ವಿಜ್ಞಾನ ದಿನ: ಅಖಿಲೇಶ್ ಚಿಪ್ಪಳಿ

ಪ್ರತಿವರ್ಷ ಫೆಬ್ರವರಿ ೧೪ರಂದು ಪ್ರೇಮಿಗಳ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಬೇಕೆಂಬ ಕೂಗು ಇದೆ. ಪ್ರೇಮಿಗಳ ದಿನಾಚರಣೆಯಿಂದ ಸರಿಯಾಗಿ ೧೪ ದಿನಗಳ ನಂತರ ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತಾರೆ. ದಿ.ಚಂದ್ರಶೇಖರ ವೆಂಕಟ ರಾಮನ್ ಎಂಬ ಭಾರತದ ವಿಜ್ಞಾನಿ ೧೯೨೮ರಲ್ಲಿ ಸಂಶೋಧಿಸಿದ ಬೆಳಕಿನ ?? ಕ್ಕೆ ೧೯೩೦ರಲ್ಲಿ ನೋಬೆಲ್ ಪ್ರಶಸ್ತಿ ಸಿಕ್ಕಿತು. ಭೌತಶಾಸ್ತ್ರದ ಈ ಅಮೋಘ ಸಾಧನೆ ಇವತ್ತಿಗೂ ವಿಜ್ಞಾನ ಕ್ಷೇತ್ರದಲ್ಲೊಂದು ಮೈಲಿಗಲ್ಲು ಎಂದು ದಾಖಲಾಗಿದೆ. ಈ ಮಹಾನ್ ವಿಜ್ಞಾನಿಯ ನೆನಪಿಗಾಗಿ ಭಾರತ ಸರ್ಕಾರ ೧೯೮೬ರಿಂದ ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸುತ್ತದೆ. ಸಿ.ವಿ.ರಾಮನ್ ಜನಿಸಿದ್ದು ಫೆಬ್ರುವರಿ ೨೮ರಂದು. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಈ ದಿನಾಚರಣೆಯ ಮೂಲ ಉದ್ಧೇಶವಾಗಿದೆ. ಪ್ರತಿವರ್ಷ ಒಂದೊಂದು ಘೋಷವಾಕ್ಯವನ್ನು ಪ್ರಕಟಿಸಿ, ಆ ಬಗ್ಗೆ ಜನರನ್ನು ವಿಜ್ಞಾನದೆಡೆಗೆ ಆಕರ್ಷಿಸುವ ಪ್ರಯತ್ನವನ್ನು ಕೆಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮಾಡುತ್ತಿದೆ. ಈ ಬಾರಿಯ ಘೋಷವಾಕ್ಯ ವೈಜ್ಞಾನಿಕ ಮನೋಭಾವ ಪ್ರೇರಪಿಸಿ ಮತ್ತು ಶಕ್ತಿಯ ಉಳಿತಾಯ ಎಂಬುದಾಗಿದೆ.

ದೇಶದೆಲ್ಲಡೆ ಆಚರಿಸುವಂತೆ ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜಿನಲ್ಲಿ ಪ್ರತಿವರ್ಷ ವಿಜ್ಞಾನ ದಿನವನ್ನು ಆಚರಿಸುತ್ತಾರೆ. ಈ ಬಾರಿಯ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಮಕ್ಕಳಿಗೆ ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದರು. ಅದರ ಪೂರ್ಣಪಾಠವೇ ಈ ವಾರದ ಲೇಖನಕ್ಕೆ ಸರಕು. ಕಾಲೇಜಿನ ದಿನಗಳಲ್ಲಿ ವಾಣಿಜ್ಯ ಶಾಸ್ತ್ರವನ್ನು ಅಧ್ಯಯನ ಮಾಡಿದವನಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಪಾಠ!!!.

