ಪಯಣ : ಪ್ರಶಸ್ತಿ ಅಂಕಣ

ರೈಲು ಸುರಂಗದಲ್ಲಿ ಸಾಗ್ತಾ ಇತ್ತು. ಕತ್ತಲೆಯ ತೀರ್ವತೆ ತಿಳಿಯಲೆಂದೇ ಎಲ್ಲಾ ಲೈಟುಗಳನ್ನೂ ಆಫ್ ಮಾಡಿದ್ದರು. ರೈಲು ಸುರಂಗದಲ್ಲಿ ಸಾಗ್ತಿರೋ ಸದ್ದು ಬಿಟ್ಟರೆ ಬೇರೇನೂ ಇಲ್ಲ. ಎಷ್ಟುದ್ದದ ಸುರಂಗವೋ ತಿಳಿಯದು. ಜೀವನವೇ ಮರಳದ ಕತ್ತಲೆಯ ಕೂಪಕ್ಕೆ ಧುಮುಕಿದಂತೆ ಎಲ್ಲೆಡೆ ಗಾಢಾಂಧಕಾರ. ಕಣ್ಣು ತೆರೆದರೂ , ಮುಚ್ಚಿದರೂ ಒಂದೇ ಎನಿಸುವಂತಹ ಕತ್ತಲು. ಕೆಲ ಕ್ಷಣಗಳ ಮೌನದ ನಂತರ ಎಲ್ಲಾ ಕಿರಿಚತೊಡಗಿದರು. ಕತ್ತಲೆಯನ್ನು ಎಂದೂ ಕಾಣದಂತೆ ಕಂಡ ಖುಷಿಗೋ ಅಥವಾ ಪಕ್ಕದವರು ಕಿರಿಚುತ್ತಿದ್ದಾರೆಂದೋ ತಿಳಿಯದು. ಎಲ್ಲೆಡೆ ಹೋ  ಎಂಬ ಕೂಗು. ಈ ಕೂಗಿಗರ ನಡುವೆ ಒಬ್ಬ ಮೌನವಾಗಿ ತನ್ನ ಸೀಟಿನಲ್ಲೇ ಕೂತಿದ್ದ. ಜಗದೆಲ್ಲ ಆಗು ಹೋಗುಗಳ ಬಗ್ಗೆ ದಿವ್ಯ ನಿರ್ಲಿಪ್ತತೆಯನ್ನು ತಾಳಿದ ಭೈರಾಗಿಯಂತೆ, ಕಳೆದ ಪ್ರೇಯಸಿಯ ವಿರಹ ವೇದನೆಯಿಂದ ಸುಟ್ಟು ಕರಕಲಾದ ಭಗ್ನ ಪ್ರೇಮಿಯಂತೆ ಈತ ಯಾವುದೇ ಕೂಗುಗಳಿಲ್ಲದೇ ಕುಳಿತಿದ್ದ. ಆ ಕತ್ತಲೆಯಲ್ಲಿ ಈತ ಕೂತಿದ್ದನೋ ನಿಂತಿದ್ದನೋ ಆತನನ್ನುಳಿದು ಯಾರಿಗೂ ತಿಳಿಯುವಂತಿರದಿದ್ದರೂ ಆತ ರೈಲು ಸುರಂಗದ ಹೊರಗೆ ಇದ್ದಾಗ ಹೇಗಿದ್ದನೋ ಸುರಂಗ ಹೊಕ್ಕಾಗಲೂ ಆ ಜಾಗದಿಂದ ಮಿಸುಕದೇ ಹಾಗೇ ಇದ್ದ.

