾ ಮೇಷ್ಟ್ರು ಮಾಡುತ್ತಿರುವ ಹಾಸ್ಯಕ್ಕೆ  ತನ್ನ ಮಾವನ ಸೈಕಲ್, ಸತ್ತಿದ್ದ ಆ ಹಸು, ಆ ಕಾಡು, ಆ ಜನ, ಆ ಮಾಂಸ, ಆ ಮಾಂಸದೊಂದಿಗೆ ತಾನು ಸೈಕಲ್ ತಳ್ಳಿಕೊಂಡು ಸಾಗಿದ್ದು ಎಲ್ಲಾ ನೆನಪಿಗೆ ಬಂದು ತಾನೂ ಮುಸಿ ಮುಸಿ ನಕ್ಕು ಸುಮ್ಮನಾಗಿಬಿಡುತ್ತಾನೆ. ಅವನು ಸುಮ್ಮನಿದ್ದರೂ ನೆನಪುಗಳು ಅವನನ್ನು ಸುಮ್ಮನೆ ಬಿಡುವುದಿಲ್ಲ. ಅವತ್ತು ಅವನು ಮತ್ತು ಅವನ ಮಾವ ಮನೆಗೆ ತಂದ ಅಷ್ಟು ಬಾಡನ್ನು ಅಂದರೆ ಮಾಂಸವನ್ನು ಒಂದೇ ದಿನಕ್ಕೆ ಇಡೀ ಮನೆಯವರು ತಿಂದು ಮುಗಿಸಿಬಿಡುವುದು ಸಾಧ್ಯವಿಲ್ಲ ಅಲ್ಲವಾ? ಆ ಕಾರಣಕ್ಕೆ ಆ ಮಾಂಸವನ್ನು ಅವತ್ತಿಗೆ ಎಷ್ಟು ಬೇಕು ಅಷ್ಟನ್ನು ಇಟ್ಟುಕೊಂಡು, ಒಂದಷ್ಟನ್ನು ಸಂಬಂಧಿಕರಿಗೆ ಹಂಚಿ ಉಳಿದದ್ದನ್ನು ಅವನ ಅಜ್ಜಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಒಂದಷ್ಟನ್ನು ವಂದರಿಯೊಳಗಿಟ್ಟು ಅದರ ಮೇಲಷ್ಟು ಮುಳ್ಳುಗಳನಿಟ್ಟು ಬಿಸಿಲಿಗಿಟ್ಟಿದ್ದು ಅವನಿಗೆ ನೆನಪಿದೆ. ಆ ರೀತಿ ಒಣಗಿದ ಬಾಡಿಗೆ ಕೊರಬಾಡು ಎಂದು ಕರೆಯುತ್ತಾರೆ ಎಂದು ಅನೇಕರಿಗೆ ಗೊತ್ತಿರುತ್ತದೆ. ಮಳೆಗಾಲವಾದರೆ ಆ ಬಾಡಿನ ತುಂಡುಗಳು ಮನೆಯ ಒಲೆಯ ಮೇಲ್ಗಡೆಯ ಗಳವೊಂದರ ಮೇಲೆ ನೇತಾಡಿಕೊಂಡು ಒಣಗಿಕೊಳ್ಳುತ್ತವೆ. ಆ ರೀತಿ ಒಣಗಲು ಇಟ್ಟ ಮಾಂಸದ ವಾಸನೆಯನ್ನು ಹೊರಗಿನಿಂದ ಮನೆಗೆ ಬಂದವರು ತಕ್ಷಣ ಗುರುತಿಸಬಲ್ಲರು. ಆ ರೀತಿ ಒಣಗಿಕೊಂಡ ಮಾಂಸದ ತುಂಡುಗಳು ಕೆಂಡದ ಮೇಲೆ ಸುಟ್ಟೋ ಸಾಂಬಾರಾಗಿಯೋ ತಿನ್ನುವವರ ಹೊಟ್ಟೆ ಸೇರುತ್ತವೆ. ಅವತ್ತು ಚಿಕ್ಕ ಮಗ ಎಡಚ ಮತ್ತು ಮೊಮ್ಮಗ ತಂದ ಮಾಂಸವನ್ನು ಒಣಗಿಸಿ ಮಾಡಿದ ಕೊರಬಾಡನ್ನು ತನ್ನ ಅಜ್ಜಿ ಬ್ಯಾಗೊಂದರಲ್ಲಿ ಪ್ಯಾಕ್ ಮಾಡಿ ದೃಷ್ಟಿಯಾಗುತ್ತದೆ ಎಂದು ಒಂದೆರಡು ಮೆಣಸಿಕಾಯಿ ಹಾಗು ಇದ್ದಿಲನ್ನು ಸಹ ಬ್ಯಾಗಿನಲ್ಲಿ ಹಾಕಿ ಆ ಹುಡುಗನನ್ನು ಬಸ್ ಹತ್ತಿಸಿದಾಗ "ಏನ್ಲಾ ಮಗ ಬ್ಯಾಗೊಳಗೆ?" ಎಂದು ನಗುತ್ತಾ ಬಸ್ ನೊಳಗೊಬ್ಬ ಕೇಳಿದ ಪ್ರಶ್ನೆಗೆ ಏನು ಉತ್ತರಿಸಬೇಕೆಂದು ತಿಳಿಯದೆ ಆ ಹುಡುಗ ಪೆಚ್ಚು ಪೆಚ್ಚಾಗಿ ನಕ್ಕಿದ್ದ. 

