ಬೆಳ್ಳಿಮೋಡದಲ್ಲಿ ಬೇಂದ್ರೆ ಭಾವಗೀತ: ಹೃದಯಶಿವ ಅಂಕಣ

 
'ಬೆಂದ್ರೆ  ಬೇಂದ್ರೆ !'
 
ಅಂಬಿಕಾತನಯದತ್ತ  ಎನ್ನುವ  ಕಾವ್ಯನಾಮದಿಂದ  ಕನ್ನಡಮಣ್ಣಿನಲ್ಲಿ  ಹೆಮ್ಮರವಾಗಿ  ಬೆಳೆದು ನಿಂತಿರುವ  ದತ್ತಾತ್ರೇಯ  ರಾಮಚಂದ್ರ  ಬೇಂದ್ರೆಯವರು  ೧೮೮೯ರಲ್ಲಿ  ಧಾರವಾಡದಲ್ಲಿ  ಜನಿಸಿ ೧೯೮೧ ರಲ್ಲಿ  ನಿಧನರಾದ  ಕವಿಸಾಮ್ರಾಟ. ಉತ್ತರ  ಕರ್ನಾಟಕದ  ಜನಪದ,  ಗ್ರಾಮೀಣಭಾಷೆಯನ್ನು ತಮ್ಮ  ಕಾವ್ಯದಲ್ಲಿ  ತಂದು  ಕನ್ನಡಸಾಹಿತ್ಯವನ್ನು  ಶ್ರೀಮಂತಗೊಳಿಸಿದ  ವರಕವಿ  ಇವರು. ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದುಕೊಂಡು  ಸಾಹಿತ್ಯಕೃಷಿ  ಮಾಡಿದ  ಇವರು  ಕನ್ನಡದಷ್ಟೇ  ಮರಾಠಿ ಭಾಷೆಯಲ್ಲಿಯೂ  ಅಪಾರವಾದ ಪಾಂಡಿತ್ಯ  ಹೊಂದಿದ್ದರು.  ಮಹಾರಾಷ್ಟ್ರ  ಹಾಗೂ  ಉತ್ತರ ಕರ್ನಾಟಕದ  ಜನಜೀವನ  ಸಾಂಸ್ಕೃತಿಕ  ನೆಲೆಗಟ್ಟನ್ನು  ತೀರಾ  ಹತ್ತಿರದಿಂದ  ಬಲ್ಲವರಾಗಿದ್ದರು.
 
'ಬೆಂದ್ರೆ  ಬೇಂದ್ರೆ'  ಎಂಬ  ಕೌತುಕದ  ಮಾತು  ಕನ್ನಡ  ಕಾವ್ಯರಸಿಕರ  ವಲಯದಲ್ಲಿ  ನಾಣ್ಣುಡಿಯಾಗಿ ಹೋಗಿದೆ  ಎಂದರೆ  ತಪ್ಪಾಗಲಾರದು.  ಮನುಷ್ಯ  ತನ್ನ  ಬದುಕಿನುದ್ದಕ್ಕೂ ಎದುರಿಸುವಂತಹ ನೋವು,  ಹತಾಷೆ,  ದುಃಖ,  ಸಂಕೋಲೆಗಳನ್ನು  ಬೇಂದ್ರೆಯವರು  ಸ್ವತಃ  ಅನುಭವಿಸುವ  ಮೂಲಕ ಪರಿಪೂರ್ಣ  ಜೀವನದ  ಸಾಕ್ಷಾತ್ಕಾರ  ಪಡೆದವರು. ಕಂದನನ್ನು  ಕಳೆದುಕೊಂಡ  ಸಂಕಟದಲ್ಲಿ  ತಮ್ಮ  ಹೆಂಡತಿ  ಉಮ್ಮಳಿಸಿ ಬರುವ  ಉತ್ಕಟ  ಸಂಕಟವನ್ನು  ಹತ್ತಿಕ್ಕಲಾರದ  ನೋವಿನಿಂದ  ತಮ್ಮೆಡೆಗೆ  ನೋಡಿದಾಗ  ’ನೀ  ಹಿಂಗ  ನೋಡಬ್ಯಾಡ  ನನ್ನ, ನೀ  ಹಿಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲಿ ನಿನ್ನ’ ಅಂತ  ತಮ್ಮ  ನೋವು  ಮತ್ತು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ’ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂದು  ಹಾಡಿ  ಮುಳ್ಳಿನ  ನಡುವೆಯೇ  ಹೂವನ್ನು ಕಾಣುವ  ಸ್ವಭಾವದ  ಇವರು  ರಚಿಸಿದ  ಕೃತಿಗಳು  ಕನ್ನಡಿಗರ  ಪಾಲಿಗೆ  ಧರ್ಮಗ್ರಂಥಗಳಾಗಿ ಹೋಗಿವೆ ಇವರ  ಭಾವಗೀತೆಗಳು ನ ಮ್ಮ ಬದುಕಿನ  ಭಾಗವಾಗಿ  ಹೋಗಿವೆ.
 
