ಕಾಡತೊರೆಯ ಜಾಡಿನಲ್ಲಿ ಜೀವನ ಪ್ರೀತಿಯ ಚಿಲುಮೆ…

ಕಡಿದಾಳು ಶಾಮಣ್ಣನವರ ಬಗ್ಗೆ ತೇಜಸ್ವಿಯವರ ಪುಸ್ತಕಗಳಲ್ಲಿ, ಆವಾಗಿವಾಗ ಪತ್ರಿಕೆಗಳಲ್ಲಿ ಓದಿದ್ದೆನಷ್ಟೇ. ಅವರ ಆತ್ಮಕಥೆಯ ಕೆಲವು ಭಾಗಗಳನ್ನು ಮಯೂರ ಮಾಸಪತ್ರಿಕೆಯಲ್ಲಿ ಓದಿ ಆಸಕ್ತಗೊಂಡಿದ್ದೆನಾದರೂ ಪುಸ್ತಕ ಖರೀದಿಸಿರಲಿಲ್ಲ. ಕುಪ್ಪಳ್ಳಿಯಲ್ಲಿ ‘ನಾವು ನಮ್ಮಲ್ಲಿ’ ತಂಡ ಏರ್ಪಡಿಸಿದ್ದ ‘ಕರ್ನಾಟಕ ಕಂಡ ಚಳುವಳಿಗಳು’ ಸಂವಾದಗೋಷ್ಠಿಯಲ್ಲಿ ಕಡಿದಾಳು ಶಾಮಣ್ಣನವರನ್ನು ಮುಖತಃ ಭೇಟಿಯಾದಾಗ ಅವರಲ್ಲಿದ್ದ ಲವಲವಿಕೆ, ಉತ್ಸಾಹ ಕಂಡು ಅಚ್ಚರಿಪಟ್ಟಿದ್ದೆ. ಚಳುವಳಿಗಳ ಬಗ್ಗೆ ಬಹುತೇಕರಲ್ಲಿ ಸಿನಿಕತೆಯ ಭಾವವೇ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಯಾವ ನ್ಯಾಯಯುತ ಹೋರಾಟವೂ ವ್ಯರ್ಥವಾಗುವುದಿಲ್ಲ ಎಂಬ ಶಾಮಣ್ಣನವರ ಮನಸ್ಥಿತಿ ಮೆಚ್ಚುಗೆಯಾಗಿತ್ತು. ಅವರ ಜೀವನಗಾಥೆಯನ್ನು ಸಂಪೂರ್ಣ ಓದುವಂತೆಯೂ ಪ್ರೇರೇಪಿಸಿತು.

ಯಾರಿದು ಕಡಿದಾಳು ಶಾಮಣ್ಣ? ಪುಸ್ತಕ ಓದಿ ಮುಗಿಸಿದ ನಂತರವೂ ಕಾಡ ಹಾದಿಯಲ್ಲಿ ತಮ್ಮದೇ ಜಾಡು ನಿರ್ಮಿಸಿಕೊಳ್ಳುತ್ತ ಹೊಸ ಹೊಸ ದಾರಿ ಅನ್ವೇಷಿಸುತ್ತ ಸಾಗಿದ ಶಾಮಣ್ಣನವರನ್ನು ಒಂದು ಪದದಲ್ಲಾಗಲೀ ಒಂದು ವಾಕ್ಯದಲ್ಲಾಗಲೀ ಬಂಧಿಸುವುದು ಕಷ್ಟದ ಕೆಲಸವೇ ಸರಿ! ಕಡಿದಾಳಿನಲ್ಲಿ ಹುಟ್ಟಿ ತಮ್ಮ ಜೀವನದಧ್ಯಯನವನ್ನು ಅನೇಕ ನಗರಗಳಲ್ಲಿ ಮುಂದುವರಿಸಿ ಕೆಲವು ಕಾಲ ಮಾಸ್ತರರಾಗಿ ಕಡೆಗೆ ಭಗವತಿಕೆರೆಯಲ್ಲಿ ಗುಡಿಸಲು ಕಟ್ಟಿ ಕೃಷಿಕನಾಗಿ ಜೀವನ ಮುಂದುವರಿಸುತ್ತಾರೆ ಶಾಮಣ್ಣ. ಶಾಮಣ್ಣನವರ ಜೀವನಗಾಥೆ ಒಂದು ರೀತಿಯಲ್ಲಿ ಕರ್ನಾಟಕದ ಚಳುವಳಿಗಳ ಹೋರಾಟಗಳ ಇತಿಹಾಸವೆಂದರೂ ತಪ್ಪಾಗಲಾರದು. ರೈತ ಚಳುವಳಿಯ ಉಗಮ, ಬೆಳವಣಿಗೆ ಕೊನೆಗೆ ಅದು ಇಬ್ಭಾಗವಾಗಿ ತನ್ನ ವರ್ಚಸ್ಸು ಕಳೆದುಕೊಂಡ ಕಾರಣಗಳೆಲ್ಲ ವಿಸ್ತೃತವಾಗಲ್ಲದಿದ್ದರೂ ಸ್ಥೂಲವಾಗಿ ತಿಳಿಯುತ್ತದೆ. ಈಗ ಅಸ್ತಿತ್ವದಲ್ಲೇ ಇರದು ಎನ್ನಿಸುವ ಸಮಾಜವಾದಿ ಪಕ್ಷದ ಬಗ್ಗೆ ತಿಳಿಯಲೂ ಪುಸ್ತಕ ಸಹಾಯಕ.

