ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸ (ಕೊನೆಯ ಭಾಗ): ಗುರುಪ್ರಸಾದ ಕುರ್ತಕೋಟಿ


 
ಕಾಲಿಮ್ ಫಾಂಗ್ ನಿಂದ ಗ್ಯಾಂಗ್ ಟಾಕ್ ಗೆ ಹೋಗುತ್ತಿದ್ದಾಗ ಮಧ್ಯೆ ದಾರಿಯಲ್ಲಿ ನಮಗರಿವಿಲ್ಲದಂತೆ ಒಮ್ಮೆಲೆ ಬೆಂಗಳೂರಿನ ನೆನಪಾಯಿತು. ಅದಕ್ಕಿದ್ದ ಒಂದೇ ಕಾರಣವೆಂದರೆ… ಈ ಪ್ರವಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅರ್ಧ ಗಂಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕೊಂಡಿದ್ವಿ! ಅಂತೂ ಪೋಲಿಸರಿಲ್ಲದಿದ್ದರೂ ಹೇಗೋ ಆ ಜಾಮ್ ಕರಗಿ ನಮ್ಮ ಪಯಣ ಮುಂದುವರಿಯಿತು. 
 
ಗ್ಯಾಂಗ್ ಟಾಕ್, ಸಿಕ್ಕಿಂ ಎಂಬ ಪುಟ್ಟ ರಾಜ್ಯದ ರಾಜಧಾನಿ. ಆ ಊರಿಗೆ ಪ್ರವೇಶಿಸುವುದಕ್ಕೆ ಮೊದಲು, ಬಂಗಾಲ ಹಾಗೂ ಸಿಕ್ಕಿಂ ನ ಗಡಿಯಲ್ಲಿ ಅಗಸೆ ಬಾಗಿಲು ಇದೆ. ಅಲ್ಲೊಂದು ತಪಾಸಣೆಯಿತ್ತು. ನೇಪಾಳ-ಭಾರತದ ಅಂತರಾಷ್ಟ್ರೀಯ ಗಡಿಯಲ್ಲಿದ್ದುದಕ್ಕಿಂತ ಕೂಲಂಕುಶವಾಗಿ ನಮ್ಮ ವಾಹನದ ತಪಾಸಣೆ ಜರಗಿದ್ದು ಕಂಡು ಚಕಿತಗೊಂಡೆವು! ಆ ಗಡಿಯಲ್ಲಿ ನಿಂತರೆ ಹಿಂದೆ ಬಂಗಾಲ, ಮುಂದೆ ಕಾಣುವುದೇ ಸಿಕ್ಕಿಂ. ಎರಡೂ ರಾಜ್ಯಗಳಲ್ಲಿರುವ ವ್ಯತ್ಯಾಸ ಅಲ್ಲಿ ಗೆರೆ ಕೊರೆದಂತೆ ಸ್ಪಷ್ಟವಾಗಿ ಕಾಣುತ್ತದೆ. ಸಿಕ್ಕಿಂ ತುಂಬಾ ಜವಾಬ್ದಾರಿಯುತ, ಸುಂದರ ಗ್ರಹಿಣಿಯ ಹಾಗೆ ಕಂಡರೆ, ಬಂಗಾಲ ಬೇಜವಾಬ್ದಾರಿ ಹಾಗೂ ಕೊಳಕು ಗಂಡಿನಂತೆ ಕಾಣುತ್ತದೆ! ಎರಡೂ ರಾಜ್ಯಗಳಲ್ಲಿ ದೊಡ್ಡ ವ್ಯತ್ಯಾಸವಿದೆ. ಅಲ್ಲಿನ ರಸ್ತೆಗಳು ತುಂಬಾ ಚೊಕ್ಕಟ, ಎಲ್ಲಿಯೂ ಕಸ ಹುಡುಕಿದರೂ ಸಿಗಲಿಲ್ಲ! ಅಲ್ಲಿ ವಾಹನಗಳಿಗೆ ಕೈ ತೋರಿಸುತ್ತ ನಿಂತ ಟ್ರಾಫಿಕ್ ಪೋಲಿಸ್ ಕೂಡ ಹೆಲ್ಮೇಟ್ ಹಾಕಿಕೊಂಡು ನಿಂತಿರುತ್ತಾನೆ. ವಾಹನ ಚಾಲಕರೂ ಕೂಡ ನಿಯಮಗಳ ಉಲ್ಲಂಘನೆ ಮಾಡಿದ್ದು ನಾವಂತೂ ನೋಡಲಿಲ್ಲ.  
 
