ಉಪನ್ಯಾಸಕರ ಅಮೂಲ್ಯ ಸಸ್ಯ ಸಂಪತ್ತ ವನ: ಹನಿಯೂರು ಚಂದ್ರೇಗೌಡ

ನಮ್ಮ ನಡುವೆ ಎರಡು ಮಾದರಿಯ ಜನರಿರುತ್ತಾರೆ; ಒಂದು ಮಾದರಿ, ಕೆಲಸ ಮಾಡುವುದರ ಬದಲು ಕೇವಲ ಉಪದೇಶಿಸುವವರು;  ಮತ್ತಿನ್ನೊಂದು ಮಾದರಿ, ಉಪದೇಶಿಸುವುದಷ್ಟೇ ಅಲ್ಲ ಆ ಕೆಲಸವನ್ನು ಸ್ವತಃ ಮಾಡಿ ತೋರಿಸುವವರು. ಮೊದಲನೆ ಸಾಲಿನಲ್ಲಿ ನಿಲ್ಲಬಲ್ಲವರು ಅನೇಕರು ಅನಾಯಾಸವಾಗಿ ನಮಗೆ ದೊರಕುತ್ತಾರೆ. ಆದರೆ, ಎರಡನೆಯ ಮಾದರಿಯ ಜನರು ಸಿಗುವುದು ಬಹಳ ವಿರಳವೇ. 

ಅಂಥ ವಿರಳಾತಿ ವಿರಳ ವ್ಯಕ್ತಿಗಳಲ್ಲಿ ರಾಮನಗರ ಜಿಲ್ಲೆ, ಗೊಂಬೆನಗರ ಚನ್ನಪಟ್ಟಣ ತಾಲೂಕಿನ ಎಲೆಭೂಹಳ್ಳಿಯ, ವೃತ್ತಿಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಭೂಹಳ್ಳಿ ಪುಟ್ಟಸ್ವಾಮಿ ಒಬ್ಬರು. 

ಇವರು ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ಉತ್ತಮ ವಾಗ್ಮಿಯೂ ಹೌದು. ಇಲ್ಲಿ ಇವರು ಕೇವಲ ಇಷ್ಟೇ ಆಗಿದ್ದರೆ, ಇವರ ಕುರಿತು ಬರೆಯುವುದೇನಿರಲಿಲ್ಲ. ಹಾಗಾದರೆ, ಅಂಥದ್ದೇನಪ್ಪಾ ಇವರದು ವಿಶೇಷತೆ ಅಂತೀರಾ..? ಸರಿ, ಇಲ್ಲಿ ಭೂಹಳ್ಳಿ ಪುಟ್ಟಸ್ವಾಮಿ ಅವರದು ಎಲ್ಲರಂತೆ ಕೇವಲ ಉಪದೇಶಿಸುವ, ಬೋಧಿಸುವ ಮನೋಧರ್ಮವಲ್ಲ. ಬದಲಿಗೆ ಇವರದು ಇತರರಿಗೆ ಹೇಳುವ ಮುನ್ನ ಅದನ್ನು ಮಾಡಿ, ಸಾಧಿಸಿ, ತೋರಿಸುವ ಕ್ರಿಯಾಶೀಲ ಮನೋಧರ್ಮ. ಅಂಥದ್ದೇನನ್ನು ಇವರು ಮಾಡಿದ್ದಾರೆ ಎಂಬುದರ ಕುರಿತು ತಿಳಿಯುವ ಕುತೂಹಲ ನಿಮ್ಮದಾದರೆ, ಬನ್ನಿ, ಅವರದೇ ಶ್ರಮದಿಂದ ದಟ್ಟಾರಣ್ಯದಂತೆ ಹಸಿರಿನಿಂದ ನಳನಳಿಸುತ್ತಾ, ಪ್ರಕೃತಿಪ್ರಿಯರ ಮನಸೂರೆಗೊಳ್ಳುತ್ತಾ, ತನ್ನೊಡಲೊಳಗೆ ಬರುವಂತೆ ಕೈಚಾಚಿದಂತೆ ತೋರುವ ಈ “ಕವಿವನ” ದೊಳಗೊಂದು ತಾಜಾ ಹಸಿರುಸಿರನ್ನು ಪಡೆದು ಬರೋಣ…….

