ಬೆಳೆಯುವ ಸಿರಿ ಮೊಳಕೆಯಲ್ಲಿ: ಡಾ. ವಾಣಿ ಸುಂದೀಪ್


ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಮಕ್ಕಳ ಒಲವು ಯಾವ ಕಡೆ ಎಂಬುದು ಪೋಷಕರಿಗೆ ಮಕ್ಕಳು ಚಿಕ್ಕವರಿರುವಾಗಲೇ ಅರ್ಥವಾಗಬೇಕು.  ಮಕ್ಕಳನ್ನು ಬೆಳೆಸುವುದು, ಪಾಲಿಸುವುದು ಸುಲಭದ ಕೆಲಸವಲ್ಲ. ಮಕ್ಕಳ ಆಟ, ಹಟ, ನಗು, ಬಾಲ್ಯತನ ಎಲ್ಲವೂ ಹಿತ ನೀಡುತ್ತವೆ. ಆದರೆ ಮಕ್ಕಳ ಜವಾಬ್ದಾರಿಯ ವಿಚಾರ ಬಂದಾಗ ಎಲ್ಲ ತಂದೆ-ತಾಯಿಯರೂ ಜಾಗೃತರಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ, ಅದರ ಜೊತೆಗೆ ಹೊರ ಜಗತ್ತಿನ ಅನುಭವವನ್ನು ಮಾಡಿಸಬೇಕು. ಮಕ್ಕಳ ಆಸೆಗಳನ್ನೂ ಪೂರೈಸಬೇಕು. 

 ಮಗು ಹಠ ಮಾಡುತ್ತಿದೆ ಎಂದು ಕೈಲಾಗದ ವಸ್ತುಗಳನ್ನು ತರಲು ಸಾಧ್ಯವಿಲ್ಲ. ಮೊದಲನೆಯದಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಮುಖ್ಯ. ಅದರ ಜೊತೆಗೆ ಸರಿಯಾದ ಸಂಸ್ಕಾರ, ಜ್ಞಾನ, ತಿಳುವಳಿಕೆ ಕೂಡ ಬೇಕಾಗುತ್ತದೆ. ಮಕ್ಕಳು ಹೊರ ಜಗತ್ತಿಗೆ ಕಾಲಿಟ್ಟಾಗ ಅವರು ದಾರಿ ತಪ್ಪದಂತೆ ನಾವು ಕೊಟ್ಟ ಸಂಸ್ಕಾರ ದಾರಿದೀಪವಾಗಬೇಕು. ಮಕ್ಕಳಿಗೆ ಬುದ್ಧಿಮಾತು ಮತ್ತು ಜ್ಞಾನವನ್ನು ಪೋಷಕರು ಚಿಕ್ಕಂದಿನಿಂದಲೇ ಬೋಧಿಸಬೇಕು. ಇವೆಲ್ಲ ತಂದೆ-ತಾಯಿಯರ ಕರ್ತವ್ಯವಾಗಿದ್ದು ಇದರ ಬಗ್ಗೆ ಅವರ ಗಮನ ನಿರಂತರವಾಗಿರಬೇಕು. ಮಗು ಚಿಕ್ಕದಿರುವಾಗ ಕಾಳಜಿ, ಜಾಗೃತೆ ಸಹಜ. ಮಗು ದೊಡ್ಡದಾಗುತ್ತಿದ್ದಂತೆ ಸರಿ ತಪ್ಪುಗಳ ಪ್ರಜ್ಞೆ ಬರುವಂತೆ ಪೋಷಕರು ಪೂರಕವಾಗಬೇಕು. ಮಕ್ಕಳು ಹಟ ಮಾಡಿದರೆಂದು ಎಲ್ಲ ವಸ್ತುಗಳನ್ನು ಅವರಿಗೆ ನಿಲುಕುವಂತೆ ಮಾಡದಿರಿ. ಅವಶ್ಯಕ ವಸ್ತುಗಳನ್ನು ಮಾತ್ರ ಕೊಡಿಸಿ. ಶಾಲೆಯಲ್ಲಿ ಯಾರೋ ಹೊಸ ವಸ್ತು ತಂದರು, ಪಕ್ಕದ ಮನೆಯವರ ಹತ್ತಿರ ಇದೆ ಅಂತೆಲ್ಲ ಅನಾವಶ್ಯಕ ಪೂರೈಕೆ ಅಗತ್ಯವಿಲ್ಲ. ಹಾಸಿಗೆಯಿದ್ದಷ್ಟು ಕಾಲು ಚಾಚಿ. ಮಗುವಿಗೆ ಮನೆಯ ಸ್ಥಿತಿಗತಿಯ ಬಗ್ಗೆ ತಿಳುವಳಿಕೆ ಕೊಡಿ. ಮಗು ತಪ್ಪು ಮಾಡಿದ್ದರೆ ಬಯ್ಯಬೇಡಿ. ಆ ತಪ್ಪಿನ ಬಗ್ಗೆ ಕಲ್ಪನೆ ಕೊಟ್ಟು, ಚರ್ಚೆ ಮಾಡಿ, ಎಲ್ಲಿ ತಪ್ಪಾಗಿದೆ ಎಂದು ಅರ್ಥೈಸಿ. 