ಅಲ್ಲಿನ ಹೋಟೆಲ್ ಗೆ ನಮ್ಮನ್ನು ತಲುಪಿಸಿ ನೀ ಮಾ ನಮಗೆ ವಿದಾಯ ಹೇಳಿದ. ಹೋಟೆಲಿನಲ್ಲಿ ಚೆಕ್ ಇನ್ ಮಾಡುವುದಕ್ಕಿಂತ ಮೊದಲು ಅಲ್ಲಿನ ಸ್ವಾಗತಕಾರ ಸ್ವಲ್ಪ ಸೊಕ್ಕಿನಿಂದ ವ್ಯವಹರಿಸಿದ್ದರಿಂದ ಅವನ ಜೊತೆ ಸ್ವಲ್ಪ ಸಲ್ಲಾಪಗಳು ನಡೆದು ಅವನಿಗೊಂದಿಷ್ಟು ಬೋಧಿಸಬೇಕಾಯ್ತು. ಒಟ್ಟಿನಲ್ಲಿ ಆ ದಿನ ಜಗಳದ ದಿನವಾಗಿದ್ದಂತೂ ಹೌದು. ಆದರೆ ಕಾಲಿಮ್ ಫಾಂಗ್ ನಲ್ಲಾಗಿದ್ದ ಅವ್ಯವಸ್ಥೆಯ ಬಗ್ಗೆ ದೂರಿದ್ದರಿಂದ ನಮ್ಮ ಪ್ರವಾಸದ ಹೊಣೆ ಹೊತ್ತಿದ್ದ ಸಂಸ್ಥೆ, ನಮಗಾದ ಅಸಮಾಧಾನವನ್ನು ತಣಿಸುವುದಕ್ಕೋಸ್ಕರ ಅವತ್ತು ಮದ್ಯಾಹ್ನದ ಊಟದ ಖರ್ಚು ತಮ್ಮದು ಅಂತ ಘೊಷಿಸಿದ್ದು ನಮಗೆ ಸ್ವಲ್ಪ ಮಟ್ಟಿಗೆ ಖುಷಿ ತಂದಿತ್ತು. ಸ್ವಲ್ಪ ಹೊತ್ತು ನಮ್ಮ ನಮ್ಮ ರೂಮುಗಳಲ್ಲಿ ದಣಿವಾರಿಸಿಕೊಂಡು ಊಟಕ್ಕೆ ತೆರಳಿದೆವು. ಆದರೆ ಅಷ್ಟೇನು ರುಚಿಯಿಲ್ಲದ ಅಲ್ಲಿನ ಊಟ ನಮ್ಮ ಹಸಿವೆ ತಣಿಸಿತಾದರೂ ಮನ ತಣಿಸಲಿಲ್ಲ! ಊಟ ಮಾಡಿ ಮುಗಿಯುತ್ತಲೇ ಕಾರುಗಳು ನಮಗಾಗಿ ಕಾದಿದ್ದವು.  ಅಲ್ಲೊಂದು ತುಂಬಾ ಹಳೆಯದಾದ ಬುದ್ಧ ಸ್ತೂಪಕ್ಕೆ ಮೊದಲು ಕರೆದೊಯ್ದರು. ನಂತರ ಒಂದು ಫ್ಲಾವರ್ ಶೋ. ಅಲ್ಲಿಂದ ನೇರವಾಗಿ ಹೋಗಿದ್ದು ರೋಪ್ ವೇ. ಲೋಹದ ಹಗ್ಗಕ್ಕೆ ಅಂಟಿಕೊಂಡು ಎತ್ತರದಲ್ಲಿ ಚಲಿಸುವ ಕಾರ್ ಅದು. ಒಂದು ಸಲಕ್ಕೆ ಸುಮಾರು ೨೦ ಜನರನ್ನು ನಿಲ್ಲಿಸಿಕೊಂಡು ಎರಡು ಬೆಟ್ಟಗಳ ನಡುವೆ ಒಂದು ಸಲ ಹೋಗಿ ತಿರುಗಿ ನಾವು ಹತ್ತಿದ್ದಲ್ಲಿಗೇ ತಂದು ಬಿಡುತ್ತದೆ. ಅದೊಂದು ರೋಮಾಂಚಕ ಅನುಭವ. ಮೇಲಿನಿಂದ ಗ್ಯಾಂಗ್ ಟಾಕ್ ನ ಪಕ್ಷಿ ನೋಟ ಕಾಣುತ್ತದೆ. ಈ ರೀತಿಯ ರೋಪ್ ವೇ ನಮ್ಮ ಜೋಗ ಜಲಪಾತದಲ್ಲ್ಯಾಕೆ ಮಾಡಬಾರದು? ಅಂತ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕರ್ನಾಟಕ ಅಷ್ಟೊಂದು ಗಮನ ಹರಿಸಿಲ್ಲ ಅಂದೆನಿಸುವುದಿಲ್ಲವೆ?
 
