‘ಯಂತಿಲ್ಲೆ’:ಸೂರಿ ಹಾರ್ದಳ್ಳಿ ಅವರ ಹೊಸ ಪುಸ್ತಕದಿಂದೊಂದು ಕತೆ


ಹಾಸ್ಯಪ್ರಿಯ ಓದುಗರಿಗೆ ಹಿರಿಯ ಸಾಹಿತಿ ಸೂರಿ ಹಾರ್ದಳ್ಳಿ  (ಸೂರ್ಯನಾರಾಯಣ ಕೆದಿಲಾಯ ಎಚ್) ಅವರು ಚಿರಪರಿಚಿತ. ಹಾಸ್ಯವಷ್ಟೇ ಅಲ್ಲ ಕತೆ, ಕಾದಂಬರಿ, ಟಿ.ವಿ.ಧಾರಾವಾಹಿಗಳ ಸಂಭಾಷಣೆ ಹೀಗೆ ಸದಾ ಕ್ರಿಯಾಶೀಲರಾದ ಇವರು ಈವರೆಗೆ ತ್ರಸ್ತ, ವಧುಪರೀಕ್ಷೆ (ಕಥಾಸಂಕಲನ); ಸಿನಿಮಾ ಸಿನಿಮಾ, ಹಿತೈಷಿ, ಗಗನ ಸೌಧ (ಕಾದಂಬರಿ); ಬಾಸನ್ನಿಬಾಯ್ಸೋದ್ಹೇಗೆ?(ಹಾಸ್ಯನಾಟಕ); ಉಪಾಯೋಪಾಯಗಳು, ಉಗಾದಿಸೀರೆ, ಅನಾಮಧೇಯ ಪತ್ರಗಳು, ಹೆಂಡತಿಯನ್ನು ಪ್ರೀತಿಸಿದರೆ, ಸರ್ಕಾರಿ ಹಾಸ್ಯೋತ್ಸವ(ಹಾಸ್ಯ ಸಂಕಲನಗಳು) ಮೊದಲಾದ ಸಮೃದ್ದ ಸಾಹಿತ್ಯವನ್ನ ಓದುಗರಿಗೆ ನೀಡಿದ್ದಾರೆ. 

ಪ್ರಕಾಶ ಸಾಹಿತ್ಯ ಪ್ರಕಟಿಸಿರುವ ಸೂರಿ ಹಾರ್ದಳ್ಳಿ ಅವರ ಹೊಸ ಪುಸ್ತಕ 'ಸೊಂಡಿಲೇಶ್ವರ'ದಿಂದ ಆಯ್ದ ಒಂದು ಚಂದದ ಕತೆಯನ್ನ ಓದುಗರಿಗಿಲ್ಲಿ ನೀಡುತ್ತಿದ್ದೇವೆ.

ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ: ಪ್ರಕಾಶ ಸಾಹಿತ್ಯ (ಶ್ರೀ ಸತೀಶ್), ಮೊ:99001 18800, ಪುಟಗಳು:170, ಬೆಲೆ:70



ರವಿಯಣ್ಣ ಹಳದಿ ಬಣ್ಣದ ಚಾದರ ಬೀಸುತ್ತಾ ಪಶ್ವಿಮ ಘಟ್ಟಗಳ ದಟ್ಟಾರಣ್ಯದಲ್ಲಿ ಅಡಗಿ ಕುಳಿತಿದ್ದ ಕತ್ತಲೆ ರಾಕ್ಷಸನನ್ನು ಅಟ್ಟಿಸತೊಡಗಿದ. ಭಯಭೀತನಾದ ಆ ರಕ್ಕಸ ಅಂಡಿಗೆ ಕಾಲು ಕೊಟ್ಟು ಎಷ್ಟು ವೇಗವಾಗಿ ಓಡತೊಡಗಿದನೆಂದರೆ ಕೆಲವೇ ಕ್ಷಣಗಳಲ್ಲಿ ಹೊಸಂಗಡಿ, ಹಾಲಾಡಿ, ಹಾರ್ದಳ್ಳಿ, ಕೋಟೇಶ್ವರ, ಕುಂದಾಪುರ, ಹೀಗೆ ಇಡೀ ಕರಾವಳಿಯನ್ನೇ ಕ್ಷಣಾರ್ಧದಲ್ಲಿ ಕ್ರಮಿಸಿಬಿಟ್ಟಿದ್ದ. ಅವನ ಹಿಂದೆ ರವಿ. ತಿಮಿರರಾಯ ಪರಶುರಾಮ ಕ್ಷೇತ್ರ ಬಿಟ್ಟು ಸಮುದ್ರಕ್ಕೆ ಹಾರುವ ತನಕ ಅಟ್ಟಿಸಿಕೊಂಡು ಹೋದ. 

ಬಂಧ ಮುಕ್ತತೆಯ ಸಂತಸದಿಂದ ವೃಕ್ಷ ಸಮೂಹಗಳ ಒಡಲೊಳಗಿಂದ ಹಕ್ಕಿಗಳ ದನಿಗಳು ಹರಡಿದವು. ಪಕ್ಷಿಗಳು ಬಂಧಮುಕ್ತವಾಗಿ ಬಾನಲ್ಲೆಲ್ಲಾ ಚಿತ್ತಾರ ಬರೆದವು. ವನಜೀವಿಗಳು ಕುಣಿದು ಕುಪ್ಪಳಿಸಿದವು. ಗಿಡ-ಮರಗಳೆಲ್ಲಾ ಸುಗಂಧಿತ ವರ್ಣಮಯ ಹೂಗಳನ್ನು ಮುಡಿದು ಸಂಭ್ರಮಿಸಿದವು. 

ಊರನ್ನೆಲ್ಲಾ ಬೆಳಕಿನಲ್ಲಿ ಅದ್ದುವುದು ಆದಿತ್ಯನ ದಿನನಿತ್ಯದ ಕೆಲಸ. ಕರ್ತವ್ಯನಿಷ್ಠನಾದ ಅವನಿಗೆ ಅದು ಬೇಸರ ತರಿಸದ ಕಾರ್ಯ, ಎಂದೂ ಗೊಣಗದೆ ಮಾಡುವ ಕಾರ್ಯ.

ಇಂತಹ ಕಡಲತೀರದ ಊರೊಂದರಲ್ಲಿ ನಾಗಪ್ಪಯ್ಯ ಎಂಬ ನಾಮಧೇಯದ, ಊರವರಲ್ಲದೇ ಇನ್ನಾರಿಗೂ ಆಕರ್ಷಕವಲ್ಲದ ಗತಕಾಲದ ಶಿಥಿಲ ಸ್ಥಿತಿಯ ದೇವಸ್ಥಾನವೊಂದರ ಅರ್ಚಕರೊಬ್ಬರ ಮನೆ ಇದೆ. ದಿನಂಪ್ರತಿ ಅವರು ತನ್ನ ಮುದಿ ದೇಹಕ್ಕೆ ಹೊಂಗಿರಣಗಳ ಸ್ನಾನ ಮಾಡಿಸುತ್ತಾ, ಮಣ ಮಣ ಮಂತ್ರ ಪಠಿಸುತ್ತಾ ದಾಸವಾಳ, ಸೂರಳಿ, ಗೋರಂಟಿ ಹೂಗಳನ್ನು ಕಿತ್ತು ಅವರಷ್ಟೇ ವಯಸ್ಸಾದ ಬಿದಿರಿನ ಬುಟ್ಟಿಯಲ್ಲಿ ಹಾಕಿಕೊಳ್ಳುತ್ತಾರೆ. ಅದು ಅವರು ಜನ್ಮದಾರಭ್ಯ ನಂಬಿಕೊಂಡು ಬಂದ, ಯಜ್ಞೋಪವೀತ ಧರಿಸಿ ದ್ವಿಜನಾದ ನಂತರ ಅರ್ಚನೆ ಮಾಡುತ್ತಿದ್ದ ಅನಂತ ಪದ್ಮನಾಭ ದೇವರ ತಲೆಗೆ ಏರಿಸಲು. ಅವರ ಬದುಕನ್ನು ನಿರ್ಧರಿಸುವವನು ಆ ಅನಂತ ಪದ್ಮನಾಭ. ಅವರ ಗೆಳೆಯ, ಹಿತೈಷಿ, ಮಾರ್ಗದರ್ಶಕ, ಹೀಗೆ ಎಲ್ಲವೂ. ಆದರೆ ಕಳೆದ ಕೆಲ ತಿಂಗಳಿನಿಂದ ನಾಗಪ್ಪಯ್ಯನವರಿಗೂ ತನ್ನ ದೇವರ ಬದ್ಧತೆಯ ಬಗ್ಗೆ ಅನುಮಾನ ಮೂಡತೊಡಗಿದೆ. ಅದಕ್ಕೆ ಕಾರಣವೂ ಇದೆ.

