ಕೆಂಗುಲಾಬಿ (ಭಾಗ 15): ಹನುಮಂತ ಹಾಲಿಗೇರಿ

 
 
ಇಳಿಸಂಜೆಯ ಹೊತ್ತು ನಾನು ಮತ್ತು ದೀಪಾ ಮೆಜೆಸ್ಟಿಕ್ ಹತ್ತಿರಕ್ಕೆ ಬಂದಿದ್ದೆವು. ಶಾರಿ ಇಲ್ಲಾದರೂ ಸಿಗಬಹುದೆ ಎಂಬ ದೂರದ ನಿರೀಕ್ಷೆಯೊಂದಿಗೆ. ಅಲ್ಲೆಲ್ಲ ಅಸಂಖ್ಯಾತ ದಂಧೆಯ ಮಹಿಳೆಯರು. ಯಾರೋ ದೀಪಾಳ ಹೆಸರು ಹಿಡಿದು ಕೂಗಿದಂತಾಯಿತು. ಹಿಂದೆ ತಿರುಗಿ ನೋಡಿದರೆ ಬಾಯ್ತುಂಬ ನಗುತ್ತಾ ಒಬ್ಬಾಕೆ ಹತ್ತಿರ ಬಂದು ದೀಪಾಳ ಮುಂದೆ ಬಂದು ನಿಂತಳು. ದೀಪಾ ಕೂಡ ಅವಳನ್ನು ಮೀರಿಸುವಂತೆ ನಕ್ಕು ಆತ್ಮೀಯತೆಯಿಂದ ಅವಳ ಕೈ ಹಿಡಿದುಕೊಂಡಳು. ‘ಇವಳು ಮಂಜುಳಾ ಅಂತ. ನಮ್ಮ ಸಂಸ್ಥೆಯಿಂದ ಆರೋಗ್ಯ ಕುರಿತು ತರಬೇತಿ ಆದಾಗ ಭಾಗವಹಿಸಿದ್ದಳು' ಎಂದು ನನಗೆ ಪರಿಚಯಿಸಿದಳು. ನಾನು ‘ಇಲ್ಲಿ ಶಾರದಾ ಅನ್ನೋರು ದಂಧೆ ಮಾಡ್ತಾ ಇದ್ದಾರಾ' ಎಂದು ಅತ್ಯವಸರದಲ್ಲಿ ಕೇಳಿದೆ. ಆಕೆ ಇಲ್ಲಿ ‘ಶಾರದಾ ಅನ್ನೋರು ಯಾರು ಇಲ್ವಲ್ಲ’ ಎಂದಳು. ಆಗ ದೀಪಾ ನಸುನಕ್ಕು 'ಇಲ್ಲಿ ಯಾರು ಒಂದೇ ಹೆಸರಿನಲ್ಲಿ ದಂದೆ ಮಾಡೋದಿಲ್ಲ ಸರ್' ಎಂದು ಹೇಳಿ ದಂಧೆಯ ಗುಟ್ಟನ್ನು ನೆನಪಿಸಿದಳು. ನನಗೆ ಹೌದಲ್ವಾ ಅನಿಸಿತು.
 
ಬಸ್‍ಸ್ಟಾಂಡ್ ತುಂಬ ತರಾವರಿ ಜನ ಸೀರೆಗಳ, ಚೂಡಿದಾರಗಳು, ಮಿಡಿಗಳು, ಮ್ಯಾಕ್ಸಿಗಳ ಮೈ ಮಾರುವ ಮಹಿಳೆಯರು, ಅವರಿಗೆದುರುಗಡೆಯ ಪಕ್ಷದಲ್ಲಿ ಕ್ಯಾಷ್ ಬ್ಯಾಗುಗಳ, ಬ್ರೀಫ್ ಕೇಸುಗಳ, ತುಂಬಿದ ಜೇಬುಗಳ, ಷರ್ಟ್ ಪ್ಯಾಂಟುಗಳ ಪೈಜಾಮ್ ಜುಬ್ಬಗಳ ಬಿಳಿತಲೆಯ, ಕರಿತಲೆಯ, ಬೋಳುತಲೆಯ, ಮೂವತ್ತರಿಂದ ಅರವತ್ತರವರೆಗೆ ವಯಸ್ಸಿನ ಜನ ಬಂದು ಅಲ್ಲಲ್ಲೇ ನಿಲ್ಲತೊಡಗಿದರು. ಅವರನ್ನು ದಿಟ್ಟಿಸಿ ನೋಡಿದೆ. ನಗರದ ಥಳಕಿರುವ, ಹಳ್ಳಿಯ ಛಾಪಿರುವ, ಭಾರಿ ಮೈಕಟ್ಟಿನ, ನರಪೇತಲನಂತಿರುವ, ಹುಸಿನಗೆಯ, ನಸುನಗೆಯ ನೂರಾರು ಜನ ಪುರುಷ ದೇಹಗಳು.
 
 ಬೇರೆ ಬೇರೆ ಬಡಾವಣೆಗಳಿಗೆ ಹೋಗಲೆಂದು ಕಾದವರು, ಮುಂಜಾವದಿಂದ ಸಂಜೆವರೆಗೆ ದುಡಿದು ಹೈರಾಣಾಗಿ ಗೂಡು ಸೇರಿದರೆ ಸಾಕೆಂದು ಕಾತರಿಸುವವರು, ಅವರನ್ನೆಲ್ಲ ನೋಡುತ್ತಾ ಕೂತಿದ್ದೆವು. ಅಷ್ಟು ಹೊತ್ತಿಗೆ ಗಿರಾಕಿಯೊಬ್ಬ ಮಂಜಳಾಳಿಂದ ಸ್ವಲ್ಪ ದೂರದಲ್ಲಿ ನಿಂತುಕೊಂಡು ದುರುಗುಟ್ಟುತ್ತಿದ್ದ. ಮಂಜುಳಾ ಕಣ್ಣುಗಳು ಅವನಿಗೆ ಡಿಕ್ಕಿ ಹೊಡೆದಾಗ ನೇರವಾಗಿ ನೋಡಿ ಸಣ್ಣಗೆ ನಕ್ಕ. ಇವಳು ಅವನತ್ತಲೇ ನೋಡುತ್ತಿದ್ದಾಳೆಂಬುದು ಅರಿವಾದೊಡನೆ ಕೈ ಮೇಲೆತ್ತಿ ಎದೆ ಮಟ್ಟಕ್ಕೆ ತಂದು ನಾಲ್ಕು ಬೆರಳುಗಳನ್ನು ಬಿಡಿಸಿ, ಹೆಬ್ಬೆರಳು ಮಾಡಿಸಿದ. ಮಂಜುಗೆ ಅದು ತಕ್ಷಣ ಅರ್ಥವಾಯಿತು. 
 