ರೈಲು ಕತ್ತಲೆಯ ಸುರಂಗದಲ್ಲಿ ಇದ್ದಕ್ಕಿದ್ದಂಗೆ  ನಿಂತೇ ಬಿಟ್ಟಾಗ ಎಲ್ಲರ ಕೂಗು, ಕೇಕೆಗಳು ಎಲ್ಲೆ ಮೀರಿತು.. ಈ ಯುವಕರ ಕೂಗಿನಲ್ಲಿ ಯಾವುದೇ ಕೇಳಿದ ಕಿಲಕಿಲ ಕೇಳಿದಂತೆನಿಸಿ ಧಗ್ಗನೆ ಎದ್ದು ನಿಂತ ಆತ. ಹೌದು ಅದೇ ನಗು. ಸಂದೇಹವೇ ಇಲ್ಲ. ವರ್ಷಗಟ್ಟಲೇ ಹಿಂದೆ ಕಾಡಿದ ಅದೇ ಮಂದಹಾಸ ಇಂದು ಮರಳಿ ಕೇಳಿದಂತೆ. ಲಗಾಮು ಕಿತ್ತ ಕುದುರೆಗಳಂತೆ, ಶಾಲೆ ಬಿಟ್ಟ ಮಕ್ಕಳಂತೆ ಮನದ ಭಾವ, ನೆನಪುಗಳು ಓಡತೊಡಗಿದವು, ಕಾಲಗರ್ಭದಲ್ಲಿ ಹಿಂದೆ ಹಿಂದೆ. ಇಲ್ಲಿಯವರೆಗೂ ಬೇಡವಾಗಿದ್ದ ರೈಲಿನ ಲೈಟುಗಳು, ಶಾಂತಿ ನೀಡುವಂತಿದ್ದ ಕತ್ತಲೆ, ಖಾಲಿಯಾದ ಮೊಬೈಲ್ ಬ್ಯಾಟರಿ ಈಗ ಅಸಹನೀಯವೆನಿಸತೊಡಗಿದವು. ಒಂದು ಬೆಂಕಿಪೊಟ್ಟಣವಾದರೂ ಸಿಕ್ಕಿದ್ದರೆ ಆ ಬೆಂಕಿಕಡ್ಡಿಗಳ ಬೆಳಕಿನಲ್ಲಿ ಆಕೆಯನ್ನು ಹುಡುಕಿಯೇನು ಎಂದೆನಿಸತೊಡಗಿತವನಿಗೆ. ದೇಹದ ಪರಿವೆಯಿಲ್ಲದಂತೆ ದೇಶ ಸುತ್ತುತ್ತಿದ್ದವನಿಗೆ ನಿನ್ನೆ ಮಳೆಯಲ್ಲಿ ಇಡೀ ದಿನ ತೊಯ್ದದ್ದೂ ನೆನಪಿರಲಿಲ್ಲ. ಅದೇ ಅರೆ ಒಣಗಿದ ಪ್ಯಾಂಟಿನ ಜೇಬಿಗೆ ಕೈ ಹಾಕಿದ. ಎಂದೂ ಇರುತ್ತಿದ್ದ ಬೆಂಕಿಪೆಟ್ಟಿಗೆಗೆ. ಜೀವವನ್ನೇ ಸುಟ್ಟ ಸಿಗರೇಟುಗಳಿಗೆ ನಿತ್ಯ ಸಾಥಿಯಾಗುತ್ತಿದ್ದ ಬೆಂಕಿಪೆಟ್ಟಿಗೆ  ಇಂದೇ ಕೈಕೊಡಬೇಕೇ. ಆಸೆಯೆಂಬ ಮಾಯೆ ಕೇಳಬೇಕಲ್ಲ. ಕತ್ತಲೆಯಲ್ಲೂ ಕಷ್ಟಪಟ್ಟು, ಅಭ್ಯಾಸಬಲದಿಂದ ಒಂದು ಕಡ್ಡಿ ಗೀರಿದ.. ಒದ್ದೆ ಪೆಟ್ಟಿಗೆಯಲ್ಲಿ ಬೆಂಕಿಯೆಲ್ಲಿ ಮೂಡಬೇಕು? ಈತನ ಅಸಹಾಯಕತೆಗೆ ಸಾಕ್ಷಿಯಾಗುವಂತೆ ಕಡ್ಡಿಯೇ ಮುರಿದು ಹೋಯಿತು. ಬೇಸರವೇ ಜೀವನವಾಗಿಸಿಕೊಂಡವನಿಗೂ ಇಂದು ವಿಧಿಯ ಮೇಲೆ ತೀರಲಾರದ ಕೋಪ.ಎಲ್ಲೆಲ್ಲೂ ಸಿಗದವಳು ಇಂದು ಮತ್ತೆ ಸಿಕ್ಕಿದಂತೆ ಮಾಡಿಯೂ ಇನ್ನೂ ಸಿಗದಿರುವ ಘಳಿಗೆಗಳ ಬಗ್ಗೆ ಕೋಪ, ನಿರಾಸೆ. ಕೆಲ ಕ್ಷಣಗಳ ಮಾತಷ್ಟೇ. ರೈಲು ಸುರಂಗ ದಾಟಿದರೆ ಮೂಡೋ ದಿನದ ಬೆಳಕಲ್ಲಿ ಆಕೆಯನ್ನು ಮತ್ತೆ ಹುಡುಕಬಹುದಲ್ಲಾ ಅನ್ನೋ ಭರವಸೆಯಲ್ಲಿ ಆತ ಮತ್ತೆ ಕುಳಿತ. ಇಷ್ಟು ಕಾಲ ಕಾದವನಿಗೆ ಇನ್ನು ಕೆಲ ಕಾಲ ಕಾಯುವುದು ಹೆಚ್ಚೇ ಎಂದು ಎಷ್ಟೇ ಪ್ರಯತ್ನಪಟ್ಟರೂ ಮನಸ್ಸು ಮಾತುಕೇಳದೇ ಹಿಂದಿಂದೆ ಓಡುತ್ತಿತ್ತು..  ಮನಸ್ಸೇಕೋ ವಾಸ್ತವಕ್ಕೆ ಬಂದಿತೆಂದು ಅನಿಸಿದಾಗ ರೈಲಿನಲ್ಲಿ   ಎಲ್ಲಿಂದ ಆ ದನಿ ಕೇಳಿ ಬರುತ್ತಿದೆ ಎಂದು ಕತ್ತು ಹೊರಳಿಸಿದ. ಅಷ್ಟರಲ್ಲಿ ರೈಲು ಮತ್ತೆ ಮುಂದೆ ಹೊರಟಿತು ಸುರಂಗದಿಂದ. ಜನರ ಕೂಗುಗಳು ಮತ್ತೆ ಮುಗಿಲು ಮುಟ್ಟಿತು. ಈ ಕೂಗುಗಳಲ್ಲಿ ಮೋಹನ ಮುರಳಿಯಂತೆ ಸೆಳೆದ ಆ ನಗು ಕರಗಿಹೋಯಿತು. 