ಮಗುವನ್ನು ಯಾವುದೇ ವಿಷಯಕ್ಕೆ ಒತ್ತಾಯ ಮಾಡಬೇಡಿ. ಸಂಗೀತ ಕಲಿ ಅಂತಲೋ, ಆಡು ಅಂತಲೋ, ರಜೆಯಲ್ಲಿ ಈಜಾಡುವುದನ್ನು ಕಲಿ ಅಂತಲೋ ಮಗುವಿಗೆ ಒತ್ತಾಯ ಮಾಡದಿರಿ. ಮಗುವಿನ ಇಷ್ಟದ ಬಗ್ಗೆ ಗಮನವಿರಲಿ, ಚರ್ಚೆ ಮಾಡಿ ನಿರ್ಧರಿಸಿ. ಮಗುವಿನ ಬದುಕು ಸುಂದರಗೊಳ್ಳಲು ತಂದೆ ತಾಯಿಯರು ಕಾರಣ. ನೀನು ಪರೀಕ್ಷೆಯಲ್ಲಿ ಇಷ್ಟೇ ಅಂಕವನ್ನು ಪಡೆಯಬೇಕು ಎಂಬ ತಾಕೀತು, ಒತ್ತಡ ಮಾಡದಿರಿ. ಮಗುವಿನ ಭವಿಷ್ಯ ರೂಪಿಸಲು ಪೋಷಕರು ಸಹಾಯ ಮಾಡಬೇಕು. ವಾರಕ್ಕೊಮ್ಮೆ, ಇಲ್ಲ ಹದಿನೈದು ದಿನಗಳಲ್ಲಿ ಒಮ್ಮೆಯಾದರೂ ಮಕ್ಕಳ ಬಳಿ ಕುಳಿತು ಅವರ ಮನಸ್ಸನ್ನು ಅರಿಯಲು ಪ್ರಯತ್ನ ಮಾಡಿ. ಮಕ್ಕಳನ್ನು ಕಟ್ಟುನಿಟ್ಟುಗಳಲ್ಲಿ ಇಡಬೇಡಿ. ಅವರ ಮನಸ್ಸಿನ ಎಲ್ಲ ವಿಚಾರಗಳು ಹೊರಬರುವಂತೆ ಮನೆಯ ವಾತಾವರಣವಿರಬೇಕು. ಮಕ್ಕಳನ್ನು ಒಂಟಿಯಾಗಿ ಅಥವಾ ಪುನಃ ಪುನಃ ಬಿಡಬೇಡಿ. ಕೆಲವೊಮ್ಮೆ ಒಂಟಿತನದಿಂದ ಮನಸು ಕೆಡುವ ಸಾಧ್ಯತೆಗಳಿರುತ್ತದೆ. ಮಗುವಿನ ಪರಿವರ್ತನೆ, ಹಾವ-ಭಾವಗಳ ಮೇಲೆ ತಂದೆ-ತಾಯಿಯರು ಜಾಗೃತವಾಗಿರಬೇಕು. 