ಗರಿ,  ನಾದಲೀಲೆ, ಸಖೀಗೀತ, ಉಯ್ಯಾಲೆ, ಹೃದಯ ಸಮುದ್ರ, ಮರಣ ಮೃದಂಗ,  ಸಾಹಿತ್ಯದ ವಿರಾಟ್ ಸ್ವರೂಪ  ಎಂಬಿತ್ಯಾದಿ  ರಸಪೂರ್ಣ  ಕಾವ್ಯವನ್ನು  ನೀಡಿರುವ  ಬೇಂದ್ರೆಯವರು  ’ ಜಾತ್ರೆ’ ಎಂಬ ನಾಟಕವನ್ನೂ  ಬರೆದಿದ್ದಾರೆ. ಇವರು  ರಚಿಸಿದ  ’ನಾಕುತಂತಿ’  ಕೃತಿಗೆ  ಪ್ರತಿಷ್ಠಿತ  ಜಾನಪೀಠ ಪುರಸ್ಕಾರ ಲಭಿಸಿದ್ದು, ಉಳಿದಂತೆ  ಇವರು  ಕೇಂದ್ರ  ಸಾಹಿತ್ಯ  ಅಕಾಡೆಮಿ,  ರಾಜ್ಯ ಸಾಹಿತ್ಯ ಅಕಾಡೆಮಿ,  ಪಂಪಪ್ರಶಸ್ತಿ  ಸೇರಿದಂತೆ  ಅನೇಕ  ಪ್ರಶಸ್ತಿಗಳನ್ನು  ತಮ್ಮ  ಜೋಳಿಗೆಗೆ ತುಂಬಿಕೊಂಡಿದ್ದಾರೆ. ತಮ್ಮ  ಭಾಷೆಗಳಲ್ಲಿದ್ದಂತಹ  ವೈವಿಧ್ಯತೆ,  ತಮ್ಮ  ಕಾವ್ಯದ  ವಸ್ತುವಿನಲ್ಲಿದ್ದಂತಹ ನವೀನತೆ  ಇವರು  ಜೀವಂತಕವಿಯಾಗಿ  ನಿಲ್ಲಲು  ದಾರಿ  ಮಾಡಿಕೊಟ್ಟಿತು.  ಹಾಗೆಯೇ  ಅನೇಕ ಯುವಕವಿಗಳು  ಇವರ  ಜಾಡನ್ನು  ಅನುಸರಿಸಲೂ  ಕಾರಣವಾಯಿತು. ಇಂತಹ  ಮಹತ್ವಪೂರ್ಣ ಕಾವ್ಯಸಂಪತ್ತನ್ನು  ನಮಗಾಗಿ  ನೀಡಿದ  ಬೇಂದ್ರೆಯವರ  ’ಮೂಡಲ ಮನೆಯ ಮುತ್ತಿನ ನೀರಿನ’ ಗೀತೆಯು  ಪುಟ್ಟಣ್ಣಕಣಗಾಲ್  ನಿರ್ದೇಶನದ 'ಬೆಳ್ಳಿಮೋಡ' ಚಿತ್ರದಲ್ಲಿ  ಚಿತ್ರಗೀತೆಯಾಗಿ  ದೃಶ್ಯರೂಪ ಕಂಡಿರುವುದೂ  ಎಲ್ಲರಿಗೂ  ಆನಂದ  ತರದೆ  ಇರುವುದೇ ?  ಜೊತೆಗೆ  ವಿಜಯಭಾಸ್ಕರ  ಅವರ ಸಂಗೀತ,  ಎಸ್.ಜಾನಕಿಯವರ  ಗಾಯನವು  ಗೀತೆಗೆ ಮತ್ತಷ್ಟು ಮೆರುಗು ನೀಡಿದೆ.
ರೇಖಾಚಿತ್ರ:ಉಪೇಂದ್ರಪ್ರಭು

'ಕಾದಂಬರಿಪ್ರಿಯ ಪುಟ್ಟಣ್ಣ'
 
