ಕೆಂಗುಲಾಬಿ (ಭಾಗ 18): ಹನುಮಂತ ಹಾಲಿಗೇರಿ


(ಇಲ್ಲಿಯವರೆಗೆ)

ಆಕೆಯ ಬದುಕಿನಲ್ಲಿ ಎದುರಾಗುತ್ತಿರುವ ತಿರುವು ಮುರುವುಗಳನ್ನು ನನ್ನನ್ನು ಕೂಡ ಆತಂಕಗೊಳಿಸಿದ್ದವು. ನಮ್ಮ ಆಫೀಸ್‍ನಲ್ಲಿ ಹಿರಿಯ ಲೈಂಗಿಕ ಕಾರ್ಮಿಕರನ್ನು ಕಾಂಡೋಮ್ ಹಂಚುವ 'ಸಂರಕ್ಷಾ ಸಖಿ'ಯರನ್ನಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದು ನೆನಪಾಗಿ ನಾನು ಆಕೆಗೆ ವಿಷಯವನ್ನೆಲ್ಲ ತಿಳಿಸಿದೆ. ನಮ್ಮ ಕಚೇರಿಯ ವಿಳಾಸ ಕೊಟ್ಟು ಹೊರ ಬಂದೆ. ಮನೆಯ ಬಾಗಿಲಿನಲ್ಲಿ ಕುಳಿತಿದ್ದ ರಾಜಿಯ ಅರಳುತ್ತಿರುವ ಚೆಲುವನ್ನು ನೋಡಿ ನನಗೆ ಸಂತೋಷ, ಗಾಬರಿಗಳೆರಡು ಒಟ್ಟೊಟ್ಟಿಗೆ ಆದವು. ಮತ್ತೆ ಮನೆಯೊಳಗೆ ಹೋಗಿ ರಾಜಿ ಬಗ್ಗೆ ವಿಶೇಷ ಎಚ್ಚರಿಕೆವಹಿಸಬೇಕು ಎಂದು ಕಿವಿಮಾತು ಹೇಳಿದೆ. ಅವಳೊಂದಿಗಿನ ಎಲ್ಲ ಮಾತುಗಳು ಮುಗಿಯುವ ಹೊತ್ತಿಗೆ ಸಂಜೆ ಕಳೆದು ರಾತ್ರಿ ಕವಿಯೋದ್ರಲ್ಲಿತ್ತು. ಇವತ್ಯಾಕೋ ಚುಕ್ಕಿಗಳಿಲ್ಲದೆ ಚಂದ್ರ ಏಕಾಂಗಿಯಾಗಿದ್ದ. ಆತನು ಬೇಸರದಿಂದ ಮೊಡದ ಮರೆಯಲ್ಲಿ ಅವಿತುಕೊಂಡಂತೆ ಕಾಣುತ್ತಿದ್ದ. ಹೊರಗಿನ ತಣ್ಣನೆಯ ಸುಳಿಯುವ ಗಾಳಿಯನ್ನು ಮೀರಿ ಒಳಗಡೆಯ ಬಿಸಿ ಉಸಿರಾಗಿ ಹೊರಬರುತ್ತಿತ್ತು.  ನನಗೆ ಶಾರಿಯ ಮನಸ್ಸು ಮೊದಲೆ ಚನ್ನಾಗಿ ಅರ್ಥ ಮಾಡಿಕೊಂಡಿದ್ದರಿಂದ ನಾನು ಹೇಳಲೋ ಬೇಡವೋ ಎಂಬ ದ್ವಂದ್ವದಲ್ಲಿದ್ದೆ. ಆದರೂ ಆ ದ್ವಂದ್ವವನ್ನು ಒದ್ದುಕೊಂಡು ಮಾತುಗಳು ಹೊರ ಬಂದಿದ್ದವು. ಮೊದಲಿಗೆ ನನ್ನ ಮತ್ತು ಲಲ್ಲಿಯ ನಡುವಿನ ಮುರಿದು ಬಿದ್ದಿದ್ದ ದಾಂಪತ್ಯ ಜೀವನದ ಘಟನೆಗಳನ್ನು ಹೇಳತೊಡಗಿದೆ. ಅವಳು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದಳು. ಮದುವೆಯ ಬಗ್ಗೆ ಭ್ರಮನಿರಸನಗೊಂಡಂತೆ ಮಾತನಾಡಿದೆ. ಕೊನೆಯಲ್ಲಿ ‘ಯಾಕೋ ಏನೋ ನಿನ್ನ ಕೂಡ ಮೊದಲಿನ ಆ ಮಧುರ ಭಾವನೆಗಳು ಹಾಗೇ ಉಳಕೊಂಡಾವ. ನೀನು ಒಪ್ಪಿದರೆ, ನಿನ್ನ ಕೂಡ ಇರಬೇಕಂತ ಮಾಡೇನಿ. ನೀನು ನನ್ನನ್ನು ಮದುವೆಯಾಗಿ ಬಿಡು. ಅಂದ್ರ, ಇಬ್ಬರೂ ಒಂದೇ ಕಡೆ ಕೂಡಿ ಇರೋಣು' ಎಂದು ಹೇಳಬೇಕಾದ್ದನ್ನೆಲ್ಲ ಹೇಳಿ ಆಕೆಯ ಮುಖ ನೋಡಿದೆ.

