ನಾಟಕಕಾರರಾಗಿ ಕುವೆಂಪು (ಭಾಗ-18) : ಹಿಪ್ಪರಗಿ ಸಿದ್ದರಾಮ್, ಧಾರವಾಡ

 
 
ಬಲಿದಾನ (1948) :

ಆತ್ಮೀಯ ಓದುಗಪ್ರಭುಗಳೇ,
 
ಹಿಂದಿನ ಸಂಚಿಕೆಯಲ್ಲಿ ಮಹಾಕವಿಗಳ ‘ಬಲಿದಾನ’ ರಂಗಕೃತಿಯ ಎರಡು ದೃಶ್ಯಾವಳಿಗಳ ಕುರಿತು ತಿಳಿದುಕೊಂಡಿದ್ದೇವೆ. ಆರಂಭದ ದೃಶ್ಯದಲ್ಲಿ ಹಾಳುಬಿದ್ದ ಕತ್ತಲುಗವಿದಿರುವ ಕಾಳಿಕಾ ಮಂದಿರದಲ್ಲಿ ಭರತಸುತನು ನೋವು-ನಿರಾಶೆ-ಹತಾಶೆ ಭಾವಗಳಿಂದ ಮಲಗಿಕೊಂಡಿರುವಾಗ ಭಾರತಾಂಬೆಯು ಪ್ರತ್ಯಕ್ಷಳಾಗಿ, ಪರಿಚಯಿಸಿಕೊಂಡು ತನಗೊದಗಿರುವ ಸ್ಥಿತಿಯನ್ನು ವಿವರಿಸುತ್ತಾಳೆ. ತನ್ನನ್ನು ಈ ಬಂಧನದ ಸಂಕೋಲೆಗಳಿಂದ ಬಿಡಿಸಬೇಕಾದರೆ ಅದರ ಕೀಲಿಕೈ ಮಿತ್ರರಾಗಿ ಆಗಮಿಸಿ ಆಕ್ರಮಿಸಿಕೊಂಡಿರುವವರ ಹತ್ತಿರವಿದೆ. ಅದನ್ನು ತೆಗೆದುಕೊಂಡು ಬರಲು ಹೇಳುತ್ತಾಳೆ. ಅದರಂತೆ ಭರತಸುತನು ಹೊರಡುತ್ತಾನೆ. ಮುಂದಿನ ದೃಶ್ಯದಲ್ಲಿ ಹಾಳುಬಿದ್ದ ಕಾಳಿಕಾ ಮಂದಿರದಲ್ಲಿ ಕಗ್ಗತ್ತಲಿಗೆ ಬದಲಾಗಿ ಮಬ್ಬುಗತ್ತಲಾಗಿದೆ. ದೂರದಲ್ಲಿ ಹೋರಾಟದ ಧ್ವನಿ, ಮದ್ದುಗುಂಡಿನ ಸದ್ದುಗಳು ಕೇಳಿಸುತ್ತಿವೆ. ಕೀಲಿಕೈಯನ್ನು ತರಲು ಹೋಗಿರುವ ಭರತಸುತನ ಆಗಮನದ ನಿರೀಕ್ಷೆಯಲ್ಲಿರುವ  ಭಾರತಾಂಬೆಗೆ ನಿರಾಶೆಯಾಗುವುದಿಲ್ಲ. ಮಗುವಿನ ರೂಪದಲ್ಲೊಂದು ಆಕೃತಿಯು ಕಾಣಿಸಿಕೊಂಡು ಸ್ವಾತಂತ್ರ್ಯೋದಯದ ಶುಭಸುದ್ಧಿಯನ್ನು ಹೇಳುತ್ತದೆ. ನಂತರ ಭರತಸುತನು ಹೋರಾಡಿ, ಗಾಯಗೊಂಡು ಬಂಧನದಿಂದ ಬಿಡುಗಡೆ ಮಾಡಲು ಕೀಲಿಕೈಯನ್ನು ಸಂಭ್ರಮದೊಂದಿಗೆ ಯಶಸ್ವಿಯಾಗಿ ತರುತ್ತಾನೆ. 
 