ಆ ಬಸ್ಸಿನ ಕತೆ ಬಿಡಿ ಅವನನ್ನು ಇನ್ನೂ ಪೆಚ್ಚು ಪೆಚ್ಚಾಗಿ ಮಾಡುವ ಕತೆಯೆಂದರೆ ಆತನ ಅಪ್ಪನದು. ಆ ಹುಡುಗನ ಅಪ್ಪ ಚಿಕ್ಕ ವಯಸ್ಸಿನಲ್ಲಿದ್ದಾಗ ಒಮ್ಮೆ ಮಟನ್ ತಿಂದ ಕಾರಣಕ್ಕೆ ಮೈಯೆಲ್ಲಾ ಗಂದೆಯಾಗಿತ್ತು. ಆ ಕಾರಣಕ್ಕೆ ಕೋಳಿಯೊಂದನ್ನು ಬಿಟ್ಟು ಬೇರೆ ಮಾಂಸವನ್ನು ಮುಟ್ಟುತ್ತಿರಲಿಲ್ಲ. ಮದುವೆಯ ಸಮಯದಲ್ಲಿ ಹೆಣ್ಣು ನೋಡಲು ಹೋದಾಗ ಅತ್ತೆಯ ಮನೆ ತುಂಬಾ ಕೊರಬಾಡು ಕಂಡು ಹೌಹಾರಿದ್ದ ಹುಡುಗನ ಅಪ್ಪ ಕೊರಬಾಡು ತುಂಬಿಸಿಟ್ಟಿದ್ದ ವಂದರಿಗೆ ಸೀಮೆಎಣ್ಣೆ ಸುರಿದು ಯಾರಿಗೂ ಒಂದು ಮಾತು ಹೇಳದೆ ಊರಿಗೆ ವಾಪಾಸಾದ ಸುದ್ದಿ ಕಾಳ್ಗಿಚ್ಚಿನಂತೆ ಊರಲೆಲ್ಲಾ ಹಬ್ಬಿಕೊಂಡಿತ್ತಂತೆ. ಇವತ್ತಿಗೂ ಕೊರಬಾಡಿನ ವಿಷಯ ಬಂದಾಗಲೆಲ್ಲಾ ಅಪ್ಪನ ಸಮಕಾಲೀನರು "ನಿಮ್ಮಪ್ಪ ನಿಮ್ಮವ್ವನನ್ನು ನೋಡೋಕೆ ಹೋದಾಗ ಕೊರಬಾಡಿಗೆ ಸೀಮೆಎಣ್ಣೆ  ಸುರಿದುಬುಟ್ಟು ಬಂದಿತ್ತು ಮಗ" ಎಂದು ನಗಾಡುತ್ತಿದ್ದ ಜನರ ನಗುವ ನೆನೆದಾಗ ಆ ಹುಡುಗನಿಗೆ ಅಜ್ಜಿಯ ಮನೆಯ ಏನೆಲ್ಲಾ ನೆನಪುಗಳು ಒತ್ತರಿಸಿ ಬಂದಂತಾಗುತ್ತದೆ. 

