Facebook

ಸ್ನೇಹ ಭಾಂದವ್ಯ (ಭಾಗ 7): ನಾಗರತ್ನಾ ಗೋವಿಂದನ್ನವರ

Spread the love

(ಇಲ್ಲಿಯವರೆಗೆ)


ರೇಖಾ ಶಿವಮೊಗ್ಗಕ್ಕೆ ಹೋದಳು. ಅವಳಿಗೆ ಮಾತ್ರ ತಾನು ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುವ ಹಕ್ಕಿ ತಾನಾಗಬೇಕು ಎಂದೆನಿಸಿತು. ಸುಧಾಳ ಬಗ್ಗೆ ಅವಳಿಗೆ ಅತೀವ ದುಃಖವಾಯಿತು. ತನ್ನ ಗೆಳತಿಯ ಜೀವನ ಹೀಗೇಕಾಯಿತು ಅಂದು ಚಿಂತಿಸುತ್ತಿದ್ದಳು. 

     ಈ ಸಲ ದೀಪಾವಳಿ ಹಬ್ಬಕ್ಕೆ ಅಳಿಯ-ಮಗಳನ್ನು ಮನೆಗೆ ಕರೆದುಕೊಂಡು ಬರಬೇಕು ಎಂದು ವೆಂಕಟಗಿರಿಗೆ ಕಾವೇರಮ್ಮ ಹೇಳಿದರು. ಅದರಂತೆ ಹೌದು ಕಣೆ ಮರೆತುಬಿಟ್ಟಿದ್ದೆ. ಇವತ್ತೆ ಹೋಗಿ ಹೇಳಿ ಬರುತ್ತೇನೆ ಎಂದು ವೆಂಕಟಗಿರಿ ಸುಧಾಳ ಮನೆಗೆ ಹೋದರು. ಬಾಗಿಲಲ್ಲಿ ಕುಳಿತಿದ್ದ ರಮಾನಂದರು ವೆಂಕಟಗಿರಿಯನ್ನು ನೋಡಿ ಬರ್ರಿ ಬರ್ರಿ ಬೀಗರು ಏನು ಅಪರೂಪ ಆದ್ರಿ ಎಂದರು. ಹೌದು ರಾಯರೇ, ದೀಪಾವಳಿ ಹತ್ತಿರ ಬಂತು ನೋಡಿ. ಮೊದಲನೆಯ ದೀಪಾವಳಿಗೆಂದು 

ಮಗಳು-ಅಳಿಯನ್ನು ಕರೆಯಲು ಬಂದೆ ಎಂದರು. ಓ ಅವಶ್ಯವಾಗಿ ಅದಕ್ಕೆನಂತೆ ಎಂದು ಸುಧಾ ಯಾರು ಬಂದಿದ್ದಾರೆ ಅಂತ ನೋಡುಬಾರಮ್ಮ ಎಂದು ಕರೆದರು. ಸುಧಾ ಹೊರಗೆ ಬಂದಳು. ವೆಂಕಟಗಿರಿಯನ್ನು ನೋಡಿ ಸಂತೋಷದಿಂದ ಅಪ್ಪಾ ಹೇಗಿದ್ದೀರಿ ಎಂದು ಕೇಳಿದಳು. ಚೆನ್ನಾಗಿದ್ದೆನಪ್ಪಾ ಎಂದಳು. ಆದರೂ ವೆಂಕಟಗಿರಿಯವರಿಗೆ ಮಗಳು ಬಡವಾಗಿದ್ದಾಳೆ ಮೊದಲಿನ ಹಾಗಿಲ್ಲ ಎಂದೆನಿಸಿತು. ರಮಾನಂದರು ಅಪ್ಪಾ-ಮಗಳ ಮಾತು ಹೊರಗೆ ಮುಗಿಸಬೇಕೂಂತ ಇದ್ದಿರಾ ಒಳಗೆ ನಡೆಯಿರಿ ಎಂದು ಒಳಗೆ ಕರೆದುಕೊಂಡು ಹೋದರು. ಪದ್ಮಮ್ಮ ವೆಂಕಟಗಿರಿಯನ್ನು ನೋಡಿ ಮೇಲ್ನೊಟಕ್ಕೆ ನಗೆಯ ಮುಖವಾಡ ಧರಿಸಿ ಅವರಿಗೆ ತಾವೇ ಉಪಚಾರ ಮಾಡಿದರು. ಅಳಿಯಂದ್ರು ಎಲ್ಲಿ ಕಾಣ್ತಾನೆ ಎಲ್ಲ ಎಂದು ವೆಂಕಟಗಿರಿಯವರು ಕೇಳುತ್ತಲೆ, ಅವನು ಇಷ್ಟೊತ್ತಿನಲ್ಲಿ ಎಲ್ಲಿ ಮನೆಯಲ್ಲಿರುತ್ತಾನೆ ಬ್ಯಾಂಕಿಗೆ ಹೋಗಿರ್‍ತಾನೆ ಎಂದರು ರಮಾನಂದ ಎಷ್ಟೋ ಹೊತ್ತಿನವರೆಗೂ ವೆಂಕಟಗಿರಿ ರಮಾನಂದರ ಜೊತೆ ಹರಟೆ ಹೊಡೆದರು. ಅನಂತರ ತಾವಿನ್ನು ಹೊರಡುವುದಾಗಿ ಹೇಳಿ ಅಳಿಯಂದಿರನ್ನು-ಮಗಳನ್ನು ದೀಪಾವಳಿಗೆ ತವರು ಮನೆಗೆ ಕಳಿಸಿ ಎಂದು ಮತ್ತೊಮ್ಮೆ ಹೇಳಿ ಮನೆಗೆ ವಾಪಸ್ಸಾದರು. ಪದ್ಮಮ್ಮಳಿಗೆ ಮಾತ್ರ ತಲೆಯಲ್ಲಿ ಒಂದು ವಿಚಾರ ಹೊಳೆದಿತ್ತು. ಇವಳು ತವರು ಮನೆಗೆ ಹೋದರೆ ಬರುವಾಗ ಏನಾದರೂ ಬಟ್ಟೆ-ಒಡವೆ ಎಲ್ಲಾ ತಗೊಂಡು ಬರಬಹುದು ಎಂದು ಲೆಕ್ಕಾಚಾರ ಹಾಕಿ ಸಂತೋಷವಾಗಿದ್ದಳು.