ಕವಿವನದ ವೈಶಿಷ್ಟ್ಯವೇನು…?:  

ಪುಟ್ಟಸ್ವಾಮಿ ತಮ್ಮ ಊರಾದ ಭೂಹಳ್ಳಿಯಲ್ಲಿ ಒಂದೂವರೆ ಎಕರೆ ಗೋಮಾಳ ಪಾಳುಬಿದ್ದಿತ್ತು. ಇದನ್ನು ಕಂಡ, ಇವರು ಈ ಗೋಮಾಳವನ್ನು ಒಂದು ಸುಂದರ ತಾಣವಾಗಿ ಮಾಡುವ ಬಗ್ಗೆ ಮನದಲ್ಲೇ ಚಿಂತಿಸಿದರು. ಈ ಚಿಂತನೆಯ ಪರಿಣಾಮವಾಗಿ, ಆ ಭೂಮಿಯನ್ನು ಕೂಲಿಕೊಟ್ಟು ಅಗೆಸಿದರು. ಅದಾಗ ತಾನೆ ಮಳೆಗಾಲವಾಗಿದ್ದರಿಂದ ಅರಣ್ಯ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೆಲವು ಹಣ್ಣಿನ ಸಸಿ, ನೆರಳು ನೀಡುವ ಆಲ, ಅರಳಿ, ಬೇವು, ಹೊಂಗೆ ಮತ್ತಿತರೆ ಮರಗಳನ್ನು ತಂದು ನೆಟ್ಟರು. ಅವಲ್ಲದೆ ದಟ್ಟವಾಗಿ ಬೆಳೆಯುವ ಬಿದಿರು, ಗೊಬ್ಬಳಿ, ಚುಜ್ಜಲಿ, ಸೀಗೆ ಮರಗಳ ಸಸಿಗಳನ್ನು ನೆಡಿಸಿದರು. ಜೊತೆಗೆ ಹಕ್ಕಿ-ಪಕ್ಷಿಗಳಿಗೆ ಹಣ್ಣು ಕೊಡುವ ಅತ್ತಿ, ನೇರಳೆ, ಗಸಗಸೆ,ಸಪೋಟ, ಸೀಬೆ, ಅರಳಿ,  ಮುಂತಾದ ಹಣ್ಣಿನ ಮರ-ಗಿಡಗಳನ್ನು ನೆಟ್ಟರು. ಅಲ್ಲದೆ, ಇವರು ಹೋದ-ಬಂದ ಕಡೆಯಿಂದಲೂ ಸವಿನೆನಪಿಗಾಗಿ ವಿವಿಧ ಸಸಿಗಳನ್ನು ತಂದು ಆ ವನದ ಮಡಿಲಿಗೆ ಹಾಕಿದರು. 

ಹೀಗೆ ನೆಟ್ಟ ಗಿಡ-ಮರಗಳ ಸಂಖ್ಯೆ ಇದೀಗ ಬರೋಬ್ಬರಿ 150 ಕ್ಕೂ ಹೆಚ್ಚಿದ್ದು, ಕರಾರವಾಕ್ ಲೆಕ್ಕ ಸಿಗುತ್ತಿಲ್ಲ. ಅಷ್ಟು ದಟ್ಟವಾಗಿದೆ ವನ!. ಅಲ್ಲದೆ ಈ ಎಲ್ಲಾ ಗಿಡ-ಮರಗಳು ಈಗ ಸೊಂಪಾಗಿ ಬೆಳೆದು, ನಿಂತಿದ್ದು ಒಣಗಿ-ವಾಟಕರಿಯಾಗಿ ನಿಂತಿದ್ದ ಗೋಮಾಳದ “ಕುರುಹೇ” ಈಗಿಲ್ಲವಾಗಿದೆ. ಬದಲಿಗೆ ಹಚ್ಚಹಸಿರಿನಿಂದ ಕಂಗೊಳಿಸುತ್ತಾ ಎಲ್ಲರನ್ನೂ ಕೈಬೀಸಿ ಕರೆಯುತ್ತಿತ್ತು.