ಅಲ್ಲಿಂದ ಎಮ್ ಜೀ ಮಾರ್ಗವೆಂಬ ಸುಂದರವಾದೊಂದು ಬೀದಿಗೆ ಹೋಗಿ ಅಲ್ಲಿನ ಸೊಬಗನ್ನು ಕಂಡು ನಿಬ್ಬೆರಗಾದೆವು. ಅದು ವಾಹನಗಳು ಅಡ್ಡಾಡದ, ಚೊಕ್ಕ ರಸ್ತೆ ಹಾಗೂ ಎಡ ಬಲಗಳಲ್ಲಿ ಬಗೆ ಬಗೆಯ ಅಂಗಡಿಗಳಿಂದ ತುಂಬಿರುವ, ವಿದ್ಯುತ್ ದೀಪಗಳಿಂದ ಝಗ ಝಗಿಸುವ ಅತ್ಯಾಧುನಿಕ ಬೀದಿ. ಭಾರತದಲ್ಲಿ ಅಷ್ಟು ಸುಂದರ, ಸುಸಜ್ಜಿತ, ಚೊಕ್ಕ ಬೀದಿಯನ್ನು ನಾನು ಅಲ್ಲಿಯವರೆಗಂತೂ ನೋಡಿರಲಿಲ್ಲ. ಅಲ್ಲಿ ಕುಳಿತುಕೊಳ್ಳಲೂ ಕೂಡ ಒಳ್ಳೇ ವ್ಯವಸ್ಥೆ ಇದೆ.    
 
 
ಮರುದಿನ ಹೊರಟಿದ್ದು ನಾಥು ಲಾ ಹಾಗೂ ಬಾಬಾ ಮಂದಿರಕ್ಕೆ. ನಾಥು ಲಾ ಸಮುದ್ರ ಮಟ್ಟದಿಂದ ೧೪೦೦೦ ಅಡಿ ಎತ್ತರಕ್ಕಿರುವ ಭಾರತ – ಚೈನಾದ ಗಡಿ ಪ್ರದೇಶ! ಹಿಂದಿನ ದಿನವೇ ಅಲ್ಲಿಗೆ ಹೋಗಲು ಅನುಮತಿ ಪಡೆದಿದ್ದೆವು. ದಿನಕ್ಕೆ ಇಂತಿಷ್ಟೇ ಜನರಿಗೆ ಮಾತ್ರ ಪರವಾನಿಗೆ ಸಿಗುತ್ತದೆ. ಆ ಘಾಟನ್ನು ಏರುವುದಕ್ಕೆ ಮೊದಲು ಮಿಲಿಟರಿಯ ಅಧಿಕಾರಿಯೊಬ್ಬರು ಚಿಕ್ಕ ತಪಾಸಣೆ ಮಾಡಿ ನಾಲ್ಕು ಗಂಟೆಯ ಒಳಗೆ ವಾಪಸ್ಸು ಬಂದು ಬಿಡಿ ಅಂತ ಹೇಳಿ ಬೀಳ್ಕೊಟ್ಟರು. ಅಲ್ಲಿಂದ ಶುರುವಾಯ್ತು ನಮ್ಮ ಮರೆಯಲಾರದ ಪಯಣ! ಆ ಭಯಂಕರ ರಸ್ತೆಗಳು, ಹೇರ್ ಪಿನ್ ತಿರುವುಗಳು, ನಡು ನಡುವೆ ಧುತ್ತನೆ ಎದುರಾಗುವ ದೈತ್ಯ ಮಿಲಿಟರಿ ವಾಹನಗಳು, ಎಲ್ಲ ಸೈಝಿನ ನೀರಿನ ಝರಿಗಳು, ಭಯಾನಕ ಭೂ ಕುಸಿತಗಳು, ಅದರಿಂದ ಹಾಳಾದ ರಸ್ತೆಗಳ ದುರಸ್ತಿ ಮಾಡುವ ಕಾರ್ಮಿಕರು… ಇವುಗಳ ನಡುವೆ ನಮ್ಮನ್ನಾವರಿಸಿರುವ ಬೆಟ್ಟಗಳ ರುದ್ರ ರಮಣೀಯ ಸೌಂದರ್ಯ ನೋಡಿ ಒಂದು ಕಡೆ ರೋಮಾಂಚನವಾದರೂ ಇದೇ ರಸ್ತೆಯಲ್ಲಿ ವಾಪಸ್ಸು ಬರುತ್ತಿರುವಾಗಲೇ ಭೂ ಕುಸಿತವಾಗಿಬಿಟ್ಟರೆ ಎಂಬ ಅಲೋಚನೆಗೆ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು. ಇಂತಹ ಒಂದು ಭಯಂಕರವಾದ ಸ್ಥಳದಲ್ಲಿ ತಿಂಗಳಾನುಗಟ್ಟಲೇ, ಹಗಲು-ರಾತ್ರಿಯನ್ನದೇ, ಹೆಂಡತಿ ಮಕ್ಕಳನ್ನು ಬಿಟ್ಟು ನಮ್ಮ ರಕ್ಷಣೆಗೆ ಬದ್ಧರಾಗಿ ದುಡಿಯುವ ಜವಾನರ ಬಗ್ಗೆ ಗೌರವ ಭಾವನೆ ಉಕ್ಕಿತು! ಇದರ ಮುಂದೆ ಏಸಿ ಅಡಿಯಲ್ಲಿ ಕುಳಿತು ಬೆವರು ಇಂಗಿಸುವುದೇನು ದೊಡ್ಡ ಸಾಧನೆಯೆಂದೆನಿಸಲಿಲ್ಲ. 
 