     ಅಂದುಕೊಂಡಂತೆ ಹಬ್ಬದ ದಿನ ಅಳಿಯ-ಮಗಳು ಮನೆಗೆ ಬಂದುದನ್ನು ಕಂಡು ಕಾವೇರಮ್ಮ ಸಂಭ್ರಮದಿಂದ ಓಡಾಡಿದಳು. ಅಳಿಯನಿಗೆಂದು ಹಲವು ಸಿಹಿ-ತಿಂಡಿಗಳನ್ನು ಮಾಡಿದಳು. ಒಂದೆರಡು ದಿನ ಒತ್ತಾಯ ಮಾಡಿ ಮನೆಯಲ್ಲಿಯೆ ಇಟ್ಟುಕೊಂಡಿದ್ದಳು. ರಾಜೇಶನಿಗೆ ಅತ್ತೆ-ಮಾವನವರ ಪ್ರೀತಿಗೆ ಏನು ಹೇಳಬೇಕೊ ತಿಳಿಯದೆ ಮೂಕವಾಗಿದ್ದ. ತನ್ನ ತಾಯಿಗೂ ಇದೆ ಬುದ್ಧಿ ಇದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಎಂದುಕೊಂಡ. ಅಂದು ಸಾಯಂಕಾಲ ರಾಜೇಶ ಹೊರಡಲು ನಿಂತ. ಅಳಿಯನಿಗೆ ಒಂದು ಜೊತೆ ಫ್ಯಾಂಟು-ಶರ್ಟು, ಮಗಳಿಗೆ ಒಂದು ಸೀರೆ-ರವಿಕೆ ಕೊಟ್ಟು ಬಿಳ್ಕೊಟ್ಟರು ಕಾವೇರಮ್ಮ. ರಾಜೇಶ ತನ್ನ ಹೆಂಡತಿಯೊಡನೆ ಮನೆಗೆ ಬಂದಾಗ ಪದ್ಮಮ್ಮ ಹಬ್ಬ ಹೇಗಾಯಿತು ಎಂದು ವಿಷಯ ತಿಳಿದುಕೊಳ್ಳಲು ಕೇಳಿದರು. ಚೆನ್ನಾಗಿ ಆಯಿತಮ್ಮ. ಅತ್ತೆ-ಮಾವ ಚೆನ್ನಾಗಿ ನೋಡಿಕೊಂಡರಮ್ಮ, ಬರೋವಾಗ ಬೇಡವೆಂದರೂ ಕೇಳದೆ ನನಗೆ ಒಂದು ಜೊತೆ ಪ್ಯಾಂಟು-ಶರ್ಟು, ಸುಧಾಗೆ ಸೀರೆ ಕೊಟ್ಟರು ಎಂದ. ಹೌದೇನು ತುಂಬಾ ಉಪಚಾರ ಮಾಡಿದ್ದಾರೆ ಬಿಡು ಎಂದು ವ್ಯಂಗ್ಯವಾಗಿ ನುಡಿದಳು. ರಾಜೇಶ ಬ್ಯಾಂಕಿಗೆ ಹೋರಟು ಹೋದ. ಅವನು ಹೋದ ನಂತರ ಪದ್ಮಮ್ಮ ಏನೇ ನಿಮ್ಮಪ್ಪನಿಗೆ ಒಂದು ಓಡಾಡಲಿಕ್ಕೆ ಗಾಡಿನೊ ಇಲ್ಲಾ ಒಂದಿಷ್ಟು ಬಂಗಾರನೊ ಕೊಡುವಷ್ಟು ಗತಿ ಇಲ್ವೆನು, ನಮ್ಮ ರಾಜೇಶನಿಗೆ ಎಂತೆಂಥ ಶ್ರೀಮಂತ ಸಂಬಂಧಗಳೆಲ್ಲ ಬಂದಿದ್ದವು. ಛೆ ಇಂತಹ ಗತಿಗೆಟ್ಟ ಸಂಬಂಧ ಎಂದು ಮೊದಲೆ ಗೊತ್ತಿದಿದ್ದರೆ ಎನ್ನುತ್ತಲೆ ಸುಧಾ ಕೋಪದಿಂದ ಅತ್ತೆ ಏನು ಮಾತಾಡ್ತಾ ಇದ್ದಿರಾ. ನಾವೇನು ಗತಿಗೆಟ್ಟವರಲ್ಲ. ನಮ್ಮ ತಂದೆ ಕೈಲಾದಷ್ಟು ಕೊಟ್ಟು ಮದುವೆಯ ಖರ್ಚನ್ನು ತಾವೇ ಮಾಡಿದ್ದಾರೆ. ಹೀಗಿರುವಾಗ ನಿಮಗೆ ಮಾತಾಡೊಕಾದರೂ ಹೇಗೆ ಮನಸ್ಸು ಬರೊತ್ತೆ ಎಂದಳು ಸುಧಾ. ಹೋಗಮ್ಮ ಹೋಗು ದೊಡ್ಡಸ್ತಿಕೆ ಮಾತಾಡೊಕೆ ಬರಬೇಡಾ ಅನ್ನುವಷ್ಟರಲ್ಲಿ ರಮಾನಂದರು ಒಳಗೆ ಬಂದರು. ಏಕಮ್ಮಾ ಸುಧಾ ಅಳ್ತಾ ಇದ್ದಿಯಾ ಎಂದು ಕೇಳಿದರು. ಮಾವನಿಗೆ ಅತ್ತೆ ತಮ್ಮ ತಂದೆಯ ಬಗ್ಗೆ ಮಾತಾಡಿದ್ದನ್ನು ಹೇಳಿದಳು. ಯಾಕೆ ಆ ಮಗೂಗೆ ತೊಂದರೆ ಕೊಡ್ತಿಯಾ ಎಂದು ರಮಾನಂದರು ಹೆಂಡತಿಯನ್ನು ಗದರುತ್ತಲೆ ಪದ್ಮಮ್ಮ ಒಳಗೆ ಹೋದರು. ಸುಧಾ ನೀನು ಅಳಬಾರದಮ್ಮ ನಿಮ್ಮ ಅತ್ತೆಯ ಮಾತನ್ನು ಮನಸ್ಸಿಗೆ ಹಚ್ಚಕೊಳ್ಳಬೇಡಮ್ಮ ಎಂದು ಅವಳಿಗೆ ಸಮಾಧಾನ ಹೇಳಿದರು. ಸುಧಾಳಿಗೆ ಮಾವನ ಬಗ್ಗೆ ಸ್ವಲ್ಪವೂ ಬೇಸರವಿರಲಿಲ್ಲ. ತಂದೆಯ ಪ್ರೀತಿಯನ್ನೇ ತೋರುತ್ತಿದ್ದರು ಅವಳಿಗೆ. ಹೀಗಾಗಿ ಅವಳಿಗೆ ರಮಾನಂದರ ಬಗ್ಗೆ ತುಂಬಾ ಅಭಿಮಾನವಿತ್ತು.