ಮೂರನೇಯ ದೃಶ್ಯದಾರಂಭದಲ್ಲಿ ಜೀರ್ಣೋದ್ಧಾರವಾದ ಕಾಳಿಕಾದೇವಿಯ ದೀಪ್ತವಾಗಿದೆ ; ಅಲಂಕಾರಗೊಂಡಿದೆ. ಸೂರ್ಯೋದಯದ ಸಂಭ್ರಮದಲ್ಲಿ ಹಕ್ಕಿಗಳ ಚಿಲಿಪಿಲಿಗಾನವು ನವೋದಯಕ್ಕೆ ಸಾಕ್ಷಿಯಾಗಿದೆ. ಅಶೋಕ ಚಕ್ರಾಂಕಿತವಾದ ತ್ರಿವರ್ಣ ಧ್ವಜವು ಮನೋಹರವಾಗಿ ಹಾರಾಡುತ್ತಿದೆ. ಜನಘೋಷ, ಜಯದ ಗುಂಡಿನ ಸದ್ದು, ವಿಮಾನ ಹಾರಿದ ಸದ್ದು, ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀಜಿಕಿ ಜೈ’  ಮುಂತಾದ ಸಂಭ್ರಮಾಚರಣೆಯ ಸದ್ದುಗಳು ನಭೋಮಂಡಲ ಭೇದನಕರವಾಗಿ ಕೇಳಿಸುತ್ತಿವೆ. ಧ್ವಜಗೀತಗಾನವು ಭರತಖಂಡದ ಸ್ವಾತಂತ್ರ್ಯದ ಆದರ್ಶವನ್ನು ಸಾರುತ್ತಾ ಸುಶ್ರಾವ್ಯವಾಗಿ ನವಚೇತನೋದ್ದೀಪನಕರವಾಗಿ ಕೇಳಿಬರುತ್ತದೆ. 
 
ಧ್ವಜಗೀತಗಾನವು ಮುಗಿಯುತ್ತಿದ್ದಂತೆ ಭರತಸುತನು ಕೈಯಲ್ಲೊಂದು ಹೂವಿನ ಮಾಲೆ ಹಿಡಿದುಕೊಂಡು ಅತ್ಯುತ್ಸಾಹದಿಂದ ಕೃತಕೃತೆಯ ಭಾವದಲ್ಲಿ ಆಗಮಿಸುತ್ತಾನೆ. ಭಾರತಾಂಬೆಯನ್ನು ದೇವಾಲಯದ ಎಲ್ಲೆಡೆಗೂ ಹುಡುಕುತ್ತಾನೆ. ಕಾಣದಿರಲು ಕಾಳಿಕಾ ಮಾತೆ ಜಗದಂಬೆಯನ್ನು ಕೈಮುಗಿದು ಸ್ತುತಿಸುತ್ತಾನೆ. 

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ.
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೇ ನಮೋಸ್ತು ತೇ.
ಹೀಗೆ ಸ್ತುತಿಸುತ್ತಿರಲು ಭರತಮಾತೆಯು ಜಗದಂಭೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಸ್ವಾತಂತ್ರಯೋತ್ಸವದ ವಿಜಯೋತ್ಸವದಲ್ಲಿ ಎಲ್ಲರೂ ನಿನ್ನ ದರುಶಕಕ್ಕೆ ಕಾದಿರುವಾಗ, ಭರತಸುತನು ‘ಇದೇನ್ ಜನನಿ, ನಿನಗೀ ರೂಪಾಂತರಂ?’ ಎಂದು ಆತಂಕದಿಂದ ಕೇಳುತ್ತಾನೆ. ಅವನ ಆತಂಕವನ್ನು ನಿವಾರಣೆ ಮಾಡಿದ ನಂತರ ನಸುನಗುತ್ತ 

ನಾನಿನ್ ಅಶರೀರಿ
ಮೇಣ್ ವಿರಾಟ್ ಶರೀರಿ, ನನ್ನ ನೇನ್
ಆ ಅನ್ಯರೆಸಗಿದೊಲ್ ಗುಡಿಯೊಳೆಯ ಸೆರೆಗೈದು
ಪೂಜಿಸಲ್ ಬಗೆವಾ? ಕರ್ಬೋನ್ನ ಸಂಕೋಲೆಯಂ
ಕಳಚಿ, ಚೆಂಬೊನ್ನ ಮಿಳಿಗಳಿಂ
ಸ್ವಾತಂತ್ರ್ಯದರ್ಥಮಂ ಬಂಧಿಸದಿರನರ್ಥದಿಂ.
ನುಡಿವರೆಡೆಯಿಂ ಮಿಗಿಲ್ ದುಡಿವರೆಡೆ ಸೊಗಸೆನಗೆ !
 