ಮುಚ್ಚುಮರೆಗಳಿಲ್ಲದ, ಉತ್ಪ್ರೇಕ್ಷೆ ಆತ್ಮರತಿಗಳಿಲ್ಲದ, ವಿನಾಕಾರಣದ ಆತ್ಮನಿಂದೆಯೂ ಇಲ್ಲದ ಕಾಡ ತೊರೆಯ ಜಾಡು ಕಡಿದಾಳು ಶಾಮಣ್ಣನವರ ವೈವಿಧ್ಯಮಯ ವ್ಯಕ್ತಿತ್ವವನ್ನು ತೋರುತ್ತದೆ. ಅವರ ‘ಹುಚ್ಚು’ ಸಾಹಸಗಳು, ಪರಿಸರದೆಡೆಗಿನ ಪ್ರೀತಿ, ಕೆಮೆರಾದೊಂದಿಗಿನ ಒಡನಾಟ, ಸರೋದ್ ಕಲಿಯುವ ಉತ್ಸಾಹ……ಅವರ ಆಸಕ್ತಿಯ ಕ್ಷೇತ್ರಗಳಿಗೆ ಮಿತಿಯೇ ಇಲ್ಲ. ಆಸಕ್ತಿಗಳಿಗೆ ಮಿತಿಯಿಲ್ಲದಿರುವುದೂ ಒಂದು ಮಿತಿಯಾ?! ಅವರ ಸಂಗೀತಾಸಕ್ತಿಯ ಪ್ರತಿಫಲವಾಗಿ ಅವರ ದಂತಪಂಕ್ತಿ ಕೂಡ ತೊಂದರೆ ಅನುಭವಿಸಿದೆ! ಹಲ್ಲುಗಳ ಮೇಲೆ ಹೊಡೆಯುತ್ತಾ ಗಟಂ ಬಾರಿಸಿದಾಗ ಹೊಮ್ಮುವ ಶಬ್ದವನ್ನು ಹೊಮ್ಮಿಸುವುದರಲ್ಲಿ ಸಫಲರಾದ ಶಾಮಣ್ಣ ಸಿನಿಮಾದ ಪೂರ್ಣ ಹಾಡುಗಳನ್ನೂ ದಂತವಾದ್ಯದಲ್ಲೇ ಬಾರಿಸುವ ‘ಪರಿಣಿತಿ’ ಪಡೆದಿದ್ದರು! ತಮ್ಮೆಲ್ಲ ಆಸಕ್ತಿಗಳ ನಡುವೆ, ಹೋರಾಟಗಳ ನಡುವೆ ಕಡಿದಾಳು ಶಾಮಣ್ಣ ಮತ್ತವರ ಸಂಗಡಿಗರು ನಡೆಸಿದ ಬಹುದೊಡ್ಡ ಚಳುವಳಿ ‘ಸರಳ ವಿವಾಹ’. 