     ಒಂದು ದಿನ ಸುಧಾ ಬಟ್ಟೆ ಒಗೆಯುತ್ತಿದ್ದಾಗ ಇದ್ದಕಿದ್ದಂತೆ ತಲೆಸುತ್ತು ಬಂದು ಕೆಳಗೆ ಬಿದ್ದಳು. ರಮಾನಂದರು ಏನಾಯಿತಮ್ಮ ಎಂದು ಓಡಿಬಂದು ಸುಧಾಳನ್ನು ಹಿಡಿದುಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದರು. ಅನಂತರ ಡಾಕ್ಟರಿಗೆ ಫೋನ ಮಾಡಿದರು. ಪದ್ಮಮ್ಮ ಏನಾಯಿತು ರ್ರೀ. ಎಂದು ಗಂಡನನ್ನು ಕೇಳಿದಳು. ಏನೋ ನಾನು ನೋಡಿದಾಗ ಪ್ರಜ್ಞೆ ತಪ್ಪಿ ಬಿದ್ದಿದಳು ಎಂದ. ಅದಕ್ಕವಳು ಅಷ್ಟೆನಾ ಬಹುಶಃ ಗರ್ಭಿಣಿಯಾಗಿರಬೇಕೂಂತ ಕಾಣುತ್ತೆ ಎಂದಳು ಸಂತಸದಿಂದ. ಅಷ್ಟೊತ್ತಿಗೆ ಡಾಕ್ಟರ ಬಂದು ಸುಧಾಳನ್ನು ಪರೀಕ್ಷಿಸಿ ಸಂತೋಷದ ವಿಷಯ ನೀವು ಅಜ್ಜ-ಅಜ್ಜಿಯಾಗ್ತಿರಾ ಎಂದರು. ಒಂದಿಷ್ಟು ಟಾನಿಕ್ ಬರೆದುಕೊಟ್ಟು ಇದನ್ನು ಹೊತ್ತು ಹೊತ್ತಿಗೆ ಸರಿಯಾಗಿ ಕೊಡಿ ಎಂದು ಹೇಳಿ ಹೋದರು. ಸಂಜೆ ರಾಜೇಶ ಬಂದಾಗ ಪದ್ಮಮ್ಮ ವಿಷಯ ತಿಳಿಸಿದಳು. ಇದರಿಂದ ರಾಜೇಶನಿಗೆ ಅತ್ಯಂತ ಸಂತೋಷವಾಗಿ ಸುಧಾಳನ್ನು ನೊಡಲು ಹೋದ. ನಾನು ಕೇಳಿದ ವಿಷಯ ನಿಜಾನಾ ಎಂದ. ಅವಳು ಹೌದೆಂದು ತಲೆಯಾಡಿಸಿದಳು. ಅಂತು ಈಗ ನಾನು ತಂದೆಯಾಗುವ ಸುಯೋಗ ಬಂತು ಅನ್ನು ಅಂದಾಗ ಸುಧಾ ನಾಚಿಕೊಂಡಳು. ಈ ಸಿಹಿ ಸುದ್ಧಿಯನ್ನು ರಾಜೇಶ ತನ್ನ ಅತ್ತೆ-ಮಾವನವರಿಗೂ ತಿಳಿಸಿದ. ಸುದ್ಧಿ ತಿಳಿದ ಅವರು ಸುಧಾಳನ್ನು ನೋಡಲು ಬಂದರು. ಕಾವೇರಮ್ಮನನ್ನು ನೋಡಿದ ಸುಧಾ ಓಡಿ ಹೋಗಿ ತಾಯಿಯನ್ನು ತಬ್ಬಿಕೊಂಡಳು. ವೆಂಕಟಗಿರಿ ಸುಧಾಳಿಗೆ ಗಂಡು ಮಗೂನ್ನೆ ಹಡೆಯಮ್ಮ ಅಂದರು. ಆದರೆ ಕಾವೇರಮ್ಮ ಗಂಡಾದರು ಆಗಲಿ ಹೆಣ್ಣಾದರೂ ಆಗಲಿ ಒಟ್ಟಿನಲ್ಲಿ ಒಂದು ಮುದ್ದಾದ ಮಗು ಆಗಲಿ ಎಂದರು. ಆ ಮಾತಿಗೆ ಎಲ್ಲರೂ ನಗತೊಡಗಿದರು. ಸುಧಾ ನೀನು ನಿನ್ನ ಆರೋಗ್ಯವನ್ನ ಚೆನ್ನಾಗಿ ನೋಡಿಕೊಳ್ಳಮ್ಮಾ. ಏನಾದರೂ ಬಯಕೆ ಇದ್ದರೆ ಹೇಳಿಬಿಡಮ್ಮ ಎಂದರು. ಸರಿಯಮ್ಮ ಅಂದಳು ಸುಧಾ.