ಎಂದು ಭರತಮಾತೆಯು ನುಡಿಯುವವರಿಗಿಂತ ದುಡಿಯುವವರೆ ನನಗೆ ಹೆಚ್ಚು ಪ್ರೀಯರು, ಆಪ್ತರು ಎಂದು ನುಡಿಯುವುದು ನಿಜವಾದ ಸ್ವಾತಂತ್ರ್ಯದ ಅರ್ಥವಾಗಿದೆ. ಅಂತರಂಗದ ಬಂಧನಗಳು ಕಳಚಿಲ್ಲ ; ಬಾಹ್ಯಬಂಧನಗಳು ಮಾತ್ರ ತೋರಿಕೆಗೆ ಕಳಚಿಕೊಂಡಿವೆ, ಸಂಭ್ರಮ-ಉತ್ಸವಗಳಿಗೆ ಕಾಲವಿದಲ್ಲ ಎಂದು ಭರತಮಾತೆಯ ಪಾತ್ರದಿಂದ ಮಹಾಕವಿಗಳು ಹೇಳಿಸಿರುವ ಮಾತುಗಳು ಇಂದಿಗೂ ಪ್ರಸ್ತುತವೆನಿಸುತ್ತವೆಂಬುದನ್ನು ಪ್ರಾಜ್ಞರಾದ ಓದುಗರು ಗಮನಿಸಬಹುದು. ನೆತ್ತರಲಿ ಮುಳುಗಿದವನ ಭೂತವಿನ್ನು ಬಿಟ್ಟಿಲ್ಲ, ಇಂತಹ ಮಂಗಳ ಮುಹೂರ್ತಕ್ಕೆ ಕಾರಣನಾದ ಸ್ವಾತಂತ್ರ್ಯದ ಶಿಲ್ಪಿಯೆಲ್ಲಿ? ಎಂದು ಕೇಳುತ್ತಲೆ ತನ್ನ ದಿವ್ಯದೃಷ್ಟಿಯಿಂದ ಆತನನ್ನು ತೋರಿಸುತ್ತಾಳೆ. ಅಲ್ಲಿಂದ ‘ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್….’ ಗೀತೆ ಇಂಪಾಗಿ ಕೇಳಿ ಬರುತ್ತದೆ. (ಸ್ವಾತಂತ್ರ್ಯ ದೊರೆತ ಸಂಭ್ರಮದ ದಿನ ಗಾಂಧೀಜಿಯವರು ದೂರದ ಹಳ್ಳಿಯಲ್ಲಿದ್ದುದನ್ನು ನೆನಪಿಸಿಕೊಳ್ಳಬಹುದು). 

ನೀನ್ ಕಾಣ್ಪುದದು ವಂಗದೇಶದೊಳ್
ನವಕಾಲಿ ಎಂಬಾಪ್ರದೇಶಂ.
ಕೆಲದಿನಗಳಿಂದಲ್ಲಿ ಮೂರ್ಖರೊಳ್ ಕೆರಳಿರ್ಪ
ಮತವೈರ ವಿಷದುರಿಗಳಂ ನಂದಿಸಲ್
ಅಮೃತಸ್ವರೂಪನಪ್ಪಾ ಸ್ವಾತಂತ್ರ್ಯಶಿಲ್ಪಿ
ಯಾತ್ರಿಯಾಗಿರ್ಪನರಿಯೆಯಾ ನೀನ್ !
 
ಎಂದು ಸೂಚ್ಯವಾಗಿ ಮಹಾಕವಿಗಳು ಗಾಂಧೀಜಿಯವರ ಕುರಿತು ಭರತಮಾತೆಯ ಪಾತ್ರದ ಮೂಲಕ ವಿವರಿಸುತ್ತಾರೆ. ನಾಡಿನ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವು ಅಂತ್ಯಗೊಂಡಿತೆಂದು ಹುರುಪಿನಿಂದ ಬಂದಿದ್ದ ಭರತಸುತನು ದುಃಖದಿಂದ ವಿಷಣ್ಣನಾಗುತ್ತಾ ಕೇಳುತ್ತಾನೆ :
 
ಎಂದಿಗಮ್ಮಾ ಮುಗಿವುದೆಮ್ಮಿ ಅಳಲ್ ?
ಈಗಳೀಗಳೆ ಮೂಡಿದೆಮ್ಮ ಸೂರ್ಯಂಗೆ
ಮತ್ತಿದೇನೀ ಮತರಾಹು ಪೀಡೆ? 
ಇನ್ನೇಗಂ ನಾಮಿತ್ತ ಬಲಿದಾನದಿಂ
ತೃಪ್ತಳಾಗಳೆ ದೇವಿ?
 