ಎಲ್ಲರಿಗೂ ನಮಸ್ಕಾರ ಹಾಗೂ ವಿಜ್ಞಾನ ದಿನದ ಶುಭಾಷಯಗಳು. ವಿಜ್ಞಾನದಲ್ಲಿ ಸಾವಿರಾರು ಶಾಖೆಗಳಿವೆ. ಈ ಭೂಮಿಯ ಹುಟ್ಟಿನಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ಪ್ರಕ್ರಿಯೆಗಳಲ್ಲಿ ವಿಜ್ಞಾನವಿದೆ. ಏಕಕೋಶ ಜೀವಿಗಳಿರಬಹುದು, ಸಸ್ಯಗಳ ಉಗಮದಿಂದ ಹಿಡಿದು ನೀವು ಕುಳಿತಿರುವ ಈ ಕೊಠಡಿಯವರೆಗೆ ಎಲ್ಲವೂ ವಿಜ್ಞಾನಮಯವೇ. ಈ ಕೊಠಡಿಯಲ್ಲೇ ನೂರು ತರಹದ ವಿಜ್ಞಾನವಿದೆ. ವಿದ್ಯುಚ್ಚಕ್ತಿ, ಮೈಕ್, ಕಂಪ್ಯೂಟರ್, ತಲೆಗೆ ಮುಡಿದ ಹೇರ್‌ಬ್ಯಾಂಡ್, ತೊಟ್ಟ ಆಭರಣ, ಬಟ್ಟೆ, ಕುಳಿತ ಕುರ್ಚಿ, ನೀವು ನೀಡಿದ ಕೆಂಪು ಗುಲಾಬಿ ಹೀಗೆ ಎಲ್ಲವೂ ವಿಜ್ಞಾನವೇ ಆಗಿದೆ. ಹೆಸರಿಸುತ್ತಾ ಹೋದರೆ ವಿಜ್ಞಾನ ಪ್ರಕಾರದ ಜ್ಞಾನಕೋಶವನ್ನೇ ಅಚ್ಚುಹಾಕಬಹುದು. ಇರಲಿ, ಇವತ್ತು ವಿಜ್ಞಾನವನ್ನು ಪ್ರಮುಖವಾಗಿ ಎರಡು ವಿಭಾಗಗಳನ್ನು ಮಾಡಿ ಮಾತನ್ನು ಮುಂದುವರೆಸೋಣ. ಮೊದಲನೆಯಾದಾಗಿ, ಪ್ರಾಕೃತಿಕ ವಿಜ್ಞಾನ ಹಾಗೂ ಎರಡನೆಯದಾಗಿ ಸಮಾಜ ವಿಜ್ಞಾನ. ನಾವು ಮಂಗಳ ಗ್ರಹಕ್ಕೆ ಹೊರಟಿದ್ದೇವೆ. ತಂತ್ರಜ್ಞಾನದಿಂದ ಇಡೀ ಪ್ರಪಂಚ ಅಂಗೈಯಲ್ಲಿ ಇದೆ. ಹಾಗೂ ವಿಜ್ಞಾನದ ಪ್ರಗತಿಯಿಂದ ಏನನ್ನೂ ಸಾಧಿಸಬಲ್ಲವರಾಗಿದ್ದೇವೆ. ಆದಾಗ್ಯೂ ಹಸಿದವನಿಗೆ ತುತ್ತು ಅನ್ನ ಬೇಕೆ ಹೊರತು ವಿಜ್ಞಾನವಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾನ್ಸರ್ ನಿವಾರಣೆಗಾಗಿ ಬಳಸುವ ವಸ್ತುಗಳೇ ಈ ಜಗತ್ತನ್ನು ನಾಶಮಾಡುವ ಶಕ್ತಿ ಹೊಂದಿವೆ. ಪರಮಾಣು ಬಾಂಬನ್ನು ಹೊಂದಿದ ಖಂಡಾತರ ಕ್ಷಿಪಣಿಗಳು ಮುಂದುವರೆದ ಮತ್ತು ಮುಂದುವರೆಯುತ್ತಿರುವ ರಾಷ್ಟ್ರಗಳ ಹತ್ತಿರವಿದೆ. ರಚನಾತ್ಮಕವಾದ ವಿಜ್ಞಾನ ಸಮಾಜದ ಒಳಿತಿಗೆ ಕಾರಣವಾದರೆ, ವಿದ್ವಂಸಕ ವಿಜ್ಞಾನ ಜಗತ್ತಿನ ವಿನಾಶಕ್ಕೆ ಕಾರಣವಾಗುತ್ತದೆ. ಈಗ್ಗೆ ಬರೀ ೬೦-೭೦ ವರ್ಷಗಳ ಹಿಂದೆ ಸೈಕಲ್ ಮತ್ತು ರೇಡಿಯೋ ಅಚ್ಚರಿಯ ವಿಷಯಗಳಾಗಿದ್ದವು. ಆಗಿನ ಕಾಲದ ಶ್ರೀಮಂತರು ಮಾತ್ರ ಸೈಕಲ್ ಮತ್ತು ರೇಡಿಯೋಗಳನ್ನು ಹೊಂದಿದ್ದರು. ಒಬ್ಬ ವ್ಯಕ್ತಿಯ ಬಳಿ ಸೈಕಲ್ ಇದೆಯೆಂದರೆ ಸಮಾಜದಲ್ಲಿ ಅದೊಂದು ಘನತೆಯ ವಿಷಯವಾಗಿತ್ತು. ಈಗ ಯಾರ ಮನೆಯಲ್ಲೂ ರೇಡಿಯೋ ಇಲ್ಲ. ರೇಡಿಯೋದ ಜಾಗದಲ್ಲಿ ಟಿ.ವಿ. ಬಂದು ಕುಳಿತು, ಜನರನ್ನು ಶೋಂಬೇರಿ ಮಾಡುವ ಮೂರ್ಖರ ಪೆಟ್ಟಿಗೆಯಾಗಿದೆ. ಟಿ.ವಿ.ಸಿನಿಮಾಗಳಲ್ಲಿ ಪ್ರಸಾರ ಮಾಡುವ ಹಿಂಸಾತ್ಮಕ ದೃಶ್ಯದಿಂದ ಪ್ರೇರಿತ ಮುಂದುವರೆದ ಅಮೆರಿಕ ದೇಶದ ಶಾಲೆಯ ಮಕ್ಕಳು ರಿವಾಲ್ವಾರಿನಿಂದ ಸಹಪಾಠಿಗಳನ್ನು ಕೊಂದು ಹಾಕಿದ ಘಟನೆಗಳು ನಡೆದಿವೆ. ಪರಿಸ್ಥಿತಿ ಹೀಗೆ ಮುಂದುವರೆದರ ನಮ್ಮ ದೇಶದ ಶ್ರೀಮಂತ ಶಾಲೆಗಳಲ್ಲಿ ಈ ತರಹದ ಘಟನೆಗಳು ಸಂಭವಿಸಬಹುದಾದ ಅಪಾಯವಿದೆ. 

ಪ್ರಸ್ತಾವಿಕವಾಗಿ ಮಾತನಾಡಿದ ಮಿತ್ರ ಶ್ರೀ ನಾಗರಾಜ್‌ರವರು ವೈಜ್ಞಾನಿಕ ಚಿಂತನೆಯಿಂದಾಗಿ ಹಲವು ಮೌಢ್ಯಗಳು, ಮೌಢ್ಯಾಚರಣೆಗಳು ತೊಲಗಿವೆ ಎಂದು ಹೇಳಿದರು. ಇರಬಹುದು, ಹಳ್ಳಿಗಾಡಿನ ಜನರ ವೈಜ್ಞಾನಿಕ ಚಿಂತನೆಯಿಂದ ಹಾಗೂ ಸರ್ಕಾರಗಳ ಸತತ ಪ್ರಯತ್ನದಿಂದ ರಾಜಸ್ಥಾನದ ಸತಿ ಪದ್ಧತಿ, ಚಂದ್ರಗುತ್ತಿಯ ಬೆತ್ತಲೆ ಸೇವೆ, ಮಂಗಳೂರಿನ ಅಜಲು ಪದ್ಧತಿ ನಿರ್ಮೂಲವಾಗಿದೆ. ಸಂತೋಷದ ವಿಚಾರ. ಆದರೆ ಜಾಗತಿಕ ಮಟ್ಟದಲ್ಲಿ ಹುಲಿಯ ಅವಯವಗಳನ್ನು ಸೇವಿಸಿದರೆ ಪುರುಷತ್ವ ಹೆಚ್ಚುತ್ತದೆ ಹಾಗೂ ಘೇಂಡಾ ಮೃಗದ ಕೊಂಬು ಔಷಧೀಯ ಗುಣಗಳನ್ನು ಹೊಂದಿದೆಯೆಂದ ಅತಿ ದೊಡ್ಡ ಮೌಢ್ಯ ತುಂಬಿದೆ. ಈ ಮೌಢ್ಯ ತುಂಬಿರುವುದು ಹಣವಿಲ್ಲದ ಹಳ್ಳಿಗಾಡಿನ ಜನರಲ್ಲಿ ಅಲ್ಲ. ವೈಭವೋಪಿತ ಬೃಹತ್ ಮಹಲುಗಳಲ್ಲಿ ವಾಸಿಸುವ, ಕೋಟ್ಯಾಂತರ ರೂಪಾಯಿಗಳ ಆದಾಯ ಹೊಂದಿದ, ಹೆಲಿಕಾಪ್ಟರ್‌ನಲ್ಲೇ ಸುತ್ತುವ ಶ್ರೀಮಂತರಲ್ಲಿ ಈ ಮೌಢ್ಯವಿದೆ. ಇವರ ಈ ದುಬಾರಿ ಮೌಢ್ಯಕ್ಕಾಗಿ ಭಾರತವೂ ಸೇರಿದಂತೆ ಜಗತ್ತಿನ ಎಲ್ಲಾ ಹುಲಿ ಸಂತತಿ ಮತ್ತು ಘೇಂಡಾಮೃಗಗಳ ಸಂತತಿ ಅಳಿವಿನಂಚಿಗೆ ಬಂದಿವೆ. ಘೇಂಡಾಮೃಗದ ಕೊಂಬಿನಲ್ಲಿರುವುದು ನಮ್ಮ ಉಗುರು ಮತ್ತು ಕೂದಲಲ್ಲಿರುವು ಕೆರಟಿನ್ ಎಂಬ ಅಂಶವನ್ನು ಸಾರ್ವತ್ರಿಕವಾಗಿ ತಿಳಿಸುವ ವಿಜ್ಞಾನ ನಮಗಿಂದು ಬೇಕಾಗಿದೆ. 

ಟಿ.ವಿ. ಜಾಹೀರಾತಿನಲ್ಲಿ ಅತ್ಯಾಕರ್ಷಕವಾಗಿ ತೋರಿಸ್ಪಡುವ ಕೇಶರಾಶಿಗೆ ಮನಸೋಲದ ಮಹಿಳೆಯರಾರು? ಪ್ರೋಕ್ಟರ್ & ಗ್ಯಾಂಬಲ್ ಎಂಬ ಅಂತಾರಾಷ್ಟ್ರೀಯ ಕಂಪನಿ ತಯಾರಿಸುವ ಶಾಂಪೂವಿನ ಹೆಸರು ಹೆಡ್ & ಶೋಲ್ಡರ್. ಒಂದರೆಡು ರೂಪಾಯಿಗಳ ಪ್ಲಾಸ್ಟಿಕ್ ಸಾಶೆಯಲ್ಲಿ ವಿಶ್ವದೆಲ್ಲಡೆ ಲಭ್ಯವಿರುವ ಈ ಶಾಂಪೂವಿಗೆ ಮೂಲ ಕಚ್ಚಾವಸ್ತು ತಾಳೆ ಎಣ್ಣೆ. ಇಂಡೋನೇಷ್ಯಾದ ದಟ್ಟ ಮಳೆಕಾಡುಗಳನ್ನು ಕಡಿದು, ಅಲ್ಲಿರುವ ಬರೀ ೪೦೦ ಸುಮಾತ್ರನ್ ಹುಲಿಗಳು ಮತ್ತು ಅಪರೂಪದ ಒರಾಂಗುಟಾನ್ ಪ್ರಭೇದಗಳನ್ನು ನಾಶ ಮಾಡುತ್ತಿರುವ ಈ ಕಂಪನಿಯ ಉತ್ಪನ್ನಕ್ಕಿಂತ ನಮ್ಮ ಊರಿನಲ್ಲೇ ಸುಲಭವಾಗಿ ಲಭ್ಯವಿರುವ ಮತ್ತಿ ಎಲೆಯಲ್ಲಿ ತಲೆಹೊಟ್ಟು ನಿವಾರಿಸುವ ಗುಣವಿದೆ ಎಂಬುದನ್ನು ಹೇಳುವ ವಿಜ್ಞಾನ ನಮಗಿಂದು ಬೇಕಾಗಿದೆ. ಮತ್ತಿಸೊಪ್ಪಿನಿಂದ ಯಾವುದೇ ತರಹದ ಮಾಲಿನ್ಯವಿಲ್ಲ, ಇದು ಆರೋಗ್ಯಕ್ಕೂ ಹಾನಿಯಲ್ಲ. ಅದೇ ಕೃತಕವಾದ ಹೆಡ್ & ಶೋಲ್ಡರ್ ಶಾಂಪೂವಿನಿಂದ ಚರ್ಮರೋಗಗಳು ಬರುವ ಸಾಧ್ಯತೆಯಿದೆ ಎಂಬುದನ್ನು ಶೋಧಿಸಿ ತಿಳಿಸುವ ವಿಜ್ಞಾನದ ಅಗತ್ಯವಿದೆ. 

