ಪಿನ್ನಿ-ಪಲ್ಲು ಪ್ರಳಯ ಪ್ರಸಂಗ: ಸುಮನ್ ದೇಸಾಯಿ

     

ತಿಂಗಳದ ಎರಡನೆ ಶನಿವಾರ್ ಆಫೀಸಿಗೆ ಸೂಟಿ ಇರತದ. ದಿನಾ ಒಂದಕ್ಕು ಗಂಡಾ ಮಕ್ಕಳಿಗೆ ಮಾಡಿ ಹಾಕಿ,ಆಫೀಸು ಮನಿ ಅಂತ ಬ್ಯಾಸತ್ತ ಶುಕ್ರವಾರ ದಿನಾ ಮುಂಝಾನೆ " ನಾಳೆ, ನಾಡದ ಸೂಟಿ ಅದ, ನಾ ಇವತ್ತ ನಮ್ಮ ಅಮ್ಮನ ಮನಿಗೆ ಹೋಗಿಬರತೇನಿ. ಒಮ್ಮೆಲೆ ಸೋಮವಾರ ಸಂಜೀಕೆ ಆಫೀಸ್ ಮುಗಿಸಿಕೊಂಡ ಬರತೇನಿ" ಅಂತ ಒದರಿದೆ. ಅದಕ್ಕ ಗಂಡಾ ಮಕ್ಕಳು ಕೂಡೆ ಒಂದ ಧ್ವನಿಲೆ "ನಾವು ಬರತೇವಿ  ಅಂತ ಅಂದ್ರು. ಅದಕ್ಕ ನಾ ಒಂದ ನಮ್ಮಮ್ಮನ ಮನಿಗೆ ಕಾಲರ ಇಡ್ರಿ ಆವಾಗ ಹೇಳತೇನ ನಿಮಗೆಲ್ಲಾ, ಅಲ್ಲಾ " ಆಸತ್ತ ಬ್ಯಾಸತ್ತ  ಅಕ್ಕನ ಮನಿಗೆ ಹೊದ್ರ, ಅಕ್ಕನ ಗಂಡಾ ಆವಕ್ ಅಂದ್ನಂತ " ಹಂಗಾತು. ಇಲ್ಲೆ ಮಾಡಿ ಮಾಡಿ ಬ್ಯಾಸತ್ತ ಆರಾಮ ತಗೊಳ್ಳಿಕ್ಕೆ ಅಂತ ಹೊದ್ರ ಅಲ್ಲು " ಊಟಾ, ಚಹಾ,ನಾಷ್ಟಾ ಅಂತ ನಿಮ್ಮದ ಮಾಡೊದಾಗ್ತದ " ಅಂತ ಸಿಟ್ಟಿಲೆ ಹಾಕಿದ್ದ ಧಮಕಿಗೆ ಎಲ್ಲಾರು ಸುಮ್ನಾಗಿ ಮೌನ ಸಮ್ಮತಿ ಕೊಟ್ರು. ನನ್ನ ಮಗಾ ಅಂತು " ಅಮ್ಮಾ " ಪಾರ್ವತಿ ಪರಮೇಶ್ವರ " ಒಳಗಿನ ಸುಬ್ಬುನಂಘ " ಹುಬ್ಬಳ್ಳಿ ಹುಲಿ ಮುಟ್ಟಿದ್ರ ಬಲಿ " ಅಂತ ಅನ್ನಮ್ಮ,ಹೆಂಗಿದ್ರು ನೀ ಹುಬ್ಬಳ್ಳಿಯಾಕಿದ್ದಿ ಅಂದು ವಾತಾವರಣನ ತಿಳಿ ಮಾಡಿದಾ.

          ಅದೇನ ಅನ್ರಿ ಅತ್ತಿ ಮನ್ಯಾಗ ಬೇಕಾದಷ್ಟ ಸುಖಾ ,ಸೌಲತ್ತ ಇದ್ರುನು, ಅವೆಲ್ಲಾ ತವರ ಮನಿಮುಂದ ಕನಿಷ್ಠನ.ಶುಕ್ರವಾರ ರಾತ್ರಿ ಅಮ್ಮ ಮಾಡಿದ್ದ ಬಿಸಿಬಿಸಿ ಅಡಗಿ ಊಟಾ ಮಾಡಿ ಬೆಚ್ಚಗ ಹೊಚಗೊಂಡ ಮಲಕೊಂಡಾಕಿಗೆ, ಮುಂಜಾನೆ ೮ ಕ್ಕ ಬಾಜು ಮನಿ ಪಲ್ಲ್ಯಾ ಮತ್ತ ಪಿನ್ನಿ ಧ್ವನಿ ಕೇಳಿನ ಎಚ್ಚರಾತು.ಅಮ್ಮನ ಮನಿ ಬಾಜುದ್ದ ಮನ್ಯಾಗ ಇದ್ದ ಈ ದಂಪತಿಗಳ ಹೆಸರು ಪನ್ನಗಾ-ಪ್ರಲ್ಹಾದ. ಆದರ ಎಲ್ಲಾರು ಅವರನ್ನ ಪಲ್ಲ್ಯಾ-ಪಿನ್ನಿ ಮಾಡಿ ಕರಿತಿದ್ರು. ಇವರಿಬ್ಬರ ಜೀವನಾ ಒಂಥರಾ ಕಾಮೇಡಿ ಸಿರೀಯಲ್ ನಂಘ ಇರತಿತ್ತು. ಪಲ್ಲಣ್ಣ ಹೆಂಡ್ತಿ ಕೈಯ್ಯಾಗ " ಪಾಪ ಪಲ್ಲ್ಯಾ" ಆಗಿಹೋಗಿತ್ತ ಆ ಪ್ರಾಣಿ. ದಿನಾ ಬೆಳಗಾದ್ರ ಇಬ್ಬರದು ಲಗ್ಗಿ-ಭಗ್ಗಿ ಜಗಳಾ ಶೂರು ಆಗೇಬಿಡತಿತ್ತು. ಅವರ ಜಗಳದಾಗ ಒಬ್ಬರಿಗೊಬ್ಬರ ಅವ್ವ,ಅಪ್ಪ,ಅಜ್ಜಾ,ಅಜ್ಜಿ,ಅಣ್ಣ ತಮ್ಮ,ಅಕ್ಕಾ,ತಂಗಿ, ಕಲಿಸಿದ ಸಾಲಿ ಮಾಸ್ತರು, ಗೆಳ್ಯಾರು ಗೆಳತ್ಯಾರು,ಒಬ್ಬರಿಗೊಬ್ಬರಿಗೆ ಸೇರೊ ಸಿನೆಮಾ ಹಿರೊ-ಹಿರೊಯಿನ್ ಗೊಳು,ಕಡಿಕೆ ಪೂಜಾ ಮಾಡೊ ದೇವರು ಸುಧ್ಧಾ ಇವರ ಕಡೆ ತೊಳಿಸಿಕೊಂಡ ಉಧ್ಧಾರ ಆಗಿ ಹೋಗ್ತಿದ್ರು.

