ನಿಮ್ಮ ಹೆಸರು ನಮ್ಮ ಮನದಲ್ಲಿದೆ: ಅಮರ್ ದೀಪ್ ಪಿ.ಎಸ್.

ವರ್ಷದ ಕನಿಷ್ಠ ಆರು ತಿಂಗಳಾದರೂ ಮದುವೆ ಸೀಜನ್ನು ಮುಂದುವರೆದಿರುತ್ತದೆ. ಸೀಜನ್ನು ಬಂತೆಂದರೆ ಲಗ್ನ ಪತ್ರಿಕೆಗಳನ್ನು ಜೋಡಿಸಿಟ್ಟು ಕುಟುಂಬ ಸಮೇತವಾಗಿ ಹೋಗುವಂಥವು, ಒಬ್ಬರೇ ಹೋದರೂ ನಡೆಯುತ್ತದೆನ್ನುವಂಥವುಗಳನ್ನೂ ಲೆಕ್ಕ ಹಾಕಿ ಓಡಾಡಲಿಕ್ಕೆ ಒಂದಷ್ಟು ದುಡ್ಡು ಎತ್ತಿಟ್ಟು ಅನಣಿಯಾಗಲೇಬೇಕು. ಹೋಗದಿದ್ದರೆ ಏನಂದುಕೊಂಡಾರೋ ಎನ್ನುವ ಮುಲಾಜು ಅಥವಾ ಸಂಭಂಧ ಗಳ ನವೀಕರಣಕ್ಕೆ, ಖುಷಿಯ ಸಂಧರ್ಭದಲ್ಲಿ ಎಲ್ಲರನ್ನು ಭೇಟಿಯಾಗುವ ಅವಕಾಶಕ್ಕಾದರೂ ಹೊರಡು ತ್ತೇವೆ. ಮೊನ್ನೆ ನೆಂಟರೊಬ್ಬರು ಬಂದು ತಮ್ಮ ಮನೆಯಲ್ಲಿ ನಡೆಯಲಿರುವ ಮದುವೆ  ಸಮಾರಂಭಕ್ಕೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು.  ಹೆಸರು ಬರೆದರೂ ನಿಮ್ಮ "ಅಡ್ಡ ಹೆಸರು" ನನಗೆ ಗೊತ್ತಿಲ್ಲ ವೆಂದರು.  ನಾನು ಸುಮ್ಮನಿದ್ದೆ. ಅವರು ಹಾಗೆನ್ನಲು ಇರುವ ಕಾರಣ  ನನಗೆ ಚೆನ್ನಾಗಿ ಗೊತ್ತಿತ್ತು. ಒಂದು ಕಪ್ಪು ಟೀ.. ಅಥವಾ ಕಾಫಿ ಕೊಟ್ಟು, ಊಟದ ಸಮಯವಾದರೆ ಮನೆಯಲ್ಲಿ ಇದ್ದದ್ದು ಮತ್ತು ಇಷ್ಟಪಟ್ಟು ಮಾಡಿದ್ದನ್ನು ಉಣಬಡಿಸಿ ಕಳಿಸುವುದು ವಾಡಿಕೆ. ಅವರು ಹೋದ ಮೇಲೆ ಯೋಚಿಸುತ್ತಾ ಕುಳಿತೆ. 