ಆ ಹುಡುಗನ ಅಜ್ಜಿ  ಥೇಟ್ ದೇವನೂರು ಮಹಾದೇವರ ಸಾಕವ್ವನಂತೆ. ಅಜ್ಜಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಮೊದಲನೆಯ ಮಗನ ಹೆಸರು ಮೀಸೆ. ನಡುಕಲವನು ಅಂದರೆ ಮಧ್ಯದ ಮಗ ಶಿವರಾಜ. ಕಿರಿಯವನ ಹೆಸರು ಎಡಚ. ಮೊದಲ ಮಗಳು ಗೌರಿ. ಎರಡನೆಯವಳು ಚಂದ್ರಿ. ನಮ್ಮ ಈ ಕತೆಯಲ್ಲಿ ಕಾಣಿಸಿಕೊಂಡಿರುವ ಹುಡುಗ ಗೌರಿಯ ಹಿರೀ ಮಗ. ಮೀಸೆ ಇದ್ದುದು ದೂರದ ಮೈಸೂರಿನಲ್ಲಿ. ಶಿವರಾಜ ತಾಲ್ಲೂಕು ಆಫೀಸಿನಲ್ಲಿ ಗ್ರಾಮ ಸೇವಕರ ಜೊತೆ ಓಡಾಡಿಕೊಂಡಿದ್ದ. ಎಡಚ ಕೈಗೆ ಸಿಕ್ಕ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನೆಲ್ಲಾ ಬಿಚ್ಚಿ ತೆಗೆದು ಒಳ ಇಣುಕಿ ನೋಡುವುದ ಕಲಿತಿದ್ದ ಕಾರಣ ರೇಡಿಯೋ ಟೇಪ್ ರೆಕಾರ್ಡರ್ ಎಲ್ಲವನೂ ಅಜ್ಜಿ ಭಾಷೆಯಲ್ಲಿ ಹೇಳುವುದಾದರೆ ಸುದ್ದ ಮಾಡುವುದ ಕಲಿತ್ತಿದ್ದ. ಅಂದ್ರೆ ರಿಪೇರಿ ಮಾಡುವುದ ಕಲಿತ್ತಿದ್ದ. ಆ ಕಾರಣಕ್ಕೆ ಆಗಾಗ ತನ್ನ ಸೈಕಲ್ ಏರಿ ರೇಡಿಯೋ ರಿಪೇರಿ ಮಾಡಲೆಂದೇ ಊರೂರಿಗೆ ಪರ್ಯಟಣೆಗೆ ಹೊರಟು ಬಿಡುತ್ತಿದ್ದ. ಆ ರೀತಿ ಪರ್ಯಟಣೆಗೆ ಹೋದವನು ವಾರವಾದರೂ ಊರಿನ ಕಡೆ ಸುಳಿಯುತ್ತಿರಲಿಲ್ಲ. ಅಜ್ಜಿಗೆ ಊರ ಹತ್ತಿರದಲ್ಲೇ ಒಂದಷ್ಟು ಜಮೀನಿತ್ತು. ಆ ಜಮೀನು ಹೆಚ್ಚಾಗಿ ಕಲ್ಲುಗಳಿಂದ ಕೂಡಿದ ಕಾರಣಕ್ಕೆ ಮೂರು ಜನ ಗಂಡು ಮಕ್ಕಳಲ್ಲಿ ಯಾರಿಗೂ ಜಮೀನಿನ ಮೇಲೆ ಅಷ್ಟು ಅಕ್ಕರೆ ಇರಲಿಲ್ಲ. ಆ ಕಾರಣಕ್ಕೆ ಅಜ್ಜಿ ಮನೆಯಲ್ಲಿ ದನ ಕರುಗಳೂ ಸಹ ಇರಲಿಲ್ಲ. ಹೊಲ ಉಳಿಯಬೇಕಾದರೆ ಹೊಲ ಉಳಿಸಬೇಕು ಎಂಬ ಕಾರಣಕ್ಕೆ ಅಜ್ಜಿಯೇ ಅವರಿವರನ್ನು ಕೂಲಿಗೆ ಕರೆದು ಹೊಲ ಉಳಿಸಿ ರಾಗಿ ಕಡ್ಲೇ ಕಾಯಿ ಬೆಳೆಯುತ್ತಿತ್ತು. ರಾಗಿ ಕಡ್ಲೇಕಾಯಿ ಜೊತೆಗೆ ಹುರುಳಿ, ಅಲಸಂದೆ, ಅವರೆ, ತೊಗರಿಯನ್ನು ಸಹ ಅಜ್ಜಿ ಬೆಳೆದುಕೊಳ್ಳುತ್ತಿತ್ತು. ಅಜ್ಜಿ ಆ ತುಂಡು ಭೂಮಿಯಲ್ಲಿ ಬೆಳೆದ ಬೆಳೆ ಒಮ್ಮೊಮ್ಮೆ ಮಗಳು ಗೌರಿಯ ಮನೆಯವರೆಗೂ ಸರಬರಾಜಾಗುತ್ತಿತ್ತು. ಕಿರಿ ಮಗಳು ಚಂದ್ರಿ ಹೆರಿಗೆಯ ಸಮಯದಲ್ಲಿ ತೀರಿಕೊಂಡಿದ್ದಳು. 