     ಇವರಿಬ್ಬರ ಮಾತು ಶೂರು ಆದಕೂಡಲೆ ನಮ್ಮ ತಮ್ಮಾ " ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ ಅಂತ ಹಾಡಲಿಕ್ಕೆ ಶೂರು ಮಾಡಿಬಿಡತಿದ್ದಾ.

          ಆವತ್ತು ಹಂಗಾ ಆತು, ಬಿಸಿಬಿಸಿ ಚಹಾ ಕುಡಕೊತ ಇವರಿಬ್ಬರ ಜಗಳಾ ಕೇಳಕೊತ ಕುತಿದ್ದೆ. ಆವಾಗ ನನ್ನ ತಮ್ಮಾ ಅಂದಾ " ಅಕ್ಕಾ ಮೊನ್ನೆ ನಾ ಎನರ ಬರೊಬ್ಬರಿ ಟೈಮಿಗೆ ಅವರ ಮನಿಗೆ ಹೋಗಲಿಲ್ಲಂದ್ರ, ಪಾಪ ಪಲ್ಲಣ್ಣಾ ಹೆಂಡತಿ ಕೈಯ್ಯಾಗ ಹಂಚಿಪಿಲ್ಲಿ ಆಗಿ ಹೋಗತಿದ್ದಾ.ಅಂದಾ. ಅದಕ್ಕ ಯಾಕೊ ಅಂಥಾದ್ದ ಎನಾತು ಅಂತ ಕೇಳಿದ್ದಕ್ಕ " ಪಿನ್ನಿ ಪೂರಾಣಾ ಹೇಳಲಿಕ್ಕೆ ಶೂರು ಮಾಡಿದಾ.