ಮಂತ್ರ ಮಾಂಗಲ್ಯದೊಡನೆ ನಡೆವ ಸರಳ ವಿವಾಹದೆಡೆಗೆ ಆಕರ್ಷಿತರಾದ ಗೆಳೆಯರು, ನೆಂಟರು, ಕೊನೆಗೆ ಅಪರಿಚಿತರಿಗೂ ಕೂಡ ಇವರ ಗುಂಪಿನ ಸಹಾಯಹಸ್ತ ಸಿಗುತ್ತಿತ್ತು. ಸರಳ ವಿವಾಹ ನಡೆಸಿಕೊಡಲು ತಮ್ಮದೇ ಖರ್ಚಿನಲ್ಲಿ, ತಮ್ಮೆಲ್ಲ ಕೆಲಸಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಮೈಲುಗಟ್ಟಲೆ ದೂರದ ಊರುಗಳಿಗೂ ಹೋಗಿ ಬರುತ್ತಿದ್ದ ಇವರ ಉತ್ಸಾಹ ಅಚ್ಚರಿಯುಂಟುಮಾಡುವುದರಲ್ಲಿ ಸಂದೇಹವಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪನವರ ಮಕ್ಕಳ ಮದುವೆಯನ್ನು ಸರಳವಾಗಿ ಮಾಡಬೇಕೆಂದು ಒತ್ತಾಯಿಸಿ ಅವರ ಮನೆಯ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದರು!! ಹಣ ಜಾತಿ ಯಾವ ಬೆಂಬಲವೂ ಇಲ್ಲದ ಕೋಣಂದೂರು ಲಿಂಗಪ್ಪನವರು ಸಮಾಜವಾದಿ ಪಕ್ಷದ ಸಿದ್ಧಾಂತ, ಗೆಳೆಯರ ಬೆಂಬಲ ಮತ್ತು ಗೋಪಾಲಗೌಡರ ಹಸಿರು ಮಫ್ಲರ್ ನೆರವಿನಿಂದ ಚುನಾವಣೆ ಗೆದ್ದಿದ್ದರೆಂದು ಓದಿದಾಗ ಇವತ್ತಿನ ರಾಜಕೀಯ ಪರಿಸ್ಥಿಯಲ್ಲಿ ಯಾವುದೋ ಪೌರಾಣಿಕ ಕಾಲ್ಪನಿಕ ಕಥೆಯಂತೆ ಕಾಣಿಸುತ್ತದೆ!

ಕಾಡ ತೊರೆಯ ಜಾಡಿನಿಂದ ಆಯ್ದ ಕೆಲವು ಪುಷ್ಪಗುಚ್ಛ

“ತೇಜಸ್ವಿ ರೂಮಲ್ಲಿ ಕೂತು ಅವರಿಗಾಗಿ ಕಾಯ್ತಾ ಇದ್ನಲ್ಲ; ಕೈಯಲ್ಲಿ ಶಹನಾಯಿಯಿತ್ತು. ಅದು ಏನೂ ನಾದ ಹೊರಡಿಸಲ್ಲ ಅಂತ ತಿಳಿದಿದ್ರೂ ಅದನ್ನ ಪದೇ ಪದೇ ಊದಿ ಏನಾದ್ರೂ ಶಬ್ದ ಮಾಡತ್ತಾ ಅಂತ ನೋಡೋದು ಅಭ್ಯಾಸ ಆಗ್ಬಿಟ್ಟಿತ್ತು. ಅದನ್ನ ಮತ್ತೊಂದು ಸಾರಿ ಊದಿ ಬಿಟ್ಟೆ. ಇಷ್ಟೊತ್ತು ಎಷ್ಟು ಶತಪ್ರಯತ್ನ ಮಾಡಿದ್ರೂ ಕುಂಯಿ ಕುಂಯಿ ಸಹ ಗುಟ್ಟದ ಶಹನಾಯಿ ಈಗ ಒಂದೆ ಸರ್ತಿಗೆ ಪೇಂ ಅಂತ ವಿಕಾರವಾಗಿ ನಾದ ಹೊರಡಿಸಿಬಿಟ್ಟಿತು. ಅದರ ಆರ್ಭಟಕ್ಕೆ ನಾನೇ ಅರೆಕ್ಷಣ ಬೆಚ್ಚಿಬಿದ್ದೆ. ಅಬ್ಬ ಇದನ್ನ ಕೇಳಿ ಯಾರೂ ಭಯ ಬಿದ್ದು ಓಡಿಬರಲಿಲ್ಲ ಸದ್ಯ ಎಂದು ತಲೆ ಎತ್ತಿದರೆ ಎದುರಿಗೆ ಪುಟ್ಟಪ್ಪನೋರು ನಿಂತಿದ್ದರು. ಪಕ್ಕದ ಕೋಣೆಯಲ್ಲಿ ಧ್ಯಾನಶೀಲರಾಗಿ ಬರವಣಿಗೆಯಲ್ಲಿ ತೊಡಗಿದ್ದ ಅವರು ಈ ವಿಕಾರ ನಾದದಿಂದ ಕಿರಿಕಿರಿಗೊಂದು ‘ತೇಜಸ್ವಿ, ಶಾಮಣ್ಣ ಮತ್ತೊಂದು ಯಾವುದೋ ಅವಾಂತರ ಶುರು ಹಚ್ಕೊಂಡಿದ್ದಾರೆ’ ಅಂತ ಅಂದಾಜು ಮಾಡ್ಕಂಡು ನಾನಿದ್ದ ರೂಮಿನ ಕಡೆ ಬಂದಿದ್ದಾರೆ”

