Facebook

ಹಾದಿಗಳಿಲ್ಲದ ಬದುಕು: ರೇಷ್ಮಾ ಎ.ಎಸ್.

Spread the love

ಆಕೆ ನನ್ನ ಸಹೋದ್ಯೋಗಿ ಮಾತ್ರವಲ್ಲದೆ ನನ್ನ ಆತ್ಮೀಯ ಗೆಳತಿಯೂ ಆಗಿದ್ದಾಕೆ. ವಯಸ್ಸಿನಲ್ಲಿ ನನಗಿಂತ ಸಾಕಷ್ಟು ಹಿರಿಯಳಾಗಿದ್ದರೂ ಸ್ನೇಹಕ್ಕೇನೂ ಕೊರತೆ ಇರಲಿಲ್ಲ. ತಂದೆಯನ್ನು ಕಳೆದುಕೊಂಡು ವಯಸ್ಸಾದ ತಾಯಿ, ಚಿಕ್ಕ ತಂಗಿಯೊಡನಿರುತ್ತಿದ್ದ ಆಕೆ ಸಾಧಾರಣ ರೂಪವಂತೆಯಾಗಿದ್ದರೂ ಉದ್ಯೋಗಸ್ಥಳಾದ್ದರಿಂದ ಮದುವೆಯಾಗಲು ಮುಂಬರುತ್ತಿದ್ದ ಗಂಡುಗಳಿಗೇನೂ ಕೊರತೆ ಇರಲಿಲ್ಲ. ಎಲ್ಲ ಸರಿ ಇದೆಯಲ್ಲ ಎಂದು ಉಳಿದವರಿಗೆಲ್ಲ ಅನಿಸುತ್ತಿದ್ದರೂ ಆಕೆ ಕೊನೆಯಲ್ಲಿ ಏನಾದರೂ ಒಂದು ಕಾರಣ ನೀಡಿ ಮದುವೆ ನಿರಾಕರಿಸಿ ಬಿಡುತ್ತಿದ್ದಳು. ಒಬ್ಬ ವರನಂತೂ ನಮಗೆಲ್ಲ ತುಂಬಾ ಸೂಕ್ತನಾದವನು ಎಂದೆನಿಸಿದ್ದು ಆಕೆ ಏನೋ ನೆವ ತೆಗೆದು ಬೇಡವೆಂದಾಗ ನಾನು ತಡೆಯಲಾಗದೇ ಆಕ್ಷೇಪಿಸಿದೆ. ಆಕೆ ತುಸು ವ್ಯಥೆಯಿಂದ ಅಂದಳು, "ನಾನು ಮದುವೆ ಆಗಿಬಿಟ್ಟರೆ ತಾಯಿ ತಂಗೀನ್ನ ನೋಡ್ಕೊಳೋರು ಯಾರು? ಈಗೇನೋ ಹೂಂ ಅಂತ ಒಪ್ಪಿಕೊಂಡು ಮದುವೆ ಆದಮೇಲೆ ಅವರನ್ನು ಹೊರಹಾಕಿದರೆ ಇಲ್ಲವೇ ಸಹಾಯ ಮಾಡಬಾರದೆಂದು ಅಡ್ಡಿ ಮಾಡಿದರೆ ಅದೇ ಕಾರಣಕ್ಕೆ ಜಗಳವಾದರೆ? ಅದಕ್ಕೆ ಈಗ ಮದುವೆ ಆಗಲು ಇಷ್ಟವಿಲ್ಲ." ಮೌನ ನನ್ನ ಬಾಯಿಕಟ್ಟಿತು. ಮುಂದೆ ತಾಯಿ ಅನಾರೋಗ್ಯದಿಂದ ಕಾಲವಾದರು. ತಂಗಿಯ ಮದುವೆಗೆ ಹಣ ಹೊಂದಿಸಿ, ಹುಡುಗನನ್ನು ಹುಡುಕಿ ಮದುವೆ ಮಾಡಿ ಮುಗಿಸುವ ಧಾವಂತದಲ್ಲಿ ಆಕೆಯ ಮುಂದಲೆಯಲ್ಲಿ ಬಿಳಿಗೂದಲುಗಳು ಬರುವಷ್ಟು ಸಮಯ ಸರಿದೇ ಹೋಗಿತ್ತು. ಈಗಲಾದರೂ ಮದುವೆ ಆಗಬಾರದೇ? ಜವಾಬ್ದಾರಿಗಳೆಲ್ಲ ಕಳೆದುವಲ್ಲ? ಎಂಬ ಪ್ರಶ್ನೆಗೆ ಹುಂ ಆಗಬೇಕು, ನನಗಾಗಿ ಹುಡುಕುವರಾರು? ಎಂದಾಕೆ ವ್ಯಥೆಯ ಕೊರಳೆತ್ತಿದಳು. ಹಿಂದೆಯೇ ಆಕೆಯನ್ನು ನೋಡಿ ಒಪ್ಪಿದ್ದು ಆಕೆಯ ತಿರಸ್ಕರಿಸಿದ್ದ ವರನೊಬ್ಬ ನಂತರ ಮದುವೆಯಾಗಿ ಮಗುವೊಂದನ್ನು ಹೆತ್ತುಕೊಟ್ಟು ಪತ್ನಿ ತೀರಿದ್ದರಿಂದ ಮರುಮದುವೆಯಾಗುವ ಬಯಕೆಯಿಂದ ಈವರೆಗೂ ಮದುವೆಯಾಗದೇ ಉಳಿದ ಈಕೆಯಲ್ಲಿ ಮದುವೆಯ ಪ್ರಸ್ತಾಪವನ್ನಿಟ್ಟ. ಅವಳು ಅಳುಕಿದಳು. ಎರಡನೇ ಮದುವೆ, ಮಗುವೊಂದಿದೆ ಬೇರೆ, ಹೇಗೆ ನಡೆದುಕೊಂಡರೂ ಮಲತಾಯಿ ಎಂಬ ಹೆಸರು ಇದ್ದದ್ದೇ. ತೀರ್ಮಾನ ತೆಗೆದುಕೊಳ್ಳಲಾಗದೇ ಈಕೆ ಇನ್ನೂ ದ್ವಂದ್ವದಲ್ಲಿದ್ದಂತೆಯೇ ಈಕೆಯ ತೀರ್ಮಾನಕಾಗಿ ಕಾಯುವಷ್ಟು ತಾಳ್ಮೆ ಇಲ್ಲದ ಆತ ಬೇರೊಂದು ಹೆಣ್ಣನ್ನು ಮದುವೆಯಾಗಿಯೇ ಬಿಟ್ಟ. 