ಕನ್ನಡ  ಚಿತ್ರರಂಗದ  ಮೇರು  ನಿರ್ದೇಶಕ  ಎಸ್.ಆರ್.ಪುಟ್ಟಣ್ಣಕಣಗಾಲರು  ತಮ್ಮ  ಚಿತ್ರಗಳಲ್ಲಿ  ಸ್ತ್ರೀ ಸಮಾಜದ  ಕುರಿತು  ಹೇಳುತ್ತಾ  ಬಂದವರು.  ಸ್ತ್ರೀ ಸಂವೇದನೆಗಳನ್ನು ಸಮರ್ಥವಾಗಿ ಬಿಂಬಿಸಿದವರು. ಕಾದಂಬರಿಗಳನ್ನು  ಆಧರಿಸಿ  ಚಿತ್ರಗಳನ್ನು  ಮಾಡುವುದೆಂದರೆ  ಅವರಿಗೆ  ಏನೋ ಒಂಥರ  ಪ್ರೀತಿ,  ಜೊತೆಗೆ  ಕಾದಂಬರಿಗಳಲ್ಲಿನ  ಪ್ರಭಾವಿ ಕಥಾವಸ್ತುವಿನ  ಮೇಲಿನ  ಭರವಸೆಯೂ ಇರಬಹುದು. ಖ್ಯಾತ  ಕಾದಂಬರಿ  ಕರ್ತೃ  ’ತ್ರಿವೇಣಿ’  ಅವರ  ಕಾದಂಬರಿಯನ್ನಾಧರಿಸಿ  ೧೯೬೬ ರಲ್ಲಿ ಬೆಳ್ಳಿಮೋಡ  ಚಿತ್ರವನ್ನು  ನಿರ್ದೇಶಿಸಿದರು.  ಆ ಚಿತ್ರವನ್ನು  ನೋಡಿ  ಮೆಚ್ಚಿಕೊಳ್ಳದ  ಕನ್ನಡಿಗ ಅಕ್ಷರಷಃ  ಇರಲಾರ.  ಮಿನುಗುತಾರೆ  ಕಲ್ಪನ,  ಕಲ್ಯಾಣ ಕುಮಾರ್,  ಕೆ.ಎಸ್.ಅಶ್ವಥ್,  ಪಂಡರಿ ಬಾಯಿ  ಅವರ ಅಭಿನಯ ಎಂಥವರನ್ನು  ಮೋಡಿ  ಮಾಡಬಲ್ಲದು. ಬೆಳ್ಳಿಮೋಡದ  ಪ್ರಭಾವ  ಎಷ್ಟಿತ್ತೆಂದರೆ,  ನಟಿ  ಕಲ್ಪನ  ಬೆಂಗಳೂರಿನ ತಮ್ಮ  ಸ್ವಂತಮನೆಗೂ 'ಬೆಳ್ಳಿಮೋಡ' ಎಂದು ಹೆಸರು ಇಟ್ಟಿದ್ದರು.
 
ಮುಂಜಾವಿನ  ಸೂರ್ಯೋದಯದ  ಸಮಯದಲ್ಲಿ  ಪ್ರಕೃತಿಯನ್ನು  ಕಂಡು  ಆರಾಧಿಸುವ  ಸನ್ನಿವೇಶ ಚಿತ್ರದಲ್ಲಿ  ಇದ್ದಾಗ  ಅದೆಲ್ಲವನ್ನು  ಇಡಿಯಾಗಿ  ಹೇಳಬಲ್ಲ,  ಪೂರೈಸಬಲ್ಲ  ಗೀತೆಯೊಂದರ  ಅವಶ್ಯಕತೆ  ಇರುತ್ತದೆ.  ಆಗ,  ಮೊದಲಿನಿಂದಲೂ  ಸಾಹಿತ್ಯಾಸಕ್ತಿ  ಇದ್ದಂತಹ  ಪುಟ್ಟಣ್ಣನವರು ಬೇಂದ್ರೆಯವರ 'ಮೂಡಲ  ಮನೆಯ  ಮುತ್ತಿನ  ನೀರಿನ  ಎರಕಾವ  ಹೊಯ್ದಾ……' ಭಾವಗೀತೆಯನ್ನು  ಚಿತ್ರಗೀತೆಯನ್ನಾಗಿ  ಬಳಸಿಕೊಂಡರು. ಆ ಗೀತೆ ಎಷ್ಟು  ಜನಪ್ರಿಯವಾಯಿತೆಂದರೆ, ಶಾಲಾಮಕ್ಕಳು  ತಮ್ಮ  ಪಠ್ಯಪುಸ್ತಕದಲ್ಲಿದ್ದ  ’ಮೂಡಲ ಮನೆಯ’ ಪದ್ಯವನ್ನು  ವಿಜಯಭಾಸ್ಕರ್  ಸಂಯೋಜಿಸಿದ್ದ  ರಾಗದಲ್ಲಿಯೇ  ಹಾಡಲು  ಶುರುಮಾಡಿಕೊಂಡಿದ್ದರಂತೆ.  ಮನೋಜ್ಞವಾಗಿ  ಹಾಡಿ ಆರಾಧಿಸಿದ್ದ  ಜಾನಕಿಯವರ  ಧ್ವನಿಯನ್ನೇ ಅನುಕರಿಸಲಾರಂಭಿಸಿದರಂತೆ.  ಅಷ್ಟೇ  ಅಲ್ಲ, ಭಾವಗೀತೆಗಳ  ಗಾಯನಸ್ಪರ್ಧೆಯಲ್ಲಿಯೂ  ಸಹ  ಅದೇ ರೀತಿ  ಆಗುತ್ತಿತ್ತಂತೆ !  ಒಂದು  ಗೀತೆಯ  ಜನಪ್ರಿಯತೆ  ಎಷ್ಟು  ಪ್ರಮಾಣದಲ್ಲಿರುತ್ತದೆ ಅಂತ ಲೆಕ್ಕ ಹಾಕಿಕೊಳ್ಳಿ.  ಇಂತಹ  ಅದ್ಬುತಗೀತೆಯನ್ನು  ಬರೆದ  ದ.ರಾ.ಬೇಂದ್ರೆಯವರಿಗೆ  ಕೃತಜ್ಞತೆ ಸಲ್ಲಿಸಲೇಬೇಕು  ಅಲ್ಲವೇ ?
 