ಎಂದು ತನ್ನ ಚಿಂತೆ, ನೋವನ್ನು ಹೊರಹಾಕುತ್ತಾನೆ. ಆಗ ಭರತಸುತನನ್ನು ಸಂತೈಸುತ್ತಾ ಮಾತೆಯು ಹೇಳುವ ಮಾತು ಮನೋಜ್ಞವಾಗಿದೆ. 

ಮಗೂ, ಬಲಿದಾನಕುಂಟೆ ಕೊನೆ ?
ಬಲಿ ಪರಂಪರೆಯಲ್ತೆ ಸ್ವಾತಂತ್ರ್ಯಜೀವನಂ !
 
ಬಲಿದಾನ ಮತ್ತು ನಂತರ ದೊರಕುವ ಸ್ವಾತಂತ್ರ್ಯಸಿದ್ಧಿಗಳು ಆ ಪರಮ ಬಲಿದಾನಕ್ಕೆ ಪೀಠಿಕೆ ಮಾತ್ರ ಎಂದು ವಿವರಿಸಿ ಸಮಾಧಾನ ಹೇಳುತ್ತಾಳೆ. ಅದೇ ವೇಳೆಗೆ ಹಿನ್ನಲೆಯಲ್ಲಿ,
 
ಗಾಂಧಿಯೆಂಬಾ ಪೆಸರೆ ನಾಂದಿಯಾಗಲಿ ನಮ್ಮ 
ಸ್ವಾತಂತ್ರ್ಯ ಸಂಭ್ರಮಕೆ, ಹಾಡು, ಪಕ್ಷಿ !
 
ಎಂಬ ಮಾತುಗಳ ವಾಣಿಯೊಂದು ಕೇಳಿಸುತ್ತದೆ. ಅದಕ್ಕೆ ಭಾರತಾಂಬೆಯು ‘ಶಿಲ್ಪಿಯು ಉಳಿಯಬೇಕಾದರೆ ಆತನ ಹೆಸರು ನಾಂದಿಯಾಗಬೇಕು, ಇಲ್ಲದಿದ್ದರೆ ಆತ ತನ್ನನ್ನೇ ಬಲಿಯಾಗಿ ಅರ್ಪಿಸಿಕೊಳ್ಳಲು ಹಿಂಜರಿಯಲಾರ’ ಎಂದು ಮುಂದಾಗುವುದನ್ನು ಎಚ್ಚರಿಸುತ್ತಾಳೆ. ಆತನನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ಭರತಸುತನು ತೆಗೆದುಕೊಳ್ಳುತ್ತಾನೆ. ಸಂದೇಹದಿಂದ ಭರತಮಾತೆಯು ಕಣ್ಣೀರು ಹಾಕುತ್ತಾಳೆ. ಮರುಕ್ಷಣದಲ್ಲಿಯೇ ವಿಕಟವಾಗಿ ನಗುತ್ತಾಳೆ. ಇದನ್ನು ಕಂಡು ಬೆಪ್ಪಾಗಿ ನಿಲ್ಲುವ ಭರತಸುತನಿಗೆ ಕಣ್ಣುಮುಚ್ಚಿ ನೋಡಲು ಹೇಳುತ್ತಾ, ಮುಂದಾಗುವುದನ್ನು ತೋರಿಸುತ್ತಾಳೆ. ಅಲ್ಲಿ ಗೋಚರಿಸಿದ ದೃಶ್ಯಾವಳಿಗಳನ್ನು ಕಾಣುತ್ತಾ, ಬೆಚ್ಚಿ ನಡುಗಿ ಚೀರುತ್ತಾ ಹೇಳುತ್ತಾನೆ.
 