ಅಜ್ಜಿಯ ಗಂಡ ಚೂಡಯ್ಯ ತುಂಬಾ ವರ್ಷಗಳ ಹಿಂದೆಯೇ ದೈವಾಧೀನರಾಗಿದ್ದ ಕಾರಣ ಚೂಡಯ್ಯನ ವಂಶಪಾರಂಪರಿಕವಾಗಿ ಬಂದಿದ್ದ "ತೋಟಿತನ" ಅಜ್ಜಿಯ ಪಾಲಿಗೆ ಬಂದಿತ್ತು. ಬಹುಶಃ ತೋಟಿತನ ಎಂದರೆ ಊರಿನಲ್ಲಿ ಯಾವುದೇ ನ್ಯಾಯ ಪಂಚಾಯ್ತಿ ಹಬ್ಬ ಹರಿದಿನ ಬಂದಾಗ ಆ ಕಾರ್ಯಕ್ರಮ ಕುರಿತು ತಮಟೆ ಬಾರಿಸುವ ಮೂಲಕ ಬೀದಿ ಬೀದಿಯಲ್ಲಿ ಸಾರುವುದು ಅಂದರೆ ಅನೌಂಸ್ ಮೆಂಟ್ ಮಾಡುವುದು. ಉದಾಹರಣೆಗೆ "ಕೇಳ್ರಪ್ಪೋ ಕೇಳ್ರಿ ,,,," ಎಂದು ಸಾರುವುದನ್ನು ನೀವು ಹಳ್ಳಿಯವರಾಗಿದ್ದರೆ ಹಳ್ಳಿಯಲ್ಲೂ ಸಿಟಿಯವರಾಗಿದ್ದರೆ ಸಿನಿಮಾದಲ್ಲಿ ನೋಡೀರ್ತೀರಿ. ಆ ರೀತಿ ಸಾರಲು ತಮಟೆ ಉಪಯೋಗಿಸತ್ತಾರಲ್ವ ಆ ತಮಟೆಯ ತಯಾರಿ, ತಮಟೆ ಬಾರಿಸುವವರಿಗೆ ತರಬೇತಿ, ತಮಟೆ ಬಾರಿಸುವವರ ತಂಡವನ್ನು ಕಟ್ಟುವುದು ಮತ್ತು ಆ ತಂಡವನ್ನು ಹಬ್ಬ ಹರಿದಿನ ಸಾವು ನೋವುಗಳ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುವುದು ಇವು ತೋಟಿತನ ಮಾಡುವವರ ಅತಿ ಮುಖ್ಯ ಕರ್ತವ್ಯಗಳು. ಹಿರಿ ತಲೆಗಳು ಸಂಪ್ರದಾಯವಾದಿಗಳು ಕತೆಗಾರರು ಊರಿನಲ್ಲಿ ಸತ್ತ ದನವನ್ನು ಮಣ್ಣು ಮಾಡುವುದು ಅಥವಾ ಕುಯ್ದು ತಿನ್ನುವುದೂ ಸಹ ತೋಟಿಗಳ ಕೆಲಸ ಎಂದು ಮತ್ತೊಂದು ಸಾಲನ್ನು ಸೇರಿಸಿ ಅದೇ ಅವರ ಮುಖ್ಯ ಕರ್ತವ್ಯ ಎಂಬಂತೆ ಬಿಂಬಿಸಲೂಬಹುದು. ಸತ್ತ ದನಗಳ ಕುಯ್ದು ತಿನ್ನುವ ಪರಿಪಾಠ ಇಂದು ಎಷ್ಟೋ ಕಡೆ ಮಾಯವಾಗಿರುವಾಗ ತಮಟೆ ಹೊಡೆಯುವುದು ಈಗಲೂ ತೋಟಿಗಳ ಕರ್ತವ್ಯವಾಗಿರುವ ಕಾರಣ ತಮಟೆ ಬಾರಿಸುವ ಕಲೆ ತೋಟಿಗಳ ಮುಖ್ಯ ಕರ್ತವ್ಯ ಎಂದು ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. 