ಅಡ್ಡ ಹೆಸರು, ಸರ್ ನೇಮು, ಮನೆತನದ ಹೆಸರು ಕೆಲವೊಮ್ಮೆ ಊರುಗಳ ಹೆಸರುಗಳೊಂದಿಗೆ ಕೂಡಿದ್ದು, ವೃತ್ತಿಯಿಂದ ರೂಢಿ ಬಿದ್ದ ಹೆಸರುಗಳು, ಜಾತಿಯಿಂದ ಬೆನ್ನಿಗಿದ್ದ ಹೆಸರುಗಳು,  ವ್ಯಾಪಾರ ದಿಂದ ಅಂಟಿಕೊಂಡ ಹೆಸರು, ಎಂದೋ ಯಾವುದೋ ಊರು ಬಿಟ್ಟು ಬಂದು ಇನ್ಯಾವುದೋ ಊರಲ್ಲಿ ನೆಲೆಗೊಂಡವರಿಗೆ ಅವರು ಬಿಟ್ಟು ಬಂದ ಊರಿನ ಹೆಸರು ಲಗತ್ತಾಗಿರುತ್ತದೆ.  ಕರೆಯುವಾಗಲೂ ಬಹಳ ಚೆಂದನೆಯ ಹೆಸರುಗಳು ಸಿಗುತ್ತವೆ.ಮೇಲಿನಮನಿ, ತೆಗ್ಗಿನಮನಿ, ಮೂಲಿಮನಿ ಹೀಗೆ , ಶೆಟ್ರು, ಕುಲಕರ್ಣಿಯವರು, ಜಾಗೀರುದಾರರು, ದೇಸಾಯಿಯವರು, ಶಾನಭೋಗರು, ಪೋಲಿಸ್ ಪಾಟೀಲರು, ಗೌಡ್ರು ಬ್ಯಾಳೇರು, ಬೆಲ್ಲದವರು, ಅಕ್ಕಿಯವರು, ಕಡ್ಲಿಯವರು, ಹುರುಕಡ್ಲಿಯವರು, ಜೋಳದವರು,  ಇನ್ನು  ಹಲವು. ನನಗಿನ್ನೂ "ಗೋಧಿ" ಯ ಹೆಸರಿನವರು ಇನ್ನು ಪರಿಚಯಕ್ಕೆ ಸಿಕ್ಕಿಲ್ಲ. 

ನಮ್ಮದೂ ಒಂದು ಸರ್ ನೇಮು  ಹೆಸರಿನ ಸಲುವಾಗಿ ಸಂಭಂಧಿಕರಲ್ಲೇ "ಅಡ್ಡ" ಆಗುವ, ಅವರ ಯಾವುದೇ ಒಂದು ಕಾರ್ಯಕ್ರಮದಲ್ಲಿ ಹೋದರೂ ಕನಿಷ್ಠ ಒಬ್ಬರು ಒಂದು ಸಲವಾದರೂ ಕೊಂಕು ತೆಗೆದು ಮಾತಾಡಿದ ಪ್ರಸಂಗಗಳನ್ನು ನಾನು ಎದುರಿಸಿದ್ದೇನೆ. "ತಮ್ಮಾ ಯಾರ ಪೈಕಿ …? ಅಡ್ಡ ಹೆಸರೇನು ? ಅಂದು ಬೇಕಂತಲೇ ಕೇಳುವುದು, ನಾವು ಹೇಳುವುದು, ಹೇಳಿದಾದ ಮೇಲೆ "ಹೇ … ಅದಲ್ಲೊ ನೀವು "ಸಗರದ" ವರ ಪೈಕಿ ಅಂತೇಳ …" ಎಂದು ಜರಿಯುವುದು. ನಡೆದೇ ಇದೆ.  ಇನ್ನೂ ಒಂದು ಹೆಜ್ಜೆ ಮುಂದಿಟ್ಟು ನಿಮ್ಮಪ್ಪ ಯಾರದೋ ಆಸ್ತಿಗೆ ಕಣ್ಣು ಹಾಕಿ ಇದ್ದದ್ದನ್ನು ಉಳಿಸಿಕೊಳ್ಳಲಿಲ್ಲ, ಕಂಡವರ ಆಸ್ತಿ ದಕ್ಕಲಿಲ್ಲ. ನೀವರ ಜಾಣರಾದಿರಲ್ಲ?" ಅಂದಿದ್ದರು. ಆತ ಬದುಕಿದ್ದಾಗ ಹೀಗೆ ಹೇಳುವ ಯಾರನ್ನೂ ನಮಗೆ ಮುಖ ತೋರಿಸಿದ್ದಿಲ್ಲ ಅಪ್ಪ. ಹಿಂದೆ  ಮಾತಾಡಿದವರೆಷ್ಟೋ ನಾನು ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ.  ಅದಿನ್ನು  ಅಪ್ಪ ಸಣ್ಣವನಿದ್ದಾಗಲೋ ಅಥವಾ ಅದಕ್ಕೂ ಮುಂಚೆಯೋ ಒಟ್ಟಿನಲ್ಲಿ ನಮ್ಮಜ್ಜ ಅವರ ಅಣ್ಣ ತಮ್ಮಂದಿರಿಂದ ಹೊರನೂಕಿಸಿ ಕೊಂಡು ಲಿಂಗಸುಗೂರಿನ ಹತ್ತಿರದ  ದಡೇ ಸೂಗೂರಿಂದ ಬಿಟ್ಟು ಅಜ್ಜಿಯೊಂದಿಗೆ ನಮ್ಮೂರಿಗೆ ಬಂದನಂತೆ. ಬರುವಾಗ ಮನೆಯಿಂದ ಬಿಡಿ ಗಾಸನ್ನು ಬೇಡದೇ ಬಂದಿದ್ದಲ್ಲದೇ ನಂಟನ್ನೇ ಬಿಟ್ಟು ಬಂದಿದ್ದನಂತೆ.  ಮುಂದೆ ಅಪ್ಪ ತಿಳುವಳಿಕೆ ಬಂದು ಸಣ್ಣವನಿದ್ದಾಗಲೇ ಅಜ್ಜ ತೀರಿ ಹೋಗಿದ್ದಾರೆ.  ಅಪ್ಪನಿಗೆ ಮದುವೆಯಾಗಿ ನಾವು ಹುಟ್ಟಿದ ಮೇಲೆ  ಶಾಲೆಗೆ ಸೇರಿಸುವ ವೇಳೆಗೆ ನಮ್ಮ ಇನಿಷಿಯಲ್ಲು ಪಿ. ಎಸ್. ಎಂದು ಬರೆಸಿದ್ದಾರೆ.  ಯಾಕೆಂದು ನಮಗೂ ಗೊತ್ತಿಲ್ಲ. ಅವ್ವನಿಗೂ ಗೊತ್ತಿಲ್ಲ.  