ಅಲ್ಲಿನ ಮರಗಳು,ತರಗೆಲೆಗಳು ಅಲ್ಲೇ ಮಣ್ಣಾಗುತ್ತವೆ:  

ಈ ವನದಲ್ಲಿರುವ ಮರ-ಗಿಡ-ಗಂಟಿಗಳು ಬಿದ್ದುಹೋಗಿ, ಅಲ್ಲೇ ಮಣ್ಣಾದರೂ ಸರಿಯೇ ಅಲ್ಲಿಂದ ಯಾರೂ ಅವನ್ನು ಕೊಂಡೊಯ್ಯುವಂತಿಲ್ಲ. ಇದು ವನದ ರೂವಾರಿ ಅವರ ಪುಟ್ಟಸ್ವಾಮಿ ಅವರ ಯೋಜನೆ. 

“ಅದೇಕೆ?…” ಎಂಬ ನನ್ನ ಪ್ರಶ್ನೆಗೆ,  ಅವರು ನೀಡುವ ಉತ್ತರ ವಿಸ್ಮಯ ಮತ್ತು ಮಾದರಿಯೆನಿಸುತ್ತದೆ, “ಇಲ್ಲಿಯೇ ಬೆಳೆದು ವಯಸ್ಸಾದ, ಮಳೆ-ಗಾಳಿಗೆ ಬಿದ್ದುಹೋದ ಮರಗಳನ್ನು ಇಲ್ಲಿಂದ ಯಾರೂ ಉರುವಲಿಗೆ ಕೊಂಡೊಯ್ಯುವಂತಿಲ್ಲ. ಅಲ್ಲದೆ, ಇಲ್ಲಿ ಮರಗಳಿಂದ ಉದುರುವ ಎಲೆಗಳಿಗೆ ಬೆಂಕಿಹಚ್ಚುವುದಾಗಲಿ, ಹೊರಗಡೆ ಎಸೆಯುವುದಾಗಲಿ ಸಾಧ್ಯವಿಲ್ಲ. ಯಾಕೆಂದರೆ, ಅದು ಅಲ್ಲೇ ಕೊಳೆತು, ಗೊಬ್ಬರವಾಗಿ, ಇಲ್ಲಿನ ಮಿಕ್ಕ ಮರ-ಗಿಡಗಳಿಗೆ ಜೀವದ್ರವ್ಯವಾಗಬೇಕು. ಅಷ್ಟೆ ಅಲ್ಲದೆ, ಇಲ್ಲಿನ ತೇವಾಂಶ ಉಳಿದು ಬಹಳ ಕಾಲದವರೆಗೂ ಈ ವನದ ಸಸ್ಯಸಂಪತ್ತಿನ ಬೆಳವಣಿಗೆಗೆ ಸಹಾಯಕವಾಗುತ್ತದೆ.” ಎನ್ನುತ್ತಾರೆ ಅವರು. 

“ ಇದುವೆರೆಗೂ ಅವು ಮಕ್ಕಳು, ನಾನು ತಂದೆ; ಈಗ ಅವು ನನ್ನ ತಂದೆ, ನಾನು ಅವುಗಳ ರಕ್ಷಕ”

“ಅವನ್ನು ನೆಟ್ಟು ಪೋಷಿಸುವಾಗ ನಾನು ಅವುಗಳ ತಂದೆಯಾಗಿದ್ದೆ. ಆದರೀಗ ಅವು ನನ್ನ ಪಾಲಿಗೆ ತಂದೆಯಂತಾಗಿವೆ; ನಾನವುಗಳ ರಕ್ಷಕನಾಗಿದ್ದೇನೆ” ಎನ್ನುವ ಪುಟ್ಟಸ್ವಾಮಿ, ಒಬ್ಬ ನಿಜವಾದ “ಪ್ರಕೃತಿಪರ ಸಂತ”ನಂತೆ ಗೋಚರಿಸುತ್ತಾರೆ. ವನವನ್ನು ಮಕ್ಕಳಂತೆ ಪರಿಭಾವಿಸಿ,ಆರೈಕೆ ಮಾಡುತ್ತಾರೆ: ಹೆಂಡತಿ-ಮಕ್ಕಳಿದ್ದರೂ ಅವರಿಗಿಂತ ಈ ವನದಲ್ಲಿನ ಪ್ರತಿ ಸಸ್ಯಗಳನ್ನು ಬಹಳ ಆತ್ಮೀಯತೆಯಿಂದ ಅಪ್ಪಿ, ಮಕ್ಕಳನ್ನು ಮೈದಡವುವಂತೆ ಪ್ರೀತಿಸಿ, ಆರೈಕೆ ಮಾಡುತ್ತಾರೆ. “ಯಾರೂ ಇಲ್ಲದ ವೇಳೆಯಲ್ಲಿ ಇವರು ವನದಲ್ಲಿ ನಿಜವಾಗಿಯೂ “ಹುಚ್ಚರಂತೆ ಪ್ರತಿಸಸ್ಯಗಳ ಜೊತೆ ಮಾತಿಗಿಳಿದು ಬಿಡುತ್ತಾರೆ” ಎನ್ನುತ್ತಾರೆ, ಅವರ ಮಿತ್ರರೂ, ಅವರ ಈ  ಪರಿಸರ ಕಾಯಕದಲ್ಲಿ ನೆರಳಾಗಿ ನಿಂತಿರುವ ಭೂಹಳ್ಳಿಯ ರೈತ ಪಂಚೇಗೌಡರು.