          " ಒಂದಿನಾ ಪಲ್ಲಣ್ಣಾ ಆಫೀಸಿನಿಂದ ದಣದ ಮನಿಗೆ ಬಂದಾಗ,ಪಿನ್ನಿ ಊರಾಗ ಹೊಸದಾಗಿ ಶೂರು ಆಗಿದ್ದ ಚೈನಾ ಬಝಾರ್ ಕ್ಕ ಹೋಗಿ ಬಣ್ಣಬಣ್ಣದ ಪ್ಲ್ಯಾಸ್ಟಿಕ್ ಸಾಮಾನು, ಶೋ ಸಾಮಾನು, ಅಲ್ಲೆ ಬಾಜುಕ್ಕ ಇದ್ದ ಅರವಿ ಸೇಲ್ ನ್ಯಾಗ ಡಿಸ್ಕೌಂಟಿನ್ಯಾಗ ಒಂದ ಅರ್ಧಾ ಡಜನ್ ಸೀರಿ ಎಲ್ಲಾ ತಂದು ಮುಂದ ಹರವಿಕೊಂಡು ,ಚೈತ್ರ ಮಾಸದಾಗ ದೊಡ್ಡ ಗೌರಿನ್ನ ಕೂಡಿಸಿ ಮುಂದ ಗೊಂಬಿ,ಶೋಸಾಮಾನಿಟ್ಟ ,ಅಲಂಕಾರ ಮಾಡಿ ಹೂವಿಳ್ಯಾ ಮಾಡತರಲ್ಲ ಹಂಗ ಕೂತಿದ್ಲು.ಅದನ್ನ ನೋಡಿ ಪಲ್ಲ್ಯಾ " ಎನ ಇದು ಹೊಸದಾಗಿ ಮೊಡಕಾ ಸಾಮಾನಿನ್ ಬಿಸಿನೆಸ್ ಎನರೆ ಶೂರು ಮಾಡಿ ಎನು,ಯಾರರ ಮೊಡಕಾ ತಂದ ಹಾಕ್ಯಾರೆನ" ಅಂತ ಕೇಳಿದ್ದಕ್ಕ, ಪಿನ್ನಿ" ಅಯ್ಯ ಅಂಥಾ ಬರಬಾರದ್ದ ದರಿದ್ರತನಾ ಎನ ನನಗ ಬಂದಿಲ್ಲಾ,ಎಲ್ಲಾ ಚೊಕ್ಕ ರೊಕ್ಕಾ ಕೊಟ್ಟ ತಗೊಂಡ ಬಂದೇನಿ,ನಾ ಇದ್ದುಳ್ಳ ಛೊಲೊ ಮನಿತನದಿಂದ ಬಂದೇನಿ"ಅಂದ್ಲು, ಅಂದ್ರ ಇನಡೈರೆಕ್ಟ ಆಗಿ ಪಲ್ಲಣ್ಣಗ ದರಿದ್ರ ಅಂತ ಹಂಗಿಸಿದ್ಲು.ಇದನ್ನ ಕೇಳಿ ಪಲ್ಲ್ಯಾಗ ಪಿತ್ತ ನೆತ್ತಿಗೇರಿತು ಮದಲ ದಣದ ಬ್ಯಾರೆ ಬಂದಿದ್ದಾ, ತಿಂಗಳ ಕಡಿ ಬ್ಯಾರೆ. ಮತ್ತ ಮ್ಯಾಲೆ ಹೆಂಡತಿ ಹಿಂಗ ತನ್ನರೊಕ್ಕಾನ ಖರ್ಚ ಮಾಡಿ ತನಗ ದರಿದ್ರ ಅಂತ ಹಂಗಿಸಿದ್ದಕ್ಕ, ಪಲ್ಲ್ಯಾನ ಒಳಗಿನ ಮಲಕೊಂಡ ಗಂಡಾ ಒಮ್ಮೇಲೆ ಎದ್ದ ಕೂತು ಪಿನ್ನಿನ್ನ ಯದ್ವಾತದ್ವಾ ಝಾಡಸಲಿಕತ್ತಾ." ಅಲ್ಲಾ ತಿಂಗಳ ಕಡಿಕೆ ರೊಕ್ಕಸಾಲಂಗಿಲ್ಲಂತ ನಾ ಒದ್ದ್ಯಾಡಲಿಕತ್ರ, ನೀ ಇಲ್ಲದ್ದ ಮೊಡಕಾತಂದ ಮನ್ಯಾಗ ತುಂಬಲಿಕತ್ತರ ನಿಮ್ಮಪ್ಪ ಬಂದ ಎನ ಹಿತ್ತಲದಾಗ ರೊಕ್ಕದ ಗಿಡಾ ಹಚ್ಚಿ ಹೋಗ್ಯಾನೆನ.

ಹಿಂಗ ಹುಣಚಿಕಪ್ಪಧಂಗ ರೊಕ್ಕಾ ಖರ್ಚ ಮಾಡಿದ್ರ ನಾ ಸಿಧ್ಧಾರೂಢ ಮಠದ ಮುಂದ ಟಾವೆಲ್ ಹಾಸಿಕೊಂಡ "ಶಿವಪ್ಪಾ ಕಾಯೊತಂದೆ" ಅಂತ ಹಾಡಾ ಹಾಡಕೊತ ಕೂಡೊ ಪರಿಸ್ಥಿತಿ ಬರತದ ಅಷ್ಟ , ಮನ್ಯಾಗ ಕೂತು ಹಂದಿ ಹಂಗ ಮೈ ಬೆಳಿಸ್ಕೊಂಡ್ರ ಎನ ಗೊತ್ತಾಗತದ ರೊಕ್ಕದ್ದ ಕಿಮ್ಮತ್ತ, ಹೊರಗ ಹೋಗಿ ಮೈ ಬಗ್ಗಿಸಿ ದುಡದ್ರ ಗೊತ್ತಾಗತದ " ಅಂತ ಒದರೊತನಕಾ ಒದರಿ, ಮುಂದೇನಾಗತದೊ ಅಂತ ಘಾಬರ್ಯಾಗಿ ಪಿನ್ನಿ ಮಾರಿ ನೋಡಿದಾ, ಪಲ್ಲ್ಯಾನ್ನ ಪುಣ್ಯಾ ಆಂವನ ಹಣೆಬರಹಾ ನೆಟ್ಟಗಿತ್ತು,ಪಿನ್ನಿ ಇಂವನ್ನ ಮಾತ ಕೇಳಿ ಸಿಟ್ಟಾಗೊ ಬದಲಿ ,ಸಪ್ಪ ಮಾರಿ ಮಾಡಕೊಂಡ ನಿಂತಿದ್ಲು. ಬಾಕಿ ಟೈಮನ್ಯಾಗ ಪಲ್ಲಣ್ಣ ಹಿಂಗ ಎನರೆ ಧೈರ್ಯಾ ಮಾಡಿ ಬಾಯಿಬಿಟ್ರ ಆಂವನ್ನ ಹಂಚಿಪಿಲ್ಲಿ ಮಾಡಕೊಂಡ ಕುಂಟಲ್ಪಿ ಆಡಿ ಬಿಡತಿದ್ಲು, ಆದ್ರ ಆವತ್ತ ಯಾಕೊ ಆಂವಾ ಅಂದ ಮಾತು ಆಕಿ ಸ್ವಾಭಿಮಾನಕ್ಕ ಪೆಟ್ಟ ಬಿದ್ದಿತ್ತು.ಆವತ್ತಿಂದ ಹೆಂಗರಮಾಡಿ ತಾನು ರೊಕ್ಕಾ ಗಳಿಸಿ ಪಲ್ಲ್ಯಾನ್ನ ಮಾರಿ ಮ್ಯಾಲೆ ಒಗದ ತೋರಸಬೇಕಂತ ಶಪಥಾ ಮಾಡಿ, ಹೆಂಗ ರೊಕ್ಕಾ ಗಳಸಬೇಕಂತ ವಿಚಾರ ಮಾಡಿ ಕಡಿಕೆ ತನ್ನ ಮಹಿಳಾಮಂಡಳದ ಗೆಳತ್ಯಾರಿಗೆ ಕೇಳಿದ್ಲು. ಅವರೆಲ್ಲಾ ಹೋಲಿಗಿ,ಹೆಣಿಕಿ,ಪೇಂಟಿಂಗ ಅಂತ ಎನೇನೊ ಉಚಿತ ಸಲಹೆ ಕೊಟ್ರು. ಆದ್ರ ಅವೆಲ್ಲ ಪಿನ್ನಿಗೆ ಹರದಾರಿ ದೂರ ಇದ್ವು. ಅಷ್ಟರಾಗ ಒಬ್ಬಾಕಿ " ಪನ್ನಗಾ ಅವರ ಈಗೀಗ ಈ ಕುಕ್ಕರಿ ಕ್ಲಾಸ್ ಗೋಳ ಭಾಳ ಫ್ಯಾಶನ್ ಆಗ್ಯಾವ ನಿವ್ಯಾಕ ಅಡಗಿ ಕ್ಲಾಸ ಹೇಳಿಕೊಡಬಾರದು ಅಂದ್ಲು, ಪಿನ್ನಿಗೆ ಇದು ಅಗದಿ ಛೊಲೊ ಅನಿಸ್ತು. ಒಂದಹತ್ತ ಪ್ಯಾಂಪ್ಲೇಟ್ಸ ಮಾಡಿಸಿ ಎಲ್ಲಾರಗೂ ಹಂಚಿ, ಒಂದ ಛೋಲೊ ದಿವಸಾ ಸೋಡಿ "ಅನ್ನಪೂರ್ಣೆಶ್ವರಿ ಕುಕರಿಂಗ್ ಕ್ಲಾಸ ಅಂಥೇಳಿ ಶೂರು ಮಾಡೆ ಬಿಟ್ಲು.ಒಂದ ನಾಲ್ಕ ಮಂದಿ ಎಡಮಿಶನ್ ನು ಮಾಡಿಸಿದ್ರು.ಅಂತು ಇಂತು ಕ್ಲಾಸ್ ಶೂರು ಆದ್ವು.ಪಲ್ಲಣ್ಣಗೂ ಖುಷಿ ಆತು ಅಂತೂ ತನ್ನ ಹೆಂಡತಿನ್ನ ಬಯ್ದಿದ್ದಿಕ್ಕ ಮನಸ್ಸಿಗೆ ಹತ್ತಿ ಹಾದಿಗೆ ಬಂದ್ಲಂತ, ತಾ ಗಂಡಾ ಆಗಿದ್ದಕ್ಕ ಮದಲನೆ ಸಲಾ ಹೆಮ್ಮೆ ಪಟ್ಟಗೊಂಡಾ.