“ಒಮ್ಮೆ ಕೊಪ್ಪದವರೊಬ್ಬರು ಇಂಥ ದಿನ ಮಂತ್ರ ಮಾಂಗಲ್ಯ ಮದುವೆ ಇಟ್ಕೊಂಡಿದ್ದೀವಿ ನೀವು ಬಂದು ನೆರವೇರಿಸಿಕೊಡಿ ಅಂಥ ಕೇಳ್ಕೊಂಡರು. ನಾವು ‘ಆಯ್ತು ಬರ್ತೀವಿ’ ಅಂತ ಒಪ್ಪಿದ್ವಿ. ಸುಂದ್ರೇಶ ಇದ್ದವರು ‘ನಾನು ನಂಬಳಕ್ಕೆ ಬರ್ತೀನಿ. ನೀವು ಹಿಂದಿನ ದಿನವೇ ಅಲ್ಲಿಗೆ ಬಂದ್ಬಿಡಿ. ಇಬ್ಬರೂ ಬೆಳಿಗ್ಗೆ ಒಟ್ಟಿಗೆ ಹೊರಡಕ್ಕೆ ಅನುಕೂಲ ಆಗತ್ತೆ’ ಅಂದ್ರು. ನಾನು ನಂಬಳಕ್ಕೆ ಹೋಗಿ ಉಳಿದುಕೊಂಡೆ. ಬೆಳಿಗ್ಗೆ 10 ಗಂಟೆಗೆ ಮದುವೆ ಇರುವುದರಿಂದ ಮರುದಿನ ಬೇಗ ಎದ್ದು ಹೊರಡೋದು ಅಂತ ನಿರ್ಧಾರ ಮಾಡಿದ್ದು ನಿಜವಾದರೂ ಗರಿಗರಿಯಾದ ಒಂದೂ ಮಡಿಕೆ ಬೀಳದ ಬುಷ್ ಶರ್ಟ್ ಪೈಜಾಮವನ್ನು ಹುಡುಕಿ ಹಾಕಿಕೊಂಡು, ಪೌಡರ್ ಲೇಪಿಸಿಕೊಂಡು, ಟ್ರಿಮ್ ಮಾಡಿದ ಬುಲ್ಗಾನಿನ್ ಗಡ್ಡವನ್ನು ಮತ್ತೆ ಮತ್ತೆ ಬಾಚಿ ಟ್ರಿಮ್ ಮಾಡುತ್ತಾ ಹೀಗೆ ಎಂದಿನಂತೆ ಸುಂದ್ರೇಶ ತನ್ನ ತಯಾರಿಗೆ ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿಂದ ಹೊರಡೋದು ತಡವೇ ಆಯಿತು. ನಾನು ಕಡಿದಾಳಿನಿಂದ ನಂಬಳಕ್ಕೆ ನನ್ನ ನಾರ್ಟನ್ ಗಾಡಿಯಲ್ಲೆ ಹೋಗಿದ್ದೆನಾದರೂ ಅಲ್ಲಿ ಸುಂದರೇಶನ ತಮ್ಮ ಪ್ರಭಾಕರನ ಸ್ಕೂಟರ್ ನೋಡಿದ್ದೆ. ‘ಪ್ರಭಾಕರ, ಇದನ್ನ ಯಾರು ಹೊತ್ಕಂಡು ಹೋಗ್ತಾರೆ, ನಾವಿಬ್ರೂ ಕೊಪ್ಪಕ್ಕೆ ಹೋಗಿಬರ್ತೀವಿ. ಸ್ವಲ್ಪ ನಿನ್ನ ಸ್ಕೂಟರ್ ಕೊಡು ಮಾರಾಯ’ ಅಂದೆ. ಅದಕ್ಕೆ ಅವನು ‘ಆಯ್ತು ತಗಂಡ್ಹೋಗಿ. ಆದರೆ ಜೋಪಾನ, ನಿಮ್ಮ ರಣಹದ್ದಿನ ತರ ಅಲ್ಲ ಇದು ಲೈಟ್ ವೆಹಿಕಲ್ ನೋಡ್ಕಳಿ’ ಎಂದು ಎಚ್ಚರಿಕೆ ಹೇಳಿದ. ನಾವಿಬ್ರೂ ಸ್ಕೂಟರ್ನಲ್ಲಿ ಹೊರಟ್ವಿ. ಸುಂದ್ರೇಶ ‘ನೀವು ಗಾಡಿ ಓಡಿಸಿ. ನಾನು ಹಿಂದೆ ಕೂರ್ತೀನಿ’ ಎಂದರು. ಸುಂದ್ರೇಶ್ ಗೆ ಗಾಡಿ ಓಡಿಸೋದು ಅಂದ್ರೆ ಉದಾಸೀನ. ಅವರದೇ ಗಾಡಿ ಆಗಿದ್ರೂ ಅದನ್ನ ಯಾರಿಗಾದ್ರೂ ಓಡಿಸೋಕೆ ಹೇಳಿ ತಾವು ಲಕ್ಷಣವಾಗಿ ಹಿಂದೆ ಕೂರ್ತಿದ್ದರು. ಮಾತ್ರವಲ್ಲ ಕೂತಲ್ಲೇ ನಿದ್ದೆ ಮಾಡ್ತಿದ್ದರು. ಮುಂದೆ ಕೂತವರು ಏನಾದ್ರೂ ಮಾತಾಡ್ತಿದ್ದರೆ ಎಷ್ಟೋಬಾರಿ ಇವರು ಗೊರಕೆಯ ಮೂಲಕ ಅಥವಾ ಜೋಲಿ ಹೊಡಿತಾ ಪ್ರತಿಕ್ರಿಯಿಸೋರು.”