 
ಹಾಗೇ ಸಪ್ತ ಗಿರಿಗಳನ್ನು ಸಾಗಿ ಮುಂದೆ ಹೋಗುತ್ತಿದ್ದಂತೆ ನಾಥು ಲಾ ಹತ್ತಿರದ ಒಂದು ಬೋರ್ಡು ತೀವ್ರವಾಗಿ ಕಾಡುತ್ತದೆ. ಅದರಲ್ಲಿ ಬರೆದ ಒಕ್ಕಣೆ ಹೀಗಿದೆ "ಎಚ್ಚರ! ನೀವು ಚೈನಾದ ವೀಕ್ಷಣೆಯಲ್ಲಿದ್ದಿರಿ!" ಅಂದರೆ ಚೈನಾದ ಸೈನಿಕರು  ಎಲ್ಲೋ ಒಂದು ಬೆಟ್ಟದ ಮೇಲೆ ಕುಳಿತು ನಮ್ಮ ಚಲನವಲನಗಳನ್ನು ವೀಕ್ಷಿಸುತ್ತಿದ್ದಾರೆ. ಅದನ್ನು ಓದಿದಾಗ ಮೈ ಝುಂ ಎನ್ನುತ್ತದೆ. ಆ ಥರದ ಬೋರ್ಡುಗಳು ಮುಂದೆ ಹಲವಾರು ಇದ್ದವು. ಅಂತಹ ದುರ್ಗಮವಾದ ಸ್ಥಳದಲ್ಲೇ ಅಲ್ಲಲ್ಲಿ ಸಣ್ಣ ಸಣ್ಣ ವಸತಿ ಪ್ರದೇಶಗಳು ಹಾಗೂ ಮಿಲಿಟರಿ ಬೇಸ್ ಕ್ಯಾಂಪ್ ಗಳು ಕಾಣುತ್ತವೆ. 
 
ಹಾಗೆಯೇ ಸುಮಾರು ಮೂರು ಗಂಟೆಯ ಪಯಣದ ನಂತರ ನಾಥು ಲಾ ಹಳ್ಳಿ ಬಂತು. ಇನ್ನೂ ಮುಂದೆ ಹೋದಾಗ ಸಿಗುವುದೇ ಬಾಬಾ ಮಂದಿರ. ಅದು ಹರಭಜನ್ ಸಿಂಗ್ ಅನ್ನುವ ಸೈನಿಕನ ಮರಣೊತ್ತರ ಕಟ್ಟಿದ ಮಂದಿರ. ೧೯೬೮ ರಲ್ಲಿ ಅವನು ಪಹರೆಯಲ್ಲಿದ್ದಾಗ ಕಾಲು ಜಾರಿ ಜಲಪಾತದಲ್ಲಿ ಬಿದ್ದು ವಿಧಿವಶನಾದನಂತೆ. ಆಮೇಲೆ ಎಷ್ಟೋ ಜನ ಸೈನಿಕರ ಕನಸಿನಲ್ಲಿ ಬಂದು ತನ್ನದೊಂದು ಸಮಾಧಿ ಕಟ್ಟಿಸುವಂತೆ ಕೇಳಿಕೊಂಡನಂತೆ. ಈಗ ಆ ಮಂದಿರದಲ್ಲಿ ನೀರಿಟ್ಟು ಆಮೇಲೆ ಅದನ್ನು ಕುಡಿದರೆ ಯಾವುದೇ ರೋಗ ವಾಸಿಯಾಗುವುದೆಂಬ ನಂಬಿಕೆಯಿದೆ! ಎಲ್ಲ ಸೈನಿಕರಿಗೂ ಬಾಬಾ ತಮ್ಮನ್ನು ಕಾಯುತ್ತಿರುವುದಾಗಿಯೂ ಒಂದು ಬಲವಾದ ನಂಬಿಕೆ ಇದೆ. ಅಂತಹ ಕಠಿಣ ಪ್ರಕೃತಿ ವೈಪರಿತ್ಯಗಳಿಂದ ಕೂಡಿದ ಸ್ಥಳದಲ್ಲಿ ಅಂತಹದೊಂದು ನಂಬಿಕೆಯ ತಳಹದಿಯಿಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ ಅಲ್ಲವೆ? ನಾಥು ಲಾ ಪಾಸ್ (ಚೈನಾ ಗಡಿ) ಗೆ ಹೋಗಲು ಇನ್ನೂ ಹೆಚ್ಚಿನ ಅನುಮತಿ ಪಡೆಯಬೇಕಂತೆ ಅದನ್ನು ನಮ್ಮ ಸಾರಥಿಗಳು ನಮಗೆ ಮೊದಲೇ ಹೇಳಿರಲಿಲ್ಲ! ಇನ್ನವರ ಜೊತೆಗೊಂದು ಜಗಳ ಮಾಡಿ ಮೂಡು ಹಾಳು ಮಾಡಿಕೊಳ್ಳಲು ಯಾರಿಗೂ ಮನಸ್ಸಿರಲಿಲ್ಲ. ಅದೂ ಅಲ್ಲದೇ ಆ ಜಗಳದಿಂದ್ಯಾವ ಲಾಭವೂ ಇರಲಿಲ್ಲ! ಬಂದ ರಸ್ತೆಗೆ ಸುಂಕವಿಲ್ಲ ಅಂತ ತಿರುಗಿ ಹೊರಟೆವು. ಮತ್ತದೇ ಭಯಂಕರ ರಸ್ತೇಯಲ್ಲವೇ?.. ಜೀವವನ್ನು ಕೈಯಲ್ಲಿ ಹಿಡಿದುಕೋಂಡು ಕೂತಿದ್ದೆವು. ನಡುವೆ ಓಂದು ಸುಂದರ ಸರೋವರವಿತ್ತು ಅಲ್ಲಿ ಸ್ವಲ್ಪ ಹೊತ್ತು ವಿಹರಿಸಿ ಯಾಕ್ ಗಳ ಮೇಲೆ ಸವಾರಿ ಮಾಡಲು ಧೈರ್ಯ ಸಾಲದೇ, ವಾಪಸ್ಸು ಪ್ರಯಾಣ ಮುಂದುವರಿಸಿ ಬೆಟ್ಟ ಇಳಿದು ಗ್ಯಾಂಗ್ ಟಾಕ್ ಮುಟ್ಟಿದಾಗ ಹೋದ ಜೀವ ಬಂದಂಗಾಯ್ತು!  
 