ಸ್ವಲ್ಪ ಹೊತ್ತು ಸುಮ್ಮನಿದ್ದ ಶಾರದೆ, ಮೆಲ್ಲನೆ ಶುರುವಿಟ್ಟುಕೊಂಡಳು, ‘ನೋಡ ಮಲ್ಲೇಶಿ ನಾನು ಹಿಂಗಂತಿನಿ ಅಂತ ಬೇಜಾರು ಮಾಡಕೋಬೇಡ. ನನಗೆ ಗೊತ್ತು. ನೀ ಯಾಕ ಹಿಂಗ ಮಾತಾಡತಿ ಅಂತ. ನನ್ನ ಎಲ್ಲ ಹೀನ ಬದುಕನ್ನು ತಿಳಕೊಂಡ ಮೇಲೆಯೂ ನೀನು ಬದಲಾಗಕ ತಯಾರಿಲ್ಲ. ನನ್ನ ಬದುಕು ಅಂತೂ ಓದಿ ಮುಗಿಸಿದ ಪುಸ್ತಕ ಇದ್ದಂಗ. ಯಾವುತ್ತೂ ನಾನು ಆ ಬೆಂಗಳೂರಿಗೆ ಬಂದ ಹೊಸದರಲ್ಲಿ ಆ ನಾಟಕದ ಹುಚ್ಚಿನ ಹುಡುಗನನ್ನು ಮದುವೆಯಾದೆನೋ ಅವತ್ತಿನಿಂದ ನಿನ್ನನ್ನು ಮರೆತು ಬಿಟ್ಟೆ. ನಿನ್ನ ಮುಂದೆ ಇಷ್ಟೊಂದೆಲ್ಲ ಹೇಳಿದೆ ಅಂತ ಅಂದ್ರೆ ನಿನ್ನ ಬಗ್ಗೆ ಮೊದಲಿನ ಆಕರ್ಷಣೆ ಇದೆ ಅಂತ ತಪ್ಪು ತಿಳಕೋಬೇಡ. ಇವತ್ತು ಹಿಂಗ ಇದ್ದಿನಿ. ನಾಳೆ ಹ್ಯಾಂಗ ಆಕ್ಕಿನಿ ಏನು ಅಂತ ನನಗ ಗೊತ್ತಿಲ್ಲ. ಇನ್ನು ಎಷ್ಟು ದಿನ ಬದಕತೀನಿ ಅಂತನೂ ಗೊತ್ತಿಲ್ಲ. ನಿನ್ನ ಹೆಂಡತಿ ಡೈವೋರ್ಸ್ ಕೊಟ್ರೆ ಇನ್ನೊಂದು ಚಲೋ ಹುಡಿಗಿನ ಮದುವೆಯಾಗಿ ಬಾಳ ಕಟ್ಟಕೋ. ನನ್ನ ಬದುಕು ಹಾಳಾಗೈತಿ ಅಂತ ನಿನ್ನ ಬದುಕು ಯಾಕ ಹಾಳ ಮಾಡಕೋತಿ. ನನ್ನಂತ ಮುದುಕಿಯನ್ನು, ಸೂಳೆಯನ್ನು ಮದುವೆಯಾಗತಿ ಅಂದ್ರ ಎಲ್ಲ ನಕ್ಕಾರು. ನಕ್ಕು ಸುಮ್ಮನಾದ್ರ ಚಲೋ. ಅವರ ವಿಕಟ ನಗೆ, ಚುಚ್ಚುಮಾತುಗಳು ಜೀವನಪರ್ಯಂತ  ನಮ್ಮನ್ನು ಹಿಂಬಾಲಿಸಿ ಬರವಂಗ ಆಗಬಾರದು.