ನಾವೀಗ ದೇಶ-ಭಾಷೆ, ಜಾತಿ-ಗಡಿಗಳ ಎಲ್ಲೆ ಮೀರಿ ಭೂಮಿಯನ್ನು ಉಳಿಸುವ ವಿಜ್ಞಾನದತ್ತ ಮುಖ ಮಾಡಬೇಕಿದೆ. ಫೆಬ್ರವರಿ ತಿಂಗಳಲ್ಲಿ ಗುಡುಗು-ಸಿಡಿಲುಗಳಿಂದ ಕೂಡಿದ ಮಳೆ ಬರುತ್ತದೆ ಎಂದರೆ ಇದಕ್ಕೆ ಕಾರಣ ಹವಾಮಾನ ವೈಪರೀತ್ಯ. ನೆಲವನ್ನು ಬಗೆ-ಬಗೆದು ಎತ್ತಿ ತಂದ ತೈಲದಿಂದ, ಕಲ್ಲಿದ್ದಲಿನಿಂದ ವಾತಾವರಣದಲ್ಲಿ ಬಿಸಿ ಹೆಚ್ಚಾಗಿದೆ. ಸುಖ ಜೀವನದ ವ್ಯಾಖ್ಯೆಯನ್ನು ಬದಲಾಯಿಸಬೇಕಾದ ಜರೂರತ್ತು ಈ ಹೊತ್ತಿನ ಅಗತ್ಯ. ನಮ್ಮಲ್ಲಿಯ ಅಮೂಲ್ಯ ಪಶ್ಚಿಮಘಟ್ಟಗಳು ನಾಶವಾದಲ್ಲಿ ದೂರದ ಜಪಾನ್ ದೇಶ ಮುಳುಗಿಹೋಗುವ ಅಪಾಯವಿದೆ. ನಮ್ಮ ಪ್ರತಿ ನಡೆ, ನಮ್ಮ ಎಲ್ಲಾ ಕ್ರಿಯೆಗಳು ಭೂಬಿಸಿಯನ್ನು ತಗ್ಗಿಸುವ ಪ್ರಯತ್ನ ಮಾಡಬೇಕಾಗಿದೆ. ಮರುಬಳಕೆ ಇಂಧನದ ಕ್ಷಮತೆಯನ್ನು ಹೆಚ್ಚಿಸುವ ವಿಜ್ಞಾನ ನಮಗಿಂದು ಬೇಕಾಗಿದೆ. ಭೂಮಿಗೆ ಬರುವ ಸೂರ್ಯ ಕಿರಣಗಳನ್ನು ಶಕ್ತಿಯಾಗಿ ಮಾರ್ಪಡಿಸಿ ಬಳಸುವ ತಂತ್ರಜ್ಞಾನಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ.