 
ಮರುದಿನ ಮತ್ತೆ ತಿರುಗ ಬಂಗಾಲದ ಜಲ್ ಪೈಗುಡಿ ಗೆ ಹೋಗುವದಿತ್ತು. ಆ ಊರಿನಿಂದ ಗುವಾಹಾತಿಗೆ ನಮ್ಮ ರೈಲು ಬುಕ್ ಆಗಿತ್ತು. ಅದಕ್ಕಾಗಿ ಎರಡು ಬೇರೆ ಗಾಡಿಗಳು ಬಂದಿದ್ದವು. ಮತ್ತೆ ನಮ್ಮ ಪಯಣ ಸಾಗಿತ್ತು. ಅವರಲ್ಲೊಬ್ಬ ಡ್ರೈವರ್ ತುಂಬಾ ತಮಾಷೆಯಿಂದ ಮಾತಾಡುತ್ತಾ ಒಳ್ಳೆ ಮನರಂಜಿಸಿದ. ಮಧ್ಯದಲ್ಲಿ ಬಾಲಿವುಡ್ ನ ಖ್ಯಾತ ಖಳನಾಯಕ ಡ್ಯಾನಿ ದ್ಯಾಂಜೊಂಗ್ ಪಾ ನ ಬಿಯರ್ ಫ್ಯಾಕ್ಟರಿ ತೋರಿಸಿ ಬಾಯಲ್ಲಿ ನೀರು ತರಿಸಿದ. ಡ್ಯಾನಿ ಅಲ್ಲಿಯವರು ಅಂತ ನನಗೆ ಮುಂಚೆ ಗೊತ್ತಿರಲಿಲ್ಲ.  ಅಲ್ಲಿ ನಾವು ಪಯಣಿಸುತ್ತಿದ್ದ ರಸ್ತೆಗುಂಟ ತೀಸ್ತಾ ನದಿ ಹರಿದಿದೆ. ಆ ದೃಶ್ಯ ನೋಡಲೆರಡು ಕಣ್ಣುಗಳು?! … ಊಂ ಹೂಂ .. ಸಾಕಾಗೊದಿಲ್ಲಾ ಬಿಡಿ! 
 