ನೀನು ಸೇರಿಸೋ ಸಂಸ್ಥೆಯೊಳಗ ನಾನು ಹೊಸ ಬದುಕು ಕಂಡಕೋಬೇಕಂತ ಮಾಡೇನಿ. ನಿನ್ನನ್ನು ಮದುವೆಯಾದ ಮೇಲೆ ಈ ಸಮಾಜದೊಳಗಿಂದ ಬರೋ ಚುಚ್ಚುಮಾತುಗಳು ನನ್ನ ಹಳೆ ಹೊಲಸು ಬದುಕನ್ನು ಪದೇ ಪದೇ ನೆನಪಿಸಿ ನನ್ನನ್ನು ಕುಬ್ಜಳನ್ನಾಗಿ ಮಾಡಿದರ, ಆಗ ನೀನು ನಾನು ಹೆಂಗಾದರೂ ಸುಖವಾಗಿ ಇರಲ್ಕಿಕೆ ಸಾಧ್ಯ ಆಕ್ಕೆತಿ. ಅದಕ್ಕ ನನ್ನನ್ನು ನನ್ನ ಪಾಡಿಗೆ ಬೀಡು ನಿನಗಿನ್ನೂ ವಯಸೈತಿ. ಮಗ ಅತೀತ್ ಇನ್ನು ಸಣ್ಣಾಂವ ಅದಾನ. ಅವನಿಗಾದರೂ ಇನ್ನೊಂದು ಮದುವೆಯಾಗು ಹಟ ಮಾಡಕೊಂಡು ಚಂದನ ಬದುಕು ಹಾಳಮಾಡಕೋಬೇಡ' ಎಂದು ಹೇಳೊದೆಲ್ಲ ಹೇಳಿಯಾದ ಮೇಲೆ ಸ್ವಲ್ಪ ಹೊತ್ತು ಸುಮ್ಮನಾದಳು. ನಾನು ಇನ್ನು ಆಕೆಯನ್ನೂ ದೀನನಾಗಿ ನೋಡುತ್ತ ‘ನನಗೆ ಅದೆಲ್ಲಾ ಹೇಳಬೇಡ. ಈಗ ನನ್ನ ಕೂಡ ಬರತಿಯೋ ಇಲ್ಲೋ, ಅಷ್ಟ ಹೇಳು ‘ಎಂದು ಕಡೆಯದಾಗಿ ಎಂಬಂತೆ ಕೇಳಿದೆ. ನನಗರಿವಿಲ್ಲದೆ ನನ್ನ ಧ್ವನಿ ಗಡುಸಾಗಿತ್ತು. 

ಈ ಸಲ ಆಕೆ ಕೂಡ ಸಿಟ್ಟಿಗೆದ್ದಳು. ‘ನಾನು ಹೇಳೋದೆಲ್ಲ ಮುಗಿದ ಬಿಟ್ಟೇತಿ. ಇನ್ನು ನಿನ್ನ ಬದುಕು ನಿನಗೆ. ನನ್ನ ಬದುಕು ನನಗ. ನಂದ ಬದುಕು ಚಲೋನೋ ಕೆಟ್ಟನೋ ಆದೆಂಗ ಐತಿ ಹಂಗ ಬದುಕುವಾಕಿ ನಾನು. ನೀ ಹಿಂಗ ಗಂಟ ಬಿದ್ರ ಇನ್ನೊಮ್ಮೆ ನನ್ನ ಮನಿ ಮಟ ಬರುದು ಬ್ಯಾಡ ಅಂತ ಹೇಳಬೇಕಾಕೈತಿ ನೋಡು’ ಎಂದು ಖಡಾಖಂಡಿತವಾಗಿ ಹೇಳಿ ಎದ್ದು ಹೋಗಿ ಅಡುಗೆ ಮನೆಯಲ್ಲಿ ತನ್ನ ಕೆಲಸದಲ್ಲಿ ನಿರತಳಾದಳು.