“ರೈತ ಹೋರಾಟವೆಂಬುದು ನಿಜಕ್ಕೂ ಹೆಣ್ಣು, ಗಂಡು, ಜಾತಿ, ಧರ್ಮ ಎಲ್ಲವನ್ನು ಮೀರಲು ಒಂದು ರೀತಿಯ ವೇದಿಕೆಯಾಗತೊಡಗಿತು. ಉಪವಾಸ ಸತ್ಯಾಗ್ರಹದ ಬಗ್ಗೆ ಹಳ್ಳಿ ಹಳ್ಳಿಗೆ ಹೋಗಿ ಜನರಿಗೆ ತಿಳೀಸೋದು. ಸತ್ಯಾಗ್ರಹದ ಫೋಟೋ ತೆಗೆದು ವರದಿ ತಯಾರಿಸಿ ಲಂಕೇಶ್ ಪತ್ರಿಕೆಗೆ ಕಳುಹಿಸುವುದು ಈ ಸಂದರ್ಭದ ನನ್ನ ಮುಖ್ಯ ಕೆಲಸವಾಗಿತ್ತು. ಇದೇ ಸಂದರ್ಭದಲ್ಲಿ ಜೆ.ಪಿ.ಬಸವರಾಜು ಅವರು ಪ್ರಜಾವಾಣಿಯ ವರದಿಗಾರರಾಗಿ ಶಿವಮೊಗ್ಗಕ್ಕೆ ಅದೇ ತಾನೇ ಬಂದಿದ್ದರು. ರೈತ ಚಳುವಳಿಯ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅವರ ವಸ್ತುನಿಷ್ಠ ವರದಿಗಳು ಪ್ರಜಾವಾಣಿ ಪತ್ರಿಕೆಯ ಮೂಲಕ ಅಕ್ಷರಸ್ಥರನ್ನು ತಲುಪತೊಡಗಿದವಲ್ಲದೆ ರೈತ ಚಳುವಳಿಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗುವಂತೆ ನೋಡಿಕೊಂಡವು. ಮತ್ತೊಂದೆಡೆ ಲಂಕೇಶ್ ಪತ್ರಿಕೆ ಕೂಡಾ ರೈತ ಚಳುವಳಿಯ ವರದಿಗೆ ಬಹಳ ಪ್ರಮುಖ್ಯತೆ ಕೊಟ್ಟಿತು. ನಾವು ಬೆಂಗಳೂರಿಗೆ ಜಾಥಾ ಹೋದಾಗ ‘ರೈತರು ಬರುತ್ತಿದ್ದಾರೆ ಅವರಿಗೆ ಹೊಟ್ಟೆ ತುಂಬಾ ಊಟ ಹಾಕುವ ಜವಾಬ್ದಾರಿ ನಿಮ್ಮದು’ ಎಂದು ಲಂಕೇಶರು ಪತ್ರಿಕೆಯಲ್ಲಿ ಬರೆದ ನಾಲ್ಕು ಸಾಲು ಎಂತಹ ಜನಸ್ಪಂದನ ದೊರೆತಿದ್ದೆಂದರೆ ಬೆಂಗಳೂರಿನ ಮನೆಮನೆಯವರು ನಮ್ಮನ್ನು ಕರೆದು ಸತ್ಕರಿಸಿದ್ದರು”

