ನಾಟಕಕಾರರಾಗಿ ಕುವೆಂಪು (ಭಾಗ-17) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ಓದುಗಪ್ರಭುಗಳೇ,

ಕಳೆದ ಸಂಚಿಕೆಯಲ್ಲಿ ಮಹಾಕವಿಗಳ ಸಾರ್ವಕಾಲಿಕ ಸರ್ವಶ್ರೇಷ್ಟ ರಂಗಕೃತಿಗಳಲ್ಲಿಯೇ ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಮತ್ತು ಆಧುನಿಕ/ಇಂದಿನ ಕಾಲದಲ್ಲಿ ಜಾಣ್ಮೆ, ವಿದ್ಯೆ ಮುಂತಾದ ಸಂಗತಿಗಳು ಕೇವಲ ಉನ್ನತ ಕುಲದವರ ಸ್ವತ್ತಲ್ಲ, ಅದು ಸ್ಥಾಪಿತ ಸ್ವ-ಹಿತಾಸಕ್ತಿಯ ಬಂಧನಕ್ಕೊಳಗಾಗುವುದಿಲ್ಲ ಮುಂತಾದ ಅಂಶಗಳ ಕುರಿತು ಆತ್ಮಾವಲೋಕನಕ್ಕೆ ಗುರಿಪಡಿಸುವ ‘ಜಲಗಾರ’ ಕೃತಿಯ ಕುರಿತು ತಿಳಿದುಕೊಂಡಿದ್ದೇವೆ. ಹಾಗೆ ನೋಡಿದರೆ ‘ಜಲಗಾರ’ ರಂಗಕೃತಿಯ ವಸ್ತು ವರ್ಣ-ವರ್ಗಗಳ ಸಂಘರ್ಷದ ನೆಲೆಯಾಗಿದೆ. ‘ಜಲಗಾರ’ ಇಲ್ಲಿ ಪರಂಪರೆಯ ಶೋಷಣೆಯ ಎಲ್ಲಾ ಮಗ್ಗಲುಗಳನ್ನು ಅರಿತವನು. ಅದರಿಂದ ಬಿಡುಗಡೆ ಪಡೆದು ತನ್ನ ಜೀವನದಲ್ಲಿ ನವ ಉದಯವನ್ನು ಕಂಡವನಾಗಿದ್ದಾನೆ. ಮಹಾಕವಿಗಳ ‘ಕಲ್ಕಿ’ ಕವನದ ನಾಯಕನಂತೆ ಕನಸೊಡೆದು ಎದ್ದವನು ; ಮಹಾಕವಿಗಳ ಇನ್ನೊಂದು ಕವನ ‘ರೈತನ ದೃಷ್ಟಿ’ಯ ನಾಯಕನಂತೆ ಎಲ್ಲ ಮಟ್ಟದ ಶೋಷಕ ಮಗ್ಗುಲುಗಳನ್ನು ಅರಿತವನು. ಆಧುನಿಕ ಮಾನವತಾವಾದದಿಂದ ಎಚ್ಚರಗೊಂಡ ಪ್ರಜ್ಞೆಯಂತೆ ಗೋಚರಿಸುತ್ತಾನೆ. ವರ್ಣವ್ಯವಸ್ಥೆಯ ಕಸವನ್ನು ಗುಡಿಸಿ ಹಾಕಿ ಹೊಸದೊಂದು ಸಮಾಜವನ್ನು ಕಟ್ಟಬಯಸುವ ಆಶಯವನ್ನು ಜಲಗಾರನ ಪಾತ್ರದ ಮೂಲಕ ಮಹಾಕವಿಗಳ ಮನದಾಳದ ವಿಚಾರವನ್ನು ನಾವು ಅರಿತುಕೊಳ್ಳಬಹುದು. ಜಲಗಾರನ ಕಸಗುಡಿಸುವ ಕಾಯಕ ಅನೇಕ ಸಾಂಕೇತಿಕ ಅರ್ಥಗಳನ್ನು ಹೊರಡಿಸಬಲ್ಲುದು. ದೇವರು-ದೇವಾಲಯ-ಪೂಜಾವಿಧಾನಗಳನ್ನು ವಿಮರ್ಶೆಗೆ ಒಳಪಡಿಸುತ್ತಾ ಹೊಸ ವಾಖ್ಯಾನವನ್ನು ಹೇಳಿಸುತ್ತಾ, ವರ್ಣವ್ಯವಸ್ಥೆಯ ಪೂಜೆ-ಧರ್ಮ-ಯಾಗ-ಭಕ್ತಿ-ಪುರಾಣಗಳ ವಿರುದ್ಧ ಬಂಡಾಯ ಹೂಡುವುದನ್ನು ‘ಜಲಗಾರ’ ಕೃತಿಯಲ್ಲಿ ಕಾಣಬಹುದಾಗಿದೆ. ಗಯಾ-ಪುರಿ-ಕಾಶಿಗಳ ದೈವಗಳನ್ನು ನಿರಾಕರಿಸುವ ಜಲಗಾರನು ‘ಜಗದ ಜಲಗಾರ’ನಾದವನು. ಅಂತೆಯೇ ಗುಡಿ-ಚರ್ಚು-ಮಸೀದಿಯಂಥ ಸ್ಥಾವರ ಕಲ್ಪನೆಗೆ ಹೊಸದಾದ ದೇವಾಲಯದ ಕಲ್ಪನೆಯನ್ನು ‘ಜಲಗಾರ’ನಲ್ಲಿ ಕಾಣುತ್ತೇವೆ. ಸೂಚ್ಯ-ವಾಚ್ಯವಾಗಿಯೇ ಸಾಂಪ್ರದಾಯಿಕ ಪರಂಪರೆಯ ಅಸಮಾನತೆಯ ವಿರುದ್ಧ ವೈಚಾರಿಕ ದಂಗೆ ಎದ್ದ ಮೊದಲ ವಾಗ್ವಾದಕಾರ+ಮಾನವತಾವಾದಿಯಾಗಿ ಈ ಜಲಗಾರ ಮನಮುಟ್ಟುತ್ತಾನೆ. ಮಹಾಕವಿಗಳ ‘ಪಾಂಚಜನ್ಯ’ ಸಂವೇಧನೆಯು ಕೃತಿಯ ಉದ್ದಕ್ಕೂ ಹೊರಹೊಮ್ಮುವುದನ್ನು ನಾವು ಕಾಣಬಹುದು. 