 ‘ನಾಲ್ಕು ನೂರ್ಕೆ ಕರಿತಾ ಇದ್ದಾ ಮೇಡಂ ಹೋಗ್ಲಾ’ ಎಂದು ಮಂಜುಳಾ ನಸು ನಗುತ್ತಾ ಕೇಳಿದ್ಲು. ‘ಹೋಗು ಮತ್ತೆ ಸಿಕ್ಕ ಚಾನ್ಸ್ ಯಾಕೆ ಕಳಕೊಳ್ತಿಯಾ’ ಎಂದು ದೀಪಾ ಉತ್ತರಿಸಿದಳು. ‘ಅಯ್ಯೋ ಮೇಡಂ ದಿನ ಇದ್ದದ್ದೆ ಗೋಳು. ಬಾಳ ದಿನದ ನಂತ್ರ ನೀವು ಸಿಕ್ಕಿದ್ದೀರಿ.’ ಎಂದು ನಮ್ಮ ಪಕ್ಕವೇ ನಿಂತುಕೊಂಡಳು. 
 
ಅಲ್ಲೊಂದು ಇಲ್ಲೊಂದು ಹುಡುಗಿಯರು ಎಂದಿನಂತೆ ಶೃಂಗರಿಸಿಕೊಂಡು ಬಂದು ತಮ್ಮ ಮಾಮೂಲಿ ಸ್ಥಳಗಳಲ್ಲಿ ಬಂದು ನಿಲ್ಲಲು ಶುರುವಾದೊಡನೆ ಗಿರಾಕಿಗಳು ಬರುವುದು ಆರಂಭವಾಯಿತು. ದೀಪಾ ಮತ್ತು ನಾನು ಅವರಿಂದ ಸ್ವಲ್ಪ ದೂರದಲ್ಲಿ ನಿಂತಿದ್ದೆವು. ದೀಪಾ ಹೇಳುತ್ತಿದ್ದಳು. ‘ಹೀಗೆ ಬೆರಳಿನ ಮೂಲಕ ರೇಟ್ ಒಪ್ಪಿಗೆಯಾದ್ರೆ ಓಕೆ ಸಿಗ್ನಲ್ ಕೋಡ್ತಾರೆ. ಆಮೇಲೆ ಹೋಟೇಲ್‍ನಲ್ಲಿ ಕೂತು ಕಾಫಿ ಕುಡೀತಾ ಕಂಡೀಶನ್ ಮಾತಾಡ್ತಾರೆ. ಗಂಟೆಗಾದರೆ ಒಂದು ರೇಟ್, ಇಡೀ ರಾತ್ರಿಗಾದರೆ ಒಂದು ರೇಟು. ನೂರರಿಂದ ಸಾವಿರದವರೆಗೂ ರೇಟಿರುತ್ತೆ. ರಾತ್ರಿಯಲ್ಲ ಜತೆಗಿದ್ರೆ ಬೆಳಿಗ್ಗೆ ಮನೆಗೆ ಹೋಗತ್ತಾರೆ. ಇಲ್ಲದಿದ್ರೆ ರಾತ್ರಿ ಹನ್ನೆರಡು ಒಂದರವರೆಗೆ ಅದೆಷ್ಟು ಗಿರಾಕಿಗಳು ಸಿಗ್ತಾರೋ ಅವರನ್ನು ಸಂಭಾಳಿಸಿ ಆಟೋದಲ್ಲೋ ಬಸ್ಸಿನಲ್ಲೋ ಮನೆಗೆ ಹೋಗತ್ತಾರೆ. ಮನೆಗೆ ಹೋಗಿ ಹೊಟ್ಟೆಗೊಂದಿಷ್ಟು ಊಟ, ಸುಸ್ತಾದರೆ ಕುಡಿತ. ಕೆಲವೊಮ್ಮೆ ಗಿರಾಕಿಗಳ ಜತೆ ಕುಡಿಯೋದು ಇರುತ್ತೆ' ಅಂತ ವಿವರ ಹೇಳಲು ಶುರುಮಾಡಿದಳು.
 
ಕೇಳುತ್ತಾ ಹೋದ ಹಾಗೆ ಯಾಕೋ ಮನಸ್ಸು ಭಾರವಾಯಿತು. ಇದೆಂಥ ಬದುಕು ಅಂದುಕೊಂಡೆ. ಕತ್ತಲು ದಟ್ಟವಾಗಿ ಸುರಿಯತೊಡಗಿತು. ಅಷ್ಟರಲ್ಲಿ ದೀಪಾ ನನ್ನನ್ನು ತಟ್ಟಿ ಎಚ್ಚರಿಸಿ 'ಅವಳನ್ನು ಮಾತಾಡಿಸ್ತಿರಾ ಸರ್' ಅಲ್ಲೊಂದು ಕಡೆ ಕೈ ಮಾಡಿ ತೋರಿಸಿದಳು. ಅವಳು ತೋರಿದವಳತ್ತ ನೋಡಿದೆ. ಅಲ್ಲೊಬ್ಬಳು ಜೀನ್ಸ್ ಪ್ಯಾಂಟು, ತೆಳು ನೀಲಿ ಶರ್ಟ್ ತೊಟ್ಟುಕೊಂಡು 'ಯು' ಶೇಪಿನ ಕೂದಲನ್ನು ನೀಟಾಗಿ ಇಳಿಬಿಟ್ಟು, ಲೇದರ್ ಹಿಲ್ಡ್ ಶೂ ಹಾಕಿಕೊಂಡು ಕೂತಿದ್ಲು. ಕೈಯಲ್ಲಿ ಇಂಗ್ಲಿಷ್ ವಾರಪತ್ರಿಕೆಯೊಂದನ್ನು ಹಿಡಿದುಕೊಂಡಿದ್ದಳು. ಶ್ರೀಮಂತರ ಮನೆ ಹುಡುಗಿಯಂತೆ ಕಾಣಿಸುತ್ತಿದ್ದಳು.
 