ನಗರಸಭೆಯ ಪರಿಸರ ಅಭಿಯಂತರರು ತೀರಾ ಚಿಂತೆಯಲ್ಲಿದ್ದಂತೆ ಕಂಡು ಬಂದರು. ವಿಚಾರಿಸಿದಾಗ ಸಾಗರದ ಮಾರಿಜಾತ್ರೆಯ ಒಂದು ದಿನದ ತ್ಯಾಜ್ಯ ೧೬ ಟನ್‌ಗಳು ಎಂದರು. ಇದೇ ಸಮಯದಲ್ಲಿ ಮಳೆಯೂ ಬಂದು ಎಲ್ಲಾ ರೀತಿಯ ತ್ಯಾಜ್ಯಗಳು ಚರಂಡಿಯ ಮೂಲಕ ನದಿಯನ್ನು ಸೇರಿ ಸಮುದ್ರವನ್ನು ಸೇರುತ್ತವೆ. ತ್ಯಾಜ್ಯಗಳನ್ನು ಸಮರ್ಥವಾಗಿ ವಿಲೇವಾರಿ ಮಾಡುವ ತಂತ್ರಜ್ಞಾನಕ್ಕೆ ನಾವಿಂದು ಒತ್ತು ನೀಡಬೇಕಾಗಿದೆ. ಈ ಪ್ರಕೃತಿಯಲ್ಲಿ ಅತೀ ಅವಲಂಬಿತ ಪ್ರಾಣಿಯೆಂದರೆ ನಾವು. ನಮ್ಮ ಅಗತ್ಯಗಳನ್ನು ಕಡಿಮೆ ಮಾಡುವ, ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸುವ ಮನೋಭಾವ ಸೃಷ್ಟಿಸುವ ಮನೋವಿಜ್ಞಾನ ಪ್ರಕಾರವನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಸಾಮೂಹಿಕವಾಗಿ ಜೀವನಶೈಲಿಯ ಬದಲಾವಣೆ ಭೂಮಿಯ ಆರೋಗ್ಯವನ್ನು ಸರಿಮಾಡಬಹುದಾದ ಔಷಧವಾಗಬಲ್ಲದು. ಮೂರನೇ ವಿಶ್ವ ಯುದ್ಧ ನೀರಿಗಾಗಿ ನಡೆದರೆ ಯಾರೂ ಆಶ್ಚರ್ಯ ಪಡಬೇಕಾಗಿಲ್ಲ ಎಂಬುದನ್ನು ಜಲತಜ್ಞರ ಗಂಭೀರ ಎಚ್ಚರಿಕೆಯನ್ನು ನಾವೆಲ್ಲರೂ ಅತ್ಯಂತ ಗಂಭೀರವಾಗಿ ಪರಿಗಣಿಸುವ ಸ್ಥಿತಿಯಿದೆ. ಇಂಡೋನೇಷ್ಯಾದ ಮಳೆಕಾಡುಗಳು, ಅಮೇಜಾನ್ ಅಭೇದ್ಯ ದಟ್ಟಾರಣ್ಯಗಳನ್ನು ಅಂತಾರಾಷ್ಟ್ರೀಯ ಕಂಪನಿಗಳು ವಿವಿಧ ಉದ್ಧೇಶಕ್ಕಾಗಿ ನಾಶ ಮಾಡುತ್ತಿದ್ದಾರೆ. ನಮ್ಮ ಪಶ್ಚಿಮಘಟ್ಟಗಳೂ ಸೇರಿದಂತೆ ಅಪರೂಪದ ಅರಣ್ಯಗಳನ್ನು ನಾಶ ಮಾಡಿದರೆ, ಮರುಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂಬ ಜ್ಞಾನವನ್ನು ತಿಳಿಸುವ ಪ್ರಯತ್ನವನ್ನು ವಿಜ್ಞಾನ-ತಂತ್ರಜ್ಞಾನಗಳು ಮಾಡಬೇಕು.