ಮುಂದುವರೆದು, ಇಂದಿನ ಸಮಕಾಲೀನ ಸಂದರ್ಭದಲ್ಲಿ ವರ್ಣ-ವರ್ಗದ ಅಸಮಾನತೆಗಳು ಮತ್ತಷ್ಟು ಗೊಜಲುಗಳಾಗಿ ತಲೆಯೆತ್ತುತ್ತಿರುವ ಸಂದರ್ಭದಲ್ಲಿ ಮಹಾಕವಿಗಳ ‘ಶೂದ್ರತಪಸ್ವಿ, ಬೆರಳ್‍ಗೆ ಕೊರಳ್, ಜಲಗಾರ’ ಮೂರು ರಂಗಕೃತಿಗಳು ಸಮಾನತೆಯ ಕನಸಿನ ಕುರಿತು ಮುಖಾಮುಖಿಯಾಗಿಸುತ್ತಾ ಇಂದಿಗೂ ಪ್ರಸುತ್ತವಾಗಿರುವುದನ್ನು ನಾವು ಮನಗಾಣಬಹುದು. ಕರ್ನಾಟಕದ ಸಾಂಸ್ಕøತಿಕ ಚರಿತ್ರೆಯನ್ನೊಮ್ಮೆ ಗಮನಿಸಿದಾಗ ರಾಜಕೀಯ-ಸಾಮಾಜಿಕ-ಧಾರ್ಮಿಕ-ಶೈಕ್ಷಣಿಕ ಪರಿಸರದಲ್ಲಿ ಮಹಾಕವಿಗಳು ಎತ್ತಿದ ವರ್ಣ-ವರ್ಗ ಸಂಘರ್ಷದ ವಿಚಾರಗಳು ವಾದ-ವಿವಾದಗಳ ಮೂಲಕ ಚಿಂತನೆಯಲ್ಲಿ ತೊಡಗುವಂತೆ ಮಾಡಿ, ತನ್ಮೂಲಕ ಅನೇಕ ಬದಲಾವಣೆಗಳಾಗಿರುವುದನ್ನು ಪ್ರಾಜ್ಞರಾದ ಕರುನಾಡಿನ ಜನರು ಕಾಣಬಹುದು. ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕರೆ ನೀಡುವುದರ ಮೂಲಕ ಕೆಳವರ್ಗ/ಶೋಷಿತವರ್ಗವನ್ನು ಎಚ್ಚರಿಸಿದ ಮಹಾಕವಿಗಳ ಘಂಟಾನಾದ ಇಂದಿಗೂ ಮಾರ್ಧನಿಸುತ್ತಲೇ ಇದೆ. 

ಬಲಿದಾನ (1948) : 

ಅದರಂತೆ, ಇಂದಿನ ಸಂಚಿಕೆಯಲ್ಲಿ ಮಹಾಕವಿಗಳ ಮತ್ತೊಂದು ಮಹೋನ್ನತ (ಗಾತ್ರದಲ್ಲಿ ಚಿಕ್ಕದಾಗಿದ್ದರೂ ವಸ್ತುವಿಷಯದಲ್ಲಿ  ಬೃಹತ್) ರಂಗಕೃತಿಯಾಗಿರುವ ‘ಬಲಿದಾನ’ವು (1948) ನಮ್ಮ ದೇಶದ ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರದ ಸಂದರ್ಭ, ಸ್ವಾತಂತ್ರ್ಯೋತ್ತರ ಸಂದರ್ಭದ ಮೂರು ದೃಶ್ಯಗಳ ಮೂರು ನೆಲೆಗಳನ್ನೊಳಗೊಂಡಿದೆ. ಆಂಗ್ಲರ ಆಳ್ವಿಕೆಯಿಂದ ಸ್ವತಂತ್ರಗೊಂಡ ಭಾರತ ದೇಶವು ಇಂದಿಗೂ ಆಂಗ್ಲರು ಬಿತ್ತಿಹೋದ ಹಲವಾರು ವಿಷಬೀಜದಂತಹ ವಿಚಾರಗಳು ಇಂದು ಪೀಡೆಗಳಾಗಿ ಕಾಡಿಸಿಕೊಳ್ಳುತ್ತಾ ಭಾರತವು ಸರ್ವತಂತ್ರ ಸ್ವತಂತ್ರ ದೇಶವಾಗಿಲ್ಲವೆಂಬ ಕಹಿಸತ್ಯವನ್ನು ನಾವು ಮನಗಾಣಬೇಕಿದೆ. ಇಂತಹ ಸಂದರ್ಭದಲ್ಲಿ ‘ಬಲಿದಾನ’ವು ಭಾರತ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಮೂರು ದೃಶ್ಯಗಳ ಅದ್ಭುತ ರಂಗಕೃತಿಯಾಗಿದೆ. ಮಹಾಕವಿಗಳ ವಿಶ್ವಮಾನವ ತತ್ವದ ಆಶಯ ಈ ರಂಗಕೃತಿಯಲ್ಲಿ ಸ್ಪಷ್ಟವಾಗಿ ಬೀಜಾಂಕುರಗೊಂಡಿದೆಯೆನ್ನಬಹುದು. 