ಅವರು ಆ ಶಿಲಾ ಮೂರ್ತಿಯ ಎದುರು ನಿಂತು ನೇರವಾಗಿಯೇ ಆಪಾದನೆ ಮಾಡಿದ್ದರೊಮ್ಮೆ. ’ನಿನ್ನ ಮೂತಿ ಚೆಂದ, ನಿನ್ನ ಹಲ್ಲು ಆ ಹಣ್ಣಿನ ಹಾಗೆ, ನಿನ್ನ ಕಣ್ಣು ಈ ಹೂವಿನ ಹಾಗೆ, ನಿನ್ನ ದನಿ ಕೋಗಿಲೆಯ ಹಾಗೆ, ನಿನ್ನ ನಿಲುವು, ಭಂಗಿ, ಅಂಡು, ಇವೆಲ್ಲಾ ಹಾಗೆ-ಹೀಗೆ ಎಂದು ಹೊಗಳಿ ಮಂತ್ರ ಹೇಳಿದರೂ, ಲಾರಿಗಳಷ್ಟು ಗಂಧವನ್ನು ತೇಯ್ದು ಲೇಪಿಸಿದರೂ, ಡ್ರಮ್‌ಗಳಷ್ಟು ತೀರ್ಥವನ್ನು ಆಪೋಶನ ಮಾಡಿದರೂ, ಲಕ್ಷಾಂತರ ಊದಿನ ಕಡ್ಡಿ ಹಚ್ಚಿದರೂ ನಿನ್ನ ಹೃದಯ ಕಲ್ಲಾಗಿಯೇ ಇದೆ. ನಿನ್ನ ಹೃದಯ ಮಾತ್ರವಲ್ಲ, ನಿನ್ನ ದೇಹವೇ ಶಿಲೆ, ಭಾವನೆಗಳಿಲ್ಲದ ಅನುಭೂತಿಗಳಿಲ್ಲದ ಮನಸ್ಸು ನಿನ್ನದು,’ ಎಂದೆಲ್ಲಾ. ಆದರೆ ಹೃದಯದಲ್ಲಿ ಬೇರುಬಿಟ್ಟಿದ್ದ ನಂಬಿಕೆಯ ಮೂಲವನ್ನು ಅಲುಗಿಸುವುದು ಸುಲಭವಲ್ಲ. ಅದೂ ಅಲ್ಲದೇ ಎಳ್ಳೆಣ್ಣೆಯ ಗಮಟು ವಾಸನೆಯ, ಗಂಧದ ವಾಸನೆಯ, ಊದಿನ ಕಡ್ಡಿಯ ವಾಸನೆಯ ಆ ದೇವರನ್ನು ಬಿಟ್ಟರೆ ನಾಗಪ್ಪಯ್ಯನವರಿಗೆ ಬೇರೆ ಗತಿಯಿಲ್ಲ, ಬೇರೆ ಬದುಕಿಲ್ಲ. ಅನಂತ ಪದ್ಮನಾಭನಿಗೂ ಕೂಡಾ.

ಒಂದು ದಿನ, ಹೀಗೇ ಹೂ ಕುಯ್ಯುತ್ತಿದ್ದಾಗ ದೂರದಿಂದ ಒಂದು ದನಿ ಕೇಳಿಸಿತು, ’ಹ್ವಾಯ್ ನಾಗಪ್ಪಯ್ಯ, ವಿಷಯ ಗೊತ್ತ ಆ ನಿಮಗೆ?’

ಹುಬ್ಬಿಗೆ ಕೈ ಇಟ್ಟು ನೋಡಿ ಧ್ವನಿಯ ಮೂಲ ಯಾವುದೆಂದು ಗ್ರಹಿಸಿದ ನಾಗಪ್ಪಯ್ಯ, ’ಯಂತ?’ ಎಂದು ಮತ್ತೆ ಪ್ರಶ್ನಿಸಿದರು. ಆ ಪ್ರಶ್ನೆ ಬಂದಿದ್ದು ಮಾಬ್ಲ ಪೂಜಾರಿಯಿಂದ. ಅವನ ಆ ಪ್ರಶ್ನೆಯ ಗರ್ಭದಲ್ಲಿ ಸ್ಫೋಟಗೊಳ್ಳಲಿರುವ ಹಲವಾರು ವಿಷಯಗಳಿವೆ ಎಂಬುದು ಅವನ ದನಿಯಿಂದಲೇ ತಿಳಿಯಿತು ನಾಗಪ್ಪಯ್ಯನವರಿಗೆ.

’ನಿಮ್ಮ ಮಗ ಶೀನ ಸಿಕ್ಕಿನಾ?’ ಶೀನ, ಅರ್ಥಾತ್ ಶ್ರೀನಿವಾಸನು ನಾಗಪ್ಪಯ್ಯ-ಮಾದೇವಿಯರ ಏಕೈಕ ಪುತ್ರ, ಕುಲೋದ್ಧಾರಕ, ರೌರವ ನರಕಕ್ಕೆ ಪಿತೃಗಳು ಹೋಗದಂತೆ, ತಡೆಯುವವ. ಹಿಂದಿನವರು ಹೇಳಿದ್ದಾರೆ, ’ಅಪುತ್ರಸ್ಯ ಗತಿರ್ನಾಸ್ತಿ, ಸ್ವರ್ಗೋ ನೈವಚ ನೈವಚ,’ ಎಂದು. ಆ ಶೀನ ಮಾಣಿ ಆರು ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ. ದೀಪಾವಳಿಯಂದು ಹೊನ್ನೆ ಎಣ್ಣೆಯಲ್ಲಿ ಅದ್ದಿದ ಹಳೆಯ ಪಾಣಿ ಪಂಚೆಯ ಚೂರುಗಳನ್ನು ಬಿದಿರು ಕಡ್ಡಿಗೆ ಸುತ್ತಿ, ಬೆಂಕಿ ಹಚ್ಚಿ, ಗದ್ದೆಯಲ್ಲಿ ಊರಿ, ಸುತ್ತ ಕಿಸ್ಕಾರ ಮುಂತಾದ ಹೂಗಳನ್ನು ಸುರಿದು, ’ಹೊಲಿ ಕೊಟ್ರೋ, ಬಲಿ ತಗೊಂಡ್ರೋ, ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರೋ..’ ಎಂದು ಹೇಳಿ, ಹೋ.. ಹೋ.. ಎಂದು ಅಂಡು ಹರಿಯುವಂತೆ ಕೂಗಿದ್ದ ಶೀನ. ’ಹೊಳಾಲು ಹಾಕು ಮರಾಯ, ಎಂತಕ್ಕೆ ವರ್ಲತೆ?’ ಎಂದು ಆಕ್ಷೇಪಿಸಿದ್ದರು ನಾಗಪ್ಪಯ್ಯ, ಅದು ಅವನ ತಲೆಗೆ ಹೋಗುವುದಿಲ್ಲ ಎಂದು ಗೊತ್ತಿದ್ದೂ. ಅವನ ಉತ್ಸಾಹವನ್ನು ಅಪ್ಪ ಮೆಚ್ಚದಿರಲಿಲ್ಲ. ವಯಸ್ಸೇ ಅಂಥದ್ದು, ಮಾಡಿಸುತ್ತೆ. ಆದರೆ ಅದೇನು ಕೊಲೆಯೇ, ಹಿಂಸೆಯೇ?