      ಪಿನ್ನಿ ತಾನು ಪುಸ್ತಕ ಇಟಗೊಂಡ ಅದರಾಗಿನ ಸರಳ ಸರಳ ಇದ್ದ ಅಡಗಿ ಕಲಿಸ್ತಿದ್ಲು. ಪಾವಭಾಜಿ,ಛೋಲೆ,ಜಾಮೂನ, ಅಂತ ತ್ರಾಸ ಇರಲಾರದ ಇನ್ಸ್ಟಂಟ್ ಇದ್ದ ಅಡಗಿ ಮಾಡತಿದ್ರ ಮತ್ತ ಛೊಲೊ ಆಗಲಾರದ ಎನಮಾಡತದ.ಕ್ಲಾಸಿನ್ಯಾಗ ಹೆಸರಿಗೆ ೪ ಮಂದಿ ಸ್ಟೂಡೆಂಟ್ಸ್ ಅಷ್ಟ ಆದರ ಅವರ ಜೋಡಿ ಅವರ ಅಕ್ಕ,ಗೇಳತಿ,ವೈನಿ ಅನಕೊತ ತಮ್ಮ ಮಂದಿನ ಜೋಡಿ ಕರಕೊಂಡ ಬಂದು ಪಿನ್ನಿ ಮಾಡಿದ್ದ ರೆಸಿಪಿಗೊಳನ್ನ ಮಸ್ತ ಹೊಡತಾ ಹೊಡದ ತಿಂದು ಮ್ಯಾಲೆ ಛೊಲೊ ಆಗೇದ ಅಂತ ಹೊಗಳಿ ಹೊಗತಿದ್ರು. ಇದರಿಂದ ಪಿನ್ನಿ ಉಬ್ಬಿ ಕುಂಬಳಕಾಯಿ ಆಗಿದ್ಲು. ಆದ್ರ ತಿಂಗಳಾದಮ್ಯಾಲೆ ಬಂದ ಕಿರಾಣಿ ಬಿಲ್ಲ ನೋಡಿದಾಗ ಉಬ್ಬಿದ್ದ ಫುಗ್ಗಾದ್ದ ಘಾಳಿ ತಗದವರಂಘ ಆಗಿದ್ಲು.ಇದ್ಯಾಕೊ ಹೊಂದಂಗಿಲ್ಲಂದು ಕುಕ್ಕರಿಂಗ ಕ್ಲಾಸ್ ಬಂದ ಮಾಡಿ ಇನ್ನ ಮುಂದ ಯಾವ್ ಕಾರಬಾರ ಶೂರು  ಮಾಡೊಬೇಕಂತ ತಲಿ ಕೆಡಿಸಿಕೊಂಡ ಕೂತಾಗ ಯಾರೊ ಒಬ್ಬರು ಬೇಬಿ ಸಿಟ್ಟಿಂಗ್ ಶೂರು ಮಾಡ್ರಿ, ಈಗೀಗ ಗಂಡಾ-ಹೆಂಡತಿ ಜೋಡಿ ಜೋಡಿ ಕೆಲಸಕ್ಕ ಹೋಗೊದ ಭಾಳ ಹಿಂಗಾಗಿ ಛೋಲೊ ಇನಕಂ ಆಗತದ ಅಂತ ಅಂದ್ರೂಂತ " ಬೇಬಿ ಸಿಟ್ಟಿಂಗ" ಶೂರು ಮಾಡೆಬಿಟ್ಟಳು ಪಿನ್ನಿ.