ಒಮ್ಮೆ ಅಪ್ಪ ಬದುಕಿದ್ದಾಗ ಕೇಳಿದ್ದೆ. "ನಿಮ್ಮಜ್ಜ ಅವರ ನಂಟು ಕಳೆದುಕೊಂಡ ಮೇಲೆ ಅವರ ಮನೆ ತನದ ಹೆಸರಿನ ಹಂಗೇತಕೆ? ಅಂದಿದ್ದ.   "ಜೀವಮಾನದಲ್ಲಿ ಒಮ್ಮೆಯೂ ಅಜ್ಜ ತೀರಿದ ನಂತರ ಅಜ್ಜಿ ಬಗ್ಗೆ ಅಥವಾ ತನ್ನ ಬಗ್ಗೆ ಯಾರೊಬ್ಬರೂ ಬದುಕಿದ್ದೀರಾ? ಸತ್ತಿದ್ದೀರಾ ? ಎಂದು ಕೇಳದವರ ಮನೆ ತನದ ಹೆಸರಿನ ತಳುಕಾದರು ಯಾಕೆ ಅಂದು ರೇಗಿದ್ದ.  ನಾನಾದರೂ ಅಜ್ಜನ (ಅಪ್ಪನ ತಂದೆಯ ) ಕಡೆಯ ನೆಂಟರನ್ನು ಇವತ್ತಿಗೂ ನೋಡಿಲ್ಲ. ಇರುವ ಸಂಭಂಧಗಳು ಅಜ್ಜಿಯ (ಅಪ್ಪನ ತಾಯಿ ) ಕಡೆಯವರದೇ. ಮತ್ತು ಅವ್ವನ ತವರು ಮನೆಯದ್ದೇ. ಆಮೇಲಾಮೇಲೆ ಒಂದಕ್ಕೊಂದು ಹತ್ತಿ ಕೊಂಡವು.     