     ಇವರ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದ ಪದ್ಮಮ್ಮ ಅಯ್ಯೋ ನಿಮ್ಮ ಮಗಳು ತಾಯಿಯಾಗ್ತಿದ್ದಾಳೆ ಅಂದಕೂಡಲೆ ನಾನು ಅವಳಿಗೆ ಏನು ಕೆಲಸ ಹಚ್ಚಿಲ್ಲಮ್ಮಾ ಅವಳನ್ನ ಹೂವಿನ ಹಾಗೆ ನೊಡ್ಕೊತಾ ಇದ್ದಿನಿ ಎಂದು ವ್ಯಂಗ್ಯವಾಗಿ ಅಂದಳು. ಆದರೆ ಕಾವೇರಮ್ಮನಿಗೆ ಅವಳ ವ್ಯಂಗ್ಯದ ಅರಿವಾಗಲಿಲ್ಲ. ಸಂತೋಷವಮ್ಮ ನಾವಿನ್ನು ಬರ್‍ತಿವಿ ಅಂದರು. ರಮಾನಂದರು ತಡೆದು ಈಗಲೇ ಹೊರಟರೆ ಹೇಗೆ ಸಂತೋಷದ ಸುದ್ದಿ ಕೇಳಿದ್ದಿರಾ ಸಿಹಿ ಊಟ ಮಾಡಿಯೇ ಹೋಗಬೇಕೆಂದು ಊಟ ಮಾಡಿಸಿಯೆ ಕಳಿಸಿದರು.