ಈ ವರ್ಷ ಅವನಿಲ್ಲ, ಅವನ ಕೂಗಿಲ್ಲ. ತ್ರಿವಿಕ್ರಮನಾಗಿ ಬೆಳೆದ ವಾಮನ ಮೂರನೆಯ ಪಾದವನ್ನು ಬಲೀಂದ್ರನ ತಲೆಯ ಮೇಲಿಟ್ಟು ಪಾತಾಳಕ್ಕೆ ತಳ್ಳಿಬಿಟ್ಟಿದ್ದ. ಅವನನ್ನು ನೆನಪಿಸಿಕೊಳ್ಳುವುದು ದೀಪಾವಳಿಯಂದು. ಅವನ ಸ್ಮರಣೆಯ ದಿನವೇ ಬಲಿಪಾಡ್ಯಮಿ.

ಈ ವರ್ಷ ನಾಗಪ್ಪಯ್ಯನವರಿಗೆ ಎಂದಿನ ಉತ್ಸಾಹ ಇಲ್ಲ. ಹಾಗಾಗಿ ಮನೆಯ ಕಂಬಗಳಿಗೆ ಭತ್ತದ ಕದಿರಿನ ಶೃಂಗಾರವಿಲ್ಲ. ದೇವರಿಗೆ ವಿಶೇಷ ಪೂಜೆ ಇಲ್ಲ. ಮನೆಯಲ್ಲಿ ವಿಶೇಷ ಭೋಜನವಿಲ್ಲ. ಪಟಾಕಿ-ಗಿಟಾಕಿಗಳನ್ನು ಎಂದೂ ಕೊಂಡವರಲ್ಲ ಅವರು. ಯಾರು ಬೆಂಕಿ ಹಚ್ಚಿದರೇನು, ಬೆಳಕು ಎಲ್ಲರದು, ಶಬ್ದ ಸರ್ವರದು. ಹಚ್ಚುವುದರಿಂದೇನು ಕೋಡು ಬರುತ್ತದೆಯೇ? ಮಗನೂ ಅಪ್ಪನಂತೆಯೇ. ಯಾವತ್ತೂ ಅವನು ಪಟಾಕಿ ಬೇಕೆಂದು ’ಮರ್ಕಿದವನು’ ಅಲ್ಲ.

ಉತ್ತರ ಬರದೇ ಒಂದು ಹೆಜ್ಜೆ ಕೂಡಾ ಮುಂದಿಡುವುದಿಲ್ಲ ಎಂಬಂತೆ ಅಲ್ಲಿಯೇ ನಿಂತಿದ್ದ ಮಾಬ್ಲನ ಪ್ರಶ್ನೆಗೆ ಅದೇ ಹಳೆಯ ಉತ್ತರ ಕೊಟ್ಟರು ನಾಗಪ್ಪಯ್ಯ. ’ಯತ್ಲಾಯಿ ಹೋಯಿನೋ ಮರಾಯಾ. ಬಾಂಬೆಗೆ ಹೋಯಿದ್ದ ಅಂದ್ರು ಯಾರೋ.. ಹುಬ್ಳಿಗೆ ಹೋಯಿಪ್ಕೂ ಸಾಕು. ಬತ್ತ ಮರಾಯಾ. ದೇವರು ಹೇಂಗೆ ಮಾಡ್‌ತ್ನೋ, ಮಾಡಲಿ, ನಂಬಿದವರ ಕೈ ಬಿಡುದಿಲ್ಲೆ ಅಂವ..’ ಎಂದರೂ ಆ ನಂಬಿಕೆಯ ಬಗ್ಗೆಯೇ ಸಂಶಯ ಬರತೊಡಗಿದೆ ಅವರಿಗೆ. ಕಲಿಯುಗದಲ್ಲಿ ಅನ್ಯಾಯ ಮಾಡಿದವರು, ಕಳ್ಳರು, ಭ್ರಷ್ಟರು, ಅನಾಚಾರಿಗಳು ಸಂತೋಷದಿಂದ ಇರುತ್ತಾರೆ. ದಾಸರೇ ಹೇಳಿದ ಹಾಗೆ ಸತ್ಯವಂತರಿಗಿದು ಕಾಲವಲ್ಲ!

ಇಪ್ಪತ್ತರ ಏಕೈಕ ಮಗ ಮನೆಗೆ ಹಿಂತಿರುಗಿ ಬರುತ್ತಾನೆ ಎಂದುಕೊಂಡೇ ದೇಹದಲ್ಲಿ ಜೀವ ಹಿಡಿದುಕೊಂಡಿವೆ ಮುದಿ ಜೀವಗಳು. ಅಲ್ಲ, ಇನ್ನೂ ಉತ್ತರ ಸಿಗದ ಪ್ರಶ್ನೆ: ’ಅಂವ ಹೀಗೆ ಹೇಳದೇ ಕೇಳದೇ ಹೋಪುದಂದ್ರೆ?’ ಆರೇಳು ಕಿಲೋಮೀಟರ್ ದೂರದ ಕಾಲೇಜಿಗೆ, ಬರಿಗಾಲಲ್ಲೇ ನಡೆದುಕೊಂಡು ಹೋಗಿ, ಹಗಲು ರಾತ್ರಿ ಎನ್ನದೇ ಪುಸ್ತಕಕ್ಕೆ ಅಂಟಿಕೊಂಡು ಓದಿ, ಇಂಜಿನಿಯರಿಂಗ್ ಮಾಡಿ, ಒಳ್ಳೇ ಮಾರ್ಕು ತೆಗೆದಿದ್ದರೂ ವರ್ಷವಾದರೂ ಕೆಲಸ ಸಿಗಲಿಲ್ಲ. ಆರತಿ ತಟ್ಟೆಗೆ ಬೀಳುವ ಬಿಡಿ ಕಾಸನ್ನು ಬಿಟ್ಟರೆ ಬೇರೆ ಆದಾಯವಿಲ್ಲ. ಯಾರಾದರೂ ಭಕ್ತರು ಬಂದು ಈ ದೇವರ ವಿಶೇಷತೆಗಳ ಬಗ್ಗೆ, ಸಿಗುವ ಅಗಣಿತ ಫಲಗಳ ಬಗ್ಗೆ, ಪಾಪಕರ್ಮಗಳು ತೊಳೆದುಹೋಗುವ ಬಗ್ಗೆ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ವರದಿ ಮಾಡಿದ್ದರೆ ಕೆಂಪು ರಸ್ತೆಯಲ್ಲಿ ದೂಳು ಹಾರಿಸುತ್ತಾ ಕೆಲವಾದರೂ ಕಾರುಗಳು ಬರುತ್ತಿದ್ದವೋ ಏನೋ? ಅನಂತ ಪದ್ಮನಾಭನ ಮಹಿಮೆಯ ಬಗ್ಗೆ ಯಾರಾದರೂ ಯಕ್ಷಗಾನ ಬರೆದಿದ್ದರೂ ಆಗುತ್ತಿತ್ತು. ಪ್ರಚಾರವಿಲ್ಲದಿದ್ದರೆ ಭಗವಂತನೂ ತೃಣಕ್ಕಿಂತ ಕಡೆ. ಹನುಮಂತನೇ ಹಗ್ಗ ಜಗಿಯುವಾಗ ಪೂಜಾರಿ ಶಾವಿಗೆ ಕೇಳಲು ಆಗುತ್ತದೆಯೇ? ಇದೇ ಸ್ಥಿತಿ ನಾಗಪ್ಪಯ್ಯನವರದು. ದೇವಸ್ಥಾನದ ಪ್ರಸಿದ್ಧಿ ಯಾರಿಗೂ ಅದು ಬೇಕಿಲ್ಲ. ಚಿಲ್ಲರೆ-ಪಲ್ಲರೆ ಹಲವಾರು ಭಕ್ತರಿಗಿಂತ ಒಬ್ಬ ಸಿನೆಮಾ ನಟನೋ, ಕುಪ್ರಸಿದ್ಧ ರಾಜಕಾರಣಿಯೋ ಬಂದರೆ ತನ್ನ ಸಂಪಾದನೆ ಹೆಚ್ಚುತ್ತದೆ. ದೇವರೇ ತನ್ನ ಏಳಿಗೆಯ ಬಗ್ಗೆ ಮನಸ್ಸು ಮಾಡಬೇಕಷ್ಟೇ. 

