ಮುಂಗಾರು ಮಳೆ ಮತ್ತು ಗಾಳಿಪಟ:ವಾಸುಕಿ ರಾಘವನ್ ಅಂಕಣ


                ಯೋಗರಾಜ್ ಭಟ್ಟರ ಚಿತ್ರಗಳ ಬಗೆಗಿನ ಚರ್ಚೆಗಳು ಯಾವಾಗಲೂ ಸ್ವಾರಸ್ಯಕರವಾಗಿರುತ್ತವೆ. “ಭಟ್ರು ಏನ್ ಸೂಪರ್ ಆಗಿ ಹಾಡುಗಳನ್ನ ಡೈಲಾಗುಗಳನ್ನ ಬರೀತಾರೆ ಗುರೂ, ಸಕ್ಕತ್ತು ತಮಾಷೆಯಾಗಿ ಇರುತ್ತಪ್ಪಾ” ಅನ್ನುವುದರಿಂದ ಹಿಡಿದು “ಭಟ್ರು ಪಿಚ್ಚರಲ್ಲಿ ಅದೇ ಬೇಜವಾಬ್ದಾರಿ ಉಡಾಫೆ ಹೀರೋ, ಸುಮ್ನೆ ಉದ್ದುದ್ದ ಡೈಲಾಗ್ ಹೊಡ್ಕೊಂಡು ಅಲೀತಾ ಇರ್ತಾರಪ್ಪ ಅಷ್ಟೇ, ಛೇ ಅವ್ರು ಬೇರೆ ಥರ ಯಾವುದಾದರೂ ಫಿಲಂ ಮಾಡ್ಬೇಕಪ್ಪಾ” ಅನ್ನುವವರೆಗೂ ಅಭಿಪ್ರಾಯಗಳು ಕೇಳಿಬರುತ್ತವೆ! “ಭಟ್ಟರ ಬೆಸ್ಟ್ ಫಿಲಂ ಯಾವುದು?” ಅಂತ ಪ್ರಶ್ನೆ ಬಂದಾಗ, ನನ್ನ ಮೊದಲ ಉತ್ತರ ಯಾವಾಗಲೂ “ಅವ್ರು ಇನ್ನೂ ಅದನ್ನ ಮಾಡಿಲ್ಲ”. ಅವರ ಅಗಾಧ ಪ್ರತಿಭೆಗೆ ನ್ಯಾಯ ದೊರಕಿಸುವ ಚಿತ್ರ ಅವರು ಇನ್ನೂ ತೆಗೆದಿಲ್ಲ. ನನ್ನ ಮೊದಲ ಉತ್ತರಕ್ಕೆ “ತೆಗೆದಿರೋ ಪಿಚ್ಚರಲ್ಲಿ ಹೇಳಪ್ಪಾ” ಅನ್ನುವ ಮರುಪ್ರಶ್ನೆ ಬಂದೇ ಬರುತ್ತದೆ. ಸುಮಾರು ಜನ “ಮುಂಗಾರು ಮಳೆ” ಅನ್ನುತ್ತಾರೆ, ಕೆಲವರು “ಮನಸಾರೆ” ಅನ್ನುತ್ತಾರೆ. ನಾನು ಮಾತ್ರ “ಗಾಳಿಪಟ” ಅನ್ನುತ್ತೇನೆ!