ಈ ಕೃತಿಯ ಪ್ರಕಟಣೆ ಮತ್ತು ಪ್ರಕಾಶನದ ಕುರಿತು ವಿವರಗಳನ್ನು ಕುತೂಹಲದಿಂದ ಅಪೇಕ್ಷಿಸಿದಾಗ ಗೊತ್ತಾಗಿದ್ದು : ಮೈಸೂರಿನ ಕಾವ್ಯಾಲಯದವರು 1947ರಲ್ಲಿ ಶೂದ್ರ ತಪಸ್ವಿ ಕೃತಿಯೊಂದಿಗೆ ಬಲಿದಾನ ಕೃತಿಯ ಒಂದು ದೃಶ್ಯವನ್ನು ಪ್ರಕಟಿಸಿದ್ದರು. ಮತ್ತೆ ಇವೆರಡೂ ಕೃತಿಗಳು ಒಂದೇ ಸಂಪುಟದಲ್ಲಿ ಎರಡನೇಯ ಮುದ್ರಣವಾಗಿ 1948ರಲ್ಲಿ ಪೂರ್ಣ (‘ಬಲಿದಾನ’ವು ಮೂರು ದೃಶ್ಯಗಳೊಂದಿಗೆ) ರಂಗಕೃತಿಗಳಾಗಿ ಮೈಸೂರಿನ ಕಾವ್ಯಾಲಯ ಪ್ರಕಾಶನದಿಂದ ಪ್ರಕಟಗೊಂಡವು. ಮುಂದೆ ಉದಯರವಿ ಪ್ರಕಾಶನದಿಂದ 1967, 1983, 1966ರಲ್ಲಿ ಮತ್ತು ಇತ್ತೀಚೆಗಿನ ಪ್ರಕಟಣೆಯಾಗಿ ಆರನೇಯ ಆವೃತ್ತಿಯಾಗಿ 2005ರಲ್ಲಿ ಪ್ರಕಾಶನಗೊಂಡಿದೆ.

ಇಲ್ಲಿಯವರೆಗೆ ಭಾರತದ ಅನೇಕ ಭಾಷೆಗಳಲ್ಲಿ ಸ್ವಾತಂತ್ರ ಹೋರಾಟದ ಕುರಿತಾಗಿ ಅನೇಕ ಸಾಹಿತಿಗಳು ವೈವಿಧ್ಯಮಯವಾಗಿ ಸಾಹಿತ್ಯ ರಚನೆ ಹೆಸರು/ಪ್ರಶಸ್ತಿ ಗಳಿಸಿದ್ದಾರೆ. ಆದರೆ ಮಹಾಕವಿಗಳು ಕಟ್ಟಿಕೊಡುವ ಚಿತ್ರಣ ಸಾಂಸ್ಕೃತಿಕ ಸ್ವರೂಪದೊಂದಿಗೆ ವಿಭಿನ್ನವಾಗಿದೆ. ಸ್ವಾತಂತ್ರ ಹೋರಾಟವೆಂಬುದು ಧಗಧಗನೇ ಹೊತ್ತಿ ಉರಿಯುತ್ತಿದ್ದ ಮಹಾಯಜ್ಞಕುಂಡವಾಗಿತ್ತು. ಹೋರಾಟಕ್ಕೆ ಕಾರಣವಾದ ಹಿನ್ನಲೆ, ನಂತರದ ಬೆಳವಣಿಗೆಗಳು ಮುಂತಾದ ಸಂಗತಿಗಳನ್ನು ತಮ್ಮ ಪರಿಭಾವನೆಯ ವಿಷಯಗಳನ್ನಾಗಿ ಮಾಡಿ, ಬದಲಾವಣೆಯೆ ಪ್ರತಿಮಾರೂಪದಲ್ಲಿ ಮೂರು ದೃಶ್ಯಗಳನ್ನು ಅಳವಡಿಸುವುದರೊಂದಿಗೆ ಏಕಾಂಕವೊಂದನ್ನು ಕರುನಾಡಿಗೆ ನೀಡಿದ್ದಾರೆ. 