     ಒಂದ ನಾಲ್ಕೈದ ಮಂದಿ ತಮ್ಮ ಮಕ್ಕಳನ್ನ ಈಕಿ ಹತ್ರ ಬಿಟ್ಟು ಹೋಗಲಿಕತ್ರು. ಮಕ್ಕಳನ್ನ ನೋಡ್ಕೊಳ್ಳಿಕ್ಕೆ ಪಿನ್ನಿ ಅಂಥಾ ಎನ ತ್ರಾಸ ಪಡತಿದ್ದಿಲ್ಲಾ, ಟಿವ್ಹಿ ಒಳಗ ಕಾರ್ಟೂನ್ ಚಾನಲ್ ಅಥವಾ ಪೊಗೊ ಹಚ್ಚಿ ಅದರ ಮುಂದ ಹುಡುಗುರನ್ನ ಮುಂದ ಕೂಡಿಸಿ ತಾ ನಿಶ್ಚಿಂತಿಯಿಂದ ಮಲಕೊಂಡ ಬಿಡತಿದ್ಲು.ಇನ್ನ ಸಂಜಿಕೆ ಕೆಲಸದಾಕಿ ಬಂದು ಹುಡುಗುರ ಮಾರಿ ತೊಳಿಸಿ ಬ್ಯಾರೆ ಅರವಿ ಹಾಕಿ ತಯಾರ ಮಾಡತಿದ್ಲು. ಆದ್ರ ಒಂದ ೧೫ ದಿನಾ ಆದ್ಮ್ಯಾಲೆ ಒಂದೊಂದ ಮಕ್ಕಳು ಪಿನ್ನಿ ಮನಿಗೆ ಬರಲಿಕ್ಕೆ ನಾ ಒಲ್ಯೆ ಅಂತ ಹಟಾ ಮಾಡಲಿಕತ್ತುವಂತ ಪಾಲಕರ ಕಂಪ್ಲೇಂಟ್ ಮಾಡಲಿಕತ್ತರಂತ. ಆಮ್ಯಾಲೆ ಹುಡುಗುರನ್ನ  ರಮಿಸಿ ಕೇಳಿದಾಗ ಗೊತ್ತಾತು ಎನಂದ್ರ" ಮಕ್ಕಳಿಗೆ ಮನಿಯಿಂದ ಕಳಿಸಿಕೊಟ್ಟ  ಡಬ್ಬಿಯೆಲ್ಲಾ ಪಿನ್ನಿ ತಾ ಇಸಗೊಂಡು ತಾ ಮಾಡಿದ್ದ ಅಡಗಿ ಮಕ್ಕಳಿಗೆ ಬಡಸತಿದ್ಲಂತ." ಇಷ್ಟರ ಮ್ಯಾಲೆ ತಿಳ್ಕೋರಿ ಪಿನ್ನಿ ಕೈರುಚಿ ಎಷ್ಟ ಭಯಂಕರ ಇರಬಹುದ ಅಂತ." ಪಾಪ ಸಪ್ಪನ್ನ ಬ್ಯಾಳಿ ಹಂಗದ್ದ ಪಲ್ಲ್ಯಾನ ಜೋಭದ್ರಗೇಡಿ ಅವತಾರದ್ದ ರಹಸ್ಯ ಈಗ ಹೊರಗ ಬಂಧಂಗಾತು.ಇದಾದ ಮ್ಯಾಲೆ ಒಬ್ಬೊಬ್ಬರ ತಮ್ಮ ಮಕ್ಕಳನ್ನ ಬ್ಯಾರೆ ಬ್ಯಾರೆ ಬೇಬಿ ಸಿಟ್ಟಿಂಗಿಗೆ ಒಯ್ದು ಹಾಕಿ ನಿಶ್ಚಿಂತಿಯಿಂದ್ ಕೆಲಸಕ್ಕ ಹೋಗಲಿಕತ್ತರು.