ಕೇವಲ ಒಂದು ಚಿತ್ರ ಉಂಟುಮಾಡಿದ ಪ್ರಭಾವದ ದೃಷ್ಟಿಯಿಂದ ನೋಡಿದರೆ, “ಮುಂಗಾರು ಮಳೆ” ಬೇರೆಲ್ಲಾ ಚಿತ್ರಗಳಿಗಿಂತ ಮುಂದಿದೆ. ಮುಂಗಾರು ಮಳೆ ಬಿಡುಗಡೆಯಾಗುವ ಮುಂಚಿನ ಐದು ವರ್ಷಗಳ ಹಿಟ್ ಚಿತ್ರಗಳನ್ನ ಪಟ್ಟಿಮಾಡಿ. ಅದ್ಭುತ ಅನ್ನುವಂತಹ ಹಾಡುಗಳನ್ನ ನೆನಪಿಸಿಕೊಳ್ಳಿ, ಸುಂದರವಾದ ಹಾಡಿನ ಚಿತ್ರಣ ನೆನಪಿಸಿಕೊಳ್ಳಿ. ಎಲ್ಲೋ ಕೆಲವು ಬೆರಳೆಣಿಕೆಯಷ್ಟು ಚಿತ್ರಗಳು ಸಿಗಬಹುದು ಅಷ್ಟೇ! ಆದರೆ “ಮುಂಗಾರು ಮಳೆ” ನಂತರದ ಚಿತ್ರಗಳನ್ನು ಗಮನಿಸಿ. ಚಿತ್ರ ಎಷ್ಟೇ ಕಳಪೆಯಾಗಿದ್ದರೂ, ಚಿತ್ರದಲ್ಲಿನ ಸಂಗೀತ ಚನ್ನಾಗಿರಬೇಕು, ಹಾಡಿನ ಚಿತ್ರೀಕರಣದಲ್ಲಿ ಹೊಸತನ ಇರಬೇಕು, ಸಂಭಾಷಣೆಗಳಲ್ಲಿ ಸಹಜತೆ ಇರಬೇಕು ಅನ್ನುವ ಪ್ರಜ್ಞೆ ಮೂಡಿ ಬಂತು. “ಮುಂಗಾರು ಮಳೆ” ಕನ್ನಡ ಚಿತ್ರಗಳ “ಬೇಸಿಕ್ ಮಿನಿಮಂ” ಮಟ್ಟವನ್ನು ಅಚಾನಕ್ಕಾಗಿ ಮೇಲೆತ್ತಿಬಿಟ್ಟಿತು!

“ಮುಂಗಾರು ಮಳೆ” ಚಿತ್ರದ ನಿರೂಪಣೆಯಲ್ಲಿನ ತಿಳಿಹಾಸ್ಯ, ಲವಲವಿಕೆಯ ಅಭಿನಯದ ಹಿಂದೆ ಕಥೆಯ ದೌರ್ಬಲ್ಯ ಮುಚ್ಚಿಹೋಗಿದೆ. ಕೇವಲ ಪಾತ್ರಗಳನ್ನ ಗಮನಿಸಿದರೆ ಎಷ್ಟು ದೋಷಗಳಿವೆ ಅಂತ ತಿಳಿಯುತ್ತದೆ. ಅನಂತ್ ನಾಗ್ ಅವರ ಪಾತ್ರವನ್ನೇ ತೆಗೆದುಕೊಳ್ಳಿ, ಯಾವ ಕಿವುಡರು ತಮ್ಮ ಕಿವಿ ಮಷೀನ್ ಹಾಕಿಕೊಳ್ಳದೇ, ಕೇಳಿಸುತ್ತಿಲ್ಲ ಅಂತ ಮನವರಿಕೆ ಆದ ಮೇಲೂ, ಮಾತುಕತೆಯನ್ನು ಮುಂದುವರಿಸುತ್ತಾರೆ? ನಂದಿನಿ ಪಾತ್ರಕ್ಕೂ ಗಟ್ಟಿಯಾದ ನೆಲೆಗಟ್ಟಿಲ್ಲ. ತಾನು ಮದುವೆಯಾಗಲು ಹೊರಟಿರುವ ಹುಡುಗನ ಬಗ್ಗೆ, ತನ್ನ ಮುಂದಿನ ಜೀವನದ ಬಗ್ಗೆ ಅವಳಿಗೆ ಕನಸುಗಳು ಇರಲಿಲ್ವಾ? ಆಕೆಗೆ ಪ್ರೀತಂ ಮೇಲೆ ಪ್ರೀತಿ ಉಕ್ಕಿಬರಲು ಕೇವಲ ಒಂದು ಘಟನೆ ಸಾಕಾಗುತ್ತದೆ. ಅದು, ಪ್ರೀತಂ ರೈಲು ಹಳಿಗಳ ಮೇಲೆ ಕುಳಿತಿದ್ದ ಮೊಲವನ್ನು ರಕ್ಷಿಸಿದ ಅಂತ! “ನೋಡ್ರೀ ನಂದಿನಿ, ಯಾವುದೋ ಅಪರಿಚಿತ ಪ್ರಾಣಿಗೋಸ್ಕರ ತನ್ನ ಪ್ರಾಣವನ್ನೂ ಪಣಕ್ಕಿಟ್ಟ ಅಂದರೆ ಇವನು ಎಷ್ಟು ಒಳ್ಳೆಯವನು, ಇನ್ನೂ ನಿಮಗೆ ಇವನ ಮೇಲೆ ಪ್ರೀತಿ ಉಂಟಾಗಿಲ್ವಾ?” ಅನ್ನುವಂತಹ “ಎಮೋಷನಲ್ ಮ್ಯಾನಿಪ್ಯುಲೇಶನ್” ಸೀನ್ ಎಷ್ಟು ಬಾಲಿಶ ಆಲ್ವಾ? ಅಷ್ಟೇ ಸುಲಭವಾಗಿ ಪ್ರೀತಂ ಹೇಳಿದ ಒಂದು ಮಾತಿನಿಂದ ಕಡೆಯಲ್ಲಿ ಅವನಿಂದ ದೂರವಾಗುತ್ತಾಳೆ. ಇಷ್ಟೆಲ್ಲಾ ಭಾವನಾತ್ಮಕ ತೊಯ್ದಾಟಗಳು ಇದ್ದರೂ, ಯಾವ ಎಮೋಷನಲ್ ಬ್ಯಾಗೇಜ್ ಇಲ್ಲದೇ, ಮೊದಲೇ ನಿಶ್ಚಯವಾಗಿದ್ದ ಹುಡುಗನೊಡನೆ ಮದುವೆ ಮಾಡಿಕೊಳ್ಳಲು ರೆಡಿಯಾಗುತ್ತಾಳೆ!

