ಹುಟ್ಟು ಹಬ್ಬದ ಶುಭಾಶಯಗಳು ಸರ್: ರೇಣುಕಾ ಶಿಲ್ಪಿ, ಹೂವಿನಹಡಗಲಿ.

ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಕಥನ ಶೈಲಿಯಿಂದ ಜನಪ್ರಿಯರಾಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಕತೆಗಾರ ಕುಂ.ವೀರಭದ್ರಪ್ಪ ಅವರಿಗೆ ಇದೇ ಅಕ್ಟೋಬರ್ 1 ರಂದು ಜನ್ಮದಿನದ ಸಂಭ್ರಮ. ಈ ಸುಸಂದರ್ಭದಲ್ಲಿ ‘ಕುಂವೀ ಯವರಿಗೆ ಈ ಕಿರು ಪರಿಚಯಾತ್ಮಕ ಲೇಖನದ ಮೂಲಕ ಶುಭ ಕೋರುವ ಪುಟ್ಟ ಪ್ರಯತ್ನವಿದು.

ನಾನು ಮೊದಲ ಬಾರಿ ಅವರನ್ನು ಕಂಡದ್ದು ನನ್ನ ಹೈಸ್ಕೂಲು ದಿನಗಳಲ್ಲಿ. ಸರಿಸುಮಾರು ಹದಿನೈದು ವರ್ಷಗಳ ಹಿಂದೆ, ನನ್ನೂರು ಹೂವಿನಹಡಗಲಿಯಲ್ಲಿ- ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಾಟಾಗಿತ್ತು. ಸಮ್ಮೇಳನದ ಸರ್ವಾಧ್ಯಕ್ಷರಾಗಿ “ಕುಂವೀ” ಉಪಸ್ಥಿತಿ ಎದ್ದು ಕಾಣುತ್ತಿತ್ತು. ಆ ದಿನ ಕಾರ್ಯಕ್ರಮ ಮುಗಿದ ನಂತರ ಅವರ ಹಸ್ತಾಕ್ಷರ ಪಡೆಯಲು ಹೋದಾಗ, ಸಚಿವರಾಗಿದ್ದ ದಿ. ಎಂ ಪಿ ಪ್ರಕಾಶರು ನನ್ನನ್ನು ಅವರಿಗೆ ಪರಿಚಯಿಸಿದ್ದು ನನ್ನ ಮನಸ್ಸಿನಲ್ಲಿನ್ನೂ ಚಿರಸ್ಥಾಯಿಯಾಗಿ ಉಳಿದಿದೆ.

ನಂತರ ಅವರ ‘ದೇವರ ಹೆಣ’ ಕತೆಯು ನಮಗೆ ಪ್ರಥಮ ಪಿಯುಸಿ ಪಠ್ಯವಾಗಿತ್ತು. ಆ ಕತೆಯಲ್ಲಿ ಮನಕಲಕುವ ಹಸಿವೆಯ ಚಿತ್ರಣವಿದೆ. ಅವರು ತಮ್ಮ ಎಲ್ಲ ಕತೆಗಳಲ್ಲಿ ಗ್ರಾಮೀಣ ಬದುಕಿನ ಸೂಕ್ಷ್ಮ ಸಂವೇದನೆ, ಬಡತನ, ಹಸಿವು. ಅಸಮಾನತೆ, ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ನಾನು ಇತ್ತೀಚಿಗಷ್ಟೆ ಓದಿದ ಅವರ ‘ಕೆಂಡದ ಮಳೆ’ ಕಾದಂಬರಿ ಸಹ ಇದಕ್ಕೆ ಹೊರತಾಗಿಲ್ಲ.