ಕಾಲ ಸರಿಯುತ್ತಿತ್ತು. ಬದುಕಿನ ಕವಲುಗಳು ಹಲವು ವರ್ಷಗಳ ಕಾಲ ಆಕೆಯನ್ನು ನೋಡಲು ನನಗೆ ಅವಕಾಶವನ್ನೇ ಕಲ್ಪಿಸಿರಲಿಲ್ಲ. ಒಂದೊಮ್ಮೆ ಭೇಟಿಯಾದಾಗ ಒಂಟಿತನದಲ್ಲಿ ಬೇಯುತ್ತಿದ್ದ ಆಕೆಯನ್ನು ಪ್ರೇಮವಿವಾಹವಾದರೂ ಆಗಬಾರದಾ? ಜಾತಿ, ಜಾತಕ ಎಂದೆಲ್ಲಾ ನೋಡುತ್ತಾ ಕೂರುವುದೇಕೆ? ಎಂದು ಕೆಣಕಿದಾಗ ನಾನೇನೋ ಯಾರನ್ನಾದ್ರೂ ಪ್ರೀತಿಸಬಹುದು. ಆದ್ರೆ ಆತನೂ ನನ್ನನ್ನು ಪ್ರೀತಿಸುತ್ತಾನೆ ಅನ್ನುವುದೇನು ಗ್ಯಾರಂಟಿ ಎಂದು ವ್ಯಂಗ್ಯವಾಗಿ ನಕ್ಕು ತೇಲಿಸಿಬಿಟ್ಟಳಾಕೆ. ಮತ್ತೊಮ್ಮೆ ಭೇಟಿಯಾದಾಗ ಆಕೆಯನ್ನು ಒಂಟಿತನ ಭೀಕರವಾಗಿ ಕಾಡುತ್ತಿದ್ದುದು ಸ್ಪಷ್ಟವಾಗಿತ್ತು. ಕಾರಣ ಈವರೆಗೆ ಬದುಕಿಗೆ ಒಂದು ಆಸರೆಯಾಗಿದ್ದ ಉದ್ಯೋಗದಿಂದ ನಿವೃತ್ತಿ ದೊರೆಯುವ ಕಾಲ ಸಮೀಪಿಸಿತ್ತು. ಮಗುವೊಂದನ್ನಾದ್ರೂ ದತ್ತು ತಗೊಳ್ಳಿ, ಅನಾಥ ಮಗುವಿಗೆ ಆಸರೆಯೂ ಆಗುತ್ತೆ, ನಿಮಗೆ ಆಧಾರವೂ ಆಗುತ್ತೆ ಎಂದು ಈ ಹಿಂದೆಯೇ ನಾನು ಸೂಚಿಸಿದ್ದರೂ, "ಅಯ್ಯೋ ಅನಾಥ ಮಕ್ಳು ಯಾರು ಯಾರಿಗೆ ಹುಟ್ಟಿರುತ್ತೋ ಏನೋ? ಬೆಳೀತಾ ಅವರ ತಂದೆ ತಾಯಿ ಬುದ್ದೀನೇ ಬಂದ್ರೆ?" ಎಂದು ಸಲಹೆ ತಿರಸ್ಕರಿಸಿದ ಆಕೆ ಹಾಗಾದ್ರೂ ಮಾಡಬೇಕಿತ್ತು, ಈಗ ಮುಂದೇನು? ಎಲ್ಲಿಗೆ ಹೋಗಲಿ? ಬಂಧುಗಳೇನೋ ಕರೆಯಬಹುದು ಬನ್ನಿ ಇರಿ ಎಂದು. ಆದರೆ ಅವೆಲ್ಲ ನನ್ನ ಆಸ್ತಿ ಆಸೆಗೆ ಅಷ್ಟೇ, ಅದಕ್ಕೇ ನನಗೆಲ್ಲೂ ಹೋಗಲು ಇಷ್ಟವಿಲ್ಲಎಂದು ನುಡಿದಳಾಕೆ. ಪುನಃ ಅನಾಥ ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಸಲಹೆ ಮುಂದಿಟ್ಟೆ. ಅಯ್ಯೋ ಈ ವಯಸ್ಸಿನಲ್ಲಿ ಮಗೂನ ದತ್ತು ತಗೊಂಡ್ರೆ ಮಧ್ಯದಲ್ಲಿ ನಂಗೇನಾದ್ರೂ ಆಯ್ತು ಅಂದ್ರೆ ಆ ಮಗೂನ ಇನ್ನೊಮ್ಮೆ ಅನಾಥ ಮಾಡಿದಂತಾಗೋಲ್ವ, ಖಂಡಿತ ಬೇಡ ಎಂದು ತಿರಸ್ಕರಿಸಿದಳು. ಏನಾದರೂ ಸಮಾಜಸೇವೆಯಲ್ಲಿ ತೊಡಗಿಕೊಂಡರೆ ಎಂದಾಗ ಇನ್ನು ದುಡಿವ ಶಕ್ತಿಯಿಲ್ಲ ಎಂಬ ಉತ್ತರ ಬಂತು. ವೃದ್ಧಾಶ್ರಮಕ್ಕಾದರೂ ಎನ್ನುತ್ತಿದ್ದಂತೆಯೇ ಖಂಡಿತಾ ಬೇಡ, ಸುತ್ತಮುತ್ತ ಎಲ್ಲ ನಾನಾ ರೀತಿಯ ನೋವು ಹೊತ್ತ ವೃದ್ದರನ್ನೇ ಕಂಡಾಗ ನನ್ನ  ಬದುಕು ಇನ್ನಷ್ಟು ನರಕ ಎನ್ನಿಸಿ ಬಿಡುತ್ತೇನೋ ಎಂದಳಾಕೆ.