     ದಿನಗಳೆದಂತೆ ಸುಧಾ ಮೈ-ಕೈ ತುಂಬಿಕೊಂಡಳು. ಅವಳಿಗೆ ಹುಣಸೆಕಾಯಿ ತಿನ್ನಬೇಕೆಂದು ಆಸೆಯಾಯಿತು. ಅದನ್ನು ಅವಳು ತನ್ನ ಅತ್ತೆಯ ಹತ್ತಿರ ಕೇಳಿದಳು. ಅದಕ್ಕೆ ಪದ್ಮಮ್ಮ ಸಾಧಾರಣವಾಗಿ ಎಲ್ಲರೂ ಮಾವಿನಕಾಯಿ ಕೇಳ್ತಿರುತ್ತಾರೆ. ನೀನು ನೋಡಿದರೆ ಹುಣಸೆಕಾಯಿ ಕೇಳ್ತಿದಿಯಲ್ಲ. ಇದೆಂತಹ ಬಯಕೆ ನಿನ್ನದು ಬೇರೆ ಎನಾದರೂ ಇದ್ದರೆ ಹೇಳು ತೀರಿಸುತ್ತೇನೆ. ಈ ಹುಣಸೆಕಾಯಿ ಎಲ್ಲಿಂದ ತರಲಿ ಎಂದು ಅಲಕ್ಷ ಮಾಡಿದ್ದಳು.