ಇನ್ನು ಸನ್ನಿವೇಶಗಳು. ಮದುವೆಗೆ ಇನ್ನು ಕೆಲವೇ ದಿನಗಳು ಅನ್ನುವಾಗ ಮದುಮಗಳೇ ತನ್ನ ಸ್ನೇಹಿತರನ್ನು ಕರೆತರಲು ದೂರದೂರಿಗೆ ಒಬ್ಬಳೇ ಕಾರಲ್ಲಿ ಹೊರಡುವುದು, ಮದುವೆಯ ಹಿಂದಿನ ದಿನ ಹುಡುಗಿಯ ಅಪ್ಪ ದೂರದ ಬೆಟ್ಟಕ್ಕೆ ಜಾಗಿಂಗ್ ಹೋಗುವುದು – ಅದೆಷ್ಟು ಅಸಂಬದ್ಧ ದೃಶ್ಯಗಳಿದ್ದವು ನೆನಪಿದ್ಯಾ? ಭಟ್ಟರ ಚಮತ್ಕಾರೀ ಸಂಭಾಷಣೆಗಳು, ಮಧುರವಾದ ಹಾಡುಗಳು, ಗಣೇಶ್ ಅಭಿನಯ ಇವೆಲ್ಲಾ ನ್ಯೂನತೆಗಳನ್ನೂ ಅಡಗಿಸಿಟ್ಟಿದ್ದವು ಅಷ್ಟೇ!

ಕೇವಲ ಒಂದು ಚಿತ್ರವಾಗಿ ನೋಡಿದರೆ, “ಗಾಳಿಪಟ” ಮುಂಗಾರು ಮಳೆಗಿಂತ ಉತ್ತಮ ಚಿತ್ರ! ಅದಕ್ಕೆ ಮುಖ್ಯ ಕಾರಣ ಅಂದರೆ ಇದರಲ್ಲಿನ ಪಾತ್ರಗಳು ತುಂಬಾ ಚನ್ನಾಗಿ, ನಂಬಲರ್ಹವಾಗಿ ಮೂಡಿಬಂದಿವೆ. ಗಣೇಶ್ ಮುಂಗಾರು ಮಳೆಯ ಪ್ರೀತಂ ತರಹ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉಡಾಫೆ ಯುವಕ. ಅವನು ಇಷ್ಟ ಪಡುವ ಹುಡುಗಿ ಸೌಮ್ಯ, ತನ್ನ ಸತ್ತ ಗಂಡನ ನೆನಪಿನಿಂದ ಹೊರಬರಲಾಗದ ವಿಧವೆ, ಗಂಭೀರ ಸ್ವಭಾವದವಳು. ದಿಗಂತ್ ಸ್ನೇಹಿತರಿಂದ ಸದಾ ಛೇಡಿಸಲ್ಪಡುವ, ಪಾಪದ ಹುಡುಗ, ಮೃದು ಸ್ವಭಾವದವನು. ಅವನು ಇಷ್ಟಪಡುವ ಹುಡುಗಿ ರಾಧಾ ಒರಟು ಸ್ವಭಾವದ, ಧೈರ್ಯವಂತೆ. ಕಿಟ್ಟಿ ದೂರವಾಗಿರುವ ತನ್ನ ಹಳೆಯ ಗರ್ಲ್ ಫ್ರೆಂಡ್ ನೆನಪಿನಲ್ಲೇ ಕೊರಗುತ್ತಿರುವ ಭಾವುಕ ವ್ಯಕ್ತಿ. ಸ್ವಭಾವತಃ ಕಿಟ್ಟಿ ಸೌಮ್ಯಾಳ ಪ್ರತಿಫಲನ ಇದ್ದಂತೆ. ಕಿಟ್ಟಿಯನ್ನು ಈ ಮೂಡಿನಿಂದ ಹೊರತರುವ ಸಾಧ್ಯತೆ ಇರುವುದು ಅವನನ್ನು ಪ್ರೀತಿಸುತ್ತಿರುವ ಹುಡುಗಾಟದ ಸ್ವಭಾವದ ಚೈಲ್ಡ್-ವುಮನ್ ಪಾವನಿ. ತದ್ವಿರುದ್ಧ ಸ್ವಭಾವದ ಮೂರೂ ಜೋಡಿ ಪಾತ್ರಗಳು, ಅವುಗಳ “ನಡವಳಿಕೆ” ಕನ್ಸಿಸ್ಟೆಂಟ್ ಆಗಿದೆ. “ಮುಂಗಾರು ಮಳೆ” ನಂದಿನಿ ಪಾತ್ರದ ಥರ ಅಲ್ಲ! ಆಮೇಲೆ, “ಡ್ರಾಕುಲಾ” ಪಾತ್ರವನ್ನು ಮರೆಯೋಕಾಗುತ್ತಾ?