* * *

ತಿಂಗಳುಗಳು ಉರುಳುರುಳಿ ವರ್ಷವೇ ಮುಗಿಯುತ್ತಾ ಬಂದಿದೆ. ಈಗ ಅವಳು ನಮ್ಮ ಸಂಸ್ಥೆಯ ಬೇರೊಂದು ಬ್ರ್ಯಾಂಚಿನಲ್ಲಿ ಕೆಲಸ ಮಾಡುತ್ತಾ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾಳೆನ್ನುವುದೇ ಖುಷಿ ವಿಚಾರ. ಈ ಕೆಲಸ ಅವಳಿಗೆ ಹೊಸ ಬದುಕು ಕೊಟ್ಟೈತಿ ಅಂದ್ರ ತಪ್ಪಾಗಲಿಕ್ಕಿಲ್ಲ. ಈಗೀಗ ಕತ್ತಲ ನಾಡಿಂದ ಬೆಳಕಿನ ಜಗತ್ತಿಗೆ ಬಂದಂಥ ಸಂಭ್ರಮವನ್ನು ಶಾರಿಯ ನಡೆನುಡಿಯಲ್ಲಿ ಕಾಣಬಹುದು. ಆಕಿ ಹಿಂಗ ಹೊಸ ಬದುಕು ಸಾಗಿಸಬಹುದು ಹೊರ ಜಗತ್ತಿನ ಜನರೊಂದಿಗೆ ಬೆರೆಯಬಹುದೆಂದು ಕನಸಿನಲ್ಲೂ ನಾನು ಊಹಿಸಿರಲಿಲ್ಲ. ನಮ್ಮ ಸಂಸ್ಥೆಯ 'ಸಂರಕ್ಷಾ ಸಖಿ' ಕಾರ್ಯಕರ್ತೆಯರಲ್ಲಿ ಇವಳೇ ಬಹಳಷ್ಟು ಸಕ್ರಿಯ ಕಾರ್ಯಕರ್ತೆ. ನಾನು ಕೂಡ ನನ್ನ ಮಗ ಅತೀತ್‍ನನ್ನು ಹುಬ್ಬಳಿಯ ಬೆಂಗೇರಿ ಶಾಲೆಯಿಂದ ಕರೆತಂದು ಇಲ್ಲಿಯೇ ಖಾಸಗಿ ಶಾಲೆಗೆ ಸೇರಿಸಿದ್ದೇನೆ. ಶಾರದೆಯ ಮನೆಯ ಹತ್ತಿರವೆ ಒಂದು ಸಿಂಗಲ್ ಬೆಡ್ ರೂಂ ಮನೆ ಬಾಡಿಗೆಗೆ ಹಿಡಿದಿದ್ದೇನೆ. ಮಗ ರಾಜಿಯ ಗೆಳೆತನವನ್ನು ಹಾಗೆ ಉಳಿಸಿಕೊಂಡಿದ್ದು, ಆಗಾಗ ರಾಜಿ ಮತ್ತು ಆಂಟಿ ಶಾರದೆಯನ್ನು ಮಾತಾಡಿಸಿಕೊಂಡು ಬಂದು ನನ್ನ ಮುಂದೆ ಹೇಳುತ್ತಿರುತ್ತಾನೆ.