ಅಂತೂ ಸಿಲಿಗುರಿ ಮುಟ್ಟಿದಾಗ ಸಂಜೆ ೬ ಗಂಟೆ. ಸ್ವೇಟರ್ರು, ಟೋಪಿ ಬಿಟ್ಟು ಬೇರೇನೂ ಖರಿದಿಸಿಲ್ಲ ಅಂತ ನಮ್ಮ ಮಹಿಳಾಮಣಿಗಳಿಗೆ ಆಗ ಅರಿವಾಗಿ, ನಮಗೆ ಎಲ್ಲೂ ಶಾಪಿಂಗ್ ಮಾಡೋಕೇ ಬಿಟ್ಟಿಲ್ಲ ಅಂತ ರಗಳೆ ಶುರು ಮಾಡಿದ್ದರು. ಅವರಿಗೆ ಸಮಾಧಾನಿಸುವ ಸಲುವಾಗಿ ಸಿಲಿಗುರಿಯಲ್ಲೇ ವರ್ಲ್ಡ್ ಫೆಮಸ್ಸ್ ಆಗಿರುವ ಹಾಂಕ್ ಕಾಂಗ ಬಜಾರಿಗೆ ಕರೆದೊಯ್ದು ಗಡಿಬಿಡಿಯಲ್ಲಿ ಅವರಿಗೆ ಹೆಚ್ಚಿಗೆ ಏನೂ ಖರ್ಚು ಮಾಡಲು ಅವಕಾಶ ನೀಡದೇ, ಟ್ರೇನಿಗೆ ಲೇಟಾಗುವುದೆಂದು ಹೆದರಿಸಿ, ೮ ಗಂಟೆಗೆ ಜಲಪೈಗುಡಿ ಮುಟ್ಟಿದ್ದೊಂದು ದೊಡ್ಡ ಸಾಧನೆ! ನಾವು ಪ್ರವಾಸ ಹೆಚ್ಚು ಕಡಿಮೆ ಮುಗಿದೇ ಹೋಯ್ತು ಅಂತ ಪೆಚ್ಚು ಮೋರೆ ಹಾಕಿಕೊಂಡು ರೈಲು ನಿಲ್ದಾಣವನ್ನು ಎಲೆಕ್ಟ್ರಿಕ್ ಸೀಡಿ (ಅಂದರೆ ವಿದ್ಯುತ್ ಚಾಲಿತ ಮೆಟ್ಟಿಲು. ಅದು Escalator ಗೆ ನಮ್ಮ ಗೈಡ್ ಬಳಸಿದ ಪರ್ಯಾಯ ಪದ!) ಹತ್ತಿ ಪ್ರವೇಶಿಸಿದೆವು. ಆಗ ನಮ್ಮ ಪ್ರವಾಸದಲ್ಲಿ ಒಂದಿಷ್ಟು ಅನುಭವಗಳು ಇನ್ನೂ ಬಾಕಿ ಇವೆ ಅಂತ ನಮಗೆ ಅರಿವಾಯ್ತು. ಯಾಕೆಂದರೆ ೯ ಕ್ಕೆ ಬರಬೇಕಿದ್ದ ರೈಲು ೧೨:೩೦ ಕ್ಕೆ ಬರುವುದೆಂಬ ಅಶರೀರವಾಣಿ ಅಲ್ಲಿ ಮೊಳಗಿ ನಮ್ಮ ನಿದ್ದೆಯನ್ನೂ ಒದ್ದು ಓಡಿಸಿತ್ತು! ಸರಿ ಅದೂ ಆಗೇ ಬಿಡ್ಲಿ ಅಂತ ಅಲ್ಲೇ ಖರೀದಿಗೆ ಸಿಗುವ ಚಾಪೆಗಳ ತಂದು ಪ್ಲ್ಯಾಟ್ ಫಾರ್ಮ್ ನ ಮೇಲೆ ವಸತಿ ಹೂಡೆದು ರೈಲಿನ ನಿರೀಕ್ಷೆಯಲ್ಲಿ ಕೆಲ ಸಮಯ ಹರಟೆ ಹೊಡೆದು ಕಳೆದೆವು. ರೈಲು ನಿಲ್ದಾಣದಲ್ಲಿಯೂ ಒಂದು ವ್ಯವಸ್ಥಿತ (?) ಬದುಕಿದೆ ಅಂತ ಸುತ್ತಲೂ ಗಮನಿಸಿದಾಗ ನಮಗೆ ಅರ್ಥವಾಯ್ತು.  
 
 
ಕೊನೆಗೂ ರೈಲು ಬಂತು. ಗುವಾಹಾತಿಗೆ ನಮ್ಮ ಪ್ರಯಾಣ ಸಾಗಿತ್ತು. ಸುಸ್ತಾಗಿದ್ದರಿಂದ ಎಲ್ಲರೂ ಗಾಢ ನಿದ್ದೆಗೆ ಜಾರಿದೆವು. ಬೆಂಗಳೂರಿಗೆ ವಾಪಸ್ಸು ಹೋಗಲು ಗುವಾಹಾತಿಯಿಂದ ಸಂಜೆಗೆ ವಿಮಾನ ಬುಕ್ ಆಗಿತ್ತು. ಅಲ್ಲಿಯವರೆಗೆ ಕೆಲವು ಸ್ಥಳಗಳ ವೀಕ್ಷಿಸಿದೆವು. ಅವುಗಳಲ್ಲಿ ಕಾಮಾಕ್ಯ ದೇವಸ್ಥಾನ ಮರೆಯಲಾರದಂತಿತ್ತು. ಅಲ್ಲಿ ಇಂದಿಗೂ ಪ್ರಾಣಿಗಳ ಬಲಿ ನಿರಂತರವಾಗಿ ನಡೆಯುತ್ತದೆ. ಅದನ್ನು ನೋಡಲಾಗದೇ ಅಲ್ಲಿಂದ ಬೇಗನೇ ಕಳಚಿಕೊಂಡೆವು. ಮುಂದೆ ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ದ್ವೀಪಕ್ಕೆ ಹೋಗುವ ಪ್ಲ್ಯಾನ್ ಇತ್ತಾದರೂ ಬೋಟಿನಲ್ಲಿ ಸುರಕ್ಷತೆಯ ಸಾಧನಗಳಿಲ್ಲದ್ದು ಗಮನಕ್ಕೆ ಬಂದು ಹೋಗಲಿಲ್ಲ. 
 
