ಶಿಫಾರಸು: ಜೆ.ವಿ.ಕಾರ್ಲೊ ಅನುವಾದಿಸಿರುವ ರಶ್ಯನ್ ಕತೆ

 

ಜಿಲ್ಲಾ ಪ್ರಾಥಮಿಕ ಶಾಲೆಗಳ ನಿರ್ದೇಶಕರಾದ ಮಾನ್ಯ ಫ್ಯೋಡೊರ್ ಪೆಟ್ರೊವಿಚ್ ತಾವು ನ್ಯಾಯ-ನೀತಿಯ ಮನುಷ್ಯರೆಂದು ಭಾವಿಸಿದ್ದರು. ಅದೊಂದು ದಿನ ಅವರ ಕಛೇರಿಯೊಳಗೆ ಒಂದು ಕುರ್ಚಿಯ ಅಂಚಿನಲ್ಲಿ ಮುಳ್ಳು ಕಂಟಿಗಳ ಮೇಲೆಂಬಂತೆ ರೆಮೆನಿಸ್ಕಿ ಎಂಬ ಹೆಸರಿನ ಶಿಕ್ಷಕರೊಬ್ಬರು ಆಸೀನರಾಗಿದ್ದರು. ಅವರು ತೀರ ಉದ್ವಿಘ್ನ ಮನಸ್ಥಿತಿಯಲ್ಲಿದ್ದರು.

“ಕ್ಷಮಿಸು, ರೆಮೆನಿಸ್ಕಿ.” ಫ್ಯೋಡೊರ್ ಪೆಟ್ರೊವಿಚ್ ಕತ್ತೆತ್ತುತ್ತಾ ದುಃಖತಪ್ತ ಸ್ವರದಲ್ಲಿ ಹೇಳಿದರು. “ನಿನಗೆ ನಿವೃತ್ತನಾಗದೆ ಬೇರೆ ದಾರಿಯೇ ಇಲ್ಲ. ನಿನಗೆ ಸ್ವರವೇ ಇಲ್ಲ! ನೀನು ಪಾಠ ಮಾಡುವುದಾದರೂ ಹೇಗೆ? ನನಗೆ ಅರ್ಥವಾಗುತ್ತಿಲ್ಲ. ಒಮ್ಮೆಲೇ ನಿನ್ನ ಸ್ವರಕ್ಕೆ ಆದದ್ದಾದರೂ ಏನು?”

“ಬೆವರುತ್ತಿದ್ದಾಗ ಥಂಡಿ ಬಿಯರ್ ಕುಡಿದದ್ದೆ ನೆಪ, ಸರ್!” ವಿಚಿತ್ರ ಸ್ವರ ಹೊರಡಿಸುತ್ತಾ ಉತ್ತರಿಸಿದ ರೆಮೆನಿಸ್ಕಿ.

“ಛೆ..ಛೆ..ನಾಚಿಕೆಗೇಡು ರೆಮೆನಿಸ್ಕಿ! ಹದಿನಾಲ್ಕು ವರ್ಷಗಳ ಸೇವೆ ಈ ರೀತಿ ಕೊನೆಗೊಳ್ಳುವುದೆಂದರೆ? ಹೀಗೇನು ಮಾಡಬೇಕೆಂದಿದ್ದೀಯಾ ರೆಮೆನಿಸ್ಕಿ?”

ಶಿಕ್ಷಕ ಮೌನಕ್ಕೆ ಶರಣಾದ.

“ಮನೆಯಲ್ಲಿ ಯಾರಾರಿದ್ದಾರೆ ರೆಮೆನಿಸ್ಕಿ?”

“ಹೆಂಡತಿ, ಇಬ್ಬರು ಸಣ್ಣ ಮಕ್ಕಳು, ಸರ್.” ಅವನು ಕಷ್ಟಪಟ್ಟು ಉಸುರಿದ.

ಅವರ ಮಧ್ಯೆ ಒಂದು ದೀರ್ಘ ಮೌನ ಕವಿಯಿತು.