ಮೊದಲನೇಯ ದೃಶ್ಯದಲ್ಲಿ ಹಾಳುಬಿದ್ದ ಕಾಳಿಕಾ ಮಂದಿರದ ಕಗ್ಗತ್ತಲಲ್ಲಿ ‘ಭರತಸುತ’ನು ಮಲಗಿಕೊಂಡಿದ್ದಾನೆ. ಕಗ್ಗತ್ತಲು ನಿಧಾನವಾಗಿ ಸರಿದು ಮಬ್ಬುಗತ್ತಲಾದಾಗ ಎಚ್ಚತ್ತುಕೊಳ್ಳುವ ಆತನಿಗೆ ದೂರದಲ್ಲಿ ನಿಂತಿರುವ ‘ಭಾರತಾಂಬೆ’ಯನ್ನು ಕಂಡು ಬೆಚ್ಚಿ 

ಆರು ನೀನಲೆ ತಾಯೇ? ಮುಸುಗಿದೀ ಕತ್ತಲಲಿ 

ಮಬ್ಬಾಗಿ ಕಾಣುತಿಹೆ ! 

ಎಂದು ಕೇಳುವುದರೊಂದಿಗೆ ಸಂಭಾಷಣೆ ಆರಂಭವಾಗುತ್ತದೆ. ತನ್ನ ವೈಭವದ ದಿನಗಳನ್ನು ನೆನಪಿಸಿಕೊಂಡು, ಇಂದಿನ ದುರ್ಗತಿಯ ಚಿತ್ರಣವು ಭಾರತಾಂಬೆಯ ಪಾತ್ರದ ಸಂಭಾಷಣೆಯಲ್ಲಿ ವ್ಯಕ್ತವಾಗುತ್ತದೆ. 

ಮನೆಯಿಹುದು, ಆದರೇನ್ ? 

ನನಗಿರಲು ಮನೆಯಿಲ್ಲ. ಪರಕೀಯರೈತಂದು 

ಬಾಳುತಿಹರಲ್ಲಿ.

ಎಂದು ಹೇಳುತ್ತಾ,

ಧನದಾನ್ಯ 

ಬೇಕಾದ ಹಾಗಿಹುದು. ಆದರೆನಗಿಲ್ಲ ! 

ಹೊಟ್ಟೆಗಿಲ್ಲದೆ ಸೊರಗಿ ಸಾಯುತಿಹೆನಯ್ಯೋ 

ನನ್ನ ಮನೆಯಲಿ ನಾನೆ ತೊತ್ತಾಗಿ ಬಿದ್ದಿರುವೆ !

ಹೀಗೆ ಹೇಳುತ್ತಿರುವಾಗ ಅಂದಿನ ಭಾರತದ ಪರಿಸ್ಥಿತಿಯನ್ನು ನಾವು ಅರಿತುಕೊಳ್ಳಬಹುದು. ಇಷ್ಟೆಲ್ಲಾ ಕಷ್ಟಗಳಿದ್ದರೂ ಅದು ಬದುಕುತ್ತದೆ. ಅದಕ್ಕೆ ಬೇಕಾಗಿರುವುದು ಹಣ-ಉಡುಗೆ-ತೊಡುಗೆಗಳಲ್ಲ ! ಪರಿಹಾರ ಬೇಕಾಗಿರುವುದು ‘ಒಳಗಿರುವ ಬೆಳಕಿಂದ !’ ಈಗಲೂ ತನ್ನ ಮಕ್ಕಳಲ್ಲಿ ಭಾರತಾಂಬೆಯು ಅದೇ ಬೆಳಕನ್ನು ಬಯಸುತ್ತಿದ್ದಾಳೆ. ಅವಳ ಹೃದಯದ ಬೆಳಕಿನ ಆರಾಧನೆ, ವೀರರೂಪದಿಂದ ಬರಬೇಕಾಗಿದೆ. ಮಹಾಕಾಳಿಯ ಮಂದಿರದಲ್ಲಿ ನಿಂತಿರುವುದು ಸಹ ಅದರ ಸಂಕೇತವೆಂದು ನಾವು ಭಾವಿಸಬೇಕು. ಕಾಳಿಯ ಭಯಂಕರ ರೂಪಕ್ಕೆ ಅಂಜಿದ ಜನರು ಅವಳನ್ನು ಪೂಜಿಸುವುದನ್ನೇ ಮರೆತರು.

ಭಕ್ತರೆದೆಯಲ್ಲವಳ ನರ್ತನವಿಲ್ಲದಾಯ್ತು !

ಅವಳ ದರ್ಶನಕಳುಕಿದರ್.

ನೆತ್ತರಿನ ನಾಲಗೆಯ ನೋಡಿ ಕಂಡು ಬೆದರಿದರ್ ;

ರುಂಡಗಳ ಮಾಲೆಯನು ಕಂಡು ನಡುಗಿದರು !

ಕರಿಯ ಬಣ್ಣವ ಕಂಡು ಹೇಸಿದರು.

ಕೈಯ ಕತ್ತಿಯ ಕಿತ್ತು, ಕೊಳಲನಿಟ್ಟರು ಅಲ್ಲಿ.

ರುಂಡಮಾಲೆಯನಿಳ್ದು ರಚಿಸಿದರು ವನಮಾಲಿಯಂ,

ಶಿವನೆದೆಯ ಮೇಲವಳು ಕುಣಿವುದನು ಬಿಡಿಸಿ

ಕೊಳಲೂದಿ ಕುಣಿವಂತೆ ಮಾಡಿದರು

ಗೋಪಿಯರೊಡನೆ.