'ಮೂಡಲಮನೆಯಲ್ಲಿ  ಕಾವ್ಯದ  ಎರಕ'
 
ಆಗ  ತಾನೆ  ಸೂರ್ಯ  ಹುಟ್ಟಿ  ಪೂರ್ವದಲ್ಲಿ  ಬರುವಾಗ  ಪ್ರಕೃತಿಯ  ಮೈಮೇಲೆ  ಬಂಗಾರ  ಕಿರಣಗಳ ಸಿಂಚನಗೈಯುವಾಗ  ಕವಿಯೊಬ್ಬನ   ಎದೆಯಲ್ಲಿ  ಕಾವ್ಯ ಸಂಭ್ರಮ. ಅದರಲ್ಲೂ  ಬೇಂದ್ರೆಯಂತಹ ಭಾವಜೀವಿಯ  ಅಂತರಾಳದಲ್ಲಿ  ಪದಕಾಳಗ  ಶುರುವಾಗದೆ ಇರುತ್ತದೆಯೇ?  ಕವಿಯೊಬ್ಬನ  ಕಣ್ಣು ತೀಕ್ಷ್ಣ  ಹಾಗೆಯೇ  ಹೃದಯ  ಸೂಕ್ಷ್ಮ.  ತೀಕ್ಷ್ಣವಾದ  ನೋಟ ಗ್ರಹಿಸಿದ್ದನ್ನು  ಹೃದಯ ಸೂಕ್ಷ್ಮವಾಗಿ ಆಹ್ಲಾದಿಸಿ  ಭಾವತೀವ್ರತೆಗೊಳಗಾಗಿ  ಹೊಸದೊಂದು  ಕಾವ್ಯ  ರೂಪುಗೊಳ್ಳಲು  ಕಾರಣವಾಗುತ್ತದೆ. ಮನಸು  ಬೆತ್ತಲಾಗುತ್ತಿದ್ದಂತೆಯೇ  ಹಾಳೆಯ  ಮೇಲೊಂದು  ಅಕ್ಷರಗಳ  ಬೆಳಕು  ಹರಿದಾಡಿ  ಕತ್ತಲು ಕಣ್ಮರೆಯಾಗುತ್ತದೆ.
 