ರೈಲು ಸುರಂಗದಿಂದ ಹೊರಬಂತು ಕೊನೆಗೂ.. ಕತ್ತಲೆಯ ಕೂಪದಿಂದ ತನ್ನ ಬಾಳು ಕೊನೆಗೂ ಹೊರಬಂತೇನೋ ಎನಿಸಿತವನಿಗೆ. ದಿಗ್ಗನೆ ಎದ್ದ ಆತ ಬೋಗಿಯ ಎಡಬದಿಗೆ ಹೊರಟ. ಎಲ್ಲಾದರೂ ಸೀಟಿನಲ್ಲಿ ಮರೆಯಲಾರದಂತಹ ಆ ಮುಖ ಕಾಣಬಹುದೇ ಎಂದು. ನಿರಾಸೆ. ಭೋಗಿಯ ತುದಿಯವರೆಗೂ ಹೋದವ ಮತ್ತೆ ಮರಳಿ ಮತ್ತೊಂದು ದಿಕ್ಕಿನತ್ತ ಸಾಗಿದ. ಅತ್ತಲೂ ನಿರಾಸೆ. ಕೆಲವೊಬ್ಬರು ಇವನನ್ನೇ ನೋಡಿದರು. ರೈಲಿನಲ್ಲಿ ಬೆಳಗಿಂದ ಒಂದೇ ಸೀಟಿನಲ್ಲಿ ಕೂತವ ಈಗ ಬಾಲ ಸುಟ್ಟ ಬೆಕ್ಕಿನಂತೆ ಅತ್ತಿತ್ತ ಓಡಾಡೋದನ್ನ ನೊಡಿ ಆಶ್ಚರ್ಯ ಆಗಿರ್ಬೇಕು ಅವರಿಗೆ . ಈ ತಳಮಳ ಕಂಡು ಒಮ್ಮೆ ಅವನಿಗೇ ನಗು ಬಂತು. ಇದು ತಾನೇನಾ ಅಂತ. ವರ್ಷಗಳ ಜಡತ್ವವನ್ನ ಒಂದು ನಗು ಅಳಿಸುವುದೆಂದರೆ.. ಎರಡು ಭೋಗಿಗಳನ್ನು ದಾಟಿದರೂ ಆಕೆ ಕಾಣಲಿಲ್ಲ. ಯಾರದೋ ನಗು ಆಕೆಯದಂತೆ ಕೇಳಿತೋ ಅಥವಾ ಆಕೆಯೇ ತನ್ನ ಕಾಡಬೇಕೆಂದು ಎಲ್ಲಾದರೂ ಮರೆಯಾದಳೋ ತಿಳಿಯದಾಯಿತು.. ನಿರಾಸೆಯ ಮೋಡಗಳು ಆಸೆಯ ಸೂರ್ಯನನ್ನು ಮುತ್ತಿದಂತೆ, ಭರವಸೆಯ ಕಿರಣಗಳು ಕಾಲದ ಮೇಘಗಳ ಹಿಂದೆ ಕಾಣೆಯಾದಂತೆ. ನಾಲ್ಕೈದು ಭೋಗಿಗಳಾಚೆ ದಾಟಿದರೂ ಆಕೆ ಸಿಗದಿದ್ದಾಗ ಮನಸ್ಸಿಗೆ ಮತ್ತದೇ ನಿರಾಸೆ ಕವಿಯಿತು. ಕಮಲದಂತೆ ಅರಳಿದ ಮುಖ ಕಾಲ ಸೂರ್ಯನ ಪ್ರಕೋಪಕ್ಕೆ ಸಿಕ್ಕಂತೆ ಬಾಡಿಹೋಯಿತು..