ನಾನು ಅದೇ ನನ್ನ ಹಳೆಯ ಸ್ಕೂಟರ್ ರಿಪೇರಿ ಮಾಡಿಸಿ ಅದರಲ್ಲಿಯೇ ಆಫೀಸ್‍ಗೆ ಮನೆಗೆ ಓಡಾಡುತ್ತಿದ್ದೇನೆ. ಶಾರದೆ ಈಗ ತನ್ನ ಸಹದ್ಯೋಗಿಗಳಿಗೆ 'ಮೇಡಂ' ಎನಿಸಿಕೊಳ್ಳುವಷ್ಟು ಬೆಳೆದಿದ್ದಾಳೆ. ಸದಾ ಕಾಟನ್ ಸೀರೆ, ಅದಕ್ಕೊಪ್ಪುವ ಕಾಟನ್ ರವಿಕೆ, ಬೆನ್ನಿನ ಮೇಲೆ ಜೋತಾಡುವ ಜಡೆ, ಯಾವಾಗಲೂ ಮೂಗಿನ ಮೇಲೆ ಕುಳಿತಿರುವ ಕನ್ನಡಕ ಈ ಎಲ್ಲ ಅಂಶಗಳು ಅವಳನ್ನು ಪ್ರಬುದ್ಧ ಮಹಿಳೆಯನ್ನಾಗಿಸಿವೆ. ಸಂರಕ್ಷಾ ಸಖಿಯರ ಸಭೆಗಳಲ್ಲಿ ಆಕೆಯ ಮಾತಿಗೊಂದು ಬೆಲೆ ಇದೆ. ಆದರೆ ಮಾತಾಡುವ ಮಾತು ಮತ್ತು ನಡೆಗಳು ಆಕೆಯ ಮೊದಲಿನ ವೃತ್ತಿಯನ್ನು ಜ್ಞಾಪಿಸುವಂತಿರುತ್ತವೆ. ಈಗಷ್ಟೆ ಹಲ್ಲುಗಳು ಹಳದಿಯಿಂದ ಬಿಳಿಯಾಗುತ್ತಿವೆ. ಹೊಸ ಬದುಕಿನ ಸಂಕೇತದಂತೆ ಕಂದಿದ ಮೈಚರ್ಮ ಕಳೆದುಹೋಗಿ ಮೊದಲಿನ ಗೋದಿವರ್ಣ ಕಳೆಗಟ್ಟುತ್ತಿದೆ ಮೈಮೇಲಿನ ಗಾಯದ ಬರೆಗಳು ಮಾತ್ರ ಹಳೆಯದರ ಕುರುಹಾಗಿ ಹಂಗೆ ಉಳಕೊಂಡಿವೆ. ಹಿಂದಿನ ಕಷ್ಟದ ಬದುಕು ಆಕೆಯ ಮುಖಕೊಂದು ಗಂಭೀರತೆಯನ್ನು ತಂದಿವೆ.

ನನ್ನ ಸ್ಕೂಟರನ ಹಿಂದಿನ ಸೀಟು ಯಾವಾಗಲೂ ಖಾಲಿಯಿರುತ್ತಿದ್ದುರಿಂದ ಒಂದೆರಡು ಸಲ ಶಾರದೆ ಬಸ್ಸಿಗೆ ಕಾಯುತ್ತ ನಿಂತಿರುವುದನ್ನು ಕಂಡು ಅವಳ ಮುಂದೆ ನಿಲ್ಲಿಸಿ ಹತ್ತಲು ಕೇಳಿ ಇಲ್ಲವೆನಿಸಿಕೊಂಡಿದ್ದೇನೆ. ಆಗೆಲ್ಲ ಶಾರದೆ ನಯವಾಗಿಯೆ ನಿರಾಕರಿಸಿದ್ದಾಳೆ.

ಕೆಲಸಕ್ಕೆ ಸೇರಿಕೊಂಡ ತಿಂಗಳುಗಳಲ್ಲಿಯೇ ಕೆಲಸದ ವೈಖರಿಯು ಅಷ್ಟೇನೂ ಸರಳವಾದುದು ಅಲ್ಲ ಎಂದು ಆಕೆಗೆ ಮನವರಿಕೆಯಾಗಿರಬೇಕು. ಕಾಂಡೋಮ್ ಬಗ್ಗೆ ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಜನ ಅದರ ಬಳಕೆಗೆ ಒಗ್ಗಿಕೊಂಡಿಲ್ಲವೆಂದೇ ಹೇಳಬೇಕು. ಒಬ್ಬ ಪುರುಷನಿಗೆ ಅದರಲ್ಲೂ ಹಣ ಕೊಟ್ಟು ಬಂದವನಿಗೆ ಒಬ್ಬ ಮಹಿಳೆ 'ಕಾಂಡೋಮ್' ಹಾಕಲು ಪ್ರೇರೇಪಿಸುವ ಪ್ರಕ್ರಿಯೆ ಅದೆಷ್ಟು ಅಸಹಜವಾದದ್ದು. ಕುಡಿದು ಅಥವಾ ಕಾಮೋದ್ರೇಕನಾಗಿ ಬಂದವನಿಗೆ ಆರೋಗ್ಯ ಬೋಧನೆ ಮಾಡುವ ಸಮಯ, ಸಹಕಾರವಾದರೂ ಎಷ್ಟು ಕಠಿಣವಾದದ್ದು, ಕಾಂಡೂಮ್ ಹಾಕಿದರೆ ಸ್ಪರ್ಶ ಸುಖವಿರುವುದಿಲ್ಲ ಎನ್ನುವ ಲಾಲಸೆಯಿಂದ ಗಿರಾಕಿಯನ್ನು ಹೊರತರುವ ಕೌಶಲ್ಯಗಳನ್ನು  ದಂಧೆಯಲ್ಲಿರುವ ಮಹಿಳೆಯರಿಗೆ ಕಲಿಸಬೇಕಾದ ಹೊಣೆ ಇವಳ ಹೇಗಲಿಗೇರಿದೆ. ಕಾಂಡೂಮ್ ಹಾಕಲು ಒತ್ತಾಯಿಸದಿದಲ್ಲಿ ಇನ್ನಷ್ಟು ಹೆಚ್ಚು ಹಣ ಕೊಡುವ ಆಮಿಷಗಳನ್ನು ಪಾಪ ಆ ಮಹಿಳೆಯರು ಹತ್ತಿಕ್ಕುವುದಾದರೂ ಹೇಗೆ? ಲೈಂಗಿಕ ಕಾರ್ಮಿಕಳು ಪಾನಮತ್ತಳಾಗಿ ತನ್ನ ಸಂಯಮ ಕಳೆದುಕೊಂಡಿದ್ದರೆ ಅವನಿಗೆ ಅರಿವು ಮೂಡಿಸುವ ಪ್ರಶ್ನೆಯಾದರೂ ಹೇಗೆ ಬರಲು ಸಾಧ್ಯ?