ಕುಂವೀ ಯವರ ಕತೆಗಳನ್ನು ಪುಸ್ತಕಗಳನ್ನು ಓದುವಾಗಲೆಲ್ಲ ಅವರ ಬಾಲ್ಯ, ಓದು-ಬರಹಗಳನ್ನು ತಿಳಿಯುವ ತವಕ ನನ್ನಲ್ಲಿ ಮತ್ತಷ್ಟು ಹೆಚ್ಚುತ್ತಿತ್ತು. ಹಾಗಾಗಿ ಅವರ ‘ಗಾಂಧಿ ಕ್ಲಾಸು’ ಅತ್ಮಚರಿತ್ರೆಯನ್ನು ಕೊಂಡು ಓದಿದೆ. ನಿಜಕ್ಕೂ 'ಮಹಾನ್ ಸಾಧಕರ ಬದುಕು ಹೋರಾಟದಿಂದ ಕೂಡಿರುತ್ತದೆ' ಎಂಬುದನ್ನು ಅದು ಸಾಬೀತುಪಡಿಸಿತು. ಅವರ ಬದುಕನ್ನು ರೂಪಿಸಿದ ಅವರ ತಂದೆ ಹಾಲಪ್ಪನ ಪಾತ್ರ ನನಗೆ ತುಂಬಾ ಹಿಡಿಸಿತು. ಆ ಪುಸ್ತಕ ಓದಿದಾಗ ಕುಂವೀ ನನ್ನ ಜಿಲ್ಲೆಗೆ ಸೇರಿದವರೆಂಬ ಹೆಮ್ಮೆ ನನ್ನಲ್ಲಿ ಇಮ್ಮಡಿಸಿತು.

ಕನ್ನಡ ಸಾಹಿತ್ಯ ಸೇವೆಯ ಜೊತೆಗೆ ಆಂಧ್ರದ ಗಡಿಭಾಗ ಬಳ್ಳಾರಿಯಲ್ಲಿ ಅವರು ಶಿಕ್ಷಕರಾಗಿ ಹಲವು ಸುಧಾರಣಾತ್ಮಕ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿ ಈಗ ಸಂಪೂರ್ಣ ಸಾಹಿತ್ಯ ನೇವೆಯಲ್ಲಿ ನಿರತರಾಗಿರುವ ಕುಂವೀಯವರ ನಾಡುನುಡಿಯ ಕುರಿತ ಕಾಳಜಿ ಅನನ್ಯವಾದುದು. ಈಗಲೂ ನನಗೆ ಅತೀ ಖುಷಿ ಕೊಡುವ ಸಂಗತಿ ಎಂದರೆ ಕಂಡಾಗಲೆಲ್ಲ ಕುಂವೀ ನನ್ನನ್ನು ತುಂಬಾ ಆತ್ಮೀಯವಾಗಿ ಮಾತನಾಡಿಸುತ್ತಾರೆ. ದಿನ ಬೆಳಗಾದರೆ ನಾನು ವಾಸವಿರುವ ಮನೆಯ ಮುಂದೆಯೇ ಅವರು ವಾಕಿಂಗ್ ಮಾಡುತ್ತಾ ಹೋಗುವುದನ್ನು ಎಷ್ಟೋ ದಿನ ನೋಡಿದ್ದೇನೆ. ಶ್ರೀಯುತರ ಬದುಕು ಮತ್ತಷ್ಟು ಸುಂದರವಾಗಲಿ, ಅವರ ಬರಹಗಳು ನಿರಂತರವಾಗಿ ನಮಗೆ ದಕ್ಕುತಿರಲಿ ಎಂದು ಆಶಿಸುತ್ತೇನೆ. ಕುಂವೀಯವರಿಗೆ ಜನ್ಮದಿನದ ಶುಭಾಶಯಗಳು.

“ನೆಲದಾಳದಲ್ಲಿ ಬೇರಿಳಿದ ಮರಗಳು ಬದುಕಿ

ಎಲ್ಲಾ ಕಾಲಗಳಲ್ಲಿ ಹೂವ ತೊಡಲಿ” -ಕೆ ಎಸ್ ನ.

******

ಕುಂವೀ ಯವರ ಪರಿಚಯ ಲೇಖನದ ವಿಕೀಪೀಡಿಯಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ..

ಕುಂವೀ ಯವರಿಗೆ ಪಂಜು ಬಳಗದ ಪರವಾಗಿಯೂ ಹುಟ್ಟು ಹಬ್ಬದ ಶುಭಾಶಯಗಳು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
amardeep.p.s.
amardeep.p.s.
10 years ago

ಮೆಚ್ಚಿನ ಬರಹಗಾರರಾದ ಕುಂವೀ …. ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ….