ಇದು ಬರಿ ವನವಲ್ಲ- ಸಾಂಸ್ಕೃತಿಕ-ಆಧ್ಯಾತ್ಮಿಕ ಕೇಂದ್ರ: 

ಇದು ಕೇವಲ ವನವಲ್ಲ; ಇಲ್ಲಿ ಕಲೆಯ ಆರಾಧನೆ, ಪೋಷಣೆ, ಆಧ್ಯಾತ್ಮಿಕ ಚಿಂತನ-ಮಂಥನಕ್ಕೆ “ಗಾಯನಗಂಗೆ ಗಂಗೂಬಾಯಿ ಹಾನಗಲ್ ಸಂಗೀತ, ನೃತ್ಯ ತರಬೇತಿ ಕೇಂದ್ರ” ಎಂಬ ಕಲಾತರಬೇತಿ ಮಂಟಪವಿದೆ. ಪ್ರತಿವರುಷ ಇಲ್ಲಿ ಜಾನಪದ ಹಾಡುಗಾರರ, ಕಲಾವಿದರ ಸಂಗಮ, ಕಲೆಗಳ ಬಗೆಗೆ ಅವಲೋಕನ, ಸಂಸ್ಕೃತಿ ಚಿಂತನೆ, ಮಕ್ಕಳ ಕಲರವಕ್ಕೆ ದಾರಿಮಾಡಿಕೊಡುವ ಅನೇಕ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಎಲ್ಲಾ ಕಾರ್ಯಕ್ರಮಗಳ ಸಂಘಟಕರು ಭೂಹಳ್ಳಿ ಪುಟ್ಟಸ್ವಾಮಿ ಅವರೆ.

ಲಕ್ಷಾಂತರ ರೂಪಾಯಿ ವ್ಯಯ: ಬೇಸಿಗೆಕಾಲದಲ್ಲಿ ವನದ ಮರ-ಗಿಡಗಳಿಗೆ ನೀರು ಒದಗಿಸುವ ಸಲುವಾಗಿ 1.2 ಲಕ್ಷ ರೂಪಾಯಿಗಳನ್ನು ವ್ಯಯಿಸಿ, ತೊಟ್ಟಿಕಟ್ಟಿಸಿದ್ದಾರೆ. ಅಲ್ಲದೆ, ಮಳೆ ನೀರು ಇಂಗುವಂತೆ 6-7 ಇಂಗುಗುಂಡಿಗಳನ್ನು ತೆಗೆಸಿದ್ದಾರೆ. ಹೀಗಾಗಿ, ವನದೊಳಗೆ ಕಾಲಿಟ್ಟರೆ ಮಲೆನಾಡೊಳಗೆ ಪ್ರವೇಶಿಸಿದ ಅನುಭವಾಗುತ್ತದೆ. ಇಷ್ಟೆಲ್ಲವನ್ನು ಅವರು ಖರ್ಚುಮಾಡಿರುವುದು ಪರಿಸರದ ಮೇಲಿನ ಪ್ರೀತಿಯಿಂದಾಗಿಯೇ. 