ಚಳುವಳಿಗಳಲ್ಲೇ ಮುಂದುವರೆದಿದ್ದರೆ ರಾಜಕೀಯ ನಾಯಕರಾಗುವ ಸಾಧ್ಯತೆಯಿತ್ತು. ಸಾಹಿತ್ಯಪ್ರೇಮಿಯಾಗಿದ್ದವರು ಗಟ್ಟಿಯಾಗಿ ಲೇಖನಿಯನ್ನೇ ಹಿಡಿದಿದ್ದರೆ ಕನ್ನಡಕ್ಕೆ ಮತ್ತೊಬ್ಬ ಉತ್ತಮ ಸಾಹಿತಿ ದೊರಕುತ್ತಿದ್ದರು. ಉತ್ತಮ ಛಾಯಾಗ್ರಾಹಕ, ಸರೋದ್ ಪಟು ಆಗುವ ಸಾಧ್ಯತೆಗಳೂ ಇದ್ದವು. ಜೀವನ ಪ್ರೀತಿಯ ವ್ಯಕ್ತಿಯ ಆಸಕ್ತಿಗಳು ದಶದಿಕ್ಕಿನಲ್ಲಿ ಹರಿದ ಪರಿಣಾಮ ಅವರು ಕಡಿದಾಳು ಶಾಮಣ್ಣರಾಗಿ ನಮ್ಮ ನಡುವೆ ಇದ್ದಾರೆ. ನಮ್ಮೆಲ್ಲರಿಗಿಂತ ಲವಲವಿಕೆಯಾಗಿ ಓಡಾಡುತ್ತ…. ಒಂದೇ ಆಸಕ್ತಿಯೆಡೆಗೆ ತಮ್ಮಿಡೀ ಜೀವನ ತಿರುಗಿಸಿದ್ದರೆ ಅವರಲ್ಲಿವತ್ತಿಗೂ ಇರುವ ಲವಲವಿಕೆ ಇರುತ್ತಿರಲಿಲ್ಲವೇನೋ?! ಕಡಿದಾಳು ಶಾಮಣ್ಣನವರ ಜೀವನಗಾಥೆಯನ್ನು ಆಲಿಸುತ್ತ ಅದಕ್ಕೆ ಕೃತಿರೂಪ ಕೊಟ್ಟಿರುವುದು ಅಕ್ಷತಾ.ಕೆ. ಸರಳ ಗಮನಸೆಳೆಯುವ ಭಾಷೆಯಲ್ಲಿ ಮೂಡಿಬಂದಿರುವ ಪುಸ್ತಕ ಸಾಹಿತ್ಯ-ಇತಿಹಾಸ-ಸಂಗೀತಪ್ರೇಮಿಗಳೆಲ್ಲರಿಗೂ ಮೆಚ್ಚುಗೆಯಾಗುವುದರಲ್ಲಿ ಅನುಮಾನವಿಲ್ಲ.