ತೋಟಿಗಳ ಕರ್ತವ್ಯಗಳು ಇಷ್ಟೆಲ್ಲಾ ಇರುವಾಗ ದೊಡ್ಡ ಮಗ ಮೈಸೂರಿನಲ್ಲೂ ನಡುಕಲವನು ತಾಲ್ಲೂಕು ಆಫೀಸಿನಲ್ಲೂ ಕಿರಿಯವನು ರೇಡಿಯೋ ರಿಪೇರಿಯಲ್ಲೂ ತೊಡಗಿದ್ದಾಗ ಹೆಂಗಸಾಗಿ ಅಜ್ಜಿ ದಶಕಗಳ ಕಾಲ ತೋಟಿತನ ಹೇಗೆ ನಿರ್ವಹಿಸುತ್ತಿದ್ದಳು ಎಂಬುದ ನೆನೆದರೆ ಸೋಜಿಗವಾಗುತ್ತದೆ. ಆ ಅಜ್ಜಿಯ ಮನೆಯಲ್ಲಿ ತಮಟೆಯ ತಯಾರಿ ನಡೆಯುತ್ತಿರಲಿಲ್ಲ. ಚೂಡಯ್ಯನ ಕಾಲದಲ್ಲಿ ನಡೆಯುತ್ತಿತ್ತೋ ಏನೋ ತಿಳಿಯದು. ಆಡು ಅಥವಾ ಮೇಕೆಯ ಸುಲಿದ ಚರ್ಮ ತಂದು ಚರ್ಮದ ಒಳ ಭಾಗಕ್ಕೆ ಉಪ್ಪು ಸವರಿ ನೆಲದ ಮೇಲಿಟ್ಟು ಚರ್ಮದ ಮೂಲೆ ಮೂಲೆಗೂ ಮರದ ಚಿಕ್ಕ ಚಿಕ್ಕ ಬೆಣೆಗಳನ್ನು ಬಡಿದು ಬಿಸಿಲಿನಲ್ಲಿ ಒಣಗಿಸುವುದು. ಒಣಗಿದ ಚರ್ಮದ ಕೂದಲಿನ ಭಾಗಕ್ಕೆ ಬಹುಶಃ ಬೂದಿ ಬಳಿದು ಸೂಕ್ಷ್ಮವಾಗಿ ಕೂದಲುಗಳನ್ನು ಇಲ್ಲವಾಗಿಸಿ ನಂತರ ತಮಟೆಯ ಬಳೆಗಳಿಗೆ ಚರ್ಮವನ್ನು ಬಿಗಿದು ತಮಟೆಯ ತಯಾರಿಸುವ ಕಲೆ ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ. ಈ ವಿದ್ಯೆಯನ್ನು ಅಜ್ಜಿಯ ಮಕ್ಕಳು ಬಹುಶಃ ಒಲಿಸಿಕೊಂಡಿರಲಿಲ್ಲ. ಆದರೆ ಅವರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿದರೂ ವಂಶಪಾರಂಪರ್ಯವಾಗಿ ಬಂದಿದ್ದ ತಮಟೆ ಬಾರಿಸುವುದನ್ನು ಅದು ತಮ್ಮ ಸಂಪ್ರದಾಯವೆಂಬಂತೆ ಚಿಕ್ಕ ವಯಸ್ಸಿಗೆ ಕಲಿತ್ತಿದ್ದರು. ಆ ಕಾರಣಕ್ಕೆ "ಲೋ ಮಗ, ಹಬ್ಬಕ್ಕೆ ಸಾರಬುಟ್ಟು ಬಾರಪ್ಪ" ಅಂದ್ರೆ ಎಡಚ ಎಂಬ ಅಡ್ಡ ಹೆಸರಿನ ಶಿವಣ್ಣನೇ ಆಗಲಿ ಮಧ್ಯದ ಮಗ ಶಿವರಾಜನೇ ಆಗಲಿ ಅವ್ವನ ಮಾತಿಗೆ ಇಲ್ಲ ಅನ್ನುತ್ತಿರಲಿಲ್ಲ. ಯಾರೂ ಇಲ್ಲದಿದ್ದಾಗ ಅಜ್ಜಿಯೇ ತನ್ನ ದನಿಯನ್ನು ಬೀದಿ ಬೀದಿಗಳಲ್ಲಿ ಮುಟ್ಟಿಸಿ ಬಂದಿದ್ದರೂ ಬಂದಿರಬಹುದು. ಅಷ್ಟು ಗಟ್ಟಿಗಿತ್ತಿ ಆಕೆ. ಆ ಗಟ್ಟಿಗಿತ್ತಿ ಊರಿನ ಮಾರಿ ಹಬ್ಬದ ದಿನಗಳಲ್ಲಿ ಕುಡಿದು ತೂರಾಡುವ ತಮಟೆಯ ತಂಡವನ್ನು ನಿಯಂತ್ರಣಕ್ಕೆ ತಂದುಕೊಂಡು ತಮಟೆ ಹೊಡೆಸುವುದಿದೆಯಲ್ಲಾ ಅದು ನಿಜಕ್ಕೂ ಕಷ್ಟದ ಕೆಲಸ. ಆ ರೀತಿ ತಾನು ಹೆಣ್ಣೆಂಬ ಭಾವಕ್ಕೆ ನಾಚದೆ ತೋಟಿತನ ತನ್ನ ಗಂಡನ ವಂಶದ ಪವಿತ್ರ ವೃತ್ತಿ ಎಂಬಂತೆ ಶ್ರಧ್ದೆಯಿಂದ ತೋಟಿತನ ನಿರ್ವಹಿಸಿದ ಅಜ್ಜಿಗೆ ಸಿಗುತ್ತಿದ್ದ ಪಾಲೆಂದರೆ ಊರೊಟ್ಟಿನ ದುಡ್ಡು, ರಾಗಿ, ಕಾಳು, ಕಡ್ಡಿ, ದವಸ ಧಾನ್ಯ ಇವುಗಳಿಗಿಂತ ಹೆಚ್ಚಾಗಿ ಯತ್ತೇಚ್ಛವಾಗಿ ಒಂದು ಕಾಲದಲ್ಲಿ ಅಜ್ಜಿಯ ಪಾಲಿಗೆ ದೊರೆಯುತ್ತಿದ್ದುದೆಂದರೆ ಮಾಂಸ. 