ಮನೆತನದ ಹೆಸರಿರುವ, ಅಡ್ಡ ಹೆಸರಿರುವ, ಕೆಲವರಲ್ಲಿ ಪೂರ್ವಜರು ಮಾಡಿಟ್ಟ ಆಸ್ತಿ, ಹೊಲ, ಮನೆ, ಎಲ್ಲವನ್ನೂ ಮುಂದುವರೆಸಿಕೊಂಡು, ಉಳಿಸಿಕೊಂಡು, ಬೆಳೆಸಿಕೊಂಡು ಇದ್ದಾರೆ. ಅದನ್ನು ಉಳಿಸಿ ಕೊಳ್ಳಲು ಸಹ ಹೆಣಗಾಡಲೇಬೇಕು.  ಇನ್ನು ಕೆಲವರು ಕೇವಲ ಮನೆತನದ ಹೆಸರನ್ನಷ್ಟೇ ಉಳಿಸಿ ಉಳಿದ ಆಸ್ತಿ, ಮನೆ, ಹೊಲ ಎಲ್ಲವನ್ನೂ ಕಳಕೊಂಡು ಬೀದಿ ಬದಿಯಲ್ಲಿ ಟೀ ಸೋಸುವವರನ್ನು ನೋಡಿ ದ್ದೇನೆ.  ಕೇವಲ ಮನೆತನದ ಹೆಸರನ್ನೇ  ಟ್ರೇಡ್ ಮಾರ್ಕ್ ಅನ್ನಾಗಿ ಬಳಸಿಕೊಂಡು ನಾಲಾಯಕ್ಕಾದ ಕೆಲಸಗಳನ್ನು ಮಾಡುವ ಮೂರ್ಖರನ್ನು ನಾವು ನೋಡಿಯೇ ಇರುತ್ತೇವೆ. ನಮ್ಮಲ್ಲೇ ನಾವು ನೋಡಿ ದಂತೆ ತಮ್ಮ ಮನೆತನದ  ಹೆಸರನ್ನು  ಹೇಳಿದರೆ ಮಾತ್ರ  ಆ ಹುಡುಗರು ಯಾರೆಂದು ಗುರುತು ಹಿಡಿ ಯುವಷ್ಟು dependent  ಆಗಿದ್ದವರು ಇರುತ್ತಾರೆ.  ಇದಿಷ್ಟು "ತಲತಲಾಂತರ" ಎನ್ನುವಂಥ ಆಸ್ತಿ ಇದ್ದಂಥವರ ಪಾಡಾಯಿತು.  ಆಸ್ತಿ, ಮನೆ, ಮಠ, ಯಾವುದೂ ಇರದಿದ್ದರೂ ಅವರಿಗೆ ಬರುವ ಪತ್ರಗಳು, ಕರೆಯುವಾಗ, ಆಮಂತ್ರಣ ನೀಡುವಾಗ ಹೆಸರಿನ ಹಿಂದೆ ಅಂಥವಾ ಮುಂದೆ "ಸರ್ ನೇಮು" ಇರದಿದ್ದರಂತೂ ವರಾತ ತೆಗೆಯುವವರಿದ್ದಾರೆ.  ನಮ್ಮ ಅದೃಷ್ಟಕ್ಕೆ ಅಪ್ಪ ಯಾವುದೇ ಆಸ್ತಿ ಮಾಡಿಟ್ಟು ಸಾಯಲಿಲ್ಲ. ಅದಕ್ಕೆ ನಾವು ಹೀಗಿದ್ದೀವೋ ಏನೋ. ಅದೂ ಅಲ್ಲದೇ ನಮ್ಮ ಹೆಸರಿನ ಹಿಂದೆ "ಅಡ್ಡ" ವಾಗಿ ಆಡಿಕೊಂಡವರ ಆಸ್ತಿಯಲ್ಲಿ ನಮಗೇನು ಪಾಲು ಕೇಳಲು ನಾವು ಅವರ ಬೆನ್ನು ಬಿದ್ದಿರು ವುದಿಲ್ಲ, ಕಾಲೂ ಒತ್ತುವುದಿಲ್ಲ.  ನಮ್ಮ ಕಷ್ಟ ಕಾಲದಲ್ಲಿ ಒಂದಷ್ಟು ಜನ ಆಸರೆಗಾದವರು ಇದ್ದಾರೆ. ಅವರ "ಹೆಸರು"  ಹೇಳಿಕೊಳ್ಳಲೇಬೇಕಿಲ್ಲ. ಅಂಥವರು ಹೆಸರಿನಲ್ಲಿ "ಅಡ್ಡವಾಗಿ" ಬಾಯಡಿಸುವುದಿಲ್ಲ. ಬಾಯಿ  ಆಡಿಸುವವರು ಆಸರೆಗಿರಲಿ, ಆಸಕ್ತಿಗೂ ನೆನಪಾಗುವುದಿಲ್ಲ.   ಹೆಸರು, ಅಡ್ಡ ಹೆಸರು ಕೇವಲ ನಮ್ಮ ಐಡೆಂಟಿಟಿಗೋಸ್ಕರ ಮಾಡಿಕೊಂಡದ್ದು. ಅದನ್ನು  ಪರಿಚಯ ಮಾಡಿಕೊಳ್ಳಲು ಮಾತ್ರವೇ ಅಗತ್ಯವೆನಿಸಬೇಕೇ  ವಿನಃ ಪ್ರತಿಷ್ಠೆ ಎಂದು ಹೇಳಿಕೊಳ್ಳಲು ಅಲ್ಲ, ನಮ್ಮ ಒಳ್ಳೆಯದಕ್ಕೂ, ಕೆಟ್ಟದಕ್ಕೂ, ಅನುಕೂಲಕ್ಕೂ, ಅನಾನುಕೂಲಕ್ಕೂ ಮತ್ತು ಇನ್ನೊಬ್ಬರ ಹಂಗಿಸಲೂ ಸಹ ಅಲ್ಲ. 