 ಮಂಜುಳಾ ಒಂದಿಷ್ಟು ಹೊಟ್ಟೆಕಿಚ್ಚು ಬೇರೆತ ದ್ವನಿಯಲ್ಲಿ ಹೇಳಿದಳು. 'ಅವಳ ರೇಟೇಷ್ಟು ಗೊತ್ತೆ? ಗಂಟೆಗೆ ಒಂದು ಸಾವಿರ. ಅವಳಿಗೆ ಕಾರಿದ್ದವರೇ ಬೇಕು. ಅದಕ್ಕೆ ಇಷ್ಟೊಂದು ಮೇಕಪ್. ಮೊದಲು ಬಂದಾಗ ಈ ನಾಜೂಕೆಲ್ಲ ಇರಲಿಲ್ಲ. ಈಗ ಮೈಕಟ್ಟು ರೇಟು ಎಲ್ಲ ಹೆಚ್ಚಿಸಿಕೊಂಡಿದ್ದಾಳೆ ಎದೆ ಸೈಜ್ ಹೆಚ್ಚಿಸಿಕೊಳ್ಳಲಿಕ್ಕೆ ವಾರಕ್ಕೆ ಸಾವಿರಾರು ರೂ. ಔಷಧಿ ತೊಗೊತಾಳೆ.' ಎಂದು ಮೂಗು ತಿರುವುತ್ತಲೇ ಹೇಳಿದಳು. ಮಂಜುಳ ಮಾತು ಮುಗಿಸುವಷ್ಟರಲ್ಲೇ ಒಬ್ಬ ಸಿರಿವಂತ ಬಂದು ಅವಳನ್ನು ಕರೆದುಕೊಂಡು ಹೊರಟದ್ದು ಕಾಣಿಸಿತು.
 
  ‘ಅಲ್ಲಿ ಮೂಲೆಯಲ್ಲಿ ನಿಂತಿದ್ದಾಳಲ್ಲಾ ಸರ್, ಅವಳು ಬೇಕಾದರೆ ಎಷ್ಟು ಕೊಟ್ಟರೂ ಬರತಾಳೆ. ಆದರೆ ಹುಡುಗ ನೋಡಲಿಕ್ಕೆ ಹ್ಯಾಂಡಸಮ್ ಆಗಿರಬೇಕಷ್ಟೆ’ ಎಂದು ಇನ್ನೊಂದು ಮೂಲೆಯಲ್ಲಿ ನಿಂತಿದ್ದ ಆಂಟಿಯೊಬ್ಬಳನ್ನು ತೋರಿಸಿದ ಮಂಜುಳಾ ಕಿಸಿ ಕಿಸಿ ನಕ್ಕಳು. ನನಗೆ ಆಕೆಯ ಮಾತಿನ ತಳಬುಡ ಅರ್ಥವಾಗದೆ ಮಿಕಿ ಮಿಕಿ ಅವಳ ಮುಖವನ್ನೆ ನೋಡಿದೆ. ‘ಹಂಗ ನೋಡಿದರೆ ಇಂಥವರು ದಿನಾಲೂ ಬರೂದಿಲ್ಲ ಸರ್. ಯಾವತ್ತೊ ಒಂದಿನ ಬರ್ತಾರೆ. ಇವರಿಗೆ ಚಂದನ ನೌಕ್ರಿ ಮಾಡುವ ಗಂಡ, ಮಕ್ಕಳು ಎಲ್ಲ ಇರ್ತಾರೆ. ಆದ್ರೆ ಮುಖ್ಯವಾಗಿ ಗಂಡ ಕೊಡೋ ಸುಖದಿಂದ ಇವರಿಗೆ ತೃಪ್ತಿ ಆಗಿರೋದಿಲ್ಲ. ಅದರಲ್ಲಿ ಗಂಡನ ತಪ್ಪೋ ಇಕೆ ತಪ್ಪೋ ಗೊತ್ತಿಲ್ಲ. ಒಟ್ಟಿನಲ್ಲಿ ಈಕೆ ಸುಖ ಹುಡ್ಕೊಂಡು ವಾರಕ್ಕೊಮ್ಮೆಯಾದರೂ ಹೀಗೆ ಬೀದಿಗೆ ಬರ್ತಾಳೆ. ಕೆಲವೊಮ್ಮೆ ಗಿರಾಕಿಗಳಿಗೆ ತಮ್ಮ ಕೈಯಿಂದನ ರೊಕ್ಕ ಕೊಡ್ತಾಳೆ. ಏನೆಯಾದರೂ ಒಟ್ಟಿನಲ್ಲಿ ಇಥವರಿಂದ ನಮ್ಮ ದಂದೆ ಡಲ್ಲು ಹೊಡಿತದೆ' ಎಂದು ಅವಳು ಬೇಸರದಿಂದ ಮಾತು ಮುಗಿಸಿದಳು.
 
ನಾವು ನಮ್ಮ ವಾಸಸ್ಥಳಗಳತ್ತ ಹೋಗಲು ಇನ್ನೇನು ಕಾಲ್ಕೀಳಬೇಕೆಂದುಕೊಂಡು ಬಸ್ ನಿಲ್ದಾಣವನ್ನು ಒಂದು ರೌಂಡ್ ಹೊಡೆಯುತ್ತಾ ಮುನ್ನಡೆದೆವು. ಅಲ್ಲೊಂದು ಮೂಲೆಯಲ್ಲಿ ಮಾಸದ ಸೀರೆಗಳನುಟ್ಟ 15ರಿಂದ 35ರ ವಯಸ್ಸಿನ ಹಳ್ಳಿ ಹುಡುಗಿಯರ ಗುಂಪಿತ್ತು. ಅವರ ದೀಪಾ ಅವರ ಕಡೆ ತೋರಿಸುತ್ತಾ, ಬೆಂಗಳೂರು ಹತ್ತಿರದ ಹಳ್ಳಿಯವರು ಸರ್. ಯಾವದೋ ಒಂದು ಕೆಲಸದ ಹೆಸರು ಹೇಳಿ ದಿನ ಮುಂಜಾನೆ ಚನ್ನಾಗಿ ಮೇಕಪ್ ಮಾಡಿಕೊಂಡು ಇಲ್ಲಿಗೆ ಬರುತ್ತಾರೆ. ಸಾದ್ಯವಾದಷ್ಟು ಮೈಮಾರಿ ದುಡಿದುಕೊಂಡು ರಾತ್ರಿ ಹೀಗೆ ಬಸ್ ಹಿಡಿದುಕೊಂಡು ಮತ್ತೆ ಹೀಗೆ ಹಳ್ಳಿಗೆ ಮರಳತಾರೆ. ಮೊದಲೆಲ್ಲ ಇವರಗೆ ಜಮೀನು, ತೋಟ ಎಲ್ಲವೂ ಇದ್ವಂತೆ. ಈಗ ಎಲ್ಲಾನೂ ನಗರೀಕರಣದ ಜಾಲಕ್ಕೆ ಸಿಕ್ಕಿ ಮಾರಾಟವಾದ್ದರಿಂದ ಬೇರೆ, ಕೆಲಸ ಗೊತ್ತಿಲ್ಲದೆ ಈಗ ಹೀಗೆ ಬೀದಿ ಪಾಲಾಗಬೇಕಾಗಿ ಬಂದಿದೆ. ದೀಪಾ ಹೇಳುತ್ತಲೆ ಇದ್ದಳು. ನನ್ನ ಕಿವಿಯ ಸಂವೇದನೆಯನ್ನೆ ಕಡೆಗಣಿಸಿದಂತೆ.
* * *
 