     ಇತ್ತೀಚೆಗೆ ರಾಜೇಶನಿಗೆ ಬ್ಯಾಂಕಿನಲ್ಲಿ ಕೆಲಸ ಹೆಚ್ಚಾಗಿತ್ತು. ಕೆಲಸದ ಒತ್ತಡದಿಂದ ಸುಸ್ತಾಗಿ ಮನೆಗೆ ಬರುತ್ತಿದ್ದ ಸುಧಾ ಏನಾದರು ಹೇಳಿದರೆ ಇದೆಲ್ಲಾ ಹೆಣ್ಣುಮಕ್ಕಳಿಗೆ ಗೊತ್ತಾಗೊದು ನನಗೇನು ತಿಳಿಯೊತ್ತೆ ಅಮ್ಮನ ಹತ್ತಿರ ಹೇಳು ಎಂದು ಜಾರಿಕೊಳ್ಳುತ್ತಿದ್ದ. ಇದರಿಂದ ಸುಧಾಳ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ತಿಂಗಳಾಗುತ್ತಲೆ ಡಾಕ್ಟರ ಹತ್ತಿರ ಕರೆದುಕೊಂಡು ಹೋಗಲು ರಾಜೇಶ ತನ್ನ ತಾಯಿಗೆ ಹೇಳಿದ. ಅದಕ್ಕವಳು ಅವನ ಮುಂದೆ ಹೂ ಎಂದವಳು ಇವನಿಗೇನು ತಿಳಿಯೊತ್ತೆ ಸುಧಾ ನಾವೇನು ಮಕ್ಕಳನ್ನು ಹಡೆದಿಲ್ಲವೆ ನಿನಗೇನಾಗುವುದಿಲ್ಲ ನೀನು ಚಿಂತೆ ಬಿಡು. ಡಾಕ್ಟರ ಹತ್ತಿರ ಹೋದರೆ ಸುಮ್ಮನೆ ದುಡ್ಡು ದಂಡ ಎಂದಳು. ಇದರಿಂದ ಸುಧಾಳ ಮನಸ್ಸಿಗೆ ವಿಪರೀತ ನೋವಾಯಿತು. ಅವಳು ಮಾನಸಿಕವಾಗಿ ಕೊರಗುತ್ತಿದ್ದಳು. ತನ್ನ ನೋವನ್ನು  ಯಾರ ಹತ್ತೀರ ಹೇಳಲಿ. ಅವಳಿಗೆ ತನ್ನ ಗೆಳತಿ ರೇಖಾಳ ನೆನಪು ಜಾಸ್ತಿ ಆಯಿತು. ರೇಖಾ ಅಂತಿಮ ಎಲ್.ಎಲ್.ಬಿ ಓದುತ್ತಿದ್ದವಳು ಮಧ್ಯಂತರ ರಜೆ ದೊರಕಿದಾಗ ಊರಿಗೆ ಬಂದಳು. ಊರಿಗೆ ಬಂದವಳಿಗೆ ತನ್ನ ತಾಯಿಯಿಂದ ಸುಧಾ ಗರ್ಭಿಣಿಯಾಗಿರುವ ವಿಷಯ ತಿಳಿದ ಕೂಡಲೆ ಅವಳಿಗೆ ಸುಧಾಳನ್ನು ನೋಡಲೆಬೇಕೆಂಬ ಹಂಬಲ ಅತಿಯಾಯಿತು. ಆದರೆ ಹಿಂದೆ ತಾನು ಅನುಭವಿಸಿದ ಅಪಮಾನ ನೆನಪಿಗೆ ಬಂದೊಡನೆ ಹೋಗುವುದು ಬೇಡ ಎಂದು ನಿರ್ಧರಿಸಿದಳು ಆದರೂ ಅವಳ ನಿರ್ಧಾರ ಗಟ್ಟಿಯಾಗಿ ಉಳಿಯಲಿಲ್ಲ. ಅವಳು ಸುಧಾಳನ್ನು ಕಾಣಲು ಅವರ ಮನೆಗೆ ಹೋದಳು. ಮನೆಯ ಬಾಗಿಲಿಗೆ ಚಿಲಕ ಹಾಕಿರಲಿಲ್ಲ. ಹೀಗಾಗಿ ಬಾಗಿಲು ತಳ್ಳಿ ಸುಧಾ ಎಂದು ಕೂಗಿದಳು ಆದರೆ ಯಾರ ಉತ್ತರವೂ ಬಾರದ್ದರಿಂದ ಒಳಗೆ ಹೋದಳು. ಸುಧಾ ಮಂಚದ ಮೇಲೆ ನಿತ್ರಾಣವಾಗಿ ಮಲಗಿದ್ದಳು. ಸುಧಾ ಅನ್ನುವ ರೇಖಾಳ ಕೂಗಿಗೆ ಎಚ್ಚೆತ್ತುಕೊಂಡಳು. ಸುಧಾಳನ್ನು ನೋಡಿ ಎರಡು ವರ್ಷಗಳೇ ಕಳೆದಿತ್ತು. ಹಿಂದೆ ಇದ್ದ ಸುಧಾಳಿಗೂ ಈಗೀನ ಸುಧಾಳಿಗೂ ವ್ಯತ್ಯಾಸವಿದೆ ಎನಿಸಿತು ರೇಖಾ;ಳಿಗೆ. ರೇಖಾಳನ್ನು ಕಂಡೋಡನೆಯೆ ಸುಧಾ ಅವಳನ್ನು ತಬ್ಬಿಕೊಂಡು ಅಳತೊಡಗಿದಳು. ಯಾಕೆ, ಏನಾಯ್ತು ಸುಧಾ ಅಂದಾಗ ಅವಳು ಮನೆಯವರು ತನ್ನ ಬಗ್ಗೆ ತೋರಿಸುತ್ತಿದ್ದ ಅಲಕ್ಷ, ಅನಾದರಗಳ ಬಗ್ಗೆ ಹೇಳಿದಳು. ಈಗ ನಿಮ್ಮ ಅತ್ತೆ ಎಲ್ಲಿದ್ದಾರೆ ಎಂದು ರೇಖಾ ಕೇಳಿದಳು. ಅವರು ದೇವಸ್ಥಾನಕ್ಕೆ ಹೋಗಿದ್ದಾರೆ. ಮಾವ ಹೊರಗೆ ವಾಕಿಂಗ ಹೋಗಿದ್ದಾರೆ. ಇನ್ನು ರಾಜೇಶ ಸಂಜೆ ತಡವಾಗಿ ಬರುತ್ತಾರೆ. 