ಸಾಹಿತ್ಯಾಸಕ್ತರಿಗೆ ಈ ಮೇಲೆ ತಿಳಿಸಿದ ಪಾತ್ರಗಳು ಕತೆಗಳು ಅಲ್ಲಲ್ಲಿ ಕಾಣಬಹುದು. ಈ ಅಜ್ಜಿಯಂತವರ ಪಾತ್ರವನ್ನು ದೇವನೂರರು ಸಾಕವ್ವಾ ಎಂತಲೂ, ಆ ಹುಡುಗನ ಮಾಮನ ಕತೆಯನ್ನು ಕುಂವೀ ಠೊಣ್ಣಿ ಎಂತಲೂ, ತಮಟೆ ನುಡಿಸುವವರಂತಹ ಕತೆಯನ್ನು ಶಿವರಾಮಕಾರಂತರು ಚೋಮ ಎಂತಲೂ ಅಜರಾಮರಗೊಳಿಸಿದ್ದಾರೆ. ಈ ಪಾತ್ರಗಳು ನಾಟಕಗಳಾಗಿವೆ, ಬಹುಶಃ ಕಿರು ಚಿತ್ರಗಳೂ ಆಗಿರಬಹುದು. ಈ ಪಾತ್ರಗಳನ್ನು ಸೃಷ್ಟಿಸಿದವರಿಗೂ, ಪಾತ್ರಗಳಾಗಿ ನಟಿಸಿದವರಿಗೂ ಸಮಾಜ ಒಳ್ಳೆಯ ಸ್ಥಾನಮಾನ ನೀಡಿದೆ. ಈ ಪಾತ್ರಗಳು, ಕತೆಗಳು ಸತ್ಯ ಘಟನೆಯಾಧಾರಿತ ಪಾತ್ರಗಳಾಗಿರಬಹುದು ಖಂಡಿತಾ ಕಾಲ್ಪನಿಕ ಆಗಿರಲಾರವು. ಒಂದು ಕತೆಯಲ್ಲಿ  ಒಂದು ಕಾದಂಬರಿಯಲ್ಲಿ ಒಂದು ನಾಟಕದಲ್ಲಿ ಹೀಗೆ ಸಿಕ್ಕಾಪಟ್ಟೆ ಇಷ್ಟವಾಗುವ ಪಾತ್ರಗಳು ನಿಜ ಜೀವನದಲ್ಲಿ ಬಸಮ್ಮನೆಂಬ ಅಜ್ಜಿಯ ರೂಪದಲ್ಲಿ, ಎಡಚನೆಂಬ ಶಿವಣ್ಣ ರೂಪದಲ್ಲಿ, ನಿಮ್ಮೆದುರು ನಿಂತಾಗ ನೀವು ಸಾಕವ್ವನನ್ನು ಇಷ್ಟಪಟ್ಟಷ್ಟೇ ಬಸಮ್ಮನನ್ನು, ಠೊಣ್ಣಿಯನ್ನು ಇಷ್ಟಪಟ್ಟಷ್ಟೇ ಎಡಚ ಶಿವಣ್ಣನನ್ನು ಇಷ್ಟಪಟ್ಟರೆ ಬಹುಶಃ ಕತೆ ಬರೆದವರು ಇಂತಹ ಪಾತ್ರಗಳನ್ನು ಸೃಷ್ಟಿಸಿ ತಾವಷ್ಟೇ ಮರ್ಯಾದೆ ಗೌರವವನ್ನು ಪಡೆದುಕೊಳ್ಳಲಿಲ್ಲ ನಿಜ ಜೀವನದ ಈ ಪಾತ್ರಗಳಿಗೂ ಮರ್ಯಾದೆ ತಂದುಕೊಟ್ಟರು ಎಂದುಕೊಳ್ಳಬಹುದು. ಕತೆಗಳಲ್ಲಷ್ಟೇ ಪಾತ್ರಗಳನ್ನು ಇಷ್ಟಪಟ್ಟು ನಿಜ ಜೀವನದಲ್ಲಿ ಆ ಜನಗಳ ಆಚಾರ ವಿಚಾರ ಆಹಾರ ಪದ್ದತಿಗಳ ಮೇಲೆ ಅವರನ್ನು ಕಡೆಗಣಿಸಿದರೆ ಬಹುಶಃ ಮಾನವೀಯತೆ ಕುರಿತು ಎಷ್ಟೇ ಕತೆ ಕಾದಂಬರಿಗಳನ್ನು ಬರೆಸಿ ಪ್ರಶಸ್ತಿ ನೀಡಿದರೂ ಎಲ್ಲಾ ವೇಸ್ಟ್ ಅನಿಸಿಬಿಡುತ್ತದೆ. 