ಈ  ಚಿತ್ರದ ಇನ್ನೊಂದು ಉತ್ತಮ ಅಂಶ ಅಂದರೆ ಮೂರು ಗೆಳೆಯರ ಸ್ನೇಹದ ಚಿತ್ರಣ. “ನೀನು ನನ್ನ ಜೀವದ ಗೆಳೆಯ, ನಿನ್ನಂಥ ಗೆಳೆಯನನ್ನು ಪಡೆದ ನಾನೇ ಧನ್ಯ”, “ಸ್ನೇಹಿತ ಅಂದರೆ ನೀನು ಇದ್ದಂಗೆ ಇರಬೇಕು ನೋಡು, ನಾನು ನಿಜಕ್ಕೂ ಅದೃಷ್ಟವಂತ”, “ನಾವಿಬ್ಬರೂ ಎರಡು ದೇಹ ಒಂದು ಆತ್ಮ ಇದ್ದಂಗೆ”, “ನಿನ್ನಂಥ ಮಿತ್ರನಿಗೋಸ್ಕರ ನನ್ನ ಪ್ರಾಣ ಕೊಡಲೂ ಸಿದ್ಧ” ಮುಂತಾದ ಕೃತಕ ಸ್ನೇಹಿತರನ್ನು ನೋಡಿ ಬೇಜಾರಾಗಿಹೋಗಿದ್ದ ನಮಗೆ, ಗಣೇಶ್ ದಿಗಂತ್ ಕಿಟ್ಟಿ ನಡುವಿನ ಸನ್ನಿವೇಶಗಳು ಆಪ್ತ ಮತ್ತು ಸಹಜ ಅನಿಸಿದ್ದವು. ಎಷ್ಟೇ ಆತ್ಮೀಯತೆಯಿದ್ದರೂ ಅದನ್ನು ಮಾತಿನಿಂದ ವ್ಯಕ್ತಪಡಿಸದೇ, ಕಾಲೆಳೆದು ತಮಾಷೆ ಮಾಡಿಕೊಂಡು ಇರುವ ಇವರನ್ನು ನೋಡಿ ಮನಸ್ಸು ಆಹ್ಲಾದಗೊಂಡಿತ್ತು!