ಇಲ್ಲಿ ಏನುಂಟು, ಏನಿಲ್ಲ??:  

ಈ ಕವಿವನದಲ್ಲಿ ವಿಶ್ವವಿದ್ಯಾಲಯದಲ್ಲಿ ಸಸ್ಯವಿಜ್ಞಾನ ಓದುವ ವಿದ್ಯಾರ್ಥಿಗಳು, ಸಂಶೋಧನೆ ನಡೆಸಲು ಬೇಕಿರುವ ಎಲ್ಲಾ ಜಾತಿಯ ಮರ,ಗಿಡ,ಸಸ್ಯಗಳಿವೆ. ಅಮೃತಬಳ್ಳಿ, ಕಾಡುತೊಂಡೆ, ಉಗ್ಗನಿ, ಧೂಪದಮರ, ಅಂಟುವಾಳದ ಮರ, ಹಿಪ್ಪೆಮರ, ಮೂಸಿಮರ, ತುಂಗೆ ಗಿಡ, ಹೊಂಗೆಮರ, ಮಾವಿನಮರ, ಬಸುರಿಮರ  ಸೇರಿದಂತೆ ಬಗೆಬಗೆಯ ನೂರಾರು ಸಸ್ಯಗಳನ್ನು ಹೊಂದಿದ “ಸಸ್ಯ ಸಂಜೀವಿನಿ” ಎನಿಸಿದೆ.

ಅಪಾಯದ ನಡುವೆಯೂ “ಕವಿವನ” ಉಳಿದಿದೆ:  

ಒಳ್ಳೆಯ ಕೆಲಸ ಮಾಡುವಾಗ ಅಡ್ಡಗಾಲು ಹಾಕುವವರು ಇದ್ದೇ ಇರುತ್ತಾರೆ. ಅದೇ ರೀತಿ ಪುಟ್ಟಸ್ವಾಮಿ ಅವರು ಈ ಗೋಮಾಳವನ್ನು “ವನ” ಮಾಡಲು ಹೊರಟಾಗ, ಅದರ ಪಕ್ಕದ ಜಮೀನಿನವರು ಜಗಳ, ತಗಾದೆ ತೆಗೆದರಂತೆ. ಕೆಲವರು ಒತ್ತುವರಿಗೂ ಮುಂದಾದರಂತೆ. ಆದರೆ, ಇದೆಲ್ಲಕ್ಕೂ ಬಗ್ಗದ ಪುಟ್ಟಸ್ವಾಮಿ, “ಒಳ್ಳೆಯ ಕೆಲಸಕ್ಕೆ ಹೆದರಿಕೆ ಏಕೆ?” ಎಂದು ಆ ಎಲ್ಲಾ ತೊಂದರೆಗಳನ್ನು ಜಾಣ್ಮೆಯಿಂದ ಎದುರಿಸಿ, “ಕವಿವನ”ದ ವೈಭವ-ಅಂದವನ್ನು ಹೆಚ್ಚಿಸಿ, ಅವರೊಬ್ಬ ಅನನ್ಯ ಪರಿಸರ ಪ್ರೇಮಿ, ಪರಿಸರವಾದಿ, ಪರಿಸರ ಸಂರಕ್ಷಕ ಎನಿಸಿದ್ದಾರೆ. ಅವರೀಗ ರಾಮನಗರ ಜಿಲ್ಲೆಯಾದ್ಯಂತ “ಕವಿವನ ಪುಟ್ಟಸ್ವಾಮಿ” ಎಂತಲೇ ಪರಿಚಿತರಾಗಿದ್ದಾರೆ. ಪರಿಸರದ ಉಳಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಪರಿಸ್ಥಿತಿಯಲ್ಲಿರುವ ಪ್ರಸ್ತುತ ಸಮಯದಲ್ಲಿ ಇಂಥವರ ಸಂಖ್ಯೆ ನೂರ್ಮಡಿಯಾಗಬೇಕಿದೆ. ಇವರ ಪರಿಸರ ಪ್ರೇಮ ಇತರರಲ್ಲೂ ಮೂಡಲಿ. ಆ ಮೂಲಕ ಹಸಿರುಳಿದು ಹೊಸ ಪೀಳಿಗೆಗೆ ಭರವಸೆಯ, ಸುಂದರ ಸ್ವಸ್ಥ ನಾಳೆಗಳು ಸಿಗುವಂತಾಗಲಿ.