ಅಂದ ಹಾಗೆ ಬಸಮ್ಮ ನನ್ನ ಸ್ವಂತ ಅಜ್ಜಿ. ಎಡಚ ಶಿವಣ್ಣ ನನ್ನ ಚಿಕ್ಕ ಮಾವ. ಗೌರಮ್ಮನ ಹಿರೀ ಮಗ ಆ ಹುಡುಗ ಬೇರೆ ಯಾರೂ ಅಲ್ಲ. ಅದು ನಾನೆ. ಆ ಹುಡುಗ ನಾನು ಅಂತ ತಿಳಿದ ಕ್ಷಣ "ನಾನು ಆಗಲೇ ಗೆಸ್ ಮಾಡಿದ್ದೆ" ಅಂತ ಮುಗುಳ್ನಗಬೇಡಿ ಅಥವಾ ಮುಖ ಸಿಂಡರಿಸಬೇಡಿ. ಯಾವಾಗಲಾರದು ಎದುರಿಗೆ ಸಿಕ್ಕಾಗ ನನ್ನ ಹಿಸ್ಟರಿ ನೆನಪಿಗೆ ಬಂದರೆ ಮುಖ ತಿರುಗಿಸಿಕೊಳ್ಳದೆ ಮುಗುಳ್ನಗಿ. ನನ್ನ ಆಚಾರ ವಿಚಾರ ಆಹಾರ ಪದ್ದತಿ ಮತ್ತು ಜಾತಿಯ ಕಾರಣಕ್ಕೆ ನಾನು ಎದುರಿಗೆ ಸಿಕ್ಕಾಗ ಇಂದಿಗೂ ಒಂದು ಮುಗುಳ್ನಗು ತೋರದ ನೂರಾರು ಗೆಳೆಯರನ್ನು ನಾನು ನೋಡಿದ್ದೇನೆ. ನೀವು ಅವರ ಪಾಲಿಗೆ ಸೇರದಿರಿ. 

****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

16 Responses to “ದೇವರ ಹೆಣ ನಿಮಗೆ ಇಷ್ಟ ಅಲ್ವಾ?: ನಟರಾಜು ಎಸ್. ಎಂ.”

 1. moulya m says:

  loved it.thanku for the wonderful write up sir.

 2. ತುಂಬಾ ಚೆನ್ನಾಗಿದೆ ನಟರಾಜಣ್ಣ.

  ಮನುಶ್ಯನನ್ನು ಅವರ ಜಾತಿ, ಪಂಗಡ, ಅಚಾರ ವಿಚಾರ ಇವುಗಳ ಮೇಲೆ ಅಳೆಯುವುದಕ್ಕಿಂತಲೂ ಅವರ ಮಾನವೀಯತೆ, ಸರಳತೆ, ಪರೋಪಕಾರ ಇವುಗಳ ಮೇಲೆ ಅಳೆಯಬೇಕು. ಅಲ್ಲವೇ..?

  ಶುಭವಾಗಲಿ. 

 3. Pururava K V says:

  ಚೆನ್ನಾಗಿ ಬರೆದಿದ್ದೀರಿ ನಟಣ್ಣ. ಹೌದು ಕುಂವೀ ಅವರ ಕಥೆಗಳು ಉತ್ಪ್ರೇಕ್ಷೆ ಅಂತ ಓದುಗರಿಗೆ ಅನ್ನಿಸಿದರೂ. ಕಥೆಯ ಬಹಳಷ್ಟು ಭಾಗ ಅವರು ಕಂಡುಂಡ ಅನುಭವಗಳೇ ಆಗಿವೆ.

 4. amardeep.p.s. says:

  nice story naseema……..ji

 5. mahadev hadapad says:

  ಆಗಲೇ ನೀವು ಸಿಕ್ಕಿದ್ದಾಯ್ತು. ಮುಗಳ್ನಕ್ಕಿದ್ದು ಆಯ್ತು…. ಹೀಗೆ ಬರಿತಾ ಇರ್ರೀ ಬ್ರದರ್

 6. Narayan Sankaran says:

  ವಿಶೇಷವಾಗಿ ಸಮಾಜದ ತಿರಸ್ಕಾರ ಅಥವಾ ತಾತ್ಸಾರದಿಂದ ಕಾಣುವ ಹಿನ್ನಲೆಯನ್ನ ಯಾವುದೇ ಮುಚ್ಚುಮರೆ ಅಥವಾ ಕೀಳರಿಮೆಯಿಲ್ಲದೆ ಹೇಳಿಕೊಳ್ಳುವವರ ಘನತೆ ಗೌರವಗಳು ನನ್ನ ದೃಷ್ಟಿಯಲ್ಲಂತೂ ಹೆಚ್ಚುತ್ತದೆ. ಸಮಾಜದ ದೃಷ್ಟಿಯಲ್ಲೂ ಅಂಥಾ ವ್ಯಕ್ತಿಗಳ ಗೌರವಾದರಗಳು ಹೆಚ್ಚುತ್ತೆ ಅಂತ್ಲೇ ನನ್ನಭಿಪ್ರಾಯ. ನಿಮ್ಮಂಥೋರ ಬಗ್ಗೆ ಇತ್ತೀಚೆಗೆ fb ನಲ್ಲಿ ಯಾರೋ, 'ನೀವಿನ್ನೂ ನಿಮ್ಮ ಜಾತಿಯ ಬಗೆಗಿನ ಕೀಳರಿಮೆಯಿಂದ ಹೊರಬಂದಿಲ್ಲ' ಅಂತ ಕಾಮೆಂಟ್ ಮಾಡಿದ್ದು ನೋಡಿ ವಿಚಿತ್ರ ಅನ್ನಿಸ್ತು. ಲೇಖನ ಚೆನ್ನಾಗಿದೆ. Strange that you consider some worthless guys, who don't even smile at you because of your background as your friends! In my view they don't deserve to be your freinds at all. 