ಎರಡು ವರ್ಷಗಳ ಹಿಂದಿರಬೇಕು. ಇದೇ ರೀತಿ ಒಂದು ರೈಲಿನ ಪಯಣ. ದೇಶ ಸುತ್ತೋ ಹುಚ್ಚಿನ ಯುವಕರು. ರೈಲೊಂದರಲ್ಲಿ ಮೋಜು ಮಸ್ತಿಯ ಪಯಣ. ಹೀಗೆ ಹಾಡು ಹರಟೆಗಳಲ್ಲಿದ್ದಾಗ ಒಂದು ಸುಂದರ ಹೆಣ್ಣು ದನಿ ಕೇಳಿದಂತಾಯಿತು. ಎಲ್ಲಾ ಅತ್ತ ತಿರುಗಿದರೆ ಒಬ್ಬ ಹಲಸಿನ ಹಣ್ಣು ಮಾರೋ ಹುಡುಗಿ. ಹುಡುಗಿ ಅನ್ನೋದಕ್ಕಿಂತ ಯುವತಿ ಅಂತಲೇ ಅನ್ನಬಹುದಿತ್ತೇನೋ. ಲಂಗಧಾವಣಿ ಬದಲು ಜೀನ್ಸ್ ಪ್ಯಾಂಟೇನಾದ್ರೂ ಹಾಕಿದ್ರೆ ಇವ್ರ ಗ್ಯಾಂಗಿನಲ್ಲೇ ಒಬ್ಬಳಂತೆ ಕಾಣುತ್ತಿದ್ದಳೇಣೋ. ಆದರೆ ಹಳ್ಳಿ ಹುಡುಗಿ. ಕಿತ್ತು ತಿನ್ನೋ ಬಡತನ ತೇಪೆ ಹಾಕಿದ ಬಟ್ಟೆಯಲ್ಲಿ ಕಾಣುತ್ತಿತ್ತು. ಬಡವರೆಂದಾಕ್ಷಣ ಭಿಕ್ಷುಕರೆಂದುಕೊಂಡಿದ್ದ ಪೇಟೆ ಹುಡುಗರಿಗೆ ಅವಳನ್ನು ನೋಡಿ ಯಾಕೋ ಮಾತೇ ನಿಂತುಹೋಗಿತ್ತು. ಹರಿದ ಬಟ್ಟೆಯಲ್ಲೇ ಲಕ್ಷಣವಾಗಿದ್ದ ಆಕೆಯನ್ನು ಕಂಡು ಪೇಟೆ ಮಂಗಗಳಿಗೆ ಯಾಕೋ ತಡೆಯದಾಯಿತು. ಏನ್ ಹೆಣ್ಣೇ ಎಷ್ಟು ಹಲಸಿನಹೆಣ್ಣಿಗೆ ಅಂತ ಆಕೆಯ ಬಳಿ ಹೋದ ಒಬ್ಬ. ಸಾಬ್ , ಅಲ್ಲೇ ನಿಲ್ಲಿ. ನಾವು ಹಣ್ಣು ಮಾತ್ರ ಮಾರೋದು. ದುಡ್ಡಿಲ್ದೇ ಇರ್ಬೋದು ನಮ್ಮತ್ರ ಆದ್ರೆ ಸ್ವಾಭಿಮಾನ ಅನ್ನೋದು ಇದ್ದೇ ಇದೆ ಅಂದ್ಲು ಆಕೆ. ಹೋದವನ ಮುಖ ಪಿಚ್ಚಾಯಿತು. ಎಲ್ಲರ ಗಮನ ಆಕೆಯ ಕಡೆ ತಿರುಗಿತು. ಅಲ್ಲಿದ್ದ ಹುಡುಗರಲ್ಲಿ ಯಾರೊಬ್ಬರು ಮಾತನಾಡಿದ್ರೂ ರೈಲಲ್ಲಿದ್ದ ಎಲ್ಲರಿಂದಲೂ ಒಂದೊಂದು ಧರ್ಮದೇಟುಗಳು ಗ್ಯಾರಂಟಿ ಅನ್ನೋ ತರ ರೈಲಿನ ಜನರೆಲ್ಲಾ ಈ ಹುಡುಗರ ಗ್ಯಾಂಗನ್ನು ದುರುಗುಟ್ಟತೊಡಗಿದರು.