               ಈಗ ಪಿನ್ನಿ ಮತ್ತ ಎನ್ ಶೂರು ಮಾಡಬೇಕನ್ನೊ ವಿಚಾರ ಮಾಡೊ ಹುನ್ನಾರದಾಗ ಇದ್ದಾಗ ಇತ್ಲಾಕಡೆ ಪಲ್ಲಣ್ಣಗ ಯಾಕರ ಇಕಿಗೆ ಬೈದ್ನೊ ಅಂತ ಚಿಂತಿ ಹತ್ತಿತ್ತು. ಯಾಕಂದ್ರ ಇಲ್ಲಿತನಕಾ ಆಕಿ ಬಿಸಿನೆಸ್ ಅಂಥೇಳಿ ಆಕಿ ಚೈನಾಬಝಾರನ್ಯಾಗ ತಂದ ಸಾಮಾನಿನಕಿಂತಾ ಇಪ್ಪತ್ತ ಪಟ್ಟ ಜಾಸ್ತಿ ರೊಕ್ಕಾ ಖರ್ಚ ಆಗಿತ್ತು. ಮತ್ತೇನ ಶೂರು ಮಾಡಬೇಕಂತ ವಿಚಾರ ಮಾಡಕೋತ ಸಿರಿಯಸ್ ಆಗಿ ಕೂತ ಪಿನ್ನಿನ್ನ ನೋಡಿ ಪಾಪ ಅನಿಸಿ ಆಕಿನ್ನ ನಗಸಬೇಕ ಅಂತ ಪಲ್ಲ್ಯಾ ಅಂದಾ" ಪಿನ್ನಿ ನೀ ಮಾಡತೇನಂದ್ರ ನಂಗ ಒಂದ ಕೆಲಸ ಗೊತ್ತದ ಹೇಳಲೆನ ಅಂದಾ. ಅದಕ್ಕ ಆಕಿ ಎನ ಕೆಲಸಾ ಮದ್ಲ ಹೇಳ ಅಂದ್ಲು." ಅದಕ್ಕ ಆಂವಾ" ದಿನಕ್ಕ ಮೂರ ತಾಸ ಕೆಲಸ, ತಿಂಗಳಿಗೆ ಹದಿನೈದ ಸಾವಿರ ರೂಪಾಯಿ ಪಗಾರ ಕೊಡತಾರಂತ ಮತ್ತ ನೀ ಮಾಡತೆನ ಅಂದ್ರ ಹೇಳ್ತೇನಿ ಅಂದಾ" ಇದನ್ನ ಕೇಳಿ ಪಿನ್ನಿಗೆ ಖುಷಿ ಆತು. ಅಡ್ಡಿ ಇಲ್ಲಾ ದಿನಕ್ಕ ಮೂರ ತಾಸಂದ್ರ ಮಾಡಬಹುದು,ಪಗಾರನು ಛೋಲೊ ಅದ ಅಂತ " ಹೇಳ್ರಿ ಎನದು ನಾ ಮಾಡತೇನಿ ಅಂದ್ಲು. ಅದಕ್ಕ ಪಲ್ಲಣ್ಣ ಮತ್ತೇನಿಲ್ಲಾ ಹುಬ್ಬಳ್ಳ್ಯಾಗ ಕಿತ್ತುರ ಚೆನ್ನಮ್ಮ ಸರ್ಕಲ ಅದ ಅಲ್ಲಾ, ಆ ರಾಣಿ ಚೆನ್ನಮ್ಮಗ ಕಂಟಿನ್ಯೂಅಸ್ ಆಗಿ ಕೂತು ಕೂತು ಬುಡಾ ನೋವಾಗಿ ಬ್ಯಾನಿ ಆಗಲಿಕತ್ತಾವಂತ,ಅದಕ್ಕ ದಿನಕ್ಕ ಮೂರ ತಾಸ ಆಕಿನ್ನ ಕೇಳಗ ಇಳಿಸಿ ನೀ ಖಡ್ಗಾ ಹಿಡಕೊಂಡ ಕುದರಿ ಮ್ಯಾಲೆ ಕೂತ ಆಕಿಗೆ ರೆಸ್ಟ ಕೊಡಬೇಕಂತ " ಅನ್ನೊತನಕಾ ಅಂದು ಹುಳು ಹುಳು ಆಕಿ ಮಾರಿನ ನೋಡಕೊತ ನಿಂತಾ. ಅದನ್ನ ಕೇಳಿದಕೋಡಲೆ ಇಷ್ಟದಿನಾ ಪಿನ್ನಿ ಒಳಗ ಮಲಕೊಂಡಿದ್ದ  "ಚಂಬಲ್ ರಾಣಿ " ಧುಮು ಧುಮು ಉರಕೊತ ಎದ್ದ ಕೂತ ಇನ್ನೆನ ಪಲ್ಲ್ಯಾನ್ನ ಎತ್ತಿ ಕುಕ್ಕರಿಸಬೇಕನ್ನೊದ್ರಾಗ , ಅಲ್ಲಿಗೆ ಹೋದ ನನ್ನ ತಮ್ಮ " ವೈನಿ ವೈನಿ ತಡಿರಿ, ಒಂದ ಸಲಾ ನಿಮ್ಮನ್ನ ನೀವು ಕುದರಿ ಮ್ಯಾಲೆ ಕೈಯ್ಯಾಗ ಖಡ್ಗಾ ಹಿಡಕೊಂಡ ಸರ್ಕಲ್ಲನ್ಯಾಗ ಕೂತಂಘ ಕಲ್ಪನಾ ಮಾಡಕೊಂಡ ನೋಡ್ರಿ ನೋಡೊಣ ಹೆಂಗನಸ್ತದ ? " ಅಂದ್ನಂತ, ತನ್ನನ್ನ ತಾ ಹಂಗ ಕಲ್ಪನಾ ಮಾಡಿಕೊಂಡ ಪಿನ್ನಿ ಬಿದ್ದ ಬಿದ್ದ ನಗಲಿಕ್ಕೆ ಶೂರು ಮಾಡಿದ್ಲಂತ. ಇತ್ಲಾಗ ಇನ್ನೆನ ಅರ್ಧಾ ವೈಕುಂಠದ ಹಾದಿ ಹಿಡದ ಪಲ್ಲ್ಯಾನ ಜೀವಾ ಮತ್ತ ಹೊಳ್ಳಿ ಬಂಧಂಗಾಗಿ ಬಿಸೊ ದೊಣ್ಣಿಯಿಂದ ತಪ್ಪಿಸಿಕೊಂಡ್ರ ಸಾವಿರ ವರ್ಷ ಆಯುಷ್ಯ ಅನ್ನೊಹಂಗಾಗಿತ್ತು ಪರಿಸ್ಥಿತಿ.