 7. G . N . Nagaraj says:

  ಒಳ್ಳೆಯ ಪಾಠ ೆಲ್ಲರೂ ತಡಕಿ ನೋಡಿಕೊಳ್ಳುವಂತೆ . ಅಂಬೇಡ್ಕರ್ ರವರ ಜನ್ಮ ದಿನಕ್ಕೆ ಒಳ್ಳೆಯ ಕಾಣಿಕೆ

 8. Swarna says:

  ಮನ ಮುಟ್ಟುವಂತೆ ಬರೆದಿದ್ದೀರಿ ನಟರಾಜು. ಹೌದು ಆಹಾರ ಪದ್ಧತಿಯ ಕಾರಣದಿಂದ ಜನ ನೋವುಣ್ಣುವಂತಾಗಬಾರದು

 9. shanthi k a says:

  tumba chendagina baraha ,yavude erilitagalillade ,patragala mele vishesha mamakaara torade ..nirummalavaagi niraanthankavaagi ,haasyada lepadondige heege svaanubhavavannu kannige kattuvante bareyuvudendare summane maatalla . 

  great . 

 10. dr rathi says:

  Heart touching reality,so good.

 11. Anil Talikoti says:

  "ಆ ಜನಗಳ ಆಚಾರ ವಿಚಾರ ಆಹಾರ ಪದ್ದತಿಗಳ ಮೇಲೆ ಅವರನ್ನು ಕಡೆಗಣಿಸಿದರೆ ಬಹುಶಃ ಮಾನವೀಯತೆ ಕುರಿತು ಎಷ್ಟೇ ಕತೆ ಕಾದಂಬರಿಗಳನ್ನು ಬರೆಸಿ ಪ್ರಶಸ್ತಿ ನೀಡಿದರೂ ಎಲ್ಲಾ ವೇಸ್ಟ್ ಅನಿಸಿಬಿಡುತ್ತದೆ." – ನಿಜ ನುಡಿಗಳು -ಎಲ್ಲರೂ ತಮ್ಮ ಕೆಲಸದ ಘನತೆಯ ಬಗ್ಗೆ ಯಾವ ಮುಲಾಜಿಲ್ಲದೆ ಹೇಳುವಂತಾದಾಗ ಸಮಾನತೆಯತ್ತ ಒಂದೆರಡು ಹೆಜ್ಜೆ ಇಟ್ಟಂತೆ. ಒಳ್ಳೆಯ ಲೇಖನ.

 12. Santhoshkumar LM says:

  Super Kanla….Nattu…Proud of you!

 13. smitha says:

  mana tattuva baraha-smtha

 14. mamatha keelar says:

  wow..kate chanda ide jotege nimma jivana keli great anstide..

 15. ಪಂಜು ಸೊಗಸಾಗಿ ಸಮೃದ್ಧವಾಗಿ ಮೂಡಿಬರುತ್ತಿದೆ – ಎಲ್ಲವನ್ನೂ ಓದಿ ಮುಗಿಸಲು ಸಮಯವೇ ಸಿಗದಷ್ಟು!

  "ಒಂದೂರಲ್ಲಿ ಒಂದು ಗಟ್ಟಿಮುಟ್ಟಾದ ಆರೋಗ್ಯವಂತ ಹಸು ಕಾಡಿಗೆ ಮೇಯಲು ಹೋಗಿ ಇದ್ದಂಕ್ಕಿದ್ದಂತೆ ಕಾಡಿನಲ್ಲೇ ಸತ್ತು ಹೋಗಿರುತ್ತದೆ…" ಎಂಬ ನಿಮ್ಮ Facebook ಲಿಂಕನ್ನು ಹಿಡಿದು ಇಲ್ಲಿಗೆ ಬಂದರೆ, ಆ ಬರಹ ಮೊದಲಸಲಕ್ಕೆ ಸಿಗಲೇ ಇಲ್ಲ.  ಮತ್ತೆ ಹಳೆಯ ಸಂಚಿಕೆಯನ್ನು ಹುಡುಕಿದಾಗ ಸಿಕ್ಕಿತು.  ಸೊಗಸಾದ ಬರಹ.  ಬಾಲ್ಯದ ಚಿತ್ರಣವನ್ನು ಜೀವಂತವಾಗಿ ಕಟ್ಟಿಕೊಟ್ಟಿದ್ದೀರಿ, ಮತ್ತೆ ಸಂಪಾದಕೀಯದ ಶೈಲಿಯೂ ಘನವಾಗಿದೆ.  ಇನ್ನು ನೀವೆಲ್ಲಾದರೂ ಸಿಕ್ಕಿದರೆ ಈ ಕಾರಣಕ್ಕಾಗಿ ಮುಖತಿರುಗಿಸಿಕೊಳ್ಳುವ ಗುಂಪಿಗೆ ನಾನಂತು ಸೇರುವುದಿಲ್ಲವೆಂಬ ವಿಶ್ವಾಸ ನನಗಿದೆ 🙂

Leave a Reply