ನಿಜವಾಗಿಯೂ  ಕಾವ್ಯವೆನ್ನುವುದು  ಬೆಳಕು.  ಆ ಬೆಳಕಿನ  ಮೂಲಕ  ಕವಿ  ತನ್ನೊಳಗನ್ನು ಪ್ರದರ್ಶಿಸುವ  ಯತ್ನದಲ್ಲಿ  ಸದಾ  ಸಾಗುತ್ತಿರುತ್ತಾನೆ. ಆಂತರಿಕ,  ಬಾಹ್ಯ  ಯಾವುದೇ ಆಗಿರಲಿ ಸೌಂದರ್ಯ  ಸೌಂದರ್ಯವೇ  ಆಗಿರುತ್ತದೆ.  ನೋಡುವ ಕಣ್ಣಿರಬೇಕು ಮುಖ್ಯವಾಗಿ.  ತನ್ನೊಳಗಿನ ಆತ್ಮಸೌಂದರ್ಯವನ್ನು  ಹಾಡಿಕೊಳ್ಳುವಾಗ,  ಬರೆಯುವಾಗ,  ಓದಿಕೊಳ್ಳುವಾಗ  ಅದು ಆಂತರಿಕ ಸೌಂದರ್ಯವಾದರೆ,  ತನ್ನೆದುರಿಗಿನ, ತನ್ನ  ಸುತ್ತಮುತ್ತಲಿನ  ಪ್ರಕೃತಿಯ  ಗಿಡ,  ಮರ,  ಗಾಳಿ, ನೀರು, ಮೋಡ, ಹೂವು,  ಬಾನು,  ಚಂದ್ರ,  ಋತು,  ಹುಣ್ಣಿಮೆ,  ಬಿಸಿಲು,  ಮಳೆ, ಕಲ್ಲು,  ಮಣ್ಣು ಇತ್ಯಾದಿಗಳನ್ನು  ಕಂಡಾಗ  ಅದೂ  ಸಹ ಕಾವ್ಯವಾಗುತ್ತದೆ.  ಅದು ಬಾಹ್ಯಸೌಂದರ್ಯ. ನನ್ನ ಲೆಕ್ಕದಲ್ಲಿ ಕಾವ್ಯವೆಂದರೆ, ನಮ್ಮೊಳಗಿನ  ಲೋಕವನ್ನು  ನಾವೇ  ನೋಡಿಕೊಳ್ಳುವುದರ  ಮೂಲಕ  ಮತ್ತೊಬ್ಬರ ಒಳಗಿನ  ಲೋಕವನ್ನು  ತಾನಿದ್ದಲ್ಲೇ  ಕಲ್ಪಿಸಿಕೊಳ್ಳುವ  ವಾಸ್ತವಿಕ ಸತ್ಯ  ಎಂದು.  ಕವಿಯೊಬ್ಬನ ಕಲ್ಪನೆ, ಇತರರಿಂದ  ದೊರಕುವ  ಸ್ಪಂದನೆ  – ಇವೆರಡನ್ನು  ತಾಳೆ  ನೋಡಿದಾಗ ಸಾಮೂಹಿಕವಾದ ಅಭಿಪ್ರಾಯ  ಹಾಗೂ  ಅಭಿವ್ಯಕ್ತಿ  ಕಂಡುಬರುತ್ತದೆ.
 
ಒಂದು  ವಸ್ತು  ಒಬ್ಬೊಬ್ಬರಿಗೆ  ಒಂದೊಂದು ರೀತಿ  ಕಾಣುತ್ತದೆ.  ಅದು  ಬೀರುವ ಪ್ರಭಾವವೂ ಒಂದೊಂದು ರೀತಿಯಾಗಿರುತ್ತದೆ. ಕವಿಗಳ  ವಿಷಯದಲ್ಲೂ  ಅಷ್ಟೆ !.  ಶುಭ್ರಮುಂಜಾವಿನ ಸೌಂದರ್ಯವನ್ನು  ಕವಿ ಬೇಂದ್ರೆ  ತಮ್ಮದೇ  ಆದ  ವಿನೂತನ  ಕೋನದಿಂದ  ’ಮೂಡಲ ಮನೆಯ’ ಗೀತೆಯನ್ನು  ಚಿತ್ರಿಸಿದ್ದಾರೆ. ’ಮೂಡಲ ಮನೆಯ  ಮುತ್ತಿನ  ನೀರಿನ  ಎರಕವ ಹೊಯ್ದಾ’  ಎಂದು ಆರಂಭವಾಗುವ  ಗೀತೆಗೊಂದು  ಲಯವಿದೆ, ಆತ್ಮೀಯತೆಯಿದೆ.  'ಬಾಗಿಲ  ತೆರೆದು  ಬೆಳಕು ಹರಿದು ಜಗವೆಲ್ಲ  ತೋಯ್ದಾ  ದೇವನು' ಎನ್ನುವ  ಮೂಲಕ  'ಮುತ್ತಿನ  ನೀರಿನ  ಎರಕವ ಹೊಯ್ದಾ' ಎಂಬ ಮಾತನ್ನು  ಮುಂದುವರೆಸುತ್ತಾರೆ. 'ನುಣ್ಣನೆಯ ಎರಕವಾ  ಹೊಯ್ದಾ' ಎಂದು ಹೇಳುವ  ಮುಖಾಂತರ ಕವಿ  ತನಗಿರುವ  ಮಗುವಿನಂತಹ  ಮನಸಿನ  ಮೃದುಲತೆಯನ್ನು ವ್ಯಕ್ತಪಡಿಸುತ್ತಾರೆ.
 