ಅದರಿಂದ ವೀರತ್ವವಳಿದುದಯ್.

ಅದರಿಂದ ಪಾಳ್ ಬಿದ್ದುದೀ ದೇಗುಲಂ.

ಹೀಗೆ ಹೇಳುವುದನ್ನು ಕೇಳಿದಾಗ ಅಂದಿನ ಭಾರತದ ಪರಿಸ್ಥಿತಿಗೆ ಅಗತ್ಯವಾದ ರೌದ್ರದ ಉಪಾಸನೆಗೆ ಆಹ್ವಾನಿಸುತ್ತಾಳೆ. ನನಗಾಗಿ ನೀನು ಏನು ಬೇಕಾದರೂ ಮಾಡು ನಾನಿರುತ್ತಾನೆಂಬ ಆಸ್ವಾಸನೆಯನ್ನು ನೀಡುತ್ತಾಳೆ. ಕೊನೆಯಲ್ಲಿ ‘ನೀನಾರು ಮಾತಾಯಿ?’ ಎಂದು ಕೇಳಿದಾಗ ಹೇಳುವ ಪರಿ ಮಹಾಕವಿಗಳ ಲೇಖನಿಯಲ್ಲಿ ಹೊರಹೊಮ್ಮಿರುವುದು ಹೀಗೆ :

ವೇದಗಳ ಹೆತ್ತವಳ್ ! ಯೋಗಿಗಳ ಪಡೆದವಳ್ !

ಲೋಕಕ್ಕೆ ವೀರರನು ಕೊಟ್ಟವಳ್ !

ಮಾನವಗೆ ಬುದ್ಧಿನೀಡಿದ ತಾಯಿ,

ನಾನ್ ಭಾರತಾಂಬೆ ! (ಸುಯ್ದು)

ಗುರುತಾಯಿತೇ ಈಗ ?

ಎಂದು ಪರಿಚಯಿಸಿಕೊಳ್ಳುತ್ತಾ, ತನ್ನ ಕೈಕಾಲುಗಳಿಗೆ ಹಾಕಿರುವ ಬೀಗದ ಸಂಕೋಲೆಯನ್ನು ತೋರಿಸುತ್ತಾ ‘ಬಲವಿರಲ್ ಕಳಚಬಲ್ಲೆಯ ಕಾಣ್’ ಎಂದು ಹಂಗಿಸುತ್ತಾಳೆ. ಈ ಬೀಗದ ಸಂಕೋಲೆಯ ಕೀಲಿಕೈ ಯಾರ ಬಳಿಯಿದೆಯೆಂದು ಕೇಳಿದಾಗ, ಭಾರತಾಂಬೆಯು ಆತನ ಕಿವಿಯಲ್ಲಿ ಗುಟ್ಟಾಗಿ ಹೇಳಿದಾಗ, ಭರತಸುತನು ಕೋಪಾತಿಶಯದಿಂದ,

ಹೇ ದುಷ್ಟ, ನಿನ್ನನಿದುವರೆಗೂ ಗೆಳೆಯನೆಂದೇ

ತಿಳಿದು ಮರುಳಾದೆ !…..ತಪ್ಪಾಯಿತಮ್ಮಾ ;

ಅಪರಾಧಿ ನಾನ್ ! ಕೀಲಿ ಕೈಯನು ತಂದು ಬಿಡಿಸುವೆನ್.

ಎಂದು ಹೇಳುತ್ತಾ ಆತನು ‘ಮೃತ್ಯು ಅಥವಾ ಸಿದ್ಧಿ’ ಎಂಬ ಪ್ರತಿಜ್ಞೆಗೈದು ‘ವಿಜಯಿ ಭವ ! ಹೋಗಿ ಬಾ, ಕಂದ, ಬೇಗ ಬಾ!’ ಎಂಬ ಭಾರತಾಂಬೆಯ ಆಶೀರ್ವಾದವನ್ನು ಪಡೆದು ಹೋಗುತ್ತಿರುವಾಗ ರಾಷ್ಟ್ರಗೀತಗಾನವು ಮೆಲ್ಲನೆ ಮೊದಲಾಗಿ ಬರಬರುತ್ತಾ ಸಮುದ್ರಘೋಷವಾಗಿ ಉಕ್ಕುವುದರೊಂದಿಗೆ ಮೊದಲನೆಯ ದೃಶ್ಯಕ್ಕೆ ತೆರೆ ಬೀಳುತ್ತದೆ. ಇಂದಿಗೂ ನಮ್ಮ ನೆರೆ-ಹೊರೆಯ ರಾಷ್ಟ್ರಗಳು (ಚೀನಾ-ಪಾಕಿಸ್ತಾನಗಳು ಕೆಲವೊಮ್ಮೆ ಅಂಗೈಗಲದ ಶ್ರೀಲಂಕಾ ಸೇರಿದಂತೆ) ಮೈಮರೆತು ಮಲಗಿದ್ದ ಭಾರತದ ಗಡಿಯಲ್ಲಿ ಪ್ರವೇಶಿಸಿ ಅಣಕ ಮಾಡುವುದರೊಂದಿಗೆ ನಮ್ಮ ವೀರ ಸೈನಿಕರನ್ನು ವಿನಾಕಾರಣ ಹತ್ಯೆ ಮಾಡುವಂತಹ ಸಂದರ್ಭದಲ್ಲಿ ನೆರೆ-ಹೊರೆಯ ಮಿತ್ರವೇಷದ ಶತ್ರುಗಳನ್ನು ಹೊರದೊಡಿಸುವ ದೀಕ್ಷೆಯನ್ನು ತೊಡುವಂತಹ ಸನ್ನಿವೇಶವನ್ನು ನಾವಿಲ್ಲಿ ಕಾಣಬಹುದಾಗಿದೆ. 