“ಮುಂಗಾರು ಮಳೆ” ಚಿತ್ರದ ಒಂದು ಕೆಟ್ಟ ಕೊಡುಗೆ ಅಂದರೆ “ಅನಗತ್ಯ ಹಿಂದಿ ಬಳಕೆ”! “ಹನಿ ಹನಿ ಪ್ರೇಮ್ ಕಹಾನಿ” ಅನ್ನುವುದು ಆವಾಗ್ಗೆ ಒಂದು ಹೊಸ ರೀತಿಯ ಪನ್ ಅನಿಸಿಕೊಂಡರೂ, ಅದಾದ ನಂತರ ಲೆಕ್ಕವಿಲ್ಲದಷ್ಟು ಚಿತ್ರದ ಹೆಸರುಗಳಲ್ಲಿ, ಶೀರ್ಷಿಕೆಗಳಲ್ಲಿ, ಹಾಡುಗಳಲ್ಲಿ – ಚಿತ್ರದ ಕಥೆಗೂ, ಪಾತ್ರಕ್ಕೂ ಸಂಬಂಧವಿಲ್ಲದಿದ್ದರೂ ಹಿಂದಿ ಪದಗಳನ್ನು, ವಾಕ್ಯಗಳನ್ನು ತುರುಕುವ ಖಯಾಲಿ ಶುರುವಾಯಿತು. ಇದನ್ನು ತೀವ್ರವಾಗಿ ಇಷ್ಟಪಡದವರಲ್ಲಿ ನಾನೂ ಒಬ್ಬ. ಆದರೆ “ಗಾಳಿಪಟ” ಚಿತ್ರದಲ್ಲಿ ಹಿಂದಿ ಸಾಲಿನ ಬಳಕೆ ಬಹಳ  ಸಹಜವಾಗಿ ಮೂಡಿಬಂದಿದೆ. ಕಿಟ್ಟಿಗೆ ಪಾವನಿಯ ಮೇಲೆ ಪ್ರೀತಿ ಉಂಟಾದಾಗ, ನದಿ ದಡದಲ್ಲಿ ಗಿಟಾರ್ ಹಿಡಿದುಕೊಂಡು “ಮರ್ ಕೆ ಭೀ ನಾ ಮರ್ನಾ ಹೈ ಪ್ಯಾರ್” ಅಂತ ಹಾಡುತ್ತಿರುತ್ತಾನೆ. ಕಿಟ್ಟಿ ಹಾಡುಗಾರ, ಶಾಲಾಕಾಲೇಜುಗಳಲ್ಲಿ ಪ್ರೈಜುಗಳನ್ನೂ ಗೆದ್ದಿರತಕ್ಕವನು, ಬಹುಷಃ ಅವನ ಗೆಳೆಯರು “ನೀನು ಬಿಡಮ್ಮ, ನಮ್ಮ ಕಾಲೇಜಿನ ಕಿಶೋರ್ ಕುಮಾರ್” ಅಂತ ಹೊಗಳಿರುವ ಸಾಧ್ಯತೆಗಳೂ ಇವೆ. ಅಂಥವನು ಈ ರೀತಿಯ ಸಾಲು ಹೇಳಿದಾಗ ಅದು ವಿಚಿತ್ರ ಅನಿಸಲ್ಲ, ಬದಲಿಗೆ ಖುಷಿ ಕೊಡುತ್ತದೆ!


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Utham Danihalli
10 years ago

Lekana estavaythu adre batru mathe batra cinimaGalla bagge enu baribahudithu batara cinimadali kathe ela andru olle music Olle lokeshan entatainment eruthe
Mungaru malle trend change madi dakale yadru batra cinima andre nange nenpagodu ‘manni’

yogish naik
yogish naik
10 years ago

my favorite movie all time galipata

sharada.m
sharada.m
10 years ago

nice analysis

Lokesh kumar
Lokesh kumar
10 years ago

ಮುಂಗಾರು ಮಳೆ” ಚಿತ್ರದ ಒಂದು ಕೆಟ್ಟ ಕೊಡುಗೆ ಅಂದರೆ “ಅನಗತ್ಯ ಹಿಂದಿ ಬಳಕೆ”! “ಹನಿ ಹನಿ ಪ್ರೇಮ್ ಕಹಾನಿ” ಅನ್ನುವುದು ಆವಾಗ್ಗೆ ಒಂದು ಹೊಸ ರೀತಿಯ ಪನ್ ಅನಿಸಿಕೊಂಡರೂ, ಅದಾದ ನಂತರ ಲೆಕ್ಕವಿಲ್ಲದಷ್ಟು ಚಿತ್ರದ ಹೆಸರುಗಳಲ್ಲಿ, ಶೀರ್ಷಿಕೆಗಳಲ್ಲಿ, ಹಾಡುಗಳಲ್ಲಿ – ಚಿತ್ರದ ಕಥೆಗೂ, ಪಾತ್ರಕ್ಕೂ ಸಂಬಂಧವಿಲ್ಲದಿದ್ದರೂ ಹಿಂದಿ ಪದಗಳನ್ನು, ವಾಕ್ಯಗಳನ್ನು ತುರುಕುವ ಖಯಾಲಿ ಶುರುವಾಯಿತು. ಇದನ್ನು ತೀವ್ರವಾಗಿ ಇಷ್ಟಪಡದವರಲ್ಲಿ ನಾನೂ ಒಬ್ಬ……exactly naanoo obba !

4
0
Would love your thoughts, please comment.x
()
x