ವೃತ್ತಿ ಪೈಪೋಟಿಯಿಂದಾಗಿ ಕಾಂಡೋಮ್ ಒತ್ತಾಯಿಸುವವಳನ್ನು ತಿರಸ್ಕರಿಸಿ ಇನ್ನೊಬ್ಬಳ ಬಳಿ ಹೋಗುವ ಗಿರಾಕಿಗಳು ಸಾಕಷ್ಟು ಜನರಿದ್ದಾರೆ. ತನ್ನೊಂದಿಗೆ ಕಾಂಡೋಮ್ ಇಟ್ಟುಕೊಂಡಿದ್ದುದರ ಪರಿಣಾಮವಾಗಿ ಪೊಲೀಸರ, ರೌಡಿಗಳ, ಬಾಡಿಗೆ ಗಂಡಂದಿರ ವಕ್ರ ದೃಷ್ಟಿಗೆ ಬಹುಬೇಗ ಸಿಕ್ಕಿ ಹಾಕಿಕೊಳ್ಳಬಹುದಾದ ಸಂದರ್ಭಗಳೂ ಇರುತ್ತವೆ. ಕಾಮೋತ್ತೇಜಕರಾದ ಅಥವಾ ಸ್ಪರ್ಶ ಲಾಲಸೆಯ ಪುರುಷರುಗಳು ಮೊದಲು ಕಾಂಡೋಮ್ ಧರಿಸಿ ನಂತರ ಲೈಂಗಿಕ ಕ್ರಿಯೆಯ ಸಂದರ್ಭಗಳಲ್ಲಿ ಅದನ್ನು ಹರಿದು ಹಾಕಿ ಯಾಮಾರಿಸುವ ಹಾಗೂ ಅದರೊಂದಿಗೆ ಅಪಾಯವನ್ನು ತಂದೊಡ್ಡುವವರನ್ನು ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕಾಗುತ್ತದೆ. ಇಂತಹ ಬಹುದೊಡ್ಡ ಜವಬ್ದಾರಿಯನ್ನು ಶಾರದೆ ಈಗ ನಿರ್ವಹಿಸುತ್ತಿದ್ದಾಳೆ.

* * *

ರಾಜಿಗೆ ಶಾಲೆ ಮುಂದುವರೆಸಬೇಕು ಎಂದು ಆಸೆ ಇದ್ದರೂ ಕೂಡ ಶಾರದೆ ರಾಜಿಯ ಮದುವೆಯ ಬಗ್ಗೆಯೇ ಯೋಚಿಸುತ್ತಿದ್ದಳು. ನನ್ನ ಮುಂದೆಯೂ ಒಂದೆರಡು ಸಲ 'ಒಳ್ಳೆಯ ಹುಡುಗ ಕಣ್ಣಿಗೆ ಬಿದ್ದರೆ ತಿಳಿಸು' ಎಂದು ಹೇಳಿದ್ದಳು. ಈ ಮಧ್ಯೆ ನಾನು ಕೆಲಸದ ಒತ್ತಡದ ನಡುವೆ ಶಾರದೆಯನ್ನು ಮರೆತುಬಿಟ್ಟಿದ್ದೆ. ಒಮ್ಮೊಮ್ಮೆ ನಾನು ಮಾತಾಡಿಸಬೇಕೆಂದರೂ ಅವಳು ಬೇಕೆಂದೆ ನನ್ನಿಂದ ಮಾತನಾಡುವ ಸಂದರ್ಭವನ್ನು ತಪ್ಪಿಸುತ್ತಿದ್ದಳು.