            ನನ್ನ ತಮ್ಮಾ ಇಷ್ಟ ಹೇಳಿದ ಮ್ಯಾಲೆ ನಂಗೂ ನಗು ತಡಕೊಳ್ಳಿಕ್ಕೆ ಆಗಲಿಲ್ಲಾ, ಒಂದ ರೀತಿ ಈ ಪಲ್ಲ್ಯಾ-ಪಿನ್ನಿಯ ಪ್ರಣಯ(ಪ್ರಳಯ) ಪ್ರಸಂಗ ಕೇಳಿ ರಜಾ-ಮಜಾ ಆದಂಗಾಗಿತ್ತು.

                 ಅವತ್ತ ಸಂಜಿ ಮುಂದ ಪಿನ್ನಿ ನಮ್ಮನಿಗೆ ಬಂದಿದ್ಲು. ತಮ್ಮ ಹೇಳಿದ್ದ ನೆನಪಾಗಿ ನಗು ಬಂದ್ರು ತಡಕೊಂಡ ಒಳಗ ಕರದೆ. ನಮ್ಮಮ್ಮ ನನಗ ಸೇರತದ ಅಂತ ಹೆಸರಬ್ಯಾಳಿ ಕೊಸಂಬರಿ ಮಾಡಿದ್ಲು. ಅದನ್ನ ಪಿನ್ನಿಗು ಕೊಟ್ಲು ಆದ್ರ ಆಕಿ " ಮಾಮಿರಿ ನಾ ಮನಿಗೆ ಹೊಗೆ ತಿಂತೇನಿ,ನಮ್ಮನಿಯವರಿಗೂ ಕೊಸಂಬರಿ ಅಂದ್ರ ಭಾಳ ಸೇರತದ" ಅಂದ್ಲು. ಆವತ್ತ ಪಿನ್ನಿಯ ಇನ್ನೊಂದು ಮುಖಾನು ನೋಡಿಧಂಗಾತು. ಎಷ್ಟ ಜಗಳಾಡಿದ್ರ ಎನು ಗಂಡಗ -ಹೆಂಡತಿ,ಹೆಂಡತಿಗೆ-ಗಂಡಾ ಬೇಕ ಬೇಕು. ಅದೊಂದು ಭಾವನಾತ್ಮಕ ಬೆಸುಗೆನ ಹಂಗಿರತದ.ಅಡಗಿಗೆ ಹೆಂಗ ಉಪ್ಪು,ಖಾರಾ,ಹುಳಿ,ಸಿಹಿ ಅಂತ ಸಮತೋಲನ ರಸಗಳ ಬೇಕಾಗತಾವ ಹಂಗ ಸರಸ,ವಿರಸ, ರಮಿಸೊದು,ಕ್ಷಮಿಸೊದು ಎಲ್ಲಾ ಇದ್ರನ ಸಂಸಾರ ಛಂದಾ. ಅಷ್ಟ ಅಲ್ಲದ ಹೇಳ್ಯಾರೇನು " ಜಗತ್ತಿನೊಳಗ ಇಬ್ಬರು ಸ್ಪರ್ಧಿಸಿ, ಇಬ್ಬರು ಗೆಲ್ಲೊ ಆಟಾ ಅಂದ್ರ ಅದು ದಾಂಪತ್ಯ" ಅಂತ. ಇಂಥಾ ಸಿಹಿ-ಕಹಿ ಕ್ಷಣಗಳನ ಮುಂದ ನಾವು ಜೀವನದ ಮೂಸ್ಸಂಜಿಯೊಳಗ ಜೀವನ ಪ್ರಯಾಣ ಮುಗಿಸೊ ದಾರಿಯನ್ನ ಹುರುಪಿನಿಂದ ಸಾಗಿಸಲಿಕ್ಕೆ ಸಹಾಯ ಮಾಡತಾವ.

                ಕೊಸಂಬರಿ ಹಿಡಕೊಂಡ ಹೊಂಟ ಪಿನ್ನಿನ್ನ ನೋಡಿ ಮತ್ತೊಮ್ಮೆ ಕಿತ್ತುರ ಚೆನ್ನಮ್ಮನ ನೆನಪಾಗಿ ಜೋರಾಗಿ ನಗಬೇಕನಿಸ್ತು.

ನೀವು ಒಂದ ಸಲಾ " ಸರ್ಕಲ್ಲಿನ ಕಿತ್ತುರ ಚೆನ್ನಮ್ಮನ ಜಾಗಾದಾಗ ಮೂರ ತಾಸು ಖಡ್ಗಾ ಹಿಡಕೊಂಡ ಕೂತಂಗ ಕಲ್ಪನಾ ಮಾಡಕೊಂಡ ನೋಡ್ರಿ, ನೀವ ಬಿದ್ದ ಬಿದ್ದ ನಗಲಿಲ್ಲಂದ್ರು , ಒಂದ ಮುಗುಳ್ನಗಿ ಅಂತು ನಿಮ್ಮ ಮಾರಿ ಮ್ಯಾಲೆ ಜರೂರ ಹಾಯ್ದ ಹೋಗತದ…

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
Gaviswamy
10 years ago

ಪಿನ್ನಿ-ಪಲ್ಲು ಪ್ರಸಂಗ ಓದಿ ಖುಷಿಯಾಯಿತು .
ಹಾಸ್ಭರಿತವಾಗಿದೆ..