ಎರಡೂ ಕೈಗಳನ್ನು ಜೋಡಿಸಿ ’ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವಃ. ತ್ರಾಹಿಮಾಂ’ ಎಂದು ದಿನಂಪ್ರತಿ ಬೇಡಿಕೊಂಡರೂ ಆ ದೇವರು ದೇಹಿಗೂ ತ್ರಾಹಿಗೂ ಮನಸ್ಸು ಮಾಡಲಿಲ್ಲ. ಮಗನಿಗೊಂದು ಉದ್ಯೋಗ ದೊರಕಿದರೆ ಎಲ್ಲಾ ಜಂಝಾಟ ಬಿಟ್ಟು, ಸದಾ ನೋಯುವ ಬೆನ್ನನ್ನು ಹಾಸಿಗೆಗೆ ಆನಿಸಿಕೊಂಡು ಮಲಗಿ ತುಸು ವಿಶ್ರಾಂತಿ ಪಡೆಯಬಹುದು ಎಂಬ ಕನಸು ನನಸಾಗಲೇ ಇಲ್ಲ.

ಶೀನ ಹೇಳಿದ್ದ, ’ಅಪ್ಪ, ನಾನು ಕೊರಗನೋ, ಕೂಸಾಳೋ, ಸಾಬಿಯೋ ಆಗಿದ್ದರೆ ನಂಗೆ ಕೆಲಸ ಸಿಗ್ತಿತ್ತು. ಯಾಕೆ ಬ್ರಾಹ್ಮಣನಾಗಿ ಹುಟ್ಟಿದೆನೋ,’ ಎಂದು. ವಿಪ್ರನಾಗಿದ್ದಕ್ಕೆ ಸಂತೋಷಪಡಬೇಕೇ ವಿನಃ ಕೊರಗುವುದೆಂದರೆ? ಕಡಿಮೆ ಮಾರ್ಕು ಬಂದರೂ, ಅರ್ಹತೆ ಇಲ್ಲದಿದ್ದರೂ ರಿಸರ್ವೇಶನ್ ಮೂಲಕ ಅವರಿಗೆ ಕೆಲಸ ಸಿಗುತ್ತದಂತೆ. ಒಬ್ಬ ಅಡುಗೆಯವನಿಗೂ ಅರ್ಹತೆ ಬೇಕು, ಒಬ್ಬ ಕಸ ಗುಡಿಸುವವನಿಗೂ ಆ ಕೆಲಸ ಗೊತ್ತಿರಬೇಕು. ಆದರೆ ಸರಕಾರಿ ಕೆಲಸದವನಿಗೆ ಜಾತಿಯೇ ಮುಖ್ಯ. ಇದೆಂತಹ ಕ್ರಮ? ಗೊಣಗಿಕೊಂಡಿದ್ದರು ನಾಗಪ್ಪಯ್ಯ.

’ಅದಕ್ಕೇ ಬ್ರಾಹ್ಮಣರೆಲ್ಲಾ ಅಮೇರಿಕಕ್ಕೋ, ಲಂಡನಿಗೋ, ಜರ್ಮನಿಗೋ ಹೋಗಿ ದುಡಿಯೋದು, ಅ ದೇಶಗಳನ್ನು ಉದ್ಧಾರ ಮಾಡೋದು. ಈ ದೇಶದಲ್ಲಿ ಜಾತಿಗೆ ಪ್ರಾಶಸ್ತ್ಯವೇ ಹೊರತು ಕ್ವಾಲಿಫಿಕೇಶನ್ನಿಗೆ ಅಲ್ಲ,’ ಎಂಬ ನೋವು ಭರಿತ ಮಾತಿನ ತಲೆ-ಬುಡ ಅರ್ಥವಾಗಿರದ ನಾಗಪ್ಪಯ್ಯ, ’ನಿಂಗೀಗ ಏಳೂವರೆ ಶನಿಕಾಟ. ದಿನಾಲೂ ಸಾವಿರದೆಂಟು ಸಲ ಶಿವನ ಪಂಚಾಕ್ಷರೀ ಮಂತ್ರ ಪಠಿಸು. ಎಲ್ಲಾ ಸರಿಯಾತ್ತು,’ ಎಂದು ಸಮಾಧಾನಕ್ಕೆ ಹೇಳಿದರೂ ಈ ದೇವರು ಎಂದು ಕಣ್ಣುಬಿಡುತ್ತಾನೋ ಎಂದು ಚಿಂತಿಸಿ ಚಿಂತಿಸಿ ಹಣ್ಣಾಗಿದ್ದರು. 