ಅಷ್ಟಕ್ಕೂ ನಾವು ನಮ್ಮನ್ನು ಗುರುತಿಸಿಕೊಳ್ಳಲು ನಮ್ಮ ಮನೆತನಗಳ, ಅಡ್ಡ ಹೆಸರುಗಳ ಶೆಲ್ಟರ್ ತೆಗೆದುಕೊಳ್ಳಲೇಬೇಕಾ? ನಮ್ಮ ನಮ್ಮ ನಡುವಳಿಕೆ, ಸಾಮರ್ಥ್ಯ, ಯೋಗ್ಯತೆ, ಮತ್ತು ಮೈ ಮುರಿದು ದುಡಿಯುವ ಶ್ರಮದಿಂದ ನಾವು ಒಳ್ಳೆಯವರಾ? ಕೆಟ್ಟವರಾ? ಎಂಬುದು ಜನಗಳಲ್ಲಿ "ಹೆಸರಿನ" ಹಿಂದೆ ಮುಂದೆ  ಗುರುತಿಸಿಕೊಳ್ಳುತ್ತೇವೆಯೇ ಹೊರತು ನಮ್ಮ ಹೆಸರುಗಳು, ಅಡ್ಡ ಹೆಸರುಗಳು ಮಾತ್ರವೇ ನಮ್ಮನ್ನು ಯಾವುದೇ ನಿಲುಕಿಗೂ, ದುಡಿಕೆಗೂ, ಗಳಿಕೆಗೂ  ಕೊಂಡ್ಯೋಯ್ಯಲಾರವು.  ಮನೆತನದ, ಹೆಸರಿನ, ಅಡ್ಡ ಹೆಸರಿನ ಹಂಗೇ ಇಲ್ಲದೇ ಸ್ವಂತ ಯೋಗ್ಯತೆ ಮೇಲೆ ಅನ್ನ ಅರಸಿಕೊಂಡವರು, ಅವರ ಹೆಸರಿನ ಮುಂದೆ ಅವರ ಗುಣವಾಗುಣಗಳನ್ನು, ಸ್ವಂತಿಕೆಯನ್ನು, ಉತ್ತಿ ಬಿತ್ತಿ ಬೆಳೆ, ಬೆಲೆ ತಂದು ಕೊಂಡವರು ನಾವು ಕಂಡಂತೆ ಎಷ್ಟು ಜನರಿಲ್ಲ ಹೇಳಿ ?  ಕಳೆದ ತಿಂಗಳು ಯಾವುದೋ  ಒಂದು ಲೇಖನದಲ್ಲಿ ನನ್ನ ಸ್ನೇಹಿತರನ್ನು ಹೆಸರಿಸಿದ್ದೆ. ಆ ಲೇಖನವನ್ನು ನನ್ನ ಗೆಳೆಯರು, ನಮ್ಮ ಶಾಲಾ ಗುರುಗಳು ಓದಿದರಂತೆ. ಒಬ್ಬನಂತೂ ಅದನ್ನು ಓದಿ ಇಡೀ ಹದಿನೈದು ಇಪ್ಪತ್ತು ದಿನಗಳ ಕಾಲ ಪ್ರತಿದಿನ ಫೋನು ಮಾಡಿ ಹೆಸರಿನ ಹಿಂದೆ ಆತನ  "ಇನಿಷಿಯಲ್" ಕೈ ಬಿಟ್ಟಿದ್ದಕ್ಕೆ ಕಾಡಿಬಿಟ್ಟ.  ಯಾಕಾದರೂ ಈ ಲೇಖನ ಬರೆದೆನೆಂಬಷ್ಟು ಬೇಸರವಾಗಿತ್ತು. 