ಭೂಹಳ್ಳಿ ಪುಟ್ಟಸ್ವಾಮಿ ಅವರ ಸಂಪರ್ಕಿಸ ಬಯಸಿದಲ್ಲಿ, ಮೊಬೈಲ್ ನಂ.; 99724 64038

                                                               

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಹ.ಚಂ.ಗೌಡರ ಲೇಖನಿಯಲ್ಲಿ ಹೊರಹೊಮ್ಮಿದ ಉತ್ತಮ ಪರಿಚಯಾತ್ಮಕ ಲೇಖನ…
ಭೂಹಳ್ಳಿ ಪುಟ್ಟಸ್ವಾಮಿಯವರ ಭಾವಚಿತ್ರ ಹಾಕಿದ್ದರೆ ಲೇಖನಕ್ಕೆ ಇನ್ನೂ ಮೆರುಗು ಬರುತ್ತಿತ್ತು ಎಂದು ನನ್ನ ಭಾವನೆ.  
ಕೊನೆಯಲ್ಲಿ ಹೇಳಿದ "ಇಂಥವರ ಸಂಖ್ಯೆ ನೂರ್ಮಡಿಯಾಗಬೇಕಿದೆ. ಇವರ ಪರಿಸರ ಪ್ರೇಮ ಇತರರಲ್ಲೂ ಮೂಡಲಿ. ಆ ಮೂಲಕ ಹಸಿರುಳಿದು ಹೊಸ ಪೀಳಿಗೆಗೆ ಭರವಸೆಯ, ಸುಂದರ ಸ್ವಸ್ಥ ನಾಳೆಗಳು ಸಿಗುವಂತಾಗಲಿ" ಎಂಬ ಮಾತು ಮನಕ್ಕೆ ತಟ್ಟಿತು. ಶುಭಾಶಯಗಳು !

Haniyuru cgowda
10 years ago

ಹೌದು, ಹಿಪ್ಪರಗಿ ಸರ್…ಉಪನ್ಯಾಸಕರಾದ ಭೂಹಳ್ಳಿ ಪುಟ್ಟಸ್ವಾಮಿ ಅವರು ವನದೊಳಗೆ ಇರುವ ಮತ್ತು ಸಮೃದ್ಧ ವನಸಂಪತ್ತಿನ ಅನೇಕ ಫೋಟೋ ಗಳನ್ನೂ ಲೇಖನದ ಜೊತೆ ಕಳುಹಿಸಿದ್ದೆ. ಅವುಗಳಲ್ಲಿ ಒಂದನ್ನಾದರೂ ಬಳಸಿಕೊಂಡಿದ್ದರೆ ಲೇಖನಕ್ಕೆ ವಿಭಿನ್ನ ಮೆರುಗು ಸಿಗುತ್ತಿತ್ತು. ಅಂದಹಾಗೆ, ಸಂಪಾದಕರು ಯಾಕ್ಹೀಗೆ ಮಾಡಿದರೋ ತಿಳಿಯುತ್ತಿಲ್ಲ…………..
ಅದೇನೆ ಇರಲಿ, ನಿಮ್ಮ ಮೆಚ್ಚುಗೆಯ ಮಾತುಗಳಿಗೆ ವಂದನೆಗಳು. 🙂

ಹನಿಯೂರು ಚಂದ್ರೇಗೌಡ

ಇಂತಹವರ ಸಂಖ್ಯೆ ಮತ್ತಷ್ಟು; ಮಗದಷ್ಟು ಹೆಚ್ಚಲಿ……………

Utham Danihalli
10 years ago

Chenagidhe parichayathmaka lekana shubhavagali

ಡಾ.ಸಿ.ಕೆ.ಜಗದೀಶ್

ಹನಿಯೂರರ ಬರಹ ಚೆನ್ನಾಗಿದೆ, ಶ್ರೀ ಭೂಹಳ್ಳಿವಯವರ ಆವರ ಆದರ್ಶಯುತ ಕೈಂಕರ್ಯವು ಅನುಕರಣೀಯ. ಧನ್ಯವಾದಗಳು.

5
0
Would love your thoughts, please comment.x
()
x