    ರೇಖಾಳಿಗೆ ಇನ್ನು ತಡೆಯದಾಯಿತು. ಅವಳು ಗೆಳತಿಯನ್ನು ಕರೆದುಕೊಂಡು ಹಾಸ್ಪಿಟಲ್‌ಗೆ ಹೋಗಲು ಸಿದ್ಧವಾದಳು. ಅಷ್ಟೋತ್ತಿಗೆ ಬಂದ ಪದ್ಮಮ್ಮ ರೇಖಾಳನ್ನು ನೋಡಿ ನಿನ್ಯಾಕೆ ಇಲ್ಲಿಗೆ ಬಂದೆ ಎಂದು ಬಯ್ಯಲು ಶುರುಮಾಡಿದಳು. ಆದರೆ ರೇಖಾ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಸುಧಾಳನ್ನು ಕರೆದುಕೊಂಡು ಹೊರಗೆ ಬಂದು ಒಂದು ಆಟೊ ಹಿಡಿದಳು. ಸೀದಾ ಹಾಸ್ಪಿಟಲ್‌ಗೆ ಬಂದಳು. ಅಲ್ಲಿ ಲೇಡಿ ಡಾಕ್ಟರ್ ಸುಧಾಳನ್ನು ಚೆಕ್ ಮಾಡಿ ಏನಮ್ಮಾ ನೀವು ಇವರಿಗೇನಾಗಬೇಕು ಎಂದಳು. ನಾನು ಇವಳ ಗೆಳತಿ. ಇವಳ ಗಂಡ ಎಲ್ಲಿದ್ದಾರೆ ಎಂದಳು. ಅವರು ಬಂದಿಲ್ಲ ಡಾಕ್ಡರ್ ಎಂದಳು. ಇವರು ಮನಸ್ಸಿಗೆ ಏನನ್ನೊ ಹಚ್ಚಿಕೊಂಡು ಕೊರಗುತ್ತಿದ್ದಾರೆ ಅಂತ ಕಾಣುತ್ತೆ. ಇವರಿಗೆ ರಕ್ತದೊತ್ತಡ ಹೆಚ್ಚಾಗಿದೆ. ಅದಿನ್ನು ನಾರ್ಮಲ ಸ್ಥಿತಿಗೆ ಬರಬೇಕಾದರೆ ಇವರು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಈಗ ಇವರಿಗೆ ವಿಶ್ರಾಂತಿಯ ಅಗತ್ಯವಿದೆ. ನಾನು ನಿದ್ದೆ ಇಂಜೇಕ್ಷಣ ಕೊಟ್ಟಿದ್ದೆನೆ. ಸದ್ಯಕ್ಕೆ ಇವತ್ತು  ನನ್ನ ಆಸ್ಪತ್ರೆಯಲ್ಲಿಯೆ ವಿಶ್ರಾಂತಿ ಪಡೆಯಲಿ ನಾಳೆ ಇವರನ್ನು ಕರೆದುಕೊಂಡ  ಹೋಗಿ. ಇವರ ತಂದೆ-ತಾಯಿಯವರಿಗೆ ಬರಲು ಹೇಳಿ ಎಂದರು ಡಾಕ್ಟರ. ಅವರ ಮಾತಿನಂತೆ ರೇಖಾ ಕಾವೇರಮ್ಮ ಮತ್ತು ವೆಂಕಟಗಿರಿ ಎಲ್ಲರೂ ಗಾಬರಿಯಾಗಿ ಆಸ್ಪತ್ರೆಗೆ ಬಂದರು. ರೇಖಾ ರಾಜೇಶನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು. ಅವನು ಬ್ಯಾಂಕಿನಿಂದ ನೇರವಾಗಿ ಆಸ್ಪತ್ರೆಗೆ ಬಂದ. ಆಗ ಡಾಕ್ಟರ ರಾಜೇಶನಿಗೆ ನೀವು ತಿಂಗಳಿಗೊಂದು ಸಲ ನಿಮ್ಮ ಹೆಂಡತಿಯನ್ನು ಆಸ್ಪತ್ರೆಗೆ ಕರೆ ತಂದಿದ್ದಿರಾ ಎಂದಳು. ಇಲ್ಲಾ ಡಾಕ್ಟರ್ ನಾನು ಬಂದಿಲ್ಲಾ ಆದರೆ ನಮ್ಮ ತಾಯಿಯವರು ಕರೆದುಕೊಂಡು ಬಂದಿದ್ದಾರೆ ಎಂದನು. ನೀವು ಸುಳ್ಳು ಹೇಳ್ತಾ ಇದ್ದಿರಿ ಅನಿಸತ್ತೆ ಅವರ ಆರೋಗ್ಯದ ಬಗ್ಗೆ ನೀವು ಕಾಳಜಿವಹಿಸಿದ್ದರೆ ಇವತ್ತು ಅವರಿಗೆ ಬಿ.ಪಿ ಇಷ್ಟೊಂದು ಏರುತ್ತಿರಲಿಲ್ಲ ಎಂದಾಗ ರಾಜೇಶನಿಗೆ ತಲೆ ಸುತ್ತಿದ ಹಾಗಾಯಿತು. ಆಗ ರಾಜೇಶ ಅಮ್ಮನಿಗೆ ಕೇಳಬೇಕೆಂದು ಮನೆಗೆ ಹೋದ. ಮಗ ಇಂದು ಬೇಗ ಬಂದುದನ್ನು ಕಂಡು ಪದ್ಮಮ್ಮ ಎನೊ ಇಂದು ಬೇಗ ಬಂದಿದೆಯಲ್ಲ ಎಂದಳು. ಅದಿರಲಿ ಸುಧಾ ಎಲ್ಲಿ ಅಂದ. ಸುಧಾಳನ್ನು ಅವಳ ಗೆಳತಿ ರೇಖಾ ಆಸ್ಪತ್ರೆಗೆ ಕರೆದುಕೊಂಡು ಹೋದಳು ಎಂದಾಗ ನಿನ್ಯಾಕ ಹೋಗಲಿಲ್ಲಮ್ಮ ಅಂದ ರಾಜೇಶ. 