Hipparagi Siddaram
Hipparagi Siddaram
10 years ago

ಇಂತಹ ಮಹಾನ್ ವ್ಯಕ್ತಿತ್ವದ ಪರಿಚಯದೊಂದಿಗೆ ಅವರ ಹುಟ್ಟು ಹಬ್ಬಕ್ಕೆ ಹಾರೈಸಿರುವುದು ಪಂಜು ಬಳಗಕ್ಕೆ ಗೌರವದ ಸಂಗತಿ. 
ನೂರ್ಕಾಲ ಬಾಳುತ್ತಾ….ತಮ್ಮ ಲೇಖನಿಯಿಂದ ಕರುನಾಡ ಸಾಹಿತ್ಯವನ್ನು ಸಮೃದ್ಧಿಗೊಳಿಸಲಿ ಎಂದು ಕುಂವೀ ಸರ್ ಹುಟ್ಟುಹಬ್ಬಕ್ಕೆ ಶುಭಹಾರೈಕೆಗಳು !

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಶ್ರೀ. ಕುಂ.ವೀರಭದ್ರಪ್ಪರವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಮಾನ್ಯ ರೇಣುಕಾ ಶಿಲ್ಪಿರವರೇ,
ಇಂದು ನನಗೆ ಈ ಲೇಖನವು ಮಿಸ್ ಆಗಿದ್ದಿದ್ದರೆ ತುಂಬಾ ಪಶ್ಚಾತ್ತಾಪಪಡುತ್ತಿದ್ದೆ. ಅಂದು ಪಿ.ಯು.ಸಿ ಪಠ್ಯಕ್ರಮದಲ್ಲಿನ "ದೇವರ ಹೆಣ" ಪಠ್ಯವಿಷಯವನ್ನು ನಾನೆಂದೂ ಮರೆಯುವಂತಿಲ್ಲ. ಆ ಕತೆಗಾಗಿ ಎಷ್ಟೋ ವರ್ಷಗಳು ನಾನು ಪಠ್ಯಪುಸ್ತಕವನ್ನು ನನ್ನಲ್ಲಿಟ್ಟುಕೊಂಡು ಮತ್ತೆ ಮತ್ತೆ ಓದಿದ್ದೆ. ಕತೆಯನ್ನು ಕರೆಗಾರರನ್ನು ಮತ್ತೆ ನೆನಪಿಗೆ ತಂದುಕೊಟ್ಟ ನಿಮಗೆ ಧನ್ಯವಾದಗಳು. 

K.M.Vishwanath
10 years ago

ಅವರಂತಹ ಅಪ್ರತಿಮ ಬರಹಗಾರರು ನಮ್ಮ ಜೊತೆಗಿದ್ದಾರಲ್ಲಾ ಅದು ಕನ್ನಡಿಗರ ಪುಣ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 

sharada.m
sharada.m
10 years ago

 ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 

ವೆಂಕಟೆಶ ಮಡಿವಾಳ
ವೆಂಕಟೆಶ ಮಡಿವಾಳ
10 years ago

 "ಅಂದು ಪಿ.ಯು.ಸಿ ಪಠ್ಯಕ್ರಮದಲ್ಲಿನ "ದೇವರ ಹೆಣ" ಪಠ್ಯವಿಷಯವನ್ನು ನಾನೆಂದೂ ಮರೆಯುವಂತಿಲ್ಲ."
 
+1
 
ಟೊಣ್ಣಿ …,ಹುಲಿ…!! ಟೊಣ್ಣಿ ವೀಕಾಗಿ ಕಂಗೊಳಿಸಿದನು …ಆ  ಹಸಿ ಹಸಿವಿನ ‍ಚಿತ್ರಣ ನಾವ್ ಮರೆಯುವೆವೆ??
 
ಅವರು ನಮ್ ಬಯಲು ಸೀಮೆಯವರು ಎಂಬುದು ಹೆಮ್ಮೆಯ ವಿಷಯ..
ಸೀ ಎಮ್ಮು ಕುರ್ಚಿ ಮತ್ತು ಬಡ ಬೊರ ಎಂಬ ನನ್ನ ಒಂದು ಬರಹ  ಅವ್ರ ಶೈಲಿಯನ್ನು ನೆನಪಿಸಿತ್ತು…!!
 