ಅಮ್ಮಾ, ಅಮ್ಮಾ, ಅಮ್ಮಾ,
ಧವಳಗಿರಿ ತುಂಡಾಯ್ತು !
ಅಯ್ಯೋ ಉರುಳುತಿದೆ, ಉರುಳುತಿದೆ, ಉರುಳುತಿದೆ !
ಏಂ ಭೀಮಂ, ಭಯಂಕರಂ, ರೌದ್ರದೃಶ್ಯಂ?
 
ಎಂದು ಪರೋಕ್ಷವಾಗಿ ಗಾಂಧೀಜಿಯವರ ಕೊಲೆಯನ್ನು ಮಹಾಕವಿಗಳು ನಿರೂಪಿಸಿದ್ದಾರೆ. ಹೀಗಿರುವಂತಹ ಸಂದರ್ಭದಲ್ಲಿ ಭರತಮಾತೆಯು ‘ಬೆದರಿದಿರ್ ! ಮುಂದಪ್ಪುದಂ ಕಾಣ್…’ ಎಂದು ಸರಣಿ ದೃಶ್ಯಾವಳಿಗಳನ್ನು ತೋರಿಸುತ್ತಾಳೆ. ನೋಡಿದ ಭರತಸುತನಿಂದ ಹೊಮ್ಮುವ ಮಾತುಗಳು ಹೀಗಿವೆ: 
 
ಮೋಡಗಳ್ ತೊಲಗುತಿವೆ ! ಏನ್ ಬೆಳಕು !
ಹೊಂಬೆಳಕು ಚೆಲ್ಲುತಿದೆ ಬಾನ್ ದೇಶದಿಂ !…..
ಹಕ್ಕಿಯಿಂಚರಮುಕ್ಕುತಿದೆ !…..
ಪಚ್ಚೆ ಪಯಿರದೊ ಮುಚ್ಚಿ ಮುಸುಕುತಿದೆ
ಧರಣಿದೇವಿಯ ಪೃಥುಲ ವಕ್ಷಮಂ!
ದೂರದಿಂದಾವುದೋ ಕೇಳುತಿದೆ ದಿವ್ಯಗೀತಂ !

ಎಂದು ಶಾಂತನಾಗಿ ಆಲಿಸಲು ಆರಂಭಿಸಿದಾಗ ದೂರದಲ್ಲಿ ‘ಜನಗಣಮನ’ ರಾಷ್ಟ್ರಗೀತೆಯು ಕೇಳಿಸುತ್ತದೆ. ರಾಷ್ಟ್ರಗೀತೆಯ ನಿನಾದವು ಮುಗಿದ ನಂತರ ಭಾರತಾಂಬೆಯು,
 
ಕಣ್ದೆರೆದು ಕಾಣ್, ರಾಷ್ಟ್ರಧ್ವಜಂಬಿಡಿದು
ಬರುತಿಹುದು ಮಂದಿ ಸಂದಣಿಸಿ ಗುಡಿಗೆ.
ನೀಂ ಕಂಡ ದರ್ಶನದೊಳ್ ಅಖಿಳಾರ್ಥಮಂ
ತಿಳಿದು ಕಾಣ್ !
ಹೃದಯ ದೌರ್ಬಲ್ಯಮಂ ಮಾಣ್ !
ಸ್ವಾತಂತ್ರ್ಯಜೀವನಂ ಬಲಿ ಪರಂಪರೆಯೆಂಬುದಂ,
ಬಲಿದಾನ ತತ್ತ್ವಮಂ, ಭಾವಿಸಿ ಮನಂಗಾಣ್ !
 
ಎಂದು ಹೇಳುತ್ತಾ ಮೊದಲಿನಂತೆ ಕಾಳಿಕಾ ವಿಗ್ರಹದಲ್ಲಿ ಲೀನಳಾಗುತ್ತಾಳೆ. ಅಷ್ಟೋತ್ತಿಗೆ ಘೋಷಣೆಗಳನ್ನು ಕೂಗುತ್ತಾ ಜನಜಂಗುಳಿಯು ಗುಡಿಯೊಳಗೆ ಪ್ರವೇಶಿಸಿ, ಭರತಸುತನು ಕೈಮುಗಿದುಕೊಂಡು ದೇವೀ ಸ್ತೋತ್ರವನ್ನು ಹಾಡುತ್ತಿರುವುದನ್ನು ಕಂಡು ನಿಶಬ್ದವಾಗಿ ನಿಲ್ಲುತ್ತಾರೆ. 
 