ಒಂದು ದಿನ ಕಚೇರಿಯಲ್ಲಿ ದೀಪಾ ಬಂದು ಶಾರದೆಯ ಮಗಳ ಮದುವೆ ಫಿಕ್ಸ್ ಆಯಿತು ಎಂದು ಹೇಳಿ ಗಾಬರಿ ಮತ್ತು ಸಂತೋಷ ಏಕಕಾಲಕ್ಕೆ ಉಂಟಾಗುವಂತೆ ಮಾಡಿದಳು. ಹುಡುಗನ ಹೆಸರು ನಾಗೇಶ್. ಮೆಜೆಸ್ಟಿಕ್ ಹತ್ತಿರ ಸಾಕ್ಸ್, ಕರ್ಚಿಪು, ಅಂಡರ್‍ವೇರ್ ಮುಂತಾದವುಗಳುನ್ನು ಮಾರುತ್ತಿರುತ್ತಾನೆ. ಶಾರದೆಗೆ ಮೊದಲಿನಿಂದಲೂ ಪರಿಚಯವಂತೆ. ಒಂದೆರಡು ಸಲ ಮನೆಗೆ ಕೂಡ ಹೋಗಿದ್ದನಂತೆ ಎಂದು ಆಕೆಯೆ ಎಲ್ಲ ವಿಷಯವನ್ನು ಹೇಳುತ್ತಿರುವಾಗ ರಾಜಿ ನನ್ನ ಕಣ್ಣೆದುರು ಬಂದಳು. ಅವಳು ಕೃಷ್ಣ ಸುಂದರಿ. ಆರೋಗ್ಯವಾಗಿದ್ದ ಆ ದೇಹಕ್ಕೆ ಹರೆಯದ ಮಿಂಚು, ಮುಗ್ಧತೆ ಸೇರಿಕೊಂಡಿತ್ತು. ಹೀಗಾಗಿ ಮನೆಗೆ ಬಂದವ ರಾಜಿಯ ಹೃದಯಬಾಗಿಲನ್ನು ತಟ್ಟಿರಬೇಕು ಎಂದುಕೊಂಡೆ. ಒಟ್ಟಿನಲ್ಲಿ ಶಾರದೆಗೆ ಒಳ್ಳೆಯದಾದರೆ ಸಾಕೆಂದುಕೊಂಡು ನಾನು ಆ ವಿಷಯವನ್ನು ಅಲ್ಲಿಯೇ ಮರೆತಿದ್ದೆ.

ಮತ್ತೊಂದು ನಮ್ಮ ಸಂಸ್ಥೆಯ ಸಭೆಯಲ್ಲಿಯೆ ಈ ವಿಷಯ ಚರ್ಚೆಗೆ ಬಂದಿತ್ತು. ಸಭೆಯ ಮುಕ್ತಾಯದ ಹಂತದಲ್ಲಿ ಶಾರದೆ ಇದ್ದಕಿದ್ದಂತೆ ತನ್ನ ಮಗಳ ಮದುವೆಯ ವಿಷಯವನ್ನು ಹೇಳಿದಳು. ಇಡೀ ಹಾಲ್ ಬೆಚ್ಚಿ ಬೀಳೋ ಹಂಗೆ ಎಲ್ಲರೂ ಹೋ ಅಂತ ಖುಷಿ ಹಂಚ್ಕೊಂಡ್ರು. ನಮ ಸಂಸ್ಥೆಯ ಹಿರಿಯ ಅಧಿಕಾರಿ ಸೆಲ್ವಂ ಅವರು ಶಾರದೆಯ ಮಗಳ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದರು. ಕಚೇರಿಯ ಸಹದ್ಯೋಗಿಗಳೆಲ್ಲರೂ ಒಂದೊಂದು ಸಾಮಾನನ್ನು ಕೊಡಿಸಿ ಮದುವೆಯ ಖರ್ಚಿನಿಂದ ಆಗುವ ಹೊರೆಯನ್ನು ಕಡಿಮೆ ಮಾಡೋಣ ಎಂದರು. ಅವರು ದೊಡ್ಡತನಕ್ಕೆ ನಾನು ಕಣ್ಣಿನಲ್ಲಿಯೇ ಧನ್ಯವಾದ ಹೇಳಿದೆ.