 ಹೊರದೇಶಗಳಲ್ಲಾದರೆ ಮಕ್ಕಳಿಗೆ ಪಠ್ಯೇತರ ವಿಷಯಗಳಿಗಿಂತ, ಪ್ರಾಯೋಜಿಕ ಕಲಿಕೆಗೆ ಮಹತ್ವ ನೀಡುತ್ತಾರೆ. ಇದರಿಂದ ಮಗು ತುಂಬಾ ಬೇಗ ಯಾವ ತೊಂದರೆಗೆ ಸಿಲುಕದೆ, ಬಹಳ ಸುಲಭವಾಗಿ ಕಲಿಯುತ್ತದೆ. ಕೆಲವು ಶಾಲೆಗಳಲ್ಲಿ ಮಕ್ಕಳು ಸ್ಮಾರ್ಟ್ ಬೋರ್ಡ್ ನಿಂದ ಪಾಠ ಕಲಿಯುತ್ತಾರೆ. ಮಗು ಕೇವಲ ಕೇಳುವುದರಿಂದ, ನೋಡುವುದರಿಂದ ಬಲು ಬೇಗ ಕಲಿಯುತ್ತದೆ ಎಂಬ ಪಠ್ಯಕ್ರಮ ಅಳವಡಿಸುತ್ತಾರೆ. ಮಕ್ಕಳ ಕಲಿಯುತ್ತಿರುವ ಶಾಲೆಯಲ್ಲಿ ಕೌನ್ಸಿಲರ್ ಗಳಿರುತ್ತಾರೆ. ಅವರು ಮಕ್ಕಳ ಜೊತೆ ಬೆರತು, ಎಲ್ಲ ವಿವರಣೆ ಪಡೆಯುತ್ತಾರೆ. ಮಕ್ಕಳ ಮಾನಸಿಕ ರೂಪದ ಪರಿಚಯ ಅವರಿಗೆ ಚೆನ್ನಾಗಿ ಇರುತ್ತದೆ. ಮಗು ಎಲ್ಲಾದರೂ ತಪ್ಪಿತೆಂದರೆ ಕೌನ್ಸಿಲರ್ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಾರೆ, ಇಲ್ಲಿ ಕೇವಲ ಪೋಷಕರ ಮತ್ತು ಶಿಕ್ಷಕರ ವಿಚಾರ ವಿನಿಮಯ ಮಾತ್ರವಲ್ಲ, ಪೋಷಕರಿಗೆ ತರಬೇತಿ ಕೂಡ ಕೊಡುತ್ತಾರೆ. ಮಕ್ಕಳ ಪ್ರಗತಿ, ಯಾವ ವಿಷಯದಲ್ಲಿ ಮಗು ಹಿಂದೆದೆ, ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದಕ್ಕೂ ವಿಚಾರ ವಿನಿಮಯ ನಡೆಯುತ್ತದೆ. ಎಲ್ಲ ತಂದೆ-ತಾಯಿಂದಿರು ಸೇರಿದಾಗ ಎಷ್ಟೋ ಹೊಸ ವಿಷಯಗಳ ಬಗ್ಗೆ ಅರಿವು ಮೂಡುತ್ತದೆ. ಹೊರದೇಶಗಳಲ್ಲಿ ನರ್ಸರಿ, EC-I , EC-II (EC ಎಂದರೆ Early Childhood) ನಂತರ KG ಕೇವಲ ಒಂದು ವರ್ಷ ಮಾತ್ರ ಓದಬೇಕು ಮೊದಲ ತರಗತಿಯಿಂದ ಐದನೆ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ. ಆರನೇ ತರಗತಿಯಿಂದ 10 ರ ವರೆಗೆ ಮಾಧ್ಯಮಿಕ ಶಿಕ್ಷಣವಿರುತ್ತದೆ. 8ನೇ ತರಗತಿಯಲ್ಲಿ ಚೆಕ್ ಪಾಯಿಂಟ್ ಎಂಬ ಪರೀಕ್ಷೆ ಮೈಲಿಗಲ್ಲಾಗಿದ್ದು, ಉತ್ತರ ಪತ್ರಿಕೆಗಳನ್ನು ಸಾಮಾನ್ಯವಾಗಿ ವಿಶ್ವವಿದ್ಯಾಲಯದಲ್ಲೇ ಮಾಲ್ಯಮಾಪನ ಮಾಡುತ್ತಾರೆ.