'ಎಲೆಗಳ  ಮೇಲೆ  ಹೂಗಳ  ಒಳಗೆ  ಅಮೃತದಾ  ಬಿಂದು  ಕಂಡವು  ಅಮೃತದಾ  ಬಿಂದು’  ಎಂಬ ಸಾಲು  ಎಷ್ಟು  ಆಪ್ತವಾಗಿದೆ  ನೋಡಿ.  ಸೂರ್ಯನ  ಕಿರಣ  ತಾಕಿದಾಗ  ರತ್ನಗಳಂತೆ  ಮಿಂಚುವ ಎಲೆಯ  ಮೇಲಿನ  ಹನಿಗಳನ್ನೂ  ಕೋಮಲ  ಹೂವಿನ  ಎದೆಯಾಳದಲ್ಲಿ  ಪ್ರಕೃತಿಯ  ಜೋಜೋ ಲಾಲಿ  ಕೇಳುತ್ತ  ಮೌನವಾಗಿ  ಮಲಗಿರುವ  ಮಕರಂದವನ್ನು- ಅಮೃತದಬಿಂದುವಿಗೆ  ಹೋಲಿಸುತ್ತಾರೆ.  ದುಂಬಿಗಳ  ಕಂಠದಲ್ಲಿ  ಗುಂಯ್‌ಗುಡುವ  ಗಾನವು  ಸದಾ ಜೀವಂತವಾಗಿಬೇಕಾದರೆ  ಆ  ಮಕರಂದವೇ  ಅಮೃತದಬಿಂದು  ಎಂದು  ಈ  ಸಾಲು  ಅರ್ಥ ಕಟ್ಟಿಕೊಡುತ್ತದೆ.  'ಯಾರಿರಿಸಿಹರು  ಮುಗಿಲಿನ  ಮೇಲಿಂದ  ಇಲ್ಲಿಗೆ  ಇದ  ತಂದು  ಈಗ ಇಲ್ಲಿಗೆ ಇದ ತಂದು?" ಎಂದು  ಪ್ರಶ್ನಿಸುವ  ಮೂಲಕ  ಸೃಷ್ಠಿಯ  ವಿಸ್ಮಯಗಳ  ಲೀಲೆಯನ್ನು  ಕಂಡು  ಬೆರಗಾದ ಕವಿ  ತನ್ನ  ಭಾವುಕತೆಯನ್ನು  ತೋರ್ಪಡಿಸುತ್ತಾರೆ.  ಬೆಳಗಿನ  ಹೊತ್ತು  ಹಕ್ಕಿಗಳ  ಚಿಲಿಪಿಲಿನಾದ ಸಹಜವಾಗಿ  ಪ್ರಕೃತಿದತ್ತವಾಗಿ  ಮೂಡಿಬರುತ್ತದೆ.  ಆದರೆ  ಇಲ್ಲಿ  ಕವಿ  ಬೇಂದ್ರೆಯವರ  ಸೂಕ್ಷ್ಮನೋಟ ಹೇಗಿದೆ  ನೋಡಿ;  'ಗಿಡಗಂಟೆಗಳ  ಕೊರಳೊಳಗಿಂದ ಹಕ್ಕಿಗಳಾ ಹಾಡು ಹೊರಟಿತು ಹಕ್ಕಿಗಳಾ ಹಾಡು !' ಹಕ್ಕಿ  ತನ್ನ  ಕೊರಳಿಂದ  ಹಾಡುವ  ಬದಲಾಗಿ,  ಗಿಡಗಂಟೆಗಳ  ಕೊರಳೊಳಗಿಂದ  ಗಾನ  ಹರಿದು ಬರುತ್ತಿದೆ  ಎಂದು  ಹೇಳುತ್ತಾರೆ ಅಬ್ಬಾ !  ಎಂತಹ  ಕಲ್ಪನೆಯಲ್ಲವೆ?
 