ನನ್ನ ಕೈಗಳನ್ನು ಎರಡೂ ಕೈಗಳಲ್ಲಿ ಹಿಡಿದು ಇನ್ನೆರೆಡೇ ತಿಂಗಳು. ರಿಟೈರ್ ಆದಮೇಲೆ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು ಅಂತ ತೋಚುತ್ತಿಲ್ಲ ಎಂದಾಕೆಯ ಕಣ್ಣಂಚಿನಲ್ಲಿ, ಮುಖದಲ್ಲಿ ವಿಷಾದ, ಹತಾಶೆ, ಆತಂಕ ಮಡುಗಟ್ಟಿತು. ಅದನ್ನೇ ನೋಡುತ್ತಾ ಕೆಲವರು ತಮ್ಮ ಕೈಯಾರ ಬದುಕನ್ನು ಅದೆಷ್ಟು ಅಸಹನೀಯ ಮಾಡಿಕೊಂಡುಬಿಡುತ್ತಾರಲ್ಲಾ ಎಂಬ ವ್ಯಥೆ ಆವರಿಸಿಕೊಂಡುಬಿಟ್ಟಿತು. ಹಾದಿಗಳೇ ಇಲ್ಲದೆ ಬದುಕನ್ನು ಸವೆಸಿ ಸುತ್ತ ಗೋಡೆ ಕಟ್ಟಿಕೊಂಡ ಆಕೆಯನ್ನು ನೋಡುತ್ತಾ ನೋಡುತ್ತಾ ವಿಷಾದ ನನ್ನೊಳಗೆ ತುಂಬಿಕೊಂಡುಬಿಟ್ಟಿತು.

~ರೇಷ್ಮಾ ಎ.ಎಸ್.

You can leave a response, or trackback from your own site.

3 Responses to “ಹಾದಿಗಳಿಲ್ಲದ ಬದುಕು: ರೇಷ್ಮಾ ಎ.ಎಸ್.”

  1. jamuna says:

    liked ur all the stories here. nimma jIvanAnubhava adbhuta.

  2. Umesh says:

    It is so sad. People are too greedy. The same will backfire them at times.

  3. nanda says:

    ನಮ್ಮ ನಿಮ್ಮ ನಡುವೆ ಇಂತಹ್ ಉದಾಹರಣೆಗಳು ಸಾಕಸ್ಟಿವೆ.ಅದರಲ್ಲೂ ಹೆಣ್ಣುಮಕ್ಕಳು ತಮ್ಮ ಜೀವನದ ಬಗ್ಗೆ ದೂರದೃಸ್ಟಿಯಿಂದ ಯೋಚಿಸಬೇಕಾದದ್ದು ಇಂದಿನ ಅನಿವಾರ್ಯತೆ.ಮನಮುಟ್ಟುವ ಬರಹ.ತುಂಬಾ ಚೆನ್ನಾಗಿದೆ.

Leave a Reply