ಮಕ್ಕಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡಿದ ಮೇಲೆ ಮಕ್ಕಳ ಚಿಕ್ಕ ಹಾಗೂ ಸೂಕ್ಷ್ಮ ವಿಷಯದ ಬಗ್ಗೆ ಕೂಡ ನಮಗೆ ಮಾಹಿತಿ ಕೊಡುತ್ತಾರೆ. ಮಗು ಶಾಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದೋ, ಸಹಪಾಠಿಯ ಜೊತೆ ಗುರುಗಳ ಜೊತೆ ವರ್ತನೆ ಹೇಗಿದೆ, ಎಂಬ ವಿವರ ಕೊಡುತ್ತಾರೆ.  (ಇದರ ವಿವರ ಹೀಗಿರುತ್ತದೆ, Knowledgeable, Principled, thinker, reflective, Inquirer, Caring, Balanced, communicator, risk taker). ಇಂತಹ ಶಾಲೆಯಲ್ಲಿ ಡಾಕ್ಟರರು ಕೂಡ ಇರುತ್ತಾರೆ. ಪ್ರತಿಯೊಂದು ಮಗುವಿನ ಆರೋಗ್ಯದ ಬಗ್ಗೆ ಅವರಿಗೆ ಮಾಹಿತಿ ಇರುತ್ತದೆ. ಮಗು ಈಜುಕೊಳಕ್ಕೆ ಇಳಿಯಬೇಕಾದರೆ ಡಾಕ್ಟರರ ವಿವರಣೆಯ ಮೇರೆಗೆ ಶಿಕ್ಷಕರು ನಿರ್ಧಾರ ಮಾಡುತ್ತಾರೆ. ಇಷ್ಟೇ ಅಲ್ಲದೆ ಮಗುವಿನ ಊಟ ತಿಂಡಿಗಳ (diet) ಬಗ್ಗೆ ಮಾಹಿತಿ ನೀಡುತ್ತಾರೆ. ಡಯಟ್ ಚಾರ್ಟ್ ಪ್ರಕಾರ ಊಟ ತಿಂಡಿ ಕಳಿಸಬೇಕಾಗುತ್ತದೆ. ಮನೆಯಲ್ಲಿ ಊಟ ಮಾಡದ ಮಗು ಶಾಲೆಯಲ್ಲಿ ಚೆನ್ನಾಗಿ ತಿಂದುಂಡು ಬಂದರೆ ಎಷ್ಟು ಆನಂದವಲ್ಲವೆ ?