ಬೃಹತ್ತಾದ ಭೂಮಿಯೆಂಬ ದೊಡ್ಡ ಯಂತ್ರವನ್ನು ವಿವೇಚನೆಯಿಂದ ಬಳಸುವ ತಂತ್ರಜ್ಞಾನದ ಅವಶ್ಯಕತೆಯಿದೆ. ದುಡ್ಡಿಗಾಗಿ ಏನೂ ಮಾಡಲು ಹೇಸದ ರಾಜಕಾರಣಿಗಳ ಮನ ಬದಲಿಸುವ ಸಮಾಜವಿಜ್ಞಾನ ಶಾಖೆಯ ಆವಿಷ್ಕಾರವಾಗಬೇಕಾಗಿದೆ. ಅಕ್ರಮವಾಗಿ ಸಾವಿರಾರು, ಲಕ್ಷಾಂತರ ಕೋಟಿ ಗಳಿಸಿ ವಿದೇಶಿ ಬ್ಯಾಂಕುಗಳಲ್ಲಿ ಜಮಾ ಮಾಡುತ್ತಿರುವ ಮನೋರೋಗಕ್ಕೆ ಚಿಕಿತ್ಸೆ ನೀಡುವ ಮನೋವಿಜ್ಞಾನಿಗಳು ನಮಗೀಗ ಬೇಕು. ನಾವೀಗ ನಮ್ಮ ಜೀವನವನ್ನು ಸುಖಮಯಗೊಳಿಸಲು ಯಂತ್ರಗಳ ಮೊರೆ ಹೋಗಿದ್ದೇವೆ. ಬೆಳಗ್ಗೆ ಎದ್ದದ್ದಿನಿಂದ ರಾತ್ರಿ ಮಲಗುವವರೆಗೂ ಯಂತ್ರUಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಸುಖಕ್ಕೋಸ್ಕರ ಭೂಮಿಯ ಆರೋಗ್ಯವನ್ನು ಹಾಳು ಮಾಡುತ್ತಿದ್ದೇವೆ. ಯಂತ್ರಗಳನ್ನು ಚಲಿಸಲು ವಿಪರೀತ ಶಕ್ತಿಯ ಉಪಯೋಗವನ್ನು ಮಾಡಿ-ಮಾಡಿ ದುಂಡಗಾಗಿದ್ದೇವೆ. ಮೈಯಿಳಿಸಲು ಮತ್ತೆ ಯಂತ್ರಗಳ ಮೊರೆ ಹೋಗುತ್ತೇವೆ. ಮಲೆನಾಡಿನಂತಹ ತಂಪಾದ ಪ್ರದೇಶಗಳಲ್ಲೂ ಉಳ್ಳವರು ಏರ್‌ಕಂಡೀಷನ್ ಬಳಸಲು ಶುರು ಮಾಡಿದ್ದಾರೆ ಎಂದರೆ ಇದಕ್ಕಿಂತ ವಿಪರ್ಯಾಸ ಇನ್ನೊಂದಿಲ್ಲ. ಗೃಹಬಳಕೆಯ ಯಂತ್ರಗಳಿಗೆ ಬೇಕಾಗುವ ಶಕ್ತಿಯನ್ನು ಮನೆಯ ಮಾಳಿಗೆಯಿಂದಲೇ ಪಡೆಯಬಹುದಾದ ಸಾಧ್ಯತೆಯಿದೆ. ಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಸುಧಾರಿತ ತಂತ್ರಜ್ಞಾನವನ್ನು ಪೂರೈಸುವ ವಿಜ್ಞಾನ ನಮಗಿಂದು ಬೇಕಾಗಿದೆ. ಒಟ್ಟಾರೆ ನಮಗೀಗ ಬೇಕಿರುವುದು ರಾಕೆಟ್ ತಂತ್ರಜ್ಙಾನವಲ್ಲ ಬದಲಿಗೆ ಸುಸ್ಥಿರ ವಿಜ್ಞಾನ ಬೇಕು. ನಮಗೀಗ ಬೇಕಿರುವುದು ವಿದ್ವಂಸಕ ವಿಜ್ಞಾನವಲ್ಲ. ನಮಗೀಗ ಅಗತ್ಯವಿರುವುದು ಹಾನಿಯಾಗದಂತೆ, ಪರಿಸರ ನಾಶವಾಗದಂತೆ ಬದುಕುವ ಜೀವ ವಿಜ್ಞಾನ ಹಾಗೂ ಸಮಾಜ ವಿಜ್ಞಾನ. ಕೀಟನಾಶಕಗಳ ದುಷ್ಪರಿಣಾಮಗಳ ಬಗ್ಗೆ ಬರೆದ ಪುಸ್ತಕ ಸೈಲೆಂಟ್ ಸ್ಪ್ರಿಂಗ್ನಲ್ಲಿ ರಚೇಲ್ ಕಾರಸನ್ ಭವಿಷ್ಯ ನಿಜವಾದಲ್ಲಿ ಈ ಭೂಮಿಯಲ್ಲಿ ಬರೀ ಮೌನ ವಸಂತವೇ ತುಂಬಿರುತ್ತದೆ. ಕಡೆಯ ಜೇನು ಹುಳು ನಾಶವಾದ ತಕ್ಷಣದಲ್ಲಿ ಮನುಕುಲದ ಭವಿಷ್ಯವು ಮುಗಿಯುತ್ತದೆ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x