ನಾವು ಮಂಜುಳಿಂದ ಬೀಳ್ಕೊಂಡು ವ್ಯಾನ್ ಹತ್ತಿ ಬಸ್ ನಿಲ್ದಾಣದಿಂದ ಹೊರ ಬರುತ್ತಿದ್ದಾಗ ಹೊರಗಡೆ ಒಂದೆರಡು ಕಾರುಗಳು ನಿಂತಿದ್ದವು. ಕಾರುಗಳ ಪಕ್ಕದಲ್ಲಿ ಚನ್ನಾಗಿ ಮೇಕಪ್ ಮಾಡಿಕೊಂಡು, ಮುಖಕ್ಕೆ ಗಾಗಲ್, ಮೈಯಿಗೆ ಬಿಗಿಯಾದ ಟೀ ಶರ್ಟ, ಜೀನ್ಸ್ ಪ್ಯಾಂಟು ಹಾಕ್ಕೊಂಡಿದ್ದ ಹುಡುಗರು ಯಾರಿಗೋ ಕಾಯುತ್ತ ನಿಂತಿದ್ದರು. ನಾನು ಅವರತ್ತ ನೋಡುತ್ತಿದ್ದುದನ್ನು ಗಮನಿಸಿದ ದೀಪಾ ಅವರು 'ಮೇಲ್ ಪ್ರಾಸ್ಟಿಟೂಟ್ಸ್' ಸರ್. ವಿದೇಶಗಳಿಂದ ನಮ್ಮ ದೇಶಕ್ಕೂ ತನ್ನ ಬಾಹುಗಳನ್ನು ಚಾಚಿರುವ 'ಸೆಕ್ಸ್ ಟೂರಿಜಮ್' ಎಂಬುದು ಇಲ್ಲಿಯೂ ನಿಧಾನಕ್ಕೆ ಬೇರು ಬೀಡ್ತಾ ಇದೆ. ಹೊರದೇಶಗಳ ಸೆಕ್ಸ್ ಟೂರಿಜಂ ಸಂಸ್ಥೆಯೊಂದರ ನೌಕರರು ಸರ್ ಇವರೆಲ್ಲ. ಬಹುರಾಷ್ಟ್ರೀಯ ಕಂಪನಿಗಳ ಕೆಲಸದ ನಿಮಿತ್ತ ಇಲ್ಲಿಗೆ ಬರುವ ವಿದೇಶಿ ಹೆಣ್ಣು -ಗಂಡುಗಳು ದೇಹ ತೀಟೆಗೆ ಇವರನ್ನು ಬಳಸಲಾಗುತ್ತೆ.
 
ಗಂಡುಗಳೊಂದಿಗೆ ಬೆರೆಯುವಾಗ 'ಗೇ' ಆಗಿ, ಹೆಣ್ಣುಗಳನ್ನು ರಮಿಸುವಾಗ ಗಂಡು ಸೂಳೆಯರಾಗಿ ಇವರು ಕೆಲಸ ಮಾಡುತ್ತಾರೆ. ಪಾಪ, ಅಲ್ಪ ಸ್ವಲ್ಪ ಕಲಿತು ಬಡತನವನ್ನು ಎದುರಿಸಲು ಹಳ್ಳಿಗಳಿಂದ ಪೇಟೆಗೆ ಬರುವ ಈ ಹುಡುಗರು ಇಲ್ಲಿ ಸಿಗಬಾರದವರ ಕೈಗೆ ಸಿಕ್ಕು ಇಂಥ ಸಂಸ್ಥೆಗಳ ಪಾಲಾಗುತ್ತಾರೆ. ಎಂದು ದೀಪಾ ಅವರ ಬಗ್ಗೆ ಮಾಹಿತಿ ನೀಡಿದಳು. ನನಗೆ ಕುತೂಹಲ ತಡೆಯದಾಯಿತು. ನಾನು ಸ್ವಲ್ಪ ಅವರೊಂದಿಗೆ ಮಾತಾಡಬೇಕು ಎಂದು ದೀಪಳಿಗೆ ಹೇಳಿದೆ. ದೀಪ ಕೆಳಗಿಳಿದು ತನಗೆ ಪರಿಚಯ ಇದ್ದವನೊಬ್ಬನನ್ನು ವ್ಯಾನ ಹತ್ತಿರ ಕರೆತಂದಳು. 
 
‘ಇವನು ರಂಜನ್ ಅಂತ ಸರ್. ಇವನಿಗೆ ನಿಮ್ಮ ಬಗ್ಗೆ ಹೇಳಿದ್ದಿನಿ.’ ಎಂದು ನೋಡಲಿಕ್ಕೆ ತೆಳ್ಳಗೆ ಬೆಳ್ಳಗೆ ಇದ್ದ ಹುಡುಗನನ್ನು ಕರೆ ತಂದು ಪರಿಚಯಿಸಿದಳು. ಆ ಹುಡುಗ ಮೊದಲಿಗೆ ಸಂಕೋಚ ಪಟ್ಟುಕೊಂಡರೂ ನಿಧಾನಕ್ಕೆ ತನ್ನನ್ನು ತಾನು ತೆರೆದುಕೊಳ್ಳುತ್ತಾ ಹೋದ.
"ನಾನು ಚಿಕ್ಕಮಗಳೂರಿನ ಒಂದು ಹಳ್ಳಿಯವನು ಸರ್. ಎಸ್ಸೆಸ್ಸಲ್ಸಿ ಎರಡು ಸಲ ಡುಮ್ಕಿ ಹೊಡೆದು ಮೂರನೆ ಸಲ ಪಾಸು ಮಾಡ್ಕೊಂಡೆ. ಮುಂದೆ ಓದಲಿಕ್ಕೆ ಮನೆಯಲ್ಲಿ ತ್ರಾಣ ಇರಲಿಲ್ಲ. ಅಪ್ಪ ಕುಡುಕ. ಅವ್ವಳೆ ನನ್ನನ್ನು ಕಷ್ಟ ಪಟ್ಟು ಓದಿಸಿದ್ದಳು. ನಾನು ಬೆಂಗಳೂರಿಗೆ ಬಂದು ಪ್ಯಾಕ್ಟರಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಾಯಿತು. ಅವರು ಕೋಡೋ ಮೂರ್ನಾಲ್ಕು ಸಾವಿರ ಈ ಸಿಟಿಯಲ್ಲಿ ಯಾವುದಕ್ಕೆ ಸಾಲಬೇಕು ಸರ್. ಪ್ಯಾಕ್ಟರಿಯಿಂದ ಪ್ಯಾಕ್ಟರಿಗೆ ಕೆಲಸ ಬದಲಾಯಿಸಿ ಸಂಬಳ ಜಾಸ್ತಿಯಾಗುತ್ತಾ ನೋಡಿದೆ. ಎಲ್ಲೆ ಹೋದರೂ ಆದೆ ಹಣೆ ಬರಹ.
 
 ನಮ್ಮ ರೂಮೆಂಟ್ ಒಬ್ಬ ಇದ್ದ ಮುನಿಸ್ವಾಮಿ ಅಂತ. ನೋಡಲಿಕ್ಕೆ ಕಣ್ಣು ಮೂಗಿಲೆ ಲಕ್ಷಣವಾಗಿದ್ದ. ನಮ್ಮ ಕೂಡ ಇರುವಷ್ಟು ದಿನ ಅವನದು ಅದೆ ಕಷ್ಟ. ಆದ್ರೆ ಒಂದಿನ ಬೇರೆ ಕೆಲಸ ಸಿಕ್ಕಿತು ಅಂತ ರೂಮು ಬದಲಾಯಿಸಿದ. ಆಮೇಲೆ ಆವಾಗಾವಾಗ ಎಲ್ಲೆಲ್ಲೋ ಸಿಗತಿದ್ದ. ಸಿಕ್ಕಾಗೆಲ್ಲ ದಾಂ ದೂಂ ಅಂತ ಸಾವಿರಾರು ರೂಪಾಯಿ ಖರ್ಚು ಮಾಡತಿದ್ದ. ಅವನು ಕೆಲಸ ಬದಲಾಯಿಸಿದ್ದರಿಂದ ಅವನ ಖದರೆ ಬೇರೆಯಾಗಿತ್ತು. ಒಳ್ಳೊಳ್ಳೆ ಬಟ್ಟೆ ಮೈಕೈಗೊಂದು, ಮುಖಕೊಂದು, ತಲೆಗೂದಲಿಗೊಂದು, ಬಗಲ ಕಂಕುಳಿಗೊಂದು ಹೀಗೆ ಒಂದೊಂದು ಕಡೆಗೆ ಒಂದೊಂದು ತರಹದ ಸೇಂಟ್, ಸುನರ್ ಬಳಸತಿದ್ದ. ತಿಂಗಳಿಗೊಮ್ಮೊಮ್ಮೆ ಗಡ್ಡ ಬೋಳಿಸುತಿದ್ದವ, ಈಗ ದಿನಾಲೂ ಕೆರೆದುಕೊಂಡು ಯಾವಾಗಲೂ ಸ್ಮಾರ್ಟನೆಸ್ ಕಾಪಾಡಿಕೊಳ್ಳುತ್ತಿದ್ದ. ನಾಜೂಕಿನ ಬೀಗಿ ಟೀಶರ್ಟ, ಜೀನ್ಸ್ ಪ್ಯಾಂಟ್ ಧರಿಸಿ ಸಿನೆಮಾ ಹೀರೋನಂತೆ ಸುರಸುಂದರಾಂಗನಾಗಿ ಕಂಗೊಳಿಸುತ್ತಿದ್ದ. ಅವನನ್ನು ನೋಡಿ ಹಳೆಯ ರೂಮಿನ ಗೆಳೆಯರೆಲ್ಲರೂ ಹೊಟ್ಟೆಕಿಚ್ಚು ಪಡುತ್ತಿದ್ದೇವು. ಆದರೆ ಯಾವ ಕೆಲಸ, ಎಲ್ಲಿ, ಏನು ಎಂಬುದರ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ.  ದಿನದಿಂದ ದಿನಕ್ಕೂ ನಿಗೂಡವಾಗುತ್ತಲೆ ಹೋದ.
 
 ಒಮ್ಮೊಮ್ಮೆ ಹಗಲೆಲ್ಲ ರೂಮಿನಲ್ಲಿ ಮಲಗಿರುತ್ತಿದ್ದ. ಆಗೊಮ್ಮೆ ಈಗೋಮ್ಮೆ ಕುಂಟುತ್ತಲೂ ಇದ್ದ. ಯಾವ್ಯಾವದೋ ಮಾತ್ರೆ ಪಾಕೇಟ್‍ಗಳನ್ನು ಯಾವಾಗಲೂ ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ. ಅವನ ಹಣದ ಗಳಿಕೆ ಜಾಸ್ತಿಯಾಗುತ್ತಿದ್ದಷ್ಟು ಮಾನಸಿಕವಾಗಿ ಗಂಭೀರನಾಗುತ್ತ ಹೋದ. ದುಡ್ಡು ಅವನನ್ನು ಅಹಂಕಾರಿಯನ್ನಾಗಿ ಮಾಡುತ್ತಿದೆ ಎಂದುಕೊಂಡು ನಾವು ಸಂಕಟ ಪಡುತ್ತಿದ್ದೆವು.
 
ನನ್ನಂಥವನಿಗೆ ಅವನೆ ಮಾದರಿ ವ್ಯಕ್ತಿ. ಅವನ ಹಾಗೆ ದುಡ್ಡು ಮಾಡುವ ನೌಕರಿ ಯಾವಾಗ ಸಿಗುತ್ತೋ ಎಂದು ನಾನು ಕಾಯುತ್ತಿದ್ದೆ. ಎಲ್ಲವನ್ನು ನನ್ನ ಮುಂದೆ ಹಂಚಿಕೊಳ್ಳುತ್ತಿದ್ದ ಮುನಿಸ್ವಾಮಿ ಈ ನೌಕರಿ ವಿಷಯದ ಬಗ್ಗೆ ಮಾತ್ರ ಮುಗುಮ್ಮಾಗಿಯೇ ವರ್ತಿಸುತ್ತಿದ್ದ. ನಾನು ತಡೆಯುವಷ್ಟು ದಿನ ತಡೆದು ಒಂದು ದಿನ ಅವನಿಂದ ನೌಕರಿಯ ವಿಷಯ ಬಿಚ್ಚಿಸಲೇಬೇಕು ಎಂದು ಪಣ ತೊಟ್ಟು ಅವನ ರೂಮಿಗೆ ಹೋದೆ. ಅವತ್ತು ಅವನು ಯಾರೊಂದಿಗೋ ಮೊಬೈಲಿನಲ್ಲಿ ಮಾತಾಡುತ್ತಿದ್ದ. ಅವನ ಮಾತುಗಳು ನನಗೆ ಪೂರ್ತಿ ಅರ್ಥವಾಗದಿದ್ದರೂ ಒಂದು ತರಹದ ಅನುಮಾನ ಮತ್ತು ಕುತೂಹಲವನ್ನು ಹುಟ್ಟಿಸುತ್ತಿದ್ದವು.
ಪೋನಿಟ್ಟಾಗ ಅವನು ದುಖದ ಮಡುವಿನಲ್ಲಿದ್ದಂತೆ ಭಾಸವಾಗುತ್ತಿತ್ತು. ನಾನು ಸುಮ್ಮನೆ ಅವನ ಪಕ್ಕದಲ್ಲಿ ಹೋಗಿ ಕುಳಿತೆ. ನನ್ನ ಮನೆಯ ಕಷ್ಟವನ್ನೆಲ್ಲ ಅವನಿಗೆ ಹೇಳಿಕೊಂಡಾದ ಮೇಲೆ "ನನಗೆ ನೀ ಮಾಡು ನೌಕರಿಯೇ ಆಗಬೇಕು" ಎಂದು ಹಟ ಹಿಡಿದೆ. ಅಂದು ಅವನ ತಾಳ್ಮೆ ಸತ್ತಂತೆ ಕಾಣುತ್ತೆ. ನನಗೆ ತನ್ನ ಕಂಪನಿಯ ವಿಳಾಸ ನೀಡಿದ. ಅವತ್ತೆ ಅವನು ಕೆಲಸ ಬಿಟ್ಟು ತನ್ನ ಹುಟ್ಟೂರು ಸೇರಿಕೊಂಡು ಮತ್ತೆ ನಿಗೂಢನಾಗಿಯೇ ಮಾಯವಾದ.
 
ಅವತ್ತಿನ ನನ್ನ ಖುಷಿ ಹೇಳತೀರದು. ನನ್ನ ಬದುಕಿನ ಭವಣೆಗಳೆಲ್ಲವೂ ಮುಗಿದೆ ಹೋದವು ಎಂದುಕೊಂಡು ವಿಳಾಸ ಹುಡುಕಿಕೊಂಡು ಕಂಪನಿಯ ಒಳಕ್ಕೆ ಕಾಲಿಟ್ಟೆ. ಆದರೆ, ಈಗ ನಾನು ಅನುಭವಿಸುತ್ತಿರುವ ನರಕ ಯಾತನೆ ಬಗ್ಗೆ ಹೇಗೆ ಹೇಳಲಿ ಸರ್. ಈ ಕಂಪನಿಯಲ್ಲಿ ನಾವು ಮಾಡುವ ಕೆಲಸ ಏನೂ ಇರುವುದಿಲ್ಲ ಸರ್. ಆದರೆ, ಘರವಾಲಿ ಮನ್ಯಾಗ ಸೂಳ್ಯಾರು ದಂದೆ ಮಾಡಿದಂಗ ನಾವು ದಂದೆ ಮಾಡಬೇಕಷ್ಟೆ. ನಾವು ಗಂಡು ಸೂಳೆಯರು!
ದಿನಕ್ಕೆ ನಾಲ್ಕೈದು ಸಲ ಮೇಕಪ್ ಮಾಡಿಕೊಳ್ಳೊದು, ಮೈ ಕಾಣುವಂಥ ಬಟ್ಟೆ ಹಾಕ್ಕೊಂಡು, ಬಸ್, ರೈಲು, ವಿಮಾನ ನಿಲ್ದಾಣಗಳಿಗೆ ಹೋಗಿ ನಿಂತುಕೊಳ್ಳೊದು. ತಾಸಿಗೆ ಗಳಿಗ್ಗೆ ಮೇಕಪ್ ಮಾಡಿಕೊಂಡು ಸದಾ ತಯಾರಿಯಲ್ಲಿರೋದು. ಹೊರದೇಶಗಳಿಂದ ಬರೋ ಕ್ಲೈಂಟ್ಸ್ ಕರೆದ ಲಾಡ್ಜಿಗೆ ಹೋಗಿ ಅವರಿಗೆ ಬೇಕಾದ ರೀತಿಯಲ್ಲಿ ಖುಷಿ ಪಡಿಸೋದು. ಇದಿಷ್ಟೆ ಕೆಲಸ. ಆದರೆ ಗಿರಾಕಿ ಯಾವ ದೇಶದವನು, ಹೆಣ್ಣೊ ಗಂಡೋ ಅನ್ನೋದರ ಮೇಲೆ ಅವತ್ತಿನ ನಮ್ಮ ನರಕ ಯಾತನೆ ಅವಲಂಭಿಸಿರುತ್ತಿತ್ತು. ಗಿರಾಕಿ ಹೆಣ್ಣಾಗಿದ್ದರೆ ಅಷ್ಟರಮಟ್ಟಿಗೆ ಅವತ್ತು ನಮ್ಮ ಮೈ ಹಣ್ಣಾಗೋದು ತಪ್ಪುತ್ತಿತ್ತು. ಆದರೆ ಗಂಡಾಗಿದ್ದರೆ ನಮ್ಮ ಪಾಡು ಯಾರಿಗೂ ಬರಬಾರದು. ಕೆಲವು ಗಂಡು ಪ್ರಾಣಿಗಳು ನಮ್ಮ ನವರಂದ್ರಗಳನ್ನೆಲ್ಲ ಬಳಸಲಿಕ್ಕೂ ಹೇಸುವುದಿಲ್ಲ. ಅವರ ನವರಂದ್ರಗಳನ್ನು ನಾವು ತಡಕಾಡ ಬೇಕಾಗುತ್ತಿತ್ತು. ನಮ್ಮ ಮೈ ಮಾರೋದ್ರಿಂದ ಸಾವಿರಾರು ರೂಪಾಯಿ ದುಡಿಯೋ ಕಂಪನಿಗಳು ನಮಗ ಮಾತ್ರ ತಿಂಗಳಿಗೆ ನಿಗದಿತ ಐದಂಕಿ ಸಂಬಳ ನೀಡಿ ಕೈ ತೊಳಕೊಳ್ಳುತ್ತಿವೆ. ಗಿರಾಕಿ ನಿಡೋ ಅಷ್ಟು ಇಷ್ಟು ಟಿಪ್ಸ್ ಮಾತ್ರ ನಮಗ ಉಳಿಯೋದು. ಆ ಟಿಪ್ಸ್ ನಮ್ಮ ಮೈ ಮನಗಳ ವಿಧೇಯತೆಯನ್ನು, ಬಾಗುವಿಕೆಯನ್ನ ಅವಲಂಭಿಸಿರುತ್ತೆ.
 
‘ನೀ ದಂದಾ ಬಿಟ್ಟು ಯಾಕೆ ಬೇರೆ ಕಡೆ ಹೋಗಬಾರದು?' ನಾನು ತಡೆಯಲಾರದೆ ಪ್ರಶ್ನಿಸಿದೆ. 
‘ಈ ದಂದಾ ಬಿಟ್ಟು ಆರಾಮಾಗಿ ಊರಕಡೆ ಹೋಗಿಬಿಡಬೇಕು ಅಂತ ಒಮ್ಮೊಮ್ಮೆ ನನಗೂ ಅನಸುತ್ತೆ. ಆದ್ರ ಮೈ-ಮನಸು ಈ ದಂದಾಕ ಒಗ್ಗಿಬಿಟ್ಟಾವ. ಈ ಆಡಂಭರ, ವಿಲಾಸ, ಕುಡಿತ, ಮೋಜುಮಸ್ತಿಗೆ ಒಗ್ಗಿರೋ ಮೈ-ಮನಸ್ಸಿಗೆ ಲಗಾಮ ಹಾಕಿ ಮತ್ತ ಹಿಂದಕ್ಕೆ ತರೋದು ಬಾಳ ಕಷ್ಟ. ಎಣ್ಣಿ ಇರುವಷ್ಟು ದಿನ ಉರಿಯೋದಷ್ಟೆ ಈಗ ಬಾಕಿ ಇರೋದು ಸರ್. ಈಗಾಗಲೆ ಉಳಿಕೆ ದಿನ ಎಣಿಸತಾ ಕಾಲ ಕಳಿತಿದ್ದಿವಿ' ಎಂದು ಆತ ವಿಷಾದದ ನಗೆ ನಕ್ಕ. ಅವನಿಗೆ ಏನು ಹೇಳಬೇಕೆಂಬುದೆ ನನಗೆ ತಿಳಿಯದಂಗಾಗಿತ್ತು. 
 
 ಈ ದಂದೆಯಲ್ಲಿ ಕೇವಲ ಹೆಣ್ಣುಮಕ್ಕಳ ಮಾತ್ರ ಶೋಷಣೆಯ ಸಾಧನಗಳಾಗ್ತಾರೆ ಎಂದು ನಾನು ಇಲ್ಲಿವರೆಗೆ ತಿಳಿದುಕೊಂಡಿದ್ದೆ. ರಂಜನ್ ಕಥೆ ಅದನ್ನು ಸುಳ್ಳಾಗಿಸಿತು.
* * *
 
ಮರುದಿನ ಇಳಿರಾತ್ರಿ ದೀಪಾ ನನ್ನನ್ನು ಆ ಕತ್ತಲ ಗವಿಯಂಥ ಸಂಧಿಯೊಳಗೆ ಪಾರು ಮಾಡಿ ಝಗಮಗಿಸುವ ಲೈಟಿನ ವಠಾರದೊಳಕ್ಕೆ ಕರೆದುಕೊಂಡು ಹೋದಳು. ಆದರೆ, ಒಳಗೆ ಕಾಲಿಡುವಾಗಲೆ ಒಂದು ಬಗೆಯ ಭಯ ಎಣಿಸಿ ನಾನು ಒಳಗೆ ಹೋಗುವುದೆ ಬೇಡ ಎಂದಿದ್ದೆ. ಆದರೆ ‘ಭಯ ಪಡಬೇಡಿ ಇಲ್ಲಿನ ಲೈಂಗಿಕ ಕಾರ್ಮಿಕರಿಗೆ ಆರೋಗ್ಯ ಮತ್ತು ಸ್ವಚ್ಚತೆಯ ಬಗ್ಗೆ ಒಮ್ಮೆ ತರಬೇತಿ ಮಾಡಿದ್ದೆವು. ನನಗೆ ಇದರ ಮಾಲಿಕರ ಪರಿಚಯವಿದೆ. ವಯಸ್ಸಾಗಿರುವ ನಿವೃತ್ತಿ ಹೊಂದಿರುವ ಲೈಂಗಿಕ ಕಾರ್ಮಿಕರು ಇಲ್ಲಿ ಹಲವಾರು ನಮೂನೆಯ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಅವರಲ್ಲಿ ನಿಮ್ಮ ಶಾರಿಯೂ ಇರಬಹುದು' ಎಂದು ಧೈರ್ಯ ತುಂಬುತ್ತಾ ಒಳ ಕರೆದುಕೊಂಡು ಹೋಗಿದ್ದಳು.
 
ಅಲ್ಲಿಯ ದೃಶ್ಯವನ್ನು ನೋಡುತ್ತಿದ್ದಂತೆ ನಾನು ದಂಗಾಗಿ ಹೋದೆ. ಲೈವ್‍ಬ್ಯಾಂಡ್ ಬೆಂಗಳೂರಿನಲ್ಲಿ ಬಂದ್ ಆಗಿದೆ ಎಂದು ಸರಕಾರ ಹೇಳಿ ಸರಕಾರ ಬೊಂಬಡಾ ಹೊಡೆದು ಐದಾರು ವರ್ಷವೇ ಕಳೆದಿದೆ. ಆದರೆ ಇಲ್ಲಿ ಸರಕಾರಿ ಅಧಿಕಾರಿಗಳೇ ಲೈವ್‍ಬ್ಯಾಂಡ್‍ನ ಅರೆಬೆತ್ತಲೆಯ ನೃತ್ಯಗಳನ್ನು ಆನಂದಿಸುತ್ತಾ ಪಾನಮತ್ತರಾಗಿ ತೇಲಾಡುತ್ತಿದ್ದರು. ಅವರ ಮುಂದಿನ ವೃತ್ತಾಕಾರದ ಕಟ್ಟೆಯಲ್ಲಿ ಎಳೆಂಟು ಹುಡುಗಿಯರು ಕುಣಿಯುತ್ತಿದ್ದರು, ಕೆಲವು ಅರೆಬೆತ್ತಲೆಯ  ಹುಡುಗಿಯರು ಗಿರಾಕಿಗಳ ಹೆಗಲಿಗೆ ಜೋತು ಬಿದ್ದು ಸುಧಾರಿಸಿಕೊಳ್ಳುವುದರಲ್ಲಿಯೋ ಅಥವಾ ಗಿರಾಕಿಗಳನ್ನು ಸುಲಿಯುವುದರಲ್ಲಿಯೋ ನಿರತರಾಗಿದ್ದರು. ‘ಇಂಥವನ್ನೆಲ್ಲಾ ಬಂದ್ ಮಾಡುವುದನ್ನು ಬಿಟ್ಟು ಪೋಲೀಸರೇನು ಕತ್ತೆ ಕಾಯುತ್ತಿದ್ದಾರೆ' ಎಂದು ನಾನು ದೀಪಾಳ ಹತ್ತಿರ ಸಿಡುಕಿದೆ. 'ಪೋಲೀಸರು ಕತ್ತೆ ಕಾಯುತ್ತಿಲ್ಲ. ಇಂತಹ ಲೈವ್‍ಬ್ಯಾಂಡ್ ಅಡ್ಡೆಗಳನ್ನು ಕಾಯುತ್ತಿರುತ್ತಾರೆ' ಎಂದು ದೀಪಾ ವಿಷಾದದ ನಗೆ ನಕ್ಕಿದ್ದಳು.
 
ಶಾರದೆಗೆ ಏನಾದರೂ ರೋಗ ಬಂದು ಆಸ್ಪತ್ರೆಗೆನಾದರೂ ಅಡ್ಮಿಟ್ ಆಗಿರಬಹುದೆ ಎಂಬ ಅನುಮಾನ ಕಾಡತೊಡಗಿತು. ಅಲ್ಲಿಗೂ ಹೋಗಿ ಬಂದು ಅನುಮಾನ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎನಿಸಿತು. ಬೆಂಗಳೂರಿನ ಎಲ್ಲ ಸ್ಥಳಗಳಿಗೂ ಕರೆದುಕೊಂಡು ಅಡ್ಡಾಡಿದ್ದ ದೀಪಾಳನ್ನು ಈ ಸಲ ಕರೆದುಕೊಂಡು ಹೋಗಲೋ ಬೇಡವೋ ಎಂದು ಹಿಂಜರಿಕೆ ಉಂಟಾಯಿತು. ಅದರೂ ಒಂದು ಮಾತು ಕೇಳಿ ಬಿಡೋಣ ಎಂದುಕೊಂಡು ಕೇಳಿದರೆ ದೀಪಾ ಅ ಕ್ಷಣವೆ ತಯಾರಾದಳು.
 
ಒಂದು ಬೆಳಿಗ್ಗೆ ಅಸ್ಪತ್ರೆಯಲ್ಲಿದ್ದೆವು. ಎಲ್ಲ ವಾರ್ಡುಗಳನ್ನು ಕಣ್ಣಾಡಿಸಿದ ಮೇಲೆ ಎಚ್‍ಐವಿ ರೋಗಿಗಳಿರುವ ವಾರ್ಡನ್ನು ಅಳುಕುತ್ತಲೆ ಪ್ರವೇಶಿದೆವು. ಅಲ್ಲಿ ಶಾರದೆ ಕಂಡು ಬರಲಿಲ್ಲ ಎನ್ನುವುದು ನನಗೆ ದೊಡ್ಡ ಸಮಾದಾನ. ಅವಳ ಮುಖ ಕಾಣಬಾರದೆಂಬುದೆ ನನ್ನ ಆಶಯವಾಗಿತ್ತು. ಇನ್ನೇನು ಅಲ್ಲಿಂದ ಹೊರಡಬೇಕು ಎಂದು ದೀಪಾಳತ್ತ ನೋಡಿದೆ. ಪಕ್ಕದ ಬೆಡ್ಡಿನಿಂದ ಕ್ಷೀಣವಾದ ಧ್ವನಿಯಲ್ಲಿ ದೀಪಾಳ ಹೆಸರಿಡಿದು ಕರೆದಂತೆ ಬಾಸವಾಯಿತು. ದೀಪಾ ತಿರುಗಿ ನೊಡಿದಳು. ನಿಸ್ತೇಜವಾದ ಮುಖದ ಒಂದಿಬ್ಬರು ಹೆಣ್ಣುಮಕ್ಕಳು ದೀಪಾಳತ್ತ ಕ್ಷೀಣ ನೋಟ ಚೆಲ್ಲಿದ್ದರು. ಕಣ್ಣುಗಳು ಮಾತ್ರ ಅವರು ಬದುಕಿರುವುದಕ್ಕೆ ಸಾಕ್ಷಿಯೆಂಬಂತೆ ಮಿನುಗುತ್ತಿದ್ದವು. ಕಂಬನಿ ಕಣ್ಣಲ್ಲಿ ತುಂಬಿ ಧುಮ್ಮಿಕ್ಕಲು ಸಿದ್ಧವಾಗಿತ್ತು. ದೀಪಾ ಅವರನ್ನು ಹಸನ್ಮುಖದಿಂದ ಮಾತಾಡಿಸಿ ಅವರ ಖರ್ಚಿಗೆ ಒಂದಿಷ್ಟು ದುಡ್ಡು ಕೊಟ್ಟಳು. ಅವರ ತಲೆ ನೆವರಿಸಿ ಈ ಕಡೆ ಬಂದ ದೀಪಾ 'ದೇಹ ಚೆನ್ನಾಗಿದ್ದಾಗ ಬಾಳ ಉರಿದರು. ಈಗ ಪಾಪ ಟೀ ಕುಡಿಲಿಕ್ಕೂ ಭಿಕ್ಷೆ ಬೇಡಬೇಕು. ಬದುಕಲು ಆಶ್ರಯವಿಲ್ಲದಕ್ಕೆ ಈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೀವವಿರುವಷ್ಟು ದಿನ ಇಲ್ಲಿಯೇ ಉಸಿರಿಡಿದುಕೊಂಡು, ಹಾಕಿದ್ದನ್ನು ತಿಂದು ಬಿದ್ದುಕೊಂಡಿರುವುದಷ್ಟೇ  ಈಗ ಅವರ ಪಾಲಿಗೆ ಉಳಿದಿರೋದು. ಬೇರೆ ಆಯ್ಕೆಯೇ ಇಲ್ಲ' ಎಂದು ದೀಪಾ ವಿಷಣ್ಣತೆಯಿಂದ ನುಡಿದಳು. ಅಲ್ಲಿಂದ ಹೊರ ಬಂದಾಗ ನಮ್ಮಿಬ್ಬರ ಕಣ್ಣುಗಳು ತೇವಗೊಂಡಿದ್ದವು. ಮನಸ್ಸು ಬಿಕ್ಕಳಿಸುತ್ತಿತ್ತು.
* * *
(ಮುಂದುವರೆಯುವುದು….)
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x