ಶಾಲೆಯಲ್ಲಿ ನೃತ್ಯ, ಸಂಗೀತ, ಗಾಲ್ಫ್, ಲೊಂಗ್ ಟೆನಿಸ್ ಬಾಸ್ಕಟ್ ಬಾಲ್, ಶಟಲ್, ಟೇಬಲ್ ಟೆನಿಸ್ ಎಲ್ಲ ವಿಧದ ಆಟಗಳು ಲಭ್ಯವಿರುತ್ತದೆ. ತಿಂಗಳಿಗೊಮ್ಮೆ ಮಕ್ಕಳನ್ನು ಫೀಲ್ಡ್ ವರ್ಕ್ ಗೆ ಕರೆದೊಯ್ಯುತ್ತಾರೆ. ಈ ಶಾಲೆಯಲ್ಲಿ ಮಕ್ಕಳ ಬದಲಾವಣೆ (ಸ್ಟೂಡೆಂಟ್ ಎಕ್ಸ್ ಚೇಂಜ್) ಕಾರ್ಯಕ್ರಮ ನಡೆಯುತ್ತದೆ. ಒಂದು ವಾರ ಅಥವಾ ದೊಡ್ಡ ಮಕ್ಕಳಿಗೆ ಒಂದು ತಿಂಗಳವರೆಗೆ ಈ ಕಾರ್ಯಕ್ರಮವಿರುತ್ತದೆ. ಬೇರೆ ದೇಶದಿಂದ ಮಕ್ಕಳು ಬರುತ್ತಾರೆ. ಅವರ ಜೊತೆಗೆ ಮಕ್ಕಳು ಬೆರತು ಎಲ್ಲ ವಿಷಯದ ಬಗ್ಗೆ ವಿಷಯದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಈ ರೀತಿಯ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ, ಅದರ ಜೊತೆಗೆ ಸರಿಯಾದ ದಿಶೆಯಲ್ಲಿ ಶಾರೀರಿಕ ಮತ್ತು ಮಾನಸಿಕ ವಿಕಾಸವಾಗುತ್ತದೆ.

ನನ್ನ ಪ್ರಕಾರ ಮಕ್ಕಳಿಗೆ ಅನಾವಶ್ಯಕ ಖರ್ಚುವೆಚ್ಚಗಳನ್ನು ಕಡಿಮೆ ಮಾಡಿ ಉತ್ತಮ ಶಾಲೆಗಳಿಗೆ ಸೇರಿಸಬೇಕು  ಇತ್ತೀಚೆಗೆ ಭಾರತದ ದೊಡ್ಡ ನಗರಗಳಲ್ಲಿ ಈ ವಿಧದ ಶಾಲೆಗಳು ಕಾಣಿಸಿಕೊಂಡಿವೆ. ಆದರೆ ಇದು ಬಡವ ಹಾಗೂ ಮಧ್ಯಮ ವರ್ಗದ ಜನರಿಗೆ ನಿಲುಕದ ಕನಸು. ಎಲ್ಲಾ ಶಾಲೆಯಲ್ಲಿ ಈ ರೀತಿಯ ಉತ್ತಮ ಸೌಲಭ್ಯವಿದ್ದರೆ ಸರಿ, ಇಲ್ಲವಾದರೆ ಮಕ್ಕಳ ಬಗ್ಗೆ ಪೋಷಕರೇ ಕಾಳಜಿವಹಿಸಬೇಕು. ಪೋಷಕರ ನಿಶ್ಕಾಳಜಿ ಹಾಗೂ ಆಗಾಧ ಪ್ರೀತಿ ಎರಡೂ ಮಕ್ಕಳನ್ನು ದಾರಿ ತಪ್ಪಿಸುತ್ತವೆ. ತಂದೆ ತಾಯಿಯರ ಮನೋಭಾವ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹೀಗಾಗಿ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಲು, ನಮ್ಮ ಕನಸನ್ನು ನನಸಾಗಿಸಲು ಪೋಷಕರು ಮಕ್ಕಳ ದೈಹಿಕ ಮತ್ತು ಮಾನಸಿಕ ವ್ಯಕ್ತಿತ್ವದ ಬಗ್ಗೆ ಪ್ರಾರಂಭದಿಂದಲೇ ಕಾಳಜಿವಹಿಸಬೇಕು.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Dr Sundeep Bhagwath
Dr Sundeep Bhagwath
10 years ago

A useful informative article on the status of IB education and curriculum in India. Good work, keep it up!