ಮಾಬ್ಲ ಪೂಜಾರಿ ಎಂದ, ’ವಿಷಯ ಗೊತ್ತಾ ನಿಮಗೆ? ಮೊನ್ನೆ ನಮ್ ಬಾವಮೈದ ಹೊರನಾಡಿಗೆ ಹೋಯಿ ಬಪ್ಪತ್ತಿಗೆ ಮೆಣಸಿನ ಹಾಡ್ಯದ ಹತ್ತಿರ ನಿಮ್ಮ ಮಗನನ್ನ ಕಂಡ ಅಂಬ್ರು. ಶೀನ, ಅಂತ ಕರಿಕು ಎಂದ್ಕಂಡವನಿಗೆ ಅವನ ಕೈಲಿದ್ದ ಕೋವಿ ಕಂಡು ಚೆಡ್ಡಿ ಒದ್ದೆ ಆಯ್ತಂಬ್ರು. ಅಂವ ನಕ್ಸಲೇ ಎಂತ ಖಾತ್ರಿಯಾದ ಮೇಲೆ ಅವನ ಜೊತೆಗೆ ಮಾತೆಂತಕೆ? ಎಂತದೋ ಮಾಡುಕ್ಹೋಯಿ ಎಂತದೋ ಆಪುದು ಬೇಡ, ಅಂತ್ಹೇಳಿ ಬಾಯಿ ಮುಚ್ಕಂಡು ಬಂದ ಅಂಬ್ರು. ಅಲ್ಲ ನಾಗಪ್ಪಯ್ಯ, ಬಿರಾಮ್ರ ಮಗ ಕೋವಿ ಹಿಡಿದ್ಕಂಬುದೇನು, ಜನರನ್ನ ಕೊಲ್ಲುದಂದ್ರೇನು… ನಾನು ಅದು ಇಪ್ಕೂ ಆಗ ಎಂದ್ರೂ ಅಂವ ಅದು ಶೀನನೇ ಸೈ ಎಂದು ದೇವ್ರಾಣೆ ಮಾಡಿ ಹೇಳಿದ ಮೇಲೆ..’ ಎಂದು ಹಲವಾರು ’ಅಂಬ್ರು’ಗಳನ್ನು ಎಸೆದು ಬಾಂಬಿಟ್ಟು ಹೊರಟುಹೋದ. ನಾಗಪ್ಪಯ್ಯನಿಗೆ ಇನ್ನೊಂದು ರೀತಿಯಲ್ಲಿ ತಲೆ ಬಿಸಿಯಾಯಿತು.

ಕೆಲವು ತಿಂಗಳ ಹಿಂದೆ ನಕ್ಸಲರು ಪಕ್ಕದ ಹಳ್ಳಿಗೆ ಬಂದಿದ್ದರು, ಊರಿನವರನ್ನು ಬೆದರಿಸಿ ದವಸ-ಧಾನ್ಯ ಸಂಗ್ರಹಿಸಿಕೊಂಡು, ಊರಿನಲ್ಲೆಲ್ಲಾ ಪೋಸ್ಟರು ಹಚ್ಚಿ ಹೋಗಿದ್ದರು. ವಿಷಯ ತಿಳಿದ ಪೊಲೀಸರು ಹಿಂಡು ಹಿಂಡಾಗಿ ಊರಿಗೆ ಬಂದು, ಎಲ್ಲಾ ಮನೆಗಳ ಎದುರು ನಿಂತು, ಮನೆಯವರ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಅವರೆಲ್ಲರನ್ನೂ ಗದರಿಸಿ, ’ಏಗಳು ಬಂದಿದ್ದು, ಏನು ಹೇಳಿದ್ದು,’ ಎಂದೆಲ್ಲಾ ಪ್ರಶ್ನೆ ಕೇಳಿದ್ದರಂತೆ. ಹೇಳಿದರೆ ನಕ್ಸಲರ ಕಾಟ, ಹೇಳಿದಿದ್ದರೆ ಪೊಲೀಸರಿಂದ ಬೆದರಿಕೆ. ತಿನ್ನು ಅಂದರೆ ಕಪ್ಪೆಗೆ ಕೋಪ, ಬಿಡು ಎಂದರೆ ಹಾವಿಗೆ ಕೋಪ! ಇವು ಬರೀ ಅಂತೆ-ಕಂತೆಗಳ ಸಂತೆಯಾಗಿರಲಿಕ್ಕಿಲ್ಲ. ಹಾಗೆ ಬಂದ ಅವರೇ ಕುತ್ತಿಗೆಗೆ ಕೋವಿ ಹಿಡಿದುಕೊಂಡು ತನ್ನ ಮಗನನ್ನು ಅಪಹರಿಸಿರಬಹುದು, ಅಥವಾ ಇವನೇ ಅವರ ಮಾತಿಗೆ ಮರುಳಾಗಿ ಅವರ ಹಿಂದೆ ಹೋಗಿರಬಹುದು ಎಂಬ ಸಾಧ್ಯತೆಗಳನ್ನೂ ನಾಗಪ್ಪಯ್ಯ ಅಲ್ಲಗಳೆಯಲಿಲ್ಲ.

ಬೆಳಗ್ಗೆ ಏಳುವಾಗ ಹಾಸಿಗೆಯಲ್ಲಿಯೂ ಇಲ್ಲ, ಸ್ನಾನದ ಮನೆಯಲ್ಲಿಯೂ ಇಲ್ಲ, ಕೂಗಿದರೂ ಪ್ರತಿಕ್ರಿಯೆ ಇಲ್ಲ. ಮಾದೇವಿ ಮಾಡಿದ ಕಾಫಿ ತಣ್ಣಗಾಗಿ ಲೋಟದ ಮೇಲೆ ಕೆನೆ ಕಟ್ಟಿಕೊಂಡಿತು. ಅಂದರೆ ಶೀನ ಹೇಳದೇ ಕೇಳದೇ ರಾತ್ರೋ ರಾತ್ರಿ ಊರು ಬಿಟ್ಟು ಹೋಗಿದ್ದಾನೆ. ಸಮ, ಅವನು ನಕ್ಸಲನಾಗುವುದೇ? ಒಂದು ನುಸಿ, ಒಂದು ಅಕ್ಕಳೆಗಳನ್ನು ಕೂಡಾ ಕೊಲ್ಲದ ಆತ ಜನರನ್ನು ಸಾಯಿಸುವುದೇ? ಈ ಸುದ್ದಿ ಸುಳ್ಳಾತಿ ಸುಳ್ಳು ಎಂದು ಹೇಳಿಕೊಂಡರು ವೃದ್ಧರು. ದಿನಕ್ಕೆ ನೂರೆಂಟು ಬಾರಿ ಗಾಯತ್ರಿ ಮಂತ್ರ ಹೇಳುತ್ತಿದ್ದ ಮಗನ ಬಾಯಿಯಿಂದ, ಚಮೆ-ರುದ್ರಗಳನ್ನು ಕಿವಿಗೆ ಇಂಪಾಗುವಂತೆ, ಸ್ವರ-ಅಂದತ್ತುಗಳ ಲೋಪವಿಲ್ಲದಂತೆ ಹೇಳಿದ ಬಾಯಿಯಿಂದ ’ಕೊಚ್ಚು-ಕಡಿ, ಕೊಲ್ಲು-ಸಾಯಿಸು’ ಎಂಬ ಪದಗಳು ಬರಲು ಸಾಧ್ಯವೇ?