ನಂತರ ವಿಮಾನ ಹತ್ತಿ ಕುಳಿತವರ ಮುಖಗಳು ಬಾಡಿದ್ದವು. ಪ್ರವಾಸ ಅಲ್ಲಿಗೆ ಮುಗಿದೇ ಹೋಗಿತ್ತಲ್ಲ! ಮರುದಿನದಿಂದ ಅದೇ ಏಕ ತಾನತೆಯಿಂದ ಕೂಡಿದ ಬದುಕು ಮುಂದುವರಿಯುವುದಿತ್ತಲ್ಲ?! ಅದೇ ಧೂಳು, ಅದೇ ಟ್ರಾಫಿಕ್ಕು, ಅದೇ ರೋಡು, ಅದೇ ಬಾಸು… ಆದರೆ ಆ ಬೇಸರಿಕೆಯ ಹೊಡೆದೋಡಿಸುವ ಉಪಾಯವೊಂದು ಹೊಳೆದಿತ್ತು. ಮಂದಿನ ವರ್ಷ ಹೋಗುವ ಪ್ರವಾಸದ ಯೋಜನೆ ಈಗಿಂದಲೇ ಪ್ರಾರಂಭಿಸಿ, ಅದು ಕಾರ್ಯರೂಪಕ್ಕೆ ಬರುವವರೆಗೆ ಆ ಕಲ್ಪನೆಯಲ್ಲಿ ತೇಲಿ ಖುಷಿ ಪಡೋಣ ಅಂತ ನಿರ್ಧರಿಸಿ, ಮುಂದಿನ ಸಲ ಎಲ್ಲಿಗೆ ಪ್ರವಾಸ ಹೋಗೋದು ಅಂತ ವಿಮಾನದಲ್ಲೇ ಚರ್ಚೆಗೆ ತೊಡಗಿದೆವು. ಅದರಿಂದ ಸ್ವಲ್ಪ ಮಟ್ಟಿಗೆ ನಮ್ಮ ಬೇಸರ ಕಳೆಯಿತು. ಆದರೂ ನಡು ನಡುವೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಚೆಂದದ ಗಗನ ಸಖಿಯರು ನಮ್ಮ ಚರ್ಚೆಗೆ ಭಂಗ ತರುತ್ತಿದ್ದರೂ ನಾವು ಎಳ್ಳಷ್ಟೂ ಬೇಜಾರು ಮಾಡಿಕೊಳ್ಳಲಿಲ್ಲ!!! 
*****
(ಮುಗಿಯಿತು…)
 
(ಶ್ರೀ ಗುರುಪ್ರಸಾದ್ ಕುರ್ತಕೋಟಿಯವರು ಪಂಜುಗಾಗಿ ಹೀಗೊಂದು ಚಂದದ ಪ್ರವಾಸ ಕಥನವನ್ನು ಕಟ್ಟಿಕೊಟ್ಟಿದ್ದಕ್ಕೆ ಪಂಜು ಬಳಗ ತನ್ನ ಓದುಗರ ಪರವಾಗಿ ಅನಂತ ಧನ್ಯವಾದಗಳನ್ನು ಅರ್ಪಿಸುತ್ತದೆ. ಅವರ ಲೇಖನಯಿಂದ ಮತ್ತಷ್ಟು ಚಂದದ ಲೇಖನಗಳು ಪಂಜುವಿನ ಓದುಗರಿಗಾಗಿ ಮುಂದಿನ ದಿನಗಳಲ್ಲೂ ತಲುಪಲಿ ಎಂಬುದು ಪಂಜು ಬಳಗದ ಆಶಯ.) 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
ಮೂರ್ತಿ
ಮೂರ್ತಿ
10 years ago