ಇಷ್ಟಕ್ಕೆ  ನಿಲ್ಲಿಸದೆ  ಮುಂದುವರಿಸುತ್ತಾ,  'ಗಂಧರ್ವರ  ಸೀಮೆಯಾಯಿತು  ಕಾಡಿನ ನಾಡೂ…  ಕ್ಷಣದೊಳು  ಕಾಡಿನಾ  ನಾಡೂ' ಎನ್ನುತ್ತಾರೆ. ನಿಜವಲ್ಲವೆ ?  ಇಷ್ಟೆಲ್ಲಾ  ರಸಪೂರ್ಣ  ಸೌಂದರ್ಯ ಅಡಕಗೊಂಡ  ಪ್ರಕೃತಿ ಗಂಧರ್ವಸೀಮೆಯಲ್ಲದೆ  ಮತ್ತೇನಾಗಬಲ್ಲದು? ಕವಿಯ  ಮಾತು  ನಿಜವಾಗಿಯೂ ನಿಜ.  ಬಾಗಿಲು  ತೆರೆದು  ಹರಿದ  ಬೆಳಕು  ಕೇವಲ  ಬೆಳಕು  ಮಾತ್ರವಲ್ಲ ಎಂದೂ ಛೇಡಿಸುತ್ತಾರೆ.  ಈ  ವಾಕ್ಯದ  ಒಳಗಿನ  ಸೂಕ್ಷ್ಮಪ್ರಜ್ಞೆ  ಕಾವ್ಯದ  ತೂಕವನ್ನು, ಓದುಗನೊಳಗೆ ಟಿಸಿಲೊಡೆಯಬಹುದಾದ ಸಂವೇದನೆಯನ್ನೂ ಕೌತುಕಗೊಳಿಸುತ್ತದೆ.  ಆ ಬಾಗಿಲು, ಜಗದ ಬಾಗಿಲಾಗಿರಬಹುದು,  ಮನೆಯ  ಬಾಗಿಲಾಗಿರಬಹುದು  ಅಥವಾ  ಮನಸ್ಸಿನ  ಬಾಗಿಲಾಗಿರಬಹುದು ! ಯಾವ  ಬಾಗಿಲಾಗಿದ್ದರೂ  ಬೆಳಕು  ಅತಿಮುಖ್ಯ-ವಲ್ಲವೆ?  ’ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈಹಿಡಿದು ನಡೆಸೆನ್ನನು’  ಎಂದು  ಬಿ.ಎಂ.ಶ್ರೀ  ಯಾಚಿಸಿದರೆ  ದ.ರಾ.ಬೇಂದ್ರೆಯವರ ಯಾಚನೆ  ಬೇರೆಯದೇ ಬಗೆಯದ್ದು.
 
ಹೀಗೆ, ತನ್ನದೇ  ವಿನೂತನ  ದೃಷ್ಟಿಕೋನ,  ನವನವೀನ  ಭಾವನೆಗಳ  ಮೂಲಕ  ಕಾವ್ಯರಸಿಕರ ಆಂತರ್ಯದ  ಸಿಂಹಾಸನದಲ್ಲಿ  ಸದಾ  ರಾರಾಜಿಸುತ್ತಿರುವ  ಬೇಂದ್ರೆ,  ಬೇಂದ್ರೆಗೆ  ಮಾತ್ರ ಸರಿಸಮಾನರು.ಇವರಿಗಿದ್ದ  ಜೀವನ  ಪ್ರೀತಿ  ದೊಡ್ಡದು, ಪ್ರಬುದ್ಧತೆಗೆ  ಹಿಡಿದ ಕನ್ನಡಿ ಇವರು. ಕಾವ್ಯಕುಸುರಿ  ನಾವಾಗಿ  ಮಾಡುವುದಲ್ಲ  ಅದರ  ಪಾಡಿಗೆ  ಅದೇ  ಅರಳಬೇಕು  ಎಂಬ  ಸತ್ಯವನ್ನು ಬೆತ್ತಲು  ಮಾಡಿದ ಆದರ್ಶ ಕಬ್ಬಿಗ  ನಮ್ಮ  ಪ್ರೀತಿಯ  ಸರಳ,  ಸಜ್ಜನ  ಬೇಂದ್ರೆ ತಾತ !

'ಮೂಡಲ ಮನೆಗೊಂದು ಹೆಜ್ಜೆ'
 
ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದಾ ನುಣ್ಣನೆ ಎರಕವಾ ಹೋಯ್ದಾ
 
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದಾ ದೇವನು ಜಗವೆಲ್ಲಾ ತೋಯ್ದಾ
 
ಎಲೆಗಳ ಮೇಲೆ ಹೂಗಳ ಒಳಗೆ
ಅಮೃತದಾ ಬಿಂದು ಕಂಡವು ಅಮೃತದಾ ಬಿಂದು
 
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು ಈಗ ಇಲ್ಲಿಗೆ ಇದ ತಂದು
 
ಗಿಡಗಂಟೆಗಳ ಕೊರಳೊಳಗಿಂದ
ಹಕ್ಕಿಗಳಾ ಹಾಡು ಹೊರಟಿತು ಹಕ್ಕಿಗಳಾ ಹಾಡು
 
ಗಂಧರ್ವರ ಸೀಮೆಯಾಯಿತು
ಕಾಡಿನಾ ನಾಡೂ ಕ್ಷಣದೊಳು ಕಾಡಿನಾ ನಾಡೂ
 
ರಚನೆ: ದ.ರಾ.ಬೇಂದ್ರೆ

(ರೇಖಾಚಿತ್ರ:ಉಪೇಂದ್ರಪ್ರಭು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Utham Danihalli
10 years ago