Nalini Somayaji
Nalini Somayaji
10 years ago

ಲೇಖನ ತುಂಬಾ ಚೆನ್ನಾಗಿದೆ ಡಾ.ವಾಣಿ..ಜನರು ಅರಿತು ನಡೆದರೆ  ಒಳ್ಳೆಯದು. 

B.Narasinga Rao
B.Narasinga Rao
10 years ago

Article is good.. a sort of dos & donts 4 d parents on how 2 bring up the children basing on d experience of d author particularly in d country she is stationed @

amardeep.p.s.
amardeep.p.s.
10 years ago

ಮಕ್ಕಳ ಬೆಳವಣಿಗೆಯ ಹಂತದಲ್ಲಿ ತೆಗೆದುಕೊಳ್ಳಬೇಕಾದ/ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಸರಿಯಾಗಿ ವಿವರಿಸಿದ್ದೀರಿ.  ಚೆನ್ನಾಗಿದೆ ನಿಮ್ಮ ಲೇಖನ…

suma
suma
10 years ago

ಮುಖ್ನ ತಂದೆ-ತಾಯಿಯರಿಗೆ ತಿಳುವಳಿಕೆ ಬೇಕು. ಬರೀ ಸ್ಪರ್ಧೆಗೆ ಬಿದ್ದವರಂತೆ ವರ್ತಿಸುವುದು, ಮಕ್ಕಳನ್ನು ಹಿಂಸಿಸುವುದು ಸರಿಯಲ್ಲ. ಮಕ್ಕಳಿಗೂ ಸ್ವಂತ ಅಭಿಪ್ರಾಯವಿರುತ್ತದೆ. ಅದನ್ನು ಗೌರವಿಸಿದರೆ ಮಕ್ಕಳೂ ಸಹ ತಿಳಿದುಕೊಳ್ಳುತ್ತಾರೆ. ಅವರ ಇಚ್ಛೆಯನ್ನ ಅರಿತು ಮುಂದುವರಿದರೆ ಹಿತ.
ಲೇಖನ ಉತ್ತಮವಾಗಿದೆ. ಧನ್ಯವಾದಗಳು

Mahantesh Yaragatti
Mahantesh Yaragatti
10 years ago

makkal bagge  poshakarige arivu mudisidri. olley lekhan madam…………….

Dr Vani Sundeep
Dr Vani Sundeep
10 years ago

Tamagellarigoo Dhanyavadagalu.

Sheshadri
Sheshadri
9 years ago

ಲೇಖನ ಪೋಷಕರ ಮನದಟ್ಟುವಂತೆ ಇದೆ. ಇಂದಿನ ಮಕ್ಕಳು ಪರಿಸರದಿಂದಲೇ ಹೆಚ್ಚಿನ ಜ್ಞಾನವನ್ನು ಪಡೆದುಕೊಂಡಿರುತ್ತಾರೆ. ಅವರಿಗೆ ಉತ್ತಮ ದಾರಿ ತೋರಿಸುವುದು ಪೋಷಕರ ಜವಾಬ್ದಾರಿ. ಮಕ್ಕಳ ಬೇಕು ಬೇಡಗಳನ್ನು ಅರಿತು ಅವರನ್ನು ಕೆಲವು ಸಾರಿ ಸ್ನೇಹಿತರಂತೆ ಕಂಡು ಅವರ ಮನಸ್ಸನ್ನು ಪ್ರತೀಯಿಂದ ಗೆದ್ದು ಅವರ ತಪ್ಪುಗಳನ್ನು ಸರಿ ಪಡಿಸಿ ಒಳ್ಳಯ ದಾರಿ ತೋರಿಸಿದ್ದಲ್ಲಿ ಖಂಡಿತವಾಗಿ ದೇಶದ  ಆಸ್ತಿಯಾಗಿವುದರಲ್ಲಿ ಸಂದೇಹವೇ ಇಲ್ಲ.

8
0
Would love your thoughts, please comment.x
()
x