ಚಿದ್ರೂಪಿ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ
ಓಂ ಶಾಂತಿಃ ಶಾಂತಿಃ ಶಾಂತಿಃ

ಎಂಬ ಸುದೀರ್ಘವಾದ ದೇವಿಸ್ತುತಿಯೊಂದಿಗೆ ದೃಶ್ಯಕ್ಕೆ ತೆರೆಬೀಳುವುದು.
 
ಮಹಾಕವಿಗಳು ಆಯ್ಕೆಮಾಡಿಕೊಂಡ/ಪ್ರಸ್ತುಪಡಿಸಿದ ಈ ಕಥಾವಸ್ತುವು ಸರ್ವಕಾಲಿಕ ಮತ್ತು ಸರ್ವಮೌಲಿಕವಾದುದೆಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಭಾರತಾಂಬೆ ಮತ್ತು ಮಹಾಕಾಳಿ ಇವರಿಬ್ಬರಲ್ಲಿಯೂ ಒಬ್ಬಳೇ ತಾಯಿಯನ್ನು ಕಾಣುವ ಕಲ್ಪನೆಯು ವಿಶಿಷ್ಟವಾಗಿದೆ. ರಂಗಕೃತಿಯ ಮೂರು ದೃಶ್ಯಾವಳಿಗಳು ನಡೆಯುವುದು ಕಾಳಿಕಾ ಮಂದಿರದಲ್ಲಿಯೆಂಬುದು ರಂಗಪ್ರಯೋಗದ ದೃಷ್ಟಿಯಿಂದ ಮಹಾಕವಿಗಳು ರಂಗತಂಡಕ್ಕೆ ಹೆಚ್ಚಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿರುವುದು ಪರೋಕ್ಷವಾಗಿ ರಂಗಸಂಘಟಕರಿಗೆ ಸಂಭ್ರಮದ ಸಂಗತಿ.  ಹಾಳು ಬಿದ್ದ ದೇವಾಲಯದಲ್ಲಿ ಆರಂಭಗೊಳ್ಳುವ ದೃಶ್ಯವು ಮುಂದಿನ ದೃಶ್ಯದಲ್ಲಿ ಅದೇ ದೇವಾಲಯವು ಜೀರ್ಣೋದ್ಧಾರಗೊಂಡು ಬೆಳಕು ಪಡೆದಿರುವಂತೆ ನಿರೂಪಿಸಿರುವುದು ಇಡೀ ದೇವಾಲಯವೇ ಭಾರತದೇಶದ ವ್ಯಾಪ್ತಿಯನ್ನು ಪಡೆಯುತ್ತದೆ. ಭಾರತದೇಶದ ಅಂತರಚೈತನ್ಯವಾಗಿ ಭಾರತಾಂಬೆಯು ಹೊರಹೊಮ್ಮುತ್ತಾಳೆ. ಪ್ರಾಚೀನಕಾಲದ ಭಾರತದ ಭವ್ಯ ಪರಂಪರೆ, ಅಂದಿನ ಕಾಲದ ವೈಭವ ಮುಂತಾದವುಗಳನ್ನು ನೆನಪಿಸಿಕೊಳ್ಳುತ್ತಾ, ಇಂದಿನ ದುಸ್ಥಿತಿ, ಮಿತ್ರರಾಗಿ ವ್ಯಾಪಾರಕ್ಕೆ ಬಂದ ಆಂಗ್ಲರು ಆಕ್ರಮಿಸಿಕೊಂಡಿದ್ದು, ಆಕ್ರಮಣದಿಂದ ಬಿಡುಗಡೆ ಬಯಸಿ ನಡೆಸಿದ ಸುದೀರ್ಘ ಹೋರಾಟ, ಚಳುವಳಿ, ರಕ್ತಪಾತ, ಬಲಿದಾನ, ಸಂಘರ್ಷ, ನಡುವೆ ನಡೆದ ಮತಧರ್ಮಗಳ ತಿಕ್ಕಾಟ, ಇಂತಹ ಪ್ರಸಂಗದಲ್ಲಿಯೇ ಭವ್ಯಭಾರತದ ಕನಸು ಹೀಗೆ ಹಲವಾರು ಸಂಗತಿಗಳನ್ನು ಈ ರಂಗಕೃತಿಯಲ್ಲಿ ಮಹಾಕವಿಗಳು ಹಿಡಿದಿಟ್ಟಿದ್ದಾರೆ.  
 