’ಯಾರದು, ಎಂತ ಹೇಳಿದ್ದು,’ ಬಾಗಿಲಿನ ಅಚ್ಚಿಗೆ ತನ್ನ ಬೆನ್ನನ್ನು ತಿಕ್ಕಿಕೊಳ್ಳುತ್ತಾ, ಕೆರೆತದ ಅನಿರ್ವಚನೀಯ ಆನಂದವನ್ನು ಪಡೆಯುತ್ತಾ ಪ್ರಶ್ನಿಸಿದರು ನಾಗಪ್ಪಯ್ಯನವರ ಪತ್ನಿ, ಮಾದೇವಿ. ಅವಳಿಗೆ ಕಿವಿ ತುಸು ದೂರ. ಯಾರು ಏನೇ ಮಾತನಾಡಿದರೂ ಅದು ತನ್ನ ಬಗ್ಗೆಯೇ ಇರಬೇಕೆಂಬ ಅನುಮಾನದ ಮಾದೇವಿಗೆ ಸಹಜವಾಗಿಯೇ ಊರಿನ ವಿಷಯಗಳೆಲ್ಲಾ ಬೇಕು. ಮಾಬ್ಲ ಪೂಜಾರಿ ತನ್ನ ಮಗನ ಬಗ್ಗೆಯೇ ಹೇಳುತ್ತಿರಬೇಕು, ಆ ವಿಷಯದ ಹಕ್ಕುದಾರ್ತಿ ತಾನು ಎಂಬಂತೆ ಮತ್ತೆ ಅದೇ ಪ್ರಶ್ನೆಯನ್ನು ಗಂಡನಿಗೆ ಕೇಳಿದರು. ಇವಳಿಗೆ ಹೇಳುವುದು ನಿರರ್ಥಕ ಎಂದುಕೊಂಡ ನಾಗಪ್ಪಯ್ಯ ಏರು ದನಿಯಲ್ಲಿಯೇ ಉತ್ತರಿಸಿದರು, ’ಯಂತಿಲ್ಲೆ ಮಾರಾಯ್ತಿ…’. ಅವಳಿಗೆ ಕೇಳಿತೋ ಇಲ್ಲವೋ ಎಂದುಕೊಂಡು ’ತಾರಮ್ಮಯ್ಯ’ ಎಂಬಂತೆ ಕೈ ಆಡಿಸಿದರು. ತಾನು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೇನೆ ಎಂದುಕೊಂಡ ಮಾದೇವಿ ’ನಂಗೆ ಯಂತದೂ ಹೇಳುಕಾಗ. ನಾನು ಯಾಕೆ ಬದುಕಕು? ಆ ದೇವರಿಗೂ ನಾನು ಬೇಡ ಆದೆ. ಅತ್ಲಾಯಿ ಮಗ ಎಲ್ಲಿಗೆ ಹೋಯಿನೋ ಗೊತ್ತಿಲ್ಲೆ. ನಾನು ಯಾವ ಜನ್ಮದಲ್ಲಿ ಯಾವ ಪಾಪ ಮಾಡಿನೋ, ಅದಕ್ಕೇ ಈ ಶಿಕ್ಷೆ. ನಾನು ಎಂತ ಕೇಂಡ್ರೂ ಒಂದೇ ಮಾತು, ಯಂತಿಲ್ಲೆ…’ ಎಂದು ಹೇಳಿ ಅಳತೊಡಗಿದರು. ಅದು ದಿನದಲ್ಲಿ ಹಲವಾರು ಬಾರಿ ನಡೆಯುವ ಕ್ರಿಯೆ. 

ಸಂಶಯದ ಬೀಜವನ್ನು ಬಿತ್ತಿದ್ದ ಮಾಬ್ಲ ಪೂಜಾರಿ ದಾಪುಗಾಲು ಹಾಕುತ್ತಾ ಗದ್ದೆಯ ಅಂಚಿನಲ್ಲಿ ಸಾಗುವುದನ್ನು ಕಣ್ಣು ಮರೆಯಾಗುವಷ್ಟು ಕಾಲ ನೋಡಿದ ನಾಗಪ್ಪಯ್ಯ ದೇವಸ್ಥಾನದತ್ತ ಸಾಗಿದರು. ಮಾಬ್ಲನ ಬಾಯಿಗೆ ವಿಷಯ ಬಿತ್ತು ಎಂದರೆ ಅದು ಆಕಾಶವಾಣಿಯಲ್ಲಿ ಬಂದ ಹಾಗೆಯೇ. ಹೂಸು ತಡವಾದರೂ ನಾರುವುದು ತಡವಾಗುತ್ತದೆಯೇ? ಊರಿನವರ ಕಿವಿ-ಬಾಯಿಗಳಿಗೆ ಶೀನನ ವಿಷಯ ಗ್ರಾಸವಾಗುತ್ತದೆ.

ಮಗ ಮನೆ ತೊರೆದು ಹೋದ ಮೇಲೆ ಮಾದೇವಿ ಕೊರಗಿ ಕೊರಗಿ ದಬ್ಬೆ ಕೋಲಾದಳು. ಚಿತೆಗೂ ಚಿಂತೆಗೂ ಶೂನ್ಯ ಮಾತ್ರ ವ್ಯತ್ಯಾಸ. ಚಿತೆ ಶವವನ್ನು ದಹಿಸಿದರೆ ಚಿಂತೆ ಬದುಕನ್ನೇ ಭಸ್ಮ ಮಾಡುತ್ತದೆ. ನಾಗಪ್ಪಯ್ಯನವರೇನೂ ಸ್ಥಿತಪ್ರಜ್ಞರಲ್ಲ. ಆದರೆ ಗಂಡಸರು ಹೆಂಗಸರಿಗಿಂತ ತುಸು ವಾಸಿ, ತುಸು ಗಟ್ಟಿ ಮನಸ್ಸು. ಗಾದೆಯನ್ನೇ ಮಾಡಿಲ್ಲವೇ, ನಗೋ ಹೆಂಗಸರನ್ನ ನಂಬುಕಾಗ, ಅಳೋ ಗಂಡಸರನ್ನ ನಂಬೋಕಾಗ, ಅಂತ. ಹಾಗಾಗಿ ಪುರುಷರು ತಮ್ಮ ಭಾವನೆಗಳನ್ನು ಒಳಗೇ ಅದುಮಿಕೊಳ್ಳುತ್ತಾರೆ.

ದೇವರ ಮೂರ್ತಿಯ ಮೇಲೆ ನೀರು ಸುರಿಯುವಾಗ ಅನಿಸಿತು, ನಂಬಿಕೊಂಡ ದೇವರೇ ಕೈ ಬಿಟ್ಟ ಮೇಲೆ ಅವನ ಅರ್ಚನೆಯಲ್ಲಿ ತನು-ಮನಗಳನ್ನು ಏಕೆ ಸಮರ್ಪಿಸಿಕೊಳ್ಳಬೇಕು? ಮಂತ್ರದಲ್ಲಿ ಸ್ವರ-ಅಂದತ್ತುಗಳು ವ್ಯತ್ಯಾಸ ಬರದಂತೆ, ಅಕ್ಷರಗಳು ಪಲ್ಲಟವಾಗದಂತೆ, ಮನಸ್ಸು ವಿಚಲಿತವಾಗದಂತೆ ತಾದಾತ್ಮತೆಯಿಂದ ಶಾಸ್ತ್ರೋಕ್ತವಾಗಿ ಪೂಜೆ ಮಾಡಿದ್ದು ಯಾತಕ್ಕಾಗಿ? ಬದುಕಿನ ಸಂಧ್ಯಾಕಾಲದಲ್ಲಿ ನರಳಬೇಕೆಂದೇ? 

ಕೂಡಲೇ ಅವರು ನಿಶ್ಚಯಿಸಿಕೊಂಡರು, ಇನ್ನು ಮುಂದೆ ಬಾಯಿಯಿಂದ ಮಂತ್ರಗಳು ಬರುತ್ತವೆ, ಅವು ಬರೀ ಪದಗಳು, ದನಿಗಳು. ಅವುಗಳ ಹಿಂದೆ ಭಾವವಿಲ್ಲ, ಭಕ್ತಿ ಇಲ್ಲ. ಅರ್ಚನೆ, ಆರತಿ, ಪೂಜೆ, ಇವೆಲ್ಲವೂ ಬರೀ ಕ್ರಿಯೆಗಳು. ತನಗಾಗದ ದೇವರಿಗೆ ತನ್ನನ್ನೇಕೆ ಸಮರ್ಪಿಸಿಕೊಳ್ಳಲಿ?