Pavan Agnihotri
10 years ago

Very good Vaini. Enjoyed your writing.

ವೆಂಕಟೇಶ ಮಡಿವಾಳ - ಬೆಂಗಳೂರು
ವೆಂಕಟೇಶ ಮಡಿವಾಳ - ಬೆಂಗಳೂರು
10 years ago

"ನೀವ ಬಿದ್ದ ಬಿದ್ದ ನಗಲಿಲ್ಲಂದ್ರು , ಒಂದ ಮುಗುಳ್ನಗಿ ಅಂತು ನಿಮ್ಮ ಮಾರಿ ಮ್ಯಾಲೆ ಜರೂರ ಹಾಯ್ದ ಹೋಗತದ…"
 
;()0)0
 
ಸುಮನಾ ಅವ್ರೆ  ನಿಮ್ಮ  ಈ ಬರಹಗಳ  ಅಂಕಣಕ್ಕೆ ಶೀರ್ಷಿಕೆ ಬೇಕು ಎಂದು ನಟರಾಜು ಅವರು ಫೆಸ್ಬುಕಲ್ಲಿ ಕೇಳಿದ್ದರು – ಅಲ್ಲಿಯೂ ಉತ್ತರ ಕೊಟ್ಟು ಇಲ್ಲಿಯೂ ಉತ್ತರಿಸುತ್ತಿರುವೆ. 
 
೧. ಸುಮನ್ ದೇ 'ಶಾಯಿ' (ಶಾಯಿ -ಉಪಯೋಗಿಸಿ ಬರೆಯುವುದು ಎಂಬರ್ಥದಲ್ಲಿ )
೨. ಸುಮನಾಂಕಣ (ಸುಮನ್ ಅವರ ಅಂಕಣ )
೩. ಸುಂ -ಸುಮನಾ (ಸಂ ಸುಮ್ನೆ ..)
ಇಸ್ಟೇ ನನಗೆ ಹೊಳೆದದ್ದು … 
ಸುಮನಾ  ಅವರು ಬರೆಯುವ ಉ.ಕ ಭಾಷೆ ಹಾಸ್ಯ ಬರಹಗಳು ನಗೆ ಉಕ್ಕಿಸುತ್ತವೆ . 
ನಾನು ಉತ್ತರ ಕರ್ನಾಟಕದವನೇ , ಆದರೆ ನಾ  ಬರೆಯ ಹೋದರೆ ನನಗೆ ಬರೋದು ದಕ್ಷಿಣ ಕರ್ನಾಟಕ ಭಾಷೆ ಮಾತ್ರ.. ಯಾಕೆ ಹೀಗೆ ಗೊತ್ತಿಲ್ಲ .. 
 
ಶುಭವಾಗಲಿ 
 
\। /

ಸುಮನ್
ಸುಮನ್
10 years ago

ವೆಂಕಟೇಶ ಅವರೆ ನಿಮ್ಮ ಅಭಿಮಾನಪೂರ್ವಕ ಪ್ರತಿಕ್ರೀಯೆಗೆ ನನ್ನ ಧನ್ಯವಾದಗಳು.. ಅಂಕಣಕ್ಕಾಗಿ ನೀವು ಸೂಚಿಸಿದ ಹೆಸರಲ್ಲಿ " ಸುಂ-ಸುಮ್ನೆ" ಇಷ್ಟ ಆಗೇದ. ಥ್ಯಾಂಕ್ಯೂ…..
 

 
 

ವೆಂಕಟೇಶ ಮಡಿವಾಳ - ಬೆಂಗಳೂರು
ವೆಂಕಟೇಶ ಮಡಿವಾಳ - ಬೆಂಗಳೂರು
10 years ago

 
;()0)
ಶುಭವಾಗಲಿ 
 
\। /

ಕೆ.ಎಂ.ವಿಶ್ವನಾಥ

ಚೆಂದ ಆಯಿತಿರಿ ನಿಮ್ಮ ಲೇಖನ ಎಷ್ಟರ ಚೆಂದ ಬರಿತಲ್ಲವಾ ಯಾರ ಹೇಳಿಕೊಟ್ಟರವ್ವ ನಿನಗೆ
 
ಮಾನ್ಯರೆ
ನಿಮ್ಮ ಅಂಕಣಕ್ಕೆ ಹೆಸರು "ಉತ್ತರದಕ್ಕಿ " ಬಹಳ ಎತ್ತರದಕ್ಕಿ " ದೇಸಿ ಮಾತು " ಹಳ್ಳಿದಕ್ಕಿ "
 
ಧನ್ಯವಾದಗಳು

amardeep.p.s.
amardeep.p.s.
10 years ago

ಭಾಳ ಚೆಂದೈತಿ ಬರಹ ಅಕ್ಕೋರ ….. ನನ್  ಹೆಂಡ್ತಿಗೂ ಒಮ್ಮೆ ಕಿತ್ತೂರ ಚೆನ್ನಮ್ಮನ ತೋರಿಸ್ಬೇಕೆನ್ನಿಸ್ತದ ….

kamala belagur
kamala belagur
10 years ago

 
 
 
 
 
 
 
 
 

guru
guru
10 years ago

superb…very comedy…..

9
0
Would love your thoughts, please comment.x
()
x