‘ಜಲಗಾರ’ ಕೃತಿಯಲ್ಲಿ ಸಾಮಾಜಿಕ ಶೋಷಣೆಯ ವಿರುದ್ಧ ಧ್ವನಿಯೆತ್ತುವಂತೆ ಈ ಕೃತಿಯಲ್ಲಿ ರಾಷ್ಟ್ರದ ಅಖಂಡತೆ, ರಾಷ್ಟ್ರಭಕ್ತಿ, ಪರಮಾಧಿಕಾರ, ಸ್ವಾತಂತ್ರ್ಯದ ಮಹತ್ವಗಳನ್ನು ನಿರೂಪಿಸುವುದರೊಂದಿಗೆ ಅಪಾರವಾದ ರಾಷ್ಟ್ರೀಯ ಸಂಗತಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಸಂಭಾಷಣೆಯಲ್ಲಿ ಮಹಾಕವಿಗಳು ಕೇವಲ ಎರಡು ಪಾತ್ರಗಳನ್ನೀಟ್ಟುಕೊಂಡು ಸೂಕ್ಷ್ಮವಾದ ರಂಗತಂತ್ರದೊಂದಿಗೆ ಬಿಗಿಯಾಗಿ ಕೃತಿಯ ಹಂದರವನ್ನು ಸುಂದರವಾಗಿ ಹಣೆದಿದ್ದಾರೆ. ಅಪಾರವಾದ ಅರ್ಥ ಧ್ವನಿತವಾಗುವಂತೆ ಬಳಸಿಕೊಂಡಿರುವ ಸಾಂಕೇತಿಕ ಪ್ರತಿಮೆಗಳನ್ನು ಕೃತಿಯ ಉದ್ದಕ್ಕೂ ಬಳಸಿಕೊಂಡಿರುವುದನ್ನು ನಾವು ಕಾಣಬಹುದು. ದೇಶ ಮತ್ತು ಪ್ರಜೆ ಉದ್ಧಾರವಾಗಲು ‘ಅಹಂಕಾರ’ದ ನಿರಂತರ ಬಲಿದಾನ ಅವಶ್ಯಕವೆಂಬ ಸೃಷ್ಟಿಯ ಸತ್ಯವನ್ನು ಶಾಶ್ವತವಾಗಿ ಈ ಕೃತಿಯು ಕಟ್ಟಿಕೊಡುತ್ತದೆ. ಈ ಕಾರಣಕ್ಕಾಗಿಯೇ ಅಂದು ಮುಗಿದು ಹೋದ ಹೋರಾಟವೊಂದರ ತಾತ್ಕಾಲಿಕ ಕಥಾನಕವಾಗಿರದೆ, ನಿರಂತರ ಅವಿರತವಾಗಿ ದುಡಿಮೆಯೊಂದಿಗೆ ಸಾಧನೆಯ ಮೆಟ್ಟಿಲೇರುವಂತಹ ನಿತ್ಯನೂತನ ರಂಗಕೃತಿಯಾಗಿ ಇಂದಿಗೂ ಹಲವಾರು ಕಡೆಗಳಲ್ಲಿ ಆಧುನಿಕ ರಂಗನಿರ್ದೇಶಕರಿಂದ ಹೊಸದಾದ ರಂಗಸಾಧ್ಯತೆಯ ವಿಸ್ತರಣೆಯೊಂದಿಗೆ ರಂಗದಲ್ಲಿ ಪ್ರಯೋಗವಾಗುತ್ತಲಿದೆ. 
 