ನಮ್ಮ ಸಹುದ್ಯೋಗಿಯೊಬ್ಬರು ಬಳ್ಳಾರಿಯಲ್ಲಿ  ನಾನು ನನ್ನ ಪಾಡಿಗೆ ಕೆಲಸ ಮಾಡುತ್ತಿದ್ದರೆ, "ಏನ್ರಿ. ಪಬ್ಲಿಕ್ಸರ್ವೆಂಟ್ ( ಪಿ ಎಸ್ )  ಅಮರದೀಪ್ ರವರೇ ಫುಲ್ ಬಿಜೀನಾ " ಅಂದರೆ ಯಾವುದೇ ಕೆಲಸ ವಿಲ್ಲದೇ ಹಾಗೆ ಸುಮ್ಮನೆ ಕುಳಿತಿದ್ದರೆ, "ಪುಣ್ಯವಂತಪಾ ನೀನು ಪುಗಸಟ್ಟೆ ಸಂಬಳಗಾರ( ಪಿ ಎಸ್ ) ಅಮರದೀಪ್" ಎಂದು ತಮಾಷೆ ಮಾಡುತ್ತಿದ್ದರು.  

ಇತ್ತೀಚಿಗೆ ಒಂದು ಹೊಸ ಪದ್ಧತಿ ಶುರುವಾಗಿದೆ; ಲಗ್ನ ಪತ್ರಿಕೆ ನೀಡುವಾಗ ಹೆಸರು, ವಿಳಾಸ ಬರೆ ಯುವ ಜಾಗದಲ್ಲಿ "ನಿಮ್ಮ ಹೆಸರು ನಮ್ಮ ಮನದಲ್ಲಿದೆ, ನಿಮಗಿದೋ ನಮ್ಮ ಆಮಂತ್ರಣ" ಎಂದೇ ಛಾಪಿಸಿ ಕೈಗಿಡುವುದು. ಹೆಸರು ಬರೆಯುವಾಗ "ಹೆಸರೇನೆಂದು ಕೇಳಿ ಬರೆದು "ಅಡ್ಡ" ಅಥವಾ "ಸರ್ ನೇಮು"  ಗೊತ್ತಿಲ್ಲವೆಂದು ಹೇಳಿ ಕೊಂಕು ಆಡುವ  ನೆಂಟರಿಗಿಂತ, ಹೆಸರನ್ನು "ಅಡ್ಡಡ್ಡ"ವಾಗಿ  ಆಡಿ ಕೊಳ್ಳದಿದ್ದರೂ,  ಹೆಸರು ಅವರ ಮನಸ್ಸಿನಲ್ಲಿ ಇರದಿದ್ದರೂ ಅವರು ನೀಡುವ ಆಮಂತ್ರಣದಲ್ಲಿ concern ಮಾತ್ರವೇ ಇರುತ್ತಲ್ಲ? ಅಷ್ಟೇ ಸಾಕು. ಅದೇ ವಾಸಿ ಅಂದುಕೊಳ್ಳುತ್ತೇನೆ. ಜೊತೆಗೆ ಯಾವುದೇ ದುರುದ್ದೇಶವಿಲ್ಲದೇ ಕೇವಲ ತಮಾಷೆ ಮಾಡಿ ಸ್ನೇಹವನ್ನು ಉಳಿಸಿಕೊಳ್ಳುವ ಆಪ್ತರು ಕೂಡ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
chaithra
chaithra
10 years ago