ಪರಿಸ್ಥಿತಿ ಯಾಕೋ ಮಿತಿ ಮೀರ್ತಿರೋದನ್ನ ನೋಡಿದ ಈತ ಎದ್ದು ಬಂದು.. ಏ ಸಾರಿ ಕೇಳೋ ಮೇಡಂಗೆ. ಸಾರಿ ಮೇಡಂ. ಅವನು ಮಲೆಯಾಳಿ. ಆತನಿಗೆ ಕನ್ನಡ ಸರಿಯಾಗಿ ಬರಲ್ಲ. ದಯವಿಟ್ಟು ಕ್ಷಮಿಸಿ ಬಿಡಿ. ನಿಮ್ಮ ಇಡೀ ಹಲಸಿನಹಣ್ಣಿನ ಡಬ್ಬ ನಾವೇ ತಗೋತೀವಿ ಬೇಕಾದ್ರೆ. ಕ್ಷಮಿಸಿ ಬಿಡಿ ಮೇಡಂ ಅಂದ.. ಏನಯ್ಯಾ, ದುಡ್ಡಿದೆ ಅಂತ ಧಿಮಾಕಾ ನಿಮಗೆ ? ಆ ಹೆಣ್ಣು ಮಗೂನ ಅವಮಾನ ಮಾಡೋನು ಒಬ್ಬ. ಸಾಲದು ಅಂತ ಎಲ್ಲಾ ಹಲಸಿನ ಹಣ್ಣು ತಗೋತೀವಿ ಅಂತ ಧಿಮಾಕು ಮಾಡೋನು ಒಬ್ಬ. ಹೇಗಿದೆ ಮೈಗೆ ಅಂದ್ರು ಒಬ್ಬ ವಯಸ್ಕರು.. ಹಾಗಲ್ಲ ಸಾರ್ ಅದು. ಸಾರಿ ಕೇಳ್ತಿದ್ದೇನಲ್ಲ ನಾನು .. ಅಬೆ, ಸಾರಿ ಪೂಚೋ ಕರ್ಕೆ ಬೋಲಾ ತಾನ ತುಜೆ, ಸಾರಿ ಪೂಚೋ ಬೇ ಅಂತ ಮೊದಲಿನವನ ತಲೆಗೊಂದು ಮೊಟಕಿದ ಇವನು.  ಅವನು ಸಾರಿ ಮೇಡಂ, ಸಾರಿ ಸಾರಿ ಅಂದ.. ಅವನ ಸಾರಿಯಿಂದ ಆಕೆಗೆ ಸಮಾಧಾನವಾಯ್ತೋ ಅಥವಾ ಈ ಸಾರಿ ಪ್ರಹಸನದಿಂದ ತನ್ನ ಇಡೀ ದಿನದ ಬಿಸಿನೆಸ್ ಹಾಳಾಗುವುದೆಂಬ ಭಯವೋ ಆ ಹುಡುಗಿಯಲ್ಲಿದ್ದ ವ್ಯವಹಾರಸ್ಥೆಯನ್ನ ವಾಸ್ತವಕ್ಕೆ ತಂದಿತು.. ರೀ ಅವ್ನು ಸಾರಿ ಕೇಳಿದ್ನಲ್ಲ. ನಾನು ಒಪ್ಕೊಂಡ್ನಲ್ಲ. ಈ ಚಾಪ್ಟರ್ ಕ್ಲೋಸ್ ಇಲ್ಲಿಗೆ. ನಿಮ್ಮೆಲ್ಲರ ಸಪೋರ್ಟಿಗೆ ಥ್ಯಾಂಕ್ಸ್, ನಡಿರಿ ನಡಿರಿ ಅಂದ್ಲು . ಅಲ್ಲಿದ್ದ ಜನಕ್ಕೆ ಒಮ್ಮೆ ಏನು ಹೇಳ್ಬೇಕು ಅಂತನೇ ಗೊತ್ತಾಗ್ಲಿಲ್ಲ. ಅವ್ರು ಅಲ್ಲೇ ಇರೋದನ್ನ ನೋಡಿ ಏನ್ರೀ.. ಎಲ್ಲಾ ನಾಟ್ಕ ನೋಡೋಕೆ ಬಂದಿದೀರಾ ? ನಡೀರಿ ಸಾಕು ಅಂದಾಗ ಎಲ್ಲಾ ಅಬ್ಬಾರೆ ಅಂದ್ಕೊಂಡು ತಮ್ಮ ತಮ್ಮ ಜಾಗಕ್ಕೆ ಹೋಗಿ ಕೂತ್ರು..