“ನಿನಗೆ ಏನು ಹೇಳುವುದೆಂದೇ ನನಗೆ ತೋಚುತ್ತಿಲ್ಲ. ಶಿಕ್ಷಕನ ಕೆಲಸವಂತೂ ನಿನಗೆ ಸಾಧ್ಯವಿಲ್ಲ. ನಿವೃತ್ತಿವೇತನ ಸಿಗುವಷ್ಟು ಸರ್ವೀಸೂ ನಿನಗಾಗಿಲ್ಲ…ನಿನ್ನ ಅದೃಷ್ಟ ಸರಿಯಿಲ್ಲ ಕಣಯ್ಯ ಎಂದು ಕೈಚೆಲ್ಲುವುದೂ ನನ್ನಿಂದಾಗುತ್ತಿಲ್ಲ. ಹದಿನಾಲ್ಕು ವರ್ಷಗಳ ಸೇವೆ ಅಂದರೆ ನೀನು ನಮ್ಮವನೇ ಅಲ್ವೇ?.. ನಿನಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ.. ಆದರೆ, ಹೇಗೆಂದು ತೋಚುತ್ತಿಲ್ಲ. ಒಂದು ಗಳಿಗೆ ನನ್ನ ಕುರ್ಚಿಯಲ್ಲಿ ಕುಳಿತು ಯೋಚಿಸು ರೆಮೆನಿಸ್ಕಿ. ನೀನೇನು ಮಾಡುತ್ತಿದ್ದೆ?”

ಮತ್ತೆ ಗಾಢ ಮೌನ. ನಿರ್ದೇಶಕರು ಕುರ್ಚಿಯಿಂದೆದ್ದು ಆಫೀಸಿನಲ್ಲಿ ಶತಪಥ ಹಾಕತೊಡಗಿದರು. ರೆಮೆನಿಸ್ಕಿ ತನ್ನ ಅದೃಷ್ಟವನ್ನು ನೆನೆದು ಕಲ್ಲಾಗಿ ಕುಳಿತ್ತಿದ್ದ.

ಹಠಾತ್ತನೆ ನಿರ್ದೇಶಕರು ಗಕ್ಕನೆ ನಿಂತರು. ಅವರ ಮುಖ ಅರಳಿತ್ತು. ಎರಡೂ ಕೈ ಬೆರಳುಗಳನ್ನು ಜೋಡಿಸಿ ಜೋರಾಗಿ ನಿಟಿಗೆ ತೆಗೆದರು.

“ಈ ಯೋಚನೆ ನನಗೆ ಮೊದಲೇ ಏಕೆ ಹೊಳೆಯಲಿಲ್ಲ? ಇಲ್ಲಿ ಕೇಳು ರೆಮೆನಿಸ್ಕಿ. ನಮ್ಮ ವಸತಿ ಶಾಲೆಯ ಸೆಕ್ರೆಟರಿ ನಿವೃತ್ತಿಯಾಗುವವರಿದ್ದಾರೆ. ನಿನಗೆ ಇಷ್ಟವಾದರೆ ಇವತ್ತೇ ಆ ಜಾಗಕ್ಕೆ ಒಂದು ಅರ್ಜಿ ಬರೆದು ಕೊಡು.”

ತನ್ನ ಅದೃಷ್ಟ ಈ ರೀತಿ ತೆರೆದುಕೊಳ್ಳಬಹುದೆಂದು ರೆಮೆನಿಸ್ಕಿ ಊಹಿಸಿರಲಿಲ್ಲ. ಅವನ ಮುಖದ ಮೇಲೂ ಮಂದಹಾಸ ಕಾಣಿಸಿಕೊಂಡಿತು.

ಮಾನ್ಯ ಫ್ಯೋಡೊರ್ ಪೆಟ್ರೊವಿಚಾರಿಗೆ ತುಂಬಾ ಸಂತಸವಾಯ್ತು. ಶಿಕ್ಷಕನಾಗಲು ಅರ್ಹತೆಯನ್ನು ಕಳೆದುಕೊಂಡಿದ್ದ ರೆಮೆನಿಸ್ಕಿಗೆ ಅವರು ಹೊಸ ದಾರಿ ಹುಡುಕಿದ್ದರು. ಅವರ ಮನಸ್ಸು ಹಗುರವಾಯ್ತು. ಖುಷಿಯಿಂದ ಅವರು ಮನೆಗೆ ಹೆಜ್ಜೆ ಹಾಕಿದರು. ಆದರೆ ಅವರ ಖುಷಿ ಹೆಚ್ಚು ಕಾಲ ಬಾಳಲಿಲ್ಲ. ಅವರು ರಾತ್ರಿ ಉಟಕ್ಕೆ ಕುಳಿತಿದ್ದಾಗ ಹೆಂಡತಿ ನತಾಶ ಇವನೋವಾ ಹೇಳಿದಳು:

“ಇವತ್ತು ಯಾರು ಬಂದಿದ್ರು ಗೊತ್ತೇನ್ರಿ?.. ಶ್ರೀಮತಿ ನೈನಾ ಸರ್ಗೇಯ್‍ಯೆವ್ನಾ! ಹೊರಡುವಾಗ ಒಂದು ವಿಷಯ ನಿಮ್ಮ ಕಿವಿಗೆ ಮುಟ್ಟಿಸಲೇ ಬೇಕು ಎಂದು ಹೇಳಿ ಹೋದರು. ಅವರು ಯಾರೋ ಒಬ್ಬ ಯುವಕನ ಬಗ್ಗೆ ಮಾತನಾಡುತ್ತಿದ್ದರು. ನಿಮ್ಮ ಆಫೀಸಿನಲ್ಲಿ ಯಾವುದೋ ಒಂದು ಹುದ್ದೆ ಖಾಲಿಯಾಗುವುದಿದೆಯಂತೆ?..”

“ಅದು ನಿಜ. ಆದರೆ ಅದು ಈಗಾಗಲೆ ಭರ್ತಿಯಾಗಿದೆ. ಅಲ್ಲದೆ ನತಾಶ, ನೀನು ಚೆನ್ನಾಗಿ ಬಲ್ಲೆ. ಶಿಫಾರಸು ಪಡೆದು ಕೆಲಸ ಕೇಳಿ ಬರುವವರನ್ನು ನಾನು ಹತ್ತಿರಕ್ಕೂ ಸೇರಿಸುವುದಿಲ್ಲ!”

“ನನಗೆ ಗೊತ್ತು ಕಣ್ರಿ. ಆದರೆ ಶ್ರೀಮತಿ ನೈನಾರ ವಿಚಾರದಲ್ಲಿ ನೀವು ಕೊಂಚ ಉದಾರವಾಗಬಹುದೆಂದೆನಿಸುತ್ತದೆ. ಅವರು ನಮಗೆ ಹತ್ತಿರದವರು. ಈವರೆಗೆ ಅವರೆಂದೂ ಏನೂ ಕೇಳಿ ಬಂದವರಲ್ಲ. ನೀವು ಇಲ್ಲವೆಂದರೆ ಅವರಿಗೆ ಬೇಜಾರಾಗಬಹುದು.”

“ಅವರು ಯಾರನ್ನು ಶಿಫಾರಸು ಮಾಡಲು ಬಂದಿದ್ದರು?”

“ಅವನ ಹೆಸರು ಪೊಲ್ಝುಯಿನ್ ಅಂತೆ.”

“ಯಾರು? ಪೊಲ್ಝುಯಿನ್? ಹೊಸ ವರ್ಷದ ಪಾರ್ಟಿಯಲ್ಲಿ ಹಾಡಿದ್ದ ಹುಡುಗ? ಅವನೇ ಆದರೆ ಖಂಡಿತ ಸಾಧ್ಯವಿಲ್ಲ.” ಊಟವನ್ನು ಅರ್ಧಕ್ಕೇ ಬಿಟ್ಟು ಪೆಟ್ರೊವಿಚ್ ಮುಖ ಗಂಟಿಕ್ಕಿ ಹೊರನಡೆದರು.

“ಒಬ್ಬ ಯುವಕ ಶಿಫಾರಸಿಗೆ ಹೆಂಗಸರನ್ನು ಬಳಸುತ್ತಿದ್ದಾನೆಂದರೆ ಅವನು ನಿಜವಾಗಿಯೂ ನಾಲಾಯಕ್. ಅವನಿಗೇ ಬಂದು ಕೆಲಸ ಕೇಳಲು ಏನಂತೆ ಧಾಡಿ?” ಅವರು ಹಜಾರಕ್ಕೆ ಬಂದಾಗಲೂ ಭುಸುಗುಡುತ್ತಿದ್ದರು. ಅ ಕ್ಷಣ ಅವರ ದೃಷ್ಠಿ ಟೀಪಾಯ್ ಮೇಲೆ ಬಿದ್ದಿದ್ದ ಅಂಚೆಯ ಮೇಲೆ ಹರಿಯಿತು. ಅದರಲ್ಲೊಂದು ಪತ್ರ ಅವರ ಕಣ್ಣು ಸೆಳೆಯಿತು. ಅದನ್ನೆತ್ತಿ ಹರಿದು ಪೆಟ್ರೊವಿಚ್ ಓದತೊಡಗಿದರು:

“ಡಿಯರ್ ಫ್ಯೋಡೊರ್..” ಮೇಯರನ ಮಡದಿ ಪತ್ರ ಬರೆದಿದ್ದಳು. “ನೀವೊಮ್ಮೆ ಹೇಳಿದ್ದುಂಟು: ನಾನು ಜನರನ್ನು ಗುರುತಿಸುವುದರಲ್ಲಿ ನಿಷ್ಣಾತೆ ಎಂದು! ಇದನ್ನು ಪರೀಕ್ಷಿಸಲು ನಿಮಗೊಂದು ಅವಕಾಶ ಒದಗಿ ಬಂದಿದೆ. ಎರಡು ದಿವಸಗಳಲ್ಲಿ ಕೆ.ಎನ್.ಪೊಲ್ಝುಯಿನ್ ಎಂಬ ಹೆಸರಿನ ಯುವಕನೊಬ್ಬ ಕೆಲಸ ಕೇಳಿಕೊಂಡು ನಿಮ್ಮಲ್ಲಿ ಬರಲಿದ್ದಾನೆ. ನಿಮ್ಮ ಶಾಲೆಯಲ್ಲಿ ಸೆಕ್ರೆಟರಿಯ ಹುದ್ದೆ ಖಾಲಿ ಬಿದ್ದಿದೆಯಂತೆ. ಆ ಹುದ್ದೆಗೆ ನಾನು ಹೇಳಿದ ಯುವಕ ತಕ್ಕ ಅಭ್ಯರ್ಥಿ. ನೀವೊಮ್ಮೆ ಅವನಿಗೆ ಕೆಲಸ ಕೊಟ್ಟು ನೋಡಿ. ನನ್ನ ಮಾತನ್ನ ಖಂಡಿತ ನಂಬುತ್ತೀರ!..”

“ಸಾಧ್ಯವಿಲ್ಲ. ಎಂದಿಗೂ ಸಾಧ್ಯವಿಲ್ಲ!” ಪೆಟ್ರೊವಿಚ್ ಅರಚಿದರು.

ಅವತ್ತಿನಿಂದ ಪೊಲ್ಝುಯಿನನಿಗೆ ಶಿಫಾರಸು ಮಾಡುತ್ತಾ ಮಾನ್ಯ ಪೆಟ್ರೊವಿಚರಿಗೆ ಅಂಚೆ ಪತ್ರಗಳ ಮಹಾಪೂರವೇ ಹರಿದು ಬಂತು. ಕೊನೆಗೆ ಒಂದು ದಿನ ಕಪ್ಪು ಸೂಟಿನಲ್ಲಿ ಖುದ್ದಾಗಿ ಪೊಲ್ಝುಯೀನಾನೆ ಪೆಟ್ರೊವಿಚರ ಎದುರು ಹಾಜರಾದ. ಅವನಿಗೆ ಕೆಲಸ ಮಾಡುವ ಜರೂರತೇನು ಕಾಣಬರುತ್ತಿರಲಿಲ್ಲ.

“ಕೆಲಸ ಕೇಳಿಬಂದವರನ್ನು ನಾನು ಮನೆಯಲ್ಲೆಂದೂ ಭೇಟಿಯಾಗುವುದಿಲ್ಲ.” ಸಿಟ್ಟಿನಿಂದಲೇ ಹೇಳಿದರು ಫ್ಯೋಡೊರ್ ಪೆಟ್ರೊವಿಚ್.

“ನಮ್ಮ ಪರಿಚಯಸ್ಥರು ನಿಮ್ಮನ್ನು ಮನೆಯಲ್ಲಿಯೇ ಕಾಣಬೇಕೆಂದು ಹೇಳಿದ್ದಾರೆ ಸರ್.”

“ಹೂಂ..” ಅವನ ಮಿರುಗುತ್ತಿದ್ದ ಕಪ್ಪು ಮೊನಚು ಶೂಗಳನ್ನೇ ದಿಟ್ಟಿಸುತ್ತಾ ಹೂಂಕರಿಸಿದರು ಪೆಟ್ರೊವಿಚ್. “ನನಗೆ ಗೊತ್ತಿರುವಂತೆ ನಿನ್ನ ತಂದೆ ಅನುಕೂಲಸ್ಥರು. ನಿನಗೆ ಈ ಜುಜುಬಿ ಸಂಬಳದ ಕೆಲಸದ ಅಗತ್ಯವೇ ಇಲ್ಲ!”

“ನಾನು ಸಂಬಳದ ಆಶೆಗೆ ಈ ಕೆಲಸಕ್ಕೆ ಹಾತೊರೆಯುತ್ತಿಲ್ಲ ಸರ್. ಇದೊಂದು ಸರಕಾರಿ ಕೆಲಸ ಎಂಬ ಪ್ರತಿಷ್ಠೆಗಾಗಿ..”

“ನಿನಗೆ ಒಂದೇ ತಿಂಗಳಿನೊಳಗೆ ಈ ಕೆಲಸದ ಮೇಲೆ ಅಸಹ್ಯ ಬಂದು ರಾಜಿನಾಮೆಯಿತ್ತು ಹೋಗುತ್ತೀಯ. ಎಷ್ಟೋ ಜನರಿಗೆ ಈ ಕೆಲಸ ಜೀವನ್ಮರಣದ ಸವಾಲಾಗಿರುತ್ತದೆ. ಎಷ್ಟೋ ಬಡವರು..”

“ನಾನು ಖಂಡಿತಾ ರಾಜಿನಾಮೆ ಕೊಡೋದಿಲ್ಲ ಸರ್.”

ನಿರ್ದೇಶಕ ಸಾಹೇಬರ ಕಣ್ಣುಗಳು ಬೆಂಕಿಯುಗುಳತೊಡಗಿದವು.

“ಹಾಗಿದ್ದಲ್ಲಿ ನೀನೇ ನೇರವಾಗಿ ಯಾಕೆ ಅರ್ಜಿ ಗುಜರಾಯಿಸಲಿಲ್ಲ? ಹೆಂಗಸರ ಶಿಫಾರಸು ಯಾಕೆ?”

“ಸರ್..ಅದು ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಬಹುದೆಂದು ಯೋಚಿಸಿದೆ.” ಪೊಲ್ಝುಯಿನಾನ ಮುಖ ಕೆಂಪಗಾಯ್ತು. “ಸರ್, ನಾನು ಹೆಂಗಸರ ಶಿಫಾರಸು ಕೋರಿದ್ದು ನಿಮಗೆ ಇಷ್ಟವಾಗಲಿಲ್ಲಾಂದ್ರೆ ದಯವಿಟ್ಟು ನನ್ನ ಪರವಾಗಿ ಈ ಪ್ರಮಾಣ ಪತ್ರವನ್ನೊಮ್ಮೆ ನೋಡಿ..”

ಅವನು ಕಪ್ಪು ಕೋಟಿನ ಒಳ ಜೇಬಿನಿಂದ ಒಂದು ಪತ್ರವನ್ನು ಹೊರತೆಗೆದು ಫ್ಯೋಡೊರ್ ಪೆಟ್ರೊವಿಚರ ಕೈಗಿತ್ತ. ಸರಕಾರಿ ಶೈಲಿಯಲ್ಲಿ ಬರೆದ ಆ ಪತ್ರದ ಬುಡದಲ್ಲಿ ಗವರ್ನರರ ಸಹಿ ಎದ್ದು ಕಾಣುತ್ತಿತ್ತು! ‘ಬಹುಶಾ ಯಾರೋ ಹೆಂಗಸು ಮಾಡಿದ ಶಿಫಾರಸಿಗೆ ರಾಜ್ಯಪಾಲರು ಓದದೆಯೇ ಸಹಿ ಹಾಕಿದ್ದಾರೆ.’ ಪೆಟ್ರೊವಿಚರು ಊಹಿಸಿದರು.

ಅವರೊಂದು ನಿಡಿದಾದ ಉಸಿರನ್ನು ಚೆಲ್ಲಿ, “ರಾಜ್ಯಪಾಲರ ಆದೇಶವನ್ನು ಪಾಲಿಸದೆ ಗತ್ಯಂತರವಿಲ್ಲ. ಹಾಗೇ ಆಗಲಿ. ನಿನ್ನ ಅರ್ಜಿಯೊಂದಿಗೆ ನಾಳೆ ಆಫೀಸಿಗೆ ಬಾ.” ಎಂದರು.

ಅವನು ನಿರ್ಗಮಿಸುತ್ತಿದ್ದಂತೆ ನಿರ್ದೇಶಕ ಸಾಹೇಬರು ಬಲವಾಗಿ ತಾವು ನಿಂತ ನೆಲವನ್ನು ಬೂಟುಗಾಲಿಂದ ಗುದ್ದಿದರು. ಅವನು ಹೋದ ದಾರಿಗೆ ಉಗುಳುತ್ತಾ, “ನಾಚಿಕೆಗೇಡಿ! ನಾಲಾಯಕ್ ಕ್ರಿಮಿ! ನಾನು ಮೂರ್ಖನಾದೆ!” ಎಂದು ಹಲ್ಲು ಕಚ್ಚುತ್ತಾ ಕಿರುಚಿದರು.

ಪೊಲ್ಝುಯಿನ್ ಹೋದ ದಾರಿಯಿಂದಲೇ ಓರ್ವ ಮಹಿಳೆಯೊಬ್ಬಳು ಒಳಬಂದಳು. ಆಕೆ ಹಿರಿಯ ಲೆಕ್ಕಾಧಿಕಾರಿಯ ಮಡದಿಯಾಗಿದ್ದಳು. ಪೆಟ್ರೊವಿಚ್ ಲಜ್ಜೆಯಿಂದ ಕೆಂಪಗಾದರು.

“ನಿಮ್ಮಿಂದ ಒಂದು ಸಣ್ಣ ಕೆಲಸವಾಗಬೇಕಿತ್ತು ಪ್ಯೋಡೊರ್ ಡಿಯರ್!..” ಅವಳು ವಯ್ಯಾರದಿಂದ ನುಲಿಯುತ್ತಾ ಹೇಳಿದಳು. “ನಾನು ಹೇಳುವುದನ್ನು ಸ್ವಲ್ಪ ಗಮನವಿಟ್ಟು ಕೇಳಿ. ನಿಮ್ಮ ಡಿಪಾರ್ಟ್‍ಮೆಂಟಿನಲ್ಲಿ ಒಂದು ಕೆಲಸ ಖಾಲಿಯಾಗಿದೆ ಎಂದು ಕೇಳಿದೆ. ನಾಳೆ, ಅಥವಾ ನಾಡಿದ್ದು.. ಪೊಲ್ಝುಯಿನ್ ಎಂಬ ಯುವಕ ನಿಮ್ಮನ್ನು ಕಾಣಲು ಬರುತ್ತಾನೆ..” ಅವಳು ಮಾತಾಡುತ್ತಲೇ ಇದ್ದಳು. ಫ್ಯೋಡೊರ್ ಕಲ್ಲಿನ ಮೂರ್ತಿಯಂತೆ ನಿಶ್ಚಲರಾಗಿ ಕುಳಿತಿದ್ದರು. ಅವರ ಕಣ್ಣುಗಳು ಶೂನ್ಯದಲ್ಲಿ ನೆಟ್ಟಿದ್ದವು. ಶಿಷ್ಠಾಚಾರಕ್ಕಾಗಿ ಅವರ ತುಟಿಗಳು ಮಂದಹಾಸ ಬೀರುತ್ತಿದ್ದವು.

ಮಾರನೆಯ ಬೆಳಿಗ್ಗೆ ಹೊಸ ಕೆಲಸಕ್ಕೆ ಅರ್ಜಿ ಗುಜರಾಯಿಸಲು ಬಂದ ರೆಮೆನಿಸ್ಕಿಗೆ ಏನು ಹೇಳುವುದೆಂದು ತೋಚದೆ ಮಾನ್ಯ ಪ್ಯೋಡೊರ್ ಪೆಟ್ರೊವಿಚ್ ಕಕ್ಕಾಬಿಕ್ಕಿಯಾದರು. ಅವರು ಹೀಗೆಯೇ ಸ್ವಲ್ಪ ಹೊತ್ತು ಕಾಲಹರಣ ಮಾಡಿದರು. ಈ ಒಂದು ದಿನದೊಳಗೆ ಏನೆಲ್ಲಾ ನಡೆಯಿತೆಂದು ಮಾಸ್ತರರಿಗೆ ವಿವರಿಸಲು ಪ್ರಯತ್ನಪಟ್ಟರಾದರೂ ನಾಲಿಗೆ ಸಹಕರಿಸಲಿಲ್ಲ. ಅವರಿಗೆ ಕ್ಷಮೆ ಕೋರಲೂ ಸಾಧ್ಯವಾಗಲಿಲ್ಲ. ನಶೆಯೇರಿದ ಕುಡುಕನಂತೆ ಬಾಯಿಗೆ ಬಂದಂತೆ ಏನೆಲ್ಲಾ ಹೇಳತೊಡಗಿದರು. ಕಿವಿಗಳು ಕಾವೇರತೊಡಗಿದವು. ಅಸಹಾಯಕತೆಯಿಂದ, ಅದೂ, ತಮ್ಮದೇ ಕಚೇರಿಯಲ್ಲಿ, ತಮ್ಮದೇ ಕೈಕೆಳಗಿನವನ ಎದುರಲ್ಲಿ! ಕ್ರೋಧ ಉಕ್ಕೇರಿತು. ಮಾನ್ಯ ಫ್ಯೋಡೊರ್ ಪೆಟ್ರೊನಿಚ್ ಧಡಕ್ಕನೆ ಎದ್ದು ನಿಂತರು. ಅವರು ಸಿಟ್ಟಿನಿಂದ ಕಂಪಿಸುತ್ತಿದ್ದರು. ಮೇಜಿನ ಮೇಲೆ ಬಲವಾಗಿ ಗುದ್ದಿ, ಅವರು ರೆಮೆನಿಸ್ಕಿಯ ಕಡೆ ತಿರುಗಿದರು. ಅವನೆಡೆಗೆ ತೋರು ಬೆರಳನ್ನು ಗುರಿಯಿಟ್ಟು:

“ತೊಲಗಾಚೆ! ದರಿದ್ರದವನೇ, ನಿನಗಿಲ್ಲಿ ಯಾವುದೇ ಕೆಲಸವಿಲ್ಲ! ನನ್ನ ತಲೆ ತಿನ್ನ ಬೇಡ. ಮೊದಲು ತೊಲಗಿಲ್ಲಿಂದ!” ಎಂದು ಕಿರುಚಿದರು.

ರೆಮೆನಿಸ್ಕಿ ಕಕ್ಕಾಬಿಕ್ಕಿಯಾದ.

ಸುಮ್ಮನೆದ್ದು ಹೊರನಡೆದ.

*****

(ರಶ್ಯನ್ ಲೇಖಕ Anton Chekov  ಅವರ  Ladies ಕತೆಯ ಅನುವಾದ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x