Chennagide prsbanda sir

ಚೆನ್ನಬಸವರಾಜ್
Reply to  chaithra

ಅಡ್ಡ ಹೆಸರುಗಳ ( ಸರ್ ನೇಮ್ ) ಅಡ್ಡಾದಿಡ್ಡಿಯ ಅಡ್ಡ ಪರಿಣಾಮಗಳ ಬಗ್ಗೆ ಬಹು ಮಾರ್ಮಿಕವಾಗಿ, ತುಂಬಾ ಸೊಗಸಾಗಿ ಅಷ್ಟೇ ಮೊನಚಾಗಿ ನಿರೂಪಿಸಿದ್ದೀರಿ.ಈ ಜಗದ ಜನರೇ…. ಹಾಗೆ, ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಮತ್ತೊಬ್ಬರ ತಟ್ಟೆಯ ನೊಣದ ಬಗ್ಗೆ ಮಾತಾಡುವ ಕುಹುಕ ಬುದ್ಧಿಯ ಜನರು.

Rajshekhar Daggi
Rajshekhar Daggi
10 years ago

ಸ್ವಾಮಿ ನಿಜಕ್ಕೂ ಎಂಥಾ ವಿಪರ್ಯಾಸ ಅಲ್ಲವೇ? ಹೃದಯದ ಮಾತನ್ನಾಡಿದಂತೆ ಆಯ್ತು.  ಥ್ಯಾಂಕ್ಸ್  ರಾಜ್

Kotraswamy M
Kotraswamy M
10 years ago

Mana muttuvanthide!

ganesh
ganesh
10 years ago

Nimma lekhana bahala chennagithu.  Nodi amardeep south karnataka ee surname/adda/udda/chikka/manethanada hesarugalannu iduva paddathi ittokondiruvudilla, edarinda nanu bahala kasta patta udaharegalu sakastide.  Yavude applicationalli nodi surname is madatory antha irothe,  alli yenu bareyodu antha thiliyade oddadida prasangagalu nanna bali sakastive.

Santhoshkumar LM
10 years ago

🙂

ನಂದಿನಿ ಶಿವಪ್ರಕಾಶ್

ಬಹಳ ಸೊಗಸಾದ ಬರಹ..ಅಡ್ಡಹೆಸರು ಉತ್ತರ ಕರ್ನಾಟಕದ ಕಡೆಯ ಜನರ ಗುರುತು . ಅದರ ಖದರ್ ನಂಗೆ ಗೊತ್ತು.   ಜೊತೆಗೆ ಅಡ್ಡ ಹೆಸರು ಇರಬೇಕು … ಅದು ಇದ್ದರೆ ಅವರು ಸ್ನೇಹಿತರ ಜೊತೆ ಬದುಕ್ತಿದಾರೆ  ಅನಿಸುತ್ತೆ . ಇಲ್ಲಾ ಅಂದರೆ ಬದುಕು ಶೂನ್ಯ…

7
0
Would love your thoughts, please comment.x
()
x