ಆ ಹುಡುಗಿ ಹಲಸಿನಹಣ್ಣು ಮಾರುತ್ತಾ ಮುಂದಿನ ಭೋಗಿಗೆ ಹೋದ್ರೂ ಆಕೆಯ ಮಾತುಗಳು ಮಾತ್ರ ಈತನ ಕಿವಿಯಲ್ಲಿ ಇನ್ನೂ ಗುಯ್ಗುಟ್ಟುತ್ತಿದ್ದವು. ಆಕೆಯ ಸ್ವಾಭಿಮಾನ, ಸಮಯ ಪ್ರಜ್ನೆ ಬಹಳ ಇಷ್ಟವಾಗೋಯ್ತು. ಆಕೆಯ ಕೊನೆಯ ಮಾತುಗಳು ಒಂದೆರಡು ನಿಮಿಷ ತಡ ಆಗಿದ್ರೆ ಇವ್ನ ಗ್ಯಾಂಗಿನವ್ರಿಗೆಲ್ಲಾ ಸರಿಯಾಗಿ ಧರ್ಮದೇಟುಗಳು ಬಿದ್ದಿರೋದು. ರೈಲಿನಿಂದಾನೇ ಹೊರದಬ್ಬಿರ್ತಿದ್ರೇನೋ. 

ಅದೇ ನೆನಪುಗಳಲ್ಲಿ ಕೂತಿದ್ದಾಗ ಇವರು ಇಳಿಯೋ ಜಾಗ ಬಂದೇ ಹೋಯ್ತು. ಗೆಳೆಯರೆಲ್ಲಾ ತಮ್ಮ ನಗುವಿನಲ್ಲಿ ರೈಲಿನ ಘಟನೆಯನ್ನು ಮರೆತೇಹೋಗಿದ್ದರೂ ಈತನ ನೆನಪಿನಲ್ಲಿ ಅದು ಅಳಿಸಲಾರದಂತೆ ಅಚ್ಚಾಗಿಹೋಗಿತ್ತು. ಟ್ರಿಪ್ಪಿಂದ ವಾಪಾಸು ಬಂದರೂ ಆಕೆಯ ಮಾತುಗಳು, ಮುಖ ಕಿವಿಯಲ್ಲಿ ಈಗ ತಾನೇ ಕಂಡು ಕೇಳಿದಂತೆ ಅನುರಣಿಸುತ್ತಿದ್ದವು.

ಈ ಘಟನೆಯ ನಂತರ ಬಡವರು, ಅವರ ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಅನ್ನೋ ಭಾವಗಳು ತೀವ್ರವಾಗಿ ಒಂದು ಎನ್ ಜೀವೋ ಸೇರಿಕೊಂಡ ಆ ಹುಡುಗ.ಹಿಂಗೇ ಒಂದು ತಿಂಗಳು ಕಳೆಯಿತು. ಸಕಲೇಶಪುರದತ್ರ ಯಾವುದೋ ಒಂದು ಹಳ್ಳಿಯ ಶಾಲೆಗೆ ಧನಸಹಾಯ ಮಾಡೋ ಪ್ಲಾನು ಹಾಕಿದ್ರು ಇವನ ಎನ್ಜೀವೋ ಅವರು. ಪೇಟೆಯ ಜೀವನದಿಂದ ಬೋರು ಹೊಡೆದಿದ್ದ ಆತ ಎನ್ಜೀವೋದವರ ಜೊತೆ ತಾನೂ ಬರ್ತೀನಿ ಅಂತ ಕೂತ. ಹೊಸ ಹುಡುಗನ ಉತ್ಸಾಹ ಕಂಡು ಖುಷಿಯಾಗಿ ಅವನನ್ನೂ ಕರೆದುಕೊಂಡು ಹೋದರು ಅವರು ಸಕಲೇಶಪುರದತ್ತರದ ಹಳ್ಳಿಗೆ. ಸಕಲೇಶಪುರ ಅಂದ್ರೆ ಕೇಳಬೇಕಾ ? ಮೊದಲೇ ಸಖತ್ತಾದ ಜಾಗ. ಅಲ್ಲಿನ ಹಸಿರ ಸಿರಿಯಲ್ಲಿ ಆತ ಕಳೆದೇ ಹೋದ. ಪ್ರತೀ ಮರ, ಹಕ್ಕಿಯನ್ನೂ ಎಂಜಾಯ್ ಮಾಡ್ಬೇಕು ಅಂತ ತನ್ನ ಕ್ಯಾಮೆರಾದಲ್ಲಿ ಸೆರೆಹಿಡೀತಾ ಇದ್ದ ಈತನನ್ನು ಮುಂದೆ ಮುಂದೆ ನಡೆಸೋದೇ ಒಂದು ಸಾಹಸವಾಗಿ ಆ ಎನ್ಜೀವೋದ ಹಿರಿಯರೆಲ್ಲಾ ಇವ್ನ ಬಗ್ಗೆ ಗೊಣಗತೊಡಗಿದರು 🙂 ಅಂತೂ ಬಂದು ಮುಟ್ಟಿದ್ರು ಆ ಹಳ್ಳಿಗೆ. ಹಳ್ಳಿ ಅಂದ್ರೆ ಘೋರ ಹಳ್ಳಿ. 