ಎರಡನೇಯ ದೃಶ್ಯದಾರಂಭದಲ್ಲಿ ಅದೇ ಹಾಳು ಬಿದ್ದಿರುವ ಕಾಳಿಕಾ ದೇವಾಲಯದಲ್ಲಿ ಭಾರತಾಂಬೆಯು ಯಾತನಾಮಯ ಮುಖಮುದ್ರೆಯಲ್ಲಿ, ಅಸ್ವಸ್ಥ ಸ್ಥಿತಿಯಲ್ಲಿ ಕಷ್ಟದಿಂದ ಕತ್ತೆತ್ತಿ ಭರತಸುತನು ಹೋದಕಡೆ ನೋಡುತ್ತಾ ಆತನಿಂದ ತನ್ನ ಬಿಡುಗಡೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾಳೆ. 

ಓ ಎಂದಿಗೈತಹೆ, ಮಗೂ, ಮಗೂ, ಮಗೂ ?

ಎಂದಿಗೀ ಶೃಂಖಲಾ ಸಂಕಟದಿನೆನ್ನಂ

ವಿಮುಕ್ತೆಯಂ ಮಾಳ್ದೆ? ಎಂದಿಗೀ ಕವಿದಿರ್ಪ

ತಮೋಭಾರಮಂ ತವಿಪಯ್, ಜ್ಯೋತಿಯಿಂದೀ ದೇಗುಲಂ

ಬೆಳಗುವೋಲ್ ? ಎಂದಿಗೀ ದೈನ್ಯ ದಾರಿದ್ರ್ಯಮಂ

ಛೇದಿಸಿ, ಹೃದಂಬುಜದಿ ಗೌರವಶ್ರೀಯಂ

ಪ್ರಚೋಧಿಸುವೆ ? ಓ ಎಂದಿಗೈತಹೆ, ಮಗೂ ? ಮಗೂ !

ಎಂದು ನೋವಿನಿಂದ ರೋಧಿಸುತ್ತಿರುವಾಗ ಮಬ್ಬುಗತ್ತಲ ಗರ್ಬದಿಂದ ಗೂಬೆಯೊಂದು ಗೂ ಗೂ ಗೂ ಎಂದು ಹಾರಿ ಹೋಗುತ್ತದೆ. ಹಾಗೆ ಹಾರಿ ಹೋದ ಕಿಂಡಿಯಿಂದ ಬೆಳಕಿನ ಕಿರಣ ಪ್ರವೇಶಿಸಿ ಭಾರತಾಂಬೆಯ ಮೇಲೆ ಬೀಳುವುದು ಅರ್ಥಸೂಚಕವಾಗಿದೆ. ಮುಂಬರುವ ಬೆಳಕಿಗೆ ಹೆದರಿ ಈ ನಿಶಾಚರವು ಓಡುತ್ತದೆ. ಭಾರತಾಂಬೆಯ ಆಶೀರ್ವಾದದ ಆಶಾಹಸ್ತವೆಂಬಂತೆ ಬೆಳಕಿನ ಕಿರಣವು ಬರುತ್ತದೆ. ಅದೇ ಸಮಯಕ್ಕೆ ದೂರದಲ್ಲಿ ಜನಘೋಷವನ್ನು ಮೀರಿ ‘ವಂದೇ ಮಾತರಂ’ ಗೀತೆ ಬರಬರುತ್ತಾ ಸ್ಪಷ್ಟತರವಾಗಿ ಕೇಳುತ್ತದೆ. ಇಲ್ಲಿ ‘ವಂದೇ ಮಾತರಂ’ ಗೀತೆಯನ್ನು ಅರ್ಥಪೂರ್ಣವಾಗಿ ರಂಗಪ್ರಯೋಗದ ಅನುಕೂಲತೆಯಿಂದ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಈ ಕೃತಿಯ ರಚನೆಯ ಸಂದರ್ಭದಲ್ಲಿ ಬಂಕಿಮಚಂದ್ರ ಚಟರ್ಜಿಯವರ ಈ ಗೀತೆಯು ದೇಶವ್ಯಾಪಿ ಬಹುಜನಪ್ರೀಯ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಗೀತೆಯಂತೆ ರಾಷ್ಟ್ರಗೀತೆಯಂತಾಗಿರುತ್ತದೆ. ಈ ಹಾಡಿನ ಒಂದೊಂದು ವಾಕ್ಯವೃಂದದ ನಂತರ ಭಾರತಾಂಬೆಯು ರಸಸ್ವಾದನೆ ಮಾಡಿಕೊಳ್ಳುತ್ತಾ ಪ್ರತಿಕ್ರಿಯಿಸುವುದು ಮಹಾಕವಿಗಳ ಲೇಖನಿಯಲ್ಲಿ ಉನ್ನತ ಮಟ್ಟದಲ್ಲಿ ಹೊರಹೊಮ್ಮಿದೆ. ತನ್ನ ಸಿರಿ-ಸೊಬಗನ್ನು ಕಂಡು ಕವಿಗಳು ರಚಿತ ಹಾಡಿನಿಂದ ಹಿಗ್ಗುತ್ತಾಳೆ ಮಗುದೊಮ್ಮೆ ಇಂದಿನ ತನ್ನ ದುರ್ಗತಿಗೆ ಮರುಗುತ್ತಾಳೆ. ಅದೇ ಸಮಯಕ್ಕೆ ಮತ್ತೆ ಕತ್ತಲು ಕವಿಯುತ್ತದೆ. 