Shivanna nimma lekana estavaythu
Nanage bendreyavara bavageethegallu esta mathe namage 9ne tharagatheeyali mudala maneya padyavithu edanu namma gurugalu cinemada ragadaliye hadi vivarisidaru

sharada.m
sharada.m
10 years ago

 
ನಿಜವಾಗಿಯೂ  ಕಾವ್ಯವೆನ್ನುವುದು  ಬೆಳಕು.  ಆ ಬೆಳಕಿನ  ಮೂಲಕ  ಕವಿ  ತನ್ನೊಳಗನ್ನು ಪ್ರದರ್ಶಿಸುವ  ಯತ್ನದಲ್ಲಿ  ಸದಾ  ಸಾಗುತ್ತಿರುತ್ತಾನೆ. ಆಂತರಿಕ,  ಬಾಹ್ಯ  ಯಾವುದೇ ಆಗಿರಲಿ ಸೌಂದರ್ಯ  ಸೌಂದರ್ಯವೇ  ಆಗಿರುತ್ತದೆ..
 ಕವಿಯೊಬ್ಬನ ಕಲ್ಪನೆ, ಇತರರಿಂದ  ದೊರಕುವ  ಸ್ಪಂದನೆ  – ಇವೆರಡನ್ನು  ತಾಳೆ  ನೋಡಿದಾಗ ಸಾಮೂಹಿಕವಾದ ಅಭಿಪ್ರಾಯ  ಹಾಗೂ  ಅಭಿವ್ಯಕ್ತಿ  ಕಂಡುಬರುತ್ತದೆ.

ನಿಜವಾದ  ಮಾತು..ಹೃದಯ ಶಿವಾ ಜಿ
ಬೇಂದ್ರೆಯವರ ಬಗ್ಗೆ  ಲೇಖನ  ಓದಿಸಿಕಂಡೊಯ್ಯವ  ಶೈಲಿ  ಇಷ್ಟವಾಯ್ತು..

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಸುಂದರವಾದ ಭಾವಗೀತೆಯ ವಿಶ್ಲೇಷಣೆಯೊಂದಿಗೆ ಕವಿ ಹೃದಯವ ತೆರೆದಿಡುವ ಲೇಖನ ವಿಶಿಷ್ಟವಾಗಿದ್ದು ಆಪ್ತವೆನಿಸಿತು. ಧನ್ಯವಾದಗಳು   

ಹೃದಯಶಿವ
ಹೃದಯಶಿವ
10 years ago

ನಿಮ್ಮ ಓದಿಗೆ ನಾ ಕೃತಜ್ಞ …

ಗುಂಡೇನಟ್ಟಿ ಮಧುಕರ
ಗುಂಡೇನಟ್ಟಿ ಮಧುಕರ
10 years ago

ಲೇಖನ ಚನ್ನಾಗಿ ಮೂಡಿ ಬಂದಿದೆ.  ಬೇಂದ್ರೆ ಬಗ್ಗೆ  ಎಷ್ಟು ಬರೆದರೂ, ಮಾತನಾಡಿದರೂ, ಓದಿದರೂ ಕಡಿಮೆಯೇ. ಬೇಂದ್ರೆ ಸಾಹಿತ್ಯ ಕರಗಲಾರದ ಅಕ್ಷಯ.  ಬೇಂದ್ರೆಗೆ  ಬೇಂದ್ರೆಯೇ ಸಾಟಿ. ಲೇಖಕರಿಗೆ ಧನ್ಯವಾದಗಳು.

-ಗುಂಡೇನಟ್ಟಿ ಮಧುಕರ, ಬೆಳಗಾವಿ.

ಗುಂಡೇನಟ್ಟಿ ಮಧುಕರ
ಗುಂಡೇನಟ್ಟಿ ಮಧುಕರ
10 years ago

ಲೇಖನ ಚನ್ನಾಗಿ ಮೂಡಿ ಬಂದಿದೆ.  ಬೇಂದ್ರೆ ಬಗ್ಗೆ  ಎಷ್ಟು ಬರೆದರೂ, ಮಾತನಾಡಿದರೂ, ಓದಿದರೂ ಕಡಿಮೆಯೇ. ಬೇಂದ್ರೆ ಸಾಹಿತ್ಯ ಕರಗಲಾರದ ಅಕ್ಷಯ.  ಬೇಂದ್ರೆಗೆ  ಬೇಂದ್ರೆಯೇ ಸಾಟಿ. ಲೇಖಕರಿಗೆ ಧನ್ಯವಾದಗಳು.
ಗುಂಡೇನಟ್ಟಿ ಮಧುಕರ, ಬೆಳಗಾವಿ.
ಮೊ:9448093589

6
0
Would love your thoughts, please comment.x
()
x