ಅದನ್ನು ಕೂಡಲೇ ಅನುಷ್ಠಾನಕ್ಕೆ ತಂದರು ನಾಗಪ್ಪಯ್ಯ. ದೇವರನ್ನು ಬಿಡುವಂತಿಲ್ಲ, ಯಾಕೆಂದರೆ ಅದು ಅವರ ಜೀವನಾಧಾರ!

ಒಂದು ದಿನದ ’ಬೈಸರ್ತಿ’ನಲ್ಲಿ ದೂರದಲ್ಲಿ, ಗದ್ದೆ ಅಂಚಿನಲ್ಲಿ ಅಸ್ಪಷ್ಟವಾಗಿ ಕಾಣಿಸಿಕೊಂಡ ಆ ಆಕಾರ ಕ್ರಮೇಣ ತೊಡಮೆ ದಾಟಿ, ಅಂಗಳ ಕ್ರಮಿಸಿ, ಮನೆಯ ಜಗುಲಿ ಏರಿದಾಗ ಅದು ತನ್ನ ಮಗ ಶೀನನೇ ಎಂದು ಖಾತರಿಯಾದಾಗ ಮಾದೇವಿಯ ದೇಹದಲ್ಲಿ ಹೊಸ ಚೈತನ್ಯ ಮೂಡಿತು. ಕೈಲಿದ್ದ ಹಿಡಿ ಸೂಡಿಯನ್ನು ಬಾಗಿಲಿನ ಹಿಂದೆ ನಿಲ್ಲಿಸಿ, ಸೆರಗನ್ನು ಮೈ ತುಂಬಾ ಹೊದ್ದಕೊಂಡು, ’ಬಂದ್ಯನಾ ಶೀನ, ಕೂಕೊ,’ ಎಂದವಳಿಗೆ ಹುರುಳಿ ಸಾರು ಮಾಡಿದರೆ ಕಳಸಿಗೆ ಅನ್ನವನ್ನು ಉಣ್ಣುತ್ತಿದ್ದ ಮಗ ಒಣಗಿದ್ದಾನೆ ಎನಿಸಿತು. ಎಲ್ಲಿ ಇದ್ದಿದ್ದನೋ, ಹೇಗಿದ್ದಿದ್ದನೋ, ಪಾಪ, ಎಂದಿತು ಹೆಂಗರುಳು. ಹಲವಾರು ಪ್ರಶ್ನೆಗಳನ್ನು ಕೇಳಬೇಕು, ಜನ ಅಂದಿದ್ದೆಲ್ಲಾ ಸುಳ್ಳು ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು, ಎನಿಸಿದಗೂ ಅದಕ್ಕಾಗಿ ಮುಂದೆ ಯುಗಗಳೇ ಮುಂದಿವೆ, ಈಗ ಅವನ ಹೊಟ್ಟೆಗೇನಾದರೂ ಮಾಡಬೇಕು ಎಂದುಕೊಂಡು ಮಗನನ್ನು ಉಪಚರಿಸಲು ಸಿದ್ಧಳಾದಳು. ಅದನ್ನೇ ಹೆಂಗರುಳು ಎನ್ನುವುದು. ಕಡಿಗೆ ತಾಳ್ಳು ಎಂದರೆ ಅವನಿಗೆ ಇಷ್ಟ. ಹೆಚ್ಚಿ ಬೇಯಿಸಬೇಕು ಎಂದು ಒಳಗೆ ಹೋಗಿ ಕತ್ತಿಮಣೆಯೆದುರು ಕುಳಿತರೂ ನಾಗಪ್ಪಯ್ಯ ಮತ್ತು ಶೀನ ಹೊರಗೆ ಏನೇನೋ ಮಾತನಾಡಿಕೊಳ್ಳುತ್ತಿದ್ದಾರೆ, ಅದು ಗಹನವಾದ್ದೇ ಇರಬೇಕು. ಏನಿರಬಹುದು? ’ತನ್ನ ಕೆಮಿ ಸಮಾ ಕೇಂತಿಲ್ಲೆ.’ ಮಗ ನಕ್ಸಲನೇ ಆಗಿದ್ದರೆ ಅವನ ಕೈಲಿ ಕೋವಿಯೋ, ಕತ್ತಿಯೋ ಇರಬೇಕು. ಇಲ್ಲಪ್ಪ, ತನ್ನ ಮಗ ಯಂತಕೂ ಆಗ. ಒಂದು ದನ ಓಡ್ಸುಕೂ ಬತ್ತಿಲ್ಲೆ ಅವನಿಗೆ!

ಕಳೆದ ಅವಧಿಯಲ್ಲಿ ಏನೇನು ನಡೆಯಿತೆಂಬುದನ್ನು ತನ್ನ ತಂದೆಗೆ ವಿವರಿಸತೊಡಗಿದೆ ಶೀನ. ತನಗೆ ಉದ್ಯೋಗ ಸಿಗುವುದಿಲ್ಲ ಎಂದು ಖಾತರಿಯಾಗುತ್ತಲೇ ಅವನು ನಕ್ಸಲರ ಜೊತೆಗೆ ಹೋಗಿದ್ದು. ಸರಕಾರ ನಕ್ಸಲರು ’ಶರಣಾಗತ’ರಾದರೆ ಅವರಿಗೆ ಕೆಲ ಸೌಲಭ್ಯಗಳನ್ನು ಕೊಡುವುದಾಗಿ ಪ್ರಕಟಿಸುತ್ತಲೇ ತಾನು ಶರಣಾದದ್ದು, ಸರಕಾರ ಚಿಕ್ಕಮಗಳೂರಿನ ಗೋಡಂಬಿ ಕಾರ್ಖಾನೆಯೊಂದರಲ್ಲಿ ತನಗೆ ಸುಪರ್‌ವೈಸರ್ ಕೆಲಸ ಕೊಡಿಸಿದ್ದು, ಇವನ್ನೆಲ್ಲಾ ಹೇಳಿ, ’ಇನ್ನು ನೀವು ಈ ದೇವರ ತಲೆಗೆ ನೀರು ಹಾಕುವುದು ಬೇಡ. ನಾಳೆನೇ ನನ್ನ ಜೊತೆ ಘಟ್ಟಕ್ಕೆ ಹೊರಟುಬಿಡಿ. ನನ್ನ ಜೊತೆ ಇರಿ. ನಿಮ್ಮನ್ನ ಲಾಯಕ್ ಆಗಿ ಕಂಡಕಂತೆ,’ ಎಂದಾಗ ನಾಗಪ್ಪಯ್ಯನಿಗೆ ತನ್ನ ಕಿವಿಯನ್ನೇ ನಂಬಲಾಗಲಿಲ್ಲ. ಕೊನೆಗಾದರೂ ದೇವರು ಕಣ್ಣು ಬಿಟ್ಟ!

’ನಿಂಗೆ ಶಿಕ್ಷೆ ಎಂತಾ ಆಯಿಲ್ಲೆಯಾ?’ ಎಂದು ಕೇಳಿದರು ನಾಗಪ್ಪಯ್ಯ. ಆಗಿರಲಿಕ್ಕಿಲ್ಲ, ಆಗಬಾರದು. ಆಗಿದೆ ಎಂದರೂ ಅದು ಹುಸಿಯಾಗಬೇಕು ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡರು. ’ಇಲ್ಲೆ ಅಪ್ಪಯ್ಯ. ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ನನಗೆ ಯಾವ ಶಿಕ್ಷೆಯೂ ಆಗಿಲ್ಲ,’ ಎಂತು ಸಮಜಾಯಿಸಿ ನೀಡಿದ ಮೇಲೆ ಅವರಿಗೆ ಸಮಾಧಾನವಾಯಿತು. 