ಇಂತಹ ರಾಷ್ಟ್ರಾಭಿಮಾನ, ದೇಶಭಕ್ತಿಯನ್ನು ಬಡಿದೆಬ್ಬಿಸುವಂತಹ ಮಹತ್ವದ ರಂಗಕೃತಿಯು ಮೈಸೂರಿನ ರಂಗಾಯಣದ ವನರಂಗದಲ್ಲಿ ದಿನಾಂಕ 28.12.2012ರ ಸಂಜೆಯ ಸುಂದರ ವಾತಾವರಣದಲ್ಲಿ ಆತ್ಮೀಯ ರಂಗಮಿತ್ರ, ನೀನಾಸಂ ಪದವೀಧರ ಮಾಂತೇಶ ದೇಗಾಂವಿ ನಿರ್ದೇಶನದಲ್ಲಿ ಗೊಟ್ಟಿಗೆರೆಯ ಚಂದ್ರಶೇಖರ ಪ್ರತಿಷ್ಟಾನದ ಕಲಾವಿದರು ಅಭಿನಯಿಸುತ್ತಿದ್ದರೆ, ಪ್ರೇಕ್ಷಕರಾಗಿ ಕುಳಿತು ನೋಡುತ್ತಿದ್ದ ಹಲವರಲ್ಲಿ ರಾಷ್ಟ್ರಭಕ್ತಿಯು ಮೈಮನಗಳಲ್ಲಿ ರೋಮಾಂಚನವನ್ನು ಹುಟ್ಟಿಸುತ್ತಿತ್ತು. ಈ ಪ್ರಯೋಗದಲ್ಲಿ ನಿರ್ದೇಶಕರು ಭಾರತಾಂಬೆಯ ಎರಡು ಪಾತ್ರಗಳನ್ನು ಪರಿಚಯಿಸಿದ್ದರು. ಛಾಯಾಧ್ವನಿಗಳು ಮತ್ತು ವಾಣಿ ಪಾತ್ರಗಳು ರಂಗದಲ್ಲಿ ಕಾಣಿಸಿಕೊಳ್ಳದೇ ಕೇವಲ ಧ್ವನಿಯ ಮೂಲಕ ಪ್ರೇಕ್ಷಕರನ್ನು ತಲುಪುವಂತೆ ಪ್ರಯತ್ನಿಸಿದ್ದರಲ್ಲಿ ಸಂಗೀತ ನಿರ್ವಹಣೆಯ ತಂಡವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಇಂತಹ ಮಹಾನ್ ರಂಗಕೃತಿಯೊಂದರ ಪ್ರದರ್ಶನವನ್ನು ‘ಕುವೆಂಪು ಉತ್ಸವ-2012’ನ್ನು ಹಮ್ಮಿಕೊಳ್ಳುವ ಮೂಲಕ ಬೆಂಗಳೂರಿನ ‘ರಂಗಕಹಳೆ’ ಮಿತ್ರರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 
*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Jayaprakash Abbigeri
Jayaprakash Abbigeri
10 years ago

ಸಿದ್ದರಾಮ್, ಬಲಿದಾನ ಎಂಬ ಟೈಟಲ್ ನೋಡಿದ ತಕ್ಷಣ ರಾಷ್ಟ್ರಕವಿ ಕುವೆಂಪುರವರು ಇಲ್ಲಿ ಯಾವುದೋ ಸಮಾಜದ ಅನಿಷ್ಟ ಪದ್ಧತಿಯ ಆಚರಣೆಯ ವಿರುದ್ಧ ಧನಿಯೆತ್ತಿರುವ ಥೀಮ್ ಇರುವ ಕೃತಿಯೆಂದು ನಾನು ಭಾವಿಸಿದ್ದೆ. ಆದರೆ ಅಲ್ಲಿ ನಡೆಯುವುದು 'ಭಾರತ ದೇಶದ ಸ್ವಾತಂತ್ರ'ಕ್ಕೆ ಸಂಬಂಧಿಸಿದಂತೆ ಇರುವಂಥ ರಂಗನಾಟಕ ಇಂತಹ ಕೃತಿಯ ಕುರಿತು ಗಮನಸೆಳೆಯುವ ಲೇಖನ ಒದಗಿಸಿದ ಮತ್ತು ಪ್ರಕಟಿಸಿದ ಎಲ್ಲರಿಗೂ ಕೃತಜ್ಞತೆಗಳು. ನಿಮಗೂ ಮತ್ತು ಪಂಜು ಪತ್ರಿಕೆಯ ಬಳಗಕ್ಕೂ ನನ್ನ ಶುಭಾಶಯಗಳು…good day…

sharada.m
sharada.m
10 years ago

nice

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago
Reply to  sharada.m

Thanx Madamji…

3
0
Would love your thoughts, please comment.x
()
x