ಸೆಲ್ವಂ ಸರ್ ತಾವೇ ತಾಳಿ ಕೊಡಿಸುವುದಾಗಿ ಹೇಳಿದರು. ದೀಪಾ ಮದುವೆ ಸೀರೆ ಕೊಡಿಸೋಕೆ ಒಪ್ಪಿದಳು. ಹೀಗೆ ಒಬ್ಬೊಬ್ಬರು ಒಂದೊಂದು ಸಾಮಾನು ಕೊಡಿಸುವುದಾಗಿ ಪ್ರಕಟಿಸಿದರು. ಕಾಲಂದುಗೆ, ಸಾಧಾರಣ ಬಟ್ಟೆಗಳು, ಅವಳಿಗೊಂದು ಸೂಟ್ಕೇಸ್ ಹೀಗೇ ಎಲ್ಲವನ್ನೂ ಸೆಲ್ವಂ ಸರ್ ಸಹಾಯಕ ನಾರಾಯಣ ಪಟ್ಟಿ ಮಾಡಿಯೇ ಬಿಟ್ಟ. ನಾನು ಮದುವೆ ನಂತರ ಒಂದು ಊಟದ ವ್ಯವಸ್ಥೆಗಾಗಿ ಮತ್ತು ಮದುವೆಯ ಇತರೆ ಖರ್ಚಿಗಾಗಿ 5 ಸಾವಿರ ರೂಪಾಯಿ ಕೊಡಿತೀನಿ ಅಂದು ಶಾರದೆಯ ಮೆಚ್ಚುಗೆಯ ನೋಟವನ್ನು ಸ್ವೀಕರಿಸಿದೆ.

ಹುಡುಗ ಅನಾಥ ಅಂತ ಗುಸುಗುಸು ಅಂತಿದ್ರೂ ನಾಗೇಶ ಶಾರೀಗೆ ತಕ್ಕನಾದವ ಎಂದು ಎಲ್ಲರಿಗೂ ಅನ್ನಿಸಿತ್ತು. ಒಂದು ಸುಂದರ ದಿನ ರಾಜಿ ಮತ್ತು ಸಾಕ್ಸ್ ಮಾರುವ ಹುಡುಗ ನಾಗೇಶನೊಂದಿಗೆ ನಾವಂದುಕೊಂಡಂತೆ ಮದುವೆ ಅಚ್ಚುಕಟ್ಟಾಗಿಯೇ ನಡೆಯಿತು. ತನ್ನ ಬದುಕಿನ ಬಾಗಿಲಿಗೂ ಪ್ರವೇಶಿಸದ ಬದುಕು ತನ್ನ ಮಗಳಿಗೆ ಸಿಕ್ಕಿತು ಅಂತ ಶಾರದೆ ಹಿಗ್ಗಿದ್ದಳು. ಹೆಜ್ಜೆಹೆಜ್ಜೆಗೂ 'ಸೂಳೆ ಸೂಳೆ' ಅಂತ ಮೂದಲಿಸಿಕೊಂಡೇ ಉಸಿರಾಡಿದ್ದ ಶಾರದೆಗೆ ತನ್ನ ಮಗಳು ಯಾವ ಮೈಲಿಗೆಯೂ ಇಲ್ಲದೆ ಗೃಹಿಣಿಯಾದದ್ದು, ಧರ್ಮಪತ್ನಿಯಾದದ್ದು ಇವೆಲ್ಲ ಬದುಕಿನಲ್ಲಿ ಅದೆಂಥದೋ ಹೊಸತನ ತಂದೊಡ್ಡಿತ್ತು. ದಣಿವಾಗುವಷ್ಟು ದುಡಿದರೂ ಲೆಕ್ಕಿಸದ ಶಾರಿ ರಾಜಿಯ ದಾಂಪತ್ಯಕ್ಕೆ ಒಂದು ಪುಟ್ಟ ಮನೆಯನ್ನೂ, ಬದುಕನ್ನೂ ಜೋಡಿಸಿಕೊಟ್ಟಳು.

* * *

(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x