ಇನ್ನೆಂದೊ ನನಗೆ ಆ ಮುಕ್ತಿ ?

ಪಿಂತಿರುಗಿ ಬಂದಪನೋ ಆ ನನ್ನ ಕಂದನ್, 

ತಂದಪನೋ ಕೀಲಿಕಯ್ಯನ್

ಎಂದು ಆತಂಕಪಡುತ್ತಿರುವಾಗ ಮತ್ತೆ ಕತ್ತಲು ಹರಿದು ಬೆಳಗು ಮೂಡುತ್ತದೆ. ಜನಘೋಷದಿಂದ 

ನಡೆ ಮುಂದೆ ! ನಡೆ ಮುಂದೆ ! 

ನುಗ್ಗಿ ನಡೆ ಮುಂದೆ ! 

ಜಗ್ಗದೆಯೆ ಕುಗ್ಗದೆಯೆ 

ಹಿಗ್ಗಿ ನಡೆ ಮುಂದೆ !

ಎಂಬ ರಣಗೀತೆಯು ಮೊಳಗುತ್ತದೆ. ನಡುನಡುವೆ ಗುಂಡಿನ ಶಬ್ದ, ಸಾಯುವವರ ಆಕ್ರಂಧನ ಕೇಳಿಬರುತ್ತದೆ. ಉದ್ಗಾರ-ಕೋಲಾಹಲಗಳನ್ನು ಇಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ-ಬಲಿದಾನ-ಏಳು-ಬೀಳುಗಳ ಸೂಚಕವಾಗಿ ಬಳಸಿಕೊಂಡ ಸಾಂಕೇತಿಕಗಳಾಗಿವೆ. 

ಇದಕ್ಕಿದ್ದ ಹಾಗೆ ಕಿರಣಕಾಂತಿ ಕೆಂಪಾಗಿ ರಕ್ತವರ್ಣವು ಗುಡಿಯ ತುಂಬಾ ಹಬ್ಬುತ್ತದೆ. ಜನಘೋಷವು ಹೆಚ್ಚಾಗುತ್ತಾ ನಡೆಯುತ್ತದೆ. ಮತ್ತೆ ಇದ್ದಕ್ಕಿದ್ದಂತೆ ಮಬ್ಬುಗತ್ತಲು ಆವರಿಸಿಕೊಂಡು ತಾಯಿ-ಹಸುಳೆಯ ಅಳು-ಆಕ್ರಂಧನಗಳು ಕೇಳಿ ಬರುತ್ತವೆ. ‘ಯುದ್ಧ ಭೂತಂ ತೊಳಲುತಿದೆ ಬರಿಬತ್ತಲೆ !’ ಎಂದು ಹೇಳುವ ಭಾರತಾಂಬೆಗೆ ‘ಕೊಲ್ಲುವ ಮುನ್ನ ಕಾಳಕೂಟವ ಕುಡಿವ ಕೈಲಾಸಪತಿಯೆಲ್ಲಿ?’ ಎಂದು ವಾಣಿಯೊಂದು ಕೇಳುತ್ತದೆ. ‘ಸತ್ತವರ ಕರೆಯು, ಓ ! ಕೂಗುತಿದೆ ಅದೊ ಕೇಳು, ಭೂತಕಾಲದ ಗರ್ಭ ಗೋರಿಯಿಂದ’ ಎಂದು ಮತ್ತೊಂದು ವಾಣಿಯು ಹೇಳುವುದು ಕೇಳಿಸುತ್ತದೆ. ಈ ಧ್ವನಿಗಳು ಕೇಳಿಸುತ್ತಿರುವಾಗಲೇ ಒಬ್ಬ ಬಾಲಕನ ಛಾಯೆ ಸುಳಿದು ‘ತಾಯ ಬಿಡುಗಡೆಗಾಗಿ ದುಡಿದು ಮಡಿದಾ ಕೋಟಿ ಜೀವಗಳ್ಗಾಂ ಪ್ರತಿಮೆ’ ಎಂದು ಹೇಳುತ್ತದೆ. ಮಂಗಳದ ಸಂದೇಶವನ್ನು ಸಾರುವುದಕ್ಕಾಗಿ ಬಾಲಕನ ಛಾಯೆಯ ಪಾತ್ರವನ್ನು ರಂಗದ ಮೇಲೆ ತಂದಿರುವ ಮಹಾಕವಿಗಳು ಭರತಸುತನಿಂದ ಭಾರತಮಾತೆಗೆ ಬಿಡುಗಡೆಯಾಗುವುದರ ಕುರಿತಾಗಿ ಕೊಡುವ ಭರವಸೆಯ ಮಾತುಗಳಾಗಿವೆ. ಆದರೆ ಇದಕ್ಕಾಗಿ ನಡೆದಿರುವ ಬಲಿದಾನವೆಷ್ಟು ?