ಪ.ಬ. ಹಾಗೂ ಸಿಕ್ಕಿಂ ರಾಜ್ಯಗಳನ್ನು ನೀವು ಬೇಜವಾಬ್ದಾರಿ ಗಂಡು ಹಾಗೂ ಸಭ್ಯ ಗ್ರಹಿಣಿಗೆ ಹೋಲಿಸಿರುವುದು ಚೆನ್ನಾಗಿದೆ. ರೋಪ್-ವೇ ನಮ್ಮ ಜೋಗ ಜಲಪಾತದಲ್ಲ್ಯಾಕೆ ಮಾಡಬಾರದು? ಎಂಬ ಪ್ರಶ್ನೆ ನನ್ನನ್ನೂ ಕಾಡಿದೆ. ಈಗ ಅಲ್ಲಿ ದೊಡ್ಡ sky-bridge ಮಾಡುತ್ತಾರೆ ಎಂಬ ಸುದ್ದಿಯಿದೆ. ಒಟ್ಟಿನಲ್ಲಿ, ಪ್ರವಾಸಕಥನದ ಭೂರಿ ಭೋಜನ ಉಣಿಸಿದ್ದಿರಿ. ನಿಮ್ಮ ಪ್ರವಾಸ ಮುಗಿಯುತ್ತಿರುವಾಗ ಆವರಿಸಿದ ಬೇಸರ ಈ ಪ್ರವಾಸ ಕಥನ ಮುಗಿದಾಗ ಓದುಗರಾದ ನಮಗೂ ಆಗಿದೆ. ಪಂಜು ಸಂಪಾದಕ ವರ್ಗ ಲೇಖನದ ತುದಿಯಲ್ಲಿ; ತಮ್ಮನ್ನು ಅಭಿನಂದಿಸಿದ್ದು ಗಮನಾರ್ಹ ಹಾಗು ಒಳ್ಳೆಯ ವಿಷಯ. ಆದಷ್ಟೂ ಬೇಗ ತಾವು ಮತ್ತೊಂದು ಪ್ರವಾಸ ಹೋಗಿ ಬನ್ನಿ ಅನ್ನುವ ಆಶಯದೊಂದಿಗೆ……

ಗುರುಪ್ರಸಾದ ಕುರ್ತಕೋಟಿ

ಮೂರ್ತಿ, ತಾಳ್ಮೆಯಿಂದ ಮೊದಲ ಕಂತಿನಿಂದ  ಕೊನೆಯವರೆಗೂ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಜೋಗದಲ್ಲಿ Sky-bridge ಮಾಡುವ ಯೋಜನೆ ಆಕಶಕ್ಕೆ ಏಣಿ ಹಾಕುವ ಯೋಜನೆಯಂತಿರಲಾರದು ಎಂದು ಆಶಿಸೋಣ!
ನಮ್ಮ ಕಥನವನ್ನು ಪ್ರಕಟಿಸಿ ಅಭಿನಂದಿಸಿದ ಪಂಜು ಬಳಗಕ್ಕೆ ನಾನು ಚಿರಋಣಿ.

ನಿರ್ಮಲಾ
ನಿರ್ಮಲಾ
10 years ago

ಪ . ಬಂಗಾಳ  ಮತ್ತು ಸಿಕ್ಕಿಂ ರಾಜ್ಯಗಳ ಹೋಲಿಕೆ  ಚೆನ್ನಾಗಿದೆ. ಹೀಗೊಂದು ಪ್ರವಾಸ ಕಥನ ಮುಗೀದೇ ಹೋಯ್ತಲ್ಲ ಅನ್ನಿಸ್ತು .. ಹೀಗೆ ಹೊಸ ಹೊಸ ಪ್ರವಾಸದ ಅನುಭವಗಳು ಬರುತ್ತಾ ಇರಲಿ…..

ಗುರುಪ್ರಸಾದ ಕುರ್ತಕೋಟಿ

ಹಂಗೇ ಆಗ್ಲಿ ನಿರ್ಮಲಾ! :). ಲೇಖನ ಪೂರ್ತಿಯಾಗಿ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಡಾ.ಆದರ್ಶ
ಡಾ.ಆದರ್ಶ
10 years ago

ಓದುತ್ತ ಓದುತ್ತ ನಿಮ್ಮ ಪ್ರವಾಸದಲ್ಲಿ ನಾನು ಪ್ರವಾಸಿಗನಾದ ಅನುಭವ. ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ. ಭಾರತದಲ್ಲೇ ಇ೦ತಹ ಒಳ್ಳೋಳ್ಳೆ ಸ್ಠಳಗಳು ನೋಡಲು ಇರುವಾಗ, ಜನರು ವಿದೇಶ ನೋಡಲು ಮುಗಿಬೀಳುತ್ತಾರಲ್ಲ ಅ೦ಥ ಬೇಜಾರು.

ಗುರುಪ್ರಸಾದ ಕುರ್ತಕೋಟಿ

ಹೌದು ಆದರ್ಶ, ನನಗೂ ಈ ಪ್ರಶ್ನೆ ಯಾವಾಗಲೂ ಕಾಡುತ್ತೆ. ನಮ್ಮ ದೇಶದಲ್ಲಿರೋದು ನೋಡಿ ಮುಗಿಸೋಕೇ ಒಂದು ಜನ್ಮ ಸಾಕಾಗೋದಿಲ್ಲ!

6
0
Would love your thoughts, please comment.x
()
x