ಪುಸ್ತಕ – ಬದುಕು ಹೋರಾಟಗಳ ಕಥನ ಕಡಿದಾಳು ಶಾಮಣ್ಣ – ಕಾಡತೊರೆಯ ಜಾಡು.

ಸಂಗ್ರಹ ಮತ್ತು ಕೃತಿರೂಪ – ಅಕ್ಷತಾ ಕೆ

ಪ್ರಕಾಶನ – ಅಭಿನವ ಪ್ರಕಾಶನ, ಬೆಂಗಳೂರು.

ಬೆಲೆ – 175/-

 

-ಡಾ ಅಶೋಕ್ ಕೆ ಆರ್

#3970

ಪಾರ್ವತಿ ನಿಲಯ

ಶಂಕರನಗರ 

ಮಂಡ್ಯ.

ದೂ – 9743006759

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
ಈಶ್ವರ ಭಟ್

ಒಳ್ಳೆಯ ಸರಣಿ, ಚೆನ್ನಾಗಿದೆ.

ಈಶ್ವರ ಭಟ್

ಹ್ಮ್.. ಮೊದಲು ಓದಬೇಕು. ಒಳ್ಳೆಯ ಸರಣಿಯಾಗಲಿ ಇದು..

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಈ ಲೇಖನದ ಮೂಲಕ ಕಡಿದಾಳು ಶಾಮಣ್ಣರವರ ಪರಿಚಯ ತಿಳಿಯಿತು. ಧನ್ಯವಾದಗಳು. ಆದರೆ ಪುಸ್ತಕದ ಬಗ್ಗೆ ಬರೇ ಎರಡು ಸಾಲು ಮಾತ್ರ ಬರೆದಿದ್ದೀರಿ.

Nagesh.KM.
Nagesh.KM.
11 years ago

Nice

Santhoshkumar LM
11 years ago

ಕಡಿದಾಳು ಶಾಮಣ್ಣನವರ ಪರಿಚಯಿಸಿದ್ದಕ್ಕೆ ಧನ್ಯವಾದಗಳು!!
nice article about a nice book!

renuka manjunath
renuka manjunath
11 years ago

ಪುಸ್ತಕ ಪರಿಚಯ ನಿಜಕ್ಕೂ ಪುಸ್ತಕವನ್ನು ಓದಲು ಪ್ರೇರೇಪಿಸುತ್ತದೆ!  ಹಾಗಾಗಿ ಅಶೋಕ್ ಅವರಿಗೆ ಅಭಿನಂದನೆಗಳು! ಕಡಿದಾಳ ಶಾಮಣ್ಣನವರ ಬಗ್ಗೆ ಎಲ್ಲೇ ಓದಿದರೂ ಅದು ಮುದ-ಮಜ-ಖುಷಿ ಕೊಡುವಂತೆಯೇ ಇರುತ್ತದೆ!

Sharath Chakravarthi
Sharath Chakravarthi
11 years ago

shamannara bagge tejaswi avara pustakagalli odidde, thumba kuthoohalada vyaktitwa avrdu. istu vistrutavagi avara bagge tilisiddakke danyavadagalu. avara athmakate iruva vishaya gottiralilla. adastu bega odhuttene.

Girish.S
11 years ago

ee pustaka odida mele naanu Kadiddal Shaamanna avara dodda fana gbittiddini..nijakkoo kutoohala bharitha manushya ivaru…

Girish.S
11 years ago

ee pustaka odida mele naanu Kadiddal Shaamanna avara dodda fan agbittiddini..nijakkoo kutoohala bharitha manushya ivaru…

Badarinath Palavalli
11 years ago

ಒಂದು ಅತ್ಯುತ್ತಮ ಪುಸ್ತಕ ವಿಮರ್ಷೇ.

10
0
Would love your thoughts, please comment.x
()
x