ಅವ್ರು ೧೦೬ ವರ್ಷ ಬಾಳಿ ಬದುಕಲಿ.. 
 
ಶುಭವಾಗಲಿ ..
 
 
>>>ಪಂಜುವಿನಲ್ಲಿ  ಕನ್ನಡ ಸ್ಲೆಟ್ ಹಾಕಿದ ಪಂಜು ನಿರ್ವಾಹಕರಿಗೆ ತಂತ್ರಜ್ನರಿಗೆ ನನ್ನಿ ..
ಆದ್ರೆ ಅದು ಉಪಯೊಗಿಸುವಾಗ ದೀರ್ಘ -ಒತ್ತಕ್ಶರ ಇತ್ಯಾದಿ ಯಾವ ರೀತಿ ಉಪಯೊಗಿಸುವುದು?
\|/
 
ವೆಂಕಟೆಶ ಮಡಿವಾಳ ಬೆಂ….. 
 
 

Santoshkumar Sonar
Santoshkumar Sonar
10 years ago

ಆತ್ಮೀಯ ರೇಣುಕಾ ಶಿಲ್ಪಿಯವರೇ,
ಶ್ರೀ ಕುಂ, ವೀರಭದ್ರಪ್ಪ ಸರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ಅವರನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು.ದೇವರು ಅವರಿಗೆ ನೂರಾನು ವರ್ಷ ಆಯುಷ್ಯವನ್ನು ದಯಪಾಲಿಸಲಿ.
ವಿದ್ಯುತ್ ತಾಂತ್ರಿಕ ವಿದ್ಯಾರ್ಥಿಯಾದ ನನಗೆ ಸಾಹಿತ್ಯದತ್ತ ಒಲವು ತೋರಲು ಕಾರಣೀಭೂತವಾಗಿದ್ದೇ  ಕುಂ.ವೀ. ಯವರ "ದೇವರಹೆಣ" ಪ್ರಥಮ ಪಿ.ಯು. ಪಠ್ಯಕ್ರಮದಲ್ಲಿ  ಈಗ್ಗೆ ಸುಮಾರು ೧೯ ವರ್ಷಗಳ ಹಿಂದೆ  ನಮ್ಮ ಉಪನ್ಯಾಸಕರಾಗಿದ್ದ  ಶ್ರೀ ಡಾಣಿ ಎಂಬ ಗುರುಗಳ  ಪಾಠದ ಶೈಲಿಯು ಮತ್ತು ದೇವರ ಹೆಣದ ಪದ ವಿನ್ಯಾಸವು ಆ ಸಾಲುಗಳು ವ್ಹಾ!!! ಇನ್ನೂ ಕಿವಿಯಲ್ಲಿ ಗುಂಯ್ ಗೊಡುತ್ತಿದೆ. ಠೊಣ್ಣಿ ಅವನ ಪಾತ್ರ ಚಿತ್ರಣ ಅದ್ಭುತ.  ಅವನು ನಾಯಿಯನ್ನು ಹಚಾ ಎಂದು ಗದರಿಸುವುದು, ಬಂಡಿಯ ಕಡೇಗೀಲು ಬಿಚ್ಚಿ ಹೋದದ್ದನು ಜ್ಞಾಪಿಸಿ ಬೀಡಿ ಪಡೆದುಕೊಳ್ಳುವುದು ತುಂಬಾ ಚೆನ್ನಾಗಿ ಹೆಣೆದಿದ್ದಾರೆ ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಆ ಪ್ರಾಂತ್ಯದ ಭಾಷಾ ಶೈಲಿ ಮನಮುಟ್ಟುವಂತಿದೆ. 
 
ವಂದನೆಗಳೊಂದಿಗೆ,
 
ಸಂತೋಷಕುಮಾರ ಸೋನಾರ
ಬೆಂಗಳೂರು.

8
0
Would love your thoughts, please comment.x
()
x