ಜೊತೆಗೆ ಅವಳಿದ್ದಳಲ್ಲ ಅದಕ್ಕೆ ಹೋಗಲಿಲ್ಲ ಎಂದಳು. ನನಗೆ ಕೆಲಸದ ಒತ್ತಡದಲ್ಲಿ ಅವಳ ಕಡೆ ಗಮನ ಹರಿಸಲು ಆಗಲಿಲ್ಲ. ಅದಕ್ಕೆ ನಿನಗೆ ಹೇಳಿದರೆ ನೀನು ಅದೆಷ್ಟು ಸಹಜವಾಗಿ ಅಲಕ್ಷ ಮಾಡ್ತಿಯಮ್ಮ. ನೀನು ಅವಳನ್ನು ತಿಂಗಳಿಗೊಂದು ಸಲ ಡಾಕ್ಟರ ಹತ್ತಿರ ಕರಕೊಂಡು ಹೊದೆಯಾ ಎಂದು ಕೋಪದಿಂದ ಕೇಳಿದ. ಹೋಗಿದ್ದೆ ಎಂದಳು ಪದ್ಮಮ್ಮ. ಸುಳ್ಳು ಹೇಳಬೇಡಮ್ಮ ನಿಜಾ ಹೇಳು ನನ್ನ ಮೇಲಾಣೆ ಎಂದ ಆಗ ಪದ್ಮಮ್ಮ ವಿಧಿಯಿಲ್ಲದೆ ನಿಜ ಒಪ್ಪಿಕೊಳ್ಳಲೆಬೇಕಾಯಿತು. 

*****

(ಮುಂದುವರೆಯುವುದು…)
You can leave a response, or trackback from your own site.

One Response to “ಸ್ನೇಹ ಭಾಂದವ್ಯ (ಭಾಗ 7): ನಾಗರತ್ನಾ ಗೋವಿಂದನ್ನವರ”

Leave a Reply