ಶೀನ ಸರಕಾರದ ಕ್ರಮಗಳ ಬಗ್ಗೆ ವಿವರಿಸಿದ, ’ನಮ್ಮ ರಾಜ್ಯದ ಕತೆ ಬಿಡಿ. ಕಾಶ್ಮೀರದಲ್ಲಿ ಸರೆಂಡರ್ ಆದ ಟೆರರಿಸ್ಟ್‌ಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಣ, ನೆರವು ನೀಡುತ್ತವೆ. ಅದನ್ನು ಪಡೆದುಕೊಂಡ ಆತಂಕವಾದಿಗಳು ಮತ್ತೆ ಕೆಲ ದಿನಗಳ ನಂತರ ಮಿಲಿಟಂಟ್‌ಗಳಾಗಿ ದೇಶದ್ರೋಹದ ತಂಡಗಳೊಂದಿಗೆ ಸೇರಿ ಮತ್ತೆ ಹೊಸ ಹೆಸರು, ಹೊಸ ವಿಳಾಸಗಳೊಂದಿಗೆ ಬಂದು ಮತ್ತೆ ಶರಣಾಗುತ್ತಾರೆ, ಮತ್ತೆ ನೆರವು ಪಡೆಯುತ್ತಾರೆ. ಅಲ್ಲಿನ ಯುವಕರಿಗೆ ಇದೊಂದು ಉದ್ಯೋಗ. ವಿವೇಚನೆ ಇಲ್ಲದ ಸರಕಾರಗಳು, ಭ್ರಷ್ಟ ಅಧಿಕಾರಿಗಳು ಪರೋಕ್ಷವಾಗಿ ಭಯೋತ್ಪಾದಕರನ್ನು ಹುಟ್ಟಿಸುತ್ತವೆ, ಬೆಳೆಸುತ್ತವೆ. ನಮ್ಮ ದೇಶದಲ್ಲಿ ಒಳ್ಳೆಯವರಿಗೆ ಕಾಲವಿಲ್ಲ. ವಂಚನೆ ಮಾಡಿದ ಅಧಿಕಾರಿಗಳು ಮೇಲಿನ ಹುದ್ದೆಗೆ ಹೋಗುತ್ತಾರೆ, ಕೋಟಿ ಕೋಟಿ ಲೂಟಿ ಮಾಡಿದ ರಾಜಕಾರಣಿಗಳಿಗೆ ರಾಜಕೀಯದಲ್ಲಿ ದೊಡ್ಡ ಅಧಿಕಾರ ಸಿಗುತ್ತದೆ. ಇದು ಕಲಿಗಾಲದ ಮಹಿಮೆ,’ ಎಂದ.

ಮೊನ್ನೆ ಮೊನ್ನೆಯ ವರೆಗೆ ಮಿಣ್ಣಿಕಾಯಿ ಬಿಟ್ಟುಕೊಂಡು ಓಡಾಡುತ್ತಿದ್ದ, ತಲೆಗೆ ನವಿಲು ಗರಿ ಸಿಕ್ಕಿಸಿಕೊಂಡು, ಕೃಷ್ಟನ ಹಾಗೆ ಕುಳಿತುಕೊಂಡು, ’ಯದುಕುಲ ತಿಲಕ, ಗೋಪಿಕಾ ಸ್ತ್ರೀ ಲೋಲ ಯಾರೆಂದು ಬಲ್ಲಿರಿ?’ ಎಂದು ಯಕ್ಷಗಾನದ ಪಾತ್ರಧಾರಿಯ ಹಾಗೆ ಮಾತನಾಡುತ್ತಿದ್ದ, ದಬ್ಬೆ ಕಟ್ಟಿಯಾದರೂ ಸರಿ, ನಾಯಿಯ ಡೊಂಕು ಬಾಲವನ್ನು ನೇರ ಮಾಡಿಯೇ ಮಾಡುತ್ತೇನೆ ಎಂದು ಪ್ರಯತ್ನಿಸುತ್ತಿದ್ದ ತನ್ನ ಮಗ ಇಷ್ಟೊಂದು ಬೆಳೆಯುತ್ತಾನೆ ಎಂದುಕೊಂಡಿರಲಿಲ್ಲ ನಾಗಪ್ಪಯ್ಯ. 

ಕಡಿಗೆ ಹೆಚ್ಚಿ, ತಳದ ಪಾತ್ರೆಗೆ ಹಾಕಿ, ನೀರು ತುಂಬಿ ಕೋಡೊಲೆಯ ಮೇಲೆ ಇಟ್ಟು, ಬೆಂಕಿ ಊದಿ, ಅದನ್ನು ಬೇಯಲು ಇಟ್ಟು ಹೊರಬಂದ ಮಾದೇವಿ ಗಂಡನನ್ನು ಕೇಳಿದಳು, ’ನೀವು ಎಂತ ಮಾತಾಡ್ತಿದ್ರಿ? ನಂಗೂ ಹೇಳುವ್ರಿಯಲೇ.’ ಆದರೆ ಈ ಬಾರಿ ತಮ್ಮ ಎಂದಿನ ಉತ್ತರವಾದ ’ಯಂತಿಲ್ಲೆ’ ಎಂದು  ಹೇಳುವಂತಿಲ್ಲ, ಯಾಕೆಂದರೆ ಇದು ಗಹನವಾದ್ದೇ ವಿಷಯ. ಕೆಮಿ ಮಂದವಾದ ಇವಳಿಗೆ ಈ ಎಲ್ಲಾ ವಿಷಯಗಳನ್ನು ವಿವರಿಸುವುದು ಹೇಗೆ ಎಂದು ನಾಗಪ್ಪಯ್ಯ ’ಯೇಚ್ನೆ’ ಮಾಡತೊಡಗಿದರು.


-ಸೂರಿ ಹಾರ್ದಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Anil Talikoti
Anil Talikoti
10 years ago

'ಯಂತಿಲ್ಲೆ' ಎನ್ನುತ್ತಲೆ ಎಲ್ಲವೂ ಇರುವ ಆಪ್ತ ಕಥೆ. ಒಂದೊಂದು ತಲೆಮಾರಿಗೂ ಬದುಕು ಏನೆಲ್ಲಾ ಕಲಿಸಿಕೊಡುತ್ತದೆ -ಚಿಗಿಯುವ ಆದಮ್ಯ ಗುರಿ. ಮಗ ಬೆಳೆದ ರೋಚಕ ಬಗೆಯನ್ನು ಅದೆಂತು ಹೆಂಡತಿಗೆ ಹೇಳುತ್ತಾರೆ ನಾಗಪ್ಪಯ್ಯ ಎಂಬ 'ಯೇಚ್ನೆ' ಗೆ ಹಚ್ಚುವ ಸುಂದರ ಕಥೆ.
-ಅನೀಲ ತಾಳಿಕೋಟಿ

Ramachandra
Ramachandra
10 years ago

ಕುಂದಾಪುರ ಕನ್ನಡ ಬೆರೆಸಿ ಹೆಣೆದ ಕಥೆ ಅಲ್ಲಲ್ಲಿ ಮಿಂಚುವ ಹಾಸ್ಯದ ಮಿಣುಕು ಬೆಳಕಿಂದ ಮನಸ್ಸಿಗೆ ಹಿಡಿಸಿತು

sharada.m
sharada.m
10 years ago

nice story with humour

3
0
Would love your thoughts, please comment.x
()
x