ಯಾವ ಮೂಲಭೂತ ಸೌಕರ್ಯಗಳೂ ಇಲ್ಲದ ಹಳ್ಳಿ. ವಾಹನ ಅಂದ್ರೆ ದ್ವಿಚಕ್ರವಾಹನ ಇಲ್ಲಾ ಜೀಪನ್ನು ಕಷ್ಟಪಟ್ಟು ಓಡಿಸಬಹುದಷ್ಟೇ ಆ ಹಳ್ಳಿಯ ಕೊರಕಲು ರೋಡಲ್ಲಿ. ಮಳೆಗಾಲ ಶುರುವಾಯ್ತಂದ್ರೆ ಅದು ಕನಸಿನ ಮಾತೇ ಸರಿ.  ಆ ಮಕ್ಕಳಿಗೆ ಕೊಡಬೇಕೆಂದಿದ್ದ ಪೆನ್ನು, ಪುಸ್ತಕಗಳ ಚೀಲಗಳನ್ನು ತಮ್ಮ ಗಾಡಿಯಿಂದ ಒಂದು ಎತ್ತಿನ ಗಾಡಿಗೆ ವರ್ಗಾಯಿಸಿ ಹಳ್ಳಿಗೆ ಸಾಗಿದ್ದರು ಇವರೆಲ್ಲಾ. ಅಂದು ರಾತ್ರೆ ಅಲ್ಲೇ ಬೆಳದಿಂಗಳ ಊಟವನ್ನು ಸವಿದು ಮಲಗಿದವರಿಗೆ ಮಾರನೇ ದಿನ ಸೂರ್ಯ ಮುಖಕ್ಕೆ ಹೊಡೆದಾಗಲೇ ಎಚ್ಚರವಾಗಿದ್ದು. ಹತ್ತುಘಂಟೆ ಅಂದರೆ ಇವರ ವಿತರಣಾ ಸಮಾರಂಭ. ಅದರ ತಯಾರಿಯಲ್ಲಿ ಇವರು ಹೇಗೆ ನಿತ್ಯಕರ್ಮಗಳನ್ನು ಮುಗಿಸಿ ತಯಾರಾದರೋ, ಆ ಸಮಯ ಹೇಗೆ ಬಂದಿತೋ ತಿಳಿಯಲೇ ಇಲ್ಲ.

ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಅದರಲ್ಲಿ ಹಳ್ಳಿ ಮಕ್ಕಳ ನೃತ್ಯದಲ್ಲಿ ಇವನನ್ನೂ ಎಳೆದು ಸೇರಿಸಿಕೊಂಡರು. ಇವನು ಬರೋಲ್ಲ ಅಂದರೂ ಅವರು ಬಿಡಲಿಲ್ಲ. ಇವನ ವಕ್ರ ಪಕ್ರ ನೃತ್ಯಕ್ಕೆ ಅಲ್ಲಿನ ಹಳ್ಳಿಯವರೆಲ್ಲಾ ಬಿದ್ದು ಬಿದ್ದು ನಗತೊಡಗಿದರು. ಆ ನಗುವಿನ ಅಲೆಯಲ್ಲಿ ಒಂದು ಅಚ್ಚರಿ. ರೈಲಿನಲ್ಲಿ ಹಲಸಿನ ಹಣ್ಣು ಮಾರುತ್ತಿದ್ದ ಹುಡುಗಿಯೂ ಇದ್ದಾಳೆ !! ಇವನ ಮುಖ ಮತ್ಯಾಕೋ ಅರಳಿ ಹೋಯಿತು ಇದ್ದಕ್ಕಿದ್ದಂತೆ. ಅವಳು ನಗಲೆಂದೇ ಇನ್ನಷ್ಟು ಮಂಗ ಮಂಗನಾಗಿ ನೃತ್ಯ ಮಾಡುತ್ತಿದ್ದ. ಆಕೆಯೂ ನಗುತ್ತಿದ್ದಳು. ಈ ಮಂಗಾಟದಲ್ಲೇ ನೃತ್ಯ ಕಾರ್ಯಕ್ರಮ ಮುಗಿಯಿತು. ಮುಗಿದ ಮೇಲೆ ಆಕೆ ನಿತ್ತ ಕಡೆ ನೋಡುತ್ತಾನೆ. ಆಕೆ ಅಲ್ಲಿಲ್ಲ.. ಛೇ. ಎಲ್ಲಿ ಹೋದಳು ಅವಳು ? ಅಲ್ಲೊಂದು ಹುಡುಗಿ ನಿಂತಿದ್ದಳು ಅವಳನ್ನು ನೋಡಿದಿರಾ ಎಂದು ಕೇಳೋಣ ಅಂದರೆ ಯಾವ ಹುಡುಗಿ ಅನ್ನುತ್ತಾರೆ ಎಲ್ಲ. ಅವಳ ಮುಖ ಕಂಡ ಖುಷಿಯಲ್ಲಿ ಆಕೆಯ ಬಟ್ಟೆಯ ಬಣ್ಣವನ್ನೂ ನೋಡಿರಲಿಲ್ಲ. ಹೆಸರಂತೂ ಮೊದಲೇ ಗೊತ್ತಿಲ್ಲ. ಥೋ , ಎಂತಾ ಕತೆಯಾಯಿತು ಇದು ಎಂದು ಪೇಚಿಡುವಷ್ಟರಲ್ಲೇ ಎಲ್ಲೋ ರೈಲಿನ ಕೂ ಎಂಬ ಸದ್ದಾಗತೊಡಗಿತು.. ಅರೆರೆ ಇಲ್ಲೇ ಒಂದು ರೈಲಿನ ರೂಟು.. ಅಂದರೆ ಇಲ್ಲೇ ಒಂದು ರೈಲ್ವೇ ನಿಲ್ದಾಣವೂ ಇರಬಹುದು. ರೈಲಲ್ಲಿ ಹಲಸಿನ ಹಣ್ಣು ಮಾರೋ ಹುಡುಗಿ ಅಂದ್ರೆ ಗೊತ್ತಾಗಬಹುದಾ  ಅಂದುಕೊಳ್ಳುತ್ತಿರುವಾಗ ದಾರಿಯಲ್ಲಿ ಕಂಡ ದೊಡ್ಡ ದೊಡ್ಡ ಹಲಸಿನ ಮರಗಳೂ, ಅದರ ಕೆಳಗಡೆ ಅಲ್ಲಲ್ಲಿ ಹಲಸಿನ ಹಣ್ಣು ರಾಶಿ ಹಾಕಿ ಮಾರುತ್ತಿದ್ದ ಹುಡುಗರ ದೃಶ್ಯಗಳೂ ನೆನಪಾದವು. ಛೇ, ಇವರಲ್ಲಿ ಯಾರಾದ್ರೂ ಆಗಿರಬಹುದು. ಅವಳನ್ನು ಹೇಗೆ ಕಂಡುಹಿಡೀಲಿ ಅಂದ್ಕೋತಿರುವಾಗಲೇ ರೈಲಿನ ಕೂ ಎಂಬ ಸದ್ದು ಜೋರಾಗಿ ಈತನ ಮನದ ಮಾತುಗಳನ್ನೆಲ್ಲಾ ತನ್ನಲ್ಲೇ ಕರಗಿಸಿಕೊಳ್ಳುವಷ್ಟು ಜೋರಾಯಿತು.. ಎಲ್ಲೆಲ್ಲೂ ರೈಲಿನ ಚುಕುಬುಕು , ಕೂ ಎಂಬ ಸದ್ದುಗಳೇ ತುಂಬಿಹೋಯಿತು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
Raghunandan K
10 years ago

Nice…

prashasti
10 years ago
Reply to  Raghunandan K

Thank you Raghu 🙂

niharika
niharika
10 years ago

ಇಷ್ಟವಾಯ್ತು..
ನಿಮ್ಮೊಳಗೊಬ್ಬ ಅಪರೂಪದ ಕತೆಗಾರನೂ ಇದ್ದಾನೆ. ಆಗೀಗ ಕತೆಯನ್ನೂ ಬರೀತಾ ಇರಿ…

prashasti
10 years ago
Reply to  niharika

ಧನ್ಯವಾದಗಳು ನೀಹಾರಿಕ ಅವರೆ 🙂
ನಾನು ಮೊದಲು ಬರೆಯಲು ಪ್ರಾರಂಭ ಮಾಡಿದ್ದು ಕಥೆಯಿಂದಲೇ ಎನ್ನಬಹುದು. ಹೇಳತೊಡಗಿದರೆ ಅದೇ ಒಂದು ಕಥೆಯಾದೀತೇನೋ 🙂 ತುಂಬಾ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ. ಪ್ರಯತ್ನಿಸುತ್ತೇನೆ ಮೇಡಂ 🙂

GAVISWAMY
10 years ago

nice article..

prashasti
10 years ago
Reply to  GAVISWAMY

Thank you Gaviswamy avare 🙂

Venkatesh
Venkatesh
10 years ago

wonderful story.. enjoyed

prashasti
10 years ago

Thank you venkatesh 🙂

Utham Danihalli
10 years ago

Chenagidhe kathe anthyavilada kathe
Shubhavagali

9
0
Would love your thoughts, please comment.x
()
x