ಆ ಸಮಯದಲ್ಲಿ ‘ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’ ಎಂಬ ಸುಮಧುರ ಗೀತೆಯೊಂದಿಗೆ ಭರತಸುತನ ಆಗಮನವಾಗುತ್ತದೆ. 

ನೆತ್ತರೊಳ್ ಮುಳಿಗಿರ್ದುದನ್ ಎತ್ತಿ ತಂದೆನ್, ತಾಯಿ

ಎಂದು ತನ್ನ ಅಸಮ ಸಾಹಸದಿಂದ ತಂದ (ಕೀಲಿ ಕೈ) ವಿಜಯದ ಹೆಮ್ಮೆಯಿಂದ ವಿವರಿಸುತ್ತಾ, ಶತ್ರುಗಳ ರಕ್ತಕ್ಕಿಂತ ಹೆಚ್ಚಾಗಿ 

ನಿನ್ನ ಬೀಗಮಂ ತೆಗೆವ ಕೀಲಿಕೈ ಮುಳುಗಿರ್ದುದಾ

ಸೋದರರ್ ಸೋದರರ ಮೈಯ್ಯಿಂದ ಚೆಲ್ಲಿದಾ

ಮತವೈರ ಸಂಜಾತ ರುಧಿರ ಪ್ರವಾಹದೊಳ್ !

ಎಂದು ಹೇಳುವ ಮಾತು ದೇಶಪ್ರೇಮದ ಭರಾಟೆಯಲ್ಲಿ ಸ್ವಾತಂತ್ರ ಸಂಗ್ರಾಮದ ಕಾಲದಲ್ಲಿ ಮತೀಯ ಶಕ್ತಿಗಳು ಉದ್ಭವಿಸಿ, ಬೆಳೆದು ಈಗೀನ (2013) ಸಂದರ್ಭದಲ್ಲಿ ತೊಂದರೆಯುಂಟು ಮಾಡುತ್ತಿರುವುದನ್ನು ಮಹಾಕವಿಗಳು ಕೃತಿಯ ರಚನೆಯ ಸಂದರ್ಭದಲ್ಲಿ ಉಹಿಸಿರುವುದನ್ನು ನಾವು ಕಾಣಬಹುದು. ಇಂತಹ ಬಿಡುಗಡೆ ಪಡೆದು ತಾನು ದುರ್ಭಾಗ್ಯೆಯೆನ್ ಎಂದು ಭಾರತಾಂಬೆ ಹಲುಬುತ್ತಾಳೆ. ಭರತಸುತ ಸಮಾಧಾನಿಸುವುದು ಹೀಗೆ : 

ಅಳಲದಿರ್,  ತಾಯೆ, ಅಳಲ್ಕಿದು ಪೊಳ್ತಳ್ತು.

ನಿನ್ನಂ ಮೊದಲ್ ಸ್ವತಂತ್ರೆಯಂ ಮಾಳ್ಪೆನ್.

ಅನಂತಂ ನೋಳ್ಪಮಿ ನಿನ್ನ ಸ್ವಾತಂತ್ರ್ಯದಿಂ

ಸಂಭವಿಪ ಸಮೃದ್ಧಿಯಂ, ಸಂತೃಪ್ತಿಯಂ, ಶಾಂತಿಯಂ !

ಅಷ್ಟೋತ್ತಿಗೆ ದೂರದಿಂದ ‘ವಂದೇಮಾತರಂ’ ಗೀತೆ ಕೇಳುತ್ತಿರಲು ಕೀಲಿಕೈಯಿಂದ ಬೀಗವನ್ನು ಕಳಚುತ್ತಾನೆ. ಹೂಮಳೆ ಸುರಿಯುತ್ತದೆ. ಮಂಗಳವಾದ್ಯ ಮೊಳಗುತ್ತದೆ. ಭರತಸುತನು ಸ್ವತಂತ್ರೆಯಾದ ಭರತಮಾತೆಯನ್ನು ಕಣ್ಣರಳಿಸಿ ನೋಡುತ್ತ ಬಹುಕಂಠಗಳಿಗೆ ತನ್ನ ಕಂಠವನ್ನು ಸೇರಿಸಿ 

ಲೋಕ ಮಲಗಿದಂದು ನೀ ನಟ್ಟ ನಡೂ ರಾತ್ರಿ….

……ನಮಸ್ ಸತ್ಯೆ ! ನಮೋ ನಿತ್ಯೆ ! ನಮೋ ಜಗನ್ಮಾತೆ !

ಎಂಬ ಸರ್ವಗೀತೆಯನ್ನು ಹಾಡುತ್ತಿರುವಾಗ ದೃಶ್ಯದ ಕೊನೆಯಾಗುತ್ತದೆ.

(………ಮುಂದುವರೆಯುತ್ತದೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Jayaprakash Abbigeri
Jayaprakash Abbigeri
10 years ago

ಸಿದ್ದರಾಮ್…ಬಹಳ ನೀಟಾಗಿ ನಿರೂಪಿತಗೊಂಡಿರುವ 'ಬಲಿದಾನ'….ಸುಪರ್…

1
0